ನಗಿಸುವ ಗೆರೆಗಳು ಹಾಕೋ ಬರೆಗಳು…

1
833

ಈ ಬಾಗಿಲೊಳು ಬಾಯ್ ಮುಗಿದು ಹೋದವರ ಬಾಯಿ ಅಗಲಿಸಿ, ದಾಳಿಂಬೆ ಬೀಜಗಳು ಫಳಫಳನೆ ಹೊಳೆಯುವಂತೆ ಮಾಡಿಸುತ್ತವೆ. ಇದು ರಾಜ್ಯದ ರಾಜಕೀಯ ಕಾರಿಡಾರಿನಲ್ಲಿ ಇತ್ತೀಚೆಗೆ ಕಂಡುಬಂದ ಸ್ಥಿತಿ ಅಂತ ತಪ್ಪು ತಿಳಿದುಕೊಳ್ಳಬೇಡಿ. ಮೂಡುಬಿದಿರೆಯ ವಿದ್ಯಾಗಿರಿಯಲ್ಲಿ ನಡೆಯುತ್ತಿರುವ ನುಡಿಸಿರಿ ಎಂಬ ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನದಲ್ಲಿ ನಕ್ಕು ನಗಿಸುವ ಗೆರೆಗಳೇ ಇರುವ ಕೊಠಡಿ!

ಬೇರೇನೂ ಅಲ್ಲ, ನಾಡಿನ ಹೆಸರಾಂತ ವ್ಯಂಗ್ಯಚಿತ್ರಕಾರರು ತಮ್ಮ ಮೊನಚಾದ ಕರಿ ಪೆನ್ನಿನಿಂದ ಚುಚ್ಚುವಂತಹ ಗೆರೆಗಳಿಂದ ಇದನ್ನು ನಗುವಿನರಮನೆಯನ್ನಾಗಿಸಿದ್ದಾರೆ. ಅವರು ಈ ಗೆರೆಗಳನ್ನು ಎಳೆದ ಧಾವಂತಕ್ಕೆ ಬೊಚ್ಚು ಬಾಯಿಯೂ ಅಗಲವಾಗಿದೆ, ಮುಚ್ಚಿದ ಬಾಯಿ ಪಕ್ಕನೇ ಅರಳಿದೆ.

ಇಲ್ಲಿ ಕಂಡ ಗೆರೆಗಳು ಬಹುತೇಕ ನಮ್ಮ ರಾಜ್ಯದ ರಾಜಕೀಯ ನಾಟಕ ಶಾಲೆಯಲ್ಲಿ ಇತ್ತೀಚೆಗೆ ಕಂಡುಬಂದ ವಿದ್ಯಮಾನಗಳ ವಿಡಂಬನೆಗೆ, ಛಾಟಿಯೇಟಿನ ಬರೆಗೆ ಮೀಸಲು. ಕರುನಾಟಕದಲ್ಲಿ ವಿಧಾನಸಭೆ ವಿಸರ್ಜನೆಯಾಗಿ ತ್ಯಾಜ್ಯಗಳೆಲ್ಲಾ ಹೊರಬಂದು, ಗಬ್ಬು ನಾತ ಬೀರುವುದೇ ಪ್ರಮುಖವಾಗಿ ಎದ್ದು ಕಾಣುತ್ತಿದ್ದವು ಅಲ್ಲಿ. ರಾಂ ಚಂದ್ರ ಕೊಪ್ಪಲು ಈ ರೀತಿ ಗೆರೆ ಎಳೆದು ಎಳೆದಾಡಿದವರು. ಅಪ್ಪ ಮಕ್ಕಳನ್ನು ನೋಡಿ ಯಡಿಯೂರಪ್ಪ ಇಲ್ಲಿ “ಆನು ದೇವಾ ಹೊರಗಣವನು” ಅಂತ ತಲೆಕೆಡಿಸ್ಕೊಳ್ತಾರೆ ಇಲ್ಲಿ.

ರಾಜ್ಯಾದ್ಯಂತ ಪ್ರದರ್ಶನಗೊಂಡ ಕನ್ನಡ ಚಿತ್ರ “ಆ ದಿನಗಳು” ಅದ್ಭುತ ವಾಸ್ತವಿಕ ರಾಜಕಾರಣ ಎಂಬ ಪ್ರೊಮೋಷನ್ ಲೈನಿನೊಂದಿಗೆ, “ಪ್ರೀತಿಯ ಕುಲುಮೆಯಲ್ಲಿ ನಲುಗಿದ ಸರಕಾರ” ಎಂಬ ಪಂಚ್ ಲೈನಿನೊಂದಿಗೆ ದೇವೇಗೌಡರು-ಮಕ್ಕಳು, ಯಡಿಯೂರಪ್ಪನವರ ಪಾತ್ರಗಳನ್ನು ಲೈನಿನಲ್ಲೇ ಹೋಲಿಸಿದ್ದಾರೆ.

ಮಣ್ಣಿನ ಮಗ, ಮಣ್ಣು ಮುಕ್ಕಿಸೋ ಮಗನಾಗಿಯೂ ಕಂಡದ್ದು ಶ್ರೀಧರ ಹುಂಚರಿಗೆ. 2006ರ ಸುವರ್ಣ ಸಂಭ್ರಮದ ಆರಂಭಶೂರತ್ವವು ಅನ್ಯಾಯವಾಗಿ ಸದ್ದಿಲ್ಲದೆ ಕೊನೆಗೊಳ್ಳುವ ಹಾಗಾದ ಬಗ್ಗೆ ಇದೇ ಶ್ರೀಧರ ಹುಂಚರು ಗೆರೆಗಳ ಮೂಲಕ ಹೇಳುವುದು 2007 ಕುಂಭಕರ್ಣ ಸಂಭ್ರಮ ಅಂತ! ಐಟಿ ಮೇಳಕ್ಕೆ ಹೋಗೋ ಯಕ್ಷಗಾನ ಪಾತ್ರಧಾರಿಯೊಬ್ಬರು ಈ ಹೊಸ ಮೇಳ ಸೇರುವ ಬಯಕೆ ವ್ಯಕ್ತಪಡಿಸುವುದನ್ನು ಕಲ್ಪಿಸಿಕೊಂಡವರು ಶ್ರೀಧರ ಹುಂಚರು.

ಎಸ್.ವಿ.ಪದ್ಮನಾಭ ಅವರು ಹೊಟ್ಟೆಗೆ ಹಿಟ್ಟಿಲ್ಲದಿದ್ರೂ ಕಿವಿಗೆ ಮೊಬೈಲು ಎನ್ನುವುದರೊಂದಿಗೆ, ಬಿಜೆಪಿ ಸರಕಾರದ ಸಮಾಧಿ ಮಾಡಿ ಹಾರೆ, ಪಿಕ್ಕಾಸು ಹೊತ್ತು ಹೊರಟು ಹೋಗುತ್ತಿರುವ ಅಪ್ಪ-ಮಕ್ಕಳನ್ನು ತೋರಿಸುವ ಮಣ್ಣಿನ ಮಕ್ಕಳ ಸ್ಥಿತಿಯ ಮೂಲಕ ನಗೆಯರಳಿಸುತ್ತಾರೆ.

ಸಮ್ಮೇಳನಕ್ಕೆ ಬಂದು ಹೋಗುವ ಕೆಲವರ ಕುರಿತಾಗಿ ತಮ್ಮಣ್ಣ ಬೀಗಾರ ಎಳೆದ ಗೆರೆ ಹೇಳುವುದು- ತಮ್ಮಲ್ಲಿ ಸಮ್ಮೇಳನ ಬಗ್ಗೆ ಅಭಿಪ್ರಾಯ ಕೇಳಿದವರಿಗೆ ದೊರೆಯುವ ಉತ್ತರ “ಬಾಕಿ ಎಲ್ಲಾ ಚೆನ್ನಾಗಿದೆ, ಊಟ ಮುಗಿಸಿ, ಅದ್ರ ವ್ಯವಸ್ಥೆ ನೋಡ್ಕೊಂಡು ಅಭಿಪ್ರಾಯ ವ್ಯಕ್ತಪಡಿಸ್ತೀನಿ” !!

ನಟರಾಜ ಅರಳಸುರಳಿಯವರು ತಮ್ಮ ಗೆರೆಗಳ ಮೂಲಕ ರಾಜಕಾರಣಿ ಪತ್ನಿಯನ್ನು ಮತ್ತು ನಮ್ಮ ವ್ಯವಸ್ಥೆಯನ್ನು ಹೀಗೆ ಕುಟುಕಿದ್ದಾರೆ: ಮಂತ್ರಿಯಾದಾಗಲೇ ಹಾರ್ಟ್ ಅಟ್ಯಾಕ್ ಆದ್ರೆ, ಚಿಕಿತ್ಸೆಗಾಗಿ ನಿಮ್ ಜತೆ ನಾನೂ ವಿದೇಶಕ್ಕೆ ಹಾರಬಹುದಲ್ಲಾ ಎಂದು ಹೆಂಡತಿಯೊಬ್ಬಾಕೆ ಇಲ್ಲಿ ಹಲುಬುತ್ತಾಳೆ. ರಾಜಕಾರಣಿಯ ಹೊಟ್ಟೆ ಅಳೆಯುವ ದರ್ಜಿಯೊಬ್ಬ ಅವಾಕ್ಕಾಗಿ ಎಷ್ಟು ವರ್ಷದಿಂದ ಸಮಾಜಸೇವೆ ಮಾಡ್ತಾ ಇದೀರಿ ತಾವು ಎಂದು ಇಲ್ಲಿ ಅಚ್ಚರಿ ವ್ಯಕ್ತಪಡಿಸುತ್ತಾನೆ.

ಠಾಣೆಗೊಬ್ಬ ಅಪರಾಧಿಯನ್ನು ಕರೆತಂದ ಪಿಸಿಯನ್ನು ನೋಡಿ ಕಕ್ಕಾಬಿಕ್ಕಿಯಾಗುವ ಪೊಲೀಸ್, ಪೇದೆಯನ್ನು ಕೇಳುತ್ತಾನೆ “ಎಲ್ಲಿಂದ ತಂದೆ ಮಾರಾಯಾ, ಇಲ್ಲಿ ಎಲ್ಲಾ ರಾಜಕಾರಣಿಗಳು, ಪೊಲೀಸರು ತುಂಬಿರೋ ಜೈಲಲ್ಲಿ ಜಾಗವೇ ಇಲ್ಲವಲ್ಲ”. ಇದು ಜೇಮ್ಸ್ ವಾಜ್ ಕಲ್ಪನೆ. ಅವರ ಹಲವಾರು ವರ್ಣಮಯ ಕ್ಯಾರಿಕೇಚರುಗಳೂ ಕಣ್ಣು ಸೆಳೆದುಬಿಡುತ್ತವೆ.

ಜೆಡಿಎಸ್ ಮನೆಯೊಳಗೆ ಅಪ್ಪ ಮಕ್ಕಳು ಮಾತ್ರ ಇದ್ದಾರೆ, ಇನ್ನು ಈ ಮನೆಗೆ ನಾವೇ ಎಂಎಲ್ಎ ಮತ್ತು ಎಂಪಿಗಳು ಅಂತ ಹೇಳುವ ದೃಶ್ಯ ಕಲ್ಪನಾದೃಷ್ಟಿಗೆ ಬಿದ್ದದ್ದು ಚಂದ್ರ ಗಂಗೊಳ್ಳಿ ಅವರಿಗೆ.

ಸತೀಶ್ ಶೃಂಗೇರಿ ಅವರಂತೂ ಅಪ್ಪ-ಮಕ್ಕಳನ್ನು ಚೆನ್ನಾಗಿಯೇ ಕುಟುಕಿದ್ದಾರೆ. ಮನೆಯ ಮಾಳಿಗೆ ಸೋರುತ್ತಿರುವಾಗ, ನಿಲ್ರಯ್ಯಾ ಅಂತ ಕುಮಾರ ಕೂಗಿದರೆ, ಅಪ್ಪ, “ಹೋದ್ರೆ ಹೋಗ್ಲಿ ಬಿಡು” ಅಂತನ್ನುವ ಅಪ್ಪನ ಸಮಾಧಾನ. ಮತ್ತೊಂದು ಗೆರೆಗಳ ಪುಟದಲ್ಲಿ ಅವರಿಗೆ, ಸರ್ಕಾರ ಇದ್ದಿದ್ರೇ ಚೆನ್ನಾಗಿತ್ತು, ಷರತ್ತು, ಗಿರತ್ತು, ಪತ್ರ, ಪಟ್ಟಿ ಅಂತ ನೀಡ್ತಾ ಕಾಲ ಕಳೆಯೋಬೌದಿತ್ತು ಅಂತ ಪರಿತಪಿಸೋ ಗೌಡರು ಕಾಣಿಸುತ್ತಾರೆ.

ಇದರೊಂದಿಗೆ ಜಿ.ಎಸ್.ನಾಗನಾಥ್, ರಘುಪತಿ, ಮಹಮದ್ ಮತ್ತು ಇತರರೂ ತಮ್ಮ ಗೆರೆಗಳ ಮೂಲಕ ಬರೆ ಎಳೆಯುವ ಕೆಲಸ ಮಾಡಿದ್ದಾರೆ. ಈ ನಡುವಿನರಮನೆಯೊಳಗೆ ಹೋದವರು ಬಾಯಿ ಬಿಡದೆ ವಾಪಸಾಗುವುದಿಲ್ಲ!

1 COMMENT

LEAVE A REPLY

Please enter your comment!
Please enter your name here