ಮಾತು ಮಥಿಸಿ ನಗೆಯ ಬೆಣ್ಣೆ ಬಡಿಸಿದ ಕೃಷ್ಣೇಗೌಡ

2
357

ಆಳ್ವಾಸ್ ನುಡಿಸಿರಿಯಲ್ಲಿ ಹಲವು ಕುತೂಹಲದ ಕಣ್ಣುಗಳು ಮತ್ತು ಕನ್ನಡ ಮನಸ್ಸುಗಳ ಕಾತುರತೆಗೆ ಕಾರಣವಾಗುವುದು ಮಾತಿನ ಮಂಟಪ. ಹಾಸ್ಯಕ್ಕೆ ಹೆಸರಾದ ಪ್ರೊ.ಕೃಷ್ಣೇಗೌಡರು ಪ್ರೇಕ್ಷಕರ ನಿರೀಕ್ಷೆಯನ್ನು, ನಗಬೇಕೆಂದು ಬಂದಿದ್ದವರ ಮನೋಭಿಲಾಷೆಯನ್ನು ತಣಿಸಲು ತೆಗೆದುಕೊಂಡ ವಿಷಯ “ಮಾತು”.

ಅವರೇ ಹೇಳುವಂತೆ ಅವರು ಮಾತಿನ ಬಗ್ಗೆ ಮಾತು ಆಡುತ್ತಾ ಹೋದರು, ಅದನ್ನು ತಮಗೆ ಬೇಕಾದಂತೆ ಅರ್ಥೈಸಿಕೊಂಡವರು ಬಿದ್ದು ಬಿದ್ದು ನಕ್ಕರು. ಮಾತು ಎಂಬುದು ಬರೀ ಅಭಿಪ್ರಾಯ ಮಂಡನೆಯಲ್ಲ, ಭಾವನೆಗಳನ್ನು, ಅನುಭವಗಳನ್ನು ಸಂವಹನ ಮಾಡುವ ಕಲೆ ಎಂಬ ತಮ್ಮ ಅಭಿಮತವನ್ನು ಸಮರ್ಥಿಸಿಕೊಳ್ಳಲು ಅವರು ನೀಡಿದ ಉದಾಹರಣೆಗಳು, ಕಿಕ್ಕಿರಿದು ತುಂಬಿದ್ದ ರತ್ನಾಕರವರ್ಣಿ ವೇದಿಕೆಯ ಸಭಾಂಗಣದಲ್ಲಿ ಅಕ್ಷರಶಃ ನಗೆಯ ಅಲೆಗಳನ್ನು ಉಕ್ಕಿಸಿತ್ತಾ ಹೋಯಿತು.

ಕೃಷ್ಣೇಗೌಡರು ಮಾತು ಆರಂಭಿಸಿದ್ದೇ ಹಂಸ ಕ್ಷೀರ ನ್ಯಾಯದಂತೆ ನನ್ನ ಮಾತನ್ನು ತಿಳಿದುಕೊಳ್ಳಿ ಎಂಬ ಮಾತಿನ ಮೂಲಕ. ಜಿ.ಪಿ.ರಾಜರತ್ನಂ ಅವರ ನುಡಿಯನ್ನು ಉದಾಹರಿಸುತ್ತಾ ಅವರು, ಹಂಸ ಕ್ಷೀರ ನ್ಯಾಯ ಎಂದರೇನು ಎಂದು ತಿಳಿಯಪಡಿಸಿದರು. ಹಂಸವು ಕ್ಷೀರವನ್ನು ಮಾತ್ರವೇ ಸೇವಿಸಿ ನೀರು ಬಿಡುತ್ತದೆ ಹೇಗೆ ಎಂದು ಪದೇ ಪದೇ ಕೇಳಿದ ಪ್ರಶ್ನೆಗೆ ರಾಜರತ್ನಂ ಅವರು ಉತ್ತರಿಸಿದ್ದರು. ಹೌದು, ಹಂಸವು ಹಾಲೆಲ್ಲವನ್ನೂ ಕುಡಿಯುತ್ತದೆ, ನೀರು ಬಿಡುತ್ತದೆ. ಆದರೆ ಆ ನೀರನ್ನು ಎಲ್ಲಿ ಬಿಡುತ್ತದೆ, ಹೇಗೆ ಬಿಡುತ್ತದೆ ಎಂಬುದು ಅದಕ್ಕೇ ಬಿಟ್ಟ ವಿಚಾರ ಎಂದಾಗ ನಗು ನಗು ನಗು…

ಅದೇ ರೀತಿ ತನ್ನ ಮಾತಿನಿಂದಲೂ ಹಾಲು ಸೇವಿಸಿಕೊಳ್ಳಿ, ನೀರು ಬಿಡಿ ಎನ್ನುತ್ತಾ ಮತ್ತೆ ಮತ್ತೆ ಮಾತೇ ಎಲ್ಲವೂ ಎಂಬುದನ್ನು ಸಮರ್ಥಿಸಿಕೊಳ್ಳುತ್ತಾ ಹೋದರು. ಭಾಷೆ ಬರೇ ಅರ್ಥವಲ್ಲ, ಅದು ಭಾವವನ್ನು, ಆವರಣವನ್ನು ಸೃಷ್ಟಿ ಮಾಡುತ್ತಾ ಹೋಗುತ್ತದೆ. ಹಾಗಾಗಿ ಒಂದು ಭಾಷೆಯ ನುಡಿಗಳಿಗೆ ನಿಘಂಟಿನ ಅರ್ಥ ಹುಡುಕಿದಾಗ ದೊರೆಯುವ ಅರ್ಥವೇ ಬೇರೆ. ಭಾಷೆಗೆ ನಾವು ಅರ್ಥ ಆರೋಪಿಸುತ್ತೇವೆಯೇ ಹೊರತು, ಅದು ಇಲ್ಲದಿದ್ದರೆ ಏನಿಲ್ಲವಾಗುತ್ತದೆ ಎಂದರು ಕೃಷ್ಣೇಗೌಡರು.

ಉದಾಹರಣೆಗೆ ಉರಿಲಿಂಗದೇವ್ರು, ಮೂರು ತಿಂಗಳು ಅಡಗಿ ಕೂತಿದ್ರು, ಅವರನ್ನು ಎದ್ದು ಬಾ ದೊರೆ ಎಂದು ಕರೆತಂದು, ಜುಟ್ಟು ಕೂದ್ಲು ಕತ್ತರಿಸಿ ಜಳಕ ಮಾಡಿಸಿದಾಗ ಮಾರುಕಟ್ಟೆಗೆ ಹೊರಡಲು ಸಜ್ಜಾಗುವುದು ಈರುಳ್ಳಿ ಎಂಬ ಒಗಟಿನ ಮಾತನ್ನವರು ಇಲ್ಲಿ ನೆನಪಿಸಿದರು.

ಯಾರಾದರೂ ದಾರಿ ಕೇಳಿದರೆ, “ನೀವು ಒಂದ್ಕೆಲ್ಸ ಮಾಡಿ” ಎನ್ನುತ್ತಾ, ಅಲ್ಲಿಂದ ರಿಕ್ಷಾದಲ್ಲಿ ಕೂತ ಮೇಲೂ “ನೀವು ಒಂದ್ಕೆಲ್ಸ ಮಾಡಿ” ಹೇಳುವುದು… ಈ ರೀತಿ ಸರಪಣಿಯಾಗಿ ಮಾತು ಮಾತಿಗೆ ಒಂದ್ಕೆಲ್ಸ ಮಾಡಿ ಅನ್ನುವುದನ್ನು ಅಕ್ಷರಶಃ ಅರ್ಥೈಸಿಕೊಳ್ಳುವುದರಿಂದ ಉಂಟಾಗುವ ಮುಜುಗರದ ಸನ್ನಿವೇಶಗಳನ್ನು (ಹಾಸ್ಯ)ರಸವತ್ತಾಗಿ ಉಣಬಡಿಸಿದರು. ಅದೇ ರೀತಿ, ಈ ದೇಶಾನೇ ತೆಗೆದುಕೊಳ್ಳಿ, ಶ್ರೀಲಂಕಾನೇ ತೆಗೆದುಕೊಳ್ಳಿ, ಪಾಕಿಸ್ತಾನವನ್ನೇ ತೆಗೆದುಕೊಳ್ಳಿ, ಇಟಲಿಯನ್ನೇ ತೆಗೆದುಕೊಳ್ಳಿ ಇತ್ಯಾದಿ “ತೆಗೆದುಕೊಳ್ಳಿ”ಗಳ ಗುಚ್ಛಕ್ಕೆ, ಹೆಂಗಸರಿರುವಲ್ಲಿ ಮಾತೇ ಜಾಸ್ತಿ ಎಂಬ ವಿಷಯ ಬಂದಾಗ “ನನ್ನ ಹೆಂಡ್ತೀನೇ ತೆಗೆದುಕೊಳ್ಳಿ” ಎಂದುಸುರುವ ಗಂಡಂದಿರ ಮಾತು ಸಂದರ್ಭಾನುಸಾರ ಅಭಾಸಕ್ಕೆ ಕಾರಣವಾಗುವುದನ್ನು ವಿವರಿಸಿದರು.

ಮಾತು ಮಾತಿಗೆ, “ನೀವು ಲೆಕ್ಕ ಹಾಕಿ” ಎಂಬ ಪದಪುಂಜದ ವಾಕ್ಯಾರ್ಥವು ಸೃಷ್ಟಿಸುವ ಹಾಸ್ಯಮಯ ಸನ್ನಿವೇಶಗಳನ್ನು ವಿವರಿಸಿದ ಕೃಷ್ಣೇಗೌಡರು, ದಕ್ಷಿಣ ಕನ್ನಡದವರಿಗೆ ಬೈಯಲು ಬರುವುದಿಲ್ಲ ಎನ್ನುತ್ತಾ, ಬೆಂಗಳೂರು ಕಡೆ, ಆ ಬಳಿಕ ಉತ್ತರ ಕರ್ನಾಟಕದಲ್ಲಿರುವ ಬೈಗುಳ ಪದಗಳು ಬಳಕೆಯಾಗುವಾಗ ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುವ ಬಗೆಯನ್ನು ಹಾಸ್ಯಮಯವಾಗಿ ಬಣ್ಣಿಸುತ್ತಾ ಹೋದಾಗ ನಗುವೋ ನಗು. ವೇದಿಕೆಯಲ್ಲಿದ್ದ ಡಾ.ಮೋಹನ್ ಆಳ್ವರಂತೂ ಮನಸಾ ನಕ್ಕುಬಿಟ್ಟು ಈ ಕಾರ್ಯಕ್ರಮ ಸಂಯೋಜನೆಯ ಹಿಂದಿರುವ ದಣಿವೆಲ್ಲವನ್ನೂ ಆರಿಸಿಕೊಂಡಂತೆ ಕಂಡುಬಂದರು.

ಸಭೆಯಿಡೀ ಬಿದ್ದು ಬಿದ್ದು ನಗಲು ಕಾರಣವಾದ ಪ್ರಧಾನ ಅಸ್ತ್ರಗಳಲ್ಲಿ ಈ ಬೈಗುಳ ಪದವೂ ಒಂದು. ಒಬ್ಬ ಸ್ವಾಮಿಗಳನ್ನು ಕೊಂಡಾಡುವ ವ್ಯಕ್ತಿ, ಅವರು ತಮ್ಮನ್ನು ಉದ್ಧರಿಸಿದರು, ಹೀಗೆ ಮಾಡಿದರು, ಹಾಗೆ ಮಾಡಿದರು ಎನ್ನುತ್ತಾ, ಅವರು ಅತ್ಯುತ್ತಮ ವ್ಯಕ್ತಿ ಎಂದು ಬಿಂಬಿಸಲು ಕೂಡ ಸೂಳೀಮಗ ಎಂಬ ಪದವನ್ನೇ ಬಳಸುವುದನ್ನು ರಸವತ್ತಾಗಿ ವಿವರಿಸಿದರು.

ತಮ್ಮಪ್ಪ, ಹಿರಿಯರು ಈ ರೀತಿ ಮಾಡಿರದಿದ್ದರೆ ಇಂದು ತಾನೂ ಕೂಲಿ ಮಾಡಿಕೊಂಡಿರಬೇಕಿತ್ತು, ಆ ಅಪ್ಪ ಹಾಕಿಕೊಟ್ಟ ಅಡಿಪಾಯದಿಂದ ನಾವಿಂದು ಇಷ್ಟು ಮೇಲಕ್ಕೇರುವಂತಾಯಿತು, ಆ ಸೂಳೀಮಗ ಎಷ್ಟು ಚೆನ್ನಾಗಿ ತಮ್ಮನ್ನೆಲ್ಲಾ ಕಷ್ಟಪಟ್ಟು ಬೆಳೆಸಿದರು ಎಂದು ಹೇಳುವಾಗ, ಆ ಸೂಳೀಮಗ ಎಂಬ ಶಬ್ದಕ್ಕೆ ವಾಕ್ಯಾರ್ಥವಿರುವುದಿಲ್ಲ. ಭಾವಾರ್ಥದಲ್ಲಿ ಆತ್ಮೀಯತೆ, ಗೌರವ ತುಂಬಿರುತ್ತದೆ ಎಂದರವರು.

ಉಚ್ಚಾರಣೆಗೂ ಬರವಣಿಗೆಗೂ ಸಂಬಂಧವೇ ಇಲ್ಲದ ಭಾಷೆ ಇಂಗ್ಲಿಷ್. ಆದರೆ ಕನ್ನಡ ಆ ರೀತಿ ಅಲ್ಲ ಎಂಬುದನ್ನು ಸಮರ್ಥಿಸಲು ಅವರು ನೀಡಿದ ಉದಾಹರಣೆ: ಇಂಗ್ಲಿಷ್ ಮಾತನಾಡುವ ಚಟ ಬೆಳೆಸಿಕೊಳ್ಳುವ ಹೆಂಡತಿಯೊಬ್ಬಳು, ಗಂಡನ ಜತೆ ಮದುವೆಗೆ ಹೋಗಲು ಸಿದ್ಧತೆ ನಡೆಸುತ್ತಿರುತ್ತಾಳೆ. ಕತ್ತು ತುಂಬಾ ಆ ಸರ, ಈ ಸರ, ಬದನೆಕಾಯಿ ಸರ ಹಾಕಿಕೊಂಡ ಹೆಂಡತಿಯನ್ನು ನೋಡಿ ಗಂಡ ಅವಾಕ್ಕಾಗಿ ಪ್ರಶ್ನಿಸುತ್ತಾನೆ, ಏನೇ ಇದು, ಮದ್ವೆಗೆ ಬಂದೋರೆಲ್ಲರೂ ನಿನ್ನನ್ನೇ ಮದುಮಗಳು ಅಂತ ತಿಳ್ಕೊಂಡಾರು ಎಂದು ಎಚ್ಚರಿಸುತ್ತಾನೆ. ಆಗ ಅವಳು ಉತ್ತರಿಸುತ್ತಾಳೆ –
“ರೀ, ಈ ವೆಡ್ಡಿಂಗಿಗೆ ತುಂಬಾ ಪೀಪಲ್ಸ್ ಬರ್ತಾರಲ್ಲ, ಅವ್ರು ಬಂದಾಗ ನಾನು ಬಾಗ್ಲಲ್ಲೇ ನಿಂತಿರ್ತೀನಿ. ಅವ್ರೆಲ್ಲಾ ನನ್ನ ನೆಕ್‌ನೋಡಿ ಹೋಗ್ಲೀಂತ ಈ ರೀತಿ ಹಾಕ್ಕೊಂಡೆ” ಅಂತಾಳೆ. ಅದ್ಯಾಕೆ ನಿನ್ನನ್ನ ನೆಕ್ ನೋಡಿ ಹೋಗ್ಬೇಕು ಎಂದು ಗಂಡ ತತ್ತರಿಸುತ್ತಾನೆ. ಇದು ಅರೆಬರೆ ಇಂಗ್ಲಿಷ್ ಬೆರೆಸುವ ಚಟದ ಅಡ್ಡ ಪರಿಣಾಮಗಳಲ್ಲೊಂದು ಎಂಬುದನ್ನು ಕೃಷ್ಣೇಗೌಡರು ಗಮನಕ್ಕೆ ತಂದರು.

ಅದೇ ರೀತಿ, ಇಂಗ್ಲಿಷನ್ನು ಹೇಗೆ ಬೇಕಾದರೂ ಬಳಸಬಹುದು ಎಂಬುದಕ್ಕೊಂದು ಉದಾಹರಣೆ: GHOTI ಎಂದು ಬರೆದರೆ ಇಂಗ್ಲಿಷಿನಲ್ಲಿ ಫಿಶ್ ಅಂತಾನೂ ಓದಬಹುದು. ಯಾಕೆ? ರಫ್ ಪದದ ಸ್ಪೆಲ್ಲಿಂಗಿನಲ್ಲಿ GH ಸೇರಿದರೆ ಫ್ ಆಗುತ್ತದೆ, O ಎಂಬುದು ವಿಮೆನ್ ಪದದಲ್ಲಿ ಇ ಆಗುತ್ತದೆ, ಅಂತೆಯೇ TI ಎಂಬುದು ನೇಶನ್ ಪದದಲ್ಲಿ ಶ್ ಆಗುತ್ತದೆ. ಇವೆಲ್ಲವೂ ಒಟ್ಟು ಸೇರಿದರೆ ಫಿಶ್ ಆಗುತ್ತದೆ ಎಂಬ ಬರ್ನಾರ್ಡ್ ಷಾ ಅವರು ನೀಡಿದ ಉದಾಹರಣೆಗೆ ಮತ್ತೊಮ್ಮೆ ಬಿದ್ದು ಬಿದ್ದು ನಕ್ಕಿತು ಸಭೆ.

ಒಟ್ಟಿನಲ್ಲಿ ಮಾತೆಂಬುದು ಮನುಷ್ಯ ಬದುಕಿನ ವಿಸ್ಮಯ, ಅದಕ್ಕೆ ಅಪಾರ ಅರ್ಥಗಳಿವೆ ಎನ್ನುತ್ತಾ ಕೃಷ್ಣೇಗೌಡರು ಮಾತು ಮುಗಿಸಿದಾಗ ಅವರು ಕಟ್ಟಿದ ಮಾತಿನ ಮಂಟಪದಲ್ಲಿ ಮಾತು ಮರೆತಂತಾಗಿದ್ದ, ಬರೇ ನಗೆಯನ್ನೇ ಚಿಮ್ಮಿಸುತ್ತಿದ್ದ ಪ್ರೇಕ್ಷಕ ಸಂದೋಹ ಕರತಾಡನ ಮಾಡಿತಾದರೂ, ಇಷ್ಟು ಬೇಗ ಮುಗಿಯಿತೇ ಎಂಬ ಭಾವ ಎಲ್ಲರ ಮುಖದಲ್ಲಿತ್ತು.

2 COMMENTS

  1. ರಶ್ಮಿ ಅವರೆ,

    ಧನ್ಯವಾದ… ನಿಮ್ಮ ಪ್ರೋತ್ಸಾಹ ಹೀಗೇ ಇರಲಿ. ನಗು ನಗುತ್ತಾ ಇರಿ… 🙂

LEAVE A REPLY

Please enter your comment!
Please enter your name here