e-ಯುಗದ ತನಿಖಾ ಪತ್ರಿಕೋದ್ಯಮ: ಫ್ಯಾಕ್ಟ್ ಚೆಕ್

0
58

(ಕನ್ನಡ ಪತ್ರಕರ್ತರ ಸಂಘದ ವಿಶೇಷ ಸಂಚಿಕೆಗಾಗಿ ಸಿದ್ಧಪಡಿಸಿದ ವಿಶೇಷ ಲೇಖನ)

-ಅವಿನಾಶ್ ಬೈಪಾಡಿತ್ತಾಯ

2012ರಲ್ಲಿ ಈಶಾನ್ಯ ರಾಜ್ಯಗಳ, ವಿಶೇಷವಾಗಿ ಅಸ್ಸಾಂ ಪ್ರಜೆಗಳು ಭಯಭೀತರಾಗಿ, ಜೀವ ಉಳಿಸಿಕೊಳ್ಳುವುದಕ್ಕಾಗಿ ಹಿಂಡುಹಿಂಡಾಗಿ ತಮ್ಮೂರಿಗೆ ಓಡಿಹೋದ ಪ್ರಸಂಗ ಇನ್ನೂ ನೆನಪಿನಂಗಳದಲ್ಲಿದೆ. ಅಸ್ಸಾಂನ ನಿರ್ದಿಷ್ಟ ಸಮುದಾಯದ ಮಂದಿಗೆ ಬೆಂಗಳೂರಿನಲ್ಲಿ ಹಲ್ಲೆ ಮಾಡಲಾಗುತ್ತಿದೆ, ಥಳಿಸಲಾಗುತ್ತಿದೆ ಎಂಬೆಲ್ಲ ವದಂತಿ ಹರಡಿದ್ದೇ ಇದಕ್ಕೆ ಕಾರಣ. ತಿರುಚಿದ ಸುದ್ದಿ, ಚಿತ್ರಗಳೆಲ್ಲವೂ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದೇ ಇದರ ಹಿಂದಿನ ತಥ್ಯ.

ತಂತ್ರಜ್ಞಾನ ಬೆಳೆದು ಆಧುನಿಕವಾದಂತೆಲ್ಲಾ ಅದರಿಂದ ಪ್ರಯೋಜನ ಎಷ್ಟೋ, ಅದರ ದುಷ್ಪರಿಣಾಮ ಮತ್ತು ಅದರ ದುರುಪಯೋಗಗಳಾಗುವುದೇ ಹೆಚ್ಚು. ಈ ಸಾಲಿನಲ್ಲಿ ಸುದ್ದಿಮನೆಗಳಿಗೂ ತಂತ್ರಜ್ಞಾನ ಸಾಕಷ್ಟು ಅನುಕೂಲ ಕಲ್ಪಿಸಿದ್ದು ಸುಳ್ಳಲ್ಲ. ಆದರೆ, ಎಲ್ಲ ರೀತಿಯ ಮಾಧ್ಯಮಗಳಿಗೆ ಅತಿದೊಡ್ಡ ಪಿಡುಗು ಆಗಿ ಪರಿಣಮಿಸಿರುವುದು ಸುಳ್ಳು ಸುದ್ದಿಗಳು, ವದಂತಿಗಳು ಮತ್ತು ಅವುಗಳನ್ನು ಬೇಕಾಬಿಟ್ಟಿಯಾಗಿ ಪ್ರಸಾರ ಮಾಡಬಲ್ಲ ಸಾಮಾಜಿಕ ಜಾಲತಾಣಗಳು.

ಸತ್ಯವು ಒಂದು ಹೆಜ್ಜೆ ಮುಂದಿಟ್ಟಾಗ, ಸುಳ್ಳು ಇಡೀ ಜಗತ್ತನ್ನೊಮ್ಮೆ ಸುತ್ತಿ ಬಂದಿರುತ್ತದೆ ಎಂಬ ಮಾತಿದೆ. ತಂತ್ರಜ್ಞಾನದ ಬೆಳವಣಿಗೆಯ ವೇಗವೇ ಇದಕ್ಕೆ ಕಾರಣ. ವಾಟ್ಸ್ಆ್ಯಪ್, ಟೆಲಿಗ್ರಾಂ, ಫೇಸ್‌ಬುಕ್, ಎಕ್ಸ್ (ಟ್ವಿಟರ್), ಇನ್‌ಸ್ಟಾಗ್ರಾಂ, ಸ್ನ್ಯಾಪ್‌ಚಾಟ್ ಮೊದಲಾದ ಸಾಮಾಜಿಕ ಜಾಲತಾಣಗಳಲ್ಲಿ ಫಾರ್ವರ್ಡ್ ಆಗಿ ಬರುವ ಸಂದೇಶಗಳಲ್ಲಿ ಎಲ್ಲವನ್ನೂ ನಂಬುವಂತಿಲ್ಲ. ಇಷ್ಟೇ ಏಕೆ, ಕೆಲವೊಂದು ಜಾಲತಾಣಗಳ (ವೆಬ್‌ಸೈಟ್) ವರದಿಗಳನ್ನೂ ನಂಬುವಂತಿಲ್ಲ. ಹಾಗಾದರೆ ಈ ಮಾಹಿತಿಯ ಮಹಾಪೂರದಲ್ಲಿ ಏನನ್ನು ನಂಬುವುದು? ಇಂಥ ಸಂದಿಗ್ಧ ಸ್ಥಿತಿಗೆ ಮಾಧ್ಯಮಗಳು ಬಂದು ನಿಂತಿವೆ. ವದಂತಿಗಳು ಮಾಡುವ ಅನಾಹುತಗಳು ಅಷ್ಟಿಷ್ಟಲ್ಲ. ನಮ್ಮ ನಡುವೆ ಅಷ್ಟೇ ಅಲ್ಲ, ರಾಜ್ಯಗಳ ನಡುವೆ, ದೇಶಗಳ ನಡುವೆ ವೈಮನಸ್ಸನ್ನೂ ಅವು ಸೃಷ್ಟಿಸಬಲ್ಲವು!

Fact Check!
ಈ ಪರಿ ಆತಂಕ ಹುಟ್ಟಿಸಿರುವ ಸುಳ್ಳು ಅಥವಾ ನಕಲಿ ಸುದ್ದಿಗಳಿಂದ ಸತ್ಯಾಂಶ ಬಗೆದು, ಸತ್ಯವನ್ನು ಜನರಿಗೆ ತಲುಪಿಸಲೆಂದೇ ತೀರಾ ಇತ್ತೀಚಿನ ದಿನಗಳಲ್ಲಿ ಸುದ್ದಿ ಮನೆಗಳಲ್ಲಿಯೂ ಫ್ಯಾಕ್ಟ್ ಚೆಕ್ ತಂಡಗಳನ್ನೂ ರಚಿಸಲಾಗುತ್ತಿದೆ. ಫ್ಯಾಕ್ಟ್ ಚೆಕ್ ಅಂದರೆ ಸತ್ಯಾಂಶ ಪರಿಶೀಲನೆ – ಇದು ಎಷ್ಟು ತ್ರಾಸದಾಯಕ ವಿಚಾರವೆಂದರೆ, ಒಂದು ಸುದ್ದಿಯ ಸುಳ್ಳನ್ನು ಭೇದಿಸುವಷ್ಟರಲ್ಲಿ, ಹತ್ತಾರು ನಕಲಿ ಸುದ್ದಿಗಳು ಪರಿಶೀಲನೆಗೆ ಕಾದಿರುತ್ತವೆ. ಅಂದರೆ, ಇದಕ್ಕೆ ಮಾನವನ ಕೆಲಸದ ವೇಗ ಸಾಕಾಗುವುದಿಲ್ಲ ಎಂಬುದು ದಿಟ. ತಂತ್ರಜ್ಞಾನದ ಎಡವಟ್ಟುಗಳಿಗೆ ತಂತ್ರಜ್ಞಾನದಿಂದಲೇ ಮದ್ದರೆಯಬೇಕಾಗುತ್ತದೆ. ಈ ನಿಟ್ಟಿನಲ್ಲಿ ಇದೀಗ ಹೊಸದಾಗಿ ಚಾಲ್ತಿಗೆ ಬಂದಿದೆ ಕೃತಕ ಬುದ್ಧಿಮತ್ತೆ ಅಥವಾ ಆರ್ಜಿತ ಬುದ್ಧಿಮತ್ತೆ ಎಂದು ಕರೆಯಲಾಗುವ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆಧಾರಿತ ಫ್ಯಾಕ್ಟ್ ಚೆಕಿಂಗ್ ವ್ಯವಸ್ಥೆ ಹೊಸ ಸಾಧ್ಯತೆಯತ್ತ ಬೆಳಕು ಚೆಲ್ಲಿದೆ.

ಸುಳ್ಳು ಸುದ್ದಿ ಮತ್ತು ತಪ್ಪು ಮಾಹಿತಿ
ಬಹುತೇಕರ ಕೈಗೆ ಸ್ಮಾರ್ಟ್ ಫೋನ್‌ಗಳು ಬಂದಿವೆ, ಇಂಟರ್ನೆಟ್ ಕೈಗೆಟುಕುತ್ತಿದೆ. ಇದು ಆಧುನಿಕ ತಂತ್ರಜ್ಞಾನದ ಸುಧಾರಣೆಯ ಫಲ. ಭಾರತದಲ್ಲಿ ಸುಮಾರು 60 ಕೋಟಿ ಮಂದಿ ಇಂಟರ್ನೆಟ್ ಬಳಸುತ್ತಿದ್ದಾರೆ. ಚೀನಾ ನಂತರ ಭಾರತವೇ ಇಂಟರ್ನೆಟ್‌ನ ಅತಿದೊಡ್ಡ ಮಾರುಕಟ್ಟೆ. ಭಾರತ ಸರಕಾರ ಡಿಜಿಟಲ್ ಇಂಡಿಯಾ ಮಂತ್ರ ಪಠಿಸುತ್ತಾ, ಜನ ಸಾಮಾನ್ಯರನ್ನೂ ಡಿಜಿಟಲ್ ಜಗತ್ತಿನತ್ತ ಸೆಳೆಯುತ್ತಿದೆ. ಜೊತೆಗೆ, ಡೇಟಾ ಅಥವಾ ಇಂಟರ್ನೆಟ್ ಸಂಪರ್ಕ ಅಗ್ಗವಾಗಿಬಿಟ್ಟಿದೆ, ಸ್ಮಾರ್ಟ್‌ಫೋನ್‌ಗಳೂ ಅಗ್ಗವಾಗಿವೆ. ಹೆಚ್ಚು ಜನರು ಮೊಬೈಲ್ ಫೋನ್‌ನಲ್ಲೇ ಇಂಟರ್ನೆಟ್ ಬಳಸುತ್ತಿರುವಂತೆ, ಹೆಚ್ಚು ಹೆಚ್ಚು ಆನ್‌ಲೈನ್ ಕಂಟೆಂಟ್ (ಪಠ್ಯ, ಚಿತ್ರ, ವಿಡಿಯೊ ಇತ್ಯಾದಿ) ರಚನೆಯಾಗುತ್ತಿದೆ.

ಈ ಮಾಹಿತಿ ಪ್ರವಾಹದಲ್ಲಿ ಅಸಲಿ ಸುದ್ದಿ ಅಥವಾ ಮಾಹಿತಿಗಳು ತೂರಿಕೊಂಡಿದ್ದಕ್ಕಿಂತ ಹೆಚ್ಚಾಗಿ ನಕಲಿ ಸುದ್ದಿ ಅಥವಾ ತಪ್ಪು, ದಾರಿತಪ್ಪಿಸುವ ಸುಳ್ಳು ಮಾಹಿತಿಗಳೇ ತುಂಬಿಕೊಂಡಿವೆ. ಇದಕ್ಕಾಗಿಯೇ ಹುಟ್ಟಿಕೊಂಡ ಜಾಲತಾಣಗಳು, ಆನ್‌ಲೈನ್ ಜಗತ್ತಿಗೆ ಬರುತ್ತಿರುವ ಹಿರಿಯರನ್ನು ಮತ್ತು ಕಿರಿಯರನ್ನು ಕಂಗೆಡಿಸಿಬಿಟ್ಟಿದೆ. ಯಾವುದನ್ನು ನಂಬಬೇಕು ಯಾವುದನ್ನು ಬಿಡಬೇಕು ಎಂಬುದರ ಕುರಿತು ಅವರಲ್ಲಿ ಅರಿವು ಮೂಡಿಸುವ ಕಾರ್ಯವಾಗಿಲ್ಲ. ಹೀಗಾಗಿ, ಸುಮ್ಮನಿರದ ಕೈಗಳು ಎಲ್ಲ ವಿಷಯವನ್ನೂ ನೋಡಿ, ಖುಷಿಪಟ್ಟು, ಓಹ್, ಇದೂ ಇರಬಹುದು ಅಂತಂದುಕೊಂಡು, ಫಾರ್ವರ್ಡ್ ಮಾಡಲು ಕಲಿತಿವೆ. ಪೂರ್ಣ ಓದಲು ಪುರುಸೊತ್ತಾಗುವುದಿಲ್ಲ. ಮುಖ್ಯಾಂಶವನ್ನೋ, ಒಂದೆರಡು ವಾಕ್ಯವನ್ನೋ ಓದಿ, ಆಸಕ್ತಿದಾಯಕ ಅನಿಸಿದಾಕ್ಷಣ, ಸತ್ಯವೇನು- ಮಿಥ್ಯೆಯೇನು ಎಂದೆಲ್ಲ ಯೋಚಿಸದೆ, ಈ ಸಂದೇಶವನ್ನು ಮತ್ತೊಬ್ಬರಿಗೋ, ಬೇರೆ ಗ್ರೂಪಿಗೋ ಫಾರ್ವರ್ಡ್ ಮಾಡಿ ಆಗಿರುತ್ತವೆ. ಇದು ಅಸಲಿ ಸುದ್ದಿ ಮಾಹಿತಿಯ ಜೊತೆಗೆ ಫೇಕ್ ಮಾಹಿತಿ ಕ್ಷಿಪ್ರವಾಗಿ ಪ್ರಸಾರವಾಗುವ ಬಗೆ.

ಈ ಫೇಕ್ ಮಾಹಿತಿ ಪ್ರವಾಹವು ಚುನಾವಣಾ ವರ್ಷಗಳಲ್ಲಂತೂ, ರಾಜಕೀಯಕ್ಕಾಗಿ ಬಳಕೆಯಾಗುವುದು ಹೆಚ್ಚು. ಈ ನಿಟ್ಟಿನಲ್ಲಿ ಆನ್‌ಲೈನ್ ದಿಗ್ಗಜ ಕಂಪನಿಗಳಾದ ಗೂಗಲ್, ಫೇಸ್‌ಬುಕ್ (ವಾಟ್ಸ್ಆ್ಯಪ್ ಒಡೆತನ ಹೊಂದಿರುವ ಮೆಟಾ) ಹಾಗೂ ಟ್ವಿಟರ್ (ಈಗ ಎಕ್ಸ್), ನಕಲಿ ಸುದ್ದಿ ಹರಿದಾಡುವುದನ್ನು ತಡೆಗಟ್ಟಲು ಸಾಕಷ್ಟು ಕ್ರಮಗಳನ್ನು ಕೈಗೊಂಡು, ಹೈರಾಣಾಗಿವೆ. ಎಲ್ಲರ ಕೈಯಲ್ಲಿಯೂ ಮೊಬೈಲ್ ಫೋನ್ ಇರುವುದರಿಂದ ಎಲ್ಲರೂ ಈಗ ಸುದ್ದಿಗಾರರೇ ಆಗಿಬಿಟ್ಟಿದ್ದಾರೆ.

ಏನಿದು ಫ್ಯಾಕ್ಟ್ ಚೆಕ್?
ಹಿಂದೆಲ್ಲ ಹಗರಣಗಳು, ಭ್ರಷ್ಟಾಚಾರ ಅಥವಾ ಯಾವುದೋ ಕುಕೃತ್ಯಗಳನ್ನು ಬಯಲಿಗೆಳೆಯಲು, ತನಿಖಾ ಪತ್ರಿಕೋದ್ಯಮವೆಂಬುದು ಹೆಸರು ಪಡೆದಿತ್ತು. ಫ್ಯಾಕ್ಟ್ ಚೆಕ್ ಎಂಬುದು ಅದರ ಸುಧಾರಿತ, ಆಧುನೀಕೃತ ರೂಪ. ಇಲ್ಲಿ ವ್ಯತ್ಯಾಸವೆಂದರೆ, ಈಗಾಗಲೇ ಆಗಿರುವ ಸುದ್ದಿಯನ್ನು, ಅದು ನಿಜವೇ, ಸುಳ್ಳೇ? ಅಥವಾ ಅದರಲ್ಲಿರುವ ಮಾಹಿತಿಯ ಸತ್ಯಾಂಶವೆಷ್ಟು ಎಂದು ದೃಢೀಕರಿಸುವ ಕೆಲಸ. ಇದಕ್ಕಾಗಿ, ಲಭ್ಯವಿರುವ ತಂತ್ರಜ್ಞಾನವನ್ನು ಬಳಸುವುದು ಅತ್ಯಗತ್ಯ.

ಫ್ಯಾಕ್ಟ್ ಚೆಕ್ ಎಂಬುದು ಕೇವಲ ಸತ್ಯ ಸುದ್ದಿ ಮತ್ತು ಫೇಕ್ ನ್ಯೂಸ್ – ಇದಕ್ಕೆ ಮಾತ್ರವೇ ಸೀಮಿತವಾಗುಳಿದಿಲ್ಲ. ಸುಳ್ಳು ಸುದ್ದಿಯಲ್ಲದೆ, ಪೂರ್ತಿಯಾಗಿ ತಪ್ಪು ಮಾಹಿತಿ, ದಾರಿ ತಪ್ಪಿಸುವ ಮಾಹಿತಿ, ತಿರುಚಿದ ಮಾಹಿತಿ, ತಿರುಚಿದ ಚಿತ್ರ, ತಿರುಚಲಾದ ವಿಡಿಯೊ, ಯಾವ್ಯಾವುದೋ ಸಂದರ್ಭದ ಕಂಟೆಂಟ್ (ಚಿತ್ರ, ಪಠ್ಯ, ಧ್ವನಿ, ವಿಡಿಯೊ) ಮತ್ಯಾವುದೋ ಸಂದರ್ಭಕ್ಕೆ ಬಳಸುವುದು, ಹಳೆಯ ಕಂಟೆಂಟ್ ಅನ್ನು ತಿರುಚುವುದು – ಇವೆಲ್ಲವೂ ಸೇರಿಕೊಂಡಿದೆ. ಇವುಗಳ ನಡುವೆ ಸತ್ಯಾಂಶವನ್ನು ಕಂಡುಹುಡುಕುವುದು ಎಂದರೆ ಬಲುದೊಡ್ಡ ಸಾಧನೆಯೇ ಸರಿ. ಒಂದು ಸುಳ್ಳು ಅಥವಾ ಫೇಕ್ (ನಕಲಿ) ಸುದ್ದಿ ಮಾಡುವುದಕ್ಕೆ ಕೆಲವೇ ಕ್ಷಣಗಳು ಸಾಕು, ಆದರೆ ಅದರ ಹಿಂದಿನ ಸತ್ಯಾಂಶ ಬಯಲಿಗೆಳೆಯಬೇಕಿದ್ದರೆ, ಗಂಟೆ, ದಿನ, ವಾರವೂ ಬೇಕಾಗಬಹುದು. ಅಷ್ಟು ಸಂಕೀರ್ಣವಾಗಿದೆ ಈ ಫ್ಯಾಕ್ಟ್ ಚೆಕ್ ಕೆಲಸ. ಇದೊಂಥರಾ ಸಿಕ್ಕುಗಳನ್ನು ಬಿಡಿಸುತ್ತಾ ಹೋಗುವ ಕೆಲಸವೇ ಸರಿ.

ಫ್ಯಾಕ್ಟ್ ಚೆಕ್ ಮಾಡುವುದು ಹೇಗೆ?
ವಿಡಿಯೊ ಅಥವಾ ಧ್ವನಿಗೆ ಹೋಲಿಸಿದರೆ, ಪಠ್ಯ (ಸುದ್ದಿ) ಅಥವಾ ಚಿತ್ರದ ಸತ್ಯಾಸತ್ಯ ಪರಿಶೀಲನೆಯು ಕೊಂಚ ಸುಲಭವಾದರೂ, ಅಸಲಿ-ನಕಲಿ ಮಾಹಿತಿಯ ಪ್ರವಾಹದ ನಡುವೆ ವಿಶ್ವಾಸಾರ್ಹ ಮತ್ತು ಸರಿಯಾದ ಮಾಹಿತಿಯನ್ನು ಹೆಕ್ಕಿ ತೆಗೆಯುವುದು ಸಂಕೀರ್ಣ ಕೆಲಸವೂ ಹೌದು. ಇದಕ್ಕಾಗಿಯೇ ಇರುವುದು ಫ್ಯಾಕ್ಟ್ ಚೆಕ್ ಎಂಬ, ನವಮಾಧ್ಯಮದ ಹೊಸ ತನಿಖಾ ವಿಧಾನ.

ಸಾಮಾನ್ಯವಾಗಿ ಈಗಾಗಲೇ ದಶಕಗಳಿಂದ ಚಾಲ್ತಿಯಲ್ಲಿರುವ ಸುದ್ದಿ ಸಂಸ್ಥೆಗಳನ್ನು ಜನರು ನಂಬುತ್ತಾರೆ. ಆದರೆ, ಸುದ್ದಿಗಾರರೇ ಸಾಮಾಜಿಕ ಜಾಲತಾಣಗಳಲ್ಲಿ ಬಂದ ಮಾಹಿತಿಯನ್ನೇ ಸರಿ ಎಂದುಕೊಂಡು ಫಾರ್ವರ್ಡ್ ಮಾಡುತ್ತಾರೆ, ಅದರಿಂದಲೇ ಹೆಕ್ಕಿ ಸುದ್ದಿ ಮಾಡುತ್ತಾರೆ. ಹೀಗಾದಾಗ, ಮಾಧ್ಯಮ ಸಂಸ್ಥೆಗಳ ವಿಶ್ವಾಸಾರ್ಹತೆಗೂ ಧಕ್ಕೆಯಾಗುತ್ತದೆ. ಇದಕ್ಕಾಗಿಯೇ ಹಿರಿಯರು ಆ ಕಾಲದಲ್ಲೇ ಹೇಳಿದ್ದು – ಕಣ್ಣಾರೆ ಕಂಡರೂ ಪರಾಂಬರಿಸಿ ನೋಡು. ಆನ್‌ಲೈನ್ ಕಂಟೆಂಟ್ ಅಥವಾ ವಿಷಯಕ್ಕಂತೂ ಇದು ಅತ್ಯಂತ ಖಚಿತವಾಗಿ ಒಗ್ಗುವ ಮಾತು.

ಈಗಿನ ಹೊಸ ಸವಾಲು ಡೀಪ್ ಫೇಕ್ ಎಂಬ, ಚಿತ್ರ ಅಥವಾ ವಿಡಿಯೊವನ್ನು ಅಸಲಿಯಂತೆಯೇ ಕಾಣಿಸಬಲ್ಲ ಹೊಸ ತಂತ್ರಜ್ಞಾನ. ಯಾರದ್ದೋ ದೇಹಕ್ಕೆ ಇನ್ಯಾರದ್ದೋ ಮುಖ ಅಳವಡಿಸುವುದು, ಯಾರದ್ದೋ ವಿಡಿಯೊಗೆ ಮತ್ಯಾರದ್ದೋ ಧ್ವನಿ ಅಳವಡಿಸುವುದು, ಅಥವಾ ರೆಕಾರ್ಡ್ ಮಾಡಿ, ಅವರದ್ದೇ ಅಸಲಿ ಧ್ವನಿಯಂತೆಯೇ ತಿದ್ದುಪಡಿ ಮಾಡಿ, ವಿಡಿಯೊಗೆ ಜೋಡಿಸುವುದು – ಇವೆಲ್ಲವೂ ನಡೆಯುತ್ತಿರುವುದು ನಮ್ಮ-ನಿಮ್ಮೆಲ್ಲರ ಗಮನಕ್ಕೆ ಬಂದ ವಿಚಾರವೇ ಹೌದು.

ಹೀಗಾಗಿ ಪತ್ರಕರ್ತರಿಗೆ ಇದೊಂದು ಹೊಸ ಹೊಣೆಯೂ ಹೌದು, ಸವಾಲು ಕೂಡ ಹೌದು. ಕಂಡಿದ್ದೆಲ್ಲವೂ ಸುದ್ದಿಯಾಗಲಾರದು. ಹಿಂದೆಲ್ಲ ಯಾವುದು ಸುದ್ದಿ ಎಂದು ಹುಡುಕಬೇಕಿತ್ತು, ಆದರೆ ಈಗ ಹಾಗಿಲ್ಲ. ಈ ಸುದ್ದಿಯಲ್ಲಿ ಯಾವುದು ಸುದ್ದಿಯಲ್ಲ ಎಂದು ಬೇರ್ಪಡಿಸುವ ಹೊಸ ಚಾಕಚಕ್ಯತೆ ಅಗತ್ಯ.

ಫ್ಯಾಕ್ಟ್ ಚೆಕ್ ಅಥವಾ ಸತ್ಯಾಂಶ ಪರಿಶೀಲನೆ ಹೇಗೆ ಮಾಡಬಹುದು ಎಂಬುದಕ್ಕೆ ಒಂದು ಕ್ವಿಕ್ ಗೈಡ್ ಇಲ್ಲಿದೆ. ಇದಕ್ಕೆ ಎಲ್ಲರೂ ಇಂಟರ್ನೆಟ್ ಅಥವಾ ತಂತ್ರಜ್ಞಾನ ತಜ್ಞರಾಗಬೇಕಿಲ್ಲ. ನಮ್ಮ ಕೈಗೆ ಸಿಗುವ ಉಚಿತ ಟೂಲ್‌ಗಳನ್ನೇ ಬಳಸಿ, ನಾವು ಎಫ್ಐಆರ್ ಅಥವಾ ಪ್ರಥಮ ಮಾಹಿತಿ ವರದಿ ಇಲ್ಲವೇ ಪ್ರಥಮ ಚಿಕಿತ್ಸೆಯ ಮಾದರಿಯಲ್ಲಿ ಸುದ್ದಿಯನ್ನು ಫಿಲ್ಟರ್ ಮಾಡಬಹುದು.

ಸಂದೇಹಿಸುವ ಬುದ್ಧಿ
ನಮಗೆ ಮೊದಲು ಸಂಶಯ ಮೂಡುವುದು ಅತ್ಯಂತ ಅಗತ್ಯ. ಯಾವುದೇ ಸುದ್ದಿ ತಿಳಿದಾಕ್ಷಣ ಇದರ ಇನ್ನೊಂದು ಮಗ್ಗುಲಿನ ಬಗ್ಗೆ ಯೋಚಿಸಲೇಬೇಕು. ಉದಾಹರಣೆಗೆ, ಈ ಸುದ್ದಿಯನ್ನು ಯಾರು ಹಂಚಿಕೊಂಡಿದ್ದು, ಅವರ ಹಿನ್ನೆಲೆಯೇನು, ಅವರು ವಿಶ್ವಾಸಾರ್ಹರೇ? ಬೇರೆ ಮೂಲಗಳು ಇದೇ ಸುದ್ದಿಯ ಅಥವಾ ಮಾಹಿತಿಯ ಬಗ್ಗೆ ಏನು ವರದಿ ಮಾಡಿವೆ? ಅದಕ್ಕೆ ಪೂರಕ ಸಾಕ್ಷ್ಯಾಧಾರಗಳನ್ನು, ದಾಖಲೆಗಳನ್ನು ಒದಗಿಸಲಾಗಿದೆಯೇ? ಒದಗಿಸಿದ್ದರೆ, ಅದರ ಸಾಚಾತನ ಏನು? ಯಾವ ಜಾಲತಾಣದಲ್ಲಿ ಈ ಕುರಿತು ಮಾಹಿತಿ ಇದೆ? ಆ ಜಾಲತಾಣವು ವಿಶ್ವಾಸಾರ್ಹವೇ? ಪ್ರಕಟವಾದ ದಿನಾಂಕ ಯಾವುದು? ಇವೆಲ್ಲ ಪ್ರಶ್ನೆಗಳನ್ನು ಕೇಳಿಕೊಳ್ಳುವುದು ಅತ್ಯಗತ್ಯ. ಮತ್ತು, ಯಾವುದೇ ಸಾಮಾಜಿಕ ಮಾಧ್ಯಮದಲ್ಲಿ ಅಂಥದ್ದೊಂದು ಮಾಹಿತಿಯಿದ್ದರೆ, ಅದರಲ್ಲಿರುವ ಕಾಮೆಂಟ್‌ಗಳನ್ನು ಕೂಡ ಪರಿಶೀಲಿಸಿದರೆ, ಕೆಲವೊಮ್ಮೆ ಆ ಸುದ್ದಿಯ ಜಾಡು ಹಿಡಿದುಕೊಂಡು ಹೋಗುವುದು ಸುಲಭವಾದೀತು.

ಈ ಮೇಲಿನ ಅಂಶಗಳ ಮೂಲಕವಾಗಿ, ಗೂಗಲ್, ಟ್ವಿಟರ್, ಫೇಸ್‌ಬುಕ್ ಮುಂತಾದ ತಾಣಗಳ ಸರ್ಚ್ ಬಾಕ್ಸ್ ಬಳಸಿ ನಾವು ಪಠ್ಯ ಸಂಬಂಧಿತವಾದ ಸುದ್ದಿಗಳ ಸತ್ಯಾಸತ್ಯತೆ ಪರಿಶೀಲಿಸಬಹುದು.

ಸರ್ಚ್ ಎಂಜಿನ್ ಬಳಕೆ
ಯಾವುದೇ ಚಿತ್ರ, ವಿಡಿಯೊ, ಪಠ್ಯ ಹುಡುಕಾಡುವುದಕ್ಕೆ ಸರ್ಚ್ ಎಂಜಿನ್‌ಗಳು ನಮಗೆಲ್ಲ ಗೊತ್ತಿವೆ. ಗೂಗಲ್ ಮಾತ್ರವಲ್ಲದೆ, ಬಿಂಗ್, ಡಕ್ ಡಕ್ ಗೋ ಎಂಬ ಸರ್ಚ್ ಎಂಜಿನ್‌ಗಳು ಕೂಡ ಇವೆ. ಇದರೊಂದಿಗೆ, ಯೂರೋಪ್-ರಷ್ಯಾದ ಸಂಗತಿಗಳು ಹೆಚ್ಚು ನಿಖರವಾಗಿ ದೊರೆಯುವುದು ಯಾಂಡೆಕ್ಸ್ ಎಂಬ ಸರ್ಚ್ ತಾಣದಲ್ಲಿ. ಅದೇ ರೀತಿ, ಚೀನಾಕ್ಕೆ ಸಂಬಂಧಿಸಿದ ಮಾಹಿತಿಯ ಹುಡುಕಾಟಕ್ಕೆ ಹೆಚ್ಚು ಅನುಕೂಲ ಮಾಡಿಕೊಡುವುದು ಬೈಡು ಎಂಬ ಸರ್ಚ್ ಎಂಜಿನ್.

ಯಾವುದೇ ಪಠ್ಯವನ್ನು ಅಥವಾ ಅದಕ್ಕೆ ಸಂಬಂಧಿಸಿದ ಕೀವರ್ಡ್‌ಗಳುಳ್ಳ ಪಠ್ಯವನ್ನು ಸರ್ಚ್ ಎಂಜಿನ್‌ನ ಪುಟದ ಬಾಕ್ಸ್‌ನಲ್ಲಿ ಹಾಕಿ, ಅದಕ್ಕೆ ಸಂಬಂಧಿಸಿದಂತೆ ಯಾವೆಲ್ಲ ಜಾಲತಾಣಗಳಲ್ಲಿ ವರದಿಯಾಗಿದೆ ಎಂದು ಹುಡುಕುತ್ತಾ ಹೋಗಬೇಕು. ಗೂಗಲ್ ಸರ್ಚ್ ಎಂಜಿನ್‌ನಲ್ಲಿರುವ ಟೈಮ್ ಫಿಲ್ಟರ್ ಇಲ್ಲಿ ಉಪಯೋಗಕ್ಕೆ ಬರುತ್ತದೆ. ನಿರ್ದಿಷ್ಟ ದಿನಾಂಕದಲ್ಲಿ ಅಂಥದ್ದೊಂದು ಘಟನೆ ನಡೆದಿದೆಯೇ ಅಥವಾ ಆ ರೀತಿ ಯಾರಾದರೂ ಹೇಳಿದ್ದಾರೆಯೇ ಎಂಬುದನ್ನು ಸುದ್ದಿ ತಾಣಗಳು ವರದಿ ಮಾಡಿದ್ದರೆ, ಸರ್ಚ್ ಮಾಡುವುದರ ಮೂಲಕ ಖಚಿತಪಡಿಸಿಕೊಳ್ಳಬಹುದು. ಅದೇ ರೀತಿ, ಯೂಟ್ಯೂಬ್, ಫೇಸ್‌ಬುಕ್, ಎಕ್ಸ್ ತಾಣಗಳಲ್ಲಿರುವ ಸರ್ಚ್ ಬಾಕ್ಸ್‌ನಲ್ಲಿಯೂ ಇದೇ ಮಾದರಿ ಹುಡುಕಾಟ ನಡೆಸಿದರೆ ಹೆಚ್ಚು ನಿಖರ ಮಾಹಿತಿ ಸಿಗಬಹುದು. ಇದಲ್ಲದೆ, ಟೈಮ್ ಮೆಷಿನ್ ಎಂದು ಹೇಳಲಾಗುವ ವೆಬ್ ಆರ್ಕೈವ್ಸ್ (archive.org/web) ಜಾಲತಾಣದಲ್ಲಿ, ಹಳೆಯ ಅಥವಾ ಡಿಲೀಟ್ ಆಗಿರಬಹುದಾದ ಮಾಹಿತಿಗಳು ಕೂಡ ಲಭ್ಯವಾಗುವ ಸಾಧ್ಯತೆಗಳಿವೆ. ಅಲ್ಲಿಯೂ ಹುಡುಕಿ ಖಚಿತಪಡಿಸಿಕೊಳ್ಳಬಹುದು. ಬೇರೆ ಭಾಷೆಯ ಪಠ್ಯವಿದ್ದರೆ, ಗೂಗಲ್ ಟ್ರಾನ್ಸ್‌ಲೇಟ್ (translate.google.com) ಬಳಸಿ, ನಮಗೆ ತಿಳಿಯುವ ಭಾಷೆಗೆ ಅನುವಾದಿಸಿಕೊಂಡರೆ ಪರಿಶೀಲನೆಗೆ ಮತ್ತಷ್ಟು ಬಲ ಬರುತ್ತದೆ.

ಚಿತ್ರದ ಸತ್ಯಾಂಶ ಪರಿಶೀಲನೆ
ನಮಗೆ ಯಾವುದೇ ಚಿತ್ರವು ಮಾರ್ಫ್ ಆಗಿದೆ ಅಥವಾ ಮಾರ್ಪಾಟಾಗಿದೆ ಎಂಬ ಸಂಶಯ ಬಂದರೆ (ಬರಬೇಕು), ಆ ಕುರಿತಾಗಿ ಗೂಗಲ್‌ನ ಇಮೇಜ್ ಸರ್ಚ್ ವಿಭಾಗದಲ್ಲಿ (google.com/imghp ಅಥವಾ ಗೂಗಲ್ ಸರ್ಚ್ ಬಾರ್‌ನ ಬಲ ಮೇಲ್ಭಾಗದಲ್ಲಿರುವ Images ಎಂಬ ಬಟನ್ ಒತ್ತಿ) ಹುಡುಕಿ, ಅತ್ಯಂತ ಹಳೆಯ ಚಿತ್ರ ಯಾವುದು ಎಂದು ತಿಳಿದುಕೊಂಡರೆ, ನಿಜ ಯಾವುದು, ಫೇಕ್ ಯಾವುದು ಎಂದು ಪತ್ತೆ ಹಚ್ಚುವುದು ಸುಲಭ. ಇದರ ಜೊತೆಗೆ, ನಮ್ಮಲ್ಲಿರುವ ಫೋಟೊವನ್ನೇ ಗೂಗಲ್‌ಗೆ ಹಾಕಿ, ಆ ಚಿತ್ರ ಅಥವಾ ಅದನ್ನು ಹೋಲುವ ಚಿತ್ರ ಎಲ್ಲಿ, ಯಾವಾಗ ಬಳಕೆಯಾಗಿದೆ ಎಂದು ತಿಳಿದುಕೊಳ್ಳಬಹುದು. ಇಮೇಜ್ ಸರ್ಚ್ ಬಾಕ್ಸ್‌ನಲ್ಲೇ ನಮಗೆ ಕ್ಯಾಮೆರಾ ಬಟನ್ ಒಂದು ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿದರೆ, ಚಿತ್ರವನ್ನು ಅಪ್‌ಲೋಡ್ ಮಾಡುವ ಆಯ್ಕೆ ಕಾಣಿಸುತ್ತದೆ. ಅಪ್‌ಲೋಡ್ ಮಾಡಿದ ತಕ್ಷಣವೇ, ಜಗತ್ತಿನಾದ್ಯಂತದ ಜಾಲತಾಣಗಳಲ್ಲಿ ಎಲ್ಲಿ ಇದೇ ಚಿತ್ರ ಅಥವಾ ಇದೇ ಮಾದರಿಯ ಚಿತ್ರ ಬಳಕೆಯಾಗಿದೆ ಎಂಬುದು ಕಾಣಿಸುತ್ತದೆ. ಇದರಲ್ಲಿ ಕೂಡ ಅತ್ಯಂತ ಹಳೆಯ ಚಿತ್ರವನ್ನು ನಾವು ನಂಬಬಹುದಾಗಿದೆ ಎಂದುಕೊಳ್ಳಬಹುದು.

ಗೂಗಲ್ ಲೆನ್ಸ್
ಇನ್ನು, ಚಿತ್ರದಲ್ಲಿರುವ ಪಠ್ಯವನ್ನು ಬಳಸಿಯೂ ಸಂಬಂಧಿತ ಮಾಹಿತಿಯನ್ನು ಗೂಗಲ್‌ನಲ್ಲಿ ಹುಡುಕಾಡಬಹುದು. ಚಿತ್ರದಿಂದ ಪಠ್ಯವನ್ನು ಬೇರ್ಪಡಿಸಲು ನಮಗೆ ಅನುಕೂಲ ಮಾಡಿಕೊಡುವುದು ಗೂಗಲ್ ಲೆನ್ಸ್ ಎಂಬ ಸಾಧನ. ಗೂಗಲ್ ಲೆನ್ಸ್ ಮೊಬೈಲ್ ಫೋನ್‌ಗಳಲ್ಲಂತೂ ಸುಲಭವಾಗಿ ಆ್ಯಪ್ ರೂಪದಲ್ಲಿ ಲಭ್ಯವಿದ್ದರೆ, ಕಂಪ್ಯೂಟರಿನಲ್ಲಿ ಕೂಡ ಬ್ರೌಸರ್ ಪ್ಲಗ್-ಇನ್ ಮಾದರಿಯಲ್ಲಿ ನಮಗೆ ಸಿಗುತ್ತದೆ. ಇದರ ಅನುಕೂಲ ಎಂದರೆ, ಇದರಿಂದ ಪಠ್ಯವನ್ನು ನಕಲಿಸಬಹುದಲ್ಲದೆ, ಚಿತ್ರದ ನಿರ್ದಿಷ್ಟ ಭಾಗವನ್ನು ಫೋಕಸ್ ಮಾಡಿಯೂ ಸರ್ಚ್ ಎಂಜಿನ್‌ನಲ್ಲಿ ಹುಡುಕಾಡಬಹುದು. ಚಿತ್ರದ ನಿರ್ದಿಷ್ಟ ಭಾಗವನ್ನಷ್ಟೇ ಹುಡುಕಾಡಲು, ನಮ್ಮದೇ ಕಂಪ್ಯೂಟರಲ್ಲಿ ಲಭ್ಯವಿರುವ ‘ಸ್ನಿಪ್ಪಿಂಗ್ ಟೂಲ್’ ಬಳಸಿ ಕ್ರಾಪ್ ಮಾಡಿ, ಹುಡುಕಾಟಕ್ಕೆ ಬಳಸಬಹುದು.

ಚಿತ್ರದಲ್ಲಿ ವಿಳಾಸವೇನಾದರೂ (ನೇಮ್ ಬೋರ್ಡ್, ಅಂಗಡಿಯ ಬೋರ್ಡ್ ಇತ್ಯಾದಿ) ಕಂಡುಬಂದರೆ, ಅಂಥದ್ದೊಂದು ಮಳಿಗೆ ಇದೆಯೇ ಎಂದು ತಿಳಿದುಕೊಳ್ಳುವುದಕ್ಕೆ ನಮಗೆ ನೆರವಾಗುವುದು ಗೂಗಲ್ ಮ್ಯಾಪ್‌ನಲ್ಲಿ ಲಭ್ಯವಾಗುವ ಸ್ಟ್ರೀಟ್ ವ್ಯೂ ಎಂಬ ವೈಶಿಷ್ಟ್ಯ. ಇದು ನಕಲಿ ಬೋರ್ಡ್ ಆಗಿದ್ದರೆ, ಅದರಲ್ಲಿರುವ ವಿಳಾಸ ಅಥವಾ ಹೆಗ್ಗುರುತುಗಳ ಆಧಾರದಲ್ಲಿ ಪತ್ತೆ ಹಚ್ಚುವುದಕ್ಕೆ ಉಪಯುಕ್ತ. ಸ್ಟ್ರೀಟ್-ವ್ಯೂ ಎಂಬುದು ಬೀದಿ ಬೀದಿಗಳನ್ನು ತೋರಿಸಿ, ಅಲ್ಲಿರುವ ಮಾಹಿತಿಯನ್ನೂ ತೋರಿಸುವ ವಿಶಿಷ್ಟ ಕೊಡುಗೆ. ಆದರೆ, ಎಲ್ಲ ಊರುಗಳ ಸ್ಟ್ರೀಟ್-ವ್ಯೂ ಲಭ್ಯ ಎಂದು ಹೇಳಲಾಗದು. ಪ್ರಮುಖ ಪಟ್ಟಣಗಳಲ್ಲಂತೂ ಇದು ಇದೆ ಮತ್ತು ಗೂಗಲ್ ಅದನ್ನು ಕಾಲಕಾಲಕ್ಕೆ ಅಪ್‌ಡೇಟ್ ಮಾಡುತ್ತಿರುತ್ತದೆ.

ವಿಡಿಯೊ ಪರಿಶೀಲನೆ
ವಿಡಿಯೊದ ಬಗ್ಗೆ ಏನಾದರೂ ಸಂದೇಹ ಬಂದಲ್ಲಿ, ಅದರಲ್ಲಿರುವ ಫ್ರೇಮ್‌ಗಳನ್ನು ಚಿತ್ರ ರೂಪದಲ್ಲಿ ತೆಗೆದು, ನಿರ್ದಿಷ್ಟ ಭಾಗದ ಚಿತ್ರವನ್ನು ಪರಿಶೀಲನೆ ಮಾಡಿ, ಸತ್ಯಾಂಶವನ್ನು ಪತ್ತೆ ಮಾಡಲಾಗುತ್ತದೆ. ಇದಕ್ಕೆ ಅನುಕೂಲ ಮಾಡಿಕೊಡುವ ಪ್ರಮುಖ ಟೂಲ್ ಇನ್‌ವಿಡ್ (InVid). ಇದು ಬ್ರೌಸರ್ ಪ್ಲಗ್-ಇನ್ ರೂಪದಲ್ಲಿ ದೊರೆಯುತ್ತದೆ. ಇದನ್ನು ಬಳಸಿ ವಿಡಿಯೊದಿಂದ ಚಿತ್ರಗಳನ್ನು ಬೇರ್ಪಡಿಸಿ, ಅಲ್ಲಿಂದಲೇ ಗೂಗಲ್ ಅಥವಾ ಬೇರಾವುದೇ ಸರ್ಚ್ ಎಂಜಿನ್ ಮೂಲಕ ಹುಡುಕಾಟ ನಡೆಸಿ, ಮೂಲ ಪತ್ತೆ ಮಾಡುವುದು ಸಾಧ್ಯವಾಗುತ್ತದೆ.

ಇಷ್ಟೆಲ್ಲ ಆದಮೇಲೂ, ಮರೆಯಬಾರದ ವಿಚಾರವೆಂದರೆ, ಫಿಸಿಕಲ್ ವೆರಿಫಿಕೇಶನ್. ಎಂದರೆ, ನೇರವಾಗಿ ಸಂಬಂಧಪಟ್ಟವರನ್ನು, ಅಧಿಕಾರಿಗಳನ್ನು ಮಾತನಾಡಿಸಿ, ಅವರಿಂದಲೇ ವಿಷಯ ಖಚಿತಪಡಿಸಿಕೊಳ್ಳುವುದು ಅಥವಾ ಸಂಬಂಧಪಟ್ಟ ಊರಿಗೆ ತೆರಳಿ ಅಲ್ಲಿನ ಸ್ಥಳ, ಘಟನೆ ಪರಿಶೀಲಿಸಿಕೊಳ್ಳುವುದು. ಇದು ಅತ್ಯಂತ ಪ್ರಮುಖ ಘಟ್ಟ.

ಇಷ್ಟೊಂದು ತಪ್ಪು ಮಾಹಿತಿ, ದಾರಿತಪ್ಪಿಸುವ ಮಾಹಿತಿ, ನಕಲಿ ಚಿತ್ರ-ವಿಡಿಯೊಗಳುಳ್ಳ ಮಾಹಿತಿ-ತಂತ್ರಜ್ಞಾನ ಯುಗದ ಪ್ರವಾಹದ ನಡುವಿನಲ್ಲಿ ಈಗಿನ ಪತ್ರಕರ್ತರು ಈಗ ಕೇವಲ ಸುದ್ದಿ ಬರೆಯುವವರಾಗಿ ಉಳಿದಿಲ್ಲ. ಸರ್ಚ್ ತಜ್ಞರಾಗಿರಬೇಕಾಗುತ್ತದೆ, ಅದಕ್ಕೂ ಹೆಚ್ಚಿನದಾಗಿ ಸತ್ಯಾಂಶದ ಸರ್ಚ್ ತಜ್ಞರಾಗಿರಬೇಕಾಗುತ್ತದೆ. Nose for News ಮಾತ್ರವಲ್ಲ, Nose for Fact News ಎಂಬುದು ಈಗಿನ ಪತ್ರಕರ್ತರ ಧ್ಯೇಯ. ತಪ್ಪು ಮಾಹಿತಿಯನ್ನು ಹರಡುವುದು ಭಾರತೀಯ ನ್ಯಾಯ ಸಂಹಿತೆಯ ಅಡಿಯಲ್ಲಿ ಶಿಕ್ಷಾರ್ಹ ಅಪರಾಧ ಆಗುತ್ತದೆ ಎಂಬುದನ್ನು ಓದುಗರಿಗೆ ತಿಳಿಹೇಳಬೇಕಾದುದು ಈಗಿನ ಅನಿವಾರ್ಯತೆ ಮತ್ತು ಹೆಚ್ಚುವರಿ ಜವಾಬ್ದಾರಿ. ಇದರ ಜೊತೆಗೆ, ಈಗಿನ ಹೊಸ ವಿದ್ಯಮಾನವೆಂದರೆ ಸಚಿನ್ ತೆಂಡೂಲ್ಕರ್ ಅಥವಾ ರಶ್ಮಿಕಾ ಮಂದಣ್ಣ ಮುಂತಾದ ಸೆಲೆಬ್ರಿಟಿಗಳು ಎದುರಿಸಿದ ಡೀಪ್ ಫೇಕ್ ಎಂಬ ಜನರೇಟಿವ್ ಕೃತಕ ಬುದ್ಧಿಮತ್ತೆ (ಜನರೇಟಿವ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ತಂತ್ರಜ್ಞಾನದ ದುರ್ಬಳಕೆಯನ್ನೂ ಪತ್ತೆ ಹಚ್ಚುವ ಮತ್ತು ತಡೆಯುವ ಹೊಣೆಗಾರಿಕೆ.

ಕಾನೂನಿನ 505ನೇ ವಿಧಿಯಲ್ಲಿ ಸಾರ್ವಜನಿಕರಿಗೆ ತೊಂದರೆಯುಂಟು ಮಾಡುವ, ವದಂತಿ ಹರಡುವುದು, ತಪ್ಪು ಸುದ್ದಿ ಹರಡುವುದು ಶಿಕ್ಷಾರ್ಹ ಅಪರಾಧ ಎಂದು ತಿಳಿಸಲಾಗಿದೆ. ಸ್ಪಷ್ಟವಾಗಿ ಹೇಳುವುದಾದರೆ, ಈ ಕಾನೂನಿನ ವ್ಯಾಖ್ಯಾನ ಹೀಗಿದೆ – “ಧರ್ಮ, ಪಂಗಡ, ಜನಾಂಗ, ಜನ್ಮಸ್ಥಳ, ವಾಸಸ್ಥಳ, ಭಾಷೆ, ಜಾತಿ ಅಥವಾ ಸಮುದಾಯ ಅಥವಾ ಬೇರಾವುದೇ ಆಧಾರದಲ್ಲಿ, ದ್ವೇಷದ ಭಾವನೆ, ದ್ವೇಷ ಅಥವಾ ದುರುದ್ದೇಶದ ಮಾಹಿತಿ, ವಿಭಿನ್ನ ಧರ್ಮ, ಜನಾಂಗ, ಭಾಷೆ ಮತ್ತು ಪ್ರಾದೇಶಿಕ ಗುಂಪುಗಳು, ಜಾತಿ ಅಥವಾ ಸಮುದಾಯಗಳ ನಡುವೆ ಸಂಘರ್ಷ ಹುಟ್ಟಿಸಬಹುದಾದ ಮತ್ತು ಸಂಘರ್ಷ, ದ್ವೇಷ ಹುಟ್ಟಿಸುವ ಉದ್ದೇಶದ ವದಂತಿ ಅಥವಾ ಎಚ್ಚರಿಕೆಯ ಸಂದೇಶವನ್ನು ಅಥವಾ ವರದಿಯನ್ನು, ಹೇಳಿಕೆಯನ್ನು ಪ್ರಕಟಿಸಿದರೆ ಅಥವಾ ಹರಡಿದರೆ, ಅವರಿಗೆ ಮೂರು ವರ್ಷಗಳವರೆಗೆ ಕಾರಾಗೃಹ ಶಿಕ್ಷೆ ಮತ್ತು/ಅಥವಾ ದಂಡ ವಿಧಿಸಬಹುದಾಗಿದೆ.”

LEAVE A REPLY

Please enter your comment!
Please enter your name here