ಕೆ.ವಿ.ಸುಬ್ಬಣ್ಣ ಬಯಲು ರಂಗಮಂದಿರದಲ್ಲಿ ಶುಕ್ರವಾರ ಚರ್ವಿತ ಚರ್ವಣಕ್ಕೆ ತುಸು ವಿಭಿನ್ನವಾದ ಯಕ್ಷಗಾನ ರಂಗಪ್ರಯೋಗವೊಂದು ಹೊಸ ಸಾಧ್ಯತೆಗೆ ನಾಂದಿ ಹಾಡಿತು.
ಆಳ್ವಾಸ್ ನುಡಿಸಿರಿಯಲ್ಲಿ ಕದ್ರಿ ನವನೀತ್ ಶೆಟ್ಟಿ ಪರಿಕಲ್ಪನೆಯಲ್ಲಿ ಮತ್ತು ನಿರ್ದೇಶನದಲ್ಲಿ ಮೂಡಿ ಬಂದ, ದೇರಾಜೆ ಸೀತಾರಾಮಯ್ಯನವರ “ಕುರುಕ್ಷೇತ್ರಕ್ಕೊಂದು ಆಯೋಗ” ಕೃತಿ ಮಹಾಭಾರತದ ಜ್ಞಾನವುಳ್ಳವರಿಗೆ ಸಂಪೂರ್ಣ ಅರ್ಥವಾಗುವಂತಿತ್ತು, ಮತ್ತು ಅರೆ ಬರೆಯಾಗಿ ಗೊತ್ತಿರುವ ಮಂದಿಗೆ ಮಹಾಭಾರತದ ಪಾತ್ರಗಳ ಒಳಸಂವೇದನೆ, ತಪ್ಪು ಒಪ್ಪುಗಳ ಆಂತರಿಕ ತಾಕಲಾಟ, ತಪ್ಪೆಂದು ತಿಳಿದಿದ್ದೂ ಅದನ್ನು ಮಾಡಲೇಬೇಕಾಗಿದ್ದ ಅನಿವಾರ್ಯತೆಗಳೆಲ್ಲವನ್ನೂ ಬಿಚ್ಚಿಡುವಲ್ಲಿ, ಮಾತ್ರವಲ್ಲದೆ, ಕುರುಕ್ಷೇತ್ರ ಯುದ್ಧದ ಸೂತ್ರದಾರಿ ಶ್ರೀಕೃಷ್ಣ ಕೆಲವೆಡೆ ಕಪಟವಾಡಿದ್ದಾನೆ, ಅದು ಯಾಕೆ ಕಪಟವಲ್ಲ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ನೀಡಲು ಯತ್ನಿಸುವ ನಿಟ್ಟಿನಲ್ಲಿ ಈ ಯಕ್ಷರಂಗ ಪ್ರಯೋಗ ಪ್ರಯತ್ನಿಸಿತು.
ಇದು ಕುರುಕ್ಷೇತ್ರ ಯುದ್ಧಕ್ಕೆ ಕಾರಣವಾದ ಪಾತ್ರಗಳನ್ನು ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲಿಸಿ, ತಪ್ಪು ಒಪ್ಪುಗಳ ಪರಾಮರ್ಶೆ ಮಾಡಿಸುವ ವಿಶಿಷ್ಟ ಪ್ರಸಂಗ. ಇಲ್ಲಿ ಸಂಜಯ, ಭೀಷ್ಮ, ಶಕುನಿ, ದ್ರುಪದ, ಯುಧಿಷ್ಠಿರ, ದ್ರೌಪದಿ, ರುಕ್ಮ, ಕೌರವ, ಅಶ್ವತ್ಥಾಮ ಮತ್ತು ಅಂತಿಮವಾಗಿ ಶ್ರೀಕೃಷ್ಣನ ಪರವಾಗಿ ಶೌನಕ ಮುನಿಗಳು ವಿಚಾರಣೆಗೊಳಪಡುತ್ತಾರೆ. ಅವರು ಮಾಡಿದ್ದು ತಪ್ಪು ಎಂದು ನಮಗನಿಸಿದ್ದನ್ನು ಅವರು ಸಮರ್ಥಿಸಿಕೊಳ್ಳುತ್ತಾರೆ.
ದಿನಕರ ಎಸ್. ಪಚ್ಚನಾಡಿ ಅವರು ಸಂಜಯನಾಗಿ ಕಟಕಟೆಯಲ್ಲಿ ಕಾಣಿಸಿಕೊಂಡ ಬಳಿಕ ಅರುವ ನಾರಾಯಣ ಶೆಟ್ಟಿ ಅವರು ಭೀಷ್ಮನ ಪಾತ್ರವನ್ನು ಸಮರ್ಥಿಸಿಕೊಂಡರು. ಮತ್ಸ್ಯಗಂಧಿನಿ ವಿವಾಹ, ತತ್ಪರಿಣಾಮವಾಗಿ ಗಾಂಗೇಯನ ಭೀಷ್ಮ ಪ್ರತಿಜ್ಞೆ, ಅಂಬೆ, ಅಂಬಿಕೆ, ಅಂಬಾಲಿಕೆಯರನ್ನು ಗೆದ್ದುಕೊಂಡೂ ತಾನು ಮದುವೆಯಾಗದಿರುವುದು, ಈ ಎಲ್ಲಾ ದ್ವಂದ್ವಗಳಿಗೆ ಭೀಷ್ಮನ ಬಾಯಿಂದ ಬಂದ ಮಾತು, 9ನೇ ದಿನದ ಆ ರಾತ್ರಿ, ಯುದ್ಧದಲ್ಲಿ ತನ್ನೆದುರು ಶಿಖಂಡಿಯನ್ನು ನಿಲ್ಲಿಸಿದರೆ ತಾನು ಶಸ್ತ್ರ ಸನ್ಯಾಸ ಮಾಡುತ್ತೇನೆ ಅಂತ ಪಾಂಡವರಿಗೆ ಹೇಳಿದ್ದು ತಾನೇ ಎಂದು ಒಪ್ಪಿಕೊಳ್ಳುವ ಭೀಷ್ಮ, ಕೊನೆಯಲ್ಲಿ ಮಾತು ಮುಗಿಸುವುದು “ಎಲ್ಲವೂ ಆ ಭಗವಂತನ ಇಚ್ಛೆ. ತನ್ನದೇನಿಲ್ಲ, ತೇನವಿನಾ ತೃಣಮಪಿ ನ ಚಲತಿ…” ಎಂಬುದರೊಂದಿಗೆ.
ಕುತಂತ್ರಕ್ಕೆ ಹೆಸರಾದ, ಕೆಡುಕನ್ನೇ ಮೈಗೂಡಿಸಿಕೊಂಡ ಶಕುನಿಯ ಕಳ್ಳ ನಡೆಯ ರಂಗ ಪ್ರವೇಶವೂ ಅಷ್ಟೇ ಪರಿಣಾಮಕಾರಿಯಾಗಿತ್ತು. ಪಾತ್ರ ನಿರ್ವಹಣೆ ಜಬ್ಬಾರ್ ಸಮೋ ಸಂಪಾಜೆ. ಬೌದ್ಧಿಕ ಬಲದಿಂದ ಆನೆಯನ್ನೇ ಮಗುಚಬಲ್ಲೆ, ಮೇರು ಪರ್ವತ ಉರುಳಿಸಬಲ್ಲೆ, ಶರಧಿಯನು ಬರಿದಾಗಿಸಬಲ್ಲೆ, ಆದರೆ ಈ ಶಕುನಿ ಯುದ್ಧಕ್ಕೆಂದಾದರೂ ದೊರೆಯುವೆನೇ? ಎಂದು ಶಕುನಿಯ ಹೇಡಿತನವನ್ನು, ಮಡುಗಟ್ಟಿದ್ದ ರೋಷವನ್ನು ಬಿಂಬಿಸಿದರು. ನನ್ನ ಧೀ ಬಲವನ್ನು ಯಾವುದೇ ಒಳ್ಳೆ ಕಾರ್ಯಕ್ಕೆ ಉಪಯೋಗಿಸಲಿಲ್ಲ, ಕುರುಡ ಧೃತರಾಷ್ಟ್ರನನ್ನು ಅದ್ಭುತ ಗಾಯಕಿಯಾಗಿದ್ದ ತನ್ನ ತಂಗಿ ಗಾಂಧಾರಿ ಮದುವೆಯಾಗಬೇಕಾದ ಅನಿವಾರ್ಯತೆ, ಅವನೇಕೆ ಅಂಗವೈಕಲ್ಯವುಳ್ಳ, ಕಣ್ಣಿಲ್ಲದ ಹೆಣ್ಣಿಗೆ ಜೀವನ ನೀಡಲಿಲ್ಲ? ಎಂದು ಪ್ರಶ್ನಿಸುತ್ತಾನೆ. ಚಕ್ರವರ್ತಿ ಮನೆತನದ ಸಂಬಂಧ ಯಾರು ಕಳೆದುಕೊಳ್ಳಲು ಇಚ್ಛಿಸುತ್ತಾರೆ ಎಂಬುದು ಗಾಂಧಾರಿಯನ್ನು ಮದುವೆಗೆ ಒಪ್ಪಿದ್ದಕ್ಕೆ ಶಕುನಿಯ ಸಮರ್ಥನೆ. ತನ್ನ ತಂಗಿಯ ಮಕ್ಕಳಿಗಾಗಿಯೇ ಎಲ್ಲ ಷಡ್ಯಂತ್ರ ಮಾಡಿದೆ, ಅವರಿಗೆ ಪಟ್ಟ ದೊರಕುವುದಿಲ್ಲವೆಂಬುದು ಖಚಿತವಾದಾಗ ಅದಕ್ಕೆ ಅಡ್ಡಿಯಾಗಿರುವ ಪಾಂಡವರ ಅವಸಾನಕ್ಕೆ ಮುಂದಾದೆ. ನನ್ನ ಸ್ಥಾನದಲ್ಲಿ ಯಾರೇ ಇದ್ದರೂ ಇದನ್ನು ಮಾಡುತ್ತಿದ್ದರು ಎಂಬ ಸಮರ್ಥನೆಯೊಂದಿಗೆ, ಪಾಪಿಗಳಿಗೆ ನರಕವಿದೆಯಂತೆ, ಆದರೆ ನಾನು ಮಾಡಿದ ಪಾಪಗಳಿಗೆ ಎಲ್ಲಿ ನರಕ ಸ್ಥಾಪನೆ ಮಾಡ್ತೀರಿ ಹೇಳಿ ಎನ್ನುತ್ತಾ ಪ್ರಶ್ನೆಯಲ್ಲೇ ಉತ್ತರ ನೀಡಿ ನಿರ್ಗಮಿಸುತ್ತಾನೆ.
ಬದುಕಿನ ಎಲ್ಲಾ ರೀತಿಯ ಕಷ್ಟಗಳು ಮತ್ತು ಸುಖಗಳನ್ನು ಅನುಭವಿಸಿದವಳು ನಾನು ಎನ್ನುತ್ತಾ, ತನ್ನ ವಾದ ಮಂಡಿಸಿದ ದ್ರೌಪದಿ, ಸಂಧಿಯೇ ಮೇಲು, ಸಂಗ್ರಾಮ ಬೇಡ ಎಂದು ಯುಧಿಷ್ಠಿರ ಹೇಳಿದಾಗ, ಭೀಮನನ್ನು ಬಡಿದೆಬ್ಬಿಸಿದ್ದೇನೆ, ದುಶ್ಶಾಸನ ಕರುಳಿನ ಹಾರ, ರಕ್ತದಲ್ಲೇ ಮುಡಿ ಕಟ್ಟಿ ಸೇಡು ತೀರಿಸಿಕೊಂಡ ತೃಪ್ತಿ ಎನಗಿದೆ, ಸಂತ್ರಸ್ತಳಾಗಿದ್ದರೂ ನೆಮ್ಮದಿಯ ಅನುಭವವಾಗಿದೆ ಎನ್ನುತ್ತಾ ಪಾಂಚಾಲಿಯ ಆತ್ಮತೃಪ್ತಿಯ ಅಹವಾಲು ಮಂಡಿಸಿದವರು ರವಿ ಅಲೆವೂರಾಯ.
ರುಕ್ಮನಿಗೂ ಕುರುಕ್ಷೇತ್ರಕ್ಕೂ ಏನು ಸಂಬಂಧ ಎಂಬ ಶಂಕೆ ಮೂಡಿಸುವಂತೆ ತನ್ನ ಅಹವಾಲು ಮಂಡಿಸಲು ಬಂದ ರುಕ್ಮನ ಪಾತ್ರದಲ್ಲಿ ಹಾಸ್ಯ ರಸ ತುಂಬಿ ನಿಭಾಯಿದವರು ಪೆರುವಾಯಿ ನಾರಾಯಣ ಶೆಟ್ಟಿ. ತಂಗಿ ರುಕ್ಮಿಣಿಯನ್ನು ಶಿಶುಪಾಲನಿಗೆ ಕೊಡಬೇಕೆಂದಿದ್ದಾಗ, ಆಕೆಯನ್ನು ಅಪರಿಸಿ ವಿವಾಹವಾದ ಕೃಷ್ಣ, ಆತ ತನ್ನ ತಲೆ ಬೋಳಿಸಿದ ಅವಮಾನ, ಬಳಿಕ ಮಿತ್ರನಾಗಿದ್ದ ಬಲರಾಮನಿಂದಲೇ ದ್ಯೂತದಲ್ಲಿ ವಂಚನೆ, ಮೋಸದಿಂದ ಹತ್ಯೆ ಮುಂತಾದ ಘಟನಾವಳಿಯನ್ನು ಬಿಚ್ಚಿಟ್ಟರವರು. ನಿರೂಪಕನೊಂದಿಗಿನ ಸಂವಾದದಲ್ಲಿ ಇಂದಿನ ರಾಜಕಾರಣಿಗಳ ಸ್ಥಿತಿಯನ್ನೂ ಬಿಂಬಿಸಿದರು. ಒಂದಕ್ಷೋಹಿಣಿ ಸೇನೆಯಿದ್ದರೂ ಕೌರವ-ಪಾಂಡವರ ಪಕ್ಷಗಳೆರಡರಿಂದಲೂ ತಿರಸ್ಕೃತನಾಗಿ “ಪಕ್ಷೇತರ”ನಾಗಿದ್ದು, ಸಂಬಂಧವೇ ಇಲ್ಲದಿದ್ದರೂ ಆಯೋಗದೆದುರು ಬಂದು, ಏನಾದರೂ ಮಾಡಿ ಹೆಸರು ಬರಬೇಕು ಎಂದುಕೊಳ್ಳುವವರ, ಸತ್ತ ಮೇಲೂ ಬುದ್ಧಿ ಬಿಡದವರ ಪ್ರತೀಕವಾಗಿ ರಂಜಿಸಿದರು.
ಮತ್ತೆ ಕಟಕಟೆಯೇರಿದ್ದು ಕೌರವ. ಕೊಳ್ತಿಗೆ ನಾರಾಯಣ ಗೌಡರು ಕೌರವನ ಛಲ, ತಾನು ತಪ್ಪು ಮಾಡಿಯೇ ಇಲ್ಲ, ಭೀಷ್ಮ-ದ್ರೋಣ-ಕರ್ಣರನ್ನು ಕಟ್ಟಿಕೊಂಡು ಮೋಸವಾಗಿದೆ, ತಾನೇನು ಮಾಡಿದ್ದರೂ ಕುರುವಂಶಕ್ಕಾಗಿ, ತಮ್ಮ ವಂಶದ ಉದ್ಧಾರಕ್ಕಾಗಿ ಎಂದು ಸಮರ್ಥಿಸಿಕೊಳ್ಳುತ್ತಾ, ತಮ್ಮ ಎಂದಿನ ಅತಿ ಪ್ರಿಯವಾದ ಪ್ರಸಕ್ತ ರಾಜಕಾರಣದ ಸ್ಥಿತಿಯನ್ನೂ ಮುಂದಿಟ್ಟು, ಛಲದಂಕ ಕೌರವ ತಾನು ಮಾಡಿದ್ದೇ ಸರಿ ಎಂಬ ಭಾವನೆಯಲ್ಲೇ ಮುಳುಗಿದ್ದುದನ್ನು ಅಷ್ಟೇ ಗತ್ತಿನಿಂದ ನಿರ್ವಹಿಸಿದರು.
ಯುವಕರ ಬಿಸಿ ರಕ್ತದ ಧಾವಂತದ ಪ್ರತೀಕವಾಗಿ ಯುದ್ಧೋತ್ತರ ಕಾಲದಲ್ಲಿ ಉಪಪಾಂಡವರನ್ನು ಆ ರಕ್ತ ರಾತ್ರಿಯಲ್ಲಿ ನಿರ್ನಾಮ ಮಾಡಿದ ಅಶ್ವತ್ಥಾಮನಾಗಿ ಬಿರುಸು ಕುಣಿತದಿಂದ ರಂಗದಲ್ಲಿ ಪಾತ್ರವನ್ನು ಬಿಂಬಿಸಿದವರು ದಿನಕರ ಪಚ್ಚನಾಡಿ.
ಶ್ರೀಕೃಷ್ಣನು ಆಯೋಗಕ್ಕೆ ಅತೀತನಾಗಿದ್ದುದರಿಂದ ಅವನನ್ನು ಕಟಕಟೆಯೆದುರು ತರುವ ಬದಲು, ಅವನ ಪ್ರತಿನಿಧಿಯಾಗಿ ಶೌನಕ ಮುನಿಗಳು ತಮ್ಮ ವಾದ ಮಂಡಿಸಿದರು. ಕುಂಬ್ಳೆ ಸುಂದರ ರಾವ್ ಅವರು ಪಾತ್ರೋಚಿತ ಮಾತುಗಳೊಂದಿಗೆ, ವಸ್ತ್ರಾಪಹರಣ ವೇಳೆ ದ್ರೌಪದಿಗೆ ಅಕ್ಷಯಾಂಬರ ಕರುಣಿಸಿದ ಪಾಂಡವಪ್ರಿಯ ಶ್ರೀಕೃಷ್ಣ, ಕಪಟನಾಟಕ ಸೂತ್ರದಾರಿಯಾಗಿದ್ದೂ ದ್ಯೂತದಲ್ಲಿ ಧರ್ಮಜನಿಗೇಕೆ ಸಹಕರಿಸಿಲ್ಲ ಎಂಬ ಪ್ರಶ್ನೆಗೆ ಅವರ ಉತ್ತರ-“ಹಾಗಿದ್ದಿದ್ದರೆ ಜೂಜಾಡುವವರೆಲ್ಲಾ ಶ್ರೀಕೃಷ್ಣನ ಮೊರೆ ಹೋಗುತ್ತಿದ್ದರು” ಎಂದಾಗ ಸಭೆಯಲ್ಲಿ ಚಪ್ಪಾಳೆ. ಇಡೀ ಕುರುಕ್ಷೇತ್ರವು ಪಾಂಡವ ರಕ್ಷಣೆಯ ಕಥೆ-ಶ್ರೀಕೃಷ್ಣ ಕಥೆ, ಇದರ ಪ್ರತಿಯೊಂದು ಹಂತದಲ್ಲೂ ಯುಗಾವತಾರಿಯ ಸೂತ್ರವಿತ್ತು, ಪಾತ್ರವಿತ್ತು ಎನ್ನುತ್ತಾ ತಮ್ಮ ವಾದ ಮಂಡಿಸಿದರು.
ಇನ್ನು ನ್ಯಾಯ ತೀರ್ಮಾನದ ಹಂತ. ನ್ಯಾಯಮೂರ್ತಿಯ ಪಾತ್ರ ವಹಿಸಿದ ಪ್ರಭಾಕರ ಜೋಷಿಯವರನ್ನು ವೇದಿಕೆಗೆ ಯಕ್ಷಗಾನ ಶೈಲಿಯಲ್ಲೇ ಕರೆತಂದು ಕುಳ್ಳಿರಿಸಲಾಯಿತು. ಇದು ತೀರ್ಮಾನವಲ್ಲ, ಅಭಿಮತ ಮಾತ್ರವೇ ಎಂಬ ಮಾತಿನೊಂದಿಗೆ, ದೈವೇಚ್ಛೆಯ ಬಗ್ಗೆ ತೀರ್ಪು ಕೊಡಲು ನಾವು ಯಾರು ಎಂಬುದನ್ನು ಸೂಚ್ಯವಾಗಿ ತಿಳಿಸಿದರು ಜೋಷಿ. “ಧರ್ಮ ಕ್ಷೇತ್ರೇ ಕುರುಕ್ಷೇತ್ರೇ” ಎಂದಿದ್ದದ್ದು “ಕ್ಷೇತ್ರೇ ಕ್ಷೇತ್ರೇ ಧರ್ಮಂ ಕುರು” ಎಂದಾಗಬೇಕು, ಕುರುಕ್ಷೇತ್ರದ ಬಲು ದೊಡ್ಡ ಲಾಭವೆಂದರೆ ಭಗವದ್ಗೀತೆ ಎಂದು ನೆನಪಿಸಿದರು. ನಮ್ಮ ಹೃದಯದಲ್ಲಿ ಸದಾ ಕುರುಕ್ಷೇತ್ರವಾಗುತ್ತಿರುತ್ತದೆ, ನೂರು ದುರ್ಗುಣಗಳು ಐದು ಸದ್ಗುಣಗಳ ಸಂಘರ್ಷ ನಡೆಯುತ್ತಲೇ ಇರುತ್ತದೆ. ಸುಯೋಧನ-ಶ್ರೀಕೃಷ್ಣ ನಡುವಣ ಸಂಘರ್ಷವು ಧರ್ಮಾಧರ್ಮ ನಡುವಣ ತಿಕ್ಕಾಟ ಎಂದು ಅಭಿಮತ ವ್ಯಕ್ತಪಡಿಸಿದರು. ಅವರನ್ನೂ ಪ್ರಸಕ್ತ ರಾಜಕೀಯ ಸನ್ನಿವೇಶ ಕಾಡದಿರಲಿಲ್ಲ. ತಪ್ಪು ಮಾಡಿಯೂ, ಏನೂ ಮಾಡಿಲ್ಲ, ಮಾಡಿದ್ದೇ ಸರಿ ಎಂಬ ಈಗಿನ ರಾಜಕಾರಣಿಗಳಿಗೆ ಸುಯೋಧನ, ಧೃತರಾಷ್ಟ್ರರೇ ಮಾದರಿ ಎಂದರವರು.
ದುಶ್ಶಾಸನ ಕರುಳು ಬಗೆದು ಕೊಲೆ ಮಾಡಿದ ಬಹಿರಂಗ ಕ್ರೌರ್ಯ ಸರಿ, ಯಾಕೆಂದರೆ ತುಂಬಿದ ಸಭೆಯಲ್ಲಿ ಮಹಿಳೆಯ ಮಾನಭಂಗಕ್ಕೆ ಯತ್ನಿಸಿದವರಿಗೆ ಇಂಥದ್ದೇ ಶಿಕ್ಷೆ ಎನ್ನುತ್ತಾ ಡಾ.ಜೋಷಿ, ಸುಯೋಧನ ಎಡವಿದ್ದು ತಮ್ಮ ಸೇನಾನಿಗಳ ನೇಮಕಾತಿಗಳಲ್ಲೇ ಎಂದು ಅಭಿಪ್ರಾಯಪಟ್ಟರು. ಯುದ್ಧೋತ್ತರ ಕಾಲದಲ್ಲಿ ಅಶ್ವತ್ಥಾಮ ಮಾಡಿದ ರಕ್ತ ರಾತ್ರಿಯೂ ಅಕ್ಷಮ್ಯ ಎನ್ನುತ್ತಾ, ರಾಜಕೀಯದಲ್ಲಿ ಏನು ಮಾಡಿದರೂ ಸರಿ ಎಂಬವರಿಗೆ ಯಾವುದೇ ರೀತಿಯ ಶಿಕ್ಷೆ ಕೊಡಲಡ್ಡಿಯಿಲ್ಲ ಎಂದು ಮಾತು ಮುಗಿಸಿದರು.
ನಡುನಡುವೆ ದ್ರೌಪದಿ ವಸ್ತ್ರಾಪಹರಣ, ಗದಾಯುದ್ಧ, ರಕ್ತರಾತ್ರಿ ಪ್ರಸಂಗದ ತುಣುಕುಗಳು, ತಾಳಮದ್ದಳೆಯಂತೆ ಮಾತಿಗೆ ಹೆಚ್ಚು ಒತ್ತು ನೀಡಿದ ಈ ಯಕ್ಷ ರಂಗಪ್ರಯೋಗಕ್ಕೆ ರಂಜನೆಯ ಲೇಪ ನೀಡಿತು. ಭೀಮ-ದುಶ್ಶಾಸನರಾಗಿ ಗೇರುಕಟ್ಟೆ ಗಂಗಯ್ಯ ಶೆಟ್ಟಿ ಮತ್ತು ಸದಾಶಿವ ಶೆಟ್ಟಿಗಾರ್ ರಂಗದಲ್ಲಿ ವಿಜೃಂಭಿಸಿದರು. ಸಂಸ್ಕಾರ ಭಾರತಿ ಸಂಯೋಜನೆಯಲ್ಲಿ, ಕದ್ರಿ ಹವ್ಯಾಸಿ ಬಳಗದ ಸಹಕಾರದಲ್ಲಿ, ಕದ್ರಿ ನವನೀತ ಶೆಟ್ಟಿ ಪರಿಕಲ್ಪನೆಯಲ್ಲಿ, ನಿರ್ದೇಶನದಲ್ಲಿ, ನಿರೂಪಣೆಯಲ್ಲಿ ಮೂಡಿ ಬಂದ ಈ ವಿಶಿಷ್ಟ ಪ್ರಯೋಗದಲ್ಲಿ ಹಿಮ್ಮೇಳದಲ್ಲಿ ಸಹಕರಿಸಿದವರು ಭಾಗವತರಾಗಿ ಪೊಳಲಿ ದಿವಾಕರ್, ಮೃದಂಗದಲ್ಲಿ ಕೋಳ್ಯೂರು ಭಾಸ್ಕರ, ಚೆಂಡೆಯಲ್ಲಿ ಲಕ್ಷ್ಮೀಶ ಅಮ್ಮಣ್ಣಾಯ ಸಹಕರಿಸಿದರು.
ನಿಜಕ್ಕೂ ಸೊಗಸಾದ ಪ್ರಯೋಗವಿದು. ಯಕ್ಷಗಾನ ಪ್ರಚಲಿತ ವಿದ್ಯಮಾನಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ, ಸಿನೆಮಾ ಥಳುಕನ್ನು ಕಲೆಗೆ ತುರುಕುವ ಬದಲು ಇಂಥ ಸೃಜನಶೀಲ ಪ್ರಯೋಗಗಳು ಎಂದಿಗೂ ಸ್ವಾಗತಾರ್ಹ.
ಧನ್ಯವಾದಗಳು.
ಈ ಸಿನಿಮಾ, ಧಾರಾವಾಹಿ ಮುಂತಾದವುಗಳ ಮಿಳಿತದೊಂದಿಗಿರುವ ಮತ್ತು ಸಿನಿಮಾ ಪದಗಳನ್ನು, ಕೋಲಾಟ ಗೀತೆಗಳನ್ನು, ಗೀಗೀ ಪದಗಳನ್ನು ಹಾಡಿದರೆ ಅದೇ ಭಾಗವತಿಕೆ ಅಂತ ತಿಳಿದುಕೊಳ್ಳುವವರ ಮಧ್ಯೆ, ಇಂಥ ಪ್ರಯೋಗಗಳು ಮನಸ್ಸಿಗೆ ಮುದ ಕೊಡುತ್ತವೆ. ಸೃಜನಶೀಲತೆಗೆ ನಾವು ಬೇರೊಬ್ಬರಿಂದ ನಕಲಿ ಮಾಡಲೇಬೇಕೇ? ಯಕ್ಷಗಾನವನ್ನು ಕೊಲ್ಲುವುದೇತಕ್ಕೆ ಎಂಬ ಬಗ್ಗೆ ಸಿನಿಮಾ-ಯಕ್ಷಗಾನ ನಿರ್ಮಾತೃಗಳು ಉತ್ತರಿಸಬೇಕು.
ಧನ್ಯವಾದ ಶ್ರೀ ಪ್ರಿಯೆ ಅವರಿಗೆ.