ಮಾಹಿತಿ@ತಂತ್ರಜ್ಞಾನ-3- ‘ಮಾರ್ಗ’ದರ್ಶಕ ಈ ಜಿಪಿಎಸ್

0
209

ವಿಜಯ ಕರ್ನಾಟಕ ಅಂಕಣ ಸೆ.10-2012
ಕಾರುಗಳೊಳಗೆ ಮುಂಭಾಗ ಪುಟ್ಟ ಸ್ಕ್ರೀನ್‌ನಲ್ಲಿ ವೀಡಿಯೋ ಗೇಮ್‌ನ ಕಾರ್ ರೇಸ್‌ನಂತಹಾ ವ್ಯವಸ್ಥೆಯೊಂದನ್ನು ನೀವು ನೋಡಿರಬಹುದು. ಕೆಲವರಿಗೆ ಇದೇನಿರಬಹುದೆಂಬ ಅಚ್ಚರಿ. ಡಿವಿಡಿ, ಟಿವಿ ಎಲ್ಲ ಸಾಮಾನ್ಯ. ಆದರೆ ಇದು ಅದಲ್ಲ. ಇದೊಂದು ದಾರಿ ತೋರಿಸುವ ಗುರುವಿನಂತಿರುವ ಒಂದು ಗ್ಯಾಜೆಟ್ GPS/A-GPS ನ್ಯಾವಿಗೇಶನ್ ಸಿಸ್ಟಂ.

ನೀವೆಲ್ಲೇ ಕಳೆದು ಹೋದರೂ ನಿಮ್ಮನ್ನು ಹುಡುಕಿಕೊಡುವ, ಹೋಗಬೇಕಾದಲ್ಲಿಗೆ ದಾರಿ ತೋರಿಸುವ ತಂತ್ರಜ್ಞಾನವೇ GPS ಅಥವಾ ಗ್ಲೋಬಲ್ ಪೊಸಿಷನಿಂಗ್ ಸಿಸ್ಟಂ. ಮೊಬೈಲ್ ಫೋನ್‌ಗಳನ್ನು ಖರೀದಿಸುವಾಗ GPRS ಮತ್ತು GPS ಬಗ್ಗೆ ಕೆಲವು ಓದುಗರಿಗೆ ಇನ್ನೂ ಗೊಂದಲವಿದೆ. GPS ಎಂಬುದು ಸ್ಥಳದ ನಕಾಶೆಯೊಂದಿಗೆ ರಸ್ತೆಗಳನ್ನು ತೋರಿಸುವ ನಕ್ಷೆಗೆ ಸಂಬಂಧಿಸಿದ್ದು, GPRS ಎಂಬುದು ಇಂಟರ್ನೆಟ್ ಸಂಪರ್ಕಕ್ಕೆ ಸಂಬಂಧಿಸಿದ್ದು ಅಂತ ಇನ್ನು ಯಾವುದೇ ಗೊಂದಲವಿಲ್ಲದೆ ನೆನಪಿಟ್ಟುಕೊಳ್ಳಿ.

ಈಗ ಅಂಗೈಯೊಳಗೇ ಜಗತ್ತು ತೋರಿಸುವ ಸ್ಮಾರ್ಟ್‌ಫೋನ್‌ಗಳಲ್ಲಿ ಇವು ಮ್ಯಾಪ್ ಸಹಿತವಾಗಿ In-built ಆಗಿಯೇ ಬರುತ್ತಿವೆ. ಈ ಪರಿಯ ನ್ಯಾವಿಗೇಶನ್ ಸಿಸ್ಟಂಗಳಲ್ಲಿ ಎರಡು ವಿಧ. GPS ಮತ್ತು A-GPS. GPS ಸಾಮಾನ್ಯವಾಗಿ ಉಚಿತವಾಗಿರುತ್ತದೆ ಮತ್ತು ಸದಾಕಾಲ ಉಪಗ್ರಹ ಸಂಪರ್ಕದಿಂದ ಸಕ್ರಿಯವಿರುತ್ತದೆ. ಆದರೆ A-GPSಗೆ ಮೊಬೈಲ್ ನೆಟ್‌ವರ್ಕ್ ಮೂಲಕ ಕೆಲಸ ಮಾಡುವುದರಿಂದ ಇಂಟರ್ನೆಟ್ ಶುಲ್ಕ ಆಗುತ್ತದೆ. ಕೆಲವು ಫೋನ್‌ಗಳಲ್ಲಿ A-GPS ಇದ್ದರೂ, GPS ಆಗಿಯೂ (ಆಫ್‌ಲೈನ್) ಕೆಲಸ ಮಾಡುವ ವ್ಯವಸ್ಥೆಗಳಿವೆ.

ಎರಡರ ಕಾರ್ಯ ಒಂದೇ ರೀತಿಯಾಗಿದ್ದರೂ, GPS ಉಪಗ್ರಹದ ಸಹಾಯವನ್ನು ಪಡೆದರೆ, A-GPS ಇಂಟರ್ನೆಟ್ ಸಂಪರ್ಕದೊಂದಿಗೆ, ಧ್ವನಿಯ ಮೂಲಕವೂ (ವಾಯ್ಸ್ ಗೈಡೆನ್ಸ್) ‘ಮಾರ್ಗ’ದರ್ಶನ ಮಾಡುತ್ತದೆ.

ಹೇಗೆ ಕೆಲಸ ಮಾಡುತ್ತದೆ?
GPS ಆನ್ ಮಾಡಿದಾಕ್ಷಣ ಉಪಗ್ರಹಕ್ಕೆ ಸಂಕೇತ ರವಾನೆಯಾಗಿ ನೀವಿರುವ ಸ್ಥಳವನ್ನು ನಕ್ಷೆ ಗುರುತಿಸುತ್ತದೆ. ಅಲ್ಲಿಂದ, ನಿಮ್ಮ ಗಮ್ಯ ತಾಣವನ್ನು ಟೈಪ್ ಮಾಡಿದರೆ, ಅಲ್ಲಿಗೆ ದಾರಿಯನ್ನು ನಕ್ಷೆಯ ಮೂಲಕ ತೋರಿಸುತ್ತದೆ.

ಗಮ್ಯಸ್ಥಾನ ಹೊಂದಿಸಿ ಕಾರು/ಬೈಕ್‌ನಲ್ಲಿ ಹೊರಟರೆ, ಪ್ರತಿಯೊಂದು ತಿರುವಿನಲ್ಲೂ, ಕೂಡುರಸ್ತೆಯಲ್ಲೂ GPS ಮಾರ್ಗದರ್ಶನ ಮಾಡುತ್ತದೆ. “200 ಮೀಟರ್ ಮುಂದಕ್ಕೆ ಹೋದ ಬಳಿಕ ಬಲಕ್ಕೆ ತಿರುಗಿ…. ಇಲ್ಲೇ ಬಲಕ್ಕೆ ಹೋಗಿ” ಅಂತೆಲ್ಲಾ ಅದು ಹೇಳುತ್ತಾ ನಿಮ್ಮನ್ನು ಮುನ್ನಡೆಸುತ್ತದೆ.

ವಾಹನಗಳಿಗಾಗಿ
GPS ಸೇವೆಯನ್ನು ಪ್ರತ್ಯೇಕವಾಗಿಯೇ ನೀಡುವ ಹಲವಾರು ಸಾಧನಗಳು ಇವೆ. ಅವುಗಳಲ್ಲಿ Map My India, MMI Navigator, Sygic, Garmin, Satguide ಮುಂತಾದವು ಪ್ರಮುಖವಾದವು. ಬೆಲೆ ಅಂದಾಜು 6 ಸಾವಿರದಿಂದ 60 ಸಾವಿರದವರೆಗೂ ಇದೆ.

ಸಮಸ್ಯೆಯಾಗುವುದು ಯಾವಾಗ
ನಗರಗಳಲ್ಲಿ ಬೃಹತ್ ಕಾಮಗಾರಿಗಳು ನಡೆಯುತ್ತಿರುವಾಗ, ಬೇರೇನಾದರೂ ಕಾರಣಗಳಿಗೆ ದಿಢೀರನೇ ಪೊಲೀಸರು One-way ಅಂತ ಬೋರ್ಡ್ ಹಾಕಿದಾಗಲಷ್ಟೇ ನಿಮ್ಮ ಫೋನ್‌ನ ಮ್ಯಾಪ್ ಅದಕ್ಕೆ ತಕ್ಕುದಾಗಿ ಅಪ್‌ಡೇಟ್ ಆಗಿಲ್ಲದ ಕಾರಣ ನಿಮಗೆ ದಾರಿ ತಪ್ಪುವ ಸಾಧ್ಯತೆಗಳಿರುತ್ತವೆ.

ಹೊಸ ವ್ಯವಸ್ಥೆ
ಅಪಘಾತ ತಡೆಯಲು ವೇಗಮಿತಿಗಾಗಿ ಕೇಂದ್ರ ಸರ್ಕಾರ ಎಲ್ಲ ವಾಹನಗಳಿಗೂ ವಿದೇಶಗಳಲ್ಲಿರುವಂತೆ GPS ನ್ಯಾವಿಗೇಶನ್ ಸಿಸ್ಟಂ ಕಡ್ಡಾಯಗೊಳಿಸಲು ನಿರ್ಧರಿಸಿದೆ ಎಂಬುದು ತಾಜಾ ಮಾಹಿತಿ. ನಿಗದಿಪಡಿಸಿದ ವೇಗ ಮೀರಿದರೆ, ಉಪಗ್ರಹದ ಮೂಲಕ ಸಿಗ್ನಲ್ ರವಾನೆಯಾಗಿ, ಒಂದೋ ಬೀಪ್ ಶಬ್ದದ ಮೂಲಕ ಚಾಲಕನನ್ನು ಎಚ್ಚರಿಸುವ ಅಥವಾ ವೇಗ ಹೆಚ್ಚಾದಾಗ ಸ್ವಯಂಚಾಲಿತವಾಗಿ ಇಂಧನ ಪೂರೈಕೆ ಕಡಿತವಾಗುವ ತಂತ್ರಜ್ಞಾನದ ಆಲೋಚನೆ ನಡೆಯುತ್ತಿದೆ.

LEAVE A REPLY

Please enter your comment!
Please enter your name here