ಜರ್ಮನಿಯಲ್ಲಿ ಯಕ್ಷಗಾನದ ಕಂಪು: ಯಕ್ಷಮಿತ್ರರು, ಜರ್ಮನಿ

0
158

Yakshagana in Germany | ಕನ್ನಡದ ಮಣ್ಣಿನ ಹೆಮ್ಮೆಯ ಕಲೆ ಯಕ್ಷಗಾನದ ಕಂಪು ಸಪ್ತಸಾಗರದಾಚೆ ಹರಡಿ ದಶಕಗಳೇ ಕಳೆದವು. ಅಮೆರಿಕ, ಇಂಗ್ಲೆಂಡ್, ಆಸ್ಟ್ರೇಲಿಯಾ ಹಾಗೂ ಗಲ್ಫ್ ರಾಷ್ಟ್ರಗಳಲ್ಲಿ ಯಕ್ಷಗಾನವನ್ನು ಪಸರಿಸಿ ಬಂದ ಹೆಮ್ಮೆಯ ಕಲಾವಿದರು ನಮ್ಮ ನಡುವಿದ್ದಾರೆ. ಯೂರೋಪ್‌ನ ಮತ್ತೊಂದು ಪ್ರಮುಖ ದೇಶವಾದ ಜರ್ಮನಿಯಲ್ಲಿದ್ದುಕೊಂಡು ದೇಶದ ವಿವಿಧ ರಾಜ್ಯಗಳಲ್ಲಿ ಯಕ್ಷಗಾನವನ್ನು ಯಕ್ಷಗಾನೀಯವಾಗಿಯೇ ಉಳಿಸಿಕೊಳ್ಳಲು ಸದ್ದಿಲ್ಲದೆ ಶ್ರಮಿಸುತ್ತಿದೆ ‘ಯಕ್ಷಮಿತ್ರರು ಜರ್ಮನಿ’ ಹೆಸರಿನ ಪುಟ್ಟ ತಂಡ.

ಮ್ಯೂನಿಕ್‌ನ ಸಿರಿಗನ್ನಡ ಸಂಘದ ಜೊತೆ ‘ಯಕ್ಷಮಿತ್ರರು ಜರ್ಮನಿ’ ಸಹಯೋಗದಲ್ಲಿ ಜೂ.25ರ ಭಾನುವಾರ ಅಲ್ಲಿ ‘ಲವ-ಕುಶ’ ಎಂಬ ಆಖ್ಯಾನವೊಂದು ಪ್ರದರ್ಶನವಾಗುತ್ತಿದೆ. ಇದರ ವಿಶೇಷವೆಂದರೆ, ಕನ್ನಡನಾಡಿನ ಯಕ್ಷಗಾನ ಕಲಾವಿದರ ಮಕ್ಕಳು, ಯಕ್ಷಗಾನದ ಅಭಿಮಾನಿಗಳು ಸೇರಿಕೊಂಡು ಜರ್ಮನಿಯಲ್ಲಿ ಈ ಯಕ್ಷಗಾನ ಪ್ರದರ್ಶನ ನೀಡುತ್ತಿದ್ದಾರೆ. ಕಳೆದ ಏಳು ವರ್ಷಗಳಿಂದ ಯಕ್ಷಮಿತ್ರರು ತಂಡವನ್ನು ಕಟ್ಟಿಕೊಂಡು ಮುನ್ನಡೆಸುತ್ತಿರುವವರು ಮಾಸ್ತಿಕಟ್ಟೆ ಮೂಲದ ಅಜಿತ್ ಪ್ರಭು ತಲ್ಲೂರು, ಅಪೂರ್ವ ಬೆಳೆಯೂರು ಹಾಗೂ ನರೇಂದ್ರ ಶೆಣೈ ಎಂಬ ಟೆಕ್ಕಿಗಳು. ಇವರೆಲ್ಲರಿಗೂ ಯಕ್ಷಗಾನವು ರಕ್ತದಲ್ಲೇ ಇದೆ. ಅಜಿತ್ ಪ್ರಭು ಅವರ ದೊಡ್ಡಪ್ಪ ಸುರೇಂದ್ರ ಪ್ರಭು ಹುಲಿಕಲ್‌ನಲ್ಲಿ ಮೇಳ ಕಟ್ಟಿ ಹಲವಾರು ಕಲಾವಿದರನ್ನು ಬೆಳೆಸಿದವರು. ಇದೇ ಮೇಳದಲ್ಲಿ ಅಜಿತ್ ಸಣ್ಣ ಬಾಲಕನಿರುವಾಗಲೇ ಗೆಜ್ಜೆ ಕಟ್ಟಿ ಹೆಜ್ಜೆ ಹಾಕಲು ಕಲಿತದ್ದು. ಅಪೂರ್ವ ಬೆಳೆಯೂರು ಅವರು ಹಿರಿಯ ಯಕ್ಷಗಾನ ಕಲಾವಿದ ಕೃಷ್ಣಮೂರ್ತಿ ಬೆಳೆಯೂರು ಅವರ ಪುತ್ರ. ಇವರಿಬ್ಬರೂ ಮ್ಯೂನಿಕ್‌ನಲ್ಲಿ ಡಾಯ್ಷೆ (Deutsche) ಬ್ಯಾಂಕ್‌ನಲ್ಲಿ ಉದ್ಯೋಗಿಗಳು. ಇವರಿಬ್ಬರಿಗೆ ಬೆಂಬಲವಾದವರು ನರೇಂದ್ರ ಶೆಣೈ. ಹೆಸರಾಂತ ಯಕ್ಷಗಾನ ಕಲಾವಿದ ಆರ್ಗೋಡು ಮೋಹನದಾಸ ಶೆಣೈಯವರ ಅಣ್ಣನ ಮಗ.

ಹೀಗೆ ಯಕ್ಷಗಾನವನ್ನೇ ಉಸಿರಾಡುತ್ತಿರುವ ಈ ತ್ರಿವಳಿಗಳು ದೇಶ ಬಿಟ್ಟರೂ ತಮ್ಮ ಕಲೆಯ ಮೇಲಿನ ‘ಹುಚ್ಚನ್ನು’ ಬಿಡಲಾಗದೆ, ಅಲ್ಲೇ ತಂಡ ಕಟ್ಟಿಕೊಂಡರು. ಕಳೆದ ಏಳು ವರ್ಷಗಳಲ್ಲಿ ಯಕ್ಷಗಾನದ ವೇಷಭೂಷಣಗಳನ್ನೂ ತಮಗಾಗಿ, ಕಲೆಗಾಗಿ ಸಿದ್ಧಪಡಿಸಿಟ್ಟುಕೊಂಡರು. ಬಡಗುತಿಟ್ಟು ಯಕ್ಷಗಾನದ ಆರೇಳು ವೇಷಗಳ ಸೆಟ್ ಇವರಲ್ಲಿದೆ. ಕನಿಷ್ಠ ಎರಡು ತಿಂಗಳಿಗೊಂದಾದರೂ ಕಾರ್ಯಕ್ರಮ ನೀಡುತ್ತಿದ್ದಾರೆ. ಇದಕ್ಕೆ ಕಾರಣವೆಂದರೆ, ಜರ್ಮನಿಯಲ್ಲೂ ಕನ್ನಡಿಗರ ಸಂಖ್ಯೆ ಹೆಚ್ಚುತ್ತಿದೆ. ವಿದೇಶದಲ್ಲಿರುವಾಗ ತವರೂರ ಕಲೆಯ ಮೇಲಿನ ತುಡಿತವೂ ಕೂಡ ಹೆಚ್ಚು. ಇವರ ಯಕ್ಷಗಾನ ಪ್ರೇಮಕ್ಕೆ ದೊಡ್ಡ ಸಮಸ್ಯೆಯಾಗಿರುವುದೆಂದರೆ, ಹಿಮ್ಮೇಳ. ಅಲ್ಲೇ ನೆಲೆಸಿರುವ ಹಿಮ್ಮೇಳ ಕಲಾವಿದರು, ಅಭ್ಯಾಸಿಗಳು, ಹವ್ಯಾಸಿಗಳು ಸಿಕ್ಕರೆ ಪರಿಪೂರ್ಣ ಮೇಳವೊಂದನ್ನು ಕಟ್ಟುವ ಇರಾದೆಯಿದೆ ಈ ಯಕ್ಷಮಿತ್ರರು ತಂಡಕ್ಕೆ.

ಕನ್ನಡ ರಾಜ್ಯೋತ್ಸವ ನಡೆಯುವ ನವೆಂಬರ್-ಡಿಸೆಂಬರ್ ತಿಂಗಳಲ್ಲಿ ಜರ್ಮನಿಯಲ್ಲಿ ಈ ತಂಡವು ಯಕ್ಷಗಾನವನ್ನು ಪ್ರಸಾರ ಮಾಡುವುದರ ಜೊತೆಗೆ ಕನ್ನಡ ಕೈಂಕರ್ಯವನ್ನೂ ಸದ್ದಿಲ್ಲದಂತೆ ಮಾಡುತ್ತಿದೆ. ಅಜಿತ್ ಅವರೇ ಹೇಳುವಂತೆ, ಇವೆಲ್ಲ ದುಡ್ಡಿಗಾಗಿ ಅಲ್ಲ, ‘ನಮ್ಮ ಒಳಗಿರುವ ಯಕ್ಷಗಾನದ ತುಡಿತಕ್ಕಾಗಿ’. ಯಕ್ಷಗಾನ ವೇಷಗಳು ಎಂದರೆ ಮೆರವಣಿಗೆಯಲ್ಲಿ ಸಾಗುವ, ಅಥವಾ ದೊಡ್ಡ ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಸ್ವಾಗತಿಸುವುದಕ್ಕಾಗಿ ಇರುವ ಅಲಂಕಾರ ಬೊಂಬೆಗಳು ಎಂಬ ಅಭಿಪ್ರಾಯ ಒಂದು ಕಡೆಯಿಂದ ಹರಡುತ್ತಿದೆ. ಇದು ಯಕ್ಷಗಾನಕ್ಕೆ ಆಗುವ ಅಪಚಾರ. ಆದರೆ, ಯಕ್ಷಗಾನವೆಂದರೆ ರಂಗಸ್ಥಳದಲ್ಲಿ ಪ್ರದರ್ಶನವಾಗಬೇಕಿರುವ ಪವಿತ್ರ ಕಲೆ. ಇದರ ಪಾವಿತ್ರ್ಯಕ್ಕೆ ಧಕ್ಕೆ ಆಗಬಾರದು ಎಂದು ಖಡಾಖಂಡಿತವಾಗಿ ನಂಬಿದ್ದಾರೆ ಅಜಿತ್. ಹೀಗಾಗಿಯೇ, ಮೆರವಣಿಗೆಗೆ ಅಥವಾ ಅತಿಥಿಗಳ ಸ್ವಾಗತಕ್ಕೆ ರಾಯಭಾರ ಕಚೇರಿಯಿಂದಲೇ ಆಹ್ವಾನ ಬಂದಿದ್ದರೂ ನಯವಾಗಿಯೇ ನಿರಾಕರಿಸಿದ್ದೇವೆ ಎನ್ನುತ್ತಾರೆ ಅಜಿತ್. ಇತ್ತೀಚೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದ ಸಂದರ್ಭದಲ್ಲೂ ಹೀಗೇ ಆಗಿತ್ತು. ಈ ರೀತಿ ಅಲಂಕಾರಕ್ಕಾಗಿ ಯಕ್ಷಗಾನ ಕಲೆಯನ್ನು ಬಳಸುವುದು ಅವರಿಗಿಷ್ಟವಿರಲಿಲ್ಲ. ಹೀಗಾಗಿ ನಯವಾಗಿಯೇ ಒಲ್ಲೆ ಎಂದಿದ್ದರು. ಇದು ಕಲೆಯ ಮತ್ತು ಅದರ ಪಾವಿತ್ರ್ಯದ ಮೇಲಿರುವ ಅವರ ಅಭಿಮಾನಕ್ಕೆ ಸಾಕ್ಷಿ.

ಅಜಿತ್ ಅವರು ಏಳೆಂಟು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಟಾಟಾ ಕಂಪನಿಯಲ್ಲಿ ಉದ್ಯೋಗಕ್ಕಿದ್ದರು. ಬೆಂಗಳೂರಿನ ಕಾರ್ಯಕ್ರಮಗಳಲ್ಲಿಯೂ ಅವರು ವೇಷ ಕಟ್ಟಿ ಕುಣಿದಿದ್ದಾರೆ. ಈ ಅನುಭವವನ್ನೆಲ್ಲ ಈಗ ಅಲ್ಲಿ ತಮ್ಮ ತಂಡ ಸೇರಿಕೊಂಡಿರುವವರಿಗೆ, ಮಕ್ಕಳಿಗೆ ಕಲಿಸಲು ಮುಂದಾಗಿದ್ದಾರೆ. ಇದೂ ಅವರ ಕಲಾಸೇವೆಯ ಭಾಗ.

ಇವರ ಜೊತೆ ಸಾಲಿಗ್ರಾಮ ಮಕ್ಕಳ ಮೇಳದಲ್ಲಿ ವೇಷ ಹಾಕಿ ಅನುಭವವಿದ್ದ ಕೋಟದ ಶಶಿಧರ ನಾಯರಿ ಇದ್ದಾರೆ. ಜೊತೆಗೆ, ಕಟೀಲು ಮೇಳದ ಭಾಗವತರಾದ ಪುತ್ತೂರು ರಮೇಶ್ ಭಟ್ಟರ ಪುತ್ರ ಶ್ರೀಹರಿ ಎಚ್.ಆರ್. (ಇವರು ತಾಯ್ನಾಡಲ್ಲಿರುವಾಗ ತೆಂಕು ತಿಟ್ಟಿನ ಪ್ರಮುಖ ಪಾತ್ರಗಳನ್ನೆಲ್ಲ ನಿರ್ವಹಿಸಿದವರು) ಇದ್ದಾರೆ. ನಾಟಕ ರಂಗಭೂಮಿಯ ಹಿನ್ನೆಲೆಯಿರುವ ಸುಷ್ಮಾ ಅವರೂ ಜೊತೆಗೂಡಿದ್ದಾರೆ. ನರೇಂದ್ರರ ಮಗಳು ಖುಷಿ ಶೆಣೈ ಹಾಗೂ 6 ವರ್ಷದ ಬಾಲಕ, ಕೋಟದ ಆದಿಶೇಷ ಕೂಡ ಈ ತಂಡದಲ್ಲಿ ಯಕ್ಷಗಾನಾಭ್ಯಾಸಿಗಳಾಗಿದ್ದಾರೆ.

ಈ ತಂಡದವರು ಜರ್ಮನಿಯ ವಿವಿಧ ರಾಜ್ಯಗಳಲ್ಲಿ ಕಲಾ ಪ್ರದರ್ಶನ ನೀಡಿದ್ದಾರೆ. ವರ್ಷಕ್ಕೊಂದನ್ನು ಈ ತಂಡವೇ ಆಯೋಜಿಸುತ್ತಿದೆ. ಯಕ್ಷಗಾನ ನೋಡಿದವರು, ‘ನಮಗೂ ಕಲಿಸಿ, ತರಗತಿ ಮಾಡಿ’ ಅಂತ ಕೇಳಿಕೊಂಡಿದ್ದಾರೆ. “ಇವೆಲ್ಲವನ್ನೂ ನಮ್ಮ ಖುಷಿಗಾಗಿ ಮಾಡುತ್ತಿದ್ದೇವೆ, ಹೀಗಾಗಿ ಹೆಜ್ಜೆಗಾರಿಕೆ ಹೇಳಿಕೊಡುತ್ತಿದ್ದೇವೆ” ಎನ್ನುತ್ತಾರೆ ಅಜಿತ್.

ಇತ್ತೀಚೆಗೆ ಕಾಂತಾರ ಕನ್ನಡ ಚಲನಚಿತ್ರ ಬಂದ ಮೇಲಂತೂ ಯಕ್ಷಗಾನೇತರ ನಾಡಿನವರಿಗೂ ಯಕ್ಷಗಾನದ ಮೇಲೆ ಕುತೂಹಲ ಹೆಚ್ಚೇ ಆಗಿದೆ ಎನ್ನುತ್ತಾರೆ ಅಜಿತ್. ಅಂದರೆ ಕನ್ನಡಿಗರಿಗಷ್ಟೇ ಅಲ್ಲದೆ, ಕನ್ನಡೇತರರು, ಜರ್ಮನಿ ವಾಸಿಗಳೂ ಯಕ್ಷಗಾನದ ಬಗೆಗೆ ಆಸ್ಥೆ ತೋರುತ್ತಿದ್ದಾರಂತೆ.

ಮ್ಯೂನಿಕ್ ಸಿರಿಗನ್ನಡ ಕೂಟವು ಪ್ರತೀ ವರ್ಷ ಸಹಾಯಾರ್ಥ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಕಳೆದ ವರ್ಷವೂ ಇವರ ಜೊತೆಗೂಡಿದ್ದ ಯಕ್ಷಮಿತ್ರರು, ಲಂಕಾದಹನ ಯಕ್ಷಗಾನ ಪ್ರದರ್ಶಿಸಿದ್ದರು. ಈ ವರ್ಷ ಬಡ ವಿದ್ಯಾರ್ಥಿಗಳ ಹಾಗೂ ಭಾರತದಲ್ಲಿರುವ ಯಕ್ಷಗಾನ ಕಲಾವಿದರೊಬ್ಬರಿಗೆ ನೆರವು ನೀಡುವುದಕ್ಕಾಗಿ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಇದು ಸೇವಾರ್ಥವಾಗಿರುವುದರಿಂದ ಟಿಕೆಟ್ ಇದೆ. ಈ ರೀತಿ ಚಾರಿಟಿ ಕಾರ್ಯಕ್ರಮಗಳಲ್ಲಿ ಸಂಗ್ರಹವಾದ ಮೊತ್ತವನ್ನು ಬೇರಾವುದೋ ಎನ್‌ಜಿಒಗಳಿಗೆ ಕೊಡುವುದಕ್ಕಿಂತ, ಅರ್ಹ ಮತ್ತು ಅಗತ್ಯವಿರುವ ಬಡ ಯಕ್ಷಗಾನ ಕಲಾವಿದರಿಗೆ ನೀಡುವುದು ಒಳ್ಳೆಯದಲ್ಲವೇ ಎಂಬ ಸಲಹೆಯನ್ನು ಮ್ಯೂನಿಕ್ ಸಿರಿಗನ್ನಡ ಕೂಟವೂ ಒಪ್ಪಿಕೊಂಡಿದೆ. ಸಂಗ್ರಹವಾದರೂ- ಆಗದಿದ್ದರೂ ನಿರ್ದಿಷ್ಟ ಮೊತ್ತವನ್ನು ಸಹಾಯದ ಅಗತ್ಯವಿರುವ ಯಕ್ಷಗಾನ ಕಲಾವಿದರಿಗೆ ನೀಡಬೇಕೆಂಬ ನಿರ್ಧಾರ ಯಕ್ಷಮಿತ್ರರು ತಂಡದ್ದು.

ಜೂ.25ರ ಕಾರ್ಯಕ್ರಮದಲ್ಲಿ ಬೆಂಗಳೂರಿನ ಹವ್ಯಾಸಿ ಕಲಾವಿದ ರಾಮಕೃಷ್ಣ ಭಟ್ ರಾಮನ ಪಾತ್ರದಲ್ಲಿ, ಅಜಿತ್ ಪ್ರಭು ಕುಶನಾಗಿ, ಅಪೂರ್ವ ಬೆಳೆಯೂರು ಲವನಾಗಿ, ಶಶಿಧರ ನಾಯರಿ ಶತ್ರುಘ್ನ, ಸುಷ್ಮಾ ರವೀಂದ್ರ ಅವರು ಸೀತೆಯ ಪಾತ್ರ ನಿರ್ವಹಿಸಲಿದ್ದಾರೆ. ಉಳಿದಂತೆ ಶ್ರೀಹರಿ, ಅರವಿಂದ್, ಖುಷಿ ಶೆಣೈ, ಆದಿಶೇಷ ಕೂಡ ರಂಗದಲ್ಲಿ ವಟುಗಳಾಗಿ, ಬಾಲಗೋಪಾಲರಾಗಿ ಕಾಣಿಸಿಕೊಳ್ಳಲಿದ್ದಾರೆ. ಹಿಮ್ಮೇಳಕ್ಕೆ ಸದ್ಯಕ್ಕೆ ರೆಕಾರ್ಡೆಡ್ ಸಿಡಿ ಬಳಸುತ್ತಿದ್ದಾರೆ. ತಮ್ಮದೇ ಹಿಮ್ಮೇಳ ತಂಡ ಕಟ್ಟಬೇಕೆಂಬ ಇರಾದೆಯಿದೆ. ಯಕ್ಷಗಾನವನ್ನು ಮತ್ತಷ್ಟು ವಿಸ್ತರಿಸಬೇಕೆಂಬ ಪ್ರಾಮಾಣಿಕ ಹೆಬ್ಬಯಕೆಯಿದೆ.

Article by Avinash Baipadithaya Published in Prajavani on 04 Jun 2023

LEAVE A REPLY

Please enter your comment!
Please enter your name here