ಹೊಸ ಸಂವತ್ಸರ- ಕಳೆಯಲಿ ದ್ವೇಷ ಮತ್ಸರ

2
289

ಎಲ್ಲೆಡೆ ಹ್ಯಾಪಿ ನ್ಯೂ ಇಯರ್ ಅನ್ನೋ ಪದಪುಂಜ ಕೇಳಿಬರುತ್ತಿದೆ. ಅಪ್ಪಿ ತಪ್ಪಿಯೂ “ಹೊಸ ವರುಷದ ಶುಭಾಶಯಗಳು” ಅನ್ನುವ ಮಾತು ಕೇಳಿಬರುವುದಿಲ್ಲ. (ಬೇಕಿದ್ದರೆ ಈಗೀಗ ಕನ್ನಡ ಶುಭಾಶಯ ಪತ್ರಗಳಲ್ಲಿ ಓದುತ್ತೇವಷ್ಟೇ). ಇದು ಪ್ರತಿವರ್ಷದ ಜನವರಿ ತಿಂಗಳ ಮೊದಲ ವಾರವಿಡೀ ಅಲ್ಲಲ್ಲಿ ಗುನುಗುತ್ತಿರುತ್ತೇವೆ ಮತ್ತು ಅಂತರ್ಜಾಲದಲ್ಲಿ ಹೊಸ ವರ್ಷಕ್ಕೆ ಸಂಬಂಧಿಸಿದ ಶುಭಾಶಯ ಪತ್ರಗಳು ಹರಿದಾಡುತ್ತಲೇ ಇರುತ್ತವೆ.

ಹೌದು… ನಮಗಿದು ಹೊಸ ವರ್ಷದ ಸಡಗರ ಅಲ್ಲ, ಏನಿದ್ದರೂ ಹ್ಯಾಪಿ ನ್ಯೂ ಇಯರ್ ಅಷ್ಟೇ! ಏನೇ ಆದರೂ ಜೀವನದ ಪ್ರತಿಯೊಂದು ಕ್ಷಣಕ್ಕೂ ಇಂಗ್ಲಿಷ್ ಕ್ಯಾಲೆಂಡರನ್ನೇ ಅನುಸರಿಸುತ್ತಿರುವ ನಾವು ಇಂಥದ್ದೊಂದು ದಿನವನ್ನು ಆಚರಿಸುವುದರಲ್ಲೇನೂ ತಪ್ಪಿಲ್ಲ ಬಿಡಿ. ಯಾವುದು ವಿದೇಶದಿಂದ ಬಂದಿದೆಯೋ, ಯಾವುದು ನಮಗೆ ಹೊಸತಾಗಿ ಕಾಣುತ್ತದೆಯೋ… ಅದನ್ನೆಲ್ಲಾ ಗಬಕ್ಕನೆ ಬಿಗಿದಪ್ಪಿಕೊಳ್ಳುವ ಜಾಯಮಾನ ನಮ್ಮದು. ಅಷ್ಟು ಔದಾರ್ಯ, ಧಾರಾಳತನ ನಮ್ಮಲ್ಲಿದೆ.

ಹಾಗಾಗಿ ಹ್ಯಾಪಿ ನ್ಯೂ ಇಯರ್ ಅಂತಲೇ ನಾವು ಶುಭಾಶಯ ವಿನಿಮಯ ಮಾಡಿಕೊಳ್ಳುತ್ತೇವೆ. ಆದರೆ ಇದು ಭಾರತಕ್ಕೆ ಹೊರಗಿನಿಂದ ಬಂದಿದ್ದಾದರೂ, ನಮಗೆ ನಮ್ಮದೇ ಆದ ಯುಗಾದಿ ಎಂಬ ಹೊಸ ವರ್ಷ ಇದ್ದರೂ, ನಾವು ಈ ನ್ಯೂ ಇಯರ್ ಅನ್ನು ಕೂಡ ಆಚರಿಸಲೇಬೇಕು. ಯಾಕಂತೀರಾ? ಈ ಹೊಸ ವರ್ಷದ ಆಚರಣೆಗೂ ಒಂದು ಪದ್ಧತಿ ಎಂಬುದಿದೆ. ಈ ಪದ್ಧತಿಯ ಒಳ ಹೊರಗುಗಳನ್ನು ನಾವು ಅರಿತುಕೊಂಡರೆ, ಇದನ್ನು ಯಾಕೆ ಆಚರಿಸಬೇಕು ಎಂಬುದರ ಅರಿವಾಗುತ್ತದೆ.

ಹೌದು. ಇದರಲ್ಲೊಂದು ಅತ್ಯಂತ ಗಮನ ಸೆಳೆಯುವ ಮತ್ತು ನಾವು ಪಾಲಿಸಲೇಬೇಕಾದ ಭಾಗವೆಂದರೆ ಹೊಸ ವರ್ಷಕ್ಕೆ ನಾವು ಕೈಗೊಳ್ಳುವ ಸಂಕಲ್ಪ/ನಿರ್ಣಯ/ಪ್ರತಿಜ್ಞೆ. ಅದನ್ನು ಬೇಕಾದರೆ ರಿಸೊಲ್ಯುಶನ್ ಅಂತಲೇ ಕರೆಯೋಣ ಬಿಡಿ. ಈ ರೆಸೊಲ್ಯುಶನ್‌ಗಳಲ್ಲಿ ತೀರಾ ವೈಯಕ್ತಿಕದಿಂದ ಹಿಡಿದು, ಸಾಮಾಜಿಕ ಕಳಕಳಿವರೆಗೆ, ಆಧ್ಯಾತ್ಮಿಕ ಗುರಿಯವರೆಗೆ ಎಲ್ಲವೂ ತುಂಬಿಸಬಹುದು.

ಒಟ್ಟಿನಲ್ಲಿ ಈ ಹೊಸ ವರ್ಷದ ಸಂಕಲ್ಪವು ಧನಾತ್ಮಕವಾಗಿರಬೇಕು, ಇದು ನಮ್ಮ ಜೀವನದ ಹಾದಿಯನ್ನು ಬೆಳಗುವಂತಿರಬೇಕು, ಮಾನಸಿಕ ತೃಪ್ತಿ ನೀಡುವಂತಿರಬೇಕು, ಇತರರಿಗೆ ನೆರವಾಗುವಂತಿದ್ದರೆ ಮತ್ತಷ್ಟು ಚೆನ್ನ. ಇಂಥ ಹೊಸ ವರ್ಷದ ಸಂಕಲ್ಪಕ್ಕೆ ಬೆಬಿಲೋನಿಯನ್ನರಷ್ಟು ಹಳೆಯ ಇತಿಹಾಸವಿದೆ ಎಂದು ಎಲ್ಲೋ ಓದಿದ ನೆನಪು.

ಅದರಲಿ, ಇತ್ತೀಚೆಗೆ ಜನಪ್ರಿಯವಾಗಿರುವ ಮತ್ತು ಜನಪ್ರಿಯವಾಗುತ್ತಿರುವ ಸಂಕಲ್ಪಗಳಲ್ಲಿ ಮೂರು ಅತ್ಯಂತ ಪ್ರಮುಖವಾದವು. ಅದರಲ್ಲಿ ಮೊದಲ ಸ್ಥಾನ ಸಿಗರೇಟು/ಬೀಡಿ ಬಿಟ್ಟುಬಿಡುತ್ತೇನೆ, ಎರಡನೆಯದು ಕುಡಿತ ಬಿಡುತ್ತೇನೆ, ಮೂರನೆಯದು ತೂಕ ಕಳೆದುಕೊಳ್ಳುತ್ತೇನೆ ಎಂಬುದು.

ಸಿಗರೇಟು/ಕುಡಿತದ ಕುರಿತ ಸಂಕಲ್ಪದ ಬಗ್ಗೆ ಕೇಳಿದರೆ, ಜನರಲ್ಲಿ ಸಾಮಾಜಿಕ ಪ್ರಜ್ಞೆ ಜಾಗೃತವಾಗಿದೆ ಎಂಬುದರ ಸೂಚನೆಯಿದು. ಸಿಗರೇಟು ಅಂದ ತಕ್ಷಣ ಒಂದು ವಿಷಯ ಹೇಳಲೇಬೇಕು, ಹೇಳಿಬಿಡುತ್ತೇನೆ. ಸಿಗಾರ್ ಎಂದರೇನು ಎಂಬ ಬಗ್ಗೆ ಚರ್ಚಿಲ್ ಕೊಟ್ಟ ವ್ಯಾಖ್ಯಾನವನ್ನೇ ತೆಗೆದುಕೊಳ್ಳಿ. ಒಂದು ತುದಿಯಲ್ಲಿ ಬೆಂಕಿ, ಮತ್ತೊಂದು ತುದಿಯಲ್ಲಿ ಮೂರ್ಖ ಇರುವ ವಸ್ತುವೇ ಸಿಗರೇಟು (Fire at one end & fool at other end, a little bit of tobacco in between) ಎಂದಿದ್ದರವರು. ಯಥಾರ್ಥಕ್ಕೆ ಇದು ಸರಿ ಎನಿಸುವುದಿಲ್ಲವೇ? ಏಕೆಂದರೆ ಸಿಗರೇಟು ಸೇದುವವರಿಗಿಂತಲೂ ಅವರು ಢಾಳಾಗಿ ಹೊರಬಿಡುವ ಹೊಗೆ ಸೇವಿಸಲೇಬೇಕಾದ ಅನಿವಾರ್ಯತೆಗೆ ಸಿಲುಕುವ ಅಕ್ಕಪಕ್ಕದ ಮಂದಿಯ ಆರೋಗ್ಯಕ್ಕೇ ಹೆಚ್ಚು ಅಪಾಯ ಎಂಬುದು ವೈಜ್ಞಾನಿಕ ವರದಿ ತಿಳಿಸುವ ಧೂಮಪಾನಿಗಳಿಗೆ ಅಪಥ್ಯವಾಗಬಲ್ಲ ಸತ್ಯ. “ಅಮೆರಿಕದಲ್ಲಿ ಪ್ರತಿದಿನ 10 ಸಾವಿರ ಮಂದಿ ಸಿಗರೇಟು ತ್ಯಜಿಸುತ್ತಿದ್ದಾರೆ, ಸಾಯುವ ಮೂಲಕ” ಹಾಗೂ “ಒಂದಲ್ಲ ಒಂದು ದಿನ ಎಲ್ಲರೂ ಧೂಮಪಾನ ಬಿಡಲೇಬೇಕು” ಎಂಬ ಲೋಕೋಕ್ತಿಗಳು ಕಟುವಾಗಿ ಕಂಡುಬಂದರೂ ವಾಸ್ತವಕ್ಕೆ ತೀರಾ ಹತ್ತಿರ. ಧೂಮಪಾನ ವಿರೋಧಿಗಳಂತೂ “ಸಿಗರೇಟು ಸೇವನೆ ಆರೋಗ್ಯಕ್ಕೆ ಹಾನಿಕರ” ಎಂಬ ಘೋಷಾ ವಾಕ್ಯದಲ್ಲಿ “ಯಾರಿಗೆ ಹಾನಿಕರ” ಎಂಬುದನ್ನು ಸ್ಪಷ್ಟವಾಗಿ ನಮೂದಿಸಬೇಕೆಂಬ ತಗಾದೆ ತೆಗೆಯುತ್ತಿರುವುದು ಕೂಡ ಒಪ್ಪಿಕೊಳ್ಳಲೇಬೇಕಾದ ಅಂಶ.

ಹೊಸ ವರುಷದ ಆಚರಣೆಯಲ್ಲೂ ಭಿನ್ನ ಭಿನ್ನ ರುಚಿಗಳು. ಆದರೆ ಹಳೆಯ ವರ್ಷವನ್ನು ಮರೆಯುವ ನೆಪದಲ್ಲಿ ಅಜ್ಜನ ಪ್ರತಿಕೃತಿಯನ್ನು ಮಧ್ಯರಾತ್ರಿ ಸುಡುವುದು??? ಇದರಲ್ಲಿ ಎಂಥಾ ಆನಂದವೋ… ಅಂದರೆ ನಾವು ಮಾಡಿದ ಹಳೆಯ ಕರ್ಮಗಳನ್ನು, ಅದು ಒಳ್ಳೆಯದಿರಲಿ, ಕೆಟ್ಟದ್ದಿರಲಿ, ಸುಟ್ಟು ಬಿಡುವುದರ ಪ್ರತೀಕವೇ ಇದು? ಈ ವಿದ್ಯಮಾನವೊಂದು ನಗರ ಪ್ರದೇಶಗಳಲ್ಲಿ ಮಾತ್ರವಲ್ಲ, ಹಳ್ಳಿ ಹಳ್ಳಿಗೂ ಹರಡಿರುವುದು ಮಾತ್ರ ವಿಚಿತ್ರ ಆದರೆ ನಂಬಲೇಬೇಕಾದ ಸತ್ಯ.

ಇನ್ನು ಕೆಲವರಿಗೆ ಜನವರಿ 1 ಎಂದರೆ ಒಂದು ಕ್ಯಾಲೆಂಡರ್ ವರ್ಷದ ರಜೆಗಳು ಆರಂಭವಾಗುವ ದಿನ! ಅಂದರೆ ಈ ವರ್ಷ ರಜೆಗಳ ಪಟ್ಟಿ ಹೊಸದಾಗಿರುತ್ತದೆ. ಅವುಗಳಲ್ಲಿ ಭಾನುವಾರವೇ ಬಂದು ನಮ್ಮ ನೆಮ್ಮದಿ ಹಾಳು ಮಾಡುವ ರಜಾದಿನಗಳೆಷ್ಟು ಎಂಬುದನ್ನು ಲೆಕ್ಕ ಹಾಕುವುದೇ ಕೆಲಸ ಅವರಿಗೆ.  ಶಾಲಾ ಮಕ್ಕಳಿಂದ ಹಿಡಿದು ಕಚೇರಿಗಳಲ್ಲಿ ದುಡಿಯುವವರವರೆಗೆ ಎಲ್ಲರಿಗೂ ಇದು ಅನ್ವಯವಾಗುವ ಪ್ರಸಂಗ.

ಮತ್ತೆ ಕೆಲವರಿಗೆ ಅಕ್ಷರಶಃ ಸಂತಸದ ಅಲೆಯಲ್ಲಿ ತೇಲುವ ಸಂಗತಿ. ಕೆಲವರಂತೂ ವಾರಕ್ಕೊಂದೆರಡು ಬಾರಿಯೋ ತೇಲುತ್ತಲೇ ಇದ್ದರೂ (ಪ್ರತಿ ದಿನ ತೇಲಾಡುವವರೂ ಇದ್ದಾರೆ!) ಹೊಸ ವರ್ಷವನ್ನು ಸ್ವಾಗತಿಸುವ ನೆಪದಲ್ಲಿ ಒಂದಷ್ಟು ಹೆಚ್ಚೇ ಮತ್ತೇರಿಸಿಕೊಂಡು ಸುಖದಲ್ಲಿ ತೇಲಾಡುವವರಿಗೂ ಕೊರತೆಯಿಲ್ಲ. ಈಗೀಗ ಮಹಾನಗರಗಳಲ್ಲಂತೂ ಡ್ಯಾನ್ಸ್, ಜಾಝ್, ರಾಕ್, ಮಿಮಿಕ್ರಿ, ಗೀತ-ಸಂಗೀತ ನೃತ್ಯ… ಜತೆಗೆ ಕುಡಿತ ಫ್ರೀ ಎಂಬ ಭರ್ಜರಿ ಪಾರ್ಟಿಗಳನ್ನೂ ಕಾಣಬಹುದು. ಸಂತೋಷ ಪಡೆಯಲು ಮಾರ್ಗಗಳೆಷ್ಟಿಲ್ಲ? ಅವರವರ ಇಷ್ಟ ಅಂದುಕೊಂಡು ಸುಮ್ಮನಾಗಬೇಕು.

ಆದರೆ ಒಂದಷ್ಟು ದೂರ ಕಣ್ಣು ಹಾಯಿಸಿ ನೋಡಿ… ಅಲ್ಲಿ ಈ ಎಲ್ಲಾ ಸಡಗರ, ಸಂಭ್ರಮಗಳೇನೆಂದು ತಿಳಿಯದೇ… ಎಂದಿನಂತೆ ಗದ್ದೆ ಉಳುವ, ತೋಟಗಳಲ್ಲಿ ಅಡಿಕೆ ಕೀಳುವ, ರೈಲು-ಬಸ್ ನಿಲ್ದಾಣಗಳಲ್ಲಿ ಭಾರ ಹೊರುವ, ಕಾಯಕ ಯೋಗಿಗಳು ಹೊತ್ತಿನ ತುತ್ತಿನ ಏಕೈಕ ಆಲೋಚನೆಯೊಂದಿಗೆ ಆಕಾಶೋನ್ಮುಖರಾಗಿ ಕಾರ್ಯಮಗ್ನರಾಗಿರುತ್ತಾರೆ. ಅಲ್ಲಿ ದುಗುಡವಿಲ್ಲ, ಸಡಗರವೂ ಇಲ್ಲ, ನಿರ್ವಿಣ್ಣ ವದನವಿದೆ, ಮನದೊಳಗೆ ನಾಳೆಯೇನೆಂಬ ಕದನವಿದೆ. ನಿಷ್ಕಲ್ಮಶ ಹೃದಯವಿದೆ, ದುಡಿತದ ತುಡಿತವಿದೆ. ಅಂಥವರ ಬಳಿಗೊಮ್ಮೆ ಹೋಗಿ, ಹಾಯ್ ಹ್ಯಾಪಿ ನ್ಯೂ ಇಯರ್ ಅಂತ ಹೇಳಿದರೆ, ಸುಮ್ಮನೇ ನಕ್ಕು ತಮ್ಮ ದೈನಂದಿನ ಕಾಯಕದಲ್ಲಿ ಮುಳುಗಿಹೋಗುತ್ತಾರೆ. ಹಾಗಾಗಿ ಈ ಹೊಸ ವರ್ಷ, ಈ ಬೆಂದ ಮನಸುಗಳ ಪುಳಕಗೊಳಿಸುವ ಹಿತನುಡಿಯುವ ಸಂಕಲ್ಪ ಕೈಗೊಳ್ಳಿ. ಮುದುಡಿದ ಮನಸುಗಳ ಅರಳಿಸುವ ನಿರ್ಣಯ ನಿಮ್ಮದಾಗಲಿ.

ನಮ್ಮ ಕನ್ನಡ ನಾಡಿನ ಪ್ರಜೆಗಳಿಗೊಂದು ಸಂಕಲ್ಪ ಕೈಗೊಳ್ಳಲು ಅತ್ಯುತ್ತಮ ಅವಕಾಶವಿದೆ. ನಾಟಕ ನೋಡಿಯಾಯಿತಲ್ಲವೇ? ಆದರೆ ವೇಷಗಳು ಈಗಾಗಲೇ ಬೀದಿ ಸುತ್ತಲು ಆರಂಭಿಸಿವೆ. ಹಾಗಾಗಿ ಕೆಲಸ ಮಾಡದವರಿಗೆ ಓಟು ನೀಡುವುದಿಲ್ಲ, ಅಧಿಕಾರ ಲಾಲಸೆಯಿರುವ, ಜನರಿಗೇ ವಂಚಿಸಿ ದುಡ್ಡು ಮಾಡುವ, ದರ್ಪ ತೋರುವ ಯಾವುದೇ ಅಭ್ಯರ್ಥಿಯನ್ನೂ ಆರಿಸುವುದಿಲ್ಲ ಅನ್ನೋ ಸಂಕಲ್ಪವನ್ನು ನಿಮ್ಮ ಹೊಸ ವರ್ಷದ ಸಂಕಲ್ಪದ ಪಟ್ಟಿಯ ಮೂಲೆಯಲ್ಲೆಲ್ಲೋ ಸೇರಿಸಿಬಿಡಿ ನೋಡೋಣ. ಇಡೀ ರಾಜ್ಯ ಉದ್ಧಾರವಾದರೂ ಆಗಬಹುದು.

ಎಲ್ಲರಿಗೂ ಶುಭವಾಗಲಿ

(ಇದು ವೆಬ್ ದುನಿಯಾ ಕನ್ನಡದಲ್ಲಿ ಇಲ್ಲಿ ಪ್ರಕಟವಾದ ಲೇಖನ)

2 COMMENTS

  1. ನಿಮಗೆಲ್ಲ ಶುಭ ಹಾರೈಕೆಗಳು:

    ಹೊಸ ವರುಷ ಹರುಷದಾಯಕವಾಗಿರಲಿ.
    ಸುಖ, ಸಂತಸ, ಶಾಂತಿ ತರಲಿ,
    ನಗು ಹಬ್ಬಲಿ, ಬಿಗು ತಗ್ಗಲಿ,
    ಸಮೃದ್ಧಿಯ ಆಪ್ತ ತೋಳು ಎಲ್ಲರನು ತಬ್ಬಲಿ.

LEAVE A REPLY

Please enter your comment!
Please enter your name here