ಅಪರಿಚಿತರಾಗಿ ಬಂದು ಆತ್ಮೀಯವಾಗುವವರು !

14
328

ಮನಸ್ಸಿಗೆ ತೀರಾ ಬೇಸರವಾದಾಗೆಲ್ಲಾ ನಾವೇನು ಮಾಡಬಹುದು? ಇದು ತೀರಾ ಇತ್ತೀಚೆಗೆ ನನ್ನನ್ನು ಕಾಡಿದ ಪ್ರಶ್ನೆ.

ಹಿಂದೆಲ್ಲಾ ಕಾಲೇಜು ಜೀವನದಲ್ಲಾದರೆ ಆತ್ಮೀಯ ಗೆಳೆಯರು, ಗೆಳತಿಯರು ಎಲ್ಲಾ ಇರುತ್ತಿದ್ದರು. ಅವರ ಭುಜಕ್ಕೊರಗಿ, ಅವರ ಆತ್ಮೀಯತೆ ತುಂಬಿದ ಕೈಯಿಂದ ನೇವರಿಸಿಕೊಂಡು ನೋವು ಮರೆಯಬಹುದಾಗಿತ್ತು. ಆದರೆ ಅಂತದ್ದೊಂದು ಭಾಗ್ಯ ನನ್ನದಾಗಿರಲಿಲ್ಲ ಅನ್ನುವ ಕೊರಗು ಇಂದಿಗೂ ನನ್ನನ್ನು ಕಾಡುತ್ತಿದೆ. ಅದು ಬೇರೆ ಸಂಗತಿ. ಅದರ ಬಗ್ಗೆ ಮುಂದೊಮ್ಮೆ ಅನಾವರಣಗೊಳಿಸುವೆ. ಮನಸ್ಸು ಹಗುರವಾಗಬಹುದು.

ಹೌದಲ್ವಾ… ಕಾಲೇಜು ಜೀವನದಲ್ಲಿ ಸಹಪಾಠಿಗಳಾಗಿದ್ದವರ ನೆನಪು ನನಗಿದ್ದರೂ ಅವರು ಈಗ ಯಾರೂ ಜತೆಗಿಲ್ಲ, ಅಂಥದ್ದೊಂದು ಆತ್ಮೀಯತೆಯ ಬಂಧ ಏರ್ಪಡಲಿಲ್ಲವೇಕೆ ಎನ್ನುವುದಕ್ಕೆ ಅಂದಿನ ಪರಿಸ್ಥಿತಿಯೂ ಕಾರಣವಿದ್ದಿರಬಹುದು.

ಇದು ನೆನಪಾದಾಗ, ಜೀವನದಲ್ಲಿ ಏನನ್ನೋ ಕಳೆದುಕೊಂಡಿದ್ದೇನೆ ಅಂತ ನನಗೆ ಹಲವಾರು ಬಾರಿ ಅನ್ನಿಸುತ್ತಿರುತ್ತದೆ.

ಈಗಲೂ ಕೂಡ, ನಿಜ ಜೀವನ ಏನೆಂದು ಅರಿಯಲು ಹೊರಟ, ಜೀವನ ವಿದ್ಯೆಯನ್ನು ಆರ್ಜಿಸಲು ಹೊರಟ ನಮ್ಮಂತಹ ಶಾಶ್ವತ ವಿದ್ಯಾರ್ಥಿ ಬೇಸರ ಕಳೆಯುವುದು ಹೇಗೆ?

ಇಂದಿನ ಡೆಡ್‌ಲೈನ್ ವೀರರೇ ತುಂಬಿರುವ ಕಚೇರಿಗಳಲ್ಲಿ ಬಹುಶಃ ಗೆಳೆತನ, ಸ್ನೇಹ, ಕಾಳಜಿ, ವಾತ್ಸಲ್ಯ ಇತ್ಯಾದಿ ಮೌಲ್ಯಗಳು ಕಳೆದುಹೋಗುತ್ತಿವೆ. ಅಂದರೆ ನಮ್ಮ ಮನದಲ್ಲಿ ದುಗುಡ-ದುಮ್ಮಾನವಿದ್ದರೂ ಅದನ್ನು ತೋರ್ಪಡಿಸಿಕೊಳ್ಳುವಂತಿಲ್ಲ. ಅದು ಬಿಡಿ, ಒಂದಿಷ್ಟು ಪ್ರೀತಿಯ ಮಾತುಗಳನ್ನಾಡಲೂ, ವಾತ್ಸಲ್ಯ ತೋರಿಸಲು ಅದೂ ಅಸಾಧ್ಯ. ಇದಕ್ಕೆ ಕಾರಣ? ಯಾರಿಗೂ ಪುರುಸೊತ್ತು ಇಲ್ಲ!

ಇಂಥ ಸಂದರ್ಭದಲ್ಲಿ ನೆರವಿಗೆ ಬರುವವರು ಎಲ್ಲೋ ಇದ್ದುಕೊಂಡು ನಮ್ಮ ಬೆನ್ನು ತಟ್ಟುತ್ತಾ, ನಮ್ಮೊಳಗಿನ ನಮ್ಮನ್ನು ಗುರುತಿಸಲು ಪ್ರಯತ್ನಿಸುತ್ತಾ ನಮ್ಮೊಳಗೆ ಒಬ್ಬರಾಗಲು ಬರುವ ನಿಮ್ಮಂಥ ನೆಟ್ ಮಿತ್ರರು.

ನೀವೆಲ್ಲಾ ನನಗೆ ಅಪರಿಚಿತರು. ಆದರೆ ಒಂದೆರಡು ಸಾಂತ್ವನದ ನುಡಿಗಳಿಂದ, ಪ್ರೋತ್ಸಾಹದ ಮಾತುಗಳಿಂದ ಆತ್ಮೀಯರಾಗಿಬಿಡುತ್ತೀರಿ. ಮಾನವ ಸಂಬಂಧಗಳು ಇನ್ನೂ ಜೀವಂತವಾಗಿದೆ, ಇಲ್ಲಿ ಭಾವನೆಗಳಿಗೂ ಜಾಗವಿದೆ ಅಂತೆಲ್ಲಾ ನೆನಪಿಸುತ್ತೀರಿ.

ಹಾಗಿದ್ದರೆ ಮಾನವೀಯ ಸಂಬಂಧ ಅನ್ನುವುದು ಇಷ್ಟು ಸುಲಭದಲ್ಲಿ ಏರ್ಪಡಬಹುದೇ? ನಮ್ಮ ಮಧ್ಯೆ ಇರುವವರೇ ನಮ್ಮನ್ನು ಅರ್ಥ ಮಾಡಿಕೊಳ್ಳದಿರುವಾಗ, ಎಲ್ಲೋ ಇರುವವರು ಬರೇ ನೆಟ್-ಸಂಬಂಧದಿಂದ ನಮ್ಮನ್ನು ಪೂರ್ಣವಾಗಿ ಆಕ್ರಮಿಸಿಕೊಂಡುಬಿಡುತ್ತಾರೇಕೆ?

ನಿಮ್ಮ ಆತ್ಮೀಯ ನುಡಿಗಳು ನನ್ನನ್ನು ದಿನದ ಇಪ್ಪತ್ತನಾಲ್ಕು ಗಂಟೆಯಲ್ಲಿ ಕನಿಷ್ಠ ಗಂಟೆಗೊಂದು ಬಾರಿ ಛಕ್ಕಂತ ಸುಳಿದುಹೋಗುತ್ತದೆ.

ಒಂದು ಬಾರಿಯೂ ನೋಡದಿದ್ದರೂ, ದೂರದಿಂದಲೇ ಬೆನ್ನು ತಟ್ಟುತ್ತೀರಿ, ಬರೆಯಲು ಪ್ರೋತ್ಸಾಹಿಸುತ್ತೀರಿ, ಪ್ರೀತಿ ಕೊಡುತ್ತೀರಿ, ಒಂದು ದಿನ ನಾನು ಕಚೇರಿಗೆ ಬಾರದಿದ್ದರೆ ನಮ್ಮ ಬಾಸ್ ಕೂಡ ಕೇಳಲಾರರು, ಆದರೆ ನೀವು ವಿಚಾರಿಸುತ್ತೀರಿ. ಏನಾಯಿತು ಅಂತ ಆತ್ಮೀಯತೆಯಿಂದ ಬ್ಲಾಗಿನಲ್ಲೇ ಕೇಳುತ್ತೀರಿ.

ಕಚೇರಿಗೆ ರಜೆ ಹಾಕಿ ಒಂದು ವಾರ ಊರಿಗೆ ಹೋಗಬೇಕಾದಾಗ, ಊರಿಂದ ಬಂದು ಜ್ವರದಲ್ಲಿ ಮಲಗಿದಾಗ, ಬ್ಲಾಗು ತುಂಬಾ “ಏನಾಯಿತು, ಎಲ್ಲಿ ಹೋದ್ರಿ” ಇತ್ಯಾದಿ ವಿಚಾರಣೆಗಳ ಸುರಿಮಳೆ. ಇದೆಲ್ಲಾ ನೆನಪಿಸಿಕೊಂಡಾಗ ಮನಸ್ಸು ಒದ್ದೆಯಾಗುತ್ತದೆ, ಹೃದಯ ತುಂಬಿ ಬರುತ್ತದೆ.

ನನ್ನ ಬ್ಲಾಗಿನ ಹಿಂದಿನ ಪುಟಗಳನ್ನು ತಿರುವಿ ಹಾಕಿದಾಗ ಈ ವಿಷಯ ಹೊಳೆಯಿತು. ಮನದುಂಬಿ ಬಂತು. ಜೀವನ ಸಾರ್ಥಕ ಅನ್ನೋ ಭಾವನೆ ಬರುತ್ತಿದೆ. ಬಹುಶಃ ಜೀವನದಲ್ಲಿ ಆವತ್ತು ಕಳೆದುಕೊಂಡಿದ್ದನ್ನು ನಾನು ಪಡೆಯುತ್ತಿದ್ದೇನೋ ಅನ್ನಿಸುತ್ತಿದೆ.

ಓ ಆತ್ಮೀಯ ಮಿತ್ರರೇ, ನಿಮ್ಮ ಬಗ್ಗೆ ಕುತೂಹಲ ಹೆಚ್ಚುತ್ತದೆ, ನಿರೀಕ್ಷೆಗಳು ಹೆಚ್ಚುತ್ತವೆ. ಆ ನಿರೀಕ್ಷೆಯೇ ಬದುಕಿನ ರಥವನ್ನು ಮುಂದಕ್ಕೊಯ್ಯುತ್ತದೆ. ಎಲ್ಲದಕ್ಕೂ ಪ್ರೇರಣೆಯಾಗುತ್ತದೆ. ನೀವು ನನ್ನ ಜೀವನದಲ್ಲಿ ಆನಂದದ ರಸಾನುಭೂತಿ ಸುರಿಯುತ್ತಿದ್ದೀರಿ.

ಆದುದರಿಂದ…

ಅಪರಿಚಿತರಾಗಿ ಬಂದು, ಆತ್ಮೀಯವಾಗುತ್ತಾ, ಮನಸ್ಸನ್ನು ಆವರಿಸಿಕೊಂಡಿರುವ,
ಮನಸ್ಸಿಗೆ ಬೇಸರವಾದಲ್ಲಿ ಬೇಗುದಿ ಕಳೆಯುವ ಒಂದಿಷ್ಟು ಹಿತನುಡಿಗಳನ್ನು ಟೈಪಿಸಿ ಹೋಗುವ,

ಪ್ರತಿದಿನವೂ ಹೊಸತನ ಮೂಡಿಸಲು ಕಾರಣವಾಗುವ,

ಹೊಸ ನಿರೀಕ್ಷೆಗಳನ್ನು ಮೂಡಿಸಿ ಮನಸ್ಸಿಗೆ ಹತ್ತಿರವಾಗುವ, ಮನೋಲ್ಲಾಸಕ್ಕೆ ಕಾರಣವಾಗುವ

ಓ ಬ್ಲಾಗ್ ಮಿತ್ರರೇ

ಕೀಬೋರ್ಡ್ ಕೀಲಿಗಳೊಂದಿಗೆ ಆಟವಾಡುತ್ತಾ ನೀವು ನೀಡುತ್ತಿರುವ ನಿರಂತರ ಪ್ರೋತ್ಸಾಹದ ನುಡಿಗಳಿಗೆ ಸಾವಿರ ವಂದನೆ.

-ಅವಿನಾಶ್ 🙂

14 COMMENTS

 1. ನಿಮಗೆ ಹೇಗೆ ಅನುಭವ ಆಗುತ್ತಿದೆಯೋ ಅದೇ ಅನುಭವ ನನಗೂ ಆಗುತ್ತಿದೆ. ಇತರರಿಗೂ ಆಗುತ್ತಿರಬಹುದು. ನಾವೆಲ್ಲರೂ ಜೀವನದಲ್ಲಿ ಒಂದೇ ತೆರನಾದ ನೌಕೆಯಲ್ಲಿ ತೇಲುತ್ತಿರುವುದಲ್ಲವೇ? ಹೀಗೆಯೇ ಒಬ್ಬರಿಗೊಬ್ಬರು ಬೆನ್ನು ತಟ್ಟಿಕೊಂಡೇ ಸಾಗುವ. ಆದರೆ ಹಾಗಾಗುವುದಿಲ್ಲ, ಮೇಲೇ ನೀವೇ ಉಕ್ತಿಸಿರುವಂತೆ ಬದಲಾವಣೆಯೇ ಜಗದ ನಿಯಮ. ಇಂದು ಬೆನ್ನು ತಟ್ಟಿದರೆ ಕೆಲವು ಬಾರಿ ಕೆನ್ನೆ ತಟ್ಟುವ ಸನ್ನಿವೇಶವೂ ಬರಬಹುದು. ಇಂತಹ ಅನುಭವಗಳೂ ನನಗೆ ಆಗಿದೆ. ಆಗ ಕೆನ್ನೆಯ ಮೇಲೆ ಮೂಡಿದ ನೋವನ್ನು ಮರೆಸುವುದು ಮತ್ತೆ ಇದೇ ಬ್ಲಾಗೇ!

  ಕೆಲವರು ನೌಕೆಯೊಳಗೇ ಮುಳುಗಿರಬಹುದು (ನನ್ನಂಥವರು), ಇನ್ನು ಕೆಲವರು ನೌಕೆಯಿಂದಾಚೆ ನೀರಿನಲ್ಲಿ ಮುಳುಗಿ ನೌಕೆಗೇನಾಗಿದೆ ಎಂದೂ ತಿಳಿಯದಿರಬಹುದು (ನೆಟ್‍ನಿಂದಾಚೆ ಇರುವವರು). ಆದಷ್ಟೂ ಕಾಲ ನೌಕೆಯೊಳಗೇ ಮುಳುಗಿರಲು ಆಶಿಸೋಣ.

  ಈ ಸರ್ವಾಂತರ್ಯಾಮಿ ನೆಟ್ ಎಂಬ ಬಲೆಯ ನಮ್ಮೆಲ್ಲರನ್ನೂ ಒಂದಾಗಿಸುತ್ತಿದೆ. ಇದನ್ನು ದೈವರೂಪ ಎನ್ನಬಹುದೇ?

  ಉತ್ತಮ ಚಿಂತನೆಯ ಸಮಯದಲ್ಲಿ ನಾನೆಂದೂ ಪಠಿಸುವ ಮಂತ್ರ.

  ಗುರುದೇವ ದಯಾ ಕರೊ ದೀನ ಜನೆ

 2. Avi ,
  ವಿಚಿತ್ರಾನ್ನ ವಿಹರಿಸಿದ್ದಕ್ಕೆ ನಿಮಗೆ ವಂದನೆಗಳು .

  ನಿಮದು ಒಳ್ಳೆಯ ಲೇಖನ …ಅಧ್ಬುತವಾಗಿದೆ

 3. ಹೌದು ಶ್ರೀನಿವಾಸ್,
  ಈ ಮಾನವ ಸಂಬಂಧ ಎನ್ನುವುದು ಎಷ್ಟೊಂದು ವಿಚಿತ್ರವಲ್ಲವೆ,
  ಆತ್ಮೀಯರೇ ಪರಿಚಿತರಾಗುವಾಗ ಅಪರಿಚಿತರು ಆತ್ಮೀಯರಾಗುತ್ತಾ ಸಾಂತ್ವನ ನೀಡುತ್ತಾರೆ.
  ಒಂದು ನೋವು, ಇನ್ನೊಂದು ನಲಿವು.

 4. ಬ್ಲಾಗ್ ಜಗತ್ತಿಗೆ ನಿಮಗೆ ಸ್ವಾಗತ ಪ್ರಕಾಶರೆ,
  ಆದ್ರೆ ವಿಚಿತ್ರಾನ್ನ ದಟ್ಸ್ ಕನ್ನಡದ್ದಲ್ವೆ?

 5. ಎನಿಗ್ಮಾಟಿಕ್ಯಾಷ್ ಅವರೇ ಸ್ವಾಗತ ನಿಮಗೆ ನಮ್ಮ ಬ್ಲಾಗಿಗೆ.
  ಎನಿಗ್ಮಾಟಿಕ್ಯಾಷ್ ಅಂದರೇನು?

 6. ಎನಿಗ್ಮಾ… ನಿಮಗೆ ಬ್ಲಾಗ್ ಇದೆಯೇ?

  ಓಓಓಓಓಓ ಗೊತ್ತಾಯ್ತು…. ಎನಿಗ್ಮಾಟಿಕಾಷ್ ಅಂದ್ರೇನೂಂತ….
  ಹೇಳಲಾ?

 7. ಇಷ್ಟು ದಿನ ಇಲ್ಲಿ ಬರೋದು ಹೇಗೆ ಮಿಸ್ ಮಾಡ್ದೆ ಅಂತ ಆಶ್ಚರ್ಯ ಆಗ್ತಿದೆ ನನಗೇ! ಚೆನ್ನಾಗಿ ಬರೀತೀರಾ ರೀ:) ಈ ನೆಟ್ ಅನ್ನೋದು ಯಾವ್ ಯಾವ್ದೋ ಕೊಂಡಿಗಳನ್ನ ಬೆಸೆದುಬಿಡುತ್ತೆ! ಈ ಕಾಣದ ಕೈಗಳ ಜೊತೆಗಿನ ಸಂಬಂಧ ನಿಜಕ್ಕೂ ಹೃದಯಸ್ಪರ್ಶಿ…ಶ್ರೀನಿವಾಸ್ ಸಾರ್ ಹೇಳಿದ ಹಾಗೆ ನಮ್ಮೆಲ್ಲರ ಅನುಭವಕ್ಕೆ ಬರುತ್ತಿರೋ ವಿಷ್ಯ…ಚೆನ್ನಾಗಿ ಬರ್ದಿದೀರ

 8. ಶ್ರೀ ಅವರೆ, ನಿಮಗೆ ಸ್ವಾಗತ. ಮತ್ತು ಥ್ಯಾಂಕ್ಸ್.

  ನೆಟ್ ಯಾವ್ಯಾವ್ದೋ ಕೊಂಡಿಗಳನ್ನು ಬೆಸೆಯುತ್ತದೆ ಹೌದು. ಆದರೆ ಒಂದೊಂದ್ಸಲ ನೆಟ್ ಕೈಕೊಟ್ಟಾಗ ಆ ಕೊಂಡಿ ಕೂಡ ಕಳಚಿಕೊಳ್ಳುತ್ತದೆ. ಅದನ್ನು ಮತ್ತೆ ಮತ್ತೆ ಬೆಸೆಯುತ್ತಿರಬೇಕಷ್ಟೆ. ಆ ಮಟ್ಟಿಗೆ ನಾವು ಬದ್ಧತೆ (commitment) ಪ್ರದರ್ಶಿಸಬೇಕಷ್ಟೆ.

 9. ಅವೀ ಅವರೇ,
  ನೀವು ಹೇಳೋದರಲ್ಲಿ ಎಷ್ಟೊಂದು ನಿಜವಿದೆ..
  ಬ್ಲಾಗ್ ಸಂಕುಲ ತನ್ನ ಸಹ ಬ್ಲಾಗ್‍ದಾರನ ಬಗ್ಗೆ ತೋರುವ ಪ್ರೀತಿ,ಸ್ನೇಹ,ಅಕ್ಕರೆ ಬಗ್ಗೆ ಸೊಗಸಾಗಿ ಚಿತ್ರಿಸಿದ್ದೀರಾ.

  ನಿಮ್ಮ ಬ್ಲಾಗ್ ಪ್ರಯಾಣ ಹೀಗೆ ಸಾಗಲಿ..ಹೊಸ ಹೊಸ ಮಿತ್ರರು ಸಿಗಲಿ (ನಾನು ಸಿಕ್ಕ ಹಾಗೆ 🙂
  ಧನ್ಯವಾದಗಳು,
  ಶಿವ್
  PS: ನಿಮ್ಮ ‘ಸವಿ ನೆನಪುಗಳು ಎಕೇ ಕಾಡುತ್ತವೆ’ ಕ್ಕೆ ಕಾಮೆಂಟಿಸಲು ಪ್ರಯತ್ನಿಸಿದೆ, ಅಲ್ಲಿ ಎನೋ ಲಿಂಕ್ ತೊಂದರೆ ಇದ್ದಾಗೆ ಇತ್ತು.

 10. ಧನ್ಯವಾದಗಳು ಮಿತ್ರ ಶಿವ್,

  ಸವಿ ನೆನಪುಗಳು ಕಾಮೆಂಟ್ ನೀಡಲು ಯಾಕೆ ಕಾಡುತ್ತವೆ ಅಂತ ಗೊತ್ತಾಗಿಲ್ಲ. ಮತ್ತೊಮ್ಮೆ ಅದನ್ನು ಪೋಸ್ಟ್ ಮಾಡಿ ನೋಡುವೆ. ತೊಂದರೆ ತಿಳಿಸಿದ್ದಕ್ಕೆ Thanks 🙂

 11. ಕನ್ನಡಿಗರೇ ನಮಸ್ಕಾರ !!

  ನಮಸ್ಕಾರ 
                        ಇನ್ನೊಬ್ಬ ಕನ್ನಡಿಗ blogosphear ನಲ್ಲಿ. ಕನ್ನಡದಲ್ಲಿ ಬರೆಯಬೇಕೆಂದು ಎಲಾ circus ಮಾಡಿ , ಕೊನೆ…

 12. ನಮಸ್ಕಾರ ಅವಿನಾಶ್ ಅವರೇ
  ಚೆನ್ನಾಗಿ ಬರೆಯುತ್ತೀರಿ ನೀವು. “ಇಪ್ಪತ್ತಾರು ಅಕ್ಷರ” ಗಳ ಭಾಷೆಯಲ್ಲಿ ದಿನವಿಡೀ ಓದಿ ಬರೆಯುವ ಬದುಕಿನಲ್ಲಿ , ಈ ಸುಂದರ ಕನ್ನಡ ಓದಿ ತುಂಬಾ ಸಂತೋಷವಾಯಿತು . (ಏಕೋ ನಿಮ್ಮ URL ಗೆ trackback ಮಾಡೋಕೆ ಆಗ್ತಾ ಇಲ್ಲ )

 13. ಬ್ಲಾಗಿಗೆ ಸ್ವಾಗತ ಬಚೋಡಿ ಅವರೆ,
  (ನಿಮ್ಮ ಹೆಸರು ವಿಶೇಷವಾಗಿದೆ.)
  ಯುಆರ್ಎಲ್ ಸರಿಪಡಿಸಲು ಯತ್ನಿಸುತ್ತೇನೆ.
  ಧನ್ಯವಾದ

LEAVE A REPLY

Please enter your comment!
Please enter your name here