ಗಣಿಧಣಿ, ಸಿಎಂ ಗೆಲ್ಲಲಿಲ್ಲ; ಮತದಾರ, ಬಿಜೆಪಿ ಸೋತರು!

2
346

ಕಳೆದ ಎರಡು ವಾರಗಳಿಂದ ರಾಜ್ಯ ಬಿಜೆಪಿಯ ಮೇಲೆರಗಿದ್ದ ಗಣಿ ಪ್ರವಾಹದಲ್ಲಿ ಸಿಎಂ ಬದುಕು ಮೂರಾಬಟ್ಟೆಯಾಗಿ ಹೋಯಿತು – ಭಾರೀ ಪ್ರವಾಹದಿಂದ ಉತ್ತರ ಕರ್ನಾಟಕದ ಜನತೆಯ ಬದುಕಿನಂತೆ! ಯಡಿಯೂರಪ್ಪ ಇನ್ನು ಮುಂದೆ ಕೇವಲ ‘ಮುಖ್ಯಮಂತ್ರಿ’ ಎಂಬ ಪದವಿಗಷ್ಟೇ ಸೀಮಿತ. ಸುಷ್ಮಾ ಸ್ವರಾಜ್ ನೇತೃತ್ವದಲ್ಲಿ, ಗಣಿ ಧಣಿಯನ್ನೊಳಗೊಂಡ ಸಮನ್ವಯ ಸಮಿತಿಯೇ ಇನ್ನು ಮುಖ್ಯಮಂತ್ರಿಯ ಪವರ್ ಹೊಂದಿರುತ್ತದೆ! ಯಾವುದೇ ಪ್ರಮುಖ ನಿರ್ಣಯಗಳು, ಅಧಿಕಾರಿಗಳ ವರ್ಗಾವಣೆ, ಖಾತೆ ಹಂಚಿಕೆ ಮುಂತಾದವೆಲ್ಲವೂ ಈ ಸಮನ್ವಯ ಸಮಿತಿಯದ್ದೇ ಕೆಲಸ. ನೂರಾರು ಕೇಸ್ ಎದುರಿಸುತ್ತಿರುವವರು ‘ಗೌರವಾನ್ವಿತ’ ಸಚಿವರಾಗಿ ಮುಂದುವರಿಯುತ್ತಾರೆ, ಒಂದೇ ಒಂದು ಕ್ರಿಮಿನಲ್ ಕೇಸ್ ಇಲ್ಲದ ಶೋಭಾ ಕರಂದ್ಲಾಜೆ ಸಚಿವ ಪದವಿ ತ್ಯಾಗ ಮಾಡಬೇಕಾಗುತ್ತದೆ ಮತ್ತು ಇಂಥದ್ದನ್ನೆಲ್ಲಾ ಕರ್ನಾಟಕದ ಜನತೆ ಸಹಿಸಿಕೊಳ್ಳಬೇಕಾಗುತ್ತದೆ!

ಇದರೊಂದಿಗೆ ದಕ್ಷಿಣ ಭಾರತದಲ್ಲಿ ಬಿಜೆಪಿ ಸರಕಾರಕ್ಕೆ ಹೆಬ್ಬಾಗಿಲು ತೆರೆದಿಟ್ಟ ಕರ್ನಾಟಕದಲ್ಲಿಯೂ ಬಿಜೆಪಿ ಭವಿಷ್ಯ ಮಸುಕಾಗುವ ಸಾಧ್ಯತೆಗಳಿಗೆ ಭದ್ರ ಬುನಾದಿಯೊಂದನ್ನು ತೋಡಲಾಗಿದೆ!

ತಥಾಕಥಿತ ‘ಹೈಕಮಾಂಡ್’ ಹೆಸರಿನಲ್ಲಿ ದೆಹಲಿಗೆ ಹೋಗಿ ಸಂಧಾನ ಮಾಡಿಸಿಕೊಂಡು, ಭಿನ್ನಮತದ ಬೆಂಕಿಗೆ ತಣ್ಣೀರು ಹಾಕಿಕೊಂಡು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೊನೆಯಲ್ಲಿ ಹಾಗೂ ಹೀಗಾ ವಾಪಸಾಗಿದ್ದಾರೆ. ಆದರೆ, ಇದು ಸಂಧಾನವಲ್ಲ, ಮುಖ್ಯಮಂತ್ರಿ ಸ್ಥಾನಕ್ಕಾದ ಅವಮಾನ. ರಾಜ್ಯದ ಒಂದು ಶ್ರೇಷ್ಠ ಹುದ್ದೆಯಲ್ಲಿರುವ ಮುಖ್ಯಮಂತ್ರಿ, ತನ್ನ ‘ಭಿನ್ನ ಮತ’ವುಳ್ಳ ಸಚಿವರನ್ನು ‘ಬನ್ನಿ, ಸಮಸ್ಯೆ ಪರಿಹರಿಸಿಕೊಳ್ಳೋಣ’ ಅಂತ ಮಾತುಕತೆಗೆ ಕರೆದರೆ ಅವರು ಬರಲೊಲ್ಲರು, ಬಿಜೆಪಿಯ ಕೇಂದ್ರೀಯ ನಾಯಕಮಣಿಗಳು ನೇರಾನೇರ ಸಂಧಾನ ಮಾಡಿಸಲು ವಿಫಲರಾದರು, ಆದರೆ ‘ತಾಯಿ’ ಸುಷ್ಮಾ ಸ್ವರಾಜ್ ಒಂದು ಮಾತು ಹೇಳಿದ ತಕ್ಷಣ ಬಂದರು, ಮಾತುಕತೆ ನಡೆಸಿದರು, ಸಮಸ್ಯೆ ಪರಿಹಾರವಾಯ್ತು. ಅದು ಹೇಗೆ ಸಾಧ್ಯ?

ರಾಜ್ಯದಲ್ಲಿ ಅವರೇ ಮುಖ್ಯಮಂತ್ರಿ ಎಂದು ಚುನಾವಣೆಯಲ್ಲಿ ಬಿಂಬಿಸಿದ್ದ, ತಮ್ಮ ಮನೆಯೊಡೆಯನೇ ಆಗಿರುವ ಯಡಿಯೂರಪ್ಪರ ಮಾತಿಗೆ ಬೆಲೆ ನೀಡಿಲ್ಲ, ಕೇಂದ್ರದಲ್ಲಿಯೂ ಪಕ್ಷದ ಪರಮೋಚ್ಚ ನಾಯಕ ರಾಜನಾಥ್ ಸಿಂಗ್ ಮಾತಿಗೆ ಸೊಪ್ಪಿಲ್ಲ, ಹಿರಿಯ ತಲೆ ಆಡ್ವಾಣಿ ದನಿಗೆ ಬಲವಿಲ್ಲ, ರಾಜ್ಯದ ಬಿಜೆಪಿ ವ್ಯವಹಾರಗಳ ಉಸ್ತುವಾರಿ ಅರುಣ್ ಜೇಟ್ಲಿಯ ನುಡಿಗೆ ಕಿವಡೆ ಕಾಸಿನ ಕೀಮತ್ತಿಲ್ಲ. ಹಾಗಿದ್ದರೆ ಸುಷ್ಮಾ ಮಾತಿನಿಂದ ಇದು ಹೇಗೆ ಸಾಧ್ಯವಾಯಿತು?

ತಮ್ಮನ ಕೈಯಲ್ಲಿ ಹೊಡೆಸಿಕೊಂಡ ಅಣ್ಣನ ಸ್ಥಿತಿ ಯಡಿಯೂರಪ್ಪರದು. ಅವರೇನೋ ಅವಮಾನ ಸಹಿಸಿಕೊಂಡು ವಾಪಸಾಗಿದ್ದಾರೆ. ರೆಡ್ಡಿಗಳ ಬೇಡಿಕೆಗಳಲ್ಲಿ ಒಂದಾಗಿದ್ದ ಶೋಭಾ ತಲೆದಂಡವೂ ಆಗಿದೆ. ಆದರೆ, ಅಧಿಕಾರಯುತವಾಗಿಯೇ ಮಾತನಾಡುತ್ತಿದ್ದ ಬಿಎಸ್‌ವೈ ಧ್ವನಿ ಮಾತ್ರ ಉಡುಗಿ ಹೋಗಿದೆ. ಇನ್ನು ಮುಂದೆ ಸರಿಯಾಗಿ ಕೆಲಸ ಮಾಡದ ಶಾಸಕರು, ಅಧಿಕಾರಿಗಳ ಮೇಲೆ ಅವರಿಗೆ ಯಾವುದೇ ಹಿಡಿತವಿರಲಾರದು, ಯಾವುದೇ ರೀತಿ ಕ್ಷಿಪ್ರ, ನಿಷ್ಠುರ ಕ್ರಮ ಕೈಗೊಳ್ಳುವುದು ಸಾಧ್ಯವಿಲ್ಲ. ಅದಕ್ಕೆ ‘ತಾಯಿ’ ನೇತೃತ್ವದ ಸಮನ್ವಯ ಸಮಿತಿಯ ಗೋಣು ಅಲ್ಲಾಡಬೇಕು!

ಹೌದು, ಯಾವುದಕ್ಕೂ ಜಗ್ಗದೇ ಇದ್ದ ಈ ಗಣಿ ಧಣಿಗಳು ಕೊನೆಗೊಂದು ಭಾನುವಾರದ ರಜಾ ದಿನದಂದು ಹೇಳಹೆಸರಿಲ್ಲದಂತೆ ‘ಏನಿಲ್ಲ, ಏನಿಲ್ಲ, ನಮ್ಮ ನಿಮ್ಮ ನಡುವೆ ಏನೇನಿಲ್ಲ’ ಅಂತ ಮುಖ್ಯಮಂತ್ರಿ ಜೊತೆ, ‘ತಾಯಿ’ ಸಮ್ಮುಖದಲ್ಲಿ ಕೈ ಕುಲುಕಿದ್ದೆಂತು?

ಬ್ಲ್ಯಾಕ್‌ಮೇಲ್ ರಾಜಕಾರಣ ಮಾಡುವ ಮೂಲಕ, ತಮ್ಮ ರಾಜಕೀಯ ಪ್ರಜ್ಞೆಗಿಂತಲೂ ವ್ಯಾವಹಾರಿಕ ಪ್ರಜ್ಞೆಯನ್ನು ಢಾಳಾಗಿ ಹರಿಯಬಿಡುತ್ತಿರುವ, 50 ಶಾಸಕರ ಬೆಂಬಲ ತಮ್ಮಲ್ಲಿದೆ ಎಂದುಕೊಳ್ಳುತ್ತಾ, ಮುಖ್ಯಮಂತ್ರಿ ಪದವಿಯ ಮೇಲೇ ಕಣ್ಣಿಟ್ಟಿರುವ ಬಳ್ಳಾರಿ ಸುತ್ತಮುತ್ತ ಕೋಟ್ಯಂತರ ರೂಪಾಯಿ ಗಣಿ ಉದ್ದಿಮೆ ನಡೆಸುತ್ತಿರುವ ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ, ಅಣ್ಣ, ಕಂದಾಯ ಸಚಿವ ಕರುಣಾಕರ ರೆಡ್ಡಿ ಮತ್ತು ಸಂಬಂಧಿಕ, ಆರೋಗ್ಯ ಸಚಿವ ಶ್ರೀರಾಮುಲು, ಯಡಿಯೂರಪ್ಪ ಬದಲಾವಣೆ ಹೊರತು, ಉಳಿದೆಲ್ಲ ಬೇಡಿಕೆಗಳನ್ನೂ ಈಡೇರಿಸಿಕೊಂಡಿದ್ದಾರೆ. ಇದಕ್ಕೆಲ್ಲ ಕಾರಣ ‘ತಾಯಿ’ಯ ಕೃಪಾ ಕಟಾಕ್ಷ.

ರಾಜ್ಯ ಬಿಜೆಪಿಗೆ ಹೊಸ ಹೈಕಮಾಂಡ್ – ‘ತಾಯಿ’!

ಗಣಿ ಧಣಿಗಳ ಬ್ಲ್ಯಾಕ್‌ಮೇಲ್ ರಾಜಕಾರಣ ಮತ್ತು ಅದಕ್ಕೆ ಕೇಂದ್ರದಲ್ಲಿರುವ ಬಿಜೆಪಿಯೊಳಗಿನ ಭಿನ್ನಮತದ, ಅವ್ಯವಸ್ಥೆಯ, ಗೊಂದಲ. ಎರಡೂ ಬೆರಕೆಯಾದರೆ ರಾಜಕೀಯ ಪರಿಸ್ಥಿತಿ ಹೀಗಾಗುತ್ತದೆ. ಅಷ್ಟೇ! ತಮ್ಮದೇ ಪಕ್ಷದ ಸರಕಾರವೊಂದು ಉರುಳುವ ಹಂತದಲ್ಲಿರುವಾಗ, ಅದರ ಪರಿಪೂರ್ಣ ಲಾಭ ಪಡೆದುಕೊಳ್ಳುವುದು ಹೇಗೆ ಎಂಬ ನಾಯಕಮಣಿಗಳ ಲೆಕ್ಕಾಚಾರವೂ ಇದರಲ್ಲಿ ಸೇರಿರಬಹುದೆಂಬ ಶಂಕೆ ಥಟ್ಟನೇ ಉದ್ಭವವಾಗಿದೆ.

ಹೈಕಮಾಂಡ್ ಎಂದರೆ ಯಾರು? ಅದರರ್ಥ ಏನು? ಎಂಬ ಪ್ರಶ್ನೆಯೂ ಉದ್ಭವಿಸಲು ಈ ‘ಬ್ಲ್ಯಾಕ್‌ಮೇಲ್ ರಾಜಕಾರಣ’ ಕಾರಣವಾಗಿದೆ. ಬಿಜೆಪಿ ಹೈಕಮಾಂಡ್ ಎಂದರೆ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಅವರೇ? ಲೋಕಸಭೆಯ ಪ್ರತಿಪಕ್ಷ ನಾಯಕ, ಪಕ್ಷದ ಹಿರಿತಲೆ ಲಾಲ್ ಕೃಷ್ಣ ಆಡ್ವಾಣಿಯೇ ಅಥವಾ ಕರ್ನಾಟಕದ ವ್ಯವಹಾರಗಳ ಉಸ್ತುವಾರಿ ವಹಿಸಿಕೊಂಡಿರುವ ಅರುಣ್ ಜೇಟ್ಲಿಯೇ? ಊಹೂಂ… ಅವರ‌್ನ ಬಿಟ್, ಇವರ‌್ನ ಬಿಟ್, ಇವರ‌್ಯಾರ್ ಸುಷ್ಮಾ ಸ್ವರಾಜ್ ಎಂಬ ‘ತಾಯಿ’?

“ನನ್ನನ್ನು ನಿಮ್ಮ ಮನೆಮಗಳೆಂದು ಮನೆ ತುಂಬಿ ಹರಸಿ, ವಿದೇಶೀ ಸೊಸೆಗೆ ಅವಕಾಶ ನೀಡಬೇಡಿ” ಎಂದು ಬಳ್ಳಾರಿಯಲ್ಲಿ ಹತ್ತು ವರ್ಷಗಳ ಹಿಂದೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಕಣಕ್ಕಿಳಿದು, ಕರ್ನಾಟಕ ರಾಜಕಾರಣ ರಂಗದಲ್ಲಿ, ರಾಜ್ಯದ ಜನತೆಯ ಮನದಲ್ಲಿ ಸ್ಥಾನ ಪಡೆಯಲು ಹವಣಿಸಿದ್ದರು ಸುಷ್ಮಾ ಸ್ವರಾಜ್. ಮೈತುಂಬಾ ಸೆರಗುಹೊದ್ದು, ಎರಡೂ ಕೆನ್ನೆಗಳಿಗೆ ಅರಶಿನ ಲೇಪಿಸಿಕೊಂಡು, ದೊಡ್ಡ ಕುಂಕುಮ ತಿಲಕವಿಟ್ಟು, ಮುಡಿ ತುಂಬಾ ಹೂವು ಮುಡಿದು, ನಾನು ಅಚ್ಚ ಭಾರತೀಯ ಮಹಿಳೆ, ನಾನು ಮುತ್ತೈದೆ ಮುತ್ತೈದೆ ಎನ್ನುತ್ತಾ ಚುನಾವಣಾ ಪ್ರಚಾರ ಸಭೆಗಳಲ್ಲಿ, ವಿಧವೆ ಸೋನಿಯಾ ಗಾಂಧಿಯನ್ನು ಅಣಕಿಸಿದ್ದು ಮಾತ್ರವಲ್ಲದೆ, ಸೋನಿಯಾ ಪ್ರಧಾನಿಯಾದರೆ, ತಲೆ ಬೋಳಿಸಿ ಬಿಳಿ ಸೀರೆಯುಡುತ್ತೇನೆಂದು ಹೇಳಿದ್ದ ಈ ಸುಷ್ಮಾ ಸ್ವರಾಜ್ ಮಾಡಿದ್ದು ಭಾರತೀಯ ನಾರಿ ಕುಲಕ್ಕೆ ಅವಮಾನ ಎಂಬ ಕೂಗು ಕೂಡಾ ಎದ್ದಿತ್ತು. ಇದೀಗ ಕರ್ನಾಟಕದ ಬಿಜೆಪಿಯ ಪಾಲಿಗೆ ಹೊಸ ‘ಅಧಿ ನಾಯಕಿ’ಯಾಗಿ ಮೂಡಿಬಂದಿದ್ದಾರೆ, ಅಥವಾ ಬಿಂಬಿಸಿಕೊಂಡಿದ್ದಾರೆ!

ಬಳ್ಳಾರಿಯಲ್ಲಿ ಚುನಾವಣೆಗೆ ಸ್ಪರ್ಧಿಸಲು ಇದೇ ಗಣಿ ಧಣಿಗಳು ಸುಷ್ಮಾಗೆ ಪರಿಪೂರ್ಣ ಸಹಕಾರ ನೀಡಿದ್ದರು. ಅಂದಿನಿಂದ ಈ ಗಣಿ ರೆಡ್ಡಿಗಳ ಮತ್ತು ಸುಷ್ಮಾ ಸಂಬಂಧ ಆತ್ಮೀಯವಾಗಿ ಬೆಳೆದಿತ್ತು. ರೆಡ್ಡಿಗಳು ಕೂಡ ಸುಷ್ಮಾರನ್ನು ‘ತಾಯೀ’ ಎಂದೇ ಸಂಬೋಧಿಸುತ್ತಾರೆ. ಅಂದಿನಿಂದ ಕರ್ನಾಟಕಕ್ಕೆ ಆಗೀಗ್ಗೆ ಭೇಟಿ ನೀಡುತ್ತಿದ್ದ ಸುಷ್ಮಾ, ವರ ಮಹಾಲಕ್ಷ್ಮೀ ಪೂಜೆಗೆ ಅಲ್ಲಲ್ಲಿ, ವಿಶೇಷವಾಗಿ ಬಳ್ಳಾರಿಯಲ್ಲಿ ಪ್ರತಿವರ್ಷ ಹಾಜರಾಗುತ್ತಿದ್ದರು, ಅಚ್ಚ ಭಾರತೀಯ ನಾರಿ ಎಂಬಂತಹ ಬಿರುದಿನೊಂದಿಗೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಮಧ್ಯಪ್ರದೇಶದ ವಿದಿಶಾ ಕ್ಷೇತ್ರದಲ್ಲಿ ಸುಷ್ಮಾ ಸೋಲಿನ ಆತಂಕ ಎದುರಿಸುತ್ತಿದ್ದಾಗ, ಎದುರಾಳಿ ಕಾಂಗ್ರೆಸ್ ಅಭ್ಯರ್ಥಿಯು ನಾಮಪತ್ರ ಹಿಂತೆಗೆತದಲ್ಲಿಯೂ ಈ ಗಣಿ ಧಣಿಗಳ ಕೈವಾಡವಿತ್ತು ಎಂಬುದು ಮಧ್ಯಪ್ರದೇಶ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿರುವ ಮಾತು.

ಈಗ ಕರ್ನಾಟಕ ಸಮಸ್ಯೆಯನ್ನು “ಕ್ಷಣ ಮಾತ್ರದಲ್ಲಿ” ಪರಿಹರಿಸಿದ ಖ್ಯಾತಿ ಹೊಂದಿರುವ ಸುಷ್ಮಾ ಸ್ವರಾಜ್, ರಾಜ್ಯ ಬಿಜೆಪಿಗೆ ಅಘೋಷಿತವಾಗಿ ಹೊಸ ಉಸ್ತುವಾರಿ.

ಆಪರೇಶನ್ ಕಮಲ ಫಲ?

ರಾಜ್ಯದಲ್ಲಿ ನಡೆದ ‘ಆಪರೇಶನ್ ಕಮಲ’ ಈಗ ಫಲ ಕೊಡುತ್ತಿದೆ. 2008 ಮೇ ಚುನಾವಣೆಗಳಲ್ಲಿ 110 ಸ್ಥಾನ ಗೆದ್ದಿದ್ದ ಬಿಜೆಪಿಗೆ ಬಹುಮತಕ್ಕೆ ಬೇಕಿದ್ದುದು ಇನ್ನು ಮೂರೇ ಸ್ಥಾನಗಳು. ಇದಕ್ಕಾಗಿ ಆರು ಸ್ವತಂತ್ರ ಅಭ್ಯರ್ಥಿಗಳ ಬೆಂಬಲಕ್ಕೆ ಗಣಿ ಧಣಿಗಳ ಸಹಾಯ ಪಡೆದಿದ್ದ ಯಡಿಯೂರಪ್ಪ, ಸರಕಾರಕ್ಕೆ ಅಗತ್ಯ ಬೇಕಿರುವ ಸಂಖ್ಯಾಬಲ ಕೂಡಿಸಿಕೊಂಡು ಆಗಲೇ ಸುಮ್ಮನಿದ್ದು ಬಿಡಬಹುದಿತ್ತು.

ಆದರೆ, ಈ ಸಂಖ್ಯಾಬಲವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವ ಧಾವಂತದಲ್ಲಿ ಸರಣಿ ಅಪರೇಶನ್ ಕಮಲ ಮಾಡಿದ ಈ ಗಣಿ ಧಣಿಗಳು, ಬಳ್ಳಾರಿ ಸುತ್ತಮುತ್ತ ಮತ್ತು ಆಂಧ್ರದ ಆಸುಪಾಸಿನಲ್ಲಿ ಭೂಗರ್ಭವನ್ನೇ ಕೆದಕಿ ಗಣಿ ಅಗೆಯುವಂತೆ, ಬೇರೆ ಪಕ್ಷಗಳ ಶಾಸಕರನ್ನೆಲ್ಲಾ ಅಗೆದಗೆದು ತಂದು ತಂದು ಸುರುವಿದರು. ಅವರಿಗೆ ಮಂತ್ರಿಗಿರಿ ಕೊಡಿಸಿದರು.

ಇದರಿಂದಾಗಿ ಪಕ್ಷದೊಳಗೆ, ಸರಕಾರದೊಳಗೆ ಗಣಿ ರೆಡ್ಡಿಗಳ ವರ್ಚಸ್ಸು, ಪ್ರಭಾವ ಹೆಚ್ಚಿಸಿ, ಯಡಿಯೂರಪ್ಪ ಅವರ ತಲೆಗಿಂತಲೂ ಮೇಲೆ ಬೆಳೆದುಬಿಟ್ಟಿತು. ಯಡಿಯೂರಪ್ಪರೇ ಮುಖ್ಯಮಂತ್ರಿ ಎಂದು ಮತ ಯಾಚಿಸಿ ಗೆದ್ದಿದ್ದ ಇದೇ ರೆಡ್ಡಿ ಮತ್ತವರ 50ರಷ್ಟಿದೆ ಎಂದು ಹೇಳಲಾಗುತ್ತಿರುವ ಶಾಸಕರ ಗಡಣ, ಈಗ ಅವರನ್ನೇ ತೆಗೆಯಿರಿ ಎಂಬಷ್ಟರ ಮಟ್ಟಿಗೆ ಬೆಳೆದದ್ದು ಇದೇ ಹಣ ಬಲದಿಂದ.

ಸಮಸ್ಯೆಯೇ ಪರಿಹಾರ!

ಇದುವರೆಗೆ ‘ಶಿಸ್ತಿನ ಪಕ್ಷ’ ಎಂಬ ಹೆಸರು ಹೊತ್ತುಕೊಂಡಿದ್ದ ಬಿಜೆಪಿ, ಜಿನ್ನಾ ಬಗ್ಗೆ ಒಂದು ಪುಸ್ತಕ ಬರೆದಿದ್ದಕ್ಕಾಗಿ ಜಸ್ವಂತ್ ಸಿಂಗ್ ಅವರಂತಹ ನಿಷ್ಠಾವಂತ ಕಾರ್ಯಕರ್ತರನ್ನು ಪಕ್ಷದಿಂದಲೇ ಉಚ್ಚಾಟಿಸಿದ್ದ ಬಿಜೆಪಿ, ಇಡೀ ಸರಕಾರವನ್ನೇ ಅಲ್ಲಾಡಿಸುತ್ತಿದ್ದ ರೆಡ್ಡಿ ಸಹೋದರರ ಅಶಿಸ್ತಿನ ನಡವಳಿಕೆ ವಿರುದ್ಧ ಕ್ರಮವನ್ನೇಕೆ ತೆಗೆದುಕೊಳ್ಳಲಾರದೇ ಹೋಯಿತು?

ಇದು ಕೇಂದ್ರೀಯ ನಾಯಕತ್ವದ ಎಡಬಿಡಂಗಿತನ. ಯಡಿಯೂರಪ್ಪ ಕೈಗೆ ಪೂರ್ಣಾಧಿಕಾರ ಕೊಡುವ ಬದಲು, ರಾಜಕೀಯ ಬ್ಲ್ಯಾಕ್‌ಮೇಲಿಂಗ್‌ಗೆ ಮತ್ತಷ್ಟು ಅವಕಾಶ ಮಾಡಿಕೊಟ್ಟು, ಯಡಿಯೂರಪ್ಪ ಅವರ ಕೈ ಕಟ್ಟಿ ಹಾಕುವ ಮೂಲಕ, ರಾಜ್ಯದ ಜನತೆಯನ್ನೇ ಕತ್ತಲಲ್ಲಿಟ್ಟಿತು ಬಿಜೆಪಿ. ಅಶಿಸ್ತು ಎಂದು ಬಣ್ಣಿಸಲು ಸಕಲ ಪದಗಳು, ಸರ್ವ ಅರ್ಹತೆಗಳೂ ಇರುವ ‘ಮಹಾನ್ ಜನಸೇವಾ ಕಾರ್ಯ’ ಮಾಡಿದ್ದ ಈ ರೆಡ್ಡಿಗಳನ್ನು ಮೊದಲು ಸಚಿವ ಪಟ್ಟದಿಂದ ಕಿತ್ತು ಹಾಕಿ, ಆ ಮೇಲೆ ವಿಚಾರಣೆ ನಡೆಸಬಹುದಿತ್ತಲ್ಲ… ಹಾಗೆ ಯಾಕೆ ಆಗಲಿಲ್ಲ?

ಯಾವುದೇ ಶಾಸಕರು ಮತ್ತೊಂದು ಚುನಾವಣೆಗೆ ಸಿದ್ಧರಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಹೀಗಿರುವಾಗ, ವಿಧಾನಸಭೆ ವಿಸರ್ಜನೆಗೂ ಸಿದ್ಧ, ಆದರೆ ಈ ರೀತಿಯ ಅಶಿಸ್ತು ಇರಬಾರದು ಎಂಬ ದಿಟ್ಟ ಎಚ್ಚರಿಕೆ ನೀಡಲು ಬಿಜೆಪಿಯ ಕೇಂದ್ರೀಯ ನಾಯಕತ್ವಕ್ಕೆ ಸಾಧ್ಯವಾಗಲಿಲ್ಲವೇಕೆ? ಈಗ ಸಮಸ್ಯೆಗೆ ಸಮಸ್ಯೆಯನ್ನೇ ಪರಿಹಾರ ಎಂದು ‘ಕಂಡು ಹುಡುಕಿರುವುದು’ ಖಂಡಿತವಾಗಿಯೂ ರಾಜ್ಯದ ಹಿತದೃಷ್ಟಿಯಿಂದ ಒಳ್ಳೆಯದಲ್ಲ.

ಈ ಸಂಧಾನವಲ್ಲದ ಸಂಧಾನದ ಹಿಂದಿನ ಮಸಲತ್ತೇನು?

ಸಾಂವಿಧಾನಿಕ ಅಧಿಕಾರ ಇದ್ದರೂ ಮುಖ್ಯಮಂತ್ರಿ ಯಡಿಯೂರಪ್ಪ ಈ ರೀತಿ ಯಾಕೆ ಹತಾಶರಾದರು? ಎಲ್ಲ ಅಧಿಕಾರವಿದ್ದರೂ ರೆಡ್ಡಿಗಳ ಈ ಬ್ಲ್ಯಾಕ್‌ಮೇಲ್ ಎದುರು ಸೋತು, ನಿರಾಶರಾಗಿ, ‘ಅಬ್ಬ, ಹೇಗಾದರೂ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡೆ’ ಎಂಬಂತಹ ಪುನೀತ ಭಾವ ಹೊಂದಿದರು? ಹೇಳಿ ಕೇಳಿ ನಿಷ್ಠುರ ನಡೆ-ನುಡಿಯ ಮುಖ್ಯಮಂತ್ರಿಯೇಕೆ ಇಷ್ಟು ದುರ್ಬಲರಾದರು? ಈ ಪ್ರಶ್ನೆಗಳು ಪ್ರಶ್ನೆಯಾಗಿಯೇ ಉಳಿದಿವೆ. ಒಟ್ಟಿನಲ್ಲಿ ಈ ರಾಜಿಯಿಲ್ಲದ, ಒಳಗೊಳಗೇ ಕುದಿಯುವಿಕೆ ಮುಂದುವರಿಸಲು ಅವಕಾಶ ಮಾಡಿಕೊಟ್ಟ ಸಂಧಾನದ ಹಿಂದಿರುವ ನಿಜವಾದ ಮಸಲತ್ತೇನಿತ್ತು? ಎಂಬುದನ್ನು ತಿಳಿಯಲು ರಾಜ್ಯದ ಮತದಾರರಿಗೆ ಅಧಿಕಾರವಿದೆ, ಹಕ್ಕಿದೆ.

ಒಂದಷ್ಟು ಹಣ ಬಲ ಹಿಡಿದುಕೊಂಡು, ಇಡೀ ರಾಜ್ಯ ಸರಕಾರವೊಂದನ್ನು ಬಹುತೇಕ ಎರಡು ವಾರಗಳ ಕಾಲ ನಿಷ್ಕ್ರಿಯವಾಗುವಂತೆ ಮಾಡಿದ್ದು ಸಣ್ಣ ‘ಸಾಧನೆ’ಯೇನಲ್ಲ. ಅತ್ತಕಡೆಯಿಂದ ಪ್ರಧಾನ ಪ್ರತಿಪಕ್ಷವಾಗಿರುವ ಕಾಂಗ್ರೆಸ್‌ನ ನಿಗೂಢವಾದ ‘ಮೌನ’ವೇ ಎಂದು ಹೇಳಬಹುದಾದ ಪ್ರತಿಕ್ರಿಯೆ, ಜೆಡಿಎಸ್‌ನ ‘ಎಚ್ಚರಿಕೆಯ’ ಪ್ರತಿಸ್ಪಂದನೆ, ಪ್ರವಾಹ ಸಂತ್ರಸ್ತರು ಅಶನ-ವಸನಕ್ಕಾಗಿ ಆಗಸಕ್ಕೆ ಕೈಮುಗಿದು ಬಯಲಲ್ಲೇ ಗೋಗರೆಯುತ್ತಿದ್ದ ಹೊತ್ತಿನಲ್ಲಿ ರಾಜ್ಯ ಸರಕಾರವೇ ರೆಡ್ಡಿಗಳ ಕೈಯಲ್ಲಿ ನಲುಗುತ್ತಿದ್ದಾಗ, ದಿವ್ಯ ಮೌನ ವಹಿಸಿದ್ದ ರಾಜ್ಯಪಾಲರು… ಇವೆಲ್ಲ ಬೆಳವಣಿಗೆಗಳನ್ನು ಕಂಡಾಗ ಖಂಡಿತಾ ಇದರ ಹಿಂದೆ ಏನೋ ಇದೆ ಎಂದು ಅನ್ನಿಸುತ್ತಿಲ್ಲವೇ?

ಕೇಂದ್ರೀಯ ಮಟ್ಟದಲ್ಲಿಯೂ ಬಿಜೆಪಿಯ ಪರಿಸ್ಥಿತಿ ಗೊಂದಲದ ಮುದ್ದೆ. ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಆಡ್ವಾಣಿ ಅವರು ಈ ವರ್ಷಾಂತ್ಯದಲ್ಲಿ ಬಿಜೆಪಿಗೆ ಹೊಸ ಅಧ್ಯಕ್ಷನ ಆಯ್ಕೆಯ ಬಳಿಕ ರಾಜೀನಾಮೆ ನೀಡುತ್ತಾರೆ ಎಂಬ ಸುಳಿವಿದೆ. ವಯಸ್ಸಾಯಿತು, ರಾಜಕೀಯ ಸಾಕು ಎಂಬ ಇರಾದೆ ಇದ್ದಿರಬಹುದು. ಈಗ ಆಡ್ವಾಣಿಯವರ ಸ್ಥಾನ ಮತ್ತು ರಾಜನಾಥ್ ಸಿಂಗ್ ಅವರ ಸ್ಥಾನ ತುಂಬಲು ಪಕ್ಷದಲ್ಲಿ ಒಳಗಿಂದೊಳಗೆ ಮೇಲಾಟ ಆರಂಭವಾಗಿದೆ. ಇದುವರೆಗೆ ರಾಜ್ಯದ ಉಸ್ತುವಾರಿ ವಹಿಸಿದ್ದ ಅರುಣ್ ಜೇಟ್ಲಿ ಮತ್ತು ಸುಷ್ಮಾ ನಡುವಿನ ವಿರಸ ಹೊಸದೇನಲ್ಲ. ಅವರಿಬ್ಬರೂ ಭವಿಷ್ಯದ ನಾಯಕರು ಎಂದೂ ಕರೆಯಲಾಗುತ್ತದೆ.

ಹೀಗಾಗಿ ದಕ್ಷಿಣ ಭಾರತದ ಏಕೈಕ ಬಿಜೆಪಿ ಸರಕಾರದ ಮೇಲೆ ಹಿಡಿತ ಸಾಧಿಸಿದರೆ, ತನ್ನ ‘ಆ’ ಮಹತ್ವಾಕಾಂಕ್ಷೆಗೆ ಪೂರಕ ಎಂದು ಸುಷ್ಮಾ ಈಗಿಂದೀಗಲೇ ಇಟ್ಟಿಗೆ ಕಟ್ಟುತ್ತಿದ್ದಾರೆಯೇ? ಬಿಜೆಪಿ ಅಧಿಕಾರವಿರುವ ಗುಜರಾತ್ ಬಿಡಿ, ಅಲ್ಲಿ ನರೇಂದ್ರ ಮೋದಿ, ಆಡ್ವಾಣಿ ಇದ್ದಾರೆ, ಏನೂ ಮಾಡಲಾಗದು. ಇನ್ನು ಮಧ್ಯಪ್ರದೇಶ, ಅದು ತನ್ನದೇ ರಾಜ್ಯ. ಕರ್ನಾಟಕವನ್ನೂ ಸೆಳೆದುಕೊಂಡರೆ, ತನಗೇ ಹೆಚ್ಚು ಬಲ ಎಂಬ ಲೆಕ್ಕಾಚಾರವೇ ಕಾರಣವೇ? ಒಂದು ರಾಜ್ಯದ, ಸರಕಾರದ ಅಸ್ತಿತ್ವದ ಸಮಸ್ಯೆಯನ್ನು, ತನ್ನ ಪರವಾಗಿ ತಿರುಗಿಸಿಕೊಳ್ಳುವುದು ಹೇಗೆ ಎಂಬ ಪ್ರಶ್ನೆಯೇನಾದರೂ ಬಂದರೆ ಇದಕ್ಕೆ ಕರ್ನಾಟಕದ ಪ್ರಹಸನ ಉತ್ತರವಾದೀತೇ?

ಗಣಿಧಣಿಗಳೂ ಗೆಲ್ಲಲಿಲ್ಲ, ಸಿಎಮ್ಮೂ ಗೆಲ್ಲಲಿಲ್ಲ, ಬಿಜೆಪಿ ಸೋತಿದೆ…

ಇಷ್ಟೆಲ್ಲ ಪ್ರಶ್ನೆಗಳ ನಡುವೆ, ‘ಇದೆಲ್ಲ ನಾಟಕ’ ಎಂದು ಕಾಂಗ್ರೆಸ್ ರಾಜ್ಯಾಧ್ಯಕ್ಷ ಆರ್.ವಿ.ದೇಶಪಾಂಡೆ ಹೇಳಿರುವುದರಲ್ಲಿ ಕೂಡ ಹುರುಳಿಲ್ಲದಿಲ್ಲ ಎಂಬ ಅನಿಸಿಕೆ ಬರುವುದಿಲ್ಲವೇ?

ಮಾಜಿ ಸಚಿವ, ಹಾಲಿ ಕಾಂಗ್ರೆಸ್ ಸಂಸದ ಎಚ್.ವಿಶ್ವನಾಥ್ ಅವರ ಹೇಳಿಕೆಯನ್ನು ಗಮನಿಸಬೇಕು. ‘ರೆಡ್ಡಿಗಳನ್ನು ಮಟ್ಟಹಾಕಲೇಬೇಕು. ಇಲ್ಲದಿದ್ದಲ್ಲಿ ರಾಜ್ಯಕ್ಕೆ ಉಳಿಗಾಲವಿಲ್ಲ. ಈ ಕ್ರಮಕ್ಕೆ ರಾಜ್ಯ ಸರಕಾರವನ್ನು ಎಲ್ಲರೂ ಬೆಂಬಲಿಸಬೇಕು’ ಎಂದವರು ಕಳೆದ ವಾರಾಂತ್ಯ ಮೈಸೂರಿನಲ್ಲಿ ನೀಡಿದ್ದರು. ಇದು ನೈತಿಕ ರಾಜಕಾರಣ. ರಾಜ್ಯದ ಅಭಿವೃದ್ಧಿ ಬಗೆಗಿನ ಚಿಂತನೆ.

ಮಾತೆತ್ತಿದರೆ ‘ನಮಗೆ ಜನ ಹಿತ ಮುಖ್ಯ, ಜನಸೇವೆಯೇ ನಮ್ಮ ಗುರಿ’ ಎಂಬಂತಹಾ ವಾಕ್ಯಗಳನ್ನು ಉದುರಿಸುತ್ತಿದ್ದ ರೆಡ್ಡಿ ಸಹೋದರರು, ಇದುವರೆಗೆ ಯಾವುದೇ ಭ್ರಷ್ಟಾಚಾರ ಪ್ರಕರಣಗಳು ದಾಖಲಾಗದಿರುವ ಶೋಭಾ ಕರಂದ್ಲಾಜೆಯನ್ನು ಸಂಪುಟದಿಂದ ಕೈಬಿಡುವಂತೆ ಹಠ ಹೂಡಿದ್ದು, ಸ್ವತಃ ಮುಖ್ಯಮಂತ್ರಿಯ ಪ್ರಧಾನ ಕಾರ್ಯದರ್ಶಿ ವಿ.ಪಿ.ಬಳಿಗಾರ್ ಅವರನ್ನು ಎತ್ತಂಗಡಿ ಮಾಡಿಸುವಂತೆ ಒತ್ತಾಯಿಸಿದ್ದು, ಅದಿರು ಲಾರಿಗಳ ಮೇಲೆ ತಲಾ 1000 ರೂ. ಸುಂಕ ಹೇರಿದ್ದನ್ನು ವಿರೋಧಿಸಿದ್ದು (ಇದೇ ಹಣವನ್ನು ಅದಿರು ಲಾರಿಗಳು ಕುಲಗೆಡಿಸಿದ್ದ ರಸ್ತೆಗಳ ಅಭಿವೃದ್ಧಿಗೋ, ಅಥವಾ ಅವು ಎಸಗುವ ನಿತ್ಯ ಅಪಘಾತದಲ್ಲಿ ಕೊಂಚ ಪರಿಹಾರ ಹಣಕ್ಕೋ ಬಳಸಬಹುದು!) ಯಾವ ‘ಜನ ಹಿತ’ ಕಾರ್ಯ?

ಲೋಕಸಭೆ ಚುನಾವಣೆಯ ಸೋಲಿನ ಬಳಿಕವೂ ಬಿಜೆಪಿ ಯಾವುದೇ ರಾಜ್ಯಗಳಲ್ಲಿ ಚೇತರಿಸಿಕೊಳ್ಳದಿರುವುದಕ್ಕೆ ಪಕ್ಷದ ಇಂಥದ್ದೇ ಕ್ರಮಗಳು ಕಾರಣ ಎಂಬುದು ಅದರ ಕೇಂದ್ರೀಯ ನಾಯಕತ್ವದ ಅರಿವಿಗೆ ಬರುವಾಗ ಬಹುಶಃ ಸಮಯ ಮೀರಿರುತ್ತದೆ!

ಒಟ್ಟಿನಲ್ಲಿ, ಈ ರೀತಿ ಲಾಬಿ ನಡೆಸುವ, ಭೂಮಿಯ ಗರ್ಭ ಅಗೆಯುತ್ತಾ ಜೇಬು ತುಂಬಿಕೊಳ್ಳುವ, ನಾನೇ ಜನರ ಉದ್ಧಾರಕ ಎನ್ನುತ್ತಾ ಗರಿ ಗರಿ ನೋಟು ಹಂಚುವ ರಾಜಕಾರಣಿಗಳಾಗಿ ಪರಿವರ್ತನೆಗೊಳ್ಳುವ ಕಟ್ಟಾ ಉದ್ಯಮಿಗಳಿಗೆ, ಅವರ ಜನಮರುಳು ಮಾತುಗಳಿಗೆ, ಹೆಂಡ-ಸೀರೆ-ನೋಟಿಗೆ ಜನರು ಮರುಳಾಗುತ್ತಿರುವವರೆಗೆ ಮತದಾರನಿಗೆ ಮಾತ್ರ ಇದೇ ಅವಸ್ಥೆ ಕಟ್ಟಿಟ್ಟ ಬುತ್ತಿ.
[ವೆಬ್‌ದುನಿಯಾದಲ್ಲಿ ಪ್ರಕಟವಾಗಿದೆ]

2 COMMENTS

  1. ಸರಿಯಾಗಿ ಹೇಳಿದಿರ.
    ರೆಡ್ಡಿಗಳು ಅಥವಾ ಅವರ ಬೆಂಬಲಿಗರು ಯಾವ ಪಕ್ಷಕ್ಕೂ ಬದ್ದರಲ್ಲ. ಅವರಿಗೆ ಬಿ ಜೆ ಪಿ ಇಲ್ಲ ಅಂದರೆ ಕಾಂಗ್ರೆಸ್ಸ್ ಆಗುತ್ತೆ. ಯಾವುದೇ ಪಕ್ಷ ಇಲ್ಲ ಅಂದರು ಅವರು ಗೌಡರ ಜೊತೆ seruvudannu ತಳ್ಳಿ ಹಾಕುವಂತಿಲ್ಲ. ಇಲ್ಲಿ ಎಲ್ಲವು ಸಾದ್ಯ. ರೆಡ್ಡಿಗಳ ವ್ಯಾವಹಾರಿಕ ಪಾರ್ಟ್ನರ್ ಸತ್ತ ವೈ ಎಸ ಅರ್ ರೆಡ್ಡಿ ಮಗ ಜಗನ ಮೋಹನನ ಗಲಾಟೆಯನ್ನು ಸೋನಿಯಾ ಹೇಗೆ ಮತ್ತ ಹಾಕಿದಳು ಮತ್ತು ಅದೇ ರೀತಿಯ ನಿರ್ಣಯ ಅಥವಾ ತಂತ್ರಗಳು ಬಿ ಜೆ ಪಿ ಯಾಕೆ ಮಾಡಲಿಲ್ಲ ಅನ್ನುವುದು ಪ್ರಶ್ನೆ.

    ಇಲ್ಲಿ ಪ್ರತಿ ಪಕ್ಷಗಳು ವಿರೋದಿಸಬೇಕಿದ್ದ ಸಂದರ್ಭದಲ್ಲಿ ದೆಹಲಿಯಲ್ಲಿ ಕೂತು ಬಿ ಜೆ ಪಿ ಒಡೆದು ಹೋದರೆ ಅಧಿಕಾರ ಸಿಗುತ್ತದ ಅಂತ ಚಿಂತಿಸುತ್ತಿದರು. ಪ್ರಜಾ ಪ್ರಭುತ್ವದ ವೈಪಲ್ಯ ಹೀಗೆ ಸಾಗಿದೆ.

    ಒಳ್ಳೆಯ ಬರಹ.

  2. ಬಾಲು ಅವರೆ,

    ಹಣವಿದ್ದಲ್ಲಿ ರೆಡ್ಡಿಗಳಿರುತ್ತಾರೆ ಎಂಬ ಮಾತು ಕೂಡ ಅಷ್ಟೇ ಸತ್ಯ. ವೈಎಸ್ಆರ್ ಸಾವು ಅವರಿಗೆ ಖಂಡಿತವಾಗಿಯೂ ತುಂಬಲಾರದ ನಷ್ಟವಾಗಿ ಪರಿಣಮಿಸುತ್ತಿದೆ.

    ಧನ್ಯವಾದಗಳು

LEAVE A REPLY

Please enter your comment!
Please enter your name here