ಕನ್ನಡ ಪತ್ರಿಕಾರಂಗದಲ್ಲಿ ಬಿರುಗಾಳಿ ಎದ್ದಿದೆ!

0
295

ಕನ್ನಡದಲ್ಲಿ ಬದಲಾವಣೆಯ ಗಾಳಿಕನ್ನಡ ಪತ್ರಿಕಾ ಲೋಕದಲ್ಲಿ ಸಾಕಷ್ಟು ತಲ್ಲಣಗಳಾಗಿವೆ, ಆಗುತ್ತಲೇ ಇವೆ. ಇವುಗಳ ಹೊರತಾಗಿಯೂ ಪತ್ರಿಕೆಗಳು ಬೆಳೆದು ನಿಂತಿವೆ, ಓದುಗ ಸಮಾಧಾನಿಯಾಗಿದ್ದಾನೆ. ಬದಲಾವಣೆಯ ಸುಳಿಗಾಳಿ ಬೀಸುತ್ತಿದೆ. ಆರೋಗ್ಯಕರ ಸ್ಪರ್ಧಾ ಲೋಕವೊಂದು ತೆರೆದುಕೊಂಡಿದೆ. ಇಂದು ಒಂದು ಪತ್ರಿಕೆಯಲ್ಲಿ ಸಂಪಾದಕರಾಗಿದ್ದವರು ನಾಳೆ ಇನ್ನೊಂದು ಪತ್ರಿಕೆಗೋ, ಟಿವಿ ಚಾನೆಲ್‌ಗೋ ಸಂಪಾದಕರಾದರೆ ಯಾರೂ ಮೂಗಿನ ಮೇಲೆ ಬೆರಳಿಡಬೇಕಿಲ್ಲ. ಅಂಥದ್ದರಲ್ಲಿ ಇತ್ತೀಚೆಗೆ ಭಾರೀ ಸುದ್ದಿ ಮಾಡಿದ್ದು ನಂ.1 ಕನ್ನಡ ದೈನಿಕ ಎಂಬ ಹೆಗ್ಗಳಿಕೆ ಪಡೆದುಕೊಂಡಿದ್ದ ವಿಜಯ ಕರ್ನಾಟಕ ಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್ ಅವರ ಸ್ಥಾನಾಂತರ.

ಅವರಿಂದು ಕನ್ನಡ ಪ್ರಭಕ್ಕೆ ಸಂಪಾದಕರು. ಅವರೊಂದಿಗೆ ವಿಜಯ ಕರ್ನಾಟಕದಲ್ಲಿ ಸಾಕಷ್ಟು ಕೆಲಸ ಮಾಡಿ ಸಾಕಷ್ಟು ಸುದ್ದಿ, ಸದ್ದು ಮಾಡಿದ್ದ ಪಿ.ತ್ಯಾಗರಾಜ್, ಪ್ರತಾಪಸಿಂಹ, ರಾಧಾಕೃಷ್ಣ ಭಡ್ತಿ ಮತ್ತು ವಿನಾಯಕ ಭಟ್ ಅವರೆಲ್ಲರೂ ಕನ್ನಡಪ್ರಭದೊಳಗೆ ಸೇರಿಕೊಂಡುಬಿಟ್ಟಿದ್ದಾರೆ. ವಾಸ್ತವವಾಗಿ, ಕನ್ನಡ ಪತ್ರಿಕಾ ಲೋಕದಲ್ಲಿ ವಿಶ್ವೇಶ್ವರ ಭಟ್ಟರು ಹೊಸತನದ ಸುಳಿಗಾಳಿ ಬೀಸಿದವರು; ಸದಾ ಪ್ರಯೋಗಶೀಲರೆಂದೇ ಓದುಗರು ಅವರನ್ನು ಪರಿಗಣಿಸುತ್ತಾರೆ. ಓದುಗರಿಗೂ ಸಂಪಾದಕರಿಗೂ ಇದ್ದ ನಡುವಿನ ಕಂದಕವನ್ನು ಕುಗ್ಗಿಸಿದವರು ಅವರೇ ಎಂದರೆ ತಪ್ಪಾಗಲಾರದು.

ಕನ್ನಡ ಪ್ರಭ
ಕನ್ನಡ ಪ್ರಭ ಸೇರಿದ ಬಳಿಕವೂ ಅವರೊಳಗಿನ ಹೊಸತನದ ತುಡಿತಕ್ಕೆ ಇದೀಗ ಆನ್‌ಲೈನ್ ಓದುಗರ ನಾಡಿ ಮಿಡಿತವೂ ಸೇರಿಕೊಂಡಿದೆ. ಫೆ.24ರಂದು ಮುಖ್ಯಮಂತ್ರಿ ಯಡಿಯೂರಪ್ಪ ಮಂಡಿಸಿದ ಬಜೆಟ್, ನಂತರ ಫೆ.25ರಂದು ಮಮತಾ ಬ್ಯಾನರ್ಜಿ ಮಂಡಿಸಿದ ರೈಲ್ವೇ ಬಜೆಟ್ ಹಾಗೂ ಫೆ.28ರಂದು ಪ್ರಣಬ್ ಮುಖರ್ಜಿ ಮಂಡಿಸಿದ ರೈಲ್ವೇ ಬಜೆಟ್‌ಗೆ ಓದುಗರಿಂದಲೇ ಮುಖಪುಟ ಶೀರ್ಷಿಕೆ ಬರೆಸುವ ಅನ್ಯತ್ರ ಅಲಭ್ಯವಿದ್ದ ಹೊಸ ಪ್ರಯೋಗವೊಂದು ಸಕ್ಸೆಸ್ ಆಗಿದೆ. ವಿಜಯ ಕರ್ನಾಟಕದಲ್ಲಿ ತಮ್ಮದೇ ಆದ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದ ಮತ್ತು ಪತ್ರಿಕೆ ಓದದವರಿಗೂ ಓದಿನ ಹುಚ್ಚು ಹಿಡಿಸಿದ್ದ ವಿಶ್ವೇಶ್ವರ ಭಟ್ಟರು, ತಮ್ಮ ಆಪ್ತರನ್ನಷ್ಟೇ ಕನ್ನಡ ಪ್ರಭಕ್ಕೆ ಕರೆತಂದಿದ್ದಲ್ಲದೆ, ಓದುಗರನ್ನೂ ಸೆಳೆಯುತ್ತಾರೆಯೇ ಎಂಬುದಕ್ಕೆ ಎಬಿಸಿ (ಆಡಿಟ್ ಬ್ಯುರೋ ಆಫ್ ಸರ್ಕ್ಯುಲೇಶನ್) ವರದಿಯನ್ನೇ ನಿರೀಕ್ಷಿಸಬೇಕಾಗಿದೆ.

ಕೃಷಿ ಬಜೆಟನ್ನೇ ತೆಗೆದುಕೊಳ್ಳಿ. ಮರುದಿನದ ಕನ್ನಡ ಪ್ರಭದ ಆರು ಕಾಲಂ ಬ್ಯಾನರ್ ಹೆಡ್ಡಿಂಗ್ ‘ಯಡಿಯೂ ರೈತ ಪ್ಪ’ ಅಂತ. ಇದು ಓದುಗರೇ ಕೊಟ್ಟ ತಲೆಬರಹ. ಮರುದಿನದ ರೈಲ್ವೇ ಬಜೆಟ್‌ನಲ್ಲಿ ಕರ್ನಾಟಕಕ್ಕೆ ರೈಲ್ವೇ ಯೋಜನೆಗಳ ಅನಾಸ್ಥೆಯ ಕುರಿತು ಬೆಳಕು ಚೆಲ್ಲುವ ‘ಪ್ರಯಾಣಿಕರೇ ದಯವಿಟ್ಟು ಗಮನಿಸಿ: ರಾಜಕಾರಣ ದೋಷದಿಂದ ಕರ್ನಾಟಕಕ್ಕೆ ಬರಬೇಕಿದ್ದ ರೈಲುಗಳು ತಡವಾಗಿ ಬರಲಿವೆ’ ಎಂಬ ರೈಲ್ವೇ ಸ್ಟೇಶನ್‌ಗಳಲ್ಲಿ ಕೇಳಿಬರುವ ಧ್ವನಿಯನ್ನೇ ಹೋಲುವ ತಲೆಬರಹ ಓದುಗರೇ ಕೊಟ್ಟದ್ದು. ಪ್ರಣಬ್ ಮುಖರ್ಜಿಯವರ ಬಜೆಟ್‌ಗಂತೂ ‘ಎಲ್ಲರಿಗೂ ಉಂಟು ಕರ ದಂಟು’ ಎಂಬ ಅದ್ಭುತ ಶೀರ್ಷಿಕೆಗಳನ್ನು ಓದುಗರಿಂದಲೇ ಸೃಷ್ಟಿಸಿದ್ದಾರೆ ವಿಶ್ವೇಶ್ವರ ಭಟ್ಟರು. ಕನ್ನಡ ಪ್ರಭದ ಮಾಸ್ಟರ್ ಹೆಡ್ ಕೆಳಗೆ ಟ್ಯಾಗ್ ಲೈನ್ ಇದ್ದದ್ದೇನು ಗೊತ್ತೇ? “ಮುಖರ್ಜಿಯ ಕನಸುಗಳು 2011-12”!

ಮೂರೂ ಬಜೆಟ್‌ಗಳಿಗೆ 300ಕ್ಕೂ ಹೆಚ್ಚು ಓದುಗರು ವಿಶ್ವೇಶ್ವರ ಭಟ್ ಅವರ vbhat.in ಎಂಬ ವೆಬ್‌ಸೈಟ್ ಕಂ ಬ್ಲಾಗ್ ಮೂಲಕ ಸೂಚಿಸಿದ್ದಾರೆ. ಪತ್ರಿಕೆಯಲ್ಲಿ ಆಸಕ್ತಿ ಹೆಚ್ಚಿಸುವಂತೆ ಮಾಡಿಸಿದ ವಿಶ್ವೇಶ್ವರ ಭಟ್ಟರು ಇಂಥದ್ದೊಂದು ಅಪರೂಪದ ಪ್ರಯೋಗದಲ್ಲಿ ಗಮನ ಸೆಳೆದಿದ್ದಾರೆ ಮತ್ತು ಈ ಪ್ರಯೋಗ ಮುಂದುವರಿಯುತ್ತದೆ ಎಂದೂ ಹೇಳಿದ್ದಾರೆ. ವಿಜಯ ಕರ್ನಾಟಕ, ಪ್ರಜಾವಾಣಿ, ಸಂಯುಕ್ತ ಕರ್ನಾಟಕ ಪತ್ರಿಕೆಗಳನ್ನೆಲ್ಲಾ ಒಂದೊಂದಾಗಿ ಹಿಂದಿಕ್ಕಿ, ಕನ್ನಡ ಪ್ರಭವನ್ನು ನಂ.1 ಪಟ್ಟಕ್ಕೇರಿಸುತ್ತಾರೆಯೇ ಎಂಬ ಪ್ರಶ್ನೆಗೆ ಸಕಾರಾತ್ಮಕ ಉತ್ತರವನ್ನು ಸೂಚ್ಯವಾಗಿ ನೀಡಿದ್ದಾರೆ ಅವರು. ಇದೇನೂ ಸಾಮಾನ್ಯ ಕೆಲಸವೂ ಅಲ್ಲ.

ಉದಯವಾಣಿ

ಇನ್ನು ಪತ್ರಿಕಾ ಲೋಕದ ತಲ್ಲಣಗಳಲ್ಲಿ, ವಿಜಯ ಕರ್ನಾಟಕದ ಸಂಪಾದಕರು ಕನ್ನಡ ಪ್ರಭಕ್ಕೆ ಸಂಪಾದಕರಾಗಿ ಪರಿವರ್ತನೆಗೊಂಡದ್ದು ಒಂದು ಪ್ರಮುಖ ಬೆಳವಣಿಗೆಯಾದರೆ, ಕನ್ನಡ ಪ್ರಭದಲ್ಲಿ ಸಂಪಾದಕೀಯ ಸ್ಥಾನದಲ್ಲಿದ್ದ ರವಿ ಹೆಗಡೆಯವರು, ಸುವರ್ಣ ನ್ಯೂಸ್ ಚಾನೆಲ್ ಸೇರಿ, ಬಳಿಕ ತಮ್ಮ ಬಳಗದೊಂದಿಗೆ ಉದಯವಾಣಿಗೆ ಸಂಪಾದಕರಾಗಿ, ತಮ್ಮ ಕ್ರಿಯೇಟಿವಿಟಿಯನ್ನು ಅಲ್ಲಿ ಹೊರಗೆಡಹತೊಡಗಿದ್ದಾರೆ. ಆದರೆ ಮಣಿಪಾಲ ಆವೃತ್ತಿಗೂ ಬೆಂಗಳೂರು ಆವೃತ್ತಿಗೂ ಸಿಂಕ್ರನೈಸೇಶನ್ ಇಲ್ಲದಿರುವುದು ಒಂದು ಭಾಗದ ಓದುಗ ವರ್ಗಕ್ಕೆ ಅವರ ಕ್ರಿಯಾಶೀಲತೆಯನ್ನು ನೋಡುವ ಅವಕಾಶವನ್ನು ತಪ್ಪಿಸಿದೆ.

ಉದಯವಾಣಿಯ ಬೆಂಗಳೂರು ಆವೃತ್ತಿಯ ಶೀರ್ಷಿಕೆಗಳು ಈ ಮೂರೂ ಬಜೆಟ್ ದಿನಗಳಂದು ಗಮನ ಸೆಳೆದವು. ಉದಯವಾಣಿ ಕೃಷಿ ಬಜೆಟನ್ನು ಬಣ್ಣಿಸಿದ್ದು ‘ವಾವ್, ವ್ಯಾಟ್ ಎ ಬಜೆಟ್’ ಅಂತ. ಅಂದರೆ ವ್ಯಾಟ್ (ಮೌಲ್ಯವರ್ಧಿತ ತೆರಿಗೆ) ಹೆಚ್ಚಳವನ್ನು ಇದು ನೇರವಾಗಿ ಮುಟ್ಟಿದೆ. ಮಮತಾ ಬ್ಯಾನರ್ಜಿಯ ರೈಲ್ವೇ ಬಜೆಟನ್ನು ‘ರೈಲ್ವೇ ಬಜೆಟ್ 2011 – ನಮಗೆ ಸಿಕ್ಕಿದ್ದೇನು’ ಅಂತ ಓದುಗರಿಗೆ ಆಪ್ತವಾಗುವ ವಿಷಯವನ್ನೇ ಮುಖ್ಯವಾಗಿಸಿತು ರವಿ ಹೆಗಡೆಯವರ ಉದಯವಾಣಿ. ಪ್ರಣಬ್ ಮುಖರ್ಜಿಯವರ ಬಜೆಟನ್ನಂತೂ ‘ಪುನಃ ದುಬಾರಿ’ ಎಂದು ಎರಡು ಪದಗಳಲ್ಲಿ ನೀವಾಳಿಸಿಬಿಟ್ಟಿತು.

ವಿಜಯ ಕರ್ನಾಟಕ

ವಿಶ್ವೇಶ್ವರ ಭಟ್ಟರು ಬಿಟ್ಟರೂ ವಿಜಯ ಕರ್ನಾಟಕ ಎದೆಗುಂದಿಲ್ಲ. ಅದರ ವಿಜಯ್‌ನೆಕ್ಸ್ಟ್ ಎಂಬ ಸಾಪ್ತಾಹಿಕ ‘ಸಹೋದರ’ನ ಸಂಪಾದಕರಾಗಿದ್ದ ಮತ್ತು ಪತ್ರಿಕಾ ಲೋಕದಲ್ಲಿ ಮೂರ್ನಾಲ್ಕು ದಶಕಗಳ ಅನುಭವವಿರುವ ಇ.ರಾಘವನ್ ಅವರು ವಿಜಯ ಕರ್ನಾಟಕದ ಜವಾಬ್ದಾರಿಯ ನೊಗವನ್ನು ಸಮರ್ಥವಾಗಿ ಹೆಗಲಿಗೇರಿಸಿಕೊಂಡು ಮುನ್ನಡೆಸುತ್ತಿದ್ದಾರೆ ಮತ್ತು ‘ಪದಗಳ ಜೊತೆ ಆಟವಾಡುವ ಪರಂಪರೆ’ಯನ್ನು ಮುಂದುವರಿಸಿದ್ದಾರೆ. ಇದಕ್ಕೆ ಈ ಮೂರೂ ಬಜೆಟ್ ದಿನಗಳ ಟೈಟಲ್ಲುಗಳು ಸಾಕ್ಷಿಯಾದವು. ಹತ್ತು ಹಲವು ಬಾರಿ ಪದಗಳ ಪಂಚಿಂಗ್ ಮಾಡುತ್ತಾ, ವಿಜಯ ಕರ್ನಾಟಕಕ್ಕೆ ಹೆಸರು ತಂದುಕೊಟ್ಟವರಲ್ಲಿ ಸದ್ದಿಲ್ಲದೇ ಕೆಲಸ ಮಾಡುತ್ತಿದ್ದ ಸುದ್ದಿ ಸಂಪಾದಕರಾದ ವಸಂತ ನಾಡಿಗೇರ್ ಕೂಡ ರಾಘವನ್‌ಗೆ ಸಮರ್ಥ ಸಾಥ್ ನೀಡುತ್ತಿದ್ದಾರೆ. ಹಿಂದೊಮ್ಮೆ ವಿಜಯ ಕರ್ನಾಟಕದ ಮುಖಪುಟದಲ್ಲಿ ಆನೆಯ ಚಿತ್ರವೊಂದಕ್ಕೆ ‘ಆನೆ ನಡೆದದ್ದೇ ದಾರಿ’ (ವಿಜಯ ಕರ್ನಾಟಕ ನಡೆದದ್ದೇ ದಾರಿ ಎಂಬ ಸೂಚ್ಯರ್ಥ) ಎಂಬ ಅಡಿಬರಹ ನೀಡಿ ಗಮನ ಸೆಳೆದವರು ಅವರು.

ಯಡಿಯೂರಪ್ಪನವರ ಬಜೆಟನ್ನು ‘ಹಸಿರ ಹೊದಿಕೆ’ ಎಂಬುದಾಗಿ ಬಣ್ಣಿಸಿದ ವಿಜಯ ಕರ್ನಾಟಕ, ಕರ್ನಾಟಕಕ್ಕೆ ರೈಲ್ವೇ ಬಜೆಟಿನಲ್ಲಿ ಮೂಗಿಗೆ ತುಪ್ಪ ಸುರಿಯಲಾದ ಪರಿಸ್ಥಿತಿಯನ್ನು ‘ ಮನಸೂ ಇಲ್ಲ, ಮುನಿಸೂ ಇಲ್ಲ’ ಎಂಬಂತೆ ಬಣ್ಣಿಸಿದರೆ, ಪ್ರಣಬ್ ಬಜೆಟ್‌ಗೆ ‘ಸಮಾಧಾನ ಕರ’ ಎಂದೂ ಹೇಳಿತು. ಇಲ್ಲಿ ಪತ್ರಿಕೆಯ ಬಜೆಟ್ ಕವರೇಜ್ ಬಗ್ಗೆ ಹೇಳಲೇಬೇಕು. ಉಳಿದವುಗಳಿಗೆ ಹೋಲಿಸಿದರೆ, ಜನರಿಗೆ ನೇರವಾಗಿ ತಟ್ಟು ವಿಷಯವನ್ನಷ್ಟೇ ‘ಸಂಪಾದನೆ (edit)’ ಮಾಡಿ ಓದುಗರಿಗೆ ಉಣಬಡಿಸಿದ್ದು ವಿಜಯ ಕರ್ನಾಟಕ.

ಪ್ರಜಾವಾಣಿ

ದಶಕಗಳ ಕಾಲದಿಂದ ನಂ.1 ಸ್ಥಾನದಲ್ಲಿದ್ದ ಪ್ರಜಾವಾಣಿ ಪತ್ರಿಕೆಯಲ್ಲಿ ಶೀರ್ಷಿಕೆಯಲ್ಲಿ ಹೊಸತನವೇನೂ ಕಾಣಿಸದಿದ್ದರೂ, ಪುಟ ವಿನ್ಯಾಸಗಳಲ್ಲಿ ಅಭೂತಪೂರ್ವ ಬದಲಾವಣೆಗೆ ಒಗ್ಗಿಕೊಂಡಿರುವುದು ಎದ್ದು ಕಾಣಿಸುತ್ತಿತ್ತು.

ಯಡಿಯೂರಪ್ಪ ಬಜೆಟ್ ಪ್ರಜಾವಾಣಿಗೆ ‘ಅನ್ನದಾತನಿಗೆ ಔತಣ’ ಆದರೆ, ಮಮತಾ ರೈಲ್ವೇ ಬಜೆಟ್ ‘ರಾಜ್ಯಕ್ಕೆ ಮಮತಾ ಕಟಾಕ್ಷ’ ಆಯಿತು. ಮತ್ತು ಪ್ರಣಬ್ ಮುಖರ್ಜಿಯವರಂತೂ ಪ್ರಜಾವಾಣಿಯಲ್ಲಿ ‘ಸಮತೋಲನಕ್ಕೆ ಹರಸಾಹಸ’ ಮಾಡಿದರು.

ಹೊಸದಿಗಂತ

ಹೊಸದಿಗಂತದಲ್ಲಿ, ಯಡಿಯೂರಪ್ಪ ಅವರ ಬಜೆಟ್ 2011 ಎಂಬುದೇ ಮಾಸ್ಟರ್ ಹೆಡ್ ಅನ್ನು ಕುಬ್ಜವಾಗಿಸಿದ್ದರೆ, ‘ಹಸಿರು ಕ್ರಾಂತಿ’ ಟೈಟಲ್ಲು ಗಮನ ಸೆಳೆಯಿತು. ಮಮತಾ ರೈಲ್ವೇ ಬಜೆಟ್ಟಿನಲ್ಲಿ ‘ಪ್ರಗತಿ ನಾಸ್ತಿ’ ಮತ್ತು ‘ಕನ್ನಡಿಗರಿಗೆ ರೈಲು’ ಮಾತ್ರ ಎಂಬ ಶೀರ್ಷಿಕೆಗಳು ಗಮನ ಸೆಳೆದರೆ, ಪ್ರಣಬ್ ಬಜೆಟನ್ನು ಮಾಸ್ಟರ್ ಹೆಡ್ ಚಿಕ್ಕದಾಗಿಸಿ ಚಿತ್ರಗಳೊಂದಿಗೆ, ಕೆಳಗೆ ‘ಪ್ರಣಬ್ ಪಂಚತಂತ್ರ’ ಕಥೆ ವಿಶೇಷವಾಗಿತ್ತು. ಹೊಸದಿಗಂತದ ಬಜೆಟ್ ಕವರೇಜ್ ಭರ್ಜರಿ, ಒಳಪುಟಗಳ ಹೂರಣ ತುಂಬಿ ತುಳುಕಾಡುತ್ತಿತ್ತು ಮತ್ತು ನೋಡಲೂ ಆಕರ್ಷಕವಾಗಿತ್ತು ಎನ್ನಬಹುದಾದರೂ ಅದಕ್ಕೆ ಅದರದ್ದೇ ಆದ ಮಿತಿಗಳಿರುವುದರಿಂದ ಬಿಜೆಪಿ ಕುರಿತ ಪಕ್ಷಪಾತತನವೂ ಢಾಳಾಗಿ ಕಾಣಿಸುತ್ತಿತ್ತು.

ಸಂಯುಕ್ತ ಕರ್ನಾಟಕ

ಇನ್ನು ಇತ್ತೀಚೆಗೆ ತನ್ನ ಅದೇ ಹಳೆತನವನ್ನು ಕಳಚಿಕೊಂಡು ಹೊಸತನದತ್ತ ಮುನ್ನುಗ್ಗುತ್ತಿರುವ ಸಂಯುಕ್ತ ಕರ್ನಾಟಕ ಕೂಡ ಟೈಟಲ್ ಮಟ್ಟಿಗೆ ಕಸರತ್ತು ಮಾಡಿದೆ. ಯಡಿಯೂರಪ್ಪರ ಬಜೆಟು ‘ರೈತನಿಗೆ ಪನ್ನೀರಾಭಿಷೇಕ’ ಮಾಡಿಸಿದರೆ ಮಮತಾ ಬಜೆಟ್ಟು ‘ರಾಜ್ಯಕ್ಕೆ ಮಮತೆಯ ಬಂಡಿ’ ಆಗಿ ಬಂದರೆ, ಪ್ರಣಬ್ ಮುಖರ್ಜಿಯವರ ಬಜೆಟ್ಟು ‘ಮತಾಧೀಶರತ್ತ ಒಲವು’ ಎಂಬ ಬ್ಯಾನರ್‌ನೊಂದಿಗೆ ‘ಸರ್ವತೋಮುಖರ್ಜಿ’ ಶೀರ್ಷಿಕೆಯೂ ಗಮನ ಸೆಳೆಯಿತು.

ಒಟ್ಟಿನಲ್ಲಿ ಪತ್ರಿಕೆಗಳ ಮುಖಪುಟದಲ್ಲಿ ಪರಿವರ್ತನೆಯ ಗಾಳಿ ಎಷ್ಟು ಬಲವಾಗಿ ಬೀಸಿದೆಯೆಂದರೆ, ಪತ್ರಿಕೆಯ ಹೆಸರುಗಳೇ ಕಿರಿದಾಗತೊಡಗಿವೆ! ಇಲ್ಲಿ ಒಂದಂಶವನ್ನು ಓದುಗರು ಗಮನಿಸಬೇಕು. ಇವೆಲ್ಲ ಗಿಮಿಕ್‌ಗಳು, ಹೊಸತನಗಳನ್ನು ಉಲ್ಲೇಖಿಸಿರುವುದು ಪತ್ರಿಕೆಯ ಶೀರ್ಷಿಕೆಯ ವೈವಿಧ್ಯ, ಮೇಲ್ನೋಟದ ಕುರಿತಾಗಿಯೇ ಹೊರತು, ಒಳಗಿನ ಹೂರಣದ ಬಗೆಗಲ್ಲ. ಒಳಗಿನ ಹೂರಣ ಹೇಗಿತ್ತು ಎಂಬುದನ್ನು ನಿರ್ಧರಿಸುವುದು ಓದುಗರೇ.

ನಮ್ಮ ರಾಜ್ಯದಲ್ಲಿ ಆಪರೇಶನ್ ಕಮಲ, ಆಪರೇಶನ್ ಕೈ, ದಳ ವಿದಳನೆ, ಪಕ್ಷಾಂತರ, ನಿಷ್ಠಾಂತರ ಮುಂತಾದ ಹತ್ತು ಹಲವು ಪ್ರಕ್ರಿಯೆಗಳಿಂದಾಗಿ ಯಾವ ಶಾಸಕ ಇವತ್ತು ಯಾವ ಪಕ್ಷದಲ್ಲಿದ್ದಾರೆ ಎಂದು ನೆನಪಿಟ್ಟುಕೊಳ್ಳುವುದು ಕಷ್ಟ ಸಾಧ್ಯವಾದ ಪರಿಸ್ಥಿತಿ ಬಂದುಬಿಟ್ಟಿದೆ. ಆದರೆ, ಕನ್ನಡ ಪತ್ರಿಕಾ ಲೋಕದಲ್ಲಿ ಯಾವ ಸಂಪಾದಕರು ಯಾವ ಪತ್ರಿಕೆಯಲ್ಲಿದ್ದಾರೆ ಎಂಬುದು ಸದ್ಯಕ್ಕೆ ಗೊಂದಲಕ್ಕೆ ಕಾರಣವಾಗಿದ್ದರೂ ಕೂಡ, ನಿಧಾನವಾಗಿ ಒಂದು ಹಂತಕ್ಕೆ ಬಂದು ನಿಲ್ಲುತ್ತಿದೆ. ಆದರೆ, ಪತ್ರಿಕೆಯಲ್ಲಿ ಸಂಪಾದಕರ ಪಾತ್ರವೇನು ಎಂಬುದು ಹೊರಜಗತ್ತಿಗೆ, ನೇರವಾಗಿ ಜನರಿಗೆ ತಿಳಿಯುವಂತೆ ಮಾಡಿದವರು ಬಹುಶಃ ವಿಶ್ವೇಶ್ವರ ಭಟ್ಟರು. ವಿಜಯ ಕರ್ನಾಟಕದ ಪ್ರಯೋಗಗಳಿಂದಾಗಿಯೇ ಇತರ ಪತ್ರಿಕೆಗಳೂ ಎಚ್ಚೆತ್ತುಕೊಂಡು, ಮೈಕೊಡವಿಕೊಂಡದ್ದಂತೂ ಸುಳ್ಳಲ್ಲ. ಇಂಥದ್ದೊಂದು ಆರೋಗ್ಯಕರ ಬದಲಾವಣೆಯು ಕನ್ನಡ ಪತ್ರಿಕಾ ಲೋಕದಲ್ಲಿ ಆಗುತ್ತಿದೆ ಎಂದರೆ, ಮತ್ತು ಬರೇ ತಲೆಬರಹಕ್ಕೆ ಇದು ಸೀಮಿತವಾಗದೆ, ಈ ಸ್ಪರ್ಧಾತ್ಮಕತೆಯು ಒಳಗಿನ ಹೂರಣಕ್ಕೂ (ಕವರೇಜ್‌ಗೂ) ಅನ್ವಯವಾದರೆ, ಸುದ್ದಿಯ ಸವಿಯೂಟ ದೊರೆತರೆ ಓದುಗ ಆಗುತ್ತಾನೆ ದೊರೆ. ಏನಂತೀರಿ?
{ವೆಬ್ದುನಿಯಾಕ್ಕಾಗಿ}

LEAVE A REPLY

Please enter your comment!
Please enter your name here