ಬದುಕಿನ ಬೆಂಗಾಡಲ್ಲಿ ಸ್ನೇಹಿತನೆಂಬ ಜೀವಸೆಲೆ

2
226

“Two may talk together under the same roof for many years, yet never really meet; and two others at first speech are old friends. ”
– Mary Catherwood

ಈ ಮೇಲಿನ ಮಾತನ್ನು ನೋಡಿದರೆ, ನಿಜವೆನಿಸುವುದಿಲ್ಲವೇ? ಹಲವಾರು ವರ್ಷ ಒಟ್ಟಿಗೇ ಇದ್ದರೂ ಅವರೇನೂ ಸ್ನೇಹಿತರಾಗಿರಬೇಕೆಂದಿಲ್ಲ, ಒಂದರೆಕ್ಷಣದಲ್ಲಿಯೂ ಸ್ನೇಹ ಮೊಳೆಯಬಹುದು. ಇದು ಸ್ನೇಹಕ್ಕಿರುವ ಶಕ್ತಿ.

ಆಧುನಿಕ ತಂತ್ರಜ್ಞಾನ, ವಿಶೇಷವಾಗಿ ಇಂಟರ್ನೆಟ್ ಮತ್ತು ಮೊಬೈಲ್ ಫೋನುಗಳು ಇಡೀ ಜಗತ್ತನ್ನೇ ಕಿರಿದುಗೊಳಿಸಿದ್ದರೂ, ದೈನಂದಿನ ಬದುಕಿನ ಜಂಜಾಟದಲ್ಲಿ ನಮಗಿಂದು ‘ಸಮಯ’ ಎಂಬುದು ಕೈಗೆಟಕುವ ವಸ್ತುವಾಗಿ ಉಳಿದಿಲ್ಲ. ಹೀಗಾಗಿ ಒಂದು ಅಕ್ಕರೆಯ ನೇವರಿಕೆ, ಒಂದು ಪ್ರೀತಿ ತುಂಬಿದ ಸಾಂತ್ವನದ ನುಡಿ, ಕುಂದಿದ ಮನಸ್ಸಿನ ಬಲೂನಿಗೆ ಗಾಳಿ ತುಂಬಲು, ಜೀವನದ ಏಳಿಗೆಗೆ, ಗುರಿ ಸಾಧನೆಗೆ ಸದಾ ಪ್ರೋತ್ಸಾಹ ನೀಡಲು ಅಂಥದ್ದೊಂದು ಜೀವದ ಆವಶ್ಯಕತೆ ಹಿಂದೆಂದಿಗಿಂತ ಹೆಚ್ಚಾಗಿ ಕಾಡುತ್ತಿದೆ ಇಂದು.

ಗೆಳೆತನ ದಿನವನ್ನು ಆಚರಿಸುವ ವಿದೇಶೀ ಸಂಪ್ರದಾಯದ ಕೆಡುಕುಗಳನ್ನು ಒತ್ತಟ್ಟಿಗಿಟ್ಟು, ಪಾಸಿಟಿವ್ ಅಂಶವನ್ನು ಮಾತ್ರವೇ ಪರಿಗಣಿಸಿದರೆ, ನಮ್ಮ ಪ್ರೀತಿಪಾತ್ರ ಗೆಳೆಯ ಅಥವಾ ಗೆಳತಿಗೊಂದು, “ನನ್ನ ಬದುಕಿನ ಪಯಣವನ್ನು ಆನಂದಮಯವಾಗಿಸುತ್ತಿರುವ ಓ ನನ್ನ ಗೆಳೆಯನೇ, ನಿನಗಿದೋ ಸಾಸಿರ ಸಾಸಿರ ಅಭಿವಂದನೆಗಳು, ಅಭಿನಂದನೆಗಳು” ಎಂಬ ಒಂದು ಸಾಲಿನ ಶುಭಾಶಯ ಪತ್ರ ಕಳುಹಿಸಿದರೆ, ಅಥವಾ ಅಂಥದ್ದೊಂದು ಒಕ್ಕಣೆಯನ್ನು ನೀವು ಸ್ವೀಕರಿಸಿದರೆ, ನಿಮ್ಮ ಮನದ ಮೂಲೆಯಲ್ಲಿ ಸಂತಸದ ಚಿಲುಮೆಯೊಂದು ಪುಟಿಯುವುದಿಲ್ಲವೇ? ಅದು ಸ್ನೇಹಕ್ಕಿರುವ ಪ್ರಭಾವ.

ಈ ಗೆಳೆತನವೆಂಬುದು ಪ್ರೀತಿ ಪ್ರೇಮದಂತೆ, ದಿಢೀರನೇ ಕಾಣಿಸಿಕೊಂಡು, ಅಷ್ಟೇ ದಿಢೀರಾಗಿ ಮರೆಯಾಗುವಂಥದ್ದಲ್ಲ. ಸ್ನೇಹ ಭಾವವು ಬಾಲ್ಯದಲ್ಲೇ ಮೊಳೆತು, ಕೌಮಾರ್ಯ ದಾಟಿ, ಗ್ರಾಹಸ್ಥ್ಯದಲ್ಲೂ ಸಾಗಿ, ವೃದ್ಧಾಪ್ಯದಲ್ಲಿಯೂ ಮುಂದುವರಿದು ಆಜನ್ಮದ ಬಂಧವಾಗಿ ಮೆರೆದ ಅದೆಷ್ಟೋ ನೈಜ ಘಟನೆಗಳನ್ನು ನಾವೆಷ್ಟು ಕೇಳಿಲ್ಲ!

ಸಹಪಾಠಿಗಳು ಸ್ನೇಹಿತರಾಗಿರುವುದು ಸಾಮಾನ್ಯ. ಗಂಡನಿಗೆ ಹೆಂಡತಿ ಒಳ್ಳೆಯ ಸ್ನೇಹಿತೆಯಾಗಬಹುದು, ವಿದ್ಯಾರ್ಥಿಗೆ ಶಿಕ್ಷಕರು ಅತ್ಯುತ್ತಮ ಸ್ನೇಹಿತರಾಗಿರಬಹುದು, ಕಚೇರಿಯಲ್ಲಿ ನಮ್ಮ ಮೇಲಧಿಕಾರಿಯೇ ಒಳ್ಳೆಯ ಗೆಳೆಯನಾಗಿರಬಹುದು, ಮಗನಿಗೆ ತಂದೆಯೇ ಅತ್ಯುತ್ತಮ ಸ್ನೇಹಿತನಾಗಬಹುದು, ತಾಯಿಯೂ ಒಳ್ಳೆಯ ಗೆಳತಿಯಾಗಬಹುದು, ಅದೇ ರೀತಿ ಅಪ್ಪ-ಮಗಳು ಉತ್ತಮ ಸ್ನೇಹಿತರಾಗಿರಬಹುದು, ಇಡೀ ಸಮಾಜವನ್ನೇ ಅತ್ಯುತ್ತಮವಾಗಿ ರೂಪಿಸಬಲ್ಲಂತಹಾ ತಾಯಿ-ಮಗಳ ಸ್ನೇಹಕ್ಕೆ ಎಣೆಯುಂಟೇ? ಅಂತೆಯೇ, ಗುರುತು ಪರಿಚಯವೇ ಇಲ್ಲದವರು ಸ್ನೇಹಿತರಾಗಿ, ಸ್ನೇಹಕ್ಕೆ ಮಾದರಿಯಾಗಲೂಬಹುದು. ಅದಕ್ಕೇ ಹೇಳಿದ್ದು, ಈ ಸ್ನೇಹ ಭಾವಕ್ಕೆ ಗಡಿಯಿಲ್ಲ, ಎಣೆಯಿಲ್ಲ.

ಸೂರ್ಯ-ಚಂದ್ರರು ಪ್ರತಿದಿನ ಬೆಳಕು ಕೊಡುತ್ತಾ ಜಗತ್ತನ್ನು ನೋಡಿಕೊಳ್ಳುತ್ತಿದ್ದರೂ ಅವರ ಮೇಲ್ಮೆಯನ್ನು ನಾವೆಂದಿಗೂ ಹೊಗಳಲು ಹೋಗುವುದಿಲ್ಲ, ಅವರದನ್ನು ನಿರೀಕ್ಷಿಸುವುದೂ ಇಲ್ಲ. ನಮ್ಮ ಜೀವನದ ಯಾನದಲ್ಲಿ ಬರುವ ಗೆಳೆಯ ಗೆಳತಿಯರೂ ಇದೇ ಸಾಲಿಗೆ ಸೇರುತ್ತಾರೆ. ಅವರು ನಮ್ಮ ಜೀವನವನ್ನು ಬೆಳಗುತ್ತಾರೆಯೇ ಹೊರತು, ನಮ್ಮಿಂದ ಏನನ್ನೂ ನಿರೀಕ್ಷಿಸಲಾರರು. ಭಾವದ ಬಂಧವೊಂದೇ ಅವರಿಗೆ ಬೇಕಾಗಿರುವುದು. ನಿನ್ನ ಬಳಿ ಏನಿದೆ ಅಂತ ಕೇಳಿದಾಗ, ನನಗೆ ಜಗತ್ತಿನಲ್ಲೇ ಶ್ರೇಷ್ಠ ಗೆಳೆಯನಿದ್ದಾನೆ ಅಥವಾ ಗೆಳತಿಯಿದ್ದಾಳೆ ಎಂದು ಹೇಳಿಕೊಳ್ಳುವ ಹೆಮ್ಮೆ ಅದೆಷ್ಟು ಮಂದಿಗೆ ಇಲ್ಲ!

ಅಚ್ಚ ಪ್ರೀತಿಯ, ನಿಷ್ಕಲ್ಮಷ ಹೃದಯದ, ಪರಸ್ಪರ ಸಾಂತ್ವನದ ಗುಣವುಳ್ಳ, ಎಲ್ಲವೂ ಆಗಬಲ್ಲ ಸ್ನೇಹ ಸು-ಲಭವಾಗುವಂತಹುದಲ್ಲ, ಖಂಡಿತವಾಗಿಯೂ ಪುಣ್ಯ ಮಾಡಿರಬೇಕು. ಇಲ್ಲಿ ಜಾತಿ- ವಿಜಾತಿ, ಸಿರಿತನ ಬಡತನಗಳ ಗೊಡವೆಯಿಲ್ಲ, ಯಾವುದೇ ತರ-ತಮಗಳು ಅಡ್ಡಿ ಬರಲಾರವು. ನಿಮ್ಮೆಲ್ಲಾ ಮನದ ಬೇಗುದಿಗಳನ್ನು, ದುಗುಡ ದುಮ್ಮಾನಗಳನ್ನು ಹೇಳಿಕೊಳ್ಳಲು, ಯಾವುದೇ ಉಪೇಕ್ಷೆಯಿಲ್ಲದೆ ಕೇಳಿಸಿಕೊಂಡು, ಸಂತೈಸುವ ಸ್ನೇಹವಿದ್ದರೆ, ನಮಗದುವೇ ಸಾಕಲ್ಲವೇ ಸೋಲನ್ನು ಮೆಟ್ಟಿ ನಿಂತು ಗೆಲುವಿನತ್ತ ದೃಢ ಹೆಜ್ಜೆಯಿರಿಸಲು?

ಈಗಿನ ಅವಸರದ ಬದುಕೇ ಅಂಥದ್ದು. ನಮ್ಮ ಪಕ್ಕದ ಮನೆಯಲ್ಲಿ ಯಾರಿದ್ದಾರೆ ಎಂಬುದೇ ತಿಳಿಯದಂತಹಾ ಯಂತ್ರ ಮಾನವರಾಗಿಬಿಟ್ಟಿದ್ದೇವೆ ನಾವು. ಖಂಡಿತಾ ಉತ್ಪ್ರೇಕ್ಷೆಯಲ್ಲ. ನಗರ ಬದುಕು ಅಂಥ ಸ್ಥಿತಿ ತಂದೊಡ್ಡಿದೆ. ಈ ಪರಿಸ್ಥಿತಿಯಲ್ಲಿ, ಅಂತರಜಾಲವೆಂಬ ಈ ವರ್ಚುವಲ್ ವರ್ಲ್ಡ್‌ನಲ್ಲಿ ವಸ್ತುಶಃ ಅಂತರಪಿಶಾಚಿಗಳಾಗಿ ವಿಹರಿಸುತ್ತಿರುವ ನಮಗೆ, ಯಾವಾಗಲೋ ಒಂದು ಕ್ಷಣದಲ್ಲಿ, ಕಂಡು ಕೇಳರಿಯದವರು ಯಾರೋ ಮಿತ್ರರಾಗಿಬಿಡುತ್ತಾರೆಂದರೆ ಈ ಸ್ನೇಹದ ಪ್ರಭಾವ ಎಷ್ಟೆಂಬುದು ಅರಿವಾಗುತ್ತದೆ. ಆಧುನಿಕ ಜಗತ್ತಿನ ಬಿಸಿಲಿನ ಝಳದಲ್ಲಿ ಇಂತಹಾ ಸ್ನೇಹವು ಒಂದು ತಣ್ಣೀರಹನಿಯಂತೆ ಭಾಸವಾಗುತ್ತದೆ.

ಕಚೇರಿ ಒತ್ತಡ ಮತ್ತು ಸಮಯಾಭಾವದ ನಡುವೆ ಒಂದಿಷ್ಟು ಬಿಡುವಿನ ವೇಳೆಯಲ್ಲಿ ಈ ಆನ್‌ಲೈನ್ ಮಿತ್ರರೊಂದಿಗೆ ಹರಟುವಿಕೆ ನಿಜಕ್ಕೂ ಮನಸ್ಸಿಗೆ ಹಿತವೆನಿಸುತ್ತದೆ ಎಂಬುದು ಸುಳ್ಳಲ್ಲವಾದರೂ, ಅದುವೇ ಚಾಳಿಯಾದರೆ ಗೆಳೆತನದ ಅರ್ಥ ಅನರ್ಥವಾಗುತ್ತದೆ, ವ್ಯವಸ್ಥೆಯ ದುರ್ಬಳಕೆಯಾಗುತ್ತದೆ. ಅದು ಬರೇ ಹರಟೆಗಷ್ಟೇ, ಟೈಂ ಪಾಸ್‌ಗಷ್ಟೇ ಸೀಮಿತವಾದರೆ ಅಲ್ಲಿ ಸ್ನೇಹ ನಿಲ್ಲುವುದಿಲ್ಲ. ಆರ್ಕುಟ್, ಫೇಸ್‌ಬುಕ್, ಟ್ವಿಟರ್‌ಗಳಂತಹಾ ಸಮುದಾಯ ತಾಣಗಳು ಇಂಥದ್ದೊಂದು ಸ್ನೇಹಕ್ಕೆ ಅವಕಾಶ ಮಾಡಿಕೊಟ್ಟಿದ್ದರೂ, ಅದು ದುರ್ಬಳಕೆಯಾಗುತ್ತಿರುವ ಸಾಧ್ಯತೆಗಳೇ ಹೆಚ್ಚು ಎಂಬುದೂ ಎಚ್ಚರಿಕೆ ವಹಿಸಬೇಕಾದ ಅಂಶ.

ಇಂದು ಅವಸರಜೀವಿಯಾಗಿಬಿಟ್ಟಿರುವ ಮಾನವರಲ್ಲಿ ಸ್ನೇಹಿತರು ಯಂತ್ರಗಳಾಂತಾಗಿದ್ದರೂ ಗೆಳೆತನವೆನ್ನುವುದು ಯಂತ್ರವಾಗಿ ಉಳಿದಿಲ್ಲ ಎಂಬುದು ಅಷ್ಟೇ ಸತ್ಯ. ಸ್ನೇಹವೆಂಬುದು ನಿಸ್ಸಂದಿಗ್ಧವಾಗಿ ಸದಾ ಹಚ್ಚ ಹಸಿರು, ಸಜೀವ ಮತ್ತು ಸಕಾಲಿಕ. ಗೆಳೆತನಕ್ಕಿಂತ ಮಿಗಿಲಾದ ಸತ್ಯವಿಲ್ಲವೆಂಬುದೂ ಅಷ್ಟೇ ದಿಟ.

ಕೊನೆಯಲ್ಲೊಂದು ಮಾತು. ಈ ನಮ್ಮ ಸ್ನೇಹದ ನಡುವೆ “ಗೆಳೆತನವೆಂಬುದು ಯಾಕಾಗಿ” ಎಂಬ ಪ್ರಶ್ನೆ ನಮ್ಮಲ್ಲಿ ಉದ್ಭವಿಸಿತೋ, ಅಲ್ಲಿಗೇ ಆ ಸುಮಧುರ, ಪರಿಶುದ್ಧ ಸ್ನೇಹದ ಅಡಿಪಾಯ ಕುಸಿಯಿತೆಂದೇ ಅರ್ಥ. ಯಾಕೆಂದರೆ ಅಲ್ಲೊಂದು ಸ್ವಾರ್ಥದ ಎಳೆ ಕಂಡಂತಾಗುತ್ತದೆ, ಸ್ನೇಹದ ಪಂಚಾಂಗ ಅಲುಗಾಡುತ್ತದೆ. ಕವಿವಾಣಿಯಂತೆ, ಗೆಳೆತನದ ಸುವಿಶಾಲ ಆಲದಡಿ ಪಸರಿಸಿಹ ತಣ್ಣೆಳಲ ತಂಪಿನಲಿ ತಂಗುವುದೆಂದರೆ ಅದು ಈ ಯಾಂತ್ರಿಕ ಜೀವನದ ಸಾರ್ಥಕ್ಯವೂ ಹೌದು, ಸ್ನೇಹದ ಗರಿಮೆಯೂ ಹೌದು. ಒಳ್ಳೆಯ ಸ್ನೇಹಿತರು ಬಲುದೊಡ್ಡ ಆಸ್ತಿಯಿದ್ದಂತೆ. ಅಂತಹಾ ಆಸ್ತಿ ಮಾಡಿಕೊಳ್ಳುವುದು ಸುಲಭವಲ್ಲ. ಓದುಗರೆಲ್ಲರಿಗೂ ಈ ಗೆಳೆತನದಂತಹಾ ಅಮೂಲ್ಯ ಆಸ್ತಿ ದೊರೆಯಲಿ, ಹೊಸ ಸಚ್ಚಾರಿತ್ರ್ಯವಂತ ಸ್ನೇಹಿತರು ದೊರೆಯಲಿ ಎಂಬುದು ನಮ್ಮ ಹಾರೈಕೆ.

ನಿಮಗೆಲ್ಲ ಗೆಳೆತನ ದಿನದ ಶುಭಾಶಯಗಳು. ಗೆಳೆತನವು ಚಿರಾಯುವಾಗಲಿ.
[ವೆಬ್‌ದುನಿಯಾದಲ್ಲಿ ಪ್ರಕಟವಾಗಿದೆ]

2 COMMENTS

LEAVE A REPLY

Please enter your comment!
Please enter your name here