ಅಂಧರ ಬೆಳಕು – ಹೆಲನ್ ಕೆಲ್ಲರ್

2
734

[ಜೂ.27- ಹೆಲನ್ ಕೆಲ್ಲರ್ ಜನ್ಮದಿನ. ಈ ಪ್ರಯುಕ್ತ ಚೆನ್ನೈ ಆಕಾಶವಾಣಿಯಲ್ಲಿ ಜೂ.24, ಭಾನುವಾರ ಪ್ರಸಾರವಾದ ಸ್ವರಚಿತ ಕವನ]

ಗಾಢಾಂಧಕಾರದೊಳು ಅಡಿಗಡಿಗೆ ನಲುಗುತ್ತ
ನಲಿವ ಮರೆಯುತ ನೋವಿನಲೆ ಹೈರಾಣಾಗುತ್ತ

ಬಳಬಳಲಿ ಬೆಂಡಾದ ದೃಷ್ಟಿಹೀನರ ಮನೆಗೆ
ಜ್ಯೋತಿಯಾದವಳಲ್ಲವೇ ಹೆಲನ್ ಕೆಲ್ಲರ್!

ಶ್ರವಣ-ದೃಷ್ಟಿಯ ನೈಜ ಸಾಮರ್ಥ್ಯವರಿಯದೆ
ದಾರಿಗಾಣದೆ ಬದುಕ ಕಳೆದುಕೊಂಡವರಿಂಗೆ

ಹೊಚ್ಚಹೊಸ ಬಾಳ ಕಟ್ಟಲು ನವನವೀನತೆಯ
ದಾರಿತೋರಿದ ಮಾತೆಯಲ್ಲವೆ ಹೆಲನ್ ಕೆಲ್ಲರ್!

ಆನ್ನೆ ಸುಲಿವಾನ್ ಹಾಯ್ಸಿದ ಜಲ ಧಾರೆಗೆ ಕೈಯೊಡ್ಡಿ
ಜೀವನದ ಶರಧಿಯನು ಈಜ ಕಲಿತವಳೀಕೆ

ವಿಕಲಚೇತನರ ಬದುಕಿಗೆ  ಛಲವ ಕಲಿಸಿದವಳೀಕೆ
ಹೊಸ ಬೆಳಕು ಹೊಸ ಹೊಳಹು ಈ ಹೆಲನ್ ಕೆಲ್ಲರ್!

ಮೆಟ್ಟಿ ಅಂಗವೈಕಲ್ಯವ  ಮೆಟ್ಟಿಲೇರುತ ಯಶದ
ಸುತ್ತಿ ವಿಶ್ವದೆಲ್ಲೆಡೆಯಲಿ ವಿಶ್ವಾಸವನು ಹರಡುತಲಿ

ಕಣ್ಣಿದ್ದು ಕುರುಡಾಗಿಹರ ನಡುವೆ ಕಣ್ಣಿಲ್ಲದವರ
ಏಳಿಗೆಗೆ ಶ್ರಮಿಸಿದಳು  ಈಕೆ ಹೆಲನ್ ಕೆಲ್ಲರ್ !

ಅಂಧರ ಬಾಳ ಜ್ಯೋತಿ  ಒಳಗಣ್ಣೇ ಪರಮಪದ
ಸಮಾಜವಾದದ ನೆರಳ  ನಡುವೆ ಅರಳಿದ ಹೂವು

ಸ್ಪರ್ಶಮಾತ್ರದಿ ಭೌತ  ವಸ್ತು ವಿಷಯವ ಅರಿಯುತಲಿ
ಅಂಧರಿಗೆ ಬೆಳಕಾದವಳು  ಈ ಹೆಲನ್ ಕೆಲ್ಲರ್!

2 COMMENTS

  1. ಚಂದದ ಕವನ, ಒಳ್ಳೆಯ ಬರವಣಿಗೆ.

    “ಆನ್ನೆ ಸುಲಿವಾನ್ ಹಾಯ್ಸಿದ ಜಲ ಧಾರೆಗೆ ಕೈಯೊಡ್ಡಿ
    ಜೀವನದ ಶರಧಿಯನು ಈಜ ಕಲಿತವಳೀಕೆ”

    ಈ ಸಾಲುಗಳು ಇಷ್ಟವಾದವು.

    ಹೀಗೇ ಬರೆಯುತ್ತಿರಿ… ಎದುರು ನೋಡುತ್ತೇನೆ.

  2. ಸುಪ್ತದೀಪ್ತಿ ಅವರೆ,
    ನಿಮ್ಮ ಪ್ರೋತ್ಸಾಹದ ನುಡಿಗೆ ಧನ್ಯವಾದ.

    ಹೆಲನ್ ಬಗ್ಗೆ, ಆಕೆಯ ಸಾಧನೆಯ ಬಗ್ಗೆ ತಿಳಿದುಕೊಂಡಾಗ ಮೈ ನವಿರೇಳುತ್ತದೆ. ಹಾಗಾಗಿ ಬರೆದದ್ದು ಸಾರ್ಥಕ ಅಂದ್ಕೋತೀನಿ.

LEAVE A REPLY

Please enter your comment!
Please enter your name here