ಕನ್ನಡಾಂಬೆಯ ಸಿಂಗರಿಸುವ “ಸಿಂಗಾರಿ”

5
388

ಸಿಂಧೂರ
ಬೈತಲೆಬೊಟ್ಟು
ಬೆಂಡೋಲೆ
ಜಡೆಬಂಗಾರ
ಮೂಗುತಿ
ಮುತ್ತಿನ ಹಾರ
ತೋಳ್ವಂಕಿ
ಹೊಂಬಳೆ
ಒಡ್ಯಾಣ
ಕಾಲ್ಗೆಜ್ಜೆ….

ಏನಿದು ಅಂತ ಆಲೋಚನೆಯೇ? ಸ್ತ್ರೀಯರ ಮೈಯಾಭರಣಗಳು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ನಾನು ಹೇಳಹೊರಟಿರುವುದು ಕನ್ನಡಾಂಬೆಯನ್ನು ಈ ಆಭರಣಗಳಿಂದ ಅಂತರಜಾಲದಲ್ಲಿ ಸಿಂಗರಿಸಲು ಹೊರಟಿರುವ ಸಿಂಗಾರಿ ಬಗ್ಗೆ.

ವಿಜ್ಞಾನಿಗಳು ತಮ್ಮ ಕ್ಷೇತ್ರದಲ್ಲಿ ಮಾತ್ರವೇ ಜ್ಞಾನಿಗಳು, ಉಳಿದ ವಿಷಯಗಳಲ್ಲಿ ಅಜ್ಞಾನಿಗಳು ಎಂಬ ಕೊಂಕು ಮಾತಿಗೆ ಅಪವಾದವಾಗಿ, ವಿಜ್ಞಾನಿಗಳು, ವಿಜ್ಞಾನ ಪದವೀಧರರು, ವಿಜ್ಞಾನ ವಿದ್ಯಾರ್ಥಿಗಳ ಸಹಯೋಗದಲ್ಲಿ ನಿರ್ಮಿಸಿರುವ ಅಂತರಜಾಲದಲ್ಲಿ ಮೂಡಿಬರುತ್ತಿರುವ ಕನ್ನಡ ಮಾಸಿಕದ ಹೆಸರು ಸಿಂಗಾರಿ.

ಹೀಗೆಯೇ ಅಂತರಜಾಲದಲ್ಲಿ ಅಡ್ಡಾಡುತ್ತಿದ್ದಾಗ ಕಾಲಿಗೆ ಎಡವಿದ ಕನ್ನಡ ರತ್ನವಿದು. ಪ್ರಬುದ್ಧ ಮತ್ತು ಸಹ್ಯ ಬರಹಗಳಿಂದ ಇದು ಇಷ್ಟವಾಗುತ್ತದೆ.

ಮೇಲೆ ಹೇಳಿದ ಆಭರಣಗಳೆಲ್ಲವೂ ಒಂದೊಂದು ಅಂಕಣಕ್ಕೆ ನೀಡಿದ ಹೆಸರುಗಳು. ಇದರ ‘ಸಿಂಧೂರ’ ಅಂಕಣದಲ್ಲಿ ಮಹಿಳಾ ಸಾಧಕಿಯರನ್ನು ಅಭಿನಂದಿಸುವ ಪ್ರಯತ್ನವಿದ್ದರೆ, ಬೈತಲೆಬೊಟ್ಟು ಎಂಬುದು ಸಂಪಾದಕೀಯ. ಅಂತೆಯೇ, ಮುತ್ತಿನ ಹಾರದಲ್ಲಿ 20ನೇ ಶತಮಾನದ ಲೇಖಕಿಯರ ಪರಿಚಯವನ್ನು ಪೋಣಿಸಲಾಗುತ್ತದೆ ಎಂದು ಸಂಪಾದಕೀಯ ವರ್ಗ ಹೇಳಿಕೊಂಡಿದೆ.

ಇದರ ಪ್ರಧಾನ ಸಂಪಾದಕಿ ನಿವೃತ್ತ ವಿಜ್ಞಾನಿ ಜಿ.ವಿ.ನಿರ್ಮಲ. ಉಪಸಂಪಾದಕಿಯರಾಗಿ ನಿವೃತ್ತ ಪ್ರಾಧ್ಯಾಪಕಿ ಗಾಯತ್ರಿ ಮೂರ್ತಿ, ಹಾಗೂ ಸಂಶೋಧನಾ ಸಹಾಯಕಿ ಎಸ್. ಕ್ಷಮಾ ಕಾರ್ಯ ನಿರ್ವಹಿಸುತ್ತಾ, ವೆಬ್‌ಸೈಟನ್ನು ಅಚ್ಚುಕಟ್ಟಾಗಿ ರೂಪಿಸಿದ್ದಾರೆ.

ವೆಬ್‌ಸೈಟ್ ನುಡಿ ಲಿಪಿಯಲ್ಲಿದೆ. ಆದರೆ ಈಗ ಯುನಿಕೋಡ್ ಎಲ್ಲೆಡೆ ಪ್ರಸ್ತುತವಾಗುತ್ತಿರುವುದರಿಂದ ಮತ್ತು ಅದನ್ನು ಭವಿಷ್ಯದ ಗಣಕ ಲಿಪಿ ಎಂದೇ ಪರಿಭಾವಿಸಲಾಗಿರುವುದರಿಂದ ಸೈಟಿನ “ಯುನಿಕೋಡೀಕರಣ” ಸೂಕ್ತವಾಗುತ್ತಿತ್ತು.

ಸುಂದರ ಮತ್ತು ಸರಳ ಸಿಂಗಾರಿಯ ಸಾಹಿತ್ಯ ಸೇವೆ ನಿರಂತರವಾಗಿರಲಿ.

5 COMMENTS

  1. ಕನ್ನಡ-ಕನ್ನಡಿಗ-ಕರ್ನಾಟಕಗಳ ಏಳಿಗೆಗೆ ಬದ್ಧವಾದ ಬನವಾಸಿ ಬಳಗದ ಹೊಸ ಬ್ಲಾಗಿಗೊಮ್ಮೆ ಭೇಟಿಕೊಡಿ. ವಿಳಾಸ:
    http://enguru.blogspot.com

  2. ಧನ್ಯವಾದಗಳು. ನಮ್ಮ ಈ ಪ್ರಯತ್ನಕ್ಕೆ ನಿಮ್ಮಂತಹ ಕನ್ನಡಪ್ರಿಯರ ಉತ್ತೇಜನ ಸ್ವಾಗತ. 30ವರ್ಷ ಕಾಲ ವಿಜ್ಞಾನದ ಜಾಲದಲ್ಲಿದ್ದು, ಈಗ ತಂತ್ರಜ್ಞಾನ ಮತ್ತು ಸಾಹಿತ್ಯದ ಸುಳಿಯಲ್ಲಿ ಸಿಕ್ಕಿಬಿದ್ದಿದ್ದೇನೆ. ನಿಮ್ಮ ಜೀವನದ ಬಗ್ಗೆಯೂ ಓದಿದೆ. ಬದಲಾವಣೆ ಈ ಜೀವನ ಚಕ್ರದಲ್ಲಿ ಅಗತ್ಯವಲ್ಲವೆ? ನೀವು ತಿಳಿಸಿದ ಯೂನಿಕೋಡ್ ಬಳಕೆಗೆ ಪ್ರಯತ್ನ ಮಾಡುತ್ತಿದ್ದೇನೆ. ಮುಂದೆಯೂ ನಿಮ್ಮ ಸಲಹೆಗಳಿಗೆ, ಬರಹಗಳಿಗೆ ಸಿಂಗಾರಿ ಸಿದ್ಧವಾಗಿರುತ್ತದೆ.
    ನಮಸ್ಕಾರ
    ನಿರ್ಮಲ

  3. ನಿರ್ಮಲಾ ಅವರಿಗೆ ಸ್ವಾಗತ…

    ಇಂದಿನ ಕಾಲದಲ್ಲಿ ವಿಜ್ಞಾನಕ್ಕೂ ಸಾಹಿತ್ಯಕ್ಕೂ ಬಹಳ ಹತ್ತಿರದ ಸಂಬಂಧವಿದೆ. ಹಾಗಾಗಿ ನಿಮ್ಮ ದಾರಿ ಕೂಡ ಅದ್ಭುತ ಭವಿಷ್ಯದತ್ತ ನಿಮ್ಮನ್ನು ಒಯ್ಯುತ್ತದೆ ಎಂದು ಭಾವಿಸುವೆ.
    ನಮಸ್ಕಾರ
    -ಅವಿನಾಶ್

LEAVE A REPLY

Please enter your comment!
Please enter your name here