ಈ ಸ್ವಾತಂತ್ರ್ಯೋತ್ಸವಕ್ಕೇನು ಸಂಕಲ್ಪ? ಬನ್ನಿ, ಕಸ ಎತ್ತೋಣ!

0
270

ಅರುವತ್ತನಾಲ್ಕು ವರ್ಷಗಳಾದವು. ನಮಗೊಂದು ಅದೇನೋ ಅರ್ಥವಾಗದ, ಚರ್ವಿತ ಚರ್ವಣವಾಗಿಬಿಟ್ಟಿರುವ “ಸ್ವಾತಂತ್ರ್ಯ” ಎಂಬ ಪದವನ್ನು ಕೇಳಿ ಕೇಳಿ. ಬ್ರಿಟಿಷರೇನೋ ದೇಶ ಬಿಟ್ಟು ಹೋದರು. ಆದರೆ, ನಾವೋ? ಏನು ಮಾಡಿದ್ದೇವೆ, ಏನು ಮಾಡುತ್ತಿದ್ದೇವೆ ಎಂಬುದನ್ನು ಬಹುಶಃ ಬಿಡಿಸಿ ಹೇಳಬೇಕಿಲ್ಲ. ಒಂದು ಸಾರಿ ನಮ್ಮ ದೇಶದ, ನಮ್ಮ ರಾಜ್ಯದ, ನಮ್ಮ ಜಿಲ್ಲೆಯ, ನಮ್ಮ ತಾಲೂಕಿನ, ಅಷ್ಟು ದೂರವೆಲ್ಲಾ ಬೇಡ, ನಮ್ಮ ಗ್ರಾಮದ ಪರಿಸ್ಥಿತಿಯನ್ನು ಒಂದ್ಸಲ ನೋಡಿಬಿಟ್ಟರೆ ಸಾಕು, ಅದು ಹೇಗಿದೆ ಅಂತ ನಿಮಗೂ ಅರ್ಥವಾಗುತ್ತದೆ!

ಸ್ವಾತಂತ್ರ್ಯವೆಂಬೋ ಉತ್ಸವದ, ಸಡಗರದ, ಸಂಭ್ರಮದ ಆ ದಿನವನ್ನು ಯಾಕೆ ಆಚರಿಸುತ್ತೇವೆ ಅಂತೇನಾದರೂ ಕೇಳಿದರೆ, ಮೆಕಾಲೆ ಪ್ರಣೀತ ಶಿಕ್ಷಣ ಪದ್ಧತಿಯಿಂದಲೇ ಸೋತು ಸುಣ್ಣವಾಗಿರುವ ನಮ್ಮ ಎಳೆಯರು “ಬ್ರಿಟಿಷರ ದಾಸ್ಯದ ಸಂಕೋಲೆ ಬಿಡಿಸಿಕೊಂಡ ದಿನ ಮತ್ತು ನಮ್ಮ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸಿಕೊಳ್ಳುವ ದಿನ” ಅಂತೆಲ್ಲಾ ಹೇಳಿಬಿಡುತ್ತಾರೆ!

ಆದರೆ ನಿಜ ಪರಿಸ್ಥಿತಿ ಏನು? ವಾಸ್ತವಿಕ ಜಗತ್ತಿನ ಬಗ್ಗೆ ನಮ್ಮ ಎಳೆಯರ ಮನಸ್ಸಿನಲ್ಲಿ ನಾವೇನನ್ನು ಬಿತ್ತುತ್ತಿದ್ದೇವೆ, ಎಷ್ಟನ್ನು ಬಿತ್ತಿ ಬೆಳೆಸುತ್ತಿದ್ದೇವೆ? ಈ ಛೀ ಥೂ ರಾಜಕೀಯದ ನಡುವೆ, ಈಗಾಗಲೇ ನಿಯಂತ್ರಣಕ್ಕೆ ಸಿಲುಕದಷ್ಟು ಎತ್ತರಕ್ಕೆ ಬೆಳೆದಿರುವ ಭ್ರಷ್ಟಾಚಾರ ಪೆಡಂಭೂತವನ್ನು ಹತ್ತಿಕ್ಕಲು, ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರವಾಗಿರುವ ಒಂದು ಸಮರ್ಥ, ಪ್ರಬಲ, ಕಟ್ಟು ನಿಟ್ಟಿನ ಕಾನೂನು ಜಾರಿಗೊಳಿಸಿ ಎನ್ನುತ್ತಾ ಸಾಮಾನ್ಯ ಪ್ರಜೆಯೊಬ್ಬ ಹೋರಾಟ ಮಾಡಬೇಕಾಗಿ ಬಂದಿದೆಯಲ್ಲಾ! ಇದೆಲ್ಲವೂ ನಮ್ಮ ಭವ್ಯ ಭವಿಷ್ಯದ ಭಾವೀ ಪ್ರಜೆಗಳಿಗೆ ಅರಿವಾಗುವಂತೆ ಮಾಡುತ್ತಿದ್ದೇವೆಯೇ?

ಒಂದು ಡ್ರೈವಿಂಗ್ ಲೈಸೆನ್ಸ್ ಮಾಡಿಸಿಕೊಳ್ಳಬೇಕಿದ್ದರೆ ಲಂಚ, ಒಂದು ಜಮೀನು ದಾಖಲೆ ಪತ್ರ ಮಾಡಿಸಿಕೊಡಬೇಕಿದ್ದರೆ ಒಂದಿಷ್ಟು… ಹೀಗೆ ನಮ್ಮ ಹಕ್ಕನ್ನು ಪಡೆದುಕೊಳ್ಳಲೂ “ಕೊಂಚ ಕೊಂಚ” ಕೈಯಾರೆ ಕೊಡದೆ ಕೆಲಸವಾಗದ ಪರಿಸ್ಥಿತಿ ಇದೆ. ಇಂಥದ್ದನ್ನು ತಡೆಯಬೇಕಿದ್ದರೆ ಪ್ರಬಲ ಕಾಯ್ದೆ ಮಾಡಿಕೊಡಿ ಅಂತ ಕೇಳಿದರೆ, “ನೀವೇನು ಜನರಿಂದ ಆರಿಸಿ ಬಂದವರೇ? ನಮಗೆ ಹೇಳಲು ನೀವ್ಯಾರು” ಎಂಬ ಪ್ರಶ್ನೆಯೊಂದು ಸದ್ದಿಲ್ಲದೆ ಅಧಿಕಾರಯುತವಾಗಿ ಕೇಳಿಬರುತ್ತದೆ!

ಹೋಗಲಿ ಬಿಡಿ, ಹೇಗೂ ದೇಶದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯೇ ಹೇಳಿಕೊಟ್ಟ ಅಹಿಂಸಾತ್ಮಕ ಪ್ರತಿಭಟನೆಯನ್ನಾದರೂ ಮಾಡಿ, ದೇಶವಾಳುವವರಲ್ಲಿ ಭ್ರಷ್ಟಾಚಾರ ಹತ್ತಿಕ್ಕುವ ಇಚ್ಛಾಶಕ್ತಿಯು ಬೆಳೆಯುವಂತೆ ಮಾಡೋಣ ಅಂತ ತಿಂಗಳ ಹಿಂದೆಯೇ ಘೋಷಿಸಿದ್ದರೆ, ಅದನ್ನು ದಮನಿಸಲು ವ್ಯವಸ್ಥಿತವಾದ ಪ್ರಯತ್ನವೊಂದನ್ನು ಅಧಿಕಾರಸ್ಥರು ಮಾಡುತ್ತಿರುವಾಗ, “ಕಪ್ಪು ಹಣ ವಾಪಸ್ ತನ್ನಿ, ದೇಶವನ್ನು ಕಾಡುತ್ತಿರುವ ಬೆಲೆ ಏರಿಕೆಯನ್ನು ಕೊಂಚವಾದರೂ ತಗ್ಗಿಸೋಣ” ಅಂತ ಉಪವಾಸ ಮಾಡಿ, ರಾತೋರಾತ್ರಿ ಮಲಗಿ ನಿದ್ರಿಸುತ್ತಿದ್ದ ವೃದ್ಧರು, ಮಕ್ಕಳು, ಮಹಿಳೆಯರೆನ್ನದೆ, ಅವರ ಮೇಲೆ ಪೊಲೀಸರನ್ನು ಛೂ ಬಿಟ್ಟ ದೃಶ್ಯ ಕಣ್ಮುಂದೆ ಬೇಡವೆಂದರೂ ಸುಳಿದು ಹೋಗುತ್ತಾ, ಮನಸ್ಸು ಮುದುಡುತ್ತದೆ!

ಇವನ್ನೆಲ್ಲಾ ನೋಡುವಾಗ, ಕೇಳುವಾಗ ನೆತ್ತರು ಕುದಿಯುತ್ತದೆ. ನಮ್ಮ ನಿಮ್ಮೆಲ್ಲರ ಒಳಿತಿಗಾಗಿ ಕಟ್ಟು ನಿಟ್ಟಿನ ಕಾಯ್ದೆಯೊಂದನ್ನು ಜಾರಿಗೊಳಿಸಲು ಒತ್ತಾಯಿಸುತ್ತಿರುವವರು ಭ್ರಷ್ಟರೇನಲ್ಲ. ಆದರೆ, ಅಂಥವರ ಮೇಲೆಯೇ ಭ್ರಷ್ಟಾಚಾರ ಕೇಸು ದಾಖಲಿಸುವ, ಅವರ ಆಸ್ತಿ ಕೆದಕುವ ಪ್ರಯತ್ನ, ಅವರ ಹೆಸರಿಗೆ ಮಸಿ ಬಳಿಯುವ, ತಮ್ಮ ತಟ್ಟೆಯಲ್ಲಿ ಆನೆ ಬಿದ್ದಿದ್ದರೂ, ಅವರ ತಟ್ಟೆಯ ಸೊಳ್ಳೆಯನ್ನೇ ಎತ್ತಿ ತೋರಿಸಿ, ಯಥಾರ್ಥ ಉದ್ದೇಶವನ್ನೇ ಹತ್ತಿಕ್ಕುವ ಪ್ರಯತ್ನ! ಬೆಲೆ ಏರಿಕೆಯನ್ನು ಹತ್ತಿಕ್ಕಲಾರದವರು, ಭ್ರಷ್ಟಾಚಾರದ ವಿರುದ್ಧ ಶಾಂತಿಯುತ ಹೋರಾಟ ಮಾಡುವವರನ್ನು ಹತ್ತಿಕ್ಕುತ್ತಾ ಪೌರುಷ ತೋರಿಸುತ್ತಾರೆ. ಇದೆಂಥಾ ಸ್ಥಿತಿ? ಎಲ್ಲಿಗೆ ಬಂತು, ಯಾರಿಗೆ ಬಂತು ಸ್ವಾತಂತ್ರ್ಯ ಅಂತ ಕೇಳೋದು ಇದಕ್ಕೇನಾ?

ಹಾಗಿದ್ದರೆ ಮುಂದಿನ ಪೀಳಿಗೆಯವರಿಗಾದರೂ ಈ ದೇಶವನ್ನು ಉಳಿಸಲು, ಅಳಿಲು ಸೇವೆಯ ರೀತಿಯಲ್ಲಿ ನಾವು, ನೀವೇನು ಮಾಡಬಹುದು? ಬನ್ನಿ, ಕಸ ಎತ್ತೋಣ. ಯಾವ ಕಸವನ್ನು? ಭ್ರಷ್ಟಾಚಾರವೆಂಬ ಕಸವನ್ನು! ಭ್ರಷ್ಟಾಚಾರವೆಂಬ ಪ್ಲಾಸ್ಟಿಕ್ ವಿಷವನ್ನು! ಭ್ರಷ್ಟಾಚಾರವೆಂಬ ವ್ರಣದಿಂದ ಮತ್ತು ಕೊಳೆರೋಗದಿಂದ ಕೆಟ್ಟಿರುವ ಹಚ್ಚ ಹಸಿರನ್ನು! ಭ್ರಷ್ಟತೆ ಹರಡಿರುವ ಉಸಿರನ್ನು! ಇಂಥಾ ಕಸವನ್ನು ಎತ್ತಿ ಒಂದೆಡೆ ಸುರಿದು, ಗೊಬ್ಬರ ಮಾಡೋಣ. ಇದೇ ಗೊಬ್ಬರ ಬಳಸಿ ಭ್ರಷ್ಟಾಚಾರ ರಹಿತ, ಶುದ್ಧ ವಾತಾವರಣಕ್ಕೆ ಕಾರಣವಾಗಬಲ್ಲ, ಪೂರಕವಾಗಬಲ್ಲ ಹಚ್ಚ ಹಸುರಿನ ಗಿಡ ನೆಡಲು ಸಂಕಲ್ಪಿಸೋಣ.

ಭ್ರಷ್ಟಾಚಾರ ವಿರುದ್ಧ ಹೋರಾಟ ನಡೆಸುತ್ತಿರುವ ಅಣ್ಣಾ ಹಜಾರೆಯವರಿಗೆ ಬೆಂಬಲಿಸಿದರೆ, ನಮಗೆ ನಾವೇ ಬೆಂಬಲಿಸಿದಂತೆ! ನಮ್ಮ ಭವಿಷ್ಯವನ್ನು ರಕ್ಷಿಸಿದಂತೆ! ನಿಜ ಅರ್ಥದಲ್ಲಿ ಸ್ವಾತಂತ್ರ್ಯ ದಿನವನ್ನು ಆಚರಿಸಲು ಸಿದ್ಧರಾಗೋಣ. ಕವಿ ಜಯಂತ ಕಾಯ್ಕಿಣಿಯವರು ಟಿವಿ ಸಂದರ್ಶನದಲ್ಲಿ ಹೇಳಿದ ಒಂದು ಮಾತು ನೆನಪಾಗುತ್ತಿದೆ. “ನಾವೆಲ್ಲರೂ ಹುಟ್ಟಾ ಮಾನವರೇನಲ್ಲ. ಮಾನವರಾಗಲು ಹುಟ್ಟಿದವರು” ಇದರ ಹಿಂದಿನ ಮರ್ಮವನ್ನು ನೆನಪಿಸಿಕೊಳ್ಳುತ್ತಾ, ಎಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಯಗಳು!
[ವೆಬ್‌ದುನಿಯಾಕ್ಕಾಗಿ]

LEAVE A REPLY

Please enter your comment!
Please enter your name here