ಕನ್ನಡಕ್ಕಾಗಿ ಸದ್ದಿಲ್ಲದೆ ಮಿಡಿಯುವ, ದುಡಿಯುವ ಕೈಗಳು

0
379

ಕನ್ನಡದ ನೆಲದ ಪುಲ್ಲೆನಗೆ ಪಾವನ ತುಲಸಿ!
ಕನ್ನಡದ ನೆಲದ ನೀರ್ವೊನಲೆನಗೆ ದೇವನದಿ
ಕನ್ನಡದ ನೆಲದ ಕಲ್ಲೆಮಗೆ ಶಾಲಗ್ರಾಮ ಶಿಲೆ! ಕನ್ನಡಂ ದೈವಮೈ!
ಕನ್ನಡದ ಶಬ್ದಮೆಮಗೋಂಕಾರಮೀಯೆನ್ನ
ಕನ್ನಡದ ನುಡಿಯೆ ಗಾಯತ್ರಿಯದ್ಭುತ ಮಂತ್ರ-
ಮಿನ್ನಾವುದೈ ಪೆರತು ಕನ್ನಡದ ಸೇವೆಯಿಂದಧಿಕಮೀ ಜಗದೊಳಗೆ?
-ಸಾಲಿ ರಾಮಚಂದ್ರರಾಯರು

20171031_185029
ವರದಿ ಮತ್ತು ಪದ ವಿವರಣ ಕೋಶ

ಮಾಹಿತಿ ತಂತ್ರಜ್ಞಾನವು ಪ್ರತಿಯೊಬ್ಬ ಕನ್ನಡಿಗನನ್ನೂ ತಲುಪಬೇಕೆಂದಾದರೆ, ಅದಕ್ಕೆ ಮೂಲ ಪಂಚಾಂಗವೆಂದರೆ, ನಮ್ಮ ಸರಕಾರದ ವಿವಿಧ ಇಲಾಖೆಗಳ ಜಾಲತಾಣಗಳು ಕನ್ನಡದಲ್ಲಿರುವುದು ಮತ್ತು ಯೋಜನೆಗಳ ಕುರಿತ ಮಾಹಿತಿಗಳು ಕೂಡ ಸುಲಭ ಗ್ರಾಹ್ಯವಾಗುವುದು. ಈ ಆಶಯ ಅಲ್ಪಸ್ವಲ್ಪ ತಂತ್ರಜ್ಞಾನ ಬಲ್ಲ ನಮಗೆಲ್ಲರದೂ ಆಗಿದ್ದರೂ, ಗ್ರಾಮ ಗ್ರಾಮ ಮಟ್ಟದಲ್ಲಿ ಏನೂ ಗೊತ್ತಿಲ್ಲದವರೂ ಮೊಬೈಲ್, ಇಂಟರ್ನೆಟ್ ಅಂತ ಮಾತನಾಡುತ್ತಿದ್ದರೂ, ಸರಕಾರದ ಅಧಿಕಾರ ಸ್ಥಾನದಲ್ಲಿರುವವರು ಮನಸ್ಸು ಮಾಡದಿದ್ದರೆ ಏನೂ ಮಾಡಲಾಗುವುದಿಲ್ಲ. ಅದಕ್ಕೆ ಕನ್ನಡದ ಬಗೆಗೆ ತುಡಿಯುವ ಮನಸ್ಸು ಮಾತ್ರವೇ ಅಲ್ಲ, ಅನಗತ್ಯ ಖರ್ಚುವೆಚ್ಚ ತಗ್ಗಿಸಿ ತಂತ್ರಜ್ಞಾನವನ್ನು ಸುಲಭವಾಗಿ ಜನರ ಕೈಗೆಟಕುವಂತೆ ಮಾಡಬಹುದೆಂಬ ಆಲೋಚನೆಯೂ ಬೇಕು, ಜತೆಗೆ ಇಚ್ಛಾಶಕ್ತಿ.

ಈ ಆಶಯದೊಂದಿಗೆ 2017ರ ಕನ್ನಡ ರಾಜ್ಯೋತ್ಸವದ ಮುನ್ನಾದಿನ (ಅ.31) ಅಂದರೆ ನಿನ್ನೆ ವಿಧಾನಸೌಧದಲ್ಲೊಂದು ಕನ್ನಡ ಅಸ್ಮಿತೆಯ ಪುಟ್ಟ ಕಾರ್ಯಕ್ರಮಕ್ಕೆ ನಾನೂ ಸಾಕ್ಷಿಯಾಗಿದ್ದೆ. ಇದರಲ್ಲಿ ಸದ್ದಿಲ್ಲದೆ ಕನ್ನಡದ ಕಾಯಕದಲ್ಲಿ ತಮ್ಮದೇ ಆದ ರೀತಿಯಲ್ಲಿ ತೊಡಗಿಕೊಂಡಿರುವ ಇಬ್ಬರ ಪರಿಶ್ರಮ ಎದ್ದು ಕಂಡಿತು. ನವೆಂಬರ್ ತಿಂಗಳಿಗಷ್ಟೇ ಸೀಮಿತವಾಗದೆ, ಕನ್ನಡ ಇರುವವರೆಗೂ ಸಾರ್ಥಕ್ಯ ಪಡೆಯಬಲ್ಲ ಶ್ರಮವಿದು.

ಒಂದನೆಯದು, ಪ್ರೊ.ಎಸ್.ಜಿ.ಸಿದ್ಧರಾಮಯ್ಯ ಅಧ್ಯಕ್ಷತೆಯ, ಡಾ.ಕೆ.ಮುರಳೀಧರ ಕಾರ್ಯದರ್ಶಿತ್ವದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸಿಎಂ ಸಿದ್ದರಾಮಯ್ಯ ಅವರಿಗೆ ಕನ್ನಡ ಜಾಲತಾಣಗಳ ಉದ್ಧಾರದ ಕುರಿತು ಒಂದು ವರದಿ ಸಲ್ಲಿಕೆಯಾಯಿತು. ಇದರ ಹಿಂದಿನ ಶ್ರಮ ಬೇಳೂರು ಸುದರ್ಶನ ಅವರದು. ವಿಷಯ ‘ಕರ್ನಾಟಕ ಸರಕಾರದ ಜಾಲತಾಣಗಳಲ್ಲಿ ಕನ್ನಡ ಬಳಕೆ, ಶಿಷ್ಟತೆ, ಏಕರೂಪತೆ ಮತ್ತು ಸುಲಭಗ್ರಾಹ್ಯತೆ‘. ಸಮಗ್ರ ಶಿಫಾರಸುಗಳುಳ್ಳ ಈ ವರದಿಯನ್ನು ಓದಿದರೆ, ರಾಜ್ಯ ಸರಕಾರದ ವಿಭಿನ್ನ ಇಲಾಖೆಗಳ ಜಾಲತಾಣಗಳ ಕನ್ನಡೀಕರಣ ಮತ್ತು ಸುವ್ಯವಸ್ಥೆಯೇನೂ ರಾಕೆಟ್ ವಿಜ್ಞಾನವೇನಲ್ಲ ಎಂಬುದು ಅರಿವಿಗೆ ಬರುತ್ತದೆ. ಒಂದಿಷ್ಟು ಸಾಮಾನ್ಯ ಜ್ಞಾನವಿರುವವರಿಗೆ ತಿಳಿದಿರುವ ವಿಷಯಗಳೇ ಇದಾದರೂ, ತಂತ್ರಜ್ಞಾನದ ಬಗ್ಗೆ ಅನಾಸ್ಥೆಯಿರುವ ಅಧಿಕಾರ ಸ್ಥಾನದಲ್ಲಿರುವವರಿಗೆ, ಸುಲಭವಾಗಿ, ಸರಳವಾಗಿ ತಿಳಿಸುವಂತಿದೆ ವರದಿ. ಒಂದು ಜಾಲತಾಣವು ಹೇಗೆ ಸಾಮಾನ್ಯ ಓದುಗನಿಗೆ ಸುಲಭಗ್ರಾಹ್ಯವಾಗಬೇಕು ಎಂಬ ಮಾಹಿತಿ ಇದರಲ್ಲಿದೆ. ಈ ವರದಿ ಸಿದ್ಧಪಡಿಸಿದ ಬೇಳೂರು ಸುದರ್ಶನ ಅವರಂಥವರ ಶ್ರಮ ಸಾರ್ಥಕವಾಗಬೇಕಿದ್ದರೆ, ಅತ್ಯಂತ ಸುಲಭವಾದ ಈ ಶಿಫಾರಸುಗಳು ಜಾರಿಯಾಗುವುದು.

ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲೊಂದು ಸೆಲ್ಫೀ
ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲೊಂದು ಸೆಲ್ಫೀ

ಎರಡನೆಯದು: ಕಂಪ್ಯೂಟರ್ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಜನ ಸಾಮಾನ್ಯರ ಬಾಯಲ್ಲಿ ನಲಿದಾಡುತ್ತಿರುವ ಆಂಗ್ಲ ಪದಗಳ ಕುರಿತು, ಅದು ಏನು, ಎತ್ತ ಎಂಬುದನ್ನು ಸುಲಭವಾಗಿ ವಿವರಿಸುವ ಪದ ವಿವರಣ ಕೋಶವೊಂದನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಬಿಡುಗಡೆಗೊಳಿಸಿದರು. ಇದನ್ನು ರೂಪಿಸಿದವರು ತಂತ್ರಜ್ಞ ಟಿ.ಜಿ.ಶ್ರೀನಿಧಿ. ಅಟ್ಯಾಚ್‌ಮೆಂಟ್, ಆ್ಯಡ್‌ಬ್ಲಾಕರ್, ಎಪಿಐ, ಫ್ಲೈಟ್ ಮೋಡ್, ರೀಫ್ರೆಶ್, ಮಾಲ್‌ವೇರ್, ವೈರಸ್, ಹಾರ್ಡ್ ಡಿಸ್ಕ್… ಹೀಗೆ ಆಂಗ್ಲ ಪದಗಳೇ ಜೀವಾಳವಾಗಿರುವ ಕಂಪ್ಯೂಟರ್ ಲೋಕದಲ್ಲಿ ಇಂಥ ಪದಗಳ ಅರ್ಥವೇನು ಎಂಬುದನ್ನು 342 ಪುಟಗಳ ‘ಪದ ವಿವರಣ ಕೋಶ’ದಲ್ಲಿ ಸರಳವಾಗಿ ಕಟ್ಟಿಕೊಟ್ಟಿದ್ದಾರೆ ಶ್ರೀನಿಧಿ. ಪ್ರೊ.ಎಸ್.ಜಿ.ಸಿದ್ದರಾಮಯ್ಯ ಸಂಪಾದಕತ್ವದಲ್ಲಿ, ಡಾ.ಕೆ.ಮುರಳೀಧರ, ನಾಗೇಶ ಹೆಗಡೆ, ಜಗನ್ನಾಥ ಪ್ರಕಾಶ್, ಟಿ.ಎಸ್.ಗೋಪಾಲ್, ಉದಯ ಶಂಕರ ಪುರಾಣಿಕ ಮುಂತಾದವರ ಸಲಹೆಯೊಂದಿಗೆ ಶ್ರೀನಿಧಿ ಈ ಪದಗಳಿಗೆ ವಿವರಣೆ ನೀಡಿದ್ದಾರೆ. ಅದನ್ನು epada.in ತಾಣದಲ್ಲಿಯೂ ಅಳವಡಿಸಿದ್ದಾರೆ. ಎಲ್ಲ ಕನ್ನಡಿಗರಿಗೂ ಅತ್ಯಗತ್ಯವಾಗಿ ಗೊತ್ತಿರಬೇಕಾದ ಪದಗಳ ಅರ್ಥ ಇಲ್ಲಿದೆ.

ಬೇಳೂರು ಸುದರ್ಶನ ಅವರೇ ಹೇಳುವಂತೆ:
ಕರ್ನಾಟಕ ಸರ್ಕಾರದ ಜಾಲತಾಣಗಳಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಕನ್ನಡವಿದೆ. ಜಾಲತಾಣಗಳ ಹೊರಗಿನ ಪರದೆಯ ಮೇಲೆ ಸಾರ್ವಜನಿಕರಿಗೆ ದೊರಕುವ ಮಾಹಿತಿ ಇದೀಗ ನಿಧಾನವಾಗಿ ಹೆಚ್ಚಾಗುತ್ತಿದೆ. ಆದರೆ ಈ ಜಾಲತಾಣ ಪುಟಗಳ ಹಿಂದೆಯೂ ಕನ್ನಡ ಇರಬೇಕಾಗುತ್ತದೆ. ವಿನ್ಯಾಸ, ತಂತ್ರಜ್ಞಾನ, ಇಲಾಖಾವಾರು ಪದಕೋಶ, ಸರ್ಕಾರಿ ದಾಖಲೆಗಳು – ಎಲ್ಲವನ್ನೂ ಕನ್ನಡದಲ್ಲಿ ರೂಪಿಸಬೇಕು. ಹೀಗೆ ತಂತ್ರಜ್ಞಾನದ ಆಳದಲ್ಲಿ ಕನ್ನಡವನ್ನು ಮೂಡಿಸುವ ಕೆಲಸ ಆಗಬೇಕಿದೆ. ವರದಿಯೇ ತಡವಾಗಿದೆ. ಇನ್ನೂ ತಡಮಾಡದೆ ಈ ವರದಿಯ ಶಿಫಾರಸುಗಳನ್ನು ಸಮುದಾಯದ ಸಕ್ರಿಯ ಭಾಗಿತ್ವದೊಂದಿಗೆ ಅನುಷ್ಠಾನಗೊಳಿಸಬೇಕು ಎಂದು ಕನ್ನಡಿಗರ ಪರವಾಗಿ ಆಗ್ರಹಿಸುತ್ತೇನೆ. ವಂದನೆಗಳು.
– ಬೇಳೂರು ಸುದರ್ಶನ

ಕನ್ನಡಕ್ಕಾಗಿ ನಿಜವಾಗಿಯೂ ದುಡಿಯುವ, ತಂತ್ರಜ್ಞಾನವನ್ನು ಜನರತ್ತ ತಲುಪಿಸಲು ಶ್ರಮಿಸುವ ಕೆಲವೇ ಕೆಲವು ಕನ್ನಡದ ಕಟ್ಟಾ ಹೋರಾಟಗಾರರೆಂದರೆ ಇಂಥವರೇ ಅಲ್ಲವೇ? ಸದ್ದಿಲ್ಲದೇ ಕೆಲಸ ಮಾಡುವವರು!

LEAVE A REPLY

Please enter your comment!
Please enter your name here