ಕಡಿಮೆ ಬೆಲೆಯ ಅತ್ಯುತ್ತಮ ಸ್ಮಾರ್ಟ್‌ಫೋನ್: InFocus

2
768

InFocus8 ಮೆಗಾಪಿಕ್ಸೆಲ್ ರೆಸೊಲ್ಯುಶನ್‌ನ ಮುಂಭಾಗ ಹಾಗೂ ಹಿಂಭಾಗದ ಎರಡು ಕ್ಯಾಮೆರಾಗಳು, ಎರಡಕ್ಕೂ ಫ್ಲ್ಯಾಶ್, 1.3 ಗಿಗಾಹರ್ಟ್ಜ್ ಮೀಡಿಯಾಟೆಕ್ ಕ್ವಾಡ್ ಕೋರ್ ಪ್ರೊಸೆಸರ್, 3ಜಿ, ಆಂಡ್ರಾಯ್ಡ್ ಕಿಟ್‌ಕ್ಯಾಟ್ (4.4.2) ಮಾರ್ಪಡಿತ ಕಾರ್ಯಾಚರಣಾ ವ್ಯವಸ್ಥೆ, ಎರಡು ಮೈಕ್ರೋ ಸಿಮ್ ವ್ಯವಸ್ಥೆ, 1 ಜಿಬಿ RAM, 8 ಜಿಬಿ ಆಂತರಿಕ ಮೆಮೊರಿ, 64 ಜಿಬಿ ವರೆಗೆ ವಿಸ್ತರಿಸಬಹುದಾದ ಮೆಮೊರಿ ಕಾರ್ಡ್ ಸ್ಲಾಟ್, 2010 mAh ಬ್ಯಾಟರಿ, 768×1280 ಪಿಕ್ಸೆಲ್ ರೆಸೊಲ್ಯುಶನ್ ಇರುವ 4.2 ಇಂಚಿನ ಸ್ಕ್ರೀನ್, ತೀರಾ ಹಗುರವಾದ, ಕೈಯಲ್ಲಿ ಹಿಡಿಯಲು ಅನುಕೂಲಕರವಾಗ ಸ್ವಲ್ಪ ಉದ್ದನೆಯ ಶೇಪ್…

ಇಂತಹಾ ಸ್ಪೆಸಿಫಿಕೇಶನ್ ಇರುವ ಯಾವುದೇ ಒಳ್ಳೆಯ ಕಂಪನಿಯ ಸ್ಮಾರ್ಟ್ ಫೋನ್ ಬೆಲೆ ಎಷ್ಟಿರಬಹುದು ಅಂತ ಲೆಕ್ಕ ಹಾಕುತ್ತಿದ್ದೀರಾ? ಏನಿಲ್ಲವೆಂದರೂ 10ರಿಂದ 15 ಸಾವಿರ ರೂ. ಇರಬಹುದು. ಅದು ಬಿಡಿ, ಸ್ವಲ್ಪ ಮಟ್ಟಿಗೆ ಈ ಸ್ಪೆಸಿಫಿಕೇಶನ್‌ಗೆ ಹತ್ತಿರವಾಗಿರುವ ಮೋಟೋ ಇ, ರೆಡ್‌ಮಿ 1 ಎಸ್ ಬೆಲೆ ಆರೇಳು ಸಾವಿರ ರೂ. ಇದೆ. ಆದರೆ, ಇನ್‌ಫೋಕಸ್ ಎಂ2 ಎಂಬ ಈ ಸ್ಮಾರ್ಟ್ ಫೋನ್‌ನ ಬೆಲೆ 4999 ರೂ. ಮಾತ್ರ! ಕಪ್ಪು ಅಥವಾ ಬಿಳಿ ಹಿಂಭಾಗದ ಕವಚವಿರುವ ಎರಡು ಮಾಡೆಲ್‌ಗಳು ಲಭ್ಯ ಇವೆ. ಇದರ ಸುಧಾರಿತ ಆವೃತ್ತಿ ಎಂ330, ಬೆಲೆ 9999 ರೂ. ಅದರ ಸ್ಪೆಸಿಫಿಕೇಶನ್‌ಗೆ ಅದು ದುಬಾರಿ ಅಂತ ನನಗೆ ಅನ್ನಿಸಿತು. (13 ಮತ್ತು 8 ಮೆಗಾಪಿಕ್ಸೆಲ್, ಡ್ಯುಯಲ್ ಕ್ಯಾಮೆರಾ, ಡ್ಯುಯಲ್ ಫ್ಲಾಶ್, 16 ಜಿಬಿ ಸ್ಟೋರೇಜ್, 64 ಜಿಬಿವರೆಗೆ ವಿಸ್ತರಿಸಬಹುದು, 2 ಜಿಬಿ RAM, 3010 mAh ಬ್ಯಾಟರಿ— ಇವಿಷ್ಟು ಪ್ರಮುಖ ವೈಶಿಷ್ಟ್ಯಗಳು).

5 ಸಾವಿರ ರೂ. ಒಳಗೆ ಇಂಥದ್ದೊಂದು ಸುಂದರ ಫೋನ್ ನಿಮ್ಮ ಕೈಗೆ ಸಿಗುತ್ತಿದೆ ಎಂದಾದರೆ ನಿಮಗೆ ಅಚ್ಚರಿಯಾಗಬಹುದು. ನನಗೂ ಅಚ್ಚರಿಯಾದ ಕಾರಣದಿಂದಲೇ ಅದನ್ನು ತರಿಸಿಕೊಂಡು ನೋಡಿದಾಗ, ವ್ಯಾಲ್ಯೂ ಫಾರ್ ಮನಿ ಎಂಬುದು ದಿಟವಾಯಿತು.

ಈ ಎಂ2 ಎಂಬ ಫೋನ್ ಮೂಲಕ InFocus ಎಂಬ ಅಮೆರಿಕ ಮೂಲದ ಕಂಪನಿಯೊಂದು ಸದ್ದಿಲ್ಲದೆ ಭಾರತದ ಮಾರುಕಟ್ಟೆಗೆ ಇಳಿದು ಹೊಸ ಕ್ರಾಂತಿಯನ್ನೇ ಮಾಡಿದೆ. ಮುಖ ಗುರುತಿಸಿದರಷ್ಟೇ ಫೋನ್ ಸ್ಕ್ರೀನ್ ಅನ್‌ಲಾಕ್ ಮಾಡುವ ವ್ಯವಸ್ಥೆಯೂ ಇಲ್ಲಿದೆ. ಮುಂಭಾಗದ 8 ಮೆಗಾಪಿಕ್ಸೆಲ್, ಫ್ಲ್ಯಾಶ್ ಇರುವ ಕ್ಯಾಮೆರಾ ತೆರೆದು, ನೀವು ಸ್ವಲ್ಪವೇ ನಕ್ಕರೂ ಸಾಕು, ಸ್ವಯಂಚಾಲಿತವಾಗಿ ಫೋಟೋ ತೆಗೆಯುತ್ತಾ ಹೋಗುತ್ತದೆ! ತೆಗೆದ ಫೋಟೋಗಳನ್ನು ನಮಗೆ ಬೇಕಾದಂತೆ ತಿದ್ದುಪಡಿ ಮಾಡುವ, ತಿರುಚುವ ವ್ಯವಸ್ಥೆ ಇರುವ MeituPic ಎಂಬ ಚೈನೀಸ್ ಆ್ಯಪ್ ಇದರಲ್ಲಿ ಅಳವಡಿಕೆಯಾಗಿಯೇ ಬಂದಿದೆ.

ಆಡಿಯೋ ಎಫೆಕ್ಟ್‌ಗಳನ್ನು ನಮಗೆ ಬೇಕಾದಂತೆ ಬದಲಾಯಿಸಿಕೊಳ್ಳಬಲ್ಲ ಅತ್ಯುತ್ತಮ ಆ್ಯಪ್ ಕೂಡ ಇದೆ. ಮತ್ತು ತುಂಬ ಮೃದುವಾದ ನ್ಯಾವಿಗೇಶನ್‌ಗೆ ತನ್ನದೇ ಆದ ರೀತಿಯಲ್ಲಿ ಕಿಟ್ ಕ್ಯಾಟ್ ಕಾರ್ಯಾಚರಣಾ ವ್ಯವಸ್ಥೆಯನ್ನು ಕಸ್ಟಮೈಸ್ ಮಾಡಿ ಇನ್‌ಲೈಫ್ ಯೂಸರ್ ಇಂಟರ್ಫೇಸ್ ಒದಗಿಸಿದೆ.

ಎರಡು 8 ಮೆಗಾಪಿಕ್ಸೆಲ್ ಕ್ಯಾಮೆರಾಗಳು ಮತ್ತು ಎರಡು ಫ್ಲ್ಯಾಶ್‌ಗಳು ಇದರ ಪ್ರಧಾನ ವಿಶೇಷತೆಯಾದರೆ, ಹಿಂಭಾಗದ ಕವಚವು ಬಾಗಿದ ರೀತಿಯಲ್ಲಿದ್ದು, ಆಕರ್ಷಕವಾಗಿದೆ. ಇದನ್ನು ತಯಾರಿಸಿದ್ದು ಫಾಕ್ಸ್‌ಕಾನ್. ಫಿಕ್ಸ್ ಆಗಿರುವ ಬ್ಯಾಟರಿ ಇದ್ದು, ಬೆಂಗಳೂರು, ಮಂಗಳೂರು, ಹುಬ್ಬಳ್ಳಿಗಳಲ್ಲಿ ಕೂಡ ಸರ್ವಿಸ್ ಸೆಂಟರುಗಳಿವೆ.

ಕೊಡಿಗೆಹಳ್ಳಿ ಜಾತ್ರೆಗೆ ಹೋಗಿದ್ದಾಗ, ವೀರಗಾಸೆ ಕುಣಿತದ ಕಲಾವಿದರೊಬ್ಬರು, ತಮ್ಮತ್ತ ಎಸೆದ ತೆಂಗಿನ ಕಾಯಿಯನ್ನು ಖಡ್ಗದಿಂದ ಒಡೆಯುವ ದೃಶ್ಯ. ತೆಂಗಿನ ಕಾಯಿ ಗಾಳಿಯಲ್ಲಿರೋದನ್ನು ಗಮನಿಸಿ. ಇದು ಇನ್‌ಫೋಕಸ್ ಚಿತ್ರ :D
ಕೊಡಿಗೆಹಳ್ಳಿ ಜಾತ್ರೆಗೆ ಹೋಗಿದ್ದಾಗ, ವೀರಗಾಸೆ ಕುಣಿತದ ಕಲಾವಿದರೊಬ್ಬರು, ತಮ್ಮತ್ತ ಎಸೆದ ತೆಂಗಿನ ಕಾಯಿಯನ್ನು ಖಡ್ಗದಿಂದ ಒಡೆಯುವ ದೃಶ್ಯ. ತೆಂಗಿನ ಕಾಯಿ ಗಾಳಿಯಲ್ಲಿರೋದನ್ನು ಗಮನಿಸಿ. ಇದು ಇನ್‌ಫೋಕಸ್ ಚಿತ್ರ 😀

(ಈ ಮೊಬೈಲಿನ ಕ್ಯಾಮೆರಾದಿಂದ ತೆಗೆದ ಫೋಟೋ ನೋಡಿ)

ಇದು Snapdeal.com ನಲ್ಲಿ, ನೋಂದಾಯಿಸಿದವರಿಗೆ, ನಿರ್ದಿಷ್ಟ ದಿನಾಂಕಗಳಂದು ಖರೀದಿ ಅವಕಾಶದ ಮೂಲಕ ದೊರೆಯುತ್ತದೆ. ಮೊದಲ ಬಾರಿಗೆ ಮಾರಾಟ ಆರಂಭವಾಗಿದ್ದು ನನ್ನ ಗಮನಕ್ಕೆ ಬಂದಾಕ್ಷಣ, ಕಚೇರಿಯಲ್ಲಿ ಆಸಕ್ತರಿಗೆ ಕೆಲವರಿಗೆ ಹೇಳಿದ್ದೆ. ಮಾರ್ಚ್ 27, 2015ರ ಮೊದಲ ದಿನ ನಾನೂ ಸೇರಿ ಮೂವರು ಖರೀದಿಸಿದೆವು.

ಆನಂತರವೂ ಮೂರು ಬಾರಿ ಮಾರಾಟ ಪ್ರಕ್ರಿಯೆ Snapdeal ನಲ್ಲಿ ನಡೆದಿದೆ. ನನ್ನ ಸಲಹೆಯ ಆಧಾರದಲ್ಲಿ, ಇದುವರೆಗೆ ಕಚೇರಿಯಲ್ಲಿ ಒಟ್ಟು 13 ಮಂದಿ ಹಾಗೂ ಪರಿಚಯಸ್ಥರು 8 ಮಂದಿ ತೆಗೆದುಕೊಂಡಿದ್ದಾರೆ. ಎಲ್ಲರೂ ಖುಷಿಯಾಗಿದ್ದಾರೆ. 5 ಸಾವಿರಕ್ಕಾದರೆ, ನನಗೂ ಇರಲಿ, ನಮ್ಮ ಮನೆಯವರಿಗೂ ಇರಲಿ, ಆಚೆ ಮನೆಯವರಿಗೂ ಇರಲಿ ಅಂತ… ಆದ್ರೆ ಕಮಿಶನ್ ಏನೂ ಸಿಕ್ಕಿಲ್ಲ ಸ್ವಾಮೀ!!!! ಒಳ್ಳೆಯ ಫೋನ್, ಒಳ್ಳೆಯವರಿಗೆ, ಕಡಿಮೆ ಬೆಲೆಯಲ್ಲಿ ಸಿಕ್ಕಲಿ ಅಂತಷ್ಟೇ ಈ ಪೋಸ್ಟು.

ಈಗಿನ ಮಾಹಿತಿ ಪ್ರಕಾರ, ಏಪ್ರಿಲ್ 21ರ ಮಾರಾಟಕ್ಕೆ ರಿಜಿಸ್ಟ್ರೇಶನ್ ಪ್ರಕ್ರಿಯೆ ಸಾಗಿದೆ. ಅವಸರವೇನೂ ಇಲ್ಲ. ಕ್ರೆಡಿಟ್/ಡೆಬಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, ಕ್ಯಾಶ್ ಆನ್ ಡೆಲಿವರಿ ಸೇವೆಗೆ ಇದನ್ನು ಖರೀದಿಸಬಹುದು.

ಸ್ನ್ಯಾಪ್‌ಡೀಲ್ ಲಿಂಕ್
ಇನ್‌ಫೋಕಸ್ ಕಂಪನಿಯ ಲಿಂಕ್
ಇದನ್ನು ಓದಿ ಯಾರೆಲ್ಲಾ ಖರೀದಿಸಿದಿರಿ ಅಂತ ನನಗೂ ಹೇಳಿಬಿಡಿ!!!

2 COMMENTS

LEAVE A REPLY

Please enter your comment!
Please enter your name here