ಹೋದಲ್ಲಿ ಟ್ರ್ಯಾಕ್ ಮಾಡುವ ಗೂಗಲ್: ಸುರಕ್ಷಿತವಾಗಿರುವುದು ಹೇಗೆ?

0
492

Google Trackಫೇಸ್‌ಬುಕ್‌ನಿಂದ ನಮ್ಮ ವೈಯಕ್ತಿಕ ಮಾಹಿತಿಯು ಮೂರನೆಯವರ ಪಾಲಾದ ವಿಚಾರವು ಕಳೆದ ಮೂರ್ನಾಲ್ಕು ವಾರಗಳಿಂದ ವಿಶ್ವಾದ್ಯಂತ ಆತಂಕಕ್ಕೆ ಕಾರಣವಾಗಿದೆ ಎಂಬುದೇನೋ ನಿಜ. ಕೇಂಬ್ರಿಡ್ಜ್ ಅನಾಲಿಟಿಕಾ ಕಂಪನಿಯು ಫೇಸ್‌ಬುಕ್‌ನಿಂದ ಖಾಸಗಿ ಮಾಹಿತಿಯನ್ನು ರಾಜಕೀಯ ಪಕ್ಷಗಳಿಗೆ ವಿತರಿಸಿದ ಕುರಿತು ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‍‌ಬರ್ಗ್ ಈಗಾಗಲೇ ಜನತೆಯ ಕ್ಷಮೆ ಯಾಚಿಸಿದ್ದಾರೆ. ಇಂತಹ ದೊಡ್ಡ ದೊಡ್ಡ ಕಂಪನಿಗಳು ಒತ್ತಟ್ಟಿಗಿರಲಿ, ಸಣ್ಣ ಪುಟ್ಟವು ಕೂಡ ಆ್ಯಪ್ ಅಥವಾ ವೆಬ್ ಸೈಟ್ ರೂಪದಲ್ಲಿ ನಮ್ಮ ಖಾಸಗಿ ಮಾಹಿತಿಯನ್ನು ಪಡೆಯುತ್ತವೆ ಎಂಬುದು ಅವುಗಳಲ್ಲಿ ಹೆಸರು ನೋಂದಾಯಿಸಿಕೊಂಡಾಗ ಅಥವಾ ಆ್ಯಪ್ ಇನ್‌ಸ್ಟಾಲ್ ಮಾಡಿಕೊಳ್ಳುವಾಗಲೋ ತಿಳಿಯುತ್ತದೆ. ಆದರೆ ನಾವು ಯಾವುದೇ ನೋಟಿಫಿಕೇಶನ್‌ಗಳನ್ನು ಓದದೆಯೇ ‘ಸರಿ’ ಅಂತ ಕ್ಲಿಕ್ ಮಾಡಿರುತ್ತಾ, ನಮ್ಮ ಫೋನ್ ನಂಬರ್, ಇಮೇಲ್ ವಿಳಾಸ, ನಮ್ಮ ಫೋನ್‌ನಲ್ಲಿರುವ ಗ್ಯಾಲರಿ, ಎಸ್ಸೆಮ್ಮೆಸ್ ಇತ್ಯಾದಿ ನೋಡಲು ಅವಕಾಶ ಮಾಡಿಕೊಟ್ಟಿರುತ್ತೇವೆ. ಇದು ವಿವೇಚನೆಯಿಲ್ಲದೆ ನಾವು ಮಾಡುವ ತಪ್ಪುಗಳಲ್ಲೊಂದು. ಫೇಸ್‌ಬುಕ್‌ಗಿಂತಲೂ ಮೊದಲು ಚಾಲ್ತಿಯಲ್ಲಿದ್ದ ಗೂಗಲ್ ಎಂಬ ಮಗದೊಂದು ಇಂಟರ್ನೆಟ್ ದಿಗ್ಗಜ ಕಂಪನಿ ಕೂಡ ನಮ್ಮ ಪ್ರೈವೇಟ್ ಮಾಹಿತಿಯನ್ನು ಹೇಗೆ ಟ್ರ್ಯಾಕ್ ಮಾಡುತ್ತಿದೆ ಮತ್ತು ಗೂಗಲ್ ಎಂಬುದು ನಮ್ಮ ಜೀವನದಲ್ಲಿ ಯಾವ ರೀತಿ ಹಾಸು ಹೊಕ್ಕಾಗಿದೆ, ಅವುಗಳಿಂದ ರಕ್ಷಣೆ ಪಡೆಯೋದು ಹೇಗೆ ಅಂತ ಈ ವಾರ ತಿಳಿದುಕೊಳ್ಳೋಣ.

ಗೂಗಲ್ ಅಂದರೆ ನಮಗೆಲ್ಲ ಸರ್ವಾಭೀಷ್ಟ ಪ್ರದಾಯಕನಿದ್ದಂತೆ. ಏನನ್ನೇ ಆದರೂ ಹುಡುಕಲು ಗೂಗಲ್ ಸರ್ಚ್ ಎಂಜಿನ್, ಮನರಂಜನೆಗಾಗಿ ಯೂಟ್ಯೂಬ್, ಸಂವಹನಕ್ಕಾಗಿ ಜಿಮೇಲ್, ಫೋಟೋಗಳನ್ನು ಸೇವ್ ಮಾಡಿಟ್ಟುಕೊಳ್ಳಲು ಗೂಗಲ್ ಫೋಟೋಸ್, ಅದರದ್ದೇ ಆದ ಸಾಮಾಜಿಕ ಜಾಲತಾಣ ಗೂಗಲ್ ಪ್ಲಸ್, ಬ್ಲಾಗ್ ತಾಣ ಬ್ಲಾಗ್‌ಸ್ಪಾಟ್, ಫೈಲುಗಳನ್ನು ಆನ್‌ಲೈನ್‌ನಲ್ಲಿ ಇಟ್ಟುಕೊಳ್ಳಲು ಗೂಗಲ್ ಡ್ರೈವ್ ಎಂಬ ಕ್ಲೌಡ್ ತಾಣ, ಎಲ್ಲಾದರೂ ಹೋಗಲು ಮಾರ್ಗದರ್ಶಕನಾಗಿ ಗೂಗಲ್ ಮ್ಯಾಪ್ಸ್… ಏನುಂಟು ಏನಿಲ್ಲ! ಇವೆಲ್ಲವೂ ನಮ್ಮ ಜೀವನದ ಅವಿಭಾಜ್ಯ ಅಂಗಗಳಾಗಿಬಿಟ್ಟಿರುವುದರಿಂದ ತಪ್ಪಿಸಿಕೊಳ್ಳುವುದು ಕೂಡ ಕಷ್ಟವೇ.

ಉದಾಹರಣೆಗೆ, ಆಂಡ್ರಾಯ್ಡ್ ಫೋನ್ ಬಳಸುತ್ತಿದ್ದರೆ, ಫೋನ್ ನಂಬರಂತೂ ಇದ್ದೇ ಇರುತ್ತದೆ; ಜತೆಗೆ ಅದರಲ್ಲೇ ಇಮೇಲ್ ಇದೆ, ಯೂಟ್ಯೂಬ್ ಇದೆ, ಜಿಪಿಎಸ್ ಆನ್ ಆಗಿರುವಾಗ ಮತ್ತು ಅದು ಮ್ಯಾಪ್‌ಗೆ ಲಿಂಕ್ ಆಗಿರುವಾಗ, ನಾವು ಹೋದ ಜಾಗವೆಲ್ಲವೂ ಅದಕ್ಕೆ ಗೊತ್ತಾಗುತ್ತದೆ. ಜಾಗತಿಕವಾಗಿ ಶತಕೋಟ್ಯಂತರ ಜನರು ಗೂಗಲ್ ಸೇವೆಗಳನ್ನು ಬಳಸುತ್ತಿದ್ದಾರೆ. ವಿಶೇಷವೆಂದರೆ, ಗೂಗಲ್ ತನ್ನ ಎಲ್ಲ ಸೇವೆಗಳಿಗೆ ಸಮಾನವಾದ ಡೇಟಾ ನೀತಿಯನ್ನು ಹೊಂದಿದೆ. ನಿಮ್ಮ ಮಾಹಿತಿಯನ್ನು ಹಿಡಿದುಕೊಂಡು ಗೂಗಲ್ ಏನೆಲ್ಲ ಮಾಡಬಲ್ಲುದು ಎಂದು ನೋಡಬೇಕಿದ್ದರೆ, ಗೂಗಲ್‌ನ ಅಕೌಂಟ್ ಸೆಟ್ಟಿಂಗ್ ಎಂಬಲ್ಲಿ ಹೋಗಿ ನೋಡಬೇಕು. ಇದಕ್ಕಾಗಿ myaccount.google.com ಗೆ ಹೋಗಬಹುದು ಇಲ್ಲವೇ, ಜಿಮೇಲ್‌ಗೆ ಲಾಗಿನ್ ಆದಾಗ, ಬಲ-ಮೇಲ್ಭಾಗದಲ್ಲಿ ನಮ್ಮ ಪ್ರೊಫೈಲ್ ಚಿತ್ರದ ಮೇಲೆ ಕ್ಲಿಕ್ ಮಾಡಿದಾಗ ‘My Account’ ಬಟನ್ ಕಾಣಿಸುತ್ತದೆ, ಈ ಲಿಂಕ್ ಮೂಲಕವೂ ಹೋಗಬಹುದು.

ಅಲ್ಲಿಗೆ ಹೋದರೆ, ಪ್ರೈವೆಸಿ ಚೆಕಪ್ ಎಂಬ ಆಯ್ಕೆಯೊಂದು ಗೋಚರಿಸುತ್ತದೆ. ಪ್ರೈವೆಸಿ ಬಗ್ಗೆ ಹೆಚ್ಚು ಆಸ್ಥೆ ಹೊಂದಿರುವವರಿಗೆ ಇದುವೇ ಸಕಲ ರೋಗಗಳಿಗೂ ಪರಮೌಷಧವಿದ್ದಂತೆ. ಪ್ರೈವೆಸಿ ಚೆಕಪ್ ಅಂತ ಕ್ಲಿಕ್ ಮಾಡಿದರೆ, ಸರಿಯಾಗಿ ಅದನ್ನು ಓದುತ್ತಾ, ಕ್ಲಿಕ್ ಮಾಡುತ್ತಾ ಹೋದರೆ, ನಮ್ಮ ಯಾವೆಲ್ಲ ಮಾಹಿತಿಯನ್ನು ಬಹಿರಂಗ ಜಗತ್ತಿಗೆ ತೋರ್ಪಡಿಸಬೇಕು ಅಂತ ನಿಯಂತ್ರಿಸಿಕೊಳ್ಳಬಹುದು.

ಉದಾಹರಣೆಯಾಗಿ, ಫೋನ್ ನಂಬರ್. ಗೂಗಲ್‌ಗೆ ಲಿಂಕ್ ಆಗಿರುವ ಈ ಫೋನ್ ಸಂಖ್ಯೆ ನಿಮ್ಮ ಸ್ನೇಹಿತ ವರ್ಗದಲ್ಲಿದ್ದರೆ, ಗೂಗಲ್‌ನ ಎಲ್ಲ ಸೇವೆಗಳಲ್ಲಿಯೂ ಆ ಸ್ನೇಹಿತರೊಂದಿಗೆ ಸಂಪರ್ಕಿಸಲು ಅನುವು ಮಾಡಿಕೊಡಬೇಕೇ ಬೇಡವೇ ಅಂತ ಇಲ್ಲಿಂದಲೇ ನಿಯಂತ್ರಣ ಮಾಡಿಕೊಳ್ಳಬಹುದು. ಈ ಫೋನ್ ಸಂಖ್ಯೆಯನ್ನು ಮುಂದಿಟ್ಟುಕೊಂಡು ನಿಮ್ಮ ಫೋಟೋ, ಹೆಸರು, ಉದ್ಯೋಗ ಇತ್ಯಾದಿ ಮಾಹಿತಿಯನ್ನು ಹಂಚಿಕೊಳ್ಳಬೇಕೇ ಬೇಡವೇ ಅಂತಲೂ ಇಲ್ಲಿಂದಲೇ ಸೆಟ್ಟಿಂಗ್ ಮಾಡಬಹುದು. ಫೋನ್ ನಂಬರ್ ತಿದ್ದುಪಡಿ ಮಾಡುವ ಆಯ್ಕೆ ಕೂಡ ಇಲ್ಲಿದೆ.

ಆರಂಭದಲ್ಲಿ ಗೂಗಲ್ ಒಡೆತನದ ಯೂಟ್ಯೂಬ್ ಚಟುವಟಿಕೆಗಳ ಬಗ್ಗೆ ಮಾಹಿತಿ ಇರುತ್ತದೆ. ನೀವು ಯಾವೆಲ್ಲ ವೀಡಿಯೋಗಳನ್ನು ಲೈಕ್ ಮಾಡಿದ್ದೀರಿ, ಪ್ಲೇಲಿಸ್ಟ್‌ಗಳನ್ನು ಸೇವ್ ಮಾಡಿದ್ದೀರಿ ಮತ್ತು ಯಾವೆಲ್ಲ ಚಾನೆಲ್‌ಗಳಿಗೆ ಚಂದಾದಾರರಾಗಿದ್ದೀರಿ ಎಂಬುದನ್ನು ಗೌಪ್ಯವಾಗಿ (ಖಾಸಗಿಯಾಗಿ) ಇರಿಸಿಕೊಳ್ಳಲು ಗೂಗಲ್ ನಿಮಗೆ ಇಲ್ಲಿ ಆಯ್ಕೆ ನೀಡಿರುತ್ತದೆ.

ನಂತರದ್ದು ಗೂಗಲ್ ಫೋಟೋಸ್. ಆಂಡ್ರಾಯ್ಡ್ ಫೋನ್‌ನಿಂದ ಗೂಗಲ್ ಫೋಟೋಸ್ ಸಂಪರ್ಕಿಸಿರುವುದರಿಂದ ಇದು ಕೂಡ ನಮ್ಮ ಖಾಸಗಿ ಮಾಹಿತಿಯನ್ನು ಬಯಲುಗೊಳಿಸದಂತೆ ಸೆಟ್ಟಿಂಗ್ ಮಾಡಿಟ್ಟುಕೊಳ್ಳಬಹುದು.

ಆ ಬಳಿಕ, ಗೂಗಲ್ ಪ್ಲಸ್ ಎಂಬ ಗೂಗಲ್‌ನದ್ದೇ ಆದ ಸಾಮಾಜಿಕ ಜಾಲತಾಣ. ಇಲ್ಲಿ ನಿಮ್ಮ ಬಗ್ಗೆ ನೀವು ನಿಮ್ಮ ಅನುಯಾಯಿಗಳೊಂದಿಗೆ ಯಾವೆಲ್ಲ ಮಾಹಿತಿಯನ್ನು ಸ್ವಯಂಚಾಲಿತವಾಗಿ ಹಂಚಿಕೊಳ್ಳಬೇಕು ಎಂಬುದನ್ನು ಸೆಟ್ ಮಾಡಬಹುದು. ಅಲ್ಲೇ ಕ್ಲಿಕ್ ಮಾಡಿ ಅಥವಾ aboutme.google.com ಎಂಬಲ್ಲಿ ಹೋದರೆ, ನಿಮ್ಮ ಗೂಗಲ್ ಪ್ರೊಫೈಲ್ ಕಾಣಿಸುತ್ತದೆ. Learn More ಅಂತ ಬರೆದಿರುವಲ್ಲಿ ಕ್ಲಿಕ್ ಮಾಡಿದರೆ, ಹೊರ ಜಗತ್ತಿಗೆ ನಿಮ್ಮ ಫೋನ್ ನಂಬರ್, ಉದ್ಯೋಗ, ಇಮೇಲ್, ನಿಮ್ಮ ಸೈಟ್‌ಗಳು, ಊರು ಇತ್ಯಾದಿ ಮಾಹಿತಿಗಳನ್ನು ತೋರಿಸಬೇಕೇ ಬೇಡವೇ ಅಂತಲೂ ಸೆಟ್ ಮಾಡಬಹುದು.

ಮುಂದಿನದು ಅತ್ಯಂತ ಮುಖ್ಯ. ನಿಮ್ಮ ವೆಬ್ ಚಟುವಟಿಕೆ, ಸ್ಥಳ (ಲೊಕೇಶನ್) ಮಾಹಿತಿ, ಸಾಧನದ ಮಾಹಿತಿ, ಧ್ವನಿ ಮಾಹಿತಿ ಇತ್ಯಾದಿಗಳನ್ನು ಗೂಗಲ್ ಸೇವ್ ಮಾಡಿಟ್ಟುಕೊಳ್ಳಬೇಕೇ ಎಂಬುದು.

ಪ್ರೈವೆಸಿ ಬಗ್ಗೆ ತೀರಾ ಕಾಳಜಿಯುಳ್ಳವರು ಬೇಡ ಅಂತಲೇ ಟಿಕ್ ಮಾರ್ಕ್ ಮಾಡುವುದು ಒಳ್ಳೆಯದು. ಕೆಲವೊಮ್ಮೆ ವೆಬ್ ಜಾಲದ ಹುಡುಕಾಟದ ಚರಿತ್ರೆ ಕೂಡ ಕೆಲಸಕ್ಕೆ ಬರುತ್ತದೆ. ಉದಾಹರಣೆಗೆ, ಕಳೆದ ಸೋಮವಾರ ಯಾವುದೋ ವೆಬ್ ಸೈಟ್ ನೋಡುತ್ತಿರುವಾಗ ಮಾಹಿತಿಯೊಂದು ಸಿಕ್ಕಿದ್ದು, ಅದು ಯಾವುದು ಅಂತ ಮತ್ತೊಮ್ಮೆ ನೋಡಬೇಕಿದ್ದರೆ, ಜಿಮೇಲ್ ಖಾತೆಯ ಮೂಲಕ ದಾಖಲಾಗಿರುವ ವೆಬ್ ಬ್ರೌಸಿಂಗ್ ಇತಿಹಾಸ ನೋಡಿದರಾಯಿತು. ವೆಬ್ ಇತಿಹಾಸದ ದಾಖಲಾತಿಯನ್ನು ಆಫ್ ಮಾಡಿಟ್ಟರೆ, ಈ ಮಾಹಿತಿ ಸೇವ್ ಆಗಿರುವುದಿಲ್ಲ.

ಇದೆಲ್ಲ ಆದಮೇಲೆ ನಿಮಗೆ ಬ್ರೌಸಿಂಗ್ ಮಾಡುವಾಗ ಯಾವೆಲ್ಲ ಜಾಹೀರಾತುಗಳನ್ನು ತೋರಿಸಬೇಕು ಅಂತ ಸೆಟ್ ಮಾಡಿಕೊಳ್ಳಬಹುದು.

ಇಷ್ಟೆಲ್ಲ ಮಾಡಿಕೊಂಡ ಮೇಲೆ, ಸೆಕ್ಯುರಿಟಿ ಚೆಕಪ್ ಎಂಬ ಬಟನ್ ಕಾಣಿಸುತ್ತದೆ. ಅದರ ಮೂಲಕ ನಿಮ್ಮ ಗೂಗಲ್ ಖಾತೆಗೆ ಲಿಂಕ್ ಆಗಿರುವ ಡಿಜಿಟಲ್ ಸಾಧನಗಳು, ಮೂರನೆಯವರಿಗೆ ಜಿಮೇಲ್ ಖಾತೆಯ ಆ್ಯಕ್ಸೆಸ್ ಕೊಟ್ಟಿದ್ದೀರಿ ಅಂತ ನೋಡಿಕೊಂಡು, ಆ್ಯಕ್ಸೆಸ್ ರಿಮೂವ್ ಮಾಡಿಬಿಡಬಹುದು. ಇಲ್ಲಿಗೆ ನಿಮ್ಮ ಗೂಗಲ್ ಚಟುವಟಿಕೆಯು ಬಹುತೇಕ ಸುರಕ್ಷಿತವಾಗಿರುತ್ತದೆ.

ವಿಕ. ಮಾಹಿತಿ@ತಂತ್ರಜ್ಞಾನ ಅಂಕಣ, ಏಪ್ರಿಲ್ 16, 2018

LEAVE A REPLY

Please enter your comment!
Please enter your name here