ಮೊಬೈಲ್‌ನೊಳಗೆ ಗೂಢಚಾರಿ: ನೀವು ತಿಳಿದಿರಬೇಕಾದ 10 ಸಂಗತಿಗಳು

ಪೆಗಾಸಸ್ ಎಂಬ ಕು-ತಂತ್ರಾಂಶವು (ಮಾಲ್-ವೇರ್) ಕರೆ ಸ್ವೀಕರಿಸದಿದ್ದರೂ, ಲಾಕ್ ಆಗಿರುವ ಫೋನ್‌ನೊಳಗೂ ಬಂದು ಕೂರಬಹುದು. ಮಿಸ್ಡ್ ಕಾಲ್ ಮೂಲಕ ಹ್ಯಾಕ್ ಮಾಡಿ, ಆ ಮೊಬೈಲ್ ಒಡೆಯರ ಅರಿವಿಗೆ ಬಾರದಂತೆ ಅದರಲ್ಲಿರುವ ಎಲ್ಲ ಮಾಹಿತಿಯನ್ನು ಪಡೆಯುವ ಪೆಗಾಸಸ್ ಸ್ಪೈವೇರ್ ಈಗ ಸದ್ದು ಮಾಡುತ್ತಿದೆ. ಇದರ ಬಗ್ಗೆ ನೀವು ತಿಳಿದಿರಲೇಬೇಕಾದ 10 ಅಂಶಗಳು ಇಲ್ಲಿವೆ:

  1. ಇಸ್ರೇಲ್ ಮೂಲದ ಎನ್‌ಎಸ್ಒ ಗ್ರೂಪ್ ಪೆಗಾಸಸ್ ಎಂಬ ಸ್ಪೈವೇರ್ ಸಿದ್ಧಪಡಿಸಿದ್ದು, ಭಯೋತ್ಪಾದನೆ ಮತ್ತು ಅಪರಾಧ ನಿಯಂತ್ರಣಕ್ಕಾಗಿ ಇದನ್ನು ಪರವಾನಗಿ ಇರುವ ಸರಕಾರಿ ಏಜೆನ್ಸಿಗಳು ಮತ್ತು ಕಾನೂನು ಪಾಲನಾ ಸಂಸ್ಥೆಗಳಿಗೆ ಮಾತ್ರ ಮಾರಾಟ ಮಾಡುತ್ತೇವೆ ಎಂದು ಹೇಳಿಕೊಂಡಿದೆ.
  2. ವಾಟ್ಸ್‌ಆ್ಯಪ್ ಮೂಲಕವೇ ಭಾರತದ 20 ಮಂದಿ ಸಹಿತ, 20 ದೇಶಗಳಲ್ಲಿ 1400 ಮಂದಿಯ ಮೊಬೈಲ್ ಸಾಧನಗಳಿಗೆ 2019ರ ಏಪ್ರಿಲ್ ಹಾಗೂ ಮೇ ತಿಂಗಳ ನಡುವೆ ಈ ಸ್ಪೈವೇರ್ ಒಳಹೊಕ್ಕಿದೆ. ಬೇರೆ ಸಂವಹನ ಆ್ಯಪ್‌ಗಳ ಮೂಲಕವೂ ಇದು 45 ದೇಶಗಳಲ್ಲಿ ವ್ಯಾಪಿಸಿದೆ.
  3. ಇದು ಮೊದಲು ಬೆಳಕಿಗೆ ಬಂದಿದ್ದು 2016ರಲ್ಲಿ. ಯುಎಇ ಮಾನವ ಹಕ್ಕುಗಳ ಹೋರಾಟಗಾರ ಅಹ್ಮದ್ ಮನ್ಸೂರ್ ಅವರಿಗೊಂದು ಎಸ್ಎಂಎಸ್ ಮೂಲಕ ಲಿಂಕ್ ಕಳುಹಿಸಿ, ಸೌದಿ ಜೈಲುಗಳಲ್ಲಿ ಕೈದಿಗಳಿಗೆ ನೀಡಲಾಗುತ್ತಿರುವ ಚಿತ್ರಹಿಂಸೆಯ ರಹಸ್ಯವನ್ನು ತಿಳಿಯಬಹುದು ಎಂದು ಪ್ರಚೋದಿಸಲಾಗಿತ್ತು. ಅವರು ಲಿಂಕ್ ತೆರೆಯುವ ಬದಲು, ಸೈಬರ್ ಭದ್ರತಾ ಏಜೆನ್ಸಿ ಸಿಟಿಜನ್ ಲ್ಯಾಬ್ ಮೂಲಕ ಪರಿಶೀಲನೆಗೊಳಪಡಿಸಿದಾಗ ಪೆಗಾಸಸ್ ಕುತಂತ್ರಾಂಶದ ಸಂಗತಿ ಬಯಲಾಗಿತ್ತು.
  4. ಸುರಕ್ಷಿತ ಎನ್ನಲಾಗುತ್ತಿದ್ದ ಐಫೋನ್ 6ನಲ್ಲಿದ್ದ ಐಒಎಸ್ ಭೇದಿಸಿದ ಸಂಗತಿ ಬಯಲಾದ ತಕ್ಷಣ ಆ್ಯಪಲ್ ಕಂಪನಿಯು ‘ಪ್ಯಾಚ್’ ರವಾನಿಸಿ, ಈ ಸ್ಪೈವೇರ್ ಬಾಧೆಯಾಗದಂತೆ ತಡೆಯಿತು.
  5. ಆರಂಭದಲ್ಲಿ ಲಿಂಕ್ ಕ್ಲಿಕ್ ಮಾಡಿದರೆ ಒಳ ನುಸುಳುತ್ತಿದ್ದ ಈ ಸ್ಪೈವೇರ್, ಅತ್ಯಾಧುನಿಕ ರೂಪ ಪಡೆದು, ವಾಟ್ಸ್ಆ್ಯಪ್ ಕರೆಯ ಮೂಲಕ, ಅದನ್ನು ಸ್ವೀಕರಿಸದಿದ್ದರೂ, ಇನ್‌ಸ್ಟಾಲ್ ಆಗಬಲ್ಲುದು.
  6. 2018ರ ಡಿಸೆಂಬರ್ ತಿಂಗಳಲ್ಲಿ ಸೌದಿಯ ಮಾನವಹಕ್ಕುಗಳ ಹೋರಾಟಗಾರ ಒಮರ್ ಅಬ್ದುಲಜೀಜ್ ಅವರು ‘ತನ್ನ ಫೋನ್‌ಗೆ ಪೆಗಾಸಸ್ ಅಳವಡಿಸಿ ಗೂಢಚರ್ಯೆ ನಡೆಸಲಾಗಿದ್ದು, ಪತ್ರಕರ್ತ ಜಮಾಲ್ ಖಷೋಗಿ ಹತ್ಯೆಗೂ ಇದೇ ಕಾರಣ’ ಅಂತ ಎನ್‌ಎಸ್ಒ ಗ್ರೂಪ್ ವಿರುದ್ಧ ದೂರು ದಾಖಲಿಸಿದರು.
  7. ಮೇ 2019ರಲ್ಲಿ ತನ್ನ ಕರೆ ಸೌಕರ್ಯದ ಮೂಲಕ ಸಾಧನಗಳು ಹ್ಯಾಕ್ ಆಗಿದೆ ಎಂದು ವಾಟ್ಸ್ಆ್ಯಪ್‌ಗೆ ತಿಳಿದಿತ್ತು. ಬಾಧಿತ ಬಳಕೆದಾರರಿಗೆ ಎಚ್ಚರಿಕೆ ನೀಡಿತು, ಅಕ್ಟೋಬರ್ 29ರಂದು ಇದು ಪೆಗಾಸಸ್ ಎಂದು ತಿಳಿದಾಗ, ಎನ್‌ಎಸ್ಒ ವಿರುದ್ಧ ಸಾನ್ ಫ್ರಾನ್ಸಿಸ್ಕೋ ನ್ಯಾಯಾಲಯದಲ್ಲಿ ಕೇಸು ದಾಖಲಿಸಿತು.
  8. ಇನ್‌ಸ್ಟಾಲ್ ಆಗಿಬಿಟ್ಟರೆ, ಮೊಬೈಲ್ ಸಾಧನದ ಸಂಪರ್ಕ ಸಂಖ್ಯೆಗಳು, ಕ್ಯಾಲೆಂಡರ್, ಫೋನ್ ಕರೆ, ಎಸ್ಸೆಮ್ಮೆಸ್ ವಾಟ್ಸ್ಆ್ಯಪ್ ಮತ್ತಿತರ ಸಂವಹನಗಳ ನಿಯಂತ್ರಣವನ್ನು ಹ್ಯಾಕರ್‌ಗೆ ಯಾರಿಗೂ ತಿಳಿಯದಂತೆ ನೀಡಬಲ್ಲುದು.
  9. ಐಒಎಸ್ 9.3.5 ಭದ್ರತಾ ಅಪ್‌ಡೇಟ್ ಮೂಲಕ ಪೆಗಾಸಸ್‌ನಂತಹಾ ಸ್ಪೈವೇರ್‌ಗಳಿಗೆ ತಡೆಯೊಡ್ಡಲಾಗಿದೆ ಎಂದು ಆ್ಯಪಲ್ ಹೇಳಿಕೊಂಡಿದೆ. ಆಂಡ್ರಾಯ್ಡ್ ಸಾಧನಗಳಲ್ಲಿ ಮಾಲ್‌ವೇರ್ ಗುರುತಿಸಿ, ನಿಷ್ಕ್ರಿಯಗೊಳಿಸಿ, ಬಾಧೆಗೀಡಾದವರಿಗೆ ಮಾಹಿತಿ ನೀಡುತ್ತೇವೆ ಅಂತ ಗೂಗಲ್ ಕೂಡ ಹೇಳಿಕೊಂಡಿದೆ. ವಾಟ್ಸ್ಆ್ಯಪ್ ಕೂಡ ಸೆಕ್ಯುರಿಟಿ ಪ್ಯಾಚ್ ಅಪ್‌ಡೇಟ್ ಮಾಡಿಕೊಂಡಿದೆ.
  10. ಸೈಬರ್ ವಂಚಕರು ಇಂಥ ಮಾಲ್‌ವೇರ್‌ಗಳ ಮೂಲಕ ಯಾವಾಗ ಬೇಕಿದ್ದರೂ ದಾಳಿ ಮಾಡಬಹುದಾಗಿರುವುದರಿಂದ, ನಮ್ಮ ಸಾಧನದ ಸಾಫ್ಟ್‌ವೇರ್, ಆ್ಯಪ್‌ಗಳ ತಂತ್ರಾಂಶದ ಅಪ್‌ಡೇಟ್‌ಗಳನ್ನು ನಿಯಮಿತವಾಗಿ ಮಾಡಿಕೊಳ್ಳುವುದು ಮತ್ತು ವಿವೇಚನೆಯಿಂದ ಸ್ಮಾರ್ಟ್‌ಫೋನ್ ಬಳಸುವುದರಿಂದ ಸ್ವಲ್ಪ ಮಟ್ಟಿಗೆ ನಾವು ಸುರಕ್ಷಿತವಾಗಿರಬಹುದು.

-ಅವಿನಾಶ್ ಬಿ.

Published in Prajavani on 07 Nov 2019

Leave a Reply

Your email address will not be published. Required fields are marked *