ಫಿಟ್ನೆಸ್ ಕಾಯ್ದುಕೊಳ್ಳಲು Smart Watch ನೆರವು: ಹೇಗೆ?

0
320

2022ರ ಒಂದು ತಿಂಗಳು ಕಳೆದರೂ, ಹೊಸ ವರ್ಷಕ್ಕೇನು ಸಂಕಲ್ಪ ಮಾಡಿಕೊಳ್ಳುವುದು ಎಂದು ಕೆಲವರಿನ್ನೂ ಯೋಚಿಸುತ್ತಿದ್ದಾರೆ. ಕೊರೊನಾ ಕಾಲದಲ್ಲಿ ವಿಶೇಷವಾಗಿ ಎಲ್ಲರ ಗಮನ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಮೇಲೆ ತುಸು ಹೆಚ್ಚೇ ಹರಿದಿದೆ. ಉತ್ತಮ ಫಿಟ್ನೆಸ್ ಅಥವಾ ದೈಹಿಕ ಕ್ಷಮತೆ ಕಾಪಾಡಿಕೊಳ್ಳಲು ನಮ್ಮ ಶರೀರಕ್ಕೆ ಯಾವಾಗ ಏನು ಬೇಕು ಅಂತ ತಿಳಿಸಿಕೊಡುವವರಿದ್ದರೆ ಅನುಕೂಲ. ಈ ಕಾಲದಲ್ಲಿ ತಂತ್ರಜ್ಞಾನ ಸಾಕಷ್ಟು ಮುಂದುವರಿದಿರುವುದರಿಂದ, ನಾವೇನು ಮಾಡಬೇಕು, ಎಷ್ಟು ಮಾಡಬೇಕು ಅಂತೆಲ್ಲ ನೆನಪಿಡುವುದಕ್ಕೆ ಡಿಜಿಟಲ್ ಸಹಾಯಕದ ನೆರವು ಪಡೆಯಬಹುದು.

ದೈಹಿಕ ಸ್ವಾಸ್ಥ್ಯ ಕಾಪಾಡಿಕೊಳ್ಳುವಲ್ಲಿ ನಮ್ಮ ನೆರವಿಗೆ ಬರುವುದೇ ಸ್ಮಾರ್ಟ್ ವಾಚ್‌ಗಳು ಅಥವಾ ಸ್ಮಾರ್ಟ್ ಬ್ಯಾಂಡ್‌ಗಳು. ಆಂಡ್ರಾಯ್ಡ್ ಹಾಗೂ ಆ್ಯಪಲ್ (ಐಒಎಸ್) ಸಾಧನಗಳು ಈಗ ಕೈಗೆಟಕುವಂತಿವೆ. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆಯಾದ, ಆರೋಗ್ಯದ ಕ್ಷಮತೆ ಕಾಪಾಡುವಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸುತ್ತಿರುವ ಆ್ಯಪಲ್ ವಾಚ್ ಸೀರೀಸ್ 7ರಲ್ಲಿನ ವೈಶಿಷ್ಟ್ಯಗಳು ಇಲ್ಲಿವೆ. ಬಹುತೇಕ ಎಲ್ಲ ಸ್ಮಾರ್ಟ್ ವಾಚ್‌ಗಳಲ್ಲಿ ಈ ರೀತಿಯ ವೈಶಿಷ್ಟ್ಯಗಳಿರುತ್ತವೆ ಎಂಬುದು ಗಮನದಲ್ಲಿರಲಿ. ಹೀಗಾಗಿ, ನಮಗೆ ಸ್ಮಾರ್ಟ್ ವಾಚ್ ಯಾಕೆ ಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳಬಹುದು.

ಫಿಟ್ನೆಸ್: ಪ್ರತಿ ದಿನ ದೈಹಿಕ ಕ್ಷಮತೆ ಕಾಯ್ದುಕೊಳ್ಳಲು ಇದರಲ್ಲಿ ಮೂರು ರಿಂಗ್‌ಗಳಿವೆ. ಗುರಿ ದಾಖಲಿಸಿ, ಅವುಗಳನ್ನು ಪೂರ್ಣಗೊಳಿಸಿದರೆ ಆರೋಗ್ಯವಂತರಾಗಿ ಬಾಳಬಹುದು. ಎಷ್ಟು ಹೆಜ್ಜೆ ನಡೆದೆವು, ವ್ಯಾಯಾಮ ಎಷ್ಟು ಮಾಡಿದೆವು ಮತ್ತು ಕುಳಿತೇ ಕೆಲಸ ಮಾಡುವ ಸಂದರ್ಭದಲ್ಲಿ ಎಷ್ಟು ಸಲ ಎದ್ದೆವು ಎಂಬುದನ್ನು ಆ್ಯಪಲ್ ವಾಚ್ ಲೆಕ್ಕ ಇಟ್ಟುಕೊಳ್ಳುತ್ತದೆ. ಅದರಲ್ಲಿರುವ ಸೆನ್ಸರ್‌ಗಳು ಈ ಚಲನೆಗಳನ್ನು ಗುರುತಿಸಿ, ಐಫೋನ್‌ನಲ್ಲಿರುವ ಫಿಟ್ನೆಸ್ ಆ್ಯಪ್ ಮೂಲಕವಾಗಿ, ಆ ದಿನದ ಗುರಿ ತಲುಪಿದಿರಾ ಎಂದು ಆಗಾಗ್ಗೆ ನಮಗೆ ಎಚ್ಚರಿಸುತ್ತದೆ. ನೋಟಿಫಿಕೇಶನ್ ಮೂಲಕ ಸದಾ ಕಾಲ ಅದು ಉತ್ತೇಜನ ನೀಡುತ್ತಿರುತ್ತದೆ. ಕಳೆದ ಮೂರು ತಿಂಗಳಲ್ಲಿ ನಾವು ಸಾಧಿಸಿದ ಪ್ರಗತಿಯನ್ನು ಹೋಲಿಸಿ ತೋರಿಸುತ್ತದೆ. ಹಿಂದಿನ ವರ್ಷದ ಗುರಿಗಿಂತ ಈ ವರ್ಷ ಯಾವ ಮಟ್ಟ ತಲುಪಬಲ್ಲೆವು ಎಂಬುದನ್ನೂ ಲೆಕ್ಕಾಚಾರ ಹಾಕಿ ತೋರಿಸುತ್ತದೆ.

ಕೋವಿಡ್ ಕಾಲದಲ್ಲಿ ಮನೆಯಿಂದಲೇ ಕೆಲಸ ಮಾಡುವವರೆಲ್ಲರೂ ಹೆಚ್ಚು ಸಮಯ ಕುಳಿತಿರಬೇಕಾದ ಅನಿವಾರ್ಯತೆಯಿದೆ. ಗಂಟೆಗೊಮ್ಮೆ ಎದ್ದು ನಾಲ್ಕು ಹೆಜ್ಜೆ ನಡೆಯುವುದು ನಮ್ಮ ಆರೋಗ್ಯ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುವ ಚಲನೆ. ಹೀಗೆ ಚಟುವಟಿಕೆಯಿಂದಿದ್ದರೆ, ದೇಹದ ರಕ್ತಪರಿಚಲನೆ ಸರಾಗವಾಗಿ, ದೇಹವೂ ಉಲ್ಲಸಿತವಾಗುತ್ತದೆ.

ವ್ಯಾಯಾಮಕ್ಕೆ ಸಹಕಾರಿ
ಸೈಕ್ಲಿಂಗ್, ಯೋಗ, ಈಜು, ಹೈಕಿಂಗ್, ನೃತ್ಯ, ದೈಹಿಕ ಶ್ರಮ – ಇವೆಲ್ಲವುಗಳಿಗೂ ಗುರಿಯನ್ನು ದಾಖಲಿಸಿದರೆ, ವಾಚ್ಒಎಸ್ 8 ಎಲ್ಲ ರೀತಿಯಲ್ಲೂ ಅವೆಲ್ಲವನ್ನೂ ನೆನಪಿಟ್ಟುಕೊಂಡು, ನಾವೆಷ್ಟು ಗುರಿ ಸಾಧಿಸಿದೆವು, ಇನ್ನೆಷ್ಟು ಬಾಕಿ ಇದೆ ಎಂಬುದನ್ನು ಫಿಟ್ನೆಸ್ ಆ್ಯಪ್ ಮೂಲಕ ನಮಗೆ ತೋರಿಸುತ್ತದೆ. ಇವುಗಳಿಂದ ಎಷ್ಟು ಕ್ಯಾಲೊರಿ ನಷ್ಟವಾಯಿತು ಎಂಬುದನ್ನೂ ಅದು ಅಂದಾಜು ಲೆಕ್ಕಾಚಾರ ಹಾಕಿ ಕಾಣಿಸುತ್ತದೆ. ಇದು 50 ಮೀಟರ್-ವರೆಗೆ ಜಲನಿರೋಧಕವಾಗಿರುವುದರಿಂದ ಇದನ್ನು ಧರಿಸಿಯೇ ಈಜುವುದಕ್ಕೆ, ಸಮುದ್ರದಲ್ಲಿ ಅಥವಾ ಶವರ್ ಸ್ನಾನ ಮಾಡುವುದಕ್ಕೆ ಯಾವುದೇ ಸಮಸ್ಯೆಯಾಗದು. ಹೀಗೆ, ಚಲನೆ, ನಡಿಗೆ ಮತ್ತು ಎದ್ದು ನಿಲ್ಲುವ ಗುರಿಯನ್ನು ಸಾಧಿಸಿದರೆ, ಮೂರೂ ಬಣ್ಣದ ರಿಂಗ್‌ಗಳು ಪೂರ್ಣಗೊಳ್ಳುತ್ತವೆ.

ಕ್ಷೇಮ-ಸೌಖ್ಯಕ್ಕೆ ಮತ್ತಷ್ಟು
ಇಸಿಜಿ (ಎಲೆಕ್ಟ್ರೋಕಾರ್ಡಿಯೋಗ್ರಾಮ್), ರಕ್ತದ ಆಮ್ಲಜನಕ ಮಟ್ಟ, ಹೃದಯ ಬಡಿತದ ವೇಗ ಮತ್ತು ವಿಳಂಬ, ಆಯತಪ್ಪಿ ಬಿದ್ದರೆ ಗುರುತಿಸುವ, ಸೈಕ್ಲಿಂಗ್ ಲೆಕ್ಕಾಚಾರ ಹಾಕುವ, ನಿರ್ದಿಷ್ಟ ಡೆಸಿಬೆಲ್‌ಗಿಂತ ಶಬ್ದ ಹೆಚ್ಚಿದ್ದರೆ ಆ ಬಗ್ಗೆ ಎಚ್ಚರಿಸುವ ವೈಶಿಷ್ಟ್ಯಗಳು ಆರೋಗ್ಯ ಕಾಯ್ದುಕೊಳ್ಳಲು ಅನುಕೂಲಕರ. ಕೋವಿಡ್ ಕಾಲದಲ್ಲಿ ರಕ್ತದ ಆಮ್ಲಜನಕ ಮಟ್ಟವನ್ನು ಪತ್ತೆ ಮಾಡುವುದು ಅತ್ಯಗತ್ಯ. ವಾಚ್ ಹಿಂಭಾಗದಲ್ಲಿರುವ ಹಸಿರು, ಕೆಂಪು ಮತ್ತು ನೇರಳಾತೀತ ಎಲ್ಇಡಿ ದೀಪಗಳು, ನಾಲ್ಕು ಫೋಟೋ-ಡಯೋಡ್‌ಗಳನ್ನು ಒಳಗೊಂಡಿರುವ ಸೆನ್ಸರ್‌ಗಳಿಂದ ಇದು ಸಾಧ್ಯವಾಗುತ್ತದೆ. ಬಹುತೇಕ ಸ್ಮಾರ್ಟ್ ವಾಚ್‌ಗಳಲ್ಲಿ ಈ ವೈಶಿಷ್ಟ್ಯಗಳಿವೆಯಾದರೂ, ಇದರ ರೀಡಿಂಗ್ ಅಂತಿಮವಲ್ಲ. ನಮಗೊಂದು ಅಂದಾಜು ದೊರೆಯುತ್ತದೆ. ಹೀಗಾಗಿ ಯಾವುದಕ್ಕೂ ವೈದ್ಯರ ಸಲಹೆ ಮುಖ್ಯ.

ಇಷ್ಟಲ್ಲದೆ, ಸ್ಮಾರ್ಟ್ ಫೋನ್‌ನ ಎಲ್ಲ ಕೆಲಸಗಳನ್ನು ಕೂಡ ಸ್ಮಾರ್ಟ್ ವಾಚ್‌ನಲ್ಲಿ ನೋಡಬಹುದಾದ ತಂತ್ರಜ್ಞಾನವೂ ಇದೆ. ಫೋನ್ ನೋಟಿಫಿಕೇಶನ್ ಅನ್ನು ವಾಚ್‌ನಲ್ಲೇ ನೋಡಬಹುದು, ಕೆಲವು ವಾಚ್‌ಗಳಿಂದ ಕರೆಗಳನ್ನೂ ಮಾಡಬಹುದು. ಹೀಗಾಗಿ, ಸ್ಮಾರ್ಟ್ ವಾಚ್ ಈಗ ಬರೇ ಶೋಕಿಗಾಗಿ ಅಲ್ಲ; ನಮ್ಮ ಆರೋಗ್ಯದ ಕಾಳಜಿಯನ್ನು ನೆನಪಿಸುವ ಡಿಜಿಟಲ್ ಸ್ನೇಹಿತ ಅದು.

My Article Published in Prajavani on 09 Feb 2022

LEAVE A REPLY

Please enter your comment!
Please enter your name here