ಅಣ್ಣಾ ಹೋರಾಟ: ದಾರಿ ತಪ್ಪಿಸುತ್ತಿದ್ದಾರೆ ಎಚ್ಚರ!

2
297

ಒಬ್ಬ ಅಣ್ಣಾ ಹಜಾರೆ ಇಡೀ ದೇಶವನ್ನು ಭ್ರಷ್ಟಾಚಾರದ ವಿರುದ್ಧ ಒಗ್ಗೂಡಿಸಿದ್ದಾರೆ. ನಾವೆಲ್ಲರೂ ಸೇರಿ, ನಮ್ಮ ನಾಯಕರು ಅಂತ ಸಂಸತ್ತಿಗೆ ಆರಿಸಿ ಕಳುಹಿಸಿಕೊಟ್ಟು, ಸರಕಾರ ಚಲಾಯಿಸಲೆಂದು ಜನಾದೇಶ ಪಡೆದು ಹೋದವರೆಲ್ಲಾ ಈಗ ಕುಳಿತಲ್ಲೇ ಪತರಗುಟ್ಟಲಾರಂಭಿಸಿದ್ದಾರೆ. ಅಣ್ಣಾ ಹಜಾರೆಯೆಂಬ ಅಹಿಂಸಾವಾದಿಯ ಹೋರಾಟದ ಶಕ್ತಿಯೆದುರು ಏನು ಮಾಡಬೇಕೆಂದು ಅರಿಯದೆ ಅವರೆಲ್ಲರೂ ಒಂದರ್ಥದಲ್ಲಿ ದಿಕ್ಕುಗೆಟ್ಟವರಂತೆ ಒಬ್ಬೊಬ್ಬರು ಒಂದೊಂದು ರೀತಿಯ ಹೇಳಿಕೆ ಕೊಡುತ್ತಿದ್ದಾರೆ. ಒಟ್ಟೂ 11 ದಿನಗಳನ್ನು ಅವಲೋಕಿಸಿ ನೋಡಿದರೆ, ನಮ್ಮ ದೇಶವನ್ನು ಮುನ್ನಡೆಸುವ, ಎದೆಗಾರಿಕೆಯುಳ್ಳ, ದಿಟ್ಟ ನಿರ್ಧಾರ ಕೈಗೊಳ್ಳುವ ನಾಯಕನೊಬ್ಬನ ಕೊರತೆ ಎದ್ದು ಕಾಣುತ್ತಿರುವುದಂತೂ ಸತ್ಯ.

ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರೇ ಸ್ವತಃ ಗುರುವಾರ ಸಂಸತ್ತಿನಲ್ಲಿ ಭರವಸೆ ನೀಡಿ, ಜನ ಲೋಕಪಾಲ, ಸರಕಾರಿ ಲೋಕಪಾಲ ಮತ್ತು ಇನ್ನೊಂದು ಅರುಣಾ ರಾಯ್ ಮಂಡಿಸಿದ ಲೋಕಪಾಲ- ಮೂರೂ ಕರಡು ಮಸೂದೆಗಳನ್ನು ಚರ್ಚಿಸುತ್ತೇವೆ ಎಂದು ಹೇಳಿದ ಬೆನ್ನಿಗೇ, ಅವರ ಸಂಪುಟದ ಸಚಿವರೇ ಈಗ ಕೇವಲ 12 ಗಂಟೆಗಳೊಳಗೆ ಹೇಳಿಕೆ ಬದಲಾಯಿಸಿರುವುದು ಅಚ್ಚರಿ ಮೂಡಿಸಿದ್ದು, ನಿಜಕ್ಕೂ ಸರಕಾರ ಯಾರ ಕೈಯಲ್ಲಿದೆ ಎಂಬ ಪ್ರಶ್ನಾರ್ಥಕ ಚಿಹ್ನೆ ಮೂಡಿಸಿದೆ.

ಲೋಕಸಭೆಯಲ್ಲಿ ಚರ್ಚೆ ಮಾಡಿ, ಮೂರು ಪ್ರಮುಖ ಅಂಶಗಳನ್ನು ಲೋಕಪಾಲ ಮಸೂದೆಯಲ್ಲಿ ಸೇರಿಸುವ ಬಗ್ಗೆ ಲಿಖಿತ ಭರವಸೆ ನೀಡಬೇಕು ಎಂದು ಟೀಂ ಅಣ್ಣಾ ಹೇಳುತ್ತಿದ್ದರೆ, ಉಪವಾಸ ಕೊನೆಗೊಳಿಸುವುದಾಗಿ ನೀವೇ ಭರವಸೆ ನೀಡಿದರೆ ನಾವು ಮುಂದುವರಿಯುತ್ತೇವೆ ಎಂದು ಸರಕಾರ ಹೇಳತೊಡಗಿದೆ. ಹೀಗಾಗಿ ಯಾರೂ ಯಾರನ್ನೂ ನಂಬದ ಪರಿಸ್ಥಿತಿ ನಿರ್ಮಾಣವಾಗಿದೆ. ಹನ್ನೊಂದು ದಿನಗಳಾದರೂ ಸರಕಾರವು ಅಣ್ಣಾ ಹಜಾರೆ ಹೋರಾಟದ ಕುರಿತು ನಿರ್ಣಯ ಕೈಗೊಳ್ಳಲು ವಿಫಲವಾಗಿರುವುದು ಸರಕಾರವು ಎಷ್ಟರ ಮಟ್ಟಿಗೆ ಇಚ್ಛಾಶಕ್ತಿ ಹೊಂದಿದೆ ಎಂಬುದನ್ನು ಸೂಚಿಸುತ್ತದೆ.

ಕಳೆಗುಂದಿಲ್ಲ ಅಣ್ಣಾ ಹೋರಾಟ
74 ವರ್ಷದ ವಯೋವೃದ್ಧರೊಬ್ಬರು ಭವಿಷ್ಯದ ಪೀಳಿಗೆಯ ಒಳಿತಿಗಾಗಿ ಬೀದಿಗಿಳಿದು ಪ್ರಾಣವನ್ನೇ ಒತ್ತೆಯಿಟ್ಟು ಹೋರಾಟ ಮಾಡಬಹುದಾಗಿದ್ದರೆ, ನಮಗೇಕೆ ಸಾಧ್ಯವಾಗುವುದಿಲ್ಲ ಎಂದು ತಮಗೆ ತಾವೇ ಪ್ರಶ್ನಿಸಿಕೊಳ್ಳುತ್ತಿರುವ ಯುವ ಜನತೆಯು ಕೂಡ ಶಾಲಾ-ಕಾಲೇಜುಗಳಿಗೆ ಚಕ್ಕರ್ ಹೊಡೆದು ಈ ಆಂದೋಲನದ ಭಾಗವಾಗುತ್ತಿದ್ದಾರೆ.

ಅಣ್ಣಾ ಹಜಾರೆಯನ್ನು ಬಂಧಿಸಿ, ಅವರ ಹೋರಾಟದ ಸಾಂವಿಧಾನಿಕ ಹಕ್ಕುಗಳನ್ನು ಹತ್ತಿಕ್ಕಿ ಸತ್ಯಾಗ್ರಹವನ್ನೇ ನಿಲ್ಲಿಸುವ ಪ್ರಯತ್ನವನ್ನು ಅಧಿಕಾರಸ್ಥರು ಮಾಡಿದ್ದು, ಈ ದೇಶದ ಪ್ರಜೆಗಳ ಆಕ್ರೋಶದ ಬೆಂಕಿಗೆ ತುಪ್ಪ ಸುರಿದಂತಾಗಿತ್ತು. ಇಷ್ಟಲ್ಲದೆ, “ನನ್ನ ಬಂಧನವಾದ ತಕ್ಷಣ ಈ ಆಂದೋಲನ ನಿಲ್ಲಬಾರದು. ಗುರಿ ತಲುಪುವವರೆಗೂ ಪ್ರತಿಭಟನಾ ಆಂದೋಲನ ಜಾರಿಯಲ್ಲಿರಬೇಕು. ಇದು ಎರಡನೇ ಸ್ವಾತಂತ್ರ್ಯ ಸಮರ. ಇದು ಪರಿವರ್ತನೆಗಾಗಿ ಹೋರಾಟ. ಯಾವ ತೀವ್ರತೆಯಲ್ಲಿರಬೇಕೆಂದರೆ, ಈ ದೇಶದ ಜೈಲುಗಳಲ್ಲಿ ಜಾಗವೇ ಇರಬಾರದು. ಆದರೆ ಇದು ಅಹಿಂಸಾತ್ಮಕ ಹೋರಾಟವಾಗಿರಬೇಕು, ಯಾವುದೇ ಸೊತ್ತಿಗೆ ನಷ್ಟವಾಗಬಾರದು” ಎಂದು ಅಣ್ಣಾ ಹಜಾರೆ ಅವರು ಬಂಧನವಾದ ಬಳಿಕ ಕರೆ ನೀಡಿದ್ದಾರೆ. ಈ ತಾತನಿಗೇ ಇಷ್ಟು ರೋಷಾವೇಶವಿದ್ದರೆ, ಬಿಸಿ ರಕ್ತದ ಯುವ ಜನತೆಗೆಷ್ಟಿರಬೇಕು? ಅದೇ ಕಾರಣಕ್ಕೆ ಶಾಲೆ-ಕಾಲೇಜಿಗೆ ಚಕ್ಕರ್, ಆಫೀಸು-ಕಚೇರಿಗಳಿಗೆ ಗೈರು, ಅಣ್ಣಾ ಬೆಂಬಲಕ್ಕೆ ಹಾಜರ್!

ಪ್ರತಿಭಟನೆ ನಡೆಸುತ್ತಿರುವವರಿಗೂ ತಿಂದುಣ್ಣಲು ದುಡಿಯಬೇಕಲ್ಲಾ, ಶಾಲೆ-ಕಾಲೇಜುಗಳಿಗೆ ಹೋಗಲೇಬೇಕಲ್ಲ… ಖಂಡಿತಾ ಅಣ್ಣಾ ಹಜಾರೆ ಬೆಂಬಲಿಗರ ಸಂಖ್ಯೆ ನಿಧಾನವಾಗಿ ಕರಗುತ್ತದೆ ಎಂದುಕೊಂಡು ನಿರುಮ್ಮಳವಾಗಿದ್ದ ಸರಕಾರಕ್ಕೆ, ದಿನದಿಂದ ದಿನಕ್ಕೆ ಅಣ್ಣಾ ಹಜಾರೆ ನಿರಶನ ಬೆಂಬಲಿಗರ ಸಂಖ್ಯೆ ಹೆಚ್ಚುತ್ತಿರುವುದನ್ನು ನೋಡಿಯಾದರೂ ತ್ವರಿತ ನಿರ್ಧಾರ ಕೈಗೊಳ್ಳುವ ಮನಸ್ಸು ಮಾಡಬೇಕಿತ್ತು. ಜಗತ್ತಿನ ಅತ್ಯಂತ ಸಶಕ್ತ ರಾಷ್ಟ್ರಗಳಲ್ಲಿ ಒಂದು, ಮುಂದೆ ಸೂಪರ್ ಪವರ್ ಆಗಲಿದೆ ಎಂದೆಲ್ಲಾ ಹೇಳಿಕೊಳ್ಳುತ್ತಿದ್ದ ಭಾರತವನ್ನು ಮುನ್ನಡೆಸುತ್ತಿರುವ ಸರಕಾರವು ಹನ್ನೊಂದು ದಿನವಾದರೂ ಒಬ್ಬ ಅಣ್ಣಾ ಹಜಾರೆಯ ಉಪವಾಸದ ಕುರಿತಾಗಿ ಏನೂ ಮಾಡುವುದು ಸಾಧ್ಯವಾಗಿಲ್ಲ ಎಂದರೆ ನಾವೆತ್ತ ಸಾಗುತ್ತಿದ್ದೇವೆ? ನಮ್ಮನ್ನು ಆಳುವವರು ನಮ್ಮನ್ನು ಎಲ್ಲಿಗೆ ಕರೆದೊಯ್ಯುತ್ತಿದ್ದಾರೆ?

ಈಗ ದಿಕ್ಕೆಟ್ಟು ಕುಳಿತಿದೆ….
ಇಡೀ ಪ್ರಕರಣದಲ್ಲಿ ಕಾಂಗ್ರೆಸ್ ತಾನು ಎಸಗಿದ ತಪ್ಪಿಗೆ, ಎಡವಿದ ಪ್ರಮಾದಕ್ಕೆ ಇದೀಗ ಶಿಕ್ಷೆ ಅನುಭವಿಸುತ್ತಿದೆ. ನಾವು ಮಾಡಿದ್ದೇ ಸರಿ, ಜನ ನಮ್ಮನ್ನು ಆರಿಸಿ ಕಳುಹಿಸಿದ್ದಾರೆ. ನಿಮಗೆ ಜನಾದೇಶ ದೊರಕಿದೆಯೇ ಎಂದು ಪ್ರತಿಪಕ್ಷಗಳನ್ನು ಆಗಾಗ್ಗೆ ಹೀನಾಯವಾಗಿ ತೆಗಳುತ್ತಿದ್ದ ಕಾಂಗ್ರೆಸ್ ಮುಖಂಡರೆಲ್ಲರೂ ಈಗ ದಿಕ್ಕೆಟ್ಟು ಕುಳಿತಿದ್ದಾರೆ. ಗುರುವಾರವಷ್ಟೇ, ನಾವು ಸಂಸತ್ತಿನಲ್ಲಿ ಮೂರೂ ಮಸೂದೆಗಳನ್ನು (ಸರಕಾರಿ ಲೋಕಪಾಲ, ಅಣ್ಣಾ ಟೀಂನ ಜನಲೋಕಪಾಲ ಮತ್ತು ಅರುಣಾ ರಾಯ್ ಸಲ್ಲಿಸಿದ್ದ ಮತ್ತೊಂದು ಲೋಕಪಾಲ ಕರಡು ಮಸೂದೆ) ಚರ್ಚೆ ಮಾಡುತ್ತೇವೆ ಅಂತ ಹೇಳಿದ್ದರೆ, ಅವರ ಮಂತ್ರಿಗಳು ಕೇವಲ 12 ಗಂಟೆಗಳೊಳಗೆ ಮಾತು ಬದಲಾಯಿಸುತ್ತಾರೆ.

ಹತ್ತು ದಿನಗಳು ಸಂದು ಹೋದರೂ, ಅತ್ಯಂತ ಅಗತ್ಯವಾಗಿ ಕೈಗೊಳ್ಳಲೇಬೇಕಾದ ನಿರ್ಧಾರವನ್ನು ಕೈಗೊಳ್ಳುತ್ತಿಲ್ಲ. ಸಲ್ಮಾನ್ ಖುರ್ಷಿದ್, ಕಪಿಲ್ ಸಿಬಲ್, ಚಿದಂಬರಂ, ಮನಮೋಹನ್ ಸಿಂಗ್, ಸಂದೀಪ್ ದೀಕ್ಷಿತ್, ವಿಲಾಸರಾವ್ ದೇಶಮುಖ್ ಮುಂತಾದವರ ಹೆಸರುಗಳು ಅಣ್ಣಾ ಜೊತೆ ‘ಮಾತುಕತೆ’ ನಡೆಸುವ ಕುರಿತಾದ ಚರ್ಚೆಯಲ್ಲಿ ಕೇಳಿಬರುತ್ತಿದೆಯೇ ಹೊರತು ಒಂದು ಕಾಂಕ್ರೀಟ್ ನಿರ್ಧಾರ ಹೊರಬರುತ್ತಿಲ್ಲ. ಇದು ಸೂಪರ್ ಪವರ್ ಆಗುವತ್ತ ಹೆಜ್ಜೆ ಇರಿಸುವ ಭಾರತವನ್ನು ಆಳುವ ರೀತಿಯೇ?

ನಾಲ್ಕು ಲೋಕಪಾಲ ಕರಡು ಮಸೂದೆಗಳು ಸಿದ್ಧವಾಗಿವೆ. ಅವುಗಳ ತುಲನೆ ಇಲ್ಲಿದೆ:

ಲೋಕಪಾಲಪ್ರಧಾನಿ ಸೇರ್ಪಡೆಉನ್ನತ ನ್ಯಾಯಾಂಗಲೋಕಾಯುಕ್ತ ನೇಮಕಕ್ಕೆ ಕೇಂದ್ರೀಯ ಕಾನೂನುಕೆಳಹಂತದ ಸರಕಾರಿ ನೌಕರರ ಸೇರ್ಪಡೆಸಿಬಿಐ ಭ್ರಷ್ಟಾಚಾರ ನಿರೋಧಕ ದಳ ಸೇರ್ಪಡೆನಾಗರಿಕ ಸನ್ನದು ಬಗ್ಗೆ ಗಮನ ಹರಿಸಬೇಕೇ
ಸರಕಾರಿಬೇಡಬೇಡಬೇಡ, ರಾಜ್ಯಗಳೇ ಮಾಡಲಿಬೇಡ, ಗ್ರೂಪ್ ಎ ನೌಕರರು ಮಾತ್ರಬೇಡ, ಲೋಕಪಾಲವೇ ಪ್ರತ್ಯೇಕ ತನಿಖಾ ಏಜೆನ್ಸಿ ಹೊಂದಿರಲಿಬೇಡ, ಲೋಕಪಾಲರಿಗೆ ಈ ಕೆಲಸ ಬೇಡ
ಅಣ್ಣಾ ಬಳಗಬೇಕುಬೇಕುಕೇಂದ್ರವೇ ಮಾಡಬೇಕುಎಲ್ಲರೂ ಲೋಕಪಾಲ ವ್ಯಾಪ್ತಿಗೆಬೇಕು, ಎಲ್ಲ ಭ್ರಷ್ಟಾಚಾರಕ್ಕೂ ಲೋಕಪಾಲರೇ ಪರಮಾಧಿಕಾರಿಬೇಕು, ಏನೇ ಕಾನೂನು ಉಲ್ಲಂಘನೆಯಾದ್ರೂ ಕಾನೂನು ಕ್ರಮ ಕೈಗೊಳ್ಳುವಂತಾಗಬೇಕು
ಅರುಣಾ ರಾಯ್ಬೇಕುಬೇಡಕೇಂದ್ರವೇ ಮಾಡಬೇಕುಬೇಡ, ಪ್ರಬಲ ಸಿವಿಸಿ ಈ ಬಗ್ಗೆ ನೋಡಲಿಬೇಡ, ಲೋಕಪಾಲ ಮತ್ತು ಸಿವಿಸಿಗೆ ಪ್ರತ್ಯೇಕ ತನಿಖಾ ಏಜೆನ್ಸಿಬೇಡ, ಪ್ರತ್ಯೇಕ ಪರಿಹಾರ ಘಟಕವಿರಲಿ
ಲೋಕಸತ್ತಾಬೇಡಬೇಡಕೇಂದ್ರವೇ ಮಾಡಬೇಕುಬೇಕು, ಆದರೆ ಮೇಲ್ಮಟ್ಟದ ಅಧಿಕಾರಿಗಳ ಮೇಲೆ ಹೆಚ್ಚಿನ ಆದ್ಯತೆಬೇಡ, ಆದರೆ ಸಿಬಿಐ ಭ್ರಷ್ಟಾಚಾರ-ನಿರೋಧಕ ಘಟಕವು ಲೋಕಪಾಲರ ಅಡಿ ಕೆಲಸ ಮಾಡಲಿಬೇಡ, ಲೋಕಪಾಲಕ್ಕೆ ಹೆಚ್ಚು ಹೊರೆ ಬೇಡ

ದಾರಿ ತಪ್ಪಿಸುತ್ತಿದ್ದಾರೆ…
ಕಾಂಗ್ರೆಸ್ ಪಕ್ಷವು ಜೆಪಿ ಆಂದೋಲನದಂತಹಾ ಬಲುದೊಡ್ಡ ಆಂದೋಲನದಲ್ಲಿಯೂ ಬದುಕಿ ಉಳಿದದ್ದು ಹೇಗೆ ಅಂತ ಗಮನಿಸಿದವರಿಗೆ, ಅಣ್ಣಾ ಹಜಾರೆಯವರು ಅತ್ಯಂತ ಎಚ್ಚರಿಕೆಯಿಂದ ಹೆಜ್ಜೆ ಮುಂದಿಡಬೇಕಾಗುತ್ತದೆ, ಮತ್ತೆ ವಂಚನೆಗೊಳಗಾಗಬಾರದು ಎಂಬೊಂದು ಎಚ್ಚರಿಕೆ ಸಂದೇಶ ಇಲ್ಲಿದೆ.

ಯಾಕೆ? ಕಾಂಗ್ರೆಸ್ ಪಕ್ಷವು ಅಣ್ಣಾ ಆಂದೋಲನವನ್ನು ಕೇವಲ 2 ವಿಷಯ (ಲೋಕಪಾಲ ವ್ಯಾಪ್ತಿಗೆ ಪ್ರಧಾನಿಯನ್ನು ತರುವುದು ಮತ್ತು ನ್ಯಾಯಾಂಗವನ್ನು ತರುವುದು) ಎಂದಷ್ಟೇ ಬಿಂಬಿಸುತ್ತಿದೆ. ಆದರೆ, ನಿಜಕ್ಕೂ ಏನು ವೈಪರೀತ್ಯಗಳು, ಈ ಎರಡೂ ಲೋಕಪಾಲಗಳಲ್ಲಿ ಪ್ರಮುಖ ಅಂಶಗಳ್ಯಾವುವು ಅನ್ನೋದು ಜನ ಸಾಮಾನ್ಯರಿಗೆ ಸ್ಪಷ್ಟವಾಗಿ ತಲುಪಿಲ್ಲ. ಬಹುಶಃ ಹಜಾರೆ ಬಳಗವು ಈ ನಿಟ್ಟಿನಲ್ಲಿ, ಸರಕಾರದ ತಂತ್ರಕ್ಕೆ ಪ್ರತ್ಯಸ್ತ್ರವನ್ನು ಬಲವಾಗಿ ನೀಡಲು ಒಂದಿಷ್ಟು ವಿಫಲವಾಗಿದೆ ಅಂತಲೇ ಹೇಳಬಹುದು. (ಮೇಲಿನ ಕೋಷ್ಟಕದಲ್ಲಿ ಸ್ಥೂಲ ಮೇಲ್ನೋಟ ಇದೆ.)

ರಾಷ್ಟ್ರೀಯ ವಾಹಿನಿಗಳ ಘಟಾನುಘಟಿ, ಶೈನಿಂಗ್ ಪತ್ರಕರ್ತರೆಲ್ಲರೂ, ಪ್ರಧಾನಿಯನ್ನು/ನ್ಯಾಯಾಂಗವನ್ನು ಲೋಕಪಾಲ ವ್ಯಾಪ್ತಿಗೆ ತರುವುದೇ ಅಣ್ಣಾ ಉದ್ದೇಶ ಎಂಬುದನ್ನು ಮಾತ್ರವೇ ಬಿಂಬಿಸುತ್ತಾ ಜನರ ಹಾದಿ ತಪ್ಪಿಸುತ್ತಿದ್ದಾರೆ. ಮಾತ್ರವಲ್ಲ ಬಹುತೇಕ ಮಾಧ್ಯಮಗಳು ಕೂಡ ಇದನ್ನೇ ಅನುಸರಿಸುತ್ತಿವೆ ಎಂದರೆ ಉತ್ಪ್ರೇಕ್ಷೆಯಲ್ಲ.

ಕಾಡುವ ಎರಡು ಪ್ರಶ್ನೆಗಳು
ಒಂದನೆಯದು, ಅಣ್ಣಾ ಹಜಾರೆಯ ಈ ಒತ್ತಾಯ ಅಸಾಂವಿಧಾನಿಕ, ನಾವು ಜನರಿಂದ ಆರಿಸಿಬಂದವರು ಇರುವಾಗ, ಹಾದಿಬೀದಿಯಲ್ಲಿ ಹೋಗೋರು ರೂಪಿಸಿದ ಕಾನೂನನ್ನು ನಾವು ಅಂಗೀಕರಿಸಬೇಕೇ ಎಂದುಕೊಳ್ಳುತ್ತಾ ಈ ಸರಕಾರದ ಮಂತ್ರಿವರೇಣ್ಯರು, ಭ್ರಷ್ಟಾಚಾರ ನಿಗ್ರಹಕ್ಕೆ ಕಟಿಬದ್ಧರಾಗಿದ್ದೇವೆ ಎಂದು ಹೇಳುತ್ತಲೇ ಇದ್ದಾರೆ. ಒಪ್ಪಿಕೊಳ್ಳೋಣ. ಇವರೇ ಕಾನೂನು ರೂಪಕರು ಆಗಿದ್ದಾರೆಂದಾದರೆ, ಸ್ವಾತಂತ್ರ್ಯ ಬಂದ 64 ವರ್ಷಗಳ ಬಳಿಕವೂ ಭ್ರಷ್ಟಾಚಾರ ದಿನದಿಂದ ದಿನಕ್ಕೆ ಏರುತ್ತಲೇ ಹೋಗುತ್ತಿರುವುದು ಹೇಗೆ? ಈ ಪ್ರಶ್ನೆಯನ್ನು ನಿಮ್ಮ ಜನಪ್ರತಿನಿಧಿಗಳಿಗೆ ಎಲ್ಲರೂ ಕೇಳಬೇಕಾಗಿದೆ.

ಎರಡನೇ ಪ್ರಶ್ನೆ. ಮಾತುಕತೆಯಿಂದಲೇ ಎಲ್ಲವೂ ಸಾಧ್ಯ. ಕಾನೂನನ್ನು ದಿಢೀರ್ ಮಾಡುವಂತಿಲ್ಲ. ಅದಕ್ಕಾಗಿ ಚರ್ಚೆಗೆ ಸಮಯ ಬೇಕು ಎನ್ನುತ್ತಿದೆ ಸರಕಾರ. ಆದರೆ, ಇಷ್ಟು ತಿಂಗಳಿಂದ ಅಣ್ಣಾ ಹಜಾರೆ ಅವರು ಹೇಳುತ್ತಲೇ ಬಂದಿದ್ದಾರೆ. ಹಿಂದೆಯೂ ಉಪವಾಸ ಮಾಡಿದ್ದಾರೆ, ಎಚ್ಚರಿಕೆಯ ಸಂದೇಶ ನೀಡಿದ್ದಾರೆ. ತತ್ಫಲವಾಗಿ ರೂಪಿಸಲಾಗಿದ್ದ ಜಂಟಿ ಲೋಕಪಾಲ ಕರಡು ಸಮಿತಿಯಲ್ಲಿ ಚರ್ಚೆಗೆ ಬಂದಾಗಲೆಲ್ಲಾ, ಅಣ್ಣಾ ಹಜಾರೆ ಅವರ ಆಸ್ತಿಪಾಸ್ತಿ ತನಿಖೆಗೆ, ಅವರಿಗಿರುವ ಬೆಂಬಲದ ಬಗ್ಗೆ ತನಿಖೆಗೆ ಸರಕಾರ ಆದೇಶಿಸಿ, ಅವರ ಚಾರಿತ್ರ್ಯ ಹನನಕ್ಕೆ ಮುಂದಾಗಿತ್ತು. ಮಾತುಕತೆ ಮಾಡುವ ಬದಲು ಮಾಡಿದ್ದು ಇದನ್ನೇ! ಹಾಗಿದ್ದರೆ ಅವರು ಎಷ್ಟು ಪ್ರಾಮಾಣಿಕರು ಅಂತ ನಿಮಗೀಗ ಅರಿವಾಗಿರಬಹುದಲ್ಲವೇ?

ಹೀಗಾಗಿ, ಇಂಥದ್ದೊಂದು ಮಟ್ಟದಲ್ಲಿ ಭಾರೀ ಪ್ರಮಾಣದಲ್ಲಿ ದೇಶವನ್ನು ಸಂಘಟಿಸಬಲ್ಲ, ಭ್ರಷ್ಟಾಚಾರದ ವಿರುದ್ಧ ಜನರನ್ನು ಬಡಿದೆಬ್ಬಿಸಬಲ್ಲ ಮತ್ತೊಂದು ಅವಕಾಶ ಖಂಡಿತಾ ನಮಗೆ ದೊರೆಯಲಾರದು. ಅಣ್ಣಾರಂಥವರು ಮತ್ತೊಮ್ಮೆ ಸಿಗಲಾರರು. ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಭವ್ಯ ಭವಿಷ್ಯಕ್ಕೆ, ಭ್ರಷ್ಟಾಚಾರ ಮುಕ್ತ ಸಮಾಜಕ್ಕೆ ನಾವೂ ಒಂದಿಷ್ಟು ಕೈಜೋಡಿಸೋಣ. ಆಗದೇ?
[ವೆಬ್‌ದುನಿಯಾಕ್ಕಾಗಿ]

2 COMMENTS

  1. ಈಗ ಹೆಮ್ಮರವಾಗಿರುವ ಭ್ರಷ್ಟಾಚಾರವನ್ನು ನಿರ್ಮೂಲಗೊಳಿಸಲು ಸದಾ ನಮ್ಮ ಬೆ೦ಬಲವಿದೆ. ಉತ್ತಮ ಮಾಹಿತಿ ನೀಡಿದ್ದಕ್ಕಾಗಿ ಧನ್ಯವಾದಗಳು. ನನ್ನ ಬ್ಲಾಗ್ ಗೆ ಒಮ್ಮೆ ಬನ್ನಿ.

  2. ಪ್ರಭಾಮಣಿ ಅವರೇ, ಅನಿಸಿಕೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.
    ನಿಮ್ಮ ಬ್ಲಾಗಿನ ಲಿಂಕ್ ಕೊಡಲು ಮರೆತಿದ್ದೀರಿ… ದಯವಿಟ್ಟು ಕೊಡಿ.

LEAVE A REPLY

Please enter your comment!
Please enter your name here