Breaking News by Ai Anchor! ನಿಮ್ಮದೇ ಎಐ ಆ್ಯಂಕರ್ ಮಾಡುವುದು ಹೇಗೆ?

0
246

Ai Anchor: ಈಗ ಎಲ್ಲೆಲ್ಲೂ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಮಾತು. ಚಾಟ್‌ಜಿಪಿಟಿ ಎಂಬ ಎಐ ಆಧಾರಿತ ತಂತ್ರಜ್ಞಾನವೊಂದು ಬಂದು, ಅದರಿಂದ ನಮಗೆ ಬೇಕಿದ್ದನ್ನು ಪಠ್ಯರೂಪದಲ್ಲಿ ಬೇಕಾಗಿರುವುದನ್ನು ಸಾಧಿಸಿಕೊಳ್ಳಬಹುದು ಎಂಬುದು ಕೆಲವು ತಿಂಗಳ ಹಿಂದೆ ಸುದ್ದಿಯಾಗಿದ್ದರೆ, ಈಗಿನ ಟ್ರೆಂಡ್ ಎಐ ಆ್ಯಂಕರ್‌ಗಳು ಎಂದರೆ ಸುದ್ದಿವಾಚಕರು. ಈಗ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ಷೇತ್ರದಲ್ಲಾದ ಭರ್ಜರಿ ಸುಧಾರಣೆಗಳಾದ ಬಳಿಕದ ಬೆಳವಣಿಗೆ ಇದು. ಇವು ಮಾತನಾಡುವ ಬೊಂಬೆಗಳಂತೆ ಭೌತಿಕ ಶರೀರ ಹೊಂದಿಲ್ಲ. ಕೇವಲ ವಿಡಿಯೊ ಮೂಲಕ ಮಾತ್ರ ಕಾಣಿಸಿಕೊಳ್ಳಬಲ್ಲಂಥವು ಎಂಬುದನ್ನು ಗಮನಿಸಬೇಕು.

ಇತ್ತೀಚೆಗೆ ಒಡಿಯಾದ ಖಾಸಗಿ ಚಾನೆಲ್ ಲೀಸಾ ಎಂಬ ಕೃತಕ ಬುದ್ಧಿಮತ್ತೆ ಆಧಾರಿತ ಆ್ಯಂಕರ್ ಅನ್ನು ಪರಿಚಯಿಸಿ ದೊಡ್ಡ ಸುದ್ದಿ ಮಾಡಿತ್ತು. ಭಾರತದಲ್ಲಿ ಈ ಹಿಂದೆಯೇ ಮಲಯಾಳಂನ ಮೀಡಿಯಾ ಒನ್, ಹಿಂದಿಯ ಆಜ್ ತಕ್ ಮುಂತಾದ ಚಾನೆಲ್‌ಗಳೂ ಈ ಯಾಂತ್ರಿಕ ಆ್ಯಂಕರ್‌ಗಳನ್ನು ಪರಿಚಯಿಸಿದ್ದವು. ಅದಕ್ಕೂ ಹಿಂದೆಯೇ ಚೀನಾದಲ್ಲಿ ಎಐ ಆಧಾರಿತ ವಾರ್ತಾವಾಚಕರು ಸದ್ದು ಮಾಡಿದ್ದರು. ಈ ಕೃತಕ ಬುದ್ಧಿಮತ್ತೆಯುಳ್ಳ ಕೃತಕ ಆ್ಯಂಕರ್‌ಗಳು, ಭಾರತೀಯ ಭಾಷೆಗಳಿಗೆ ಸಂಬಂಧಿಸಿದಂತೆ ಇನ್ನೂ ಪ್ರಾಯೋಗಿಕ ಹಂತದಲ್ಲಷ್ಟೇ ಇವೆಯಾದರೂ, ಬೇಸಿಕ್ ಆಗಿರುವ ಎಐ ಅವತಾರಗಳನ್ನು ಅಂತರ್ಜಾಲದ ಮೂಲಕ ನಾವು ಕೂಡ ಸೃಷ್ಟಿಸಬಹುದು, ಅದೂ ಉಚಿತವಾಗಿ ಎಂಬುದು ಗೊತ್ತೇ?

ಈ ಎಐ ಅವತಾರಗಳನ್ನು ಸೃಷ್ಟಿಸಲು ಅಕ್ಷರಶಃ ‘ನಯಾಪೈಸೆ’ ವ್ಯಯಿಸಬೇಕಾಗಿಲ್ಲ ಮತ್ತು ರಾಕೆಟ್ ಸೈನ್ಸ್‌ನಂತಹಾ ವೈಜ್ಞಾನಿಕ ಜ್ಞಾನದ ಅಗತ್ಯವೂ ಇಲ್ಲ. ಸಾಮಾನ್ಯ ವೆಬ್ ಬ್ರೌಸಿಂಗ್ ತಿಳಿದವರೂ ಇದನ್ನು ಮಾಡಬಹುದು. ಆದರೆ, ಇದರ ಪ್ರೀಮಿಯಂ ಆವೃತ್ತಿ ಎಂದರೆ ಹೆಚ್ಚು ಹಣ ತೆತ್ತರೆ, ಇಂಥ ಆ್ಯಂಕರ್‌ಗಳನ್ನು ನಮಗೆ ಬೇಕಾದಂತೆ ಪಳಗಿಸಬಹುದು ಮತ್ತು ಮಾನವರಿಗೆ ಹೆಚ್ಚು ಹತ್ತಿರವಾಗುವಂತೆ ರೂಪಿಸಿಕೊಳ್ಳಬಹುದು.

ಅಂತರ್ಜಾಲದಲ್ಲಿ ಅದೆಷ್ಟೋ ವೆಬ್ ತಾಣಗಳು ಇದೀಗ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆಧಾರಿತ ಪುರುಷ ಅಥವಾ ಮಹಿಳಾ ‘ಕೃತಕ ಬುದ್ಧಿವಂತ’ರನ್ನು ತಯಾರಿಸಲು ನಮಗೆ ನೆರವು ನೀಡುತ್ತವೆ. ಇವುಗಳನ್ನೇ ಸದ್ಯಕ್ಕೆ ಹೆಚ್ಚಿನವರು ಆ್ಯಂಕರ್ ಎಂದು ಕರೆಯುತ್ತಾರೆ. ಆದರೆ, ಆ್ಯಂಕರ್ ಎಂದರೆ, ಕೇವಲ ಸುದ್ದಿ ಓದುವುದಷ್ಟೇ ಅಲ್ಲ, ಚರ್ಚೆಯಲ್ಲಿ ಭಾಗವಹಿಸುವ, ಪ್ರಶ್ನೆಗಳಿಗೆ ಉತ್ತರಿಸುವ, ಸಂವಹನ ಕೌಶಲ್ಯ ಇರಬೇಕಾಗುತ್ತದಲ್ಲ. ಅದು ಈ ಎಐ ವರ್ಚುವಲ್ ಅವತಾರಗಳಿಗೆ ಇಲ್ಲ. ಈಗಿರುವ ಹೆಚ್ಚಿನವು ಒಂದೋ ಊಡಿಸಿದ ಮಾಹಿತಿಯನ್ನು (ಇಂಗ್ಲಿಷ್ ಆದರೆ ಸಲೀಸಾಗಿ) ಓದುತ್ತವೆ ಅಥವಾ ಅವುಗಳಿಗೆ ಸ್ಪಷ್ಟವಾದ ಕನ್ನಡಕ್ಕಾಗಿ ನಿಜವಾದ ಆ್ಯಂಕರ್‌ಗಳ ಧ್ವನಿಯನ್ನು ಊಡಿಸಲಾಗುತ್ತದೆ. ತುಟಿಯ ಚಲನೆಯಲ್ಲಿ ಕೊಂಚ ವ್ಯತ್ಯಾಸವನ್ನು ಗಮನಿಸಬಹುದು.

ನಾನೇ ತಯಾರಿಸಿದ ಎಐ ಆ್ಯಂಕರ್

ಹೇಗೆ ಸಾಧ್ಯ ಇದು?
ಎಐ ಆ್ಯಂಕರ್‌ಗಳನ್ನು ಸೃಷ್ಟಿಸಲು ನೆರವಾಗುವ ವೆಬ್ ತಾಣಗಳಲ್ಲಿ, ನಮಗೆ ಬೇಕಾದ ‘ಅವತಾರ’ (ವಿಭಿನ್ನ ಮಾಡೆಲ್‌ಗಳಿಗೆ ತಂತ್ರಜ್ಞಾನ ಕ್ಷೇತ್ರದಲ್ಲಿ ಅವತಾರ್ ಎಂಬ ಪದ ಬಳಕೆಯಾಗುತ್ತಿದೆ) ಆಯ್ಕೆ ಮಾಡಿಕೊಳ್ಳಬೇಕು. ನಂತರ ಅದರ ಬಾಯಲ್ಲಿ ಏನು ಹೇಳಿಸಬೇಕೋ, ಆ ಪಠ್ಯವನ್ನು (ಸ್ಕ್ರಿಪ್ಟ್) ನಾವು ನಿರ್ದಿಷ್ಟ ಜಾಗದಲ್ಲಿ ನಮೂದಿಸಬೇಕು. ಕೆಲವು ಜಾಲತಾಣಗಳು ಆ್ಯಂಕರ್‌ನ ಹಿನ್ನೆಲೆ ಎಂದರೆ ಹಿಂಭಾಗದ ಚಿತ್ರ/ದೃಶ್ಯವನ್ನು ಬದಲಾಯಿಸುವ ಆಯ್ಕೆಯನ್ನು ನೀಡುತ್ತವೆ. ಕೆಲವೇ ಕ್ಷಣಗಳಲ್ಲಿ, ನಾವು ಊಡಿಸಿದ ನಿರ್ದಿಷ್ಟ ಪಠ್ಯವನ್ನು ಓದಿ ಹೇಳುವ ಆ್ಯಂಕರ್ ಸಿದ್ಧವಾಗುತ್ತದೆ. ಮತ್ತು ಒಂದಿಷ್ಟು ವಿಡಿಯೊ ಎಡಿಟಿಂಗ್ ಜ್ಞಾನ ಇದ್ದರೆ, ನಮಗೆ ಬೇಕಾದಂತೆ ವಿಡಿಯೊ ತಿದ್ದುಪಡಿ ಮಾಡಬಹುದು. ಕೆಲವು ಎಐ ತಾಣಗಳು ಗ್ರೀನ್ ಸ್ಕ್ರೀನ್ (ಹಿನ್ನೆಲೆ ಹಸಿರಾಗಿರುವ) ವಿಡಿಯೊವನ್ನು ಒದಗಿಸುತ್ತವೆ. ಇದು ಆ ಹಸಿರು ಭಾಗದಲ್ಲಿ ನಮಗೆ ಬೇಕಾದ, ಉದಾಹರಣೆಗೆ ವಿಧಾನಸೌಧವನ್ನು ತೋರಿಸುವ ವಿಡಿಯೊ ಅಳವಡಿಸಲು ಸಹಕಾರಿಯಾಗುತ್ತದೆ.

ಹೇಗೆ ಕೆಲಸ ಮಾಡುತ್ತದೆ?
ನಾವು ಈಗಾಗಲೇ ಸ್ಮಾರ್ಟ್ ಫೋನ್‌ಗಳಲ್ಲಿ ಗೂಗಲ್ ಅಸಿಸ್ಟೆಂಟ್, ಕೋರ್ಟನಾ, ಸಿರಿ ಮುಂತಾದ ಪಠ್ಯದಿಂದ ಧ್ವನಿ (ಟೆಕ್ಸ್ಟ್ ಟು ಸ್ಪೀಚ್) ಹೊರಡಿಸಬಲ್ಲ ತಂತ್ರಜ್ಞಾನವನ್ನು ಬಳಸುತ್ತಿದ್ದೇವೆ. ಇದೇ ತಂತ್ರಜ್ಞಾನದ ಜೊತೆಗೆ, ಸ್ಕ್ರಿಪ್ಟ್ ತಯಾರಿಸಲು ನೆರವಾಗುವ ಚಾಟ್‌ಜಿಪಿಟಿಯಂಥ ಎಐ ತಂತ್ರಜ್ಞಾನ ಮತ್ತು ವಿಡಿಯೊ ತಯಾರಿಸಲು ಲಭ್ಯವಿರುವ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ – ಇವುಗಳ ಸಂಗಮದಿಂದ ಈ ವಿಡಿಯೊ ಆ್ಯಂಕರ್ ಕೆಲಸ ಮಾಡುತ್ತದೆ. ವಿಡಿಯೊದಲ್ಲಿರುವ ಮಾನವನ ಮುಖಕ್ಕೆ ನಮ್ಮ ಮುಖವನ್ನು ಕೂಡ ಅಳವಡಿಸಬಹುದು. ಇದನ್ನೇ ವೈಜ್ಞಾನಿಕ ಭಾಷೆಯಲ್ಲಿ ‘ಡೀಪ್ ಫೇಕ್’ ತಂತ್ರಜ್ಞಾನ ಎನ್ನುತ್ತಾರೆ. ಇದಕ್ಕೆ ನಮ್ಮ ಧ್ವನಿಯನ್ನೇ ಅಳವಡಿಸಬಹುದು ಅಥವಾ ವಾಯ್ಸ್ ಎಡಿಟಿಂಗ್ ಮೂಲಕ ನಮಗೆ ಬೇಕಾದಂತೆಯೂ ಧ್ವನಿ ತಿರುಚಬಹುದು. ಈಗಾಗಲೇ ಹಲವು ಚಲನಚಿತ್ರಗಳಲ್ಲಿ ಇವುಗಳ ಬಳಕೆಯಾಗಿವೆ. ವಿಡಿಯೊ ಗೇಮ್‌ಗಳಲ್ಲಂತೂ ಇವನ್ನು ಎಲ್ಲರೂ ನೋಡಿರುತ್ತೀರಿ.

ಇದೇ ಕಾರಣಕ್ಕೆ ಇತ್ತೀಚೆಗೆ ಅಮೆರಿಕದಲ್ಲಿ ಹಾಲಿವುಡ್ ಸಿನಿಮಾ ನಟ-ನಟಿಯರು ಮತ್ತು ಚಿತ್ರ ಬರಹಗಾರರು (ಸ್ಕ್ರಿಪ್ಟ್ ರೈಟರ್‌ಗಳು) ಭಾರಿ ದೊಡ್ಡ ಪ್ರತಿಭಟನೆಯನ್ನೇ ನಡೆಸಿದ್ದರು ಎಂಬುದು ನೆನಪಿರಲಿ. ಸಿನಿಮಾದಲ್ಲಿ ಆಧುನಿಕ ತಂತ್ರಜ್ಞಾನ ಹೊಸದೇನಲ್ಲ, ಆದರೆ ಖ್ಯಾತ ನಟ-ನಟಿಯರ ಮುಖವನ್ನು ಬಳಸಿಕೊಂಡಾಗ ಆತಂಕಗೊಂಡಿದ್ದಾರೆ. ಅದೇ ರೀತಿ ಕಥೆಗಳನ್ನು, ಡೈಲಾಗ್‌ಗಳನ್ನು ಚಾಟ್‌ಜಿಪಿಟಿಯಂಥ ಎಐ ಎಂಜಿನ್‌ಗಳ ಮೂಲಕ ಸಿದ್ಧಪಡಿಸಲಾಗುವುದರಿಂದ ಸ್ಕ್ರಿಪ್ಟ್ ಬರಹಗಾರರ ಉದ್ಯೋಗಕ್ಕೂ ಕುತ್ತಾಗಿದೆ.

ದುರ್ಬಳಕೆ: ಇತ್ತೀಚೆಗೆ ಸ್ನೇಹಿತನ ಮುಖವಾಡದ ಮೂಲಕ ವಿಡಿಯೊ ಕರೆ ಮಾಡಿ, ಸಾವಿರಾರು ರೂಪಾಯಿ ವಂಚಿಸಿದ ಪ್ರಕರಣವೊಂದು ಕೇರಳದಿಂದ ವರದಿಯಾಗಿತ್ತು. ಅದರಲ್ಲೂ ಬಳಸಿದ್ದು ಇದೇ ಡೀಪ್ ಫೇಕ್ ತಂತ್ರಜ್ಞಾನವನ್ನೇ. ಸ್ನೇಹಿತರೇ ವಿಡಿಯೊ ಕರೆ ಮಾಡಿದರೂ ನಾವು ಎಚ್ಚರದಿಂದಿರಬೇಕಾಗುತ್ತದೆ.

ನಿಮ್ಮದೇ ಎಐ ಆ್ಯಂಕರ್ ಸೃಷ್ಟಿಸಿ
ನ್ಯೂಸ್ ಆ್ಯಂಕರ್‌ಗಳನ್ನು ಸೃಷ್ಟಿ ಮಾಡಿಕೊಡಬಲ್ಲ aistudios.com, hyperweb.ai, synthesia.io ಮುಂತಾದ ಸಾಕಷ್ಟು ವೆಬ್ ತಾಣಗಳಿವೆ. AIStudios ಅಥವಾ ಡೀಪ್‌ಬ್ರೈನ್ ತಾಣದಲ್ಲಿ ಒಂದು ನಿಮಿಷದ ಗ್ರೀನ್ ಸ್ಕ್ರೀನ್ ವಿಡಿಯೊವನ್ನು ಯಾವುದೇ ವಾಟರ್-ಮಾರ್ಕ್ ಇಲ್ಲದೆ ಉಚಿತವಾಗಿ ಪಡೆಯಬಹುದು. ಈ ವಿಡಿಯೊವನ್ನು ಎಡಿಟ್ ಮಾಡಿ ನಾವು ಕೂಡ ನಮ್ಮದೇ ಆ್ಯಂಕರ್ ಅನ್ನು ಲೋಕಕ್ಕೆ ಪರಿಚಯಿಸಬಹುದು. ಆದರೆ, ಹೆಚ್ಚಿನ “ಬುದ್ಧಿಮತ್ತೆ”ಯ ಆ್ಯಂಕರ್‌ಗಳು ಎಂದರೆ, ನಮಗೆ ಬೇಕಾದಂತೆ ಒಂದಿಷ್ಟು ಮಾರ್ಪಾಟುಗಳನ್ನು ಮಾಡಬಹುದಾದ ಆ್ಯಂಕರ್‌ಗಳು ಬೇಕೆಂದಾದರೆ ಶುಲ್ಕ ಪಾವತಿಸಬೇಕಾಗುತ್ತದೆ.

AI ಸ್ಟುಡಿಯೋಸ್ ತಾಣದಲ್ಲಿ ‘ಕ್ರಿಯೇಟ್ ಎ ಫ್ರೀ ಎಐ ವಿಡಿಯೊ’ ಎಂಬ ಬಟನ್ ಕಾಣಿಸುತ್ತದೆ. ಅದನ್ನು ಒತ್ತಿದ ತಕ್ಷಣ, ಯಾವ ವಿಷಯದ ಆ್ಯಂಕರ್ ಬೇಕು ಅಂತ ಆಯ್ಕೆ ಮಾಡಿಕೊಳ್ಳಬೇಕು. ಮತ್ತು ಚಾಟ್ ಜಿಪಿಟಿ ತಂತ್ರಜ್ಞಾನವು ಅಗತ್ಯವಾದ ಪಠ್ಯವನ್ನು ಅಲ್ಲೇ ಒದಗಿಸುತ್ತದೆ. ವಿಭಿನ್ನ ಬಗೆಯ ಎಐ ಅವತಾರಗಳು (ವಿಭಿನ್ನ ಹಾವ-ಭಾವದ, ಉಡುಗೆಯ ಎಐ ಮಾಡೆಲ್‌ಗಳು) ಕಾಣಿಸುತ್ತವೆ. ನಮಗೆ ಬೇಕಾದುದನ್ನು ಆಯ್ಕೆ ಮಾಡಿಕೊಂಡು, ಅಗತ್ಯವಿದ್ದರೆ ನಾಲ್ಕೈದು ಸ್ಲೈಡ್‌ಗಳನ್ನು ಬಳಸಬಹುದು. ಹಿನ್ನೆಲೆ ಚಿತ್ರ, ವಿಡಿಯೊ, ಶೀರ್ಷಿಕೆ, ಪಠ್ಯ – ಹೀಗೆ ಎಲ್ಲವನ್ನೂ ನಮಗೆ ಬೇಕಾದಂತೆ ಬದಲಿಸುವ, ಇಡೀ ಟೆಂಪ್ಲೇಟ್ (ಮೂಲ ಹಂದರ) ಅನ್ನೇ ಬದಲಾಯಿಸಿಕೊಳ್ಳುವ ಆಯ್ಕೆಯಿದೆ. ಪ್ರತೀ ಸ್ಲೈಡ್‌ಗೆ ಪಠ್ಯವನ್ನು ನಿರ್ದಿಷ್ಟ ಜಾಗದಲ್ಲಿ ಹಾಕಿದರೆ, ಇಂಗ್ಲಿಷ್ ಧ್ವನಿ ತಾನಾಗಿ ರಚನೆಯಾಗುತ್ತದೆ. ಕನ್ನಡ ಧ್ವನಿಯ ಆಯ್ಕೆಯಿದ್ದರೂ ಅದೀಗ ಪ್ರಾಯೋಗಿಕ ಹಂತದಲ್ಲಿದೆ.

ಒಂದು ನಿಮಿಷಕ್ಕಾಗುವಷ್ಟು ಪಠ್ಯ ಸಿದ್ಧಪಡಿಸಿದರೆ ಇಂಗ್ಲಿಷ್ ಧ್ವನಿಯ ವಿಡಿಯೊ ಉಚಿತವಾಗಿ ದೊರೆಯುತ್ತದೆ. ಕನ್ನಡಕ್ಕಾದರೆ ನಾವೇ ಪ್ರತ್ಯೇಕವಾಗಿ ಧ್ವನಿ ಕ್ಲಿಪ್‌ಗಳನ್ನು ರೆಕಾರ್ಡ್ ಮಾಡಿಕೊಂಡು ಆ ವಿಡಿಯೊಗೆ ಅಳವಡಿಸಬಹುದು. ಮಾತನಾಡುವ ಕೃತಕ ಆ್ಯಂಕರ್‌ನ ತುಟಿಯ ಚಲನೆಯಲ್ಲಿ ವ್ಯತ್ಯಾಸವಿದೆಯಾದರೂ, ತಕ್ಷಣಕ್ಕೆ ಜನಸಾಮಾನ್ಯರಲ್ಲಿ ಅಚ್ಚರಿ ಮೂಡಿಸಲು ಇಷ್ಟು ಸಾಕು! synthesia.io ತಾಣದಲ್ಲಿ ಕಚೇರಿ ಇಮೇಲ್ ವಿಳಾಸ ಬೇಕಾಗುತ್ತದೆ ಮತ್ತು ಅದು ಕನ್ನಡವನ್ನು ಸ್ಪಷ್ಟವಾಗಿ ಸ್ವಯಂ ಓದುತ್ತದೆ.

ಎಲ್ಲ ಸಿದ್ಧವಾದ ಬಳಿಕ, ಬಲ ಮೇಲ್ಭಾಗದಲ್ಲಿರುವ ‘ಎಕ್ಸ್‌ಪೋರ್ಟ್’ ಎಂಬುದನ್ನು ಕ್ಲಿಕ್ ಮಾಡಿದಾಗ, ಸೈನ್ಅಪ್ ಕೇಳುತ್ತದೆ. ಹೆಸರು, ಇಮೇಲ್ ವಿಳಾಸ ಕೇಳುತ್ತದೆ. ಅದನ್ನು ತುಂಬಿದರಾಯಿತು. 1 ನಿಮಿಷದೊಳಗಿದ್ದರೆ, ವಿಡಿಯೊ ಡೌನ್‌ಲೋಡ್ ಆಯ್ಕೆ ಕಾಣಿಸುತ್ತದೆ. ಬೇಕಿದ್ದರೆ, ವಿಡಿಯೊ ಎಡಿಟಿಂಗ್ ಗೊತ್ತಿದ್ದರೆ ಇದನ್ನು ಮತ್ತಷ್ಟು ಆಪ್ತವಾಗಿಸಬಹುದು. ವಯಸ್ಸೇ ಆಗದ, ದಣಿವೂ ಇಲ್ಲದ, ನಿರ್ಭಾವುಕ ವಿಡಿಯೊ ಆ್ಯಂಕರ್ ಸಿದ್ಧ! ನಮ್ಮ ಮನೆಯ ಪ್ರಥಮ ಆ್ಯಂಕರ್ ಅಂತ ನೀವು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸಬಹುದು.

Gadget Tips by Avinash B Published in Prajavani on 26 Jul 2023

LEAVE A REPLY

Please enter your comment!
Please enter your name here