Camon 12 Air: ಹಣಕ್ಕೆ ತಕ್ಕ ಮೌಲ್ಯದ ಕ್ಯಾಮೆರಾ ಫೋನ್

0
258

ಪ್ರಜಾವಾಣಿ, 29 ಅಕ್ಟೋಬರ್ 2019

ಈ ಹಕ್ಕಿಯ ಕಣ್ಣಿನಲ್ಲಿದೆ ಸೆಲ್ಫೀ ಕ್ಯಾಮೆರಾ…

ಅವಿನಾಶ್ ಬಿ.

ಸ್ಮಾರ್ಟ್ ಫೋನ್‌ನಲ್ಲಿರುವ ಕ್ಯಾಮೆರಾ ಈಗ ಎಲ್ಲರ ಪ್ರಧಾನ ಆದ್ಯತೆ. ಜತೆಗೆ ಅಗ್ಗದ ದರದಲ್ಲಿ ಉತ್ತಮ ಸ್ಪೆಸಿಫಿಕೇಶನ್ ಇರುವ ಫೋನ್ ಸಿಕ್ಕಿದರೆ ಯಾರಿಗೆ ಬೇಡ? ಹೀಗೆ, ಭಾರತೀಯ ಗ್ರಾಹಕರ ಮನಸ್ಥಿತಿಯನ್ನು ಅರಿತುಕೊಂಡು, ಅದಕ್ಕೆ ತಕ್ಕಂತೆ ಸ್ಮಾರ್ಟ್ ಫೋನ್‌ಗಳನ್ನು ತಯಾರಿಸುತ್ತಾ ಬಂದಿರುವ ಹಾಂಕಾಂಗ್ ಮೂಲದ ಟ್ರಾನ್ಸಿಯಾನ್, ತನ್ನ ಟೆಕ್‌ನೋ ಮಾದರಿಯ ಹೊಚ್ಚ ಹೊಸ ಫೋನ್ ಕ್ಯಾಮಾನ್ 12 ಏರ್ (Tecno Camon 12 Air) ಅನ್ನು ಇತ್ತೀಚೆಗಷ್ಟೇ ಮಾರುಕಟ್ಟೆಗೆ ಪರಿಚಯಿಸಿದೆ.

ಬೆಳಕಿನ ಹಬ್ಬ ದೀಪಾವಳಿಯ ಆಚರಣೆಯ ರಸಮಯ ಕ್ಷಣಗಳನ್ನು ದಾಖಲಿಸಿಕೊಳ್ಳಲು ಅನುವಾಗುವಂತೆ, ಉತ್ತಮ ಕ್ಯಾಮೆರಾ ಸ್ಪೆಸಿಫಿಕೇಶನ್‌ಗಳೊಂದಿಗೆ ಈ ಫೋನ್ ಹೊರಬಂದಿದ್ದು, ಅದನ್ನು ಬಳಸಿ ನೋಡಿದಾಗ, ಅರಿವಿಗೆ ಬಂದ ತಪ್ಪು ಒಪ್ಪುಗಳೇನು ಎಂಬ ಮಾಹಿತಿ ಇಲ್ಲಿದೆ. 4 ಜಿಬಿ RAM 68 ಜಿಬಿ ಆಂತರಿಕ ಮೆಮೊರಿ ಇರುವ ಒಂದೇ ಮಾದರಿಯ ಫೋನ್ ನೀಲಿ ಹಾಗೂ ನೇರಳೆ ವಿನ್ಯಾಸಗಳಲ್ಲಿ ಲಭ್ಯವಿದೆ.

ವಿನ್ಯಾಸ

ಪ್ರೀಮಿಯಂ ಫೋನ್‌ನ ನೋಟ ಹೊಂದಿರುವ ಇದು ಇತ್ತೀಚೆಗಿನ ಟ್ರೆಂಡಿಂಗ್ ವಿನ್ಯಾಸದಲ್ಲಿದೆ. ಅಂದರೆ ತೆಳುವಾದ, ಹಗುರವಾದ ಮತ್ತು ಹಿಂಭಾಗದಲ್ಲಿ ಗ್ರೇಡಿಯೆಂಟ್ ನೀಲಿ ಬಣ್ಣದ ಕವಚವಿದೆ. 6.55 ಇಂಚಿನ ಸ್ಕ್ರೀನ್. ಹಿಂಭಾಗದಲ್ಲಿ ತ್ರಿವಳಿ ಕ್ಯಾಮೆರಾ ಸೆನ್ಸರ್, ಕ್ವಾಡ್ ಫ್ಲ್ಯಾಶ್ ಹಾಗೂ ಅನ್‌ಲಾಕಿಂಗ್‌ಗಾಗಿ ಫಿಂಗರ್‌ಪ್ರಿಂಟ್ ಸೆನ್ಸರ್ ಇದೆ. ಎಡಭಾಗದಲ್ಲಿ ವಾಲ್ಯೂಮ್ ಮತ್ತು ಪವರ್ ಬಟನ್‌ಗಳು, ಮತ್ತೊಂದು ಭಾಗದಲ್ಲಿ ಸಿಮ್/ಮೆಮೊರಿ ಕಾರ್ಡ್ ಟ್ರೇ ಇದೆ. ತಳಭಾಗದಲ್ಲಿ 3.5 ಮಿಮೀ ಇಯರ್‌ಫೋನ್ ಜ್ಯಾಕ್, ಚಾರ್ಜಿಂಗ್‌ಗಾಗಿ ಮೈಕ್ರೋ ಯುಎಸ್‌ಬಿ ಪೋರ್ಟ್, ಮೈಕ್ ಹಾಗೂ ಸ್ಪೀಕರ್‌ಗಳಿವೆ. ಬೇರೆ ಫೋನ್‌ಗಳಿಗಿಂತ ಭಿನ್ನವಾಗಿ ವಿಶೇಷ ಗಮನ ಸೆಳೆದ ಅಂಶವೆಂದರೆ, ಇದರ ಸೆಲ್ಫೀ ಕ್ಯಾಮೆರಾ ಇರುವ ಜಾಗ. ಸ್ಕ್ರೀನ್‌ನ ಎಡತುದಿಯಲ್ಲಿ ಡಾಟ್ ನಾಚ್ ಇದ್ದು, ಅಲ್ಲಿ ಈ 8 ಮೆಗಾಪಿಕ್ಸೆಲ್ ಕ್ಯಾಮೆರಾ ಸ್ಥಿತವಾಗಿದೆ. ಇದನ್ನು ಡಾಟ್-ಇನ್ ಡಿಸ್‌ಪ್ಲೇ ಎಂದು ಕರೆಯಲಾಗುತ್ತಿದೆ. ಫೋನ್‌ನಲ್ಲಿ ಬಂದಿರುವ ವಾಲ್‌ಪೇಪರ್ ಕೂಡ ಈ ಡಾಟ್ ನಾಚ್‌ಗೆ ಸೂಕ್ತವಾಗಿದ್ದು, ವಾಲ್‌ಪೇಪರ್‌ಗಳ ಮೂಲಕ ಈ ಕ್ಯಾಮೆರಾವಂತೂ ಗಮನ ಸೆಳೆಯುತ್ತದೆ. ಹಗುರ ತೂಕವಿದ್ದು, ಕೈ ಮತ್ತು ಜೇಬಿನಲ್ಲಿ ಇರಿಸಿಕೊಳ್ಳುವುದಕ್ಕೂ ಸುಲಭವಿದೆ. ಆಂಡ್ರಾಯ್ಡ್ 9.0 ಅಂದರೆ ಪೈ ಕಾರ್ಯಾಚರಣೆ ವ್ಯವಸ್ಥೆ ಆಧಾರಿತ ಹಾಯ್ ಒಎಸ್ 5.5 ಆವೃತ್ತಿಯ ಮೂಲಕ ಈ ಫೋನ್ ಕೆಲಸ ಮಾಡುತ್ತದೆ.

ಕ್ಯಾಮೆರಾ

ಸೆಲ್ಫೀ ಕ್ಯಾಮೆರಾವು ಸ್ಕ್ರೀನ್‌ನ ಎಡ ಮೇಲ್ತುದಿಯಲ್ಲಿರುವುದು (ಡಾಟ್-ಇನ್ ಡಿಸ್‌ಪ್ಲೇ) ಇದರ ಪ್ರಧಾನ ಆಕರ್ಷಣೆ. ಕ್ಯಾಮಾನ್ ಮಾದರಿಯ ಫೋನ್‌ಗಳೆಲ್ಲವೂ ಕ್ಯಾಮೆರಾಕ್ಕಾಗಿಯೇ ಹೆಚ್ಚು ಪ್ರಸಿದ್ಧಿ ಪಡೆದವು. ಅದರಲ್ಲೂ ಮಂದ ಬೆಳಕಿನಲ್ಲಿ ಉತ್ತಮ ಗುಣಮಟ್ಟದ ಫೋಟೋ ಅಥವಾ ವೀಡಿಯೊ ತೆಗೆಯಲು ಅನುಕೂಲವಾಗುವಂತೆ ರೂಪುಗೊಂಡವು. 8 ಮೆಗಾಪಿಕ್ಸೆಲ್ ಸೆಲ್ಫೀ ಕ್ಯಾಮೆರಾ ಜತೆಗೆ ಎಐ, ಬ್ಯೂಟಿ, ಪೋರ್ಟ್ರೇಟ್, ಎಆರ್ ಶಾಟ್ ಹಾಗೂ ವೈಡ್ ಸೆಲ್ಫೀ ಎಂಬ ಮೋಡ್‌ಗಳಿವೆ. ಎಆರ್ ಶಾಟ್‌ನಲ್ಲಿ ಫೋಟೋಗಳಿಗೆ ಆಕರ್ಷಕವಾದ, ಫನ್ನೀ ಸ್ಟಿಕರ್‌ಗಳನ್ನು ಅಳವಡಿಸಿಕೊಳ್ಳಬಹುದು. ವೈಡ್ ಸೆಲ್ಫೀ ಈಗಿನ ಅಗತ್ಯ. ಗುಂಪಿನಲ್ಲಿ ಸೆಲ್ಫೀ ತೆಗೆದುಕೊಳ್ಳುವಾಗ, ಇದು 81 ಡಿಗ್ರಿ ಕೋನವನ್ನು ವ್ಯಾಪಿಸುವುದರಿಂದ ಎಲ್ಲರೂ ಸೆಲ್ಫೀಯಲ್ಲಿ ಬರುವಂತಾಗಬೇಕಿದ್ದರೆ, ಈ ಮೋಡ್ ಬಳಸಬಹುದು. ಇನ್ನು, ಹಿಂಭಾಗದಲ್ಲಿ 16 ಮೆಗಾಪಿಕ್ಸೆಲ್ ವೈಡ್ ಆಯಂಗಲ್, 5 ಮೆಗಾಪಿಕ್ಸೆಲ್ ಹಾಗೂ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್ ಇರುವ ತ್ರಿವಳಿ ಕ್ಯಾಮೆರಾ ಹಾಗೂ ಫ್ಲ್ಯಾಶ್ ಇದೆ. ಪ್ರಧಾನ ಕ್ಯಾಮೆರಾ ಸೆಟಪ್‌ನಲ್ಲೂ ಎಐ ಕ್ಯಾಮೆರಾ, ಬ್ಯೂಟೀ, ಬೊಕೇ ಹಾಗೂ ಎಆರ್ ಶಾಟ್ (ಸ್ಟಿಕರ್ಸ್ ಜತೆಗೆ) ಮತ್ತು ಪನೋರಮಾ ಮೋಡ್‌ಗಳಿವೆ. ಕ್ಯಾಮೆರಾದಲ್ಲಿ ಗೂಗಲ್ ಲೆನ್ಸ್ ಅಳವಡಿಸಲಾಗಿದೆ. ಗೂಗಲ್ ಲೆನ್ಸ್ ಮೂಲಕ ಭಾಷಾಂತರವೂ ಕೆಲಸ ಮಾಡುತ್ತದೆ, ಚಿತ್ರದಿಂದ ಪಠ್ಯವನ್ನೂ ಪಡೆಯಬಹುದು ಮತ್ತು ಚಿತ್ರ ತೋರಿಸಿ, ಆನ್‌ಲೈನ್ ಶಾಪಿಂಗ್ ತಾಣಗಳಿಗೂ ನೇರವಾಗಿ ಹೋಗಬಹುದು. ಇದರ ಜತೆಗೆ, ಯಾವುದಾದರೂ ಆಹಾರ ವಸ್ತುವನ್ನಿಟ್ಟರೆ, ಸಮೀಪದಲ್ಲಿ ಯಾವ ಹೋಟೆಲಿನಲ್ಲಿ ಅದು ಸಿಗುತ್ತದೆ ಎಂದು ಗೂಗಲ್ ಮೂಲಕ ಈ ಲೆನ್ಸ್ ಹುಡುಕಿ ತೋರಿಸುತ್ತದೆ.

ಈ ಕ್ಯಾಮೆರಾದಲ್ಲಿಯೂ ತೀರಾ ಹತ್ತಿರದಿಂದ ಫೋಟೋ ತೆಗೆಯುವಂತಾಗಲು, ಸೂಪರ್ ಮ್ಯಾಕ್ರೋ ಹಾಗೂ ವಿಸ್ತಾರವಾದ ಭಾಗವನ್ನು ಆವರಿಸಲು ವೈಡ್ ಆಯಂಗಲ್ ಶಾಟ್‌ಗಳ ಸೆಟ್ಟಿಂಗ್ ಇದೆ. ಇದರೊಂದಿಗೆ ಝೂಮ್ ಮಾಡಿಯೂ ಫೋಟೋ ತೆಗೆಯಬಹುದು. ಆದರೆ, ದೂರದ ವಸ್ತುಗಳ ಫೋಟೋ ತೆಗೆಯುವಾಗ, ಝೂಮ್ ಮಾಡುವಾಗ, ಸ್ಪಷ್ಟತೆ ಕಡಿಮೆಯಾಗುತ್ತದೆ.

ಬ್ಯಾಟರಿ, ಕಾರ್ಯಾಚರಣೆ ಮತ್ತು ವೈಶಿಷ್ಟ್ಯಗಳು

ಜನರ ಬ್ಯಾಟರಿ ಚಾರ್ಜ್ ಬೇಡಿಕೆಗೆ ಅನುಸಾರವಾಗಿ ಕ್ಯಾಮಾನ್ 12 ಏರ್ ಫೋನ್‌ನಲ್ಲಿ 4000 mAh ಸಾಮರ್ಥ್ಯದ ಬ್ಯಾಟರಿ ಅಳವಡಿಸಲಾಗಿದೆ. 2.0 GHz ಒಕ್ಟಾ ಕೋರ್ ಪ್ರೊಸೆಸರ್, 4 ಜಿಬಿ RAM ಹಾಗೂ 64 ಜಿಬಿ ಇಂಟರ್ನಲ್ ಮೆಮೊರಿ ಇದೆ. ಮೈಕ್ರೋ ಇಂಟೆಲಿಜೆನ್ಸ್ ಎಂಬ ವೈಶಿಷ್ಟ್ಯದ ಮೂಲಕ, ಮೊಬೈಲ್ ತಟ್ಟಿದರೆ ಸ್ಕ್ರೀನ್ ಆನ್ ಆಗುವ, ಹಾಡು ಕೇಳಲು ಸನ್ನೆ ಬಳಸುವ, ಫೋನ್ ತಿರುಗಿಸಿಟ್ಟರೆ ಮ್ಯೂಟ್ ಆಗುವ, 3 ಬೆರಳುಗಳಿಂದ ಮೇಲಿಂದ ಕೆಳಕ್ಕೆ ಸ್ವೈಪ್ ಮಾಡಿದರೆ ಸ್ಕ್ರೀನ್ ಶಾಟ್ ತೆಗೆಯುವ, ಸೆನ್ಸರ್ ಮೇಲೆ ಕೈಯಿಂದ ಮುಚ್ಚಿದರೆ ಸೈಲೆನ್ಸ್ ಆಗುವ, ಫೋನ್ ಕೈಗೆತ್ತಿಕೊಂಡಾಗ ಸ್ಕ್ರೀನ್ ಆನ್ ಆಗುವ ಹಾಗೂ ಕರೆ ಸ್ವೀಕರಿಸಲು ಅಥವಾ ನಿರಾಕರಿಸಲು ಸನ್ನೆಗಳನ್ನು ಬಳಸುವ ಸ್ಮಾರ್ಟ್ ಆಯ್ಕೆಗಳು ಇದರಲ್ಲಿವೆ. ಫೇಸ್ ಅನ್‌ಲಾಕ್ ವ್ಯವಸ್ಥೆಯೂ ಇದೆ.

ಈಗ ಸ್ಮಾರ್ಟ್ ಫೋನ್ ಬಳಕೆಯ ಅಡ್ಡ ಪರಿಣಾಮಗಳ ಕುರಿತು ಜಾಗೃತಿ ಮೂಡುತ್ತಿರುವುದರಿಂದ, ಡಿಜಿಟಲ್ ವೆಲ್‌ಬೀಯಿಂಗ್ ಎಂಬ ವ್ಯವಸ್ಥೆಯನ್ನು ಅಳವಡಿಸಲಾಗಿದ್ದು, ನೀವು ಎಷ್ಟು ಸಮಯ ಫೋನ್‌ನಲ್ಲಿ ಕಳೆದಿರಿ, ಎಷ್ಟು ಬಾರಿ ಅನ್‌ಲಾಕ್ ಮಾಡಿದಿರಿ ಎಂಬಿತ್ಯಾದಿ ಮಾಹಿತಿಯನ್ನು ಅದು ತೋರಿಸುತ್ತದೆ. ಜತೆಗೆ. ಸ್ಕ್ರೀನ್ ಟೈಮ್ ನಿಯಂತ್ರಿಸಲು ನಿಮ್ಮ ಕೈಗೆ ಅಸ್ತ್ರವನ್ನು ನೀಡಿದೆ. ಪೇರೆಂಟಲ್ ಕಂಟ್ರೋಲ್ ಕೂಡ ಇಲ್ಲೇ ಲಭ್ಯವಿದ್ದು, ಮಕ್ಕಳಿಗೆ ಫೋನ್ ಕೊಡುವಾಗ, ಅವರದೇ ಲಾಗಿನ್‌ನಲ್ಲಿ ಕೆಲವು ನಿರ್ಬಂಧಗಳನ್ನು ವಿಧಿಸಿ, ಇಂತಿಷ್ಟೇ ಸಮಯದ ಬಳಿಕ ಆಫ್ ಆಗುವಂತೆಯೂ ಹೊಂದಿಸಬಹುದಾದ ವ್ಯವಸ್ಥೆ ಇದರಲ್ಲಿದೆ.

ಇದರೊಂದಿಗೆ, ತೈಲ-ನಿರೋಧಕ ಫಿಂಗರ್‌ಪ್ರಿಂಟ್ ಅನ್‌ಲಾಕ್ ವ್ಯವಸ್ಥೆ, ಬೈಕ್ ಮೋಡ್‌ಗಳು ವಿಶೇಷವಾಗಿ ಗಮನ ಸೆಳೆದವು. ಹೆಚ್ಚಾಗಿ ಬಳಸುವ ಆ್ಯಪ್‌ಗಳನ್ನು ಸುಲಭವಾಗಿ ತಲುಪಲು, ಸ್ಮಾರ್ಟ್ ಪ್ಯಾನೆಲ್ ವ್ಯವಸ್ಥೆ ಇದರಲ್ಲಿದ್ದು, ಗೇಮ್‌ನಲ್ಲಿ ತಲ್ಲೀನವಾಗಿರುವಾಗ ಅಡಚಣೆಗಳಾಗದಂತೆ ಹೊಂದಿಸುವ ಗೇಮ್ ಮೋಡ್ ಇದೆ. ಕಣ್ಣುಗಳ ರಕ್ಷಣೆಗಾಗಿ ನೇತ್ರ ರಕ್ಷಣಾ (Eye Care) ಮೋಡ್ ಇದೆ.

ಒಟ್ಟಾರೆ ಹೇಗಿದೆ?

ಸುಲಲಿತವಾದ ಬ್ರೌಸಿಂಗ್ ಹಾಗೂ ಗೇಮ್ ವೇಳೆ ಫೋನ್ ಹೆಚ್ಚು ಬಿಸಿ ಆಗಿಲ್ಲ. ಬ್ಯಾಟರಿಯೂ 4000 mAh ಇದ್ದುದರಿಂದ, ಚಾರ್ಜ್ ಮಾಡದೆ, ಇಂಟರ್ನೆಟ್, ವಾಟ್ಸ್ಆಪ್ ಸಹಿತ ಸಾಮಾನ್ಯ ಬಳಕೆಗೆ 2 ದಿನಗಳ ಕಾಲ ತೊಂದರೆಯಾಗಿಲ್ಲ. ಹಗುರ ತೂಕ, ಕೇವಲ 172 ಗ್ರಾಂ ಇದೆ. ಕಿಸೆಗೆ ಭಾರವಾಗದಂತೆ ಹತ್ತು ಸಾವಿರ ರೂ. ಒಳಗಿನ ದರಕ್ಕೆ (9999 ರೂ.) ಅತ್ಯಾಧುನಿಕ ವೈಶಿಷ್ಟ್ಯಗಳು ಇದರಲ್ಲಿವೆ. ಒಳ್ಳೆಯ ಬೆಳಕು ಇರುವಾಗ ತೆಗೆದ ಫೋಟೋಗಳನ್ನು ದೊಡ್ಡದಾಗಿ ಮುದ್ರಿಸಿದರೂ, ಸ್ಪಷ್ಟವಾಗಿ ಗೋಚರಿಸುತ್ತದೆ. ಕೆಲವು ಅನವಶ್ಯಕ ಆ್ಯಪ್‌ಗಳು ಅಳವಡಿಕೆಯಾಗಿಯೇ ಬಂದಿವೆ. ಅವನ್ನು ಡಿಸೇಬಲ್ ಮಾಡಿಕೊಳ್ಳಬೇಕಾಗುತ್ತದೆ. ಒಟ್ಟಾರೆಯಾಗಿ, ಇದು ಹಣಕ್ಕೆ ತಕ್ಕ ಮೌಲ್ಯ ಎಂದು ಹೇಳಲಡ್ಡಿಯಿಲ್ಲ.

LEAVE A REPLY

Please enter your comment!
Please enter your name here