ಅಸ್ಸಾಂ: ಏನಿದು ಬೋಡೋ-ಮುಸ್ಲಿಂ ಸಂಘರ್ಷ?

4
331

ಇದು ಒಡೆದು ಆಳುವ ನೀತಿಯಷ್ಟೇ ಅಲ್ಲ, ಒಡೆದು ಅಳಿಸಿಯೇ ಬಿಡುವ ನೀತಿ. ಇದುವರೆಗೆ ವೋಟ್ ಬ್ಯಾಂಕ್ ರಾಜಕಾರಣ ಪ್ರಜೆಗಳ ನಡುವೆ ಅವಿಶ್ವಾಸ ಸೃಷ್ಟಿಸಿ ದ್ವೇಷಕ್ಕೆ ಕಾರಣವಾಗುತ್ತದೆ ಎಂಬುದನ್ನಷ್ಟೇ ಕಂಡ ನಮಗೆ, ದೇಶವನ್ನೇ ಚೂರು ಮಾಡಬಲ್ಲ ಸಾಮರ್ಥ್ಯವೂ ಇದಕ್ಕಿದೆ ಎಂಬುದರ ಬಗ್ಗೆ ಎಚ್ಚರಿಕೆಯ ‘ನೊಣ’ವೊಂದು ಗುಂಯ್ಗುಡಲಾರಂಭಿಸಿದೆ ಅಸ್ಸಾಂನಲ್ಲಿ. ಮತ್ತು ಈ ವಿಷಯ ಈಗ ಇಡೀ ದೇಶದಲ್ಲೇ ಪ್ರತಿಧ್ವನಿಸುತ್ತಿದೆ. ಜನರಿಗೆ ನಿಜ ಸಂಗತಿಯ ಅರಿವಾಗತೊಡಗಿದೆ.

ಭಾರತ ಮಾತೆಯ ಬಲಗೈಯಲ್ಲಿ ನೆತ್ತರು
ಅಸ್ಸಾಂನ ಕೋಖ್ರಜಾರ್ ಜಿಲ್ಲೆಯಲ್ಲಿ ಭಾರೀ ಹಿಂಸಾಚಾರ, ಹತ್ತಾರು ಸಾವು, ಸಾವಿರಾರು ನಿರಾಶ್ರಿತರು ಅಂತೆಲ್ಲಾ ಮಾತ್ರವೇ ನಾವು ಕೇಳಿದ್ದೇವೆ – ಓದಿದ್ದೇವೆ. ಈ ಹಿಂಸಾಚಾರದ ಹಿಂದೆ, ಪೂರ್ವ ಪಾಕಿಸ್ತಾನವು ಭಾರತದ ನೆರವಿನಿಂದ ಬಾಂಗ್ಲಾ ದೇಶವಾಗಿ ‘ವಿಮೋಚನೆ’ಗೊಂಡ ಬಳಿಕ ಅಸ್ಸಾಂನ ಮೂಲ ವಾಸಿಗಳಾಗಿದ್ದ ಬುಡಕಟ್ಟು ಜನರು ಅನುಭವಿಸಿದ ನೋವಿನ ಆಕ್ರಂದನವಿದೆ, ಹರಿಸಿದ ನೆತ್ತರಿನ ವಾಸನೆಯಿದೆ. ಅಲ್ಲಿ ಮತ್ತೊಂದು ಕಾಶ್ಮೀರವು ರೂಪುಗೊಳ್ಳುತ್ತಿದೆ ಎಂಬುದನ್ನು ನಮ್ಮನ್ನಾಳುವವರಿನ್ನೂ ಅರ್ಥ ಮಾಡಿಕೊಳ್ಳುತ್ತಿಲ್ಲ, ಅಥವಾ ಅರ್ಥವಾದರೂ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆಯೋ ಎಂಬ ಭಾವನೆ.

ಇನ್ನು ವಿಷಯಕ್ಕೆ ಬರೋಣ. ಭಾರತದ ಎಡ ಕಿವಿಯಂತಿರುವ ಈಶಾನ್ಯ ಭಾಗದಲ್ಲಿ ಬೋಡೋ ಎಂಬ ಅಸ್ಸಾಂ ಮೂಲ ಜನಾಂಗೀಯರ ಮೇಲೆ ಇಲ್ಲಿ ಬಾಂಗ್ಲಾ ದೇಶದಿಂದ ವಲಸೆ ಬಂದವರು ಆಕ್ರಮಣ ನಡೆಸಿದ್ದಾರೆ ಎಂಬುದು ಆರೋಪ. ಪ್ರತೀಕಾರಾತ್ಮಕ ದಾಳಿಯೂ ನಡೆದಿದೆ. ಆದರೆ ಜಾತ್ಯತೀತತೆಯೇ ದೇಶದ ಮೂಲಮಂತ್ರವಾಗಿರುವುದರಿಂದ, ಮುಖ್ಯವಾಹಿನಿಯ ರಾಷ್ಟ್ರೀಯ ಮಾಧ್ಯಮಗಳು ಕೂಡ ಇದನ್ನು ಕೇವಲ ‘ಜನಾಂಗೀಯ’ ಹಿಂಸಾಚಾರ ಅಥವಾ ‘ಬುಡಕಟ್ಟು ಜನರ ಹಿಂಸಾಚಾರ’ ಎಂದಷ್ಟೇ ಬಿಂಬಿಸುತ್ತಿವೆಯೇ ಹೊರತು ಬಾಂಗ್ಲಾದೇಶೀ ವಲಸಿಗ ಮುಸ್ಲಿಮರೇ ಈ ಸಂಘರ್ಷದ ಕೇಂದ್ರಬಿಂದು ಎನ್ನುತ್ತಿಲ್ಲ. ಹೀಗಾಗಿ ನಿಜಸ್ಥಿತಿ ಅರಿತುಕೊಳ್ಳಬೇಕಿದ್ದರೆ ಬಿಬಿಸಿ, ಐರಿಷ್ ಟೈಮ್ಸ್, ಬ್ಯಾಂಕಾಕ್ ಪೋಸ್ಟ್, ಡಾಯಿಚ್‌ವಿಲ್ಲೆ, ಐಬಿ ಟೈಮ್ಸ್ ಮುಂತಾದ ವಿದೇಶೀ ಮಾಧ್ಯಮಗಳ ಮೊರೆ ಹೋಗಬೇಕಾಗುತ್ತದೆ. ಇದು ಅಸ್ಸಾಂ ಪ್ರಜೆಗಳ ಪರಿಸ್ಥಿತಿ!

ಅದರ ನಡುವೆ, ಇತ್ತಿತ್ತಲಾಗಿ ಮುಂಬಯಿ, ಬೆಂಗಳೂರು, ಚೆನ್ನೈ, ಪುಣೆ, ಮಧ್ಯಪ್ರದೇಶ ಮುಂತಾದೆಡೆಗಳಲ್ಲಿ ಅಸ್ಸಾಂನ ನಿಷ್ಪಾಪಿ ಜನರ ಮೇಲೆ ಹಲ್ಲೆ, ವದಂತಿ ಇತ್ಯಾದಿ ಮೂಲಕ ಭೀತಿ ಸೃಷ್ಟಿಸಿದ್ದನ್ನು ನೋಡಿದ ಬಳಿಕ, ಪಾಕಿಸ್ತಾನದಿಂದ ಈ ಭೀತಿ ಸಂದೇಶಗಳು ರವಾನೆಯಾಗಿವೆ ಎಂದೆಲ್ಲಾ ವರದಿಗಳು ಬಂದ ಬಳಿಕ, ರಾಷ್ಟ್ರೀಯ ಮಾಧ್ಯಮಗಳೂ ಅಲ್ಲಿನ ಸಂಘರ್ಷದ ಮೇಲೆ ನಿಜದ ಬೆಳಕು ಬೀರುವ ಅನಿವಾರ್ಯತೆಗೂ ಸಿಲುಕಿವೆ.

ವೋಟ್ ಬ್ಯಾಂಕ್ ರಾಜಕೀಯ
ಇಂದು ವೋಟ್ ಬ್ಯಾಂಕ್ ರಾಜಕಾರಣವು ಯಾವ ಪರಿಸ್ಥಿತಿಯನ್ನು ತಂದೊಡ್ಡುತ್ತದೆ ಎಂಬುದಕ್ಕೆ ಇದು ಜ್ವಲಂತ ಸಾಕ್ಷಿ. ಕಾಂಗ್ರೆಸ್ನ ಸುಶಿಕ್ಷಿತ ಸಂಸದರಲ್ಲೊಬ್ಬರಾದ ಶಶಿ ತರೂರ್ ಅವರು ತಮ್ಮ ಪುಸ್ತಕವೊಂದರಲ್ಲಿ, ‘ಈ ದೇಶದಲ್ಲಿ 2 ಕೋಟಿ ಬಾಂಗ್ಲಾದೇಶಿ ವಲಸಿಗರಿದ್ದಾರೆ’ ಅಂತ ಬರೆದಿರುವುದನ್ನು ಶಿವಸೇನೆಯ ಸಂಸದ ಅನಂತ ಗೀತೆ ಅವರು ಇತ್ತೀಚೆಗೆ ಸಂಸತ್ತಿನಲ್ಲೇ ಹೇಳಿದಾಗ ಆಡಳಿತ ಪಕ್ಷಕ್ಕೆ ಮುಜುಗರವಾಗಿದ್ದಂತೂ ಸತ್ಯ. ಸಂಸತ್ತಿನಲ್ಲಿ ಈ ವಿಷಯವನ್ನು ಪ್ರತಿಪಕ್ಷಗಳು ಪ್ರಸ್ತಾಪಿಸಿದಾಗ, ಸಿಪಿಎಂನ ವಾಸುದೇವ ಆಚಾರ್ಯ ಅವರಂತೂ ‘ಭಾರತೀಯ ಪೌರರನ್ನೇ ನೀವು ವಿದೇಶೀಯರು ಅಂತ ಕರೆಯುತ್ತಿದ್ದೀರಿ’ ಅಂತ ಸದನದಲ್ಲೇ ನಿಂದಿಸುತ್ತಾರೆ. ಪಶ್ಚಿಮ ಬಂಗಾಳದಲ್ಲಿಯೂ ಬಾಂಗ್ಲಾ ವಲಸಿಗ ಮತದಾರರು ಭಾರಿ ಪ್ರಮಾಣದಲ್ಲಿ ಇರುವುದು ಅವರ ಮಾತಿನ ಹಿಂದಿನ ಅರ್ಥ. ಹಾಗಿದ್ದರೆ, ಸಮಸ್ಯೆಯ ಮೂಲ ಕಂಡು ಹಿಡಿದು ಪರಿಹಾರ ರೂಪಿಸುವ ಇರಾದೆ ಈ ಸಂಸದರಿಗೆಲ್ಲರಿಗೂ ಇದೆ ಎಂಬುದು ಪ್ರಶ್ನಾರ್ಹ.

ಸಮಸ್ಯೆ ಇನ್ನೂ ಜ್ವಲಂತವಾಗಿರಲು ಕಾರಣವಾಗಿರುವುದೇ ಇದು. ಅಸ್ಸಾಂ ಸರಕಾರವಾಗಲೀ, ಕೇಂದ್ರ ಸರಕಾರವಾಗಲೀ, ಇದನ್ನು ವಲಸಿಗರ ಸಮಸ್ಯೆ ಎಂದು ಒಪ್ಪಿಕೊಳ್ಳಲು ಸಿದ್ಧವಿಲ್ಲ. ಭಾರತ ಮತ್ತು ಬಾಂಗ್ಲಾ ನಡುವಿನ ಅಸ್ಸಾಂ ಅಂತಾರಾಷ್ಟ್ರೀಯ ಗಡಿಯಲ್ಲಿ ಬೇಲಿ ಹಾಕುವ ಕಾರ್ಯವಿನ್ನೂ ಪೂರ್ಣವಾಗಿಲ್ಲ. 1971ರಲ್ಲಿ ಪೂರ್ವ ಪಾಕಿಸ್ತಾನ (ಈಗ ಬಾಂಗ್ಲಾ) ಯುದ್ಧದ ಬಳಿಕ ಪ್ರತ್ಯೇಕಗೊಂಡಾಗ ನೂರಾರು, ಸಾವಿರಾರು ಸಂಖ್ಯೆಯಲ್ಲಿ ಬಾಂಗ್ಲಾದಿಂದ ಮುಸ್ಲಿಂ ವಲಸಿಗರು ಭಾರತಕ್ಕೆ, ವಿಶೇಷವಾಗಿ ಪಶ್ಚಿಮ ಬಂಗಾಳ ಹಾಗೂ ಅಸ್ಸಾಂ ರಾಜ್ಯಗಳೊಳಗೆ ನುಸುಳಿದ್ದರು. ಅವರಿಗೆ ಮಾನವೀಯತೆ ಆಧಾರದಲ್ಲಿ ಆಶ್ರಯವನ್ನೂ ನೀಡಲಾಗಿತ್ತು. ಹೇಗಿದ್ದರೂ “ಅತಿಥಿ ದೇವೋಭವ” ನಮ್ಮ ಧ್ಯೇಯವಲ್ಲವೇ? ಅದರ ಬಳಿಕ, ವೋಟ್ ಬ್ಯಾಂಕ್ ರಾಜಕೀಯ ತನ್ನ ನರ್ತನ ಆರಂಭಿಸಿತು. ಹೀಗೆ ಬಂದವರಿಗೆ ವೋಟರ್ ಐಡಿ, ರೇಶನ್ ಕಾರ್ಡುಗಳು ದೊರೆತವು. ಅವರು ಕೂಡ ‘ಅಮೂಲ್ಯ ಮತ’ದಾರರಾದರು!

ಇವರು ಆಶ್ರಯ ಪಡೆದು ಸುಮ್ಮನಿರುವ ಬದಲು, ಅಸ್ಸಾಂನ ಬುಡಕಟ್ಟು ಜನಾಂಗ, ವಿಶೇಷವಾಗಿ ಬೋಡೋಗಳ ಮೇಲೆ ಪ್ರಾಬಲ್ಯ ಸಾಧಿಸಲು ಆರಂಭಿಸಿದರು, ಜಮೀನು ವಶಪಡಿಸಿಕೊಳ್ಳತೊಡಗಿದರು. ಈಗ ಕಾಶ್ಮೀರದಲ್ಲಿ ಪಂಡಿತರಿಗಾದಂತೆ, ಅಸ್ಸಾಂನಲ್ಲಿ ಬೋಡೋಗಳಿಗೆ “ನನ್ನ ಊರಿನಲ್ಲಿ ನಾನು ಪರಕೀಯ” ಎಂದು ಹೇಳುವಲ್ಲಿವರೆಗೂ ಬಂದುಬಿಟ್ಟಿದೆ ಪರಿಸ್ಥಿತಿ. ಈ ಕಾರಣಕ್ಕೆ ಅವರೂ ತಮ್ಮ ರಕ್ಷಣೆಗಾಗಿ ಪ್ರತಿ-ಹೋರಾಟಕ್ಕಿಳಿದರು. ಎಂಭತ್ತರ ದಶಕದಲ್ಲಿ ಬೋಡೋಲ್ಯಾಂಡ್ ಪ್ರತ್ಯೇಕ ರಾಜ್ಯಕ್ಕಾಗಿ ನಡೆದ ಹೋರಾಟವು ಜನಾಂದೋಲನದ ರೂಪು ಪಡೆದು, ಅಸ್ಸಾಂ ಗಣ ಪರಿಷತ್ ಎಂಬ ಪಕ್ಷವೊಂದು ಅಸ್ತಿತ್ವಕ್ಕೆ ಬಂದಿತು. 1985ರಲ್ಲಿ ಅಧಿಕಾರಕ್ಕೂ ಏರಿತು. ಆದರೆ, ಅಸ್ಸಾಂ ಮೂಲ ವಾಸಿಗಳಿಗಾಗಿ ಅದು ಏನೂ ಮಾಡಿಲ್ಲ, ಅಕ್ರಮ ವಲಸೆ ತಡೆಗಟ್ಟಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪಕ್ಕೆ ಈಡಾಯಿತು. ಕೊನೆಗೆ ಅಧಿಕಾರವನ್ನೂ ಕಳೆದುಕೊಂಡಿತು. 2003ರಲ್ಲಿ ಹಿಂಸಾತ್ಮಕ ಹೋರಾಟಕ್ಕೆ ಅಲ್ಪವಿರಾಮ ಬಿದ್ದದ್ದು ಬೋಡೋಲ್ಯಾಂಡ್ ಒಪ್ಪಂದದ ಮೂಲಕ. ಅದರ ಪ್ರಕಾರ ಬೋಡೋಗಳಿಗೆ ರಾಜಕೀಯ ಅಧಿಕಾರ ಲಭಿಸಿತಾದರೆ, ಉಳಿದವರು ಜನಸಂಖ್ಯೆಯಲ್ಲಿ ಪ್ರಬಲರಾಗಿದ್ದರು.

ರಾಜಕೀಯ ಸ್ಥಿತ್ಯಂತರಗಳ ಬಳಿಕ, ಈಗ ಕಾಂಗ್ರೆಸ್ ಆಡಳಿತದಲ್ಲಿರುವ ಅಸ್ಸಾಂ, ತೀರಾ ನಿರ್ಲಕ್ಷ್ಯಕ್ಕೀಡಾಗಬೇಕಾದ ರಾಜ್ಯವೇನಲ್ಲ. ನಮ್ಮ ಪರಮ ಪ್ರಧಾನಿಗಳೇ ಅಸ್ಸಾಂನ ಪ್ರತಿನಿಧಿಯಾಗಿ ರಾಜ್ಯಸಭೆಯಲ್ಲಿದ್ದಾರೆ. ಇಂಥದ್ದೊಂದು ಹೆಮ್ಮೆಯೊಂದಿಗೆ ತಮ್ಮ ಸಮಸ್ಯೆ ಬಗೆಹರಿದೀತೆಂಬ ಆಶಾವಾದವಂತೂ ಬೋಡೋಗಳಿಗೆ ಇದ್ದೇ ಇದೆ. ಜಮ್ಮು ಮತ್ತು ಕಾಶ್ಮೀರದ ಮೂಲ ವಾಸಿಗಳಾಗಿದ್ದ ಕಾಶ್ಮೀರಿ ಪಂಡಿತರೇ ಇಂದು ಆ ರಾಜ್ಯದಲ್ಲಿ ಪರಕೀಯರಾಗಿ, ಅಲ್ಲಿಂದ ಓಡಿ ಹೋಗಿ ಎಲ್ಲೆಲ್ಲೋ ನೆಲೆಸುವಂತಹಾ ಸ್ಥಿತಿ ಬಂದಿತ್ತು. ಅಂತಹಾ ಸ್ಥಿತಿ ತಮ್ಮದೂ ಆದೀತೆಂಬ ಆತಂಕವೂ ಜೊತೆಯಲ್ಲೇ ಇದೆ.

1999ರಲ್ಲಿ ಅಸ್ಸಾಂ ರಾಜ್ಯಪಾಲರಾಗಿದ್ದ ನಿವೃತ್ತ ಸೇನಾಧಿಕಾರಿ ಎಸ್.ಕೆ.ಸಿಂಗ್ ಅವರು ಅಂದು ಕೇಂದ್ರ ಸರಕಾರಕ್ಕೆ ರಹಸ್ಯ ವರದಿಯೊಂದನ್ನು ಸಲ್ಲಿಸಿ, ಅಕ್ರಮ ವಲಸೆಯ ಆತಂಕಕಾರಿ ಬೆಳವಣಿಗೆಯನ್ನು ತಿಳಿಸಿದ್ದರು. ಅದು ದೊಡ್ಡ ಕೋಲಾಹಲವನ್ನೇ ಸೃಷ್ಟಿಸಿತು. ಅಸ್ಸಾಂ ಜನತೆ ರಾಜ್ಯಪಾಲರ ಕ್ರಮಕ್ಕೆ ಮೆಚ್ಚುಗೆ ಸೂಸಿದರಾದರೂ, ಕಾಂಗ್ರೆಸ್ ಸಂಸದರು ರಾಷ್ಟ್ರಪತಿಗೆ ಪತ್ರ ಬರೆದು, ರಾಜ್ಯಪಾಲರನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ಒತ್ತಾಯಿಸಿದರು. ಈಗಿನ ಮುಖ್ಯಮಂತ್ರಿ ತರುಣ್ ಗೊಗೊಯ್ ಕೂಡ ಒಂದೊಮ್ಮೆ, ‘ನಮ್ಮ ರಾಜ್ಯದಲ್ಲಿ ಅಕ್ರಮ ವಲಸೆಯೇ ಇಲ್ಲ’ ಎನ್ನುತ್ತಿದ್ದಾರೆ. ಇಂತಹಾ ವೈರುಧ್ಯಗಳನ್ನು ದಾಟಿ, ಇದು ನಮ್ಮ ದೇಶದ ರಕ್ಷಣೆಯ ಸವಾಲು ಎಂದು ಪರಿಗಣಿಸಬೇಕಿರುವುದು ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಈಗಿನ ಅನಿವಾರ್ಯ.

ಬೋಡೋಗಳೇ ಹೆಚ್ಚು ಸಂತ್ರಸ್ತರು
ಇಲ್ಲ, ಬಾಂಗ್ಲಾ ವಲಸಿಗರು ಏನೂ ಮಾಡಿಲ್ಲ, ಇದೆಲ್ಲಾ ಕೋಮುವಾದಿಗಳ ಅಟ್ಟಹಾಸ, ಅಪಪ್ರಚಾರ. ಅಲ್ಲಿ ಹಿಂಸಾಚಾರ ನಡೆಸಿದ್ದು ಬೋಡೋಗಳೇ ಹೊರತು, ವಲಸಿಗರು ಅಲ್ಲ ಎಂದೆಲ್ಲಾ ಆರೋಪಿಸುವವರು, ದಿ ಹಿಂದುವಿನಲ್ಲಿ ಪ್ರಕಟವಾದ ವರದಿ ಓದಿರಬಹುದು. ಹಿಂಸಾಚಾರದಲ್ಲಿ ಮನೆ-ಮಠ ಎಲ್ಲವನ್ನೂ ಕಳೆದುಕೊಂಡವರಿಗಾಗಿ ಸರಕಾರವೇ ನಿರಾಶ್ರಿತ ಶಿಬಿರಗಳನ್ನು ಸ್ಥಾಪಿಸಿದೆ. ಒಟ್ಟು 27ರಲ್ಲಿ, 21 ಶಿಬಿರಗಳಲ್ಲಿ ತುಂಬಿರುವುದು ಅಸ್ಸಾಂ ಮೂಲ ವಾಸಿಗಳಾದ ಬೋಡೋಗಳೇ! ಐದರಲ್ಲಿ ಮಾತ್ರ ಮುಸ್ಲಿಮರಿದ್ದಾರೆ. ಇನ್ನೊಂದು ಶಿಬಿರದಲ್ಲಿ ಇತರರು ಇದ್ದಾರೆ. ಅಂದರೆ, 33,517 ಮಂದಿಯಲ್ಲಿ 26,117 ಮಂದಿಯೂ ಬೋಡೋಗಳೇ. 5700 ಮಂದಿ ಮುಸ್ಲಿಮರು ಮತ್ತು 1700 ಮಂದಿ ಇತರರು. ಈ ಅಂಕಿ ಅಂಶ ನೋಡಿದರೇನೇ ಯಾರು ಯಾರ ಮೇಲೆ ದಾಳಿ ನಡೆಸಿದ್ದು, ಸಂತ್ರಸ್ತರು ಯಾರು ಎಂದು ಊಹಿಸಿಕೊಳ್ಳಬಹುದು.

ಬೋಡೋಗಳಿಂದಲೇ ಹಿಂಸಾಚಾರ ಎಂದ ಅಲ್ಪಸಂಖ್ಯಾತ ಆಯೋಗ
ಇತ್ತೀಚೆಗಿನ ಅಸ್ಸಾಂ ಹಿಂಸಾಚಾರ ಕುರಿತು ಅಲ್ಪಸಂಖ್ಯಾತ ಆಯೋಗ ‘ತನಿಖೆ’ ನಡೆಸಿ ಒಪ್ಪಿಸಿದ ವರದಿ ಏನು ಹೇಳುತ್ತದೆ?  ಪ್ರತ್ಯೇಕ ಬೋಡೋಲ್ಯಾಂಡ್ ರಾಜ್ಯಕ್ಕೆ ಆಗ್ರಹಿಸುವ ನಿಟ್ಟಿನಲ್ಲಿ ಬೋಡೋಗಳು ತಮ್ಮ ಜನಸಂಖ್ಯೆ ಈಗ ಇರುವ ಶೇ.30ರಿಂದ ಶೇ.50ಕ್ಕೆ ಹೆಚ್ಚಾಗಬೇಕೆಂದು ಬಯಸುತ್ತಿದ್ದಾರೆ. ಅದಕ್ಕಾಗಿ ಬೇರೆ ಯಾರೇ ಆದರೂ ಈ ಪ್ರದೇಶದಲ್ಲಿ ಇರುವುದನ್ನು ಅಥವಾ ಬರುವುದನ್ನು ಅವರು ಸಹಿಸುತ್ತಿಲ್ಲ. ಇದಕ್ಕಾಗಿಯೇ ಅವರು ಮುಸ್ಲಿಮರನ್ನು ಓಡಿಸುತ್ತಿದ್ದಾರೆ ಎಂದಿದೆ ವಜಾಹತ್ ಹಬೀಬುಲ್ಲಾ ನೇತೃತ್ವದ ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗ. ಅಷ್ಟು ಮಾತ್ರವೇ ಅಲ್ಲ, ಮುಸ್ಲಿಮರಿಗೆ ಅಲ್ಲಿ ಸೂಕ್ತ ಸೌಲಭ್ಯ ಕಲ್ಪಿಸಿಕೊಡದೇಹೋದಲ್ಲಿ, ಅವರೆಲ್ಲರೂ ಜಿಹಾದಿಗಳಾಗುವ ಸಾಧ್ಯತೆ ಇದೆ ಎಂಬ ಎಚ್ಚರಿಕೆಯನ್ನೂ ನೀಡಿದೆ!

3 ವರ್ಷಗಳಲ್ಲಿ 58 ಸಾವಿರ ಬಾಂಗ್ಲಾ ವಲಸಿಗರು

ಎಲ್ಲಿ ಹೋದರೆಂದೇ ಗೊತ್ತಿಲ್ಲ ಒಪ್ಪಿಕೊಂಡಿದೆ ಸರಕಾರ!
ಇನ್ನೂ ಒಂದು ವಿಚಾರವಿದೆ. ಕಳೆದ ಮೂರು ವರ್ಷಗಳಲ್ಲಿ 82,585 ಬಾಂಗ್ಲಾ ದೇಶೀಯರು ಭಾರತಕ್ಕೆ ವಲಸೆ ಬಂದಿದ್ದಾರೆ. ಅವುಗಳಲ್ಲಿ ಭಾರತ ಸರಕಾರವು 23,653 ಮಂದಿಯನ್ನು ಹೇಗಾದರೂ ಪತ್ತೆ ಹಚ್ಚಿ ವಾಪಸ್ ಬಾಂಗ್ಲಾಕ್ಕೆ ಕಳುಹಿಸಿದ್ದೇವೆ ಎಂದು ಹೇಳುತ್ತಿದೆ. ಮಾತ್ರವಲ್ಲದೆ, ಉಳಿದ 58,932 ಮಂದಿ ಎಲ್ಲಿದ್ದಾರೆಂಬುದೇ ಗೊತ್ತಿಲ್ಲ ಎಂದು ಸ್ವತಃ ಭಾರತ ಸರಕಾರವೇ ಮೊನ್ನೆ ಮೊನ್ನೆ ಲೋಕಸಭೆಯಲ್ಲಿ ಒಪ್ಪಿಕೊಂಡಿದೆ. ಇದು ಸರಕಾರವೇ ನೀಡಿರುವ ಅಂಕಿ-ಅಂಶ!

ಈಗ ಅಸ್ಸಾಂ ಮುಖ್ಯಮಂತ್ರಿಯೂ ಒಪ್ಪಿಕೊಳ್ತಾರೆ…
ಅಸ್ಸಾಂನ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ತರುಣ್ ಗೊಗೊಯ್ ಅವರೇ ಹೇಳತ್ತಿದ್ದಾರೆ, ಬಾಂಗ್ಲಾದಿಂದ ವಲಸೆ ಇನ್ನೂ ಮುಂದುವರಿಯುತ್ತಿದೆ. ಇದು ಸಮಸ್ಯೆ ಹೌದು. ಗಡಿ ಭಾಗವನ್ನು ಸಮರ್ಪಕವಾಗಿ ಮುಚ್ಚಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ಅವರೇ ಇಲ್ಲಿ ಒಪ್ಪಿಕೊಂಡಿದ್ದಾರೆ.

ಅಸ್ಸಾಂನಲ್ಲಿ ಆಗುತ್ತಿರುವ ಆಕ್ರಮಣ, ಅತಿಕ್ರಮಣ ಕೇವಲ ಅಸ್ಸಾಂ ಮೇಲಾಗುತ್ತಿರುವ ಹಾನಿಯಲ್ಲ, ಇದು ದೇಶದ ಸಾರ್ವಭೌಮತೆಯ ಮೇಲಿನ ಬೆದರಿಕೆ ಎನ್ನಲೂ ಕಾರಣಗಳಿವೆ. ಮುಂಬಯಿ ದಾಳಿ, ಆ ಬಳಿಕವೂ ದೇಶದ ವಿವಿಧೆಡೆ ನಡೆಯುತ್ತಿರುವ ದಾಳಿಗಳಲ್ಲಿ ಬಾಂಗ್ಲಾದಲ್ಲಿ ನೆಲೆಯೂರಿರುವ ಉಗ್ರಗಾಮಿಗಳ ಹೆಸರು, ಸಂಘಟನೆಗಳ ಹೆಸರೂ ಕೇಳಿ ಬರುತ್ತಲೇ ಇದೆ. ಅವರು ಕೂಡ ಈ ಗಡಿಗಳಲ್ಲೇ ಒಳ ನುಸುಳಿರುವುದು. ಅಸ್ಸಾಂನಲ್ಲಿ ದಳ್ಳುರಿ ಉಂಟು ಮಾಡಿದವರನ್ನು ಸಾರಾಸಗಟಾಗಿ ಉಗ್ರಗಾಮಿಗಳು ಎಂದು ಹೇಳಲಾಗದಿದ್ದರೂ, ಅಂಥದ್ದೊಂದು ಅಪಾಯದ ಕರೆಗಂಟೆ ಬಾರಿಸಿದೆ, ನಾವು ಎಚ್ಚೆತ್ತುಕೊಳ್ಳಬೇಕಿರುವುದು ಮಾತ್ರವೇ ಬಾಕಿ. ಇಲ್ಲವಾದಲ್ಲಿ ಪಾಕಿಸ್ತಾನ ಇರುವ ಭಾರತದ ಬಲಕಿವಿ ಭಾಗದಂತೆಯೇ ಎಡಕಿವಿ ಭಾಗವೂ ಕ್ಷೋಭೆಗೆ ಸಿಲುಕಲಿದೆ.

ಅದೇನೋ ಈಶಾನ್ಯ ರಾಜ್ಯವಂತೆ, ಅಲ್ಲಿ ಬೋಡೋಗಳು ಉಗ್ರಗಾಮಿಗಳಂತೆ, ಉಲ್ಫಾಗಳಂತೆ ಎಂಬ ಮಟ್ಟಿಗಷ್ಟೇ ಅಲ್ಪಜ್ಞಾನ ನಮ್ಮದು. ಆದರೆ ಅಲ್ಲಿನ ನಿಜಸ್ಥಿತಿ ಲೋಕಮುಖಕ್ಕೆ ಅರಿವಾಗಲು ಈಗಲಾದರೂ ಆರಂಭವಾಗಿರುವುದು ಒಳ್ಳೆಯ ಬೆಳವಣಿಗೆ. ಸಂಸತ್ತಿನಲ್ಲಿ ಈ ಬಗ್ಗೆ ಗದ್ದಲವಾಗುತ್ತಿದೆ. ಸರಕಾರ ಎಚ್ಚೆತ್ತುಕೊಳ್ಳುತ್ತದೋ ನೋಡೋಣ.

4 COMMENTS

  1. ಈಗ ಕಾಶ್ಮೀರದಲ್ಲಿ ಪಂಡಿತರಿಗಾದಂತೆ, ಅಸ್ಸಾಂನಲ್ಲಿ ಬೋಡೋಗಳಿಗೆ “ನನ್ನ ಊರಿನಲ್ಲಿ ನಾನು ಪರಕೀಯ” ಎಂದು ಹೇಳುವಂತಹಾ ಸ್ಥಿತಿ – Sadly, Days are not far when people of Dakshina Kannada also experience the same thing

    • ಇದೊಂದು ಸೈಲೆಂಟ್ ಕಿಲ್ಲರ್… ಅಷ್ಟೇ… ನಾವು ಅರ್ಥ ಮಾಡಿಕೊಳ್ಳುವುದಿಲ್ಲ, ಅರ್ಥವಾದಾಗ ಕೈಮೀರಿರುತ್ತದೆ.

  2. ನಮ್ಮ ಕಾಲಿನ ಬುಡಕ್ಕೆ ಸಮಸ್ಯೆ ಬಂದಾಗ ಮಾತ್ರ ಎಚ್ಚೆತ್ತುಕೊಳ್ಳುವ ಗುಣ ಭಾರತೀಯರಲ್ಲಿದೆ. ಸಮಸ್ಯೆ ಇರೋದು ಅಸ್ಸಾಂನಲ್ಲಿ ತಾನೇ, ಅದು ಬಾಂಗ್ಲಾ ವಲಸಿಗರು ಹಾಗು ಬೋಡೋಗಳ ಮಧ್ಯೆ ಅದನ್ನು ಕಟ್ಟಿಕೊಂಡು ನಮಗೆ ಏನು ಆಗಬೇಕು. ಅದೂ ಅಲ್ಲದೆ ಈ ರೀತಿಯ ವಿಚಾರದ ಬಗ್ಗೆ ಮಾತನಾಡಿದರೆ ಬೇರೆಯವರು ನಮ್ಮನ್ನು ಹಿಂದೂ ಜಾಗರಣಾ ವೇದಿಕೆ ಸದಸ್ಯ ಅಂದುಕೊಂಡುಬಿಟ್ಟರೆ..? ಅದಕ್ಕಾಗಿ ಸುಮ್ಮನಿರುವುದೇ ಲೇಸು. ಈ ರೀತಿಯ ಮನಸ್ಥಿತಿ ನಮ್ಮ ಎಲ್ಲಾ ಸ್ನೇಹಿತರಿಗೂ ಇದೆ. ಕೆಲ ಘಟನೆಗಳ ಬಗ್ಗೆ ರೋಷ ಭೀಷಣವಾಗಿ ಮಾಧ್ಯಮದ ಮುಂದೆ, ಈ ರೀತಿಯ ಅಂತರ್ಜಾಲದ ಮುಖೇನ ಘರ್ಜಿಸುವ ಸ್ನೇಹಿತರು ಇಂಥಹ ರಾಷ್ಟ್ರೀಯ ವಿಚಾರ ಬಂದಾಗ ಮೌನಕ್ಕೆ ಶರಣಾಗುತ್ತಾರೆ. ಎಲ್ಲಿ ಅತ್ಯಾಚಾರವಾಗುತ್ತದೋ, ಎಲ್ಲಿ ಅನಾಚಾರವಾಗುತ್ತದೋ, ಎಲ್ಲಿ ಜಾತಿ ಧರ್ಮದ ಹೆಸರಿನಲ್ಲಿ ಗಲಭೆಗಳು ನಡೆಯುತ್ತವೆಯೋ ಅದನ್ನೆಲ್ಲ ಯಾವ ಸಂಕುಚಿತತೆ ಇಲ್ಲದಂತೆ ಖಂಡಿಸಿ, ಪ್ರತಿಭಟನಾ ಸಂದೇಶ ಕಳುಹಿಸಿದಂತೆ, ಈ ರೀತಿಯ ವಿಚಾರಕ್ಕೂ ನಾವುಗಳು ಸ್ಪಂಧಿಸಬೇಕು. ಇದು ನಮ್ಮ ರಾಷ್ಟ್ರ ಸಾರ್ವಭೌಮತ್ವದ ವಿಷಯ. ಇಲ್ಲಿ ಜಾತಿ ವಿಂಗಡಣೆ ಸಲ್ಲ. ಆದರೆ ನಮಗೆ ಅದೆಲ್ಲ ಬೇಕಾಗಿಲ್ಲ ಕೇವಲ ಧರ್ಮದ ವಿಷಯದಲ್ಲಿ ಕಚ್ಚಾಡುತ್ತಾ, ಒಬ್ಬರ ನಂಬಿಕೆ ಶ್ರದ್ಧೆಗಳನ್ನು ಗೇಲಿ ಮಾಡಿ ಹೀಯಾಳಿಸುತ್ತಾ ಮತ್ಯಾರನ್ನೋ ಮೆಚ್ಚಿಸಲೆಂಬಂತೆ ವರ್ತಿಸುವ ಆಷಾಡಭೂತಿಗಳು ಇರುವ ತನಕ.., ಜೊತೆಗೆ ಇದಕ್ಕೆಲ್ಲ ಪ್ರಭಲ ರಾಜಕೀಯ ಇಚ್ಚಾಶಕ್ತಿ ಬೇಕು. ಇದು ದೇಶವನ್ನು ಆಳುತ್ತಿರುವ, ಹಾಳುಮಾಡುತ್ತಿರುವ ರಾಜಕೀಯ ವ್ಯಕ್ತಿಗಳಿಗಿರಬೇಕು. ಪ್ರತಿಯೊಬ್ಬ ಜನರನ್ನು ಒಂದೊಂದು ಮತದಿಂದ ನೋಡುವುದಕ್ಕೆ ಪ್ರಾರಂಭಿಸುವ ಈ ರಾಜಕೀಯ ಮಂದಿಯ ವೋಟ್ ಬ್ಯಾಂಕ್ ರಾಜಕಾರಣ, ನಿಜವಾಗಲು ವಲಸಿಗರನ್ನು ಒದ್ದೋಡಿಸುವ ಮಾತು ಕನಸೇ ಬಿಡಿ. ಅದನ್ನು ಕನಸಲ್ಲೂ ಯೋಚಿಸುವುದಕ್ಕೆ ಅವರು ಇಚ್ಚೆಪಡುವುದಿಲ್ಲ.

    • ಬಾಂಗ್ಲಾ ವಲಸಿಗರು ಅಂದರೆ ಯಾರು? ಭಾರತೀಯ ಮುಸ್ಲಿಮರಂತೂ ಅಲ್ಲ. ಪಾಕಿಸ್ತಾನದಿಂದ ಪ್ರಚೋದನೆ ಪಡೆದಿರಬಹುದಾದವರು. ಏನಿದ್ದರೂ, ನಮ್ಮ ಗಡಿಯನ್ನು ಭದ್ರಪಡಿಸಿಕೊಳ್ಳದೆ, ಪಾಕಿಸ್ತಾನವನ್ನು, ಬಾಂಗ್ಲಾವನ್ನು ದೂರಿ ಪ್ರಯೋಜನವಾದರೂ ಏನು?

LEAVE A REPLY

Please enter your comment!
Please enter your name here