Nokia C20 Plus: ಬಜೆಟ್ ಶ್ರೇಣಿಯಲ್ಲಿ ಆಧುನಿಕ ವೈಶಿಷ್ಟ್ಯಗಳ ಫೋನ್

0
421

ಹೆಚ್ಎಂಡಿ ಗ್ಲೋಬಲ್ ಮೂಲಕ ಸ್ಮಾರ್ಟ್ ಫೋನ್ ಮಾರುಕಟ್ಟೆಗೆ ಮರಳಿರುವ ನೋಕಿಯಾ, ಇತ್ತೀಚೆಗೆ ಬಜೆಟ್ ಶ್ರೇಣಿಯ ನೋಕಿಯಾ ಸಿ20 ಪ್ಲಸ್ ಎಂಬ ಸ್ಮಾರ್ಟ್ ಫೋನನ್ನು ಬಿಡುಗಡೆಗೊಳಿಸಿದೆ. ಚೀನಾದ ಸ್ಮಾರ್ಟ್ ಫೋನ್ ತಯಾರಿಕಾ ಕಂಪನಿಗಳ ಧಾವಂತದ ನಡುವೆ ನೋಕಿಯಾ ಕೂಡ ಸ್ಫರ್ಧೆಗಿಳಿದಿದ್ದು, 10 ಸಾವಿರ ರೂ. ಒಳಗಿನ ಫೋನ್‌ಗಳ ಶ್ರೇಣಿಯಲ್ಲಿ ಮಾರುಕಟ್ಟೆ ಪಾಲು ಪಡೆಯುವುದಕ್ಕಾಗಿ ಹೊರತಂದಿರುವ ಈ ಫೋನ್ ಹೇಗಿದೆ?

ವಿನ್ಯಾಸ
ಗಟ್ಟಿ ಗುಣಮಟ್ಟದ ಪ್ಲಾಸ್ಟಿಕ್ ಯುನಿಬಾಡಿಯೊಂದಿಗೆ ಇದು ಉತ್ತಮ ಬಿಲ್ಡ್ ಹೊಂದಿದ್ದು, ಹಿಡಿದುಕೊಳ್ಳಲು ಗ್ರಿಪ್ ಚೆನ್ನಾಗಿದೆ. ಕೈಯಿಂದ ಜಾರಿ ಬಿದ್ದುಹೋಗುವ ಅಪಾಯ ಕಡಿಮೆ. 6.5 ಇಂಚಿನ ಐಪಿಎಸ್ ಎಲ್‌ಸಿಡಿ ಪ್ಯಾನೆಲ್ ಇರುವ ಸ್ಕ್ರೀನ್‌ನಲ್ಲಿ ಹೆಚ್‌ಡಿ ಪ್ಲಸ್ ರೆಸೊಲ್ಯುಶನ್‌ನಲ್ಲಿ ಚಿತ್ರಗಳು ಗೋಚರಿಸುತ್ತವೆ. ಹಿಂಭಾಗದಲ್ಲಿ ವೃತ್ತಾಕಾರದ ಕ್ಯಾಮೆರಾ ಸೆಟಪ್, ಕೆಳಗಡೆ ಲೌಡ್‌ಸ್ಪೀಕರ್ ಇದ್ದರೆ, ಮುಂಭಾಗದಲ್ಲಿ ಡಾಟ್ ನಾಚ್ ಸೆಲ್ಫೀ ಕ್ಯಾಮೆರಾ ಇದೆ. ಸ್ಕ್ರೀನ್ ಮೇಲೆ ದಪ್ಪನೆಯ ಬೆಝೆಲ್ (ಅಂಚು) ಇದೆ. ಚಾರ್ಜಿಂಗ್‌ಗೆ ಟೈಪ್-ಸಿ ಬದಲು, ಇಲ್ಲಿ ಮೈಕ್ರೋ ಯುಎಸ್‌ಬಿ ಪೋರ್ಟ್ ಬಳಸಲಾಗಿದೆ. ಇಯರ್‌ಫೋನ್‌ಗಾಗಿ 3.5ಮಿಮೀ ಜಾಕ್ ಇದೆ.

ಕ್ಯಾಮೆರಾ
ಪ್ರಧಾನ ಕ್ಯಾಮೆರಾದಲ್ಲಿ 8 ಮೆಗಾಪಿಕ್ಸೆಲ್ ಶೂಟಿಂಗ್ ಸೆನ್ಸರ್ ಇದ್ದು, 2MP ಡೆಪ್ತ್ ಸೆನ್ಸರ್ ಇದೆ. ಹೊರಾಂಗಣದ ಬೆಳಕಿನಲ್ಲಿ ಫೊಟೊ, ವಿಡಿಯೊಗಳು ಅತ್ಯುತ್ತಮವಾಗಿ ಮೂಡಿಬರುತ್ತವೆ. ರಾತ್ರಿ ಅಥವಾ ಮಂದ ಬೆಳಕಿನಲ್ಲಿ ಸರಾಸರಿ ಗುಣಮಟ್ಟದ ಫೊಟೊಗಳು ದೊರೆಯುತ್ತವೆ. ಇದಕ್ಕೆ ಒಂದು ಕಾರಣವೆಂದರೆ, ಪೂರ್ವನಿಗದಿತ ನೈಟ್ ಮೋಡ್ ಇಲ್ಲದಿರುವುದು. ಮುಂಭಾಗದ ಕ್ಯಾಮೆರಾದಲ್ಲಿ 5 ಮೆಗಾಪಿಕ್ಸೆಲ್ ಸೆನ್ಸರ್ ಇದ್ದು, ಸಾಧಾರಣ ಅನ್ನಿಸಬಹುದಾದ ಚಿತ್ರಗಳು ಮೂಡಿಬರುತ್ತವೆ.

ಗೂಗಲ್‌ನ ಆಂಡ್ರಾಯ್ಡ್ 11 ‘ಗೋ’ ಆವೃತ್ತಿಯ ಕಾರ್ಯಾಚರಣೆ ವ್ಯವಸ್ಥೆ ಇರುವ ನೋಕಿಯಾ ಸಿ20 ಪ್ಲಸ್‌ನಲ್ಲಿ ಯುನಿಸಾಕ್ SC9863A ಒಕ್ಟಾಕೋರ್ ಚಿಪ್‌ಸೆಟ್ ಇದೆ. ರಿವ್ಯೂಗೆ ದೊರೆತಿರುವುದು 3ಜಿಬಿ RAM ಹಾಗೂ 32GB ಸ್ಟೋರೇಜ್ ಇರುವ ಫೋನ್. ಮಲ್ಟಿಟಾಸ್ಕಿಂಗ್ (ಹಲವು ಆ್ಯಪ್‌ಗಳನ್ನು ತೆರೆದಿಟ್ಟು ಕೆಲಸ) ಮಾಡುವಾಗ ಯಾವುದೇ ಹಿನ್ನಡೆಯಾಗಲೀ, ಕಾರ್ಯಸ್ಥಾಗಿತ್ಯವಾಗಲೀ ಕಂಡುಬಂದಿಲ್ಲ. ಮುಖ ಗುರುತಿಸಿ ಸ್ಕ್ರೀನ್ ಅನ್‌ಲಾಕ್ ಮಾಡುವ ವ್ಯವಸ್ಥೆ ಚೆನ್ನಾಗಿ ಕೆಲಸ ಮಾಡುತ್ತದೆ. 5000mAh ಬ್ಯಾಟರಿ ಉತ್ತಮವಾಗಿದ್ದು, ಎರಡು ದಿನಗಳ ಸಾಮಾನ್ಯ ಬಳಕೆಗೆ ಯಾವುದೇ ಅಡ್ಡಿಯಾಗಿಲ್ಲ. ಚಾರ್ಜಿಂಗ್‌ಗೆ 10W ಬೆಂಬಲವಿರುವುದರಿಂದ ಶೂನ್ಯದಿಂದ ಪೂರ್ತಿ ಚಾರ್ಜ್ ಆಗಬೇಕಿದ್ದರೆ ಎರಡುವರೆ ಗಂಟೆಗೂ ಹೆಚ್ಚು ಅವಧಿ ಬೇಕು.

ಎರಡು ವರ್ಷಗಳ ತಂತ್ರಾಂಶ ಅಪ್‌ಡೇಟ್ ಹಾಗೂ ಫೋನ್‌ನಲ್ಲಿ ಒಂದು ವರ್ಷದೊಳಗೆ ತಯಾರಿಕಾ ದೋಷ ಕಂಡುಬಂದರೆ ಬದಲಾಯಿಸಿಕೊಡುವುದಾಗಿಯೂ ನೋಕಿಯಾ ಘೋಷಿಸಿದೆ.

ಒಟ್ಟಾರೆ ಹೇಗಿದೆ?
₹9990 ಬೆಲೆ ಇರುವ ನೋಕಿಯಾ ಸಿ20 ಪ್ಲಸ್ 3GB/32GB ಮಾದರಿಯು, ಉತ್ತಮ ಬಿಲ್ಡ್ ಗುಣಮಟ್ಟವನ್ನೂ, ಬ್ಯಾಟರಿ ಬಾಳಿಕೆಯನ್ನೂ ಹೊಂದಿದೆ. ಸ್ಟಾಕ್ ಆಂಡ್ರಾಯ್ಡ್ ಕಾರ್ಯಾಚರಣಾ ವ್ಯವಸ್ಥೆಯೊಂದಿಗೆ ಸರಳ ಯೂಸರ್ ಇಂಟರ್ಫೇಸ್ ಮೂಲಕ ಗಮನ ಸೆಳೆಯುತ್ತದೆ. ಕ್ಯಾಮೆರಾ ಗುಣಮಟ್ಟ ಚೆನ್ನಾಗಿದ್ದು, ಹೊಸದಾಗಿ ಸ್ಮಾರ್ಟ್‌ಫೋನ್ ಖರೀದಿಸುವವರಿಗೆ ಅಥವಾ ಎರಡನೇ ಫೋನ್ ಬೇಕೆಂದುಕೊಳ್ಳುವವರಿಗೆ ಇಷ್ಟವಾಗಬಹುದಾದ ಬಜೆಟ್ ಶ್ರೇಣಿಯ ಫೋನ್ ಇದು. 2GB RAM ಮಾದರಿಯ ಬೆಲೆ ₹8999 ಇದೆ.

My Gadget Review published in Prajavani on 9 Sept 2021.

LEAVE A REPLY

Please enter your comment!
Please enter your name here