ಮಾಹಿತಿ@ತಂತ್ರಜ್ಞಾನ: ಆಪಲ್ V/s ಸ್ಯಾಮ್ಸಂಗ್ ಯುದ್ಧ

0
298

(ವಿ.ಕ.ಅಂಕಣ)
ಸಾಫ್ಟ್‌ವೇರ್ ದಿಗ್ಗಜರು ತಂತ್ರಜ್ಞಾನಗಳ ಪೇಟೆಂಟ್ ಮಾಡಿಸಿಕೊಂಡು ಕದನಕ್ಕೆ ತೊಡಗುವುದು ಇಂದು ನಿನ್ನೆಯದಲ್ಲ. ಈಗಿನ ಹಾಟ್ ಸಂಗತಿಯೆಂದರೆ ವಿಶ್ವದ ಅತಿದೊಡ್ಡ ಸ್ಮಾರ್ಟ್‌ಫೋನ್ ತಯಾರಕರಾದ ಆಪಲ್ ಮತ್ತು ಸ್ಯಾಮ್ಸಂಗ್ ಯುದ್ಧ. ‘ನೀ ಬಿಡೆ, ನಾ ಕೊಡೆ’ ಹೋರಾಟದಲ್ಲಿ, ಆಪಲ್‌ಗೆ ಸ್ಯಾಮ್ಸಂಗ್ 104 ಕೋಟಿ ಡಾಲರ್ ಪರಿಹಾರ ನೀಡಬೇಕು ಅಂತ ಕ್ಯಾಲಿಫೋರ್ನಿಯಾದ ಸ್ಯಾನ್‌ಓಸೆ (San Jose) ನ್ಯಾಯಾಲಯ ಶುಕ್ರವಾರ ಐತಿಹಾಸಿಕ ತೀರ್ಪು ನೀಡಿದೆ.

ಬೌದ್ಧಿಕ ಆಸ್ತಿಯ ಹಕ್ಕು (Intellectual Property rights) ಕಾಪಾಡಿಕೊಳ್ಳುವಲ್ಲಿ ಆಪಲ್‌ಗೆ ಸುದೀರ್ಘ ಇತಿಹಾಸವೇ ಇದೆ. ವಿವಿಧ ದೇಶಗಳಲ್ಲಿ ನೋಕಿಯಾ, ಹೆಚ್‌ಟಿಸಿ, ಮೋಟೋರೋಲಾ, ಮೈಕ್ರೋಸಾಫ್ಟ್, ಹೆಚ್‌ಪಿ, ಕೊಡ್ಯಾಕ್ ಮುಂತಾದ ಕಂಪನಿಗಳ ಜೊತೆ ಪೇಟೆಂಟ್ ಹೋರಾಟ ಮಾಡುತ್ತಲೇ ಬಂದಿದೆ. ಅದೆಲ್ಲಾ ಬಿಡಿ, ಆಪಲ್ ಎಂಬ ವಿಶ್ವಪ್ರಸಿದ್ಧ ಹೆಸರು ಮತ್ತದರ ಮುರಿದ ಸೇಬಿನ ಲಾಂಛನ, ಹಾಡುಗಳ ಸಂಗ್ರಹಾಗಾರ ‘ಐಟ್ಯೂನ್’ಗೂ ಅದು ಅದು ಆಪಲ್ ಕಾರ್ಪ್ಸ್ ಎಂಬ ಸಂಗೀತ ಕಂಪನಿಯೊಂದಿಗೆ ಹೋರಾಟ ನಡೆಸಿತ್ತು! ಕೊನೆಗೆ ಉಭಯ ಕಂಪನಿಗಳೂ ರಾಜಿ ಮಾಡಿಕೊಂಡಿದ್ದವು.

ಏನಿದು ಕದನ?
ಐಫೋನ್ ಮತ್ತು ಸ್ಯಾಮ್ಸಂಗ್‌ನ ಗ್ಯಾಲಕ್ಸಿ ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಬಳಸುತ್ತಿರುವಾಗ, ಒಂದು ಹಂತದ ಕೊನೆಭಾಗಕ್ಕೆ ಬಂದಾಗ ಹಿಂದಿನ ಹಂತಕ್ಕೆ ಹೋಗಲು ಸ್ಪರ್ಶಿಸಿದರೆ ‘ಬೌನ್ಸ್-ಬ್ಯಾಕ್’ ಆಗುವುದನ್ನು ನೀವು ನೋಡಿರಬಹುದು. ಇಲ್ಲವೇ, ಯಾವುದೇ ಚಿತ್ರವನ್ನು ದೊಡ್ಡದಾಗಿ/ಚಿಕ್ಕದಾಗಿ ಜೂಮ್ ಮಾಡಬೇಕಿದ್ದರೆ, ಎರಡು ಬೆರಳಿನಲ್ಲಿ ಹೊರಮುಖವಾಗಿ ಅಥವಾ ಒಳಮುಖವಾಗಿ ಸ್ಪರ್ಶಿಸಿದರಾಯಿತು. ಇದು ಮತ್ತು ಇಂಥದ್ದೇ ಹಲವು ತಂತ್ರಜ್ಞಾನಗಳು ನಮ್ಮವು ಎಂಬುದೇ ಆಪಲ್ ಮತ್ತು ಸ್ಯಾಮ್ಸಂಗ್ ಕಿತ್ತಾಟ.

ಸ್ಯಾಮ್ಸಂಗ್ ಕಂಪನಿ ನಮ್ಮ ಏಳು ಪೇಟೆಂಟ್‌ಗಳನ್ನು ನಕಲು ಮಾಡಿದೆ ಅಂತ ಆಪಲ್ ಹೇಳಿದರೆ, ಆಪಲ್ ಕಂಪನಿಯೇ ಐಫೋನ್, ಐಪಾಡ್ ಮತ್ತು ಐಪ್ಯಾಡ್‌ಗಳಲ್ಲಿ ನಮ್ಮ ಐದು ಪೇಟೆಂಟ್‌ಗಳನ್ನು ನಕಲು ಮಾಡಿದೆ ಎಂಬುದು ಸ್ಯಾಮ್ಸಂಗ್ ಆರೋಪ.

ಆಪಲ್‌ಗೆ ತನ್ನದೇ ಆದ iOS ಎಂಬ ಕಾರ್ಯಾಚರಣಾ ವ್ಯವಸ್ಥೆಯಿದ್ದರೆ, ಸ್ಯಾಮ್ಸಂಗ್ ಮಾತ್ರ ಗೂಗಲ್ ಒಡೆತನದ ಆಂಡ್ರಾಯ್ಡ್ ಕಾರ್ಯಾಚರಣಾ ವ್ಯವಸ್ಥೆಯನ್ನು ತನ್ನ ಸ್ಮಾರ್ಟ್ ಫೋನ್‌ಗಳಿಗೆ ಬಳಸುತ್ತದೆ. ಆಂಡ್ರಾಯ್ಡ್‌ನಲ್ಲಿರುವ ಹೆಚ್ಚಿನ ಅಪ್ಲಿಕೇಶನ್‌ಗಳೆಲ್ಲವನ್ನೂ ವಿಶ್ವಾದ್ಯಂತ ಬಳಕೆದಾರರೇ ಅಭಿವೃದ್ಧಿಪಡಿಸಿದ್ದಾರೆ. ಆದರೆ, ಇವುಗಳಲ್ಲಿರುವ ಬಹುತೇಕ ವ್ಯವಸ್ಥೆಗಳು ಆಪಲ್‌ಗೆ ಪೇಟೆಂಟ್ ಇರುವ ತಂತ್ರಜ್ಞಾನದ ನಕಲು, ಕೊಂಚ ಬದಲಾವಣೆ ಮಾಡಿ ಮಾರುಕಟ್ಟೆಗೆ ಬಿಟ್ಟಿದ್ದಾರೆ ಎಂಬುದು ಆಪಲ್ ಆರೋಪ. ಇಂಥದ್ದೇ ಸುಮಾರು 50 ಪರಸ್ಪರರ ಕೇಸುಗಳು 9 ದೇಶಗಳಲ್ಲಿ ನಡೆಯುತ್ತಿವೆ ಎಂದರೆ ನಿಮಗೆ ಈ ಹೋರಾಟದ ಆಳದ ಅರಿವಾದೀತು.

ಪರಿಣಾಮ ಏನು?
ಒಂದು ರೀತಿಯಲ್ಲಿ ಆಪಲ್‌ನ ಐಫೋನ್ ಹಾಗೂ ಸ್ಯಾಮ್ಸಂಗ್ ಸ್ಮಾರ್ಟ್‌ಫೋನ್‌ಗಳ ನಡುವಿನ ಕದನ ಎಂಬಂತೆ ತೋರಿದರೂ, ಇದು ದೂರಗಾಮಿ ಪರಿಣಾಮ ಬೀರುವುದು ಸಾಫ್ಟ್‌ವೇರ್ ದಿಗ್ಗಜ ಗೂಗಲ್‌ನ ಜನಪ್ರಿಯ ಮೊಬೈಲ್ ಕಾರ್ಯಾಚರಣಾ ವ್ಯವಸ್ಥೆ ಆಂಡ್ರಾಯ್ಡ್ ಮೇಲೆ. ಅಂತೆಯೇ, ಆಪಲ್ ಮಾದರಿಯಲ್ಲೇ ಇರುವ ತಮ್ಮ ಸ್ಮಾರ್ಟ್‌ಫೋನ್‌ಗಳನ್ನು, ಅದರ ಇಂಟರ್ಫೇಸ್ ಅನ್ನು, ಅಪ್ಲಿಕೇಶನ್‌ಗಳನ್ನು, ಶೈಲಿಯನ್ನು ಬದಲಾಯಿಸಲೇಬೇಕಾದ ಭೀತಿಯೊಂದು ಎಲ್ಲ ಸ್ಮಾರ್ಟ್‌ಫೋನ್ ತಯಾರಕರಿಗೆ ಹುಟ್ಟಿಕೊಂಡಿದೆ. ಆಂಡ್ರಾಯ್ಡ್‌ನಲ್ಲಿ ಭಾರೀ ಬದಲಾವಣೆಗಳನ್ನೂ ನಿರೀಕ್ಷಿಸಬಹುದಾಗಿದೆ.

ಇಷ್ಟೆಲ್ಲಾ ಆದರೂ ವಿಶೇಷವೇನು ಗೊತ್ತೇ? ಆಪಲ್ ತನ್ನ ಫೋನ್ ಬಿಡಿಭಾಗಗಳಿಗೆ ದ.ಕೊರಿಯಾದ ಎಲೆಕ್ಟ್ರಾನಿಕ್ಸ್ ದಿಗ್ಗಜ ಸ್ಯಾಮ್ಸಂಗನ್ನೇ ನೆಚ್ಚಿಕೊಂಡಿದೆ ಮತ್ತು ಇವೆರಡೂ ವ್ಯವಹಾರದಲ್ಲಿ ಇನ್ನೂ ‘ನಂಬಿಕಸ್ಥ ಪಾಲುದಾರರು’! ಆಪಲ್ ಐಫೋನ್ ಒಂದರ ಶೇ.26 ಭಾಗವನ್ನು ತಯಾರಿಸಿಕೊಡುವುದು ಸ್ಯಾಮ್ಸಂಗ್!

1 COMMENT

LEAVE A REPLY

Please enter your comment!
Please enter your name here