ಪ್ರಜಾಪ್ರಭುತ್ವದ ಆಧಾರ ಸ್ತಂಭಗಳು ಕೊಳೆಯಾಗಿವೆ ನೋಡಿದಿರಾ?

0
274

 

ಅದೆಷ್ಟೋ ಕೋರ್ಟು ತೀರ್ಪುಗಳು ಇಡೀ ದೇಶದ ಜನತೆಯ ಜೀವನವನ್ನೇ ಬದಲಾಯಿಸಿದ ಪ್ರಕರಣಗಳು ನಮ್ಮ ಕಣ್ಣ ಮುಂದಿವೆ. ಭ್ರಷ್ಟರಿಗೆ, ಧನ ಮದವುಳ್ಳವರಿಗೆ, ಅಧಿಕಾರ ಮದವುಳ್ಳವರಿಗೆ ನ್ಯಾಯಾಲಯಗಳು ತಕ್ಕ ಪಾಠ ಕಲಿಸಿ ಜೈಲಿಗಟ್ಟುತ್ತಿರುವಾಗ ನಿಟ್ಟುಸಿರುಬಿಟ್ಟದ್ದು ರಾಜಕಾರಣಿಗಳೇನಲ್ಲ, ಇದೇ ಜನ ಸಾಮಾನ್ಯ ಮಾತ್ರ ಎಂಬುದನ್ನು ನಾವಿಲ್ಲಿ ಗಮನಿಸಬೇಕು.

ಸರಕಾರದ ಪ್ರತೀ ಇಲಾಖೆಯಲ್ಲಿಯೂ ಲಂಚಕ್ಕೆ ಕೈಯೊಡ್ಡುವ ಸರಕಾರೀ ಬಕಾಸುರರಿರುವುದು ಸಾಮಾನ್ಯ, ಇವರಿಂದಾಗಿ ಬಸವಳಿದು ಹೈರಾಣಾಗಿರುವ ಬಡ ತೆರಿಗೆದಾರ ಪ್ರಜೆಗೆ ಬಹುಶಃ ಇತ್ತೀಚಿನ ದಿನಗಳಲ್ಲಿ ಎರಡು ವಿಷಯಗಳು ಅರಿವಿಗೆ ಬಂದಿದ್ದಿರಬಹುದು. ಒಂದನೆಯದು, ಲಂಚ ತೆಗೆದುಕೊಳ್ಳುವವರು ಈಗ ಅಷ್ಟೇನೂ ಬೇಕಾಬಿಟ್ಟಿಯಾಗಿ, ನೇರವಾಗಿ ಅಂದರೆ ಟೇಬಲ್ ಮೇಲಿಂದ ಕೈಚಾಚಲು ಹೆದರುತ್ತಾರೆ ಹಾಗೂ ಎರಡನೆಯದು, ಕೆಲಸ ಮಾಡಿಸಿಕೊಳ್ಳಲು ಲಂಚ ಕೊಡುವವರಲ್ಲಿಯೂ ಕೊಂಚ ಮಟ್ಟಿಗೆ ಜಾಗೃತಿ ಮೂಡಿಬಿಟ್ಟಿದೆ. ಲಂಚ ಕೊಡುತ್ತಿರುವಾಗಲೂ ಕೂಡ, ಜನ ಸಾಮಾನ್ಯನ ಒಳ ಮನಸ್ಸೊಂದು ‘ನಮ್ಮ ಹಿಂದೆ ಒಂದು ಶಕ್ತಿಯಿದೆ’ ಅಂತ ಸದ್ದಿಲ್ಲದೆ ಎದೆ ತಟ್ಟಿಕೊಳ್ಳುತ್ತದೆ!

ಈ ರೀತಿಯ ಒಂದು ಸ್ಥಿತ್ಯಂತರಕ್ಕೆ ಕಾರಣವೂ ಇದೆ. ರಾಜ್ಯದಲ್ಲಿ ಕಳೆದ ಎರಡು-ಮೂರು ದಶಕಗಳಿಂದ ನಮ್ಮನ್ನು ಆಳಿರುವ ಮುಖ್ಯಮಂತ್ರಿಗಳ ಅರಸೊತ್ತಿಗೆಯ ಅವಧಿಯಲ್ಲಿ ಬಯಲಿಗೆ ಬಂದ ಹಗರಣಗಳು ಎಷ್ಟಿದ್ದವು?; ಕಳೆದ ಒಂದು ದಶಕದ ಹಿಂದೆ ಮುಖ್ಯಮಂತ್ರಿಗಳಾಗಿದ್ದವರ ಹಗರಣಗಳ ಸಂಖ್ಯೆ ಎಷ್ಟು? ಮತ್ತು ವರ್ಷದ ಹಿಂದಷ್ಟೇ ಮುಖ್ಯಮಂತ್ರಿಯಾಗಿದ್ದವರ ಹಗರಣ ಬಯಲಿಗೆ ಬಂದಾಗ, ಅವರ ಪರಿಸ್ಥಿತಿ ಯಾವ ಮಟ್ಟಕ್ಕೆ ತಲುಪಿದೆ ಎಂಬುದರ ಬಗ್ಗೆ ಒಮ್ಮೆ ಪುನರವಲೋಕನ ಮಾಡಬೇಕು.

ಒಂದಿಷ್ಟು ಕಾಲ ಚಕ್ರವನ್ನು ಹಿಂದಕ್ಕೆ ತಿರುಗಿಸಿದರೆ ಮೇಲ್ನೋಟದಲ್ಲೇ ಇದು ತಿಳಿಯುತ್ತದೆ. ರಾಜ್ಯದಲ್ಲಿ ಮಾಧ್ಯಮಗಳ ಮೇಲಾಟ, ಬ್ರೇಕಿಂಗ್ ನ್ಯೂಸ್ ಧಾವಂತ, ಕೇಂದ್ರೀಯ ಮಟ್ಟದಲ್ಲಿ ಮೇರೆ ಮೀರಿದ ಭ್ರಷ್ಟಾಚಾರ ಮತ್ತು ತತ್ಪರಿಣಾಮ ಅಣ್ಣಾ ಹಜಾರೆ ಬಳಗ ಮೂಡಿಸಿದ ಜನ ಜಾಗೃತಿ… ಈ ಎಲ್ಲ ಕಾರಣಗಳಿಗಾಗಿ ಜನ ಸಾಮಾನ್ಯನಿಗಂತೂ ಭ್ರಷ್ಟರ ಬಗೆಗಿನ ಜಾಗೃತಿ ಮೂಡಿರುವುದು ಮತ್ತು ಅದು ಕೊಂಚವಾದರೂ ಧನಾತ್ಮಕವಾಗಿಯೇ ಇರುವುದು ತೃಪ್ತಿ ತರುವ ವಿಚಾರ. ಇದಕ್ಕೆ ಪೂರಕವಾಗಿ, ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಮೂಲಕ ಲಭ್ಯವಾಗುತ್ತಿರುವ ಮಾಹಿತಿಗಳು ಕೂಡ ಸುಶಿಕ್ಷಿತ, ಪ್ರಜ್ಞಾವಂತ ಪ್ರಜೆಗಳ ಬದುಕು ಹಸನಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ.

ಹಿಂದೆ ಮಾಧ್ಯಮಗಳ ವಸ್ತುನಿಷ್ಠ ತನಿಖಾ ಪತ್ರಿಕೋದ್ಯಮದಿಂದಾಗಿ ಅಲ್ಲೋ ಇಲ್ಲೋ ಕೆಲವೊಂದು ಹಗರಣಗಳು ಆಗೀಗ್ಗೆ ಒಂದೆರಡು ದೊಡ್ಡ ಸದ್ದನ್ನೇ ಮಾಡುತ್ತಿದ್ದವು. ಆದರೆ ಈಗ? ಆರ್‌ಟಿಐ, ಲೋಕಾಯುಕ್ತ ಮತ್ತು ಬ್ರೇಕಿಂಗ್ ನ್ಯೂಸ್ ಮಾಧ್ಯಮಗಳ ಧಾವಂತದಿಂದಾಗಿ ಮಾಲೆ ಪಟಾಕಿಯೇ ಸಿಡಿಯುತ್ತದೆ. ಹಾಗಂತ ಇದಕ್ಕೆ ಮೊದಲು ಹಗರಣಗಳಾಗಿದ್ದೇ ಕಡಿಮೆ ಎಂದು ಹೇಳಲು ಬರುವುದಿಲ್ಲ. ಆಗ ಇಷ್ಟು ಪ್ರಬಲವಾದ ಕಾಯ್ದೆಯಾಗಲೀ, ಜನರಲ್ಲಿ ಅದರ ಕುರಿತಾದ ಪ್ರಜ್ಞೆ/ಜಾಗೃತಿಯಾಗಲೀ ಇರಲಿಲ್ಲ ಎಂಬುದು ಒಂದು ಕಡೆಯಾದರೆ, ಪತ್ರಿಕೆಗಳಿದ್ದರೂ ಕೂಡ, ಈಗಿನಷ್ಟು ದೃಶ್ಯ ಮಾಧ್ಯಮಗಳು ಹಾಗೂ ಅವುಗಳ ಧಾವಂತ ಅಲ್ಲಿರಲಿಲ್ಲ ಎಂಬುದು ಕೂಡ ನಿಜ.

ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರನ್ನೇ ನೋಡಿ. ಐದು ದಶಕದ ಹೋರಾಟದ ಹಾದಿಯಿಂದ ಹಂತಹಂತವಾಗಿ ರಾಜಕೀಯದ ಮೆಟ್ಟಿಲೇರುತ್ತಾ ಬಂದು, ಆಳರಸ ಆಗುವಷ್ಟರ ಮಟ್ಟಿಗೆ ತಲುಪಿದ ಅವರ ಸ್ಥಿತಿ ಈಗೇನಾಗಿದೆ? ಇದರಲ್ಲಿ ಅತ್ಯಂತ ಹೆಚ್ಚು ಪಾತ್ರ ವಹಿಸಿದ್ದು ಯಾರು ಅಂತ ಯೋಚಿಸಿದರೆ, ನಾವು ಪ್ರತಿಪಕ್ಷಗಳನ್ನೋ, ಸಿರಾಜುದ್ದೀನ್ ಬಾಷಾ – ಬಾಲರಾಜ್ ಅವರನ್ನೋ ಬೆಟ್ಟು ಮಾಡುವಂತಿಲ್ಲ. ಪ್ರಜಾಸತ್ತೆಯ ನಾಲ್ಕನೇ ಆಧಾರ ಸ್ತಂಭವಾಗಿರುವ ಮಾಧ್ಯಮ ಪ್ರಧಾನ ಕಾರಣ ಎಂಬುದು ನಿರ್ವಿವಾದ.

ಇಲ್ಲಿ, ವಸ್ತುನಿಷ್ಠತೆಗಿಂತಲೂ, ಪೈಪೋಟಿಯ ಪತ್ರಗಾರಿಕೆ ಮತ್ತು ಬ್ರೇಕಿಂಗ್ ನ್ಯೂಸ್ ಧಾವಂತದಲ್ಲಿದ್ದ ಪತ್ರಕರ್ತರನ್ನು ರಾಜಕೀಯ ಮುಖಂಡರು ತಮಗಾಗದವರ ವಿರುದ್ಧ ಸರಿಯಾಗಿಯೇ ಬಳಸಿಕೊಂಡರು. ತತ್ಪರಿಣಾಮವಾಗಿ ಹಗರಣ ಮಾಡದವರು ಕೂಡ ಮಸಿ ಮೆತ್ತಿಸಿಕೊಳ್ಳಬೇಕಾಯಿತು. ಈ ಕೆಸರೆರಚಾಟದ ರಾಜಕೀಯದಲ್ಲಿ ಎಲ್ಲ ಪಕ್ಷದವರೂ ಕೊಳೆ ಮಾಡಿಕೊಂಡವರೇ. ಆದರೂ ಹೋದ ಮಾನ ಮರಳಿ ಬಂದೀತೇ? ಅಷ್ಟೂ ಕಾಲ ಕಾಯ್ದಿಟ್ಟುಕೊಂಡಿದ್ದ ಪ್ರಾಮಾಣಿಕತೆಯೆಂಬ ಕನ್ನಡಿ ಒಡೆದ ಮೇಲೆ ಪುನಃ ಜೋಡಿಸಲಾದೀತೇ? ಜೋಡಿಸಿದರೂ ಕಲೆ ಅಲ್ಲಲ್ಲಿ ಉಳಿಯಲಾರದೇ?

ಇನ್ನು, ವರ್ಷಾನುಗಟ್ಟಲೆ ನಿಷ್ಕಳಂಕ ಜೀವನ ನಡೆಸುತ್ತಾ ಸಾಗಿದವರ ಮೇಲೆ ಭ್ರಷ್ಟಾಚಾರದ ಕಳಂಕವೊಂದು ಬಂದೆರಗಿತು ಅಂತಿಟ್ಟುಕೊಳ್ಳಿ. ವರ್ಷಗಟ್ಟಲೆ ಟೀಕೆ-ಪ್ರತಿ ಟೀಕೆಗಳೊಂದಿಗೆ ಮಾನ ಹರಾಜು ಪ್ರಕ್ರಿಯೆ ಮುಂದುವರಿದ ಬಳಿಕ, ದಶಕಗಳ ತನಿಖೆ-ವಾದ-ಪ್ರತಿವಾದ ಎಲ್ಲ ನಡೆದು ನ್ಯಾಯಾಲಯದಿಂದ ಕ್ಲೀನ್ ಚಿಟ್ ಪಡೆಯುವಾಗ, ಒಂದೆರಡು ದಿನದ ಮಟ್ಟಿಗೆ ಜನ, ‘ಅಬ್ಬ, ನಮ್ಮ ನಾಯಕ ಇಂಥವನಲ್ಲ’ ಅಂತ ನಿಟ್ಟುಸಿರುಬಿಡುತ್ತಾರೆ. ಆದರೆ, ಅಷ್ಟೂ ಕಾಲ ಹೋದ ಮಾನ ಮರಳಿ ಬಂದೀತೇ? ಒಬ್ಬರು ಆ ಮಟ್ಟಕ್ಕೇರಲು ಎಷ್ಟು ಶ್ರಮ ವಹಿಸಿದ್ದರು, ಎಷ್ಟು ಕಾಲ ಪ್ರಾಮಾಣಿಕ ಜೀವನ ಸಾಗಿಸಿದರು ಎಂಬುದರ ಪರಿವೆಯೇ ಇಲ್ಲದೆ, ರಾಜಕೀಯ ಕಾರಣಕ್ಕಾಗಿ, ತಮಗಾಗದವರಿಗೆ ಬುದ್ಧಿ ಕಲಿಸುತ್ತೇವೆ ಎಂಬ ಕಾರಣಕ್ಕೆ ಆರೋಪ ಮಾಡಿದವರಿಗೆ ಕೊಂಚವಾದರೂ ಪಶ್ಚಾತ್ತಾಪ ಆದದ್ದಿದೆಯೇ? ಎಂಬುದು ಮೂಲಭೂತ ಪ್ರಶ್ನೆ.

ಈ ನಡುವೆ, ಲೂಪ್‌ಹೋಲ್‌ಗಳ ಮೂಲಕವೇ, ಸಾಕ್ಷ್ಯಾಧಾರ ಸಿಗದಂತಾಗಿ, ಭ್ರಷ್ಟ ಅಲ್ಲ ಅಂತ ಸಾಬೀತಾಗುವ ಸಾಧ್ಯತೆಗಳೂ ಜೊತೆ ಜೊತೆಯಾಗಿಯೇ ಇರುವುದರಿಂದ ಜನರೂ ಕೂಡ, ಏನೋ ಆಗಿದೆ ಎಂಬ ಗುಮಾನಿಯಲ್ಲೇ ಇರಬೇಕಾದ ಪರಿಸ್ಥಿತಿಯನ್ನೂ ತಳ್ಳಿ ಹಾಕುವಂತಿಲ್ಲ. ಅದಕ್ಕೇ ಹಿರಿಯರು ಹೇಳಿದ್ದು, ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ ಅಂತ.

ನ್ಯಾಯಾಂಗವೂ ಸೇರಿಕೊಂಡಿತೇ?
ಕಾರ್ಯಾಂಗ, ಶಾಸಕಾಂಗಗಳ ಬಳಿಕ, ಇತ್ತೀಚೆಗೆ ಪ್ರಜಾಪ್ರಭುತ್ವದ ಮೂರನೇ ಆಧಾರ ಸ್ತಂಭವಾದ ನ್ಯಾಯಾಂಗದ ಹೆಸರೂ ಹಾಳಾಗತೊಡಗಿರುವುದು ಲಂಚಾವತಾರದ ವ್ಯಾಪಕತೆಯೆಷ್ಟಿದೆ ಎಂಬುದನ್ನು ಸಾರಿ ಹೇಳುತ್ತದೆ. ಅಲ್ಲೊಂದು, ಇಲ್ಲೊಂದು ಕೇಳಿ ಬರುತ್ತಿದ್ದ ನ್ಯಾಯಾಂಗ ಭ್ರಷ್ಟಾಚಾರ ಇತ್ತೀಚೆಗೆ ಕೊಂಚ ಹೆಚ್ಚೇ ಅನ್ನಿಸುವಷ್ಟು ಸದ್ದು ಮಾಡುತ್ತಿರುವುದು ಜನ ಸಾಮಾನ್ಯನ ಒಡಲಲ್ಲಿ ಆತಂಕ ಮೂಡಿಸಿದೆ. ಇದು ಖಂಡಿತಾ ಸುಳ್ಳಲ್ಲ. ಅದೆಷ್ಟೋ ಕೋರ್ಟು ತೀರ್ಪುಗಳು ಇಡೀ ದೇಶದ ಜನತೆಯ ಜೀವನವನ್ನೇ ಬದಲಾಯಿಸಿದ ಪ್ರಕರಣಗಳು ನಮ್ಮ ಕಣ್ಣ ಮುಂದಿವೆ. ಭ್ರಷ್ಟರಿಗೆ, ಧನ ಮದವುಳ್ಳವರಿಗೆ, ಅಧಿಕಾರ ಮದವುಳ್ಳವರಿಗೆ ನ್ಯಾಯಾಲಯಗಳು ತಕ್ಕ ಪಾಠ ಕಲಿಸಿ ಜೈಲಿಗಟ್ಟುತ್ತಿರುವಾಗ ನಿಟ್ಟುಸಿರುಬಿಟ್ಟದ್ದು ರಾಜಕಾರಣಿಗಳೇನಲ್ಲ, ಇದೇ ಜನ ಸಾಮಾನ್ಯ ಮಾತ್ರ ಎಂಬುದನ್ನು ನಾವಿಲ್ಲಿ ಗಮನಿಸಬೇಕು. ಆದರೆ ಧನ-ಮದ್ದಾನೆಗಳು ನ್ಯಾಯವನ್ನೇ ಕೊಂಡುಕೊಳ್ಳುವರೆಂಬ ಆರೋಪ ಬರುವ ಮಟ್ಟಕ್ಕೆ ಬೆಳೆಯುತ್ತಿರುವಾಗ, ಕೇಳುವವರೇ ಇಲ್ಲದಂತಾದ ಭಾವನೆ ಜನಸಾಮಾನ್ಯನದು ಎಂಬುದು ಮತ್ತೊಂದು ಋಣಾತ್ಮಕ ಬೆಳವಣಿಗೆಯೂ ಹೌದು.

ನಾಲ್ಕನೇ ಆಧಾರ ಸ್ತಂಭದಲ್ಲೂ ಬಿರುಕು
ಅದೆಲ್ಲ ಆದ ಮೇಲೆ ಈಗ ಪ್ರಜಾಸತ್ತೆಯ ನಾಲ್ಕನೇ ಆಧಾರ ಸ್ತಂಭ ಎಂದು ಕರೆಯಲಾಗುತ್ತಿರುವ ಮಾಧ್ಯಮ ರಂಗದ ಘನತೆಯೂ ಮಣ್ಣುಪಾಲಾಗುತ್ತಿದೆ. ದೇಶದಲ್ಲಿ ಎಷ್ಟೇ ಅಲ್ಲೋಲಕಲ್ಲೋಲವಾದರೂ, ಜನ ಸಾಮಾನ್ಯರಿಗೆ ನ್ಯಾಯಾಂಗವಿದೆ ಮತ್ತು ಮಾಧ್ಯಮಗಳಿವೆಯಲ್ಲ ಎಂಬೊಂದು ಭರವಸೆಯ ಬೆಳಕಿತ್ತು. ಅವರಿವರ ವಿರುದ್ಧ ಆರೋಪ ಬಂದಾಗಲೂ, ‘ಹೀಗಿರಲಾರದು’ ಅಂತಂದುಕೊಂಡು ಭರವಸೆಯಲ್ಲಿದ್ದರು ಅವರು. ಆದರೆ ಇಂದೇನಾಗಿದೆ? ಕೇಂದ್ರೀಯ ಮಟ್ಟದಲ್ಲಿ ಉದ್ಯಮಿಗಳ ಲಾಬಿಯ ಪರವಾಗಿ ಮಂತ್ರಿಗಳನ್ನೇ ಫಿಕ್ಸ್ ಮಾಡಿಸುವಷ್ಟು ಪತ್ರಕರ್ತರೂ ಶಕ್ತಿವಂತರಾಗುತ್ತಿದ್ದಾರೆ ಎಂಬ ಸುದ್ದಿಯೂ, ನಮ್ಮ ರಾಜ್ಯದಲ್ಲಾದರೆ, ಗಣಿಕಪ್ಪ, ಸೈಟ್ ಡೀನೋಟಿಫಿಕೇಶನ್ ಲಾಭ, ಡೀಲ್ ಮಾಡಿದರಂತೆ… ಮುಂತಾಗಿ ಸುದ್ದಿ ಮಾಡುವವರೇ ಸುದ್ದಿ ಆಗಿ ಸದ್ದು ಮಾಡಿದರು ಎಂಬುದನ್ನೆಲ್ಲಾ ಓದುವಾಗ ಜನಸಾಮಾನ್ಯರು ಯಾವ ಕಡೆ ಮುಖಮಾಡಬೇಕಿನ್ನು?

ಹೀಗಾಗಿ, ಇಲ್ಲಿ ಲೆಕ್ಕಕ್ಕೆ ಬರುವುದು ಮಾಧ್ಯಮಗಳ ವಸ್ತು ನಿಷ್ಠತೆಯ ಮತ್ತು ವಿಶ್ವಾಸಾರ್ಹತೆಯ ವಿಚಾರ. ಸತ್ಯಾಸತ್ಯತೆಗಾಗಿ ಹಿಂದೆ ಅನುಸರಿಸುತ್ತಿದ್ದ ತನಿಖಾ ಪತ್ರಿಕೋದ್ಯಮದ ತಾಳವು ತಪ್ಪಿ, ಪತ್ರಿಕಾ ಹೇಳಿಕೆಗಳೇ ಬ್ರೇಕಿಂಗ್ ನ್ಯೂಸ್‌ಗಳಾಗಿಯೂ, ರಾಜಕೀಯ ಪಕ್ಷವೊಂದರ ಮುಲುಗಾಟಗಳೇ, Exclusive ಸುದ್ದಿಗಳಾಗಿಯೂ, ಪತ್ರಿಕೆಗಳಲ್ಲೋ – ಚಾನೆಲ್‌ಗಳಲ್ಲೋ ನ್ಯೂಸ್ ಜತೆ ವ್ಯೂಸ್ (Views) ಕೂಡ ಹೆಚ್ಚೇ ಅನ್ನಿಸುವಷ್ಟು ಬರಲಾರಂಭಿಸಿದಾಗ, ತಮಗಾಗದವರ ಮೇಲಿನ ಆರೋಪಗಳನ್ನೇ ಅಪರಾಧಗಳಾಗಿ ಬಿಂಬಿಸುತ್ತಿರುವಾಗ, ಒಂದು ಪ್ರಕರಣದ ಒಂದು ಮುಖವನ್ನಷ್ಟೇ ಪದೇ ಪದೇ ಎತ್ತಿ ತೋರಿಸುತ್ತಾ, ತಮಗೆ ಒಳಿತು ಮಾಡಿಲ್ಲ ಎಂಬ ಕಾರಣಕ್ಕೆ ಇಪ್ಪತ್ತನಾಲ್ಕು ಗಂಟೆಕಾಲವೂ ರಾಡಿ ಎರಚುವುದರಲ್ಲೇ ಕಾಲಹರಣ ಮಾಡತೊಡಗಿದಾಗ, ಅದರಲ್ಲಿಯೂ ಟಾರ್ಗೆಟೆಡ್ ಮಾಧ್ಯಮೋದ್ಯಮವೇ ಢಾಳಾಗಿ ಮುಂದುವರಿಯುತ್ತಿರುವಾಗ, ಜನ ಸಾಮಾನ್ಯನಿಗೆ ಪತ್ರಿಕೋದ್ಯಮದ ಮೇಲೆ, ವಿಶೇಷವಾಗಿ ದೃಶ್ಯ ಮಾಧ್ಯಮಗಳ ಮೇಲಿನ ನಂಬಿಕೆಯೂ ಕುಸಿಯಲಾರಂಭಿಸಿತು. ತಮ್ಮ ಲಾಬಿಗೆ ಮಣಿಯದೇ ಹೋದಾಗ ಶುರುವಾಗಿದ್ದೇ ಟಾರ್ಗೆಟೆಡ್ ಮಾಧ್ಯಮೋದ್ಯಮ.

ಮಾಧ್ಯಮಗಳೂ ಹೀಗಾದರೆ ಇನ್ಯಾರ ಕಡೆ ಮುಖ ಮಾಡಬೇಕು ಜನ ಸಾಮಾನ್ಯ? ಪ್ರಜೆಯ ಒಡಲ ಕೂಗಿಗೆ ಅಬ್ಬರದ ಧ್ವನಿಯಾಗಬೇಕಿದ್ದ ಮೀಡಿಯಾಗಳೂ ಈ ಪರಿ ಅವನತಮುಖಿಯಾಗಿಬಿಟ್ಟರೆ, ಈಗಾಗಲೇ ಪ್ರತೀ ಹಂತದಲ್ಲೂ ಏಟು ತಿನ್ನುತ್ತಲೇ ಇರುವ ಜನ ಸಾಮಾನ್ಯನ ಬಾಯಿಯಿಂದ ಆರ್ತನಾದದ ಮುಲುಗಾಟವಷ್ಟೇ ಹೊರಬರಬಹುದೇ ಹೊರತು, ಭ್ರಷ್ಟಾಚಾರದ ವಿರುದ್ಧ ಸಿಂಹ ಗರ್ಜನೆ ಕೇಳುವುದು ಸಾಧ್ಯವಾದೀತೇ? ಈ ಬಗ್ಗೆ ಮಾಧ್ಯಮಗಳೇ ಆತ್ಮವಿಮರ್ಶೆ ಮಾಡಿಕೊಳ್ಳಬೇಕು.

ವಿಜಯ ಕರ್ನಾಟಕಕ್ಕಾಗಿ ಬರೆದ ಲೇಖನ. ವಿಕ ಲಿಂಕ್ ಇಲ್ಲಿದೆ:

 

LEAVE A REPLY

Please enter your comment!
Please enter your name here