ಸ್ಮಾರ್ಟ್ ಫೋನ್ ಖರೀದಿಗೆ ಟಿಪ್ಸ್

0
233

ವಿಜಯ ಕರ್ನಾಟಕ ಅಂಕಣ “ಮಾಹಿತಿ@ತಂತ್ರಜ್ಞಾನ-9” ಅಕ್ಟೋಬರ್ 22, 2012

ಸಾಮಾನ್ಯ ಮೊಬೈಲ್ ಫೋನ್‌ಗಳಲ್ಲಿರುವ ವೈಶಿಷ್ಟ್ಯಗಳೊಂದಿಗೆ ಇಂಟರ್ನೆಟ್, ವೈ-ಫೈ, ಟಚ್ ಸ್ಕ್ರೀನ್, ಜಿಪಿಎಸ್ ಮ್ಯಾಪ್ ಮುಂತಾದವುಗಳೂ ಇರುವವು ಸ್ಮಾರ್ಟ್ ಫೋನ್‌ಗಳು. ಮಾರುಕಟ್ಟೆಯಲ್ಲೀಗ ಕೈಗೆಟಕುವ ಬೆಲೆಗಳಲ್ಲಿ ಸ್ಮಾರ್ಟ್‌ಫೋನ್ ಹಾಗೂ ಅಗಲ ಪರದೆಯುಳ್ಳ ಟ್ಯಾಬ್ಲೆಟ್‌ಫೋನ್‌ಗಳು ದಿನಕ್ಕೊಂದರಂತೆ ಬಿಡುಗಡೆಯಾಗುತ್ತಿವೆ. ಆಯ್ಕೆಗಳು ಹೆಚ್ಚಿರುವಾಗ ಗೊಂದಲವೂ ಹೆಚ್ಚು. ಹೀಗಾಗಿ ಇವನ್ನು ಖರೀದಿಸುವ ಮೊದಲು ನೀವು ಮುಖ್ಯವಾಗಿ ಪರಿಗಣಿಸಬೇಕಾಗಿರುವ ಅಂಶಗಳು ಇಲ್ಲಿವೆ:

ಬ್ಯಾಟರಿ: ಮೊಬೈಲ್ ಫೋನ್‌ಗಳಲ್ಲಿ ಬ್ಯಾಟರಿ ಉಳಿಸುವ ಕುರಿತು ಹಿಂದಿನ ಅಂಕಣವೊಂದರಲ್ಲಿ ತಿಳಿಸಿದ್ದೆ. ಮತ್ತಷ್ಟು ಮಾಹಿತಿ. ಫೋನ್ ಖರೀದಿಸುವಾಗಲೇ ಬ್ಯಾಟರಿ ಬಗ್ಗೆ ಗಮನ ಹರಿಸಿ. ಮಿಲಿ ಆಂಪೀರ್ ಅವರ್ (milliampere hours) mAh ನಿಂದ ಬ್ಯಾಟರಿ ಸಾಮರ್ಥ್ಯ ಅಳೆಯಲಾಗುತ್ತದೆ. ಹಲವು ಅಪ್ಲಿಕೇಶನ್‌ಗಳು ರನ್ ಆಗಬೇಕಿದ್ದರೆ ಹೆಚ್ಚು ಬ್ಯಾಟರಿಗಳು ಬೇಕಾಗಿರುವುದರಿಂದ ಹೆಚ್ಚು ಮೌಲ್ಯವಿರುವುದನ್ನು ನೋಡಬೇಕು. ಸಾಮಾನ್ಯವಾಗಿ ಈಗ ಬಹುತೇಕ ಫೋನ್‌ಗಳ ಬ್ಯಾಟರಿ ಮೌಲ್ಯವು 1200 mAh ದಿಂದಲೇ ಆರಂಭವಾಗಿ 4000 mAh, 8000 mAh ವರೆಗೂ ಸಾಮರ್ಥ್ಯ ಹೊಂದಿವೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಬ್ಯಾಟರಿಯ ಮೌಲ್ಯ ಹೆಚ್ಚಿದ್ದರೂ, ನಿಮ್ಮ ಸಾಧನದ ಸ್ಕ್ರೀನ್ ಗಾತ್ರ ದೊಡ್ಡದಾಗಿದ್ದರೆ, ಬ್ಯಾಟರಿ ಹೆಚ್ಚು ಹೀರಿಕೊಳ್ಳುತ್ತದೆ. ಸದ್ಯಕ್ಕೆ ಬ್ಯಾಟರಿ ತಂತ್ರಜ್ಞಾನದಲ್ಲಿ ನೋಕಿಯಾ ಮತ್ತು ಮೋಟೋರೋಲಗಳು ಮುಂಚೂಣಿಯಲ್ಲಿದ್ದರೆ, ಆಪಲ್ ಮತ್ತು ಸ್ಯಾಮ್ಸಂಗ್‌ಗಳು ನಂತರದ ಸ್ಥಾನದಲ್ಲಿವೆ. ನೀವು ಖರೀದಿಸುವ ಸ್ಮಾರ್ಟ್‌ಫೋನ್ ಬ್ಯಾಟರಿ 1500 mAh ಗಿಂತ ಜಾಸ್ತಿ ಇರುವಂತೆ ನೋಡಿಕೊಳ್ಳಿ.

ಸ್ಕ್ರೀನ್: ಎರಡನೇ ವಿಚಾರ ಸ್ಕ್ರೀನ್ ರೆಸೊಲ್ಯುಶನ್. ಇದು ನಿಮ್ಮ ಫೋನ್‌ನಲ್ಲಿ ಚಿತ್ರಗಳು, ವೀಡಿಯೊಗಳು ಎಷ್ಟು ಸ್ಫುಟವಾಗಿ, ಸ್ಪಷ್ಟವಾಗಿ ಕಾಣಿಸಬಲ್ಲವು ಎಂಬುದನ್ನು ಸೂಚಿಸುತ್ತದೆ. ಸ್ಕ್ರೀನ್‌ನ ರೆಸೊಲ್ಯುಶನ್ ನಿರ್ಧರಿಸಲು Pixel ಎಂಬ ಮಾನಕವನ್ನು ಬಳಸಲಾಗುತ್ತದೆ. ಹೆಚ್ಚು ಪಿಕ್ಸೆಲ್ ಇದ್ದಷ್ಟೂ ಸ್ಕ್ರೀನ್, ಚಿತ್ರಗಳು ತುಂಬಾ ನಿಖರವಾಗಿ ಕಾಣಿಸುತ್ತವೆ. ಆದರೆ ಸಾಧನದ ಸ್ಕ್ರೀನ್ ದೊಡ್ಡದಾಗಿದ್ದರೆ? ಶಾರ್ಪ್‌ನೆಸ್ ಕಡಿಮೆಯಾಗುವುದು ಸಹಜ. ಉದಾಹರಣೆಗೆ, ಒಂದು ಸ್ಮಾರ್ಟ್‌ಫೋನ್‌ನ ರೆಸೊಲ್ಯುಶನ್ 1136×640 ಪಿಕ್ಸೆಲ್ಸ್ ಇದ್ದು, ಅದರ ಸ್ಕ್ರೀನ್ ಗಾತ್ರ 4 ಇಂಚು. ಇನ್ನೊಂದರ ರೆಸೊಲ್ಯುಶನ್ 1280×720 ಇದ್ದು, ಅದರ ಸ್ಕ್ರೀನ್ ಗಾತ್ರವು 4.8 ಇಂಚು ಇದೆಯೆಂದಾದರೆ, ಪಿಕ್ಸೆಲ್ ನೋಡಿದಾಗ ಎರಡನೆಯದು ಜಾಸ್ತಿಯಾದರೂ, ಅದರ ಸ್ಕ್ರೀನ್ ಗಾತ್ರ ದೊಡ್ಡದಿರುವುದರಿಂದ ಚಿತ್ರದ ಶಾರ್ಪ್‌ನೆಸ್ ಚೆನ್ನಾಗಿರುವುದು ಮೊದಲನೆಯದರಲ್ಲಿ!

ಕನೆಕ್ಟಿವಿಟಿ: ಸ್ಮಾರ್ಟ್‌ಫೋನ್‌ಗಳನ್ನು ಮಾತಿಗಿಂತಲೂ ಹೆಚ್ಚಾಗಿ ಇಮೇಲ್, ಅಂತರಜಾಲ ಜಾಲಾಟ ಮುಂತಾದ ಚಟುವಟಿಕೆಗಳಿಗಾಗಿಯೇ ಬಳಸುತ್ತಿರುವುದರಿಂದ ನೆಟ್‌ವರ್ಕ್ ಸ್ಪೀಡ್ ಬಗ್ಗೆ ನಾವು ಹೆಚ್ಚು ಗಮನ ಹರಿಸಬೇಕಾಗುತ್ತದೆ. ಈಗ ಸಾಮಾನ್ಯ ಮೊಬೈಲು ಫೋನ್‌ಗಳಲ್ಲಿ ಬಳಸುತ್ತಿರುವುದು ಜಿಎಸ್‌ಎಂ, ಅಥವಾ 2ಜಿ ನೆಟ್‌ವರ್ಕ್ ಮತ್ತು ಕೊಂಚ ಮುಂದುವರಿದ 2.5ಜಿ (GPRS/EDGE) ತಂತ್ರಜ್ಞಾನ. ಇದು ಇತ್ತೀಚೆಗೆ ಹಳೆಯದಾಗುತ್ತಿದೆ. 3ಜಿ (UMTS) ಅಥವಾ 3.5ಜಿ (HSPA) ಇಲ್ಲವೇ ಮುಂದಿನ 4ಜಿ (LTE) ಬೆಂಬಲಿಸುವ ಸ್ಮಾರ್ಟ್‌ಫೋನ್‌ಗಳನ್ನೇ ಖರೀದಿಸುವುದು ಜಾಣತನ. 4ಜಿ ತಂತ್ರಜ್ಞಾನ ಭಾರತದಲ್ಲಿ ಈಗಷ್ಟೇ ಕಾಲಿಟ್ಟಿದ್ದು, ಬೆಂಗಳೂರು, ಕೋಲ್ಕತಾ, ಪುಣೆಗಳಲ್ಲಿ ಏರ್‌ಟೆಲ್ ಒದಗಿಸುತ್ತಿದೆ. ಈಗಿನ ಅತ್ಯಾಧುನಿಕ ಸ್ಮಾರ್ಟ್‌ಫೋನ್‌ಗಳು 4ಜಿ ತಂತ್ರಜ್ಞಾನಕ್ಕೆ ಸಜ್ಜಾಗಿಯೇ ಮಾರುಕಟ್ಟೆಗೆ ಬರುತ್ತಿವೆ.

ಪ್ರೊಸೆಸರ್: ಇನ್ನು ಅತ್ಯಂತ ಪ್ರಮುಖವಾದ ಅಂಶವೆಂದರೆ ಪ್ರೊಸೆಸರ್‌ಗಳು. ಸಾಧನವು ಹಲವು ಕಾರ್ಯಗಳನ್ನು ಏಕಕಾಲದಲ್ಲಿ (ಮಲ್ಟಿಟಾಸ್ಕಿಂಗ್) ಮಾಡಲು ಇವು ಸಹಾಯಕ. ಪ್ರೊಸೆಸರ್‌ಗಳ ವೇಗ – ಮೆಗಾಹರ್ಟ್ಸ್ (MHz) ಮತ್ತು ಗಿಗಾಹರ್ಟ್ಸ್ (GHz) ಅಲ್ಲದೆ ಅವು ಸಿಂಗಲ್ ಕೋರ್, ಡ್ಯುಯಲ್ ಕೋರ್ ಅಥವಾ ಕ್ವಾಡ್ (4) ಕೋರ್ ಪ್ರೊಸೆಸರುಗಳೇ ಎಂಬುದೂ ಪ್ರಧಾನವಾಗುತ್ತದೆ. ಸಿಂಪಲ್ಲಾಗಿ ಹೇಳುವುದಾದರೆ, ಮೆಗಾಹರ್ಟ್ಸ್ ಮರೆತುಬಿಡಿ, ಕನಿಷ್ಠ 1 GHz (1.2, 1.5 ಅಥವಾ 2ರವರೆಗೂ ಲಭ್ಯ) ಇರುವ ಮತ್ತು ಕನಿಷ್ಠ Dual Core ಪ್ರೊಸೆಸರ್‌ಗಳಿರುವ ಸಾಧನಗಳನ್ನೇ ಖರೀದಿಸಿ.

ಉಳಿದಂತೆ, ಸಾಧ್ಯವಿದ್ದಷ್ಟೂ ಇಂಟರ್ನಲ್ ಮೆಮೊರಿ ಜಾಸ್ತಿ (1ಜಿಬಿಗಿಂತ ಹೆಚ್ಚು) ಇರಲಿ, ಕ್ಯಾಮರಾ ಪ್ರಿಯರಾಗಿದ್ದರೆ 1ಕ್ಕಿಂತ ಹೆಚ್ಚು ಮೆಗಾಪಿಕ್ಸೆಲ್ ಇರಲಿ, ಸಾಧನದ ಕಾರ್ಯಾಚರಣಾ ವ್ಯವಸ್ಥೆ (ಒಎಸ್)ಯನ್ನು ಉನ್ನತೀಕರಿಸಬಹುದೇ (ಉದಾ. ಆಂಡ್ರಾಯ್ಡ್ ಜಿಂಜರ್‌ಬ್ರೆಡ್‌ನಿಂದ ಜೆಲ್ಲಿಬೀನ್‌ಗೆ ಅಥವಾ ಐಒಎಸ್ 4ರಿಂದ ಐಒಎಸ್5ಕ್ಕೆ…. ಅಪ್‌ಗ್ರೇಡ್ ಮಾಡಬಹುದೇ) ಅಂತಾನೂ ಕೇಳಿಕೊಳ್ಳಿ.

LEAVE A REPLY

Please enter your comment!
Please enter your name here