ಸರ್ವಜ್ಞ ಪ್ರತಿಮೆ ಅಯನಾವರಂನಲ್ಲಿ ಬೇಡ ಯಾಕೆ?

7
494

(ವೆಬ್‌ದುನಿಯಾಕ್ಕಾಗಿ ಸಿದ್ಧಪಡಿಸಿದ ಲೇಖನವಿದು.)

ಇದು ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಸ್ಥಾಪನೆಗೆ ಅಥವಾ ಚೆನ್ನೈಯಲ್ಲಿ ಸರ್ವಜ್ಞ ಕವಿಯ ಪ್ರತಿಮೆ ಸ್ಥಾಪನೆಯನ್ನು ವಿರೋಧಿಸುವ ಲೇಖನ ಅಲ್ಲ ಎಂಬುದನ್ನು ಓದುಗರು ಅರ್ಥೈಸಿಕೊಂಡೇ ಮುಂದುವರಿಯಲು ಅರಿಕೆ.

ಅಯನಾವರಂನಲ್ಲಿ ಸರ್ವಜ್ಞ ಪ್ರತಿಮೆ ಸ್ಥಾಪಿಸಲು ಸಿದ್ಧತೆ
ಅಯನಾವರಂನಲ್ಲಿ ಸರ್ವಜ್ಞ ಪ್ರತಿಮೆ ಸ್ಥಾಪಿಸಲು ಸಿದ್ಧತೆ
ಮೊದಲನೆಯದಾಗಿ, ಪ್ರತಿಮಾ ಸಂಸ್ಕೃತಿ ಕರ್ನಾಟಕದಲ್ಲಿ ಕಡಿಮೆ. ಅದೇನಿದ್ದರೂ, ದೇವರನ್ನು ವಿರೋಧಿಸುವ ದ್ರಾವಿಡರ ನಾಡಿನಲ್ಲಿ ದೇವಾಲಯಗಳ ಸಂಖ್ಯೆ ಎಷ್ಟು ಅಧಿಕವೋ, ಅಷ್ಟೇ ಪ್ರಮಾಣದಲ್ಲಿ ಗಲ್ಲಿಗೊಂದು ಪ್ರತಿಮೆಗಳು ಕಾಣಸಿಗುತ್ತಿರುವ ತಮಿಳುನಾಡು ರಾಜಧಾನಿ ಚೆನ್ನೈಗಷ್ಟೇ ಹೊಂದಿಕೊಳ್ಳುವ ವಿಚಾರ. ಎಂಜಿಆರ್, ಅಣ್ಣಾದುರೈ, ಅಂಬೇಡ್ಕರ್, ಗಾಂಧೀಜಿ… ಹೀಗೆ ಸಾಲು ಸಾಲು ಕೈಯೆತ್ತಿ, ಕಿರುಬೆರಳೆತ್ತಿ ದೂರದೃಷ್ಟಿ ನೆಟ್ಟ ಪ್ರತಿಮೆಗಳು ನಿಮಗೆ ಅಲ್ಲಲ್ಲಿ ಕಾಣಸಿಗುತ್ತವೆ.

ತಿರುವಳ್ಳುವರ್ ಒಬ್ಬ ತಮಿಳ ಎಂಬ ಏಕೈಕ ಕಾರಣಕ್ಕೆ ಅವರ ಪ್ರತಿಮೆ ಸ್ಥಾಪನೆ ವಿರೋಧಿಸುವುದು ಜಾಣತನವಲ್ಲ. ಅಥವಾ ಸರ್ವಜ್ಞ ಒಬ್ಬ ಕನ್ನಡಿಗ ಎಂಬ ಕಾರಣಕ್ಕೆ ಆ ಪ್ರತಿಮೆಯನ್ನು ಚೆನ್ನೈಯಲ್ಲಿ ಸ್ಥಾಪಿಸದಂತೆ ತಡೆಯುವುದು ಸಾಧ್ಯವೂ, ಸಾಧುವೂ ಅಲ್ಲ. ಯಾಕೆಂದರೆ ಇಬ್ಬರೂ ಮಹಾಪುರುಷರು ಅನ್ಯತ್ರ ಅಲಭ್ಯವಾದ ಸಾಮಾಜಿಕ ಸೂಕ್ಷ್ಮಗಳನ್ನು ಜನರಿಗೆ ಮನಮುಟ್ಟುವಂತೆ ಮಾಡಿದವರು ಮತ್ತು ಜೀವನಪದ್ಧತಿಯನ್ನು ತಿದ್ದಿಕೊಂಡು ಸನ್ಮಾರ್ಗದಲ್ಲಿ ಮುನ್ನಡೆಯಲು ದಾರಿ ತೋರಿದವರು.

ಈಗ ವಿಷಯಕ್ಕೆ ಬರೋಣ. ಬೆಂಗಳೂರಲ್ಲಿ ತಿರುವಳ್ಳುವರ್ ಪ್ರತಿಮೆ ಸ್ಥಾಪನೆಯಾದರೆ, ಚೆನ್ನೈಯಲ್ಲಿ ಸರ್ವಜ್ಞ ಪ್ರತಿಮೆ ಸ್ಥಾಪಿಸಲು ತಮಿಳುನಾಡು ಸರಕಾರ ಒಪ್ಪಿದೆ. ಬೆಂಗಳೂರಿನಲ್ಲಿ ತಿರುವಳ್ಳುವರ್ ಓಕೆ, ಆದರೆ ಚೆನ್ನೈನ ಅಯ್ನಾವರಂ (ಅಯ್ಯನಾವರಂ ಅಥವಾ ಅಯನಾವರಂ) ಪ್ರದೇಶದಲ್ಲಿ ಸರ್ವಜ್ಞ ಮೂರ್ತಿ ಬೇಡ ಯಾಕೆ?

ಅಲಸೂರು ಕೆರೆ ಪ್ರದೇಶ ಹೇಳಿ ಕೇಳಿ ಬೆಂಗಳೂರಿನ ತಮಿಳು ಸಂಘವೇ ಸ್ಥಾಪನೆಯಾಗಲು ಕಾರಣವಾಗುವಷ್ಟು ತಮಿಳರೇ ಹೆಚ್ಚಾಗಿರುವ ಪ್ರದೇಶ. ಜನನಿಬಿಡ ಪ್ರದೇಶವೂ, ಆ ಪ್ರತಿಮೆಗೆ ತಮಿಳರೇ ಸಮರ್ಥವಾಗಿ ರಕ್ಷಣೆ ಕೊಡಬಲ್ಲ ಸಾಮರ್ಥ್ಯವುಳ್ಳ ಪ್ರದೇಶ. ಬೆಂಗಳೂರಿನಲ್ಲಿ ಅಲಸೂರು/ಹಲಸೂರು ಎಂಬ ಹುಲುಸಾದ ಪ್ರದೇಶದಲ್ಲಿ, ತಮಿಳರ ಸಾಂದ್ರತೆಯೇ ಹೆಚ್ಚಿರುವ ಸರೋವರ ಪ್ರದೇಶದಲ್ಲಿ ತಿರುವಳ್ಳುವರ್ ಪ್ರತಿಮೆ 18 ವರ್ಷಗಳ ಹಿಂದೆ ಅದಾಗಲೇ ಒಂದು ಬಾರಿ ಅನಾವರಣಗೊಂಡಾಗಿದೆ. ಅಂದರೆ 1991ರ ಸೆಪ್ಟೆಂಬರ್ 1ರಂದೇ ಅಂದಿನ ಮುಖ್ಯಮಂತ್ರಿ ಸಾರೇಕೊಪ್ಪ ಬಂಗಾರಪ್ಪನವರು ಅಂದಿನ ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅಧ್ಯಕ್ಷತೆಯಲ್ಲಿ ತಿರುವಳ್ಳುವರ್ ಪ್ರತಿಮೆಯನ್ನು ಅನಾವರಣಗೊಳಿಸಿಯಾಗಿದೆ. ಅಚ್ಚರಿ ಬೇಡ. ಹಾಗಂತ ಆ ಪ್ರತಿಮೆಯ ತಳಭಾಗದಲ್ಲಿರುವ ಶಿಲಾಫಲಕ ಜಗತ್ತಿಗೇ ಸಾರುತ್ತಿದೆ!.

ಅಯನಾವರಂ ಪಾರ್ಕ್ ಸ್ಥಿತಿ-ಗತಿ:
ಆದರೆ, ತಮಿಳುನಾಡಿನಲ್ಲಿ ಸರ್ವಜ್ಞ ಪ್ರತಿಮೆ ಸ್ಥಾಪನೆಯಾಗುವ ಸ್ಥಳವನ್ನೊಮ್ಮೆ ಹೀಗೇ ಬಂದು ನೋಡಿದಾಗ ಮನಸ್ಸಿಗೆ ಅನ್ನಿಸಿದ್ದು, ತಮಿಳುನಾಡು ಸರಕಾರ ಹೀಗೂ ಮಾಡುತ್ತದೆಯೇ ಎಂದು. ಅಬ್ಬಬ್ಬಾ ಎಂದರೆ ಸುತ್ತ ಮುತ್ತ ಅಲ್ಲಿ ಏಳೆಂಟು ಕನ್ನಡಿಗರ ಮನೆಗಳಿರಬಹುದು. ಇದು ಸ್ಥಾಪನೆಯಾಗುತ್ತಿರುವ ಪ್ರದೇಶಕ್ಕೆ ಮಂಗಳವಾರ ಭೇಟಿ ನೀಡಿದಾಗ ಕಂಡ ದೃಶ್ಯ:

38x38x39 ಮೀಟರ್ ಸುತ್ತಳತೆಯ ತ್ರಿಕೋನಾಕಾರದ ಒಂದು ಪುಟ್ಟ ಪಾರ್ಕ್ ಅದು. ಸುತ್ತಲೂ ಪುಟ್ಟ ರಸ್ತೆಯು ವ್ಯಾಪಿಸಿದೆ. ಒಂದಷ್ಟು ಕಲ್ಲು ಬೆಂಚುಗಳನ್ನು ಇರಿಸಲಾಗುತ್ತಿದೆ. ಮಧ್ಯೆ ಸರ್ವಜ್ಞ ಪ್ರತಿಮೆ ಕೂರಿಸಲು ಪೀಠವೊಂದು ಸಿದ್ಧವಾಗುತ್ತಿದೆ. ಸುತ್ತಲೂ ಆಂಧ್ರಪ್ರದೇಶದ ಕುಪ್ಪಂನಿಂದ ತರಿಸಲಾದ ಬರ್ನ್ಟ್ ಸ್ಟೋನ್ ಲ್ಯಾಬ್‌ಗಳನ್ನು ಹಾಸುವ ಕಾರ್ಯ ಭರದಿಂದ ಸಾಗಿದೆ. ಶಿಲ್ಪಿಗಳು ಇನ್ನೂ ಕೆತ್ತುತ್ತಿದ್ದಾರೆ, ಕ್ರೇನು ಕೂಡ ಕಾರ್ಯವೆಸಗುತ್ತಿದೆ. ಬೆಂಗಳೂರಿನ ಪಿಡಬ್ಲ್ಯುಡಿ ಎಂಜಿನಿಯರುಗಳು ಕೆಲಸದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಬೆಂಗಳೂರಿನ ವಿಕಾಸ ಸೌಧದ ಕೆತ್ತನೆ ಶಿಲ್ಪಿ ಹೊಸಕೋಟೆ ಶಂಕರ ಸ್ತಪತಿ ಅವರೇ ಪೀಠದ ಸುತ್ತಲಿನ ಕೆತ್ತನೆ ಕಾರ್ಯ ನೆರವೇರಿಸಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕರುಣಾನಿಧಿಯವರ ಆರೋಗ್ಯ ಸಮಸ್ಯೆಯಿಂದಾಗಿ ಅವರು ರಿಮೋಟ್ ಕಂಟ್ರೋಲ್ ಮೂಲಕ ಆಗಸ್ಟ್ 13ರಂದು ಪ್ರತಿಮೆ ಅನಾವರಣಗೊಳಿಸಲಿದ್ದಾರೆ.

9 ಅಡಿ ಎತ್ತರದ ಸರ್ವಜ್ಞ ಕಂಚಿನ ಪ್ರತಿಮೆಯು ಬೆಂಗಳೂರಿನಿಂದ ಹೊರಟಿದೆ ಎಂದು ಗೊತ್ತಾಗಿದೆ. ಅದು ಈಗ ಕಾಂಚೀಪುರಂನಲ್ಲಿ ಈಗ ಭದ್ರವಾಗಿದೆ ಎಂದು ಮೂಲವೊಂದು ಹೇಳಿದೆ. ಬುಧವಾರ ಅದು ಈ ಉದ್ಯಾನಕ್ಕೆ ಬರುವ ನಿರೀಕ್ಷೆ ಇದೆ.

ಹಾಗಿದ್ದರೆ ಅಯನಾವರಂನಲ್ಲಿ ಯಾಕೆ ಬೇಡ?
ಹೌದು. ಇದು ಚೆನ್ನೈಯೊಳಗಿರುವ ಕನ್ನಡಿಗರ ಒಟ್ಟಾರೆ ಅಭಿಪ್ರಾಯವೂ ಹೌದು. ತಮಿಳು ದಾರ್ಶನಿಕ ಕವಿ ತಿರುವಳ್ಳುವರ್‌ಗೆ ಅದ್ಭುತ ಎನ್ನಬಹುದಾದ ಅಲಸೂರು ಕೆರೆ ಪ್ರದೇಶದಲ್ಲಿ ಅವಕಾಶ ಕೊಟ್ಟಿರುವಾಗ, ಸರ್ವಜ್ಞನನ್ನು ಆ ಒಂದು ಮೂಲೆಯಲ್ಲಿ ತಂದು ನಿಲ್ಲಿಸುವುದು ಎಷ್ಟು ಸರಿ? ಎಂಬುದು ಚೆನ್ನೈ ಕನ್ನಡಿಗರ ಪ್ರಶ್ನೆ.

ಇಲ್ಲಿ ಕನ್ನಡಿಗರ ಸಂಖ್ಯೆಯೂ ಕಡಿಮೆ ಎಂಬುದು ಒತ್ತಟ್ಟಿಗಿರಲಿ. ಆ ಒಂದು ಪುಟ್ಟ ಉದ್ಯಾನವನ್ನು ಅಬ್ಬಬ್ಬಾ ಅಂದರೆ ಎಷ್ಟು ಮಂದಿ ನೋಡಬಹುದು? ಅದೇ ಪ್ರತಿಮೆಯನ್ನು ಅದೆಷ್ಟೋ ಸಂಖ್ಯೆಯ ಪ್ರವಾಸಿಗರು ದಿನವೂ ಬರುತ್ತಿರುವ, ಅಣ್ಣಾ ಸಮಾಧಿ, ಎಂಜಿಆರ್ ಸಮಾಧಿ, ಕಣ್ಣಗಿ, ಗಾಂಧೀಜಿ ಪ್ರತಿಮೆಗಳಿರುವ ವಿಶ್ವವಿಖ್ಯಾತ ಮರೀನಾ ಬೀಚ್‌ನಲ್ಲೋ, ಅಥವಾ ಚೆನ್ನೈಯ ಪ್ರಧಾನ ಶಾಪಿಂಗ್ ಕೇಂದ್ರವಾಗಿರುವ ಟಿ.ನಗರದ ಪಾನಗಲ್ ಪಾರ್ಕ್‌ನಲ್ಲೋ, ಇಲ್ಲವೇ ಚೆನ್ನೈಯ ರಾಜ ಪಥ ಎಂದೇ ಕರೆಸಿಕೊಳ್ಳುವ ಮೌಂಟ್ ರೋಡ್‌ನಲ್ಲೋ ಸ್ಥಾಪಿಸಿದರೆ, ಜನ ಕುತೂಹಲದಿಂದ ಇದು ಯಾರ ಪ್ರತಿಮೆ ಎಂದು ಕೇಳಿ ತಿಳಿದುಕೊಂಡು, ಕನ್ನಡದ ಹೆಮ್ಮೆಯ ಸರ್ವಜ್ಞನ ಹೆಸರು ಚಿರಸ್ಥಾಯಿಯಾಗಬಹುದಿತ್ತು.

ತಿರುವಳ್ಳುವರ್‌ಗೆ ಕನ್ನಡಿಗರು ಪ್ರೈಮ್ ಲೊಕೇಶನ್‌ನಲ್ಲಿ ಸ್ಥಳಾವಕಾಶ ಕೊಟ್ಟರೂ, ತಮಿಳುನಾಡು ಮಾತ್ರ ಈ ಪುಟ್ಟ ಉದ್ಯಾನದಲ್ಲಿ ಸರ್ವಜ್ಞನನ್ನು ಕೂರಿಸಲು ಅವಕಾಶ ಮಾಡಿಕೊಟ್ಟು ಸಣ್ಣತನ ಮೆರೆದಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಪ್ರತಿಮೆ ಸ್ಥಾಪನೆ ಬಗ್ಗೆ ಹೋರಾಟ ಮಾಡುತ್ತಿರುವ ಕನ್ನಡದ ಕಟ್ಟಾಳುಗಳು ಈ ವಿಷಯವನ್ನು ಎತ್ತಲು ಈಗ ಸಮಯಾವಕಾಶವೂ ಇಲ್ಲ. ಯಾಕೆಂದರೆ ಆಗಸ್ಟ್ 13ರಂದು ಪ್ರತಿಮೆ ಅನಾವರಣ ಎಂದೇ ತೀರ್ಮಾನವಾಗಿಬಿಟ್ಟಿದೆ.

ಅಲಸೂರು ಕೆರೆ ಬಳಿ ತಿರುವಳ್ಳುವರ್ ಪ್ರತಿಮೆಗೆ ಪೂಜೆ ಮಾಡುವಷ್ಟು ಮಂದಿ ತಮಿಳರಿದ್ದಾರೆ, ಆದರೆ ಅಯನಾವರಂನಲ್ಲಿ ಸರ್ವಜ್ಞನ ಪ್ರತಿಮೆಯನ್ನು ದಿನಾ ಸಂಭ್ರಮಿಸಲು ಎಷ್ಟು ಕನ್ನಡಿಗರಿದ್ದಾರೆ? ಅದೇ ಪ್ರತಿಮೆಯು ಕನ್ನಡಿಗರ ಬಾಹುಳ್ಯವಿರುವ, ಅಥವಾ ಪ್ರವಾಸಿಗರ ಬಾಹುಳ್ಯವಿರುವ ಪ್ರದೇಶಗಳಲ್ಲಿ ಸ್ಥಾಪನೆಯಾಗುತ್ತಿದ್ದರೆ, ಈ ಬಗ್ಗೆ ಪ್ರತಿಮೆ ಸ್ಥಾಪನೆಯಿಂದ ಸೌಹಾರ್ದತೆ ಸಾಧ್ಯ ಎಂಬ ಸೂತ್ರ ಮುಂದಿಡುವವರು ಯೋಚಿಸಿದ್ದರೆ….?

ಸರ್ವಜ್ಞನನ್ನು ರಕ್ಷಿಸುವ ಹೊಣೆ ಯಾರಿಗೆ?
ಆದರೆ ಈ ಪ್ರತಿಮೆಯ ರಕ್ಷಣೆಯ ಹೊಣೆ ಯಾರಿಗೆ? ತಮಿಳುನಾಡು ಸರಕಾರಕ್ಕೆ, ಚೆನ್ನೈಯ ಮಹಾನಗರಪಾಲಿಕೆಗೆ. ಬಹುಶಃ ಇಲ್ಲಿ ಪ್ರತಿಮೆ ಸ್ಥಾಪಿಸುವುದೆಂದರೆ ಸೌಹಾರ್ದತೆಯತ್ತ ಹೊಸ ಹೆಜ್ಜೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಘೋಷಿಸಿಕೊಂಡರೂ, ಇದು ಕೋಲು ಕೊಟ್ಟು ಹೊಡೆಸಿಕೊಳ್ಳುವ ಪ್ರಯತ್ನ ಎಂಬುದು ಇಲ್ಲಿನ ಸ್ಥಿತಿಗತಿ ಬಲ್ಲ ಕನ್ನಡಿಗರ ಅಭಿಪ್ರಾಯ.

ಯಾಕೆಂದರೆ, ಕಾವೇರಿ ನೀರು ಉಭಯ ರಾಜ್ಯಗಳ ಮಧ್ಯೆ ಕಾವು ಏರಿಸಿದಾಗ, ಕರ್ನಾಟಕಕ್ಕೆ ಸಂಬಂಧಿಸಿದ ಹೆಸರಿರುವ ಹೋಟೆಲುಗಳಿಗೆ, ಕರ್ನಾಟಕ ಸಂಘಕ್ಕೆ ಇಲ್ಲಿ ಕಲ್ಲು ಬೀಳುತ್ತದೆ ಎಂಬುದು ಚರಿತ್ರೆ ಕಲಿಸಿದ ಪಾಠ. ಜನಾಕ್ರೋಶವು ಕರ್ನಾಟಕದಲ್ಲೂ ತಮಿಳುನಾಡಿನಲ್ಲಿಯೂ ನಿಯಂತ್ರಣಾತೀತ. ಅದು ಬಿಡಿ, ಅಂತಿಪ್ಪ ರಾಷ್ಟ್ರಪಿತ ಗಾಂಧೀಜಿ ಅಥವಾ ಸಂವಿಧಾನಶಿಲ್ಪಿ ಅಂಬೇಡ್ಕರ್ ಪ್ರತಿಮೆಗಳಿಗೇ ವಿನಾಕಾರಣ ಆಗಾಗ್ಗೆ ಅವಮಾನ ಮಾಡುತ್ತಿರುವ ಅದೆಷ್ಟೋ ಸುದ್ದಿಗಳನ್ನು ಆಗಾಗ್ಗೆ ಕೇಳುತ್ತಿರುತ್ತೇವೆ. ಹೀಗಿರುವಾಗ, ಕಾವೇರಿ ಎಂಬ ಉರಿಯುವ ನೀರಿನ ವಿಷಯ ಒಡಲಲ್ಲಿರುವಾಗ, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಗಲು ಹೈಕೋರ್ಟಿನಲ್ಲಿ ತಡೆಯಾಜ್ಞೆ ಅರ್ಜಿ ಬಾಕಿ ಇರುವಾಗ ಮತ್ತು ಹೊಗೇನಕಲ್‌ನಲ್ಲಿ ಜಂಟಿ ಸಮೀಕ್ಷೆಗೆ ತಮಿಳುನಾಡು ಒಪ್ಪಬೇಕೆಂಬ ಕನ್ನಡ ಮನಸ್ಸುಗಳ ಬೇಡಿಕೆ ಇರುವಾಗ, ಸರ್ವಜ್ಞನನ್ನು ಅಲ್ಲಿ ಬಟಾ ಬಯಲಲ್ಲಿ ನಿಲ್ಲಿಸುವುದು ಎಷ್ಟರ ಮಟ್ಟಿಗೆ ಸರಿ ಮತ್ತು ಸುರಕ್ಷಿತ ಎಂಬ ಪ್ರಶ್ನೆ ಏಳುತ್ತದೆ.

ಅದು ಕೂಡ, ಸರ್ವಜ್ಞ ಪ್ರತಿಮೆ ಸ್ಥಾಪನೆಯಾಗುತ್ತಿರುವುದು ಕನ್ನಡ ಶಾಲೆಯ ಪಕ್ಕದಲ್ಲೇ. ಕಾವೇರಿ ವಿಷಯ ಕಾವೇರುವ ಸಂದರ್ಭದಲ್ಲಿ ಶಾಲೆಯ ರಕ್ಷಣೆಯೇ ಕನ್ನಡಿಗರಿಗೆ ದೊಡ್ಡ ಸಂಗತಿಯಾಗಿಬಿಡುತ್ತದೆ.

ಈಗೇನೋ ಕರ್ನಾಟಕದಲ್ಲಿ ಭರ್ಜರಿ ಎಂಬಂತಿಲ್ಲದಿದ್ದರೂ, ಸಾಕಷ್ಟು ಮಳೆ ಬಂದಿದೆ, ಮೆಟ್ಟೂರು ಜಲಾಶಯದ ಒಳಹರಿವು ಹೆಚ್ಚಾಗಿದೆ, ಹೀಗಾಗಿ ತಮಿಳುನಾಡಿಗೂ ನೀರು ಬಿಡುವ ಸ್ಥಿತಿ ಬಂದಿದೆ. ಇದರಿಂದಾಗಿ ತಮಿಳರು ಸುಮ್ಮನಿದ್ದಾರೆ. ನೀರಿಲ್ಲದೇ ಹೋಗಿದ್ದಿದ್ದರೆ, ಪ್ರತಿಮೆ ಸ್ಥಾಪನೆ ಬಗ್ಗೆ ಯಾವ ಸರಕಾರವೂ ಯೋಚಿಸುತ್ತಿರಲಿಲ್ಲವೇನೋ…!

ಸದ್ಯದ ಮಾಹಿತಿ ಪ್ರಕಾರ, ಅಯ್ನಾವರಂ ಸಬ್ ಇನ್ಸ್‌ಪೆಕ್ಟರ್ ಹೇಳುವಂತೆ, ಸದ್ಯಕ್ಕೆ ಪ್ರತಿದಿನ ಇಬ್ಬರು ಪೊಲೀಸರು ಪಾಳಿಯಲ್ಲಿ ಇಲ್ಲಿ 24 ಗಂಟೆ ಕಾವಲಿದ್ದಾರೆ. ಈ ವ್ಯವಸ್ಥೆ ಪ್ರತಿಮೆ ಅನಾವರಣವಾದ ಒಂದು ವಾರದವರೆಗೂ ಮುಂದುವರಿಯಲು ಆದೇಶವಿದೆ. ಆ ಬಳಿಕ ಏನೂಂತ ಗೊತ್ತಿಲ್ಲ!

ಹೊರನಾಡ ಕನ್ನಡಿಗರ ವೇದನೆ:
ಕನ್ನಡ, ಕನ್ನಡಿಗರು ಮತ್ತು ಕನ್ನಡ ಮನಸ್ಸುಗಳು ಹೆಮ್ಮೆ ಪಡಬೇಕಾದ ಸಂಗತಿಯೊಂದು ತಮಿಳು ರಾಜಧಾನಿಯಲ್ಲಿ ನಡೆಯುತ್ತಿದೆ ಎಂದಾದಾಗ ಯಾವ ಕನ್ನಡಿಗನ ಮನಸ್ಸು ತಾನೇ ಹುಚ್ಚೆದ್ದು ಕುಣಿಯದು? ಆದರೆ ಇಲ್ಲಿನ ಕನ್ನಡಿಗರ ಮನಸ್ಸಿನ ಆಳದಲ್ಲಿ ವೇದನೆಯ ಗೆರೆಯೊಂದು ಛಳಕ್ಕನೆ ಸುಳಿದು ಮಾಯವಾಗುತ್ತದೆ.

ಚೆನ್ನೈಯಲ್ಲಿ ಮುಖ್ಯವಾಗಿ ಟಿ.ನಗರದ ಕರ್ನಾಟಕ ಸಂಘ, ಅಯನಾವರಂ ಕನ್ನಡ ಸಂಘ, ಚೆನ್ನೈ ಕನ್ನಡ ಬಳಗ, ಬೆಸೆಂಟ್ ನಗರ ಕನ್ನಡ ಕೂಟ ಎಂಬ ನಾಲ್ಕು ಪ್ರಮುಖ ಸಂಘಗಳಿವೆ. ಅದಲ್ಲದೆ ಬಂಟರ ಸಂಘ, ಹವ್ಯಕರ ಸಂಘ, ಐಐಟಿ ಮದ್ರಾಸ್ ಕನ್ನಡ ಸಾಂಸ್ಕೃತಿಕ ಸಂಘ ಮುಂತಾದವುಗಳು ಕೂಡ ಇವೆ. ಈ ಯಾವುದೇ ಸಂಘಗಳನ್ನು ಕೊನೆಯ ಕ್ಷಣದವರೆಗೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಅಯನಾವರಂ ಪಾರ್ಕ್‌ನಲ್ಲಿ ಸರ್ವಜ್ಞ ಪ್ರತಿಮೆ ನಿಲ್ಲಿಸಲು ಹೊರಟಿರುವಾಗ ಹೊರನಾಡ ಕನ್ನಡಿಗರಿಗೆ ಅದೆಷ್ಟು ವೇದನೆಯಾಗಬೇಡ!

ಬೆಂಗಳೂರಲ್ಲಿ ತಿರುವಳ್ಳುವರ್ ಪ್ರತಿಮೆ ಸ್ಥಾಪನೆ ಕಾರ್ಯಕ್ರಮಕ್ಕೆ ಎಲ್ಲ ತಮಿಳರು ಬರಬೇಕು ಎಂದು ಅಲ್ಲಿನ ತಮಿಳು ಸಂಘವು ಪತ್ರಿಕಾ ಹೇಳಿಕೆಯನ್ನೂ ಹೊರಡಿಸಿದೆ. ಆದರೆ ಚೆನ್ನೈ ಕನ್ನಡಿಗರಿಗೆ ಸರ್ವಜ್ಞ ಪ್ರತಿಮೆ ಅನಾವರಣ ಕಾರ್ಯಕ್ರಮ ಏನು, ಯಾವಾಗ, ಎಷ್ಟು ಹೊತ್ತಿಗೆ, ಎಲ್ಲಿ, ಕರ್ನಾಟಕದಿಂದ ಯಾರೆಲ್ಲಾ ಬರುತ್ತಾರೆ… ಎಂಬುದೆಲ್ಲಾ ಇದುವರೆಗೆ ಗೊತ್ತಾಗಿಲ್ಲ. ಎಲ್ಲ ಕನ್ನಡಿಗರೂ ಸಂಭ್ರಮಿಸುವ ಕ್ಷಣವದು. ವಿಶೇಷವಾಗಿ ಹೊರನಾಡ ಕನ್ನಡಿಗರು ಆಸ್ಥೆಯಿಂದ ಪಾಲುಗೊಳ್ಳಬೇಕಾದ ಸಂದರ್ಭವದು. ಆದರೆ, ಇದು ಕೇವಲ ರಾಜಕಾರಣದ ಕಾರ್ಯಕ್ರಮವಾಗಿಬಿಟ್ಟದ್ದು ವ್ಯವಸ್ಥೆಯ ದುರಂತ.

ಈಗಾಗಲೇ ಕನ್ನಡಿಗರ ಮೇಲೆ ಜಗಳಗಂಟರು ಎಂಬ ಅಪವಾದ ಬಂದಿದೆ. ಹೌದು. ನಾವು ನ್ಯಾಯ ಸಿಗಬೇಕೆಂದು ಹೋರಾಡುತ್ತಿದ್ದರೂ, ಅನ್ಯಾಯವೇ ಆಗುತ್ತಿರುವಾಗ, ಜಗಳಗಂಟರೆಂಬ ಅಪವಾದ ಬರುತ್ತದೆ ಎಂದು ಸುಮ್ಮನೆ ಕೂರುವುದೂ ಸಾಧ್ಯವಿಲ್ಲ. ಆದರೆ, ಈ ಪ್ರತಿಮೆ ಬಗೆಗಿನ ರಾಜಕೀಯವಿದೆಯಲ್ಲ, ಅದು ವ್ಯರ್ಥ, ವ್ಯರ್ಥ, ವ್ಯರ್ಥ.

ಕನ್ನಡಿಗರು, ತಮಿಳರು ಬೇರೆಬೇರೆಯಲ್ಲ. ಕಾವೇರಿಯ ನೀರು ಹಂಚಿಕೊಂಡು ಬದುಕುವವರು. ರಾಜಕೀಯ ಮತ್ತು ಭೌಗೋಳಿಕ ಕಾರಣಗಳಿಂದಾಗಿ ಅವರಿಬ್ಬರೂ ದಾಯಾದಿಗಳಂತೆ ಹೊಡೆದಾಡಿಕೊಳ್ಳುತ್ತಿದ್ದಾರೆ. ಸಮಾನತೆ ಇರಲಿ, ತಿರುವಳ್ಳುವರ್‌ಗೆ ಕೊಟ್ಟ ಸ್ಥಾನವನ್ನೇ ಸರ್ವಜ್ಞನಿಗೂ ಇಲ್ಲಿ ಕಲ್ಪಿಸಲಿ.

ಕೊನೆಗೊಂದು ಮಾತು:

ಕೊನೆಗೂ ಅಯನಾವರಂ ಪಾರ್ಕಿನಲ್ಲೇ ಸರ್ವಜ್ಞ ಪ್ರತಿಮೆ ಅನಾವರಣಗೊಳ್ಳುತ್ತದೆಯೆಂದಾದರೆ, ಕೆಟ್ಟವರ ನಡುವೆ ಬಾಳುವುದು ಹೇಗೆಂಬುದನ್ನು ಸರ್ವಜ್ಞನೇ ಹೇಳಿಕೊಟ್ಟಿದ್ದು ಹೀಗೆ:

ದಂತ ಪಂಕ್ತಿಯ ನಡುವೆ ಎಂತಿಪ್ಪುದದು ಜಿಹ್ವೆ
ಅಂತು ದುರ್ಜನರ ಬಳಸಿನಲಿ ಸಜ್ಜನನು
ನಿಂತಿಹನು ನೋಡ ಸರ್ವಜ್ಞ!

7 COMMENTS

  1. ಹೌದು ಅವಿನಾಶ್‍ರವರೆ ಇದೊಂದು ರೀತಿಯ ಅಪಮಾನ ಕನ್ನಡಿಗರಿಗೆ. ರಾಜಕೀಯದ ಏಳಿಗೆಗೆ ಏನನ್ನಾದರೂ ಮಾಡುತ್ತಾರೆ ಬಿಡಿ. ತಿರುವಳ್ಳರ್ ಪ್ರತಿಮೆಗೆ ನಾವು ಕೊಟ್ಟಷ್ಟೇ ಮಹತ್ವ ಅವರು ಸರ್ವಜ್ಞನ ಪ್ರತಿಮೆಗೆ ಕೊಡಬೇಕಲ್ಲವೇ? ಈ ವಿಷಯದಲ್ಲೂ ರಾಜಕೀಯ ನಡೆಸುವುದು ನಾಚಿಕೆಗೇಡುತನ. ನಮ್ಮ ರಾಜಕೀಯ ನೇತಾರರು ಷಂಡರು. ಇಲ್ಲದಿದ್ದರೆ ಸರ್ವಜ್ಞನ ಮೂರ್ತಿಗೆ ಇಲ್ಲೇ ಸ್ಥಳ ಕೊಡಿಯೆಂದು ಕೇಳುವ ನೈತಿಕ ದೈರ್ಯವಿರುತ್ತಿತ್ತು. ಅದಿಲ್ಲ ನೋಡಿ. ನಿಜವಾಗಿಯೂ ತುಂಭಾ ಮನಸ್ಸಿಗೆ ಬೇಸರವಾಗುತ್ತಿದೆ. ಇನ್ನೊಂದು ದಿನ ಸರ್ವಜ್ಞನ ಪ್ರತಿಮೆ ಅನಾಥವಾಗಿರುವ ಬಗ್ಗೆ ಕೇಳುವ ಸಂದರ್ಭ ಬಂದರೆ ಅತಿಶಯವಿಲ್ಲ.

    • ನೀರತೆರೆಯವರೆ,
      ಸರ್ವಜ್ಞನಿಗೆ ಎಂಥ ಸ್ಥಾನ ನೀಡಬೇಕೆಂಬ ಕನಿಷ್ಠ ಸೌಜನ್ಯವೂ ಅವರಿಗಿಲ್ಲದಿದ್ದರೂ, ನಮ್ಮವರಿಗಾದರೂ ಬೇಕಿತ್ತಲ್ಲ…

  2. arthapoorna baraha Avi.. nammolagina omapratishtegalu mareyaaguva varegu ee tharada vivaadagalu nilladu anisutte…

    and frend, your blog & mine has got the same theme…

    • ಇದು ಯಾವ ರಾಜಕೀಯ ಅಂತಾನೇ ತಿಳೀತಿಲ್ಲ ಶಮ… ಸರ್ವಜ್ಞನಿಗೊಂದು ಪ್ರಶಸ್ತ ಸ್ಥಳ ಕೊಟ್ಟಿದ್ದರೇನಾಗುತ್ತಿತ್ತು?…

      ಇರ್ಲಿ, ನನ್ನ ಟಂಪ್ಲೇಟ್ ಕದ್ದಿದ್ದು ಶಮ… 😉

  3. ಸರ್ ಈ ಪ್ರತಿಮಾ ಪುರಾಣ ಸಾಕಾಗೇದ ನಮ್ಮವನೇ ಆದ ಸಂಗೊಳ್ಳಿರಾಯಣ್ಣ ಇನ್ನೂ ಮುಸುಕುಹಾಕಿಕೊಂಡು ನಿಂತಾನ
    ಯಾಕ ಬೇಕು ಇವೆಲ್ಲ ಹೋಗಲಿ ಬಿಡ್ರಿ ಹೊಡದಾಡಾವ್ರಿಗೆ ಹೆಂಗ ಬುದ್ಧಿ ಹೇಳೋದು…

  4. ಹೌದ್ರೀ ದೇಸಾಯಿಯವರೆ, ಸುಮ್ನೇ ಪ್ರತಿಮೆ ಸ್ಥಾಪನೆ ಮಾಡೋ ಬದ್ಲು, ಆ ಹಂದಿ ಜ್ವರದ ಬಗ್ಗೆ ಒಂದಷ್ಟು ಕ್ರಮ ಕೈಗೊಳ್ಳಬಹುದಿತ್ತು… ಅಥ್ವಾ ಇಷ್ಟೊಂದು ಅದ್ದೂರಿ ಕಾರ್ಯಕ್ರಮ ನಡೆಸೋ ಬದ್ಲು, ಅದೇ ಹಣಾನ ಬಡವ್ರಿಗೆ ಕೊಡ್ಬಹುದಿತ್ತು.

LEAVE A REPLY

Please enter your comment!
Please enter your name here