ಸ್ವಾತಂತ್ರ್ಯ 60: ಅದೇ ರಾಗ, ಅದೇ ಹಾಡು

0
343

ಮರಳಿ ಬಂದಿದೆ ಸ್ವಾತಂತ್ರ್ಯ ದಿನವೆಂಬೋ “ಗತ ದಿನಗಳನ್ನು ನೆನಪಿಸಿಕೊಳ್ಳುವ ದಿನ”. ಅದು ರಾಜಕಾರಣಿಗಳಿಂದ, ಅಧಿಕಾರಿಗಳಿಂದ ಭಾಷಣಕ್ಕಷ್ಟೇ ಸೀಮಿತವಾಗಿರುವ ಪದಗಳು ಪುಂಖಾನುಪುಂಖವಾಗಿ ಹೊರಗೆ ಹರಿದುಬರುವ ಪರ್ವ ಕಾಲವೂ ಹೌದು.

ಯುವಕರು ಮುಂದೆ ಬರಬೇಕು, ದೇಶ ಉನ್ನತಿ ಸಾಧಿಸಬೇಕು, ಸ್ವಾತಂತ್ರ್ಯ ವೀರರ ತ್ಯಾಗ ಬಲಿದಾನಗಳನ್ನು ಆದರ್ಶವಾಗಿಟ್ಟುಕೊಳ್ಳಬೇಕು ಎಂದು ಬೊಗಳೆ ಬಿಡುವ ಅಧಿಕಾರಸ್ಥರು, ಈ ವಾಕ್ಯಗಳು ಬರೇ ಭಾಷಣಕ್ಕೆ ಇರುವಂಥವುಗಳೆಂದು ಅದ್ಯಾವತ್ತೋ ತಿಳಿದುಕೊಂದು ಬಿಟ್ಟಿದ್ದಾರೆ.

ಸ್ವಾತಂತ್ರ್ಯ ದೊರೆತು 60 ವರ್ಷಗಳಾಗಿವೆ. ರಾಜಕಾರಣಿಗಳು ಎಷ್ಟೇ ಭ್ರಷ್ಟಾಚಾರ, ಕೆಸರೆರಚಾಟ, ಕಾಲೆಳೆಯುವಿಕೆ ಇತ್ಯಾದಿಗಳಲ್ಲಿ ನಿರತರಾಗಿದ್ದರೂ ಸಹಾ ದೇಶದ ಏಳಿಗೆಯನ್ನು ತಡೆಯಲು ಯಾರಿಂದಲೂ ಆಗುತ್ತಿಲ್ಲ! ಅಷ್ಟರ ಮಟ್ಟಿಗೆ ಭಾರತ ಮಾತೆ ಧನ್ಯಳು.

ದೇಶವನ್ನು ಇಂದು ಮುಖ್ಯವಾಗಿ ಕಾಡುತ್ತಿರುವ ಮತ್ತು ಇನ್ನಷ್ಟು ಏಳಿಗೆಗೆ ಅಡ್ಡಿಯಾಗಿರುವ ವಿಚಾರವೆಂದರೆ “ಪ್ರತಿಭಾ ಪಲಾಯನ”. ನಮ್ಮ ದೇಶದ ಪ್ರತಿಭೆಗಳೆಲ್ಲಾ ಕೈತುಂಬಾ ಸಂಪಾದನೆ ದೊರೆಯುವ ವಿದೇಶೀ ಕಂಪನಿಗಳಿಗೆ ಮೊರೆ ಹೋಗುತ್ತಿದ್ದಾರೆ. ಉತ್ತಮ ಜೀವನಶೈಲಿಯನ್ನು ಅನುಭವಿಸಲು ಬಯಸುವ ಯುವ ಜನಾಂಗದ ತಪ್ಪೇನೂ ಇಲ್ಲ ಬಿಡಿ. ಆದರೆ ಅಧಿಕಾರಸ್ಥರ ಕುಟಿಲ ತಂತ್ರಗಳೇ ಇದಕ್ಕೆ ಕಾರಣವೆಂದು ಬೇರೆ ಹೇಳಬೇಕಾಗಿಲ್ಲ.

ಈ ದೇಶದಲ್ಲಿ ಪ್ರತಿಭಾವಂತರಿಗೆ ಮನ್ನಣೆ ನೀಡುವ ಬದಲಾಗಿ ಓಟು ಗಿಟ್ಟಿಸುವುದಕ್ಕಾಗಿಯೇ, ಸಂಖ್ಯೆಯಲ್ಲಿ ಸಾಕಷ್ಟಿರುವ ಮತ್ತು ಓಟಿನ ಬ್ಯಾಂಕ್ ಆಗಬಲ್ಲ ಸಮುದಾಯಗಳಿಗೆ ಮೀಸಲಾತಿ ನೀಡಲಾಗುತ್ತಿದೆ. ಅದೇ.. ಪ್ರತಿಭೆಯನ್ನೇ ಮಾನದಂಡವಾಗಿಸಿ ಉದ್ಯೋಗ ನೀಡುವ ಇಚ್ಛಾಶಕ್ತಿ ಪ್ರದರ್ಶಿಸಿದ್ದಲ್ಲಿ ಅದ್ಯಾವತ್ತೋ ನಮ್ಮ ದೇಶವು ವಿಶ್ವದಲ್ಲೇ ಒಂದು ಪ್ರಬಲ ಶಕ್ತಿಯಾಗಿ ಮತ್ತಷ್ಟು ಮೇಲಕ್ಕೇರುತ್ತಿತ್ತು.

ಇಂದು ಯಾವುದೇ ಪತ್ರಿಕೆಗಳ ಸ್ವಾತಂತ್ರ್ಯೋತ್ಸವ ವಿಶೇಷ ಪುರವಣಿ ಓದಿ ನೋಡಿದರೆ… ಅದರಲ್ಲಿರುವ ಲೇಖನಗಳೆಲ್ಲಾ ಒಂದು ವಿಷಾದಕರ ಟಿಪ್ಪಣಿಯೊಂದಿಗೆ ಅಂತ್ಯಗೊಳ್ಳುತ್ತವೆ. ಅಥವಾ ಕನಿಷ್ಠ ಪಕ್ಷ ಆ ಲೇಖನದೊಳಗೆ ಈ ವಿಷಾದನೀಯ ಸಂಗತಿಯೊಂದು ಪ್ರಸ್ತಾಪವಾಗಿಯೇ ಇರುತ್ತದೆ. ಆ ಟಿಪ್ಪಣಿಯ ಸಾರಾಂಶವಿಷ್ಟೇ. ದೇಶವಿಂದು ಭ್ರಷ್ಟಾಚಾರ, ಭಯೋತ್ಪಾದಕತೆ, ಓಟಿನ ಬ್ಯಾಂಕ್ ರಾಜಕಾರಣದಿಂದಾಗಿ ತತ್ತರಗೊಳ್ಳುತ್ತಿದೆ. ರಾಜಕಾರಣಿಗಳ ನೈತಿಕ ಮಟ್ಟ ಕುಸಿದಿದೆ. ಮಾನವೀಯತೆ ಮರೆಯಾಗುತ್ತಿದೆ… ದೇಶದ ಗ್ರಾಮೀಣ ಭಾಗದಲ್ಲಿನ ಜನಸಾಮಾನ್ಯರಿಗೆ ಸ್ವಾತಂತ್ರ್ಯ ಎಂದರೆ ಏನು ಎಂಬುದರ ಅರಿವೇ ಇರುವುದಿಲ್ಲ… ಇತ್ಯಾದಿ ವಾಕ್ಯಪುಂಜಗಳು ಲೇಖನಗಳಲ್ಲಿ ಕಾಣಿಸಿಕೊಂಡಿರುತ್ತವೆ.

ಈ ಧೋರಣೆ ಬದಲಾಗಬೇಕು. ಇದಕ್ಕೆ ಅಂತ್ಯ ಹಾಡುವ ಪಣ ತೊಟ್ಟು ಸ್ವಾತಂತ್ರ್ಯೋತ್ಸವವನ್ನು ಅರ್ಥವತ್ತಾಗಿ ಆಚರಿಸಬೇಕಿದೆ.

LEAVE A REPLY

Please enter your comment!
Please enter your name here