ಗೆಳೆತನದ ವೃಕ್ಷದಡಿ ತಣ್ಣೆಳಲು….

4
704

(ಇದು ವೆಬ್‌ದುನಿಯಾ ಕನ್ನಡದಲ್ಲಿ ಪ್ರಕಟವಾಗಿರುವ ಲೇಖನ) 

ನನ್ನ ಮುಂದೆ ನಡೆಯಬೇಡ,
ನನಗೆ ಹಿಂಬಾಲಿಸಲೆನಗೆ ಅಸಾಧ್ಯವಾಗಬಹುದು
ನನ್ನ ಹಿಂದೆ ನಡೆಯಬೇಡ,
ಮುನ್ನಡೆಯಲೆನಗೆ ಅಸಾಧ್ಯವಾಗಬಹುದು,
ನನ್ನ ಭುಜಕ್ಕೆ ಭುಜ ಸಾಗಿಸಿ ಮುನ್ನಡೆ…
ಎಂದೆಂದಿಗೂ ನನ್ನೊಡನಿದ್ದು ನನ್ನ ಗೆಳೆಯನಾಗಿರು…

ಈ ಸುಂದರ ಅಕ್ಷರಗಳು 1957ರ ನೊಬೆಲ್ ಸಾಹಿತ್ಯ ಪ್ರಶಸ್ತಿ ವಿಜೇತ ಅಲ್ಬರ್ಟ್ ಕ್ಯಾಮಸ್ ಪೋಣಿಸಿದವುಗಳು.

ಮನುಷ್ಯನು ಮಾತ್ರವೇ ಗೆಳೆತನದ ಅರ್ಥವನ್ನು ಅರಿತುಕೊಳ್ಳುತ್ತಾನೆ ಮತ್ತು ವರ್ಷದಲ್ಲಿ ಒಂದಿಡೀ ದಿನವನ್ನು ಗೆಳೆತನಕ್ಕೆ, ಗೆಳೆಯರಿಗಾಗಿ ಮೀಸಲಿಡುತ್ತಾನೆ. ಪ್ರತಿ ವರ್ಷದ ಆಗಸ್ಟ್ ಮೊದಲ ಭಾನುವಾರವನ್ನು ಗೆಳೆತನ ದಿನಾಚರಣೆ ಎಂದು ವಿಶ್ವಾದ್ಯಂತ ಆಚರಿಸಲಾಗುತ್ತದೆ. ಈ ಕಾರಣಕ್ಕೆ ಎಲ್ಲರಿಗೂ ಗೆಳೆತನ ದಿನಾಚರಣೆಯ ಶುಭಾಶಯಗಳು!

ಭೌತಿಕ ಜಗತ್ತಿನಲ್ಲಿರುವ ಪ್ರಾಣಿಸಂಕುಲದಲ್ಲಿ ಮಾನವನಿಗೆ ಮಾತ್ರವೇ ಇರಬಹುದಾದ ಅನನ್ಯ ತುಡಿತವಿದು. ಗೆಳೆತನವೆಂಬುದು ಮಧುರ ಅನುಭೂತಿಯ ಅನುಬಂಧ. ಪ್ರಾಥಮಿಕ ಶಾಲೆಯಲ್ಲಿ ಕಲಿತ ಕವಿವಾಣಿ ಈಗಲೂ ನೆನಪಿದೆ. “ಗೆಳೆತನದ ಸುವಿಶಾಲ ಆಲದಡಿ ಪಸರಿಸಿಹ ತಣ್ಣೆಳಲ ತಂಪಿನಲಿ ತಂಗಿರುವೆನು”. ಆ ಕಾಲದಲ್ಲಿ ಈ ಸಾಲುಗಳು ಕೇವಲ ಬಾಯಿಪಾಠಕ್ಕಷ್ಟೇ ಸೀಮಿತವಾಗಿತ್ತು. ಇಂದು ಅದನ್ನು ಓದಿದರೆ ಅದರ ಅರ್ಥ ವೇದ್ಯವಾಗುತ್ತದೆ. ಗೆಳೆತನವೆಂಬ ಸುವಿಶಾಲ ವೃಕ್ಷ. ದಣಿದು ಬಂದ ತನುವಿಗೆ, ಮನಕ್ಕೆ ಮುದ ನೀಡುವ ಅದರ ಪ್ರೀತಿಯ ನೆಳಲು… ಎಷ್ಟೊಂದು ಆಪ್ಯಾಯಮಾನ.

ಗೆಳೆತನಕ್ಕೆ ಲಿಂಗಭೇದವಿಲ್ಲ, ಜಾತಿಯ ಅಡ್ಡಗೋಡೆಯಿಲ್ಲ, ಆಸ್ತಿ-ಅಂತಸ್ತುಗಳ ಬೇಲಿಯೂ ಇಲ್ಲ. ಮೇಲಿರುವ ವಾಕ್ಯವನ್ನೇ ಗಮನಿಸಿದರೆ, ಗೆಳೆತನವು ಒಬ್ಬನಿಗಿಂತ ಒಬ್ಬ ಮುಂದೋಡುವುದು ಅಲ್ಲ, ಅಥವಾ ಹಿಂಬಾಲಿಸುವುದು ಕೂಡ ಅಲ್ಲ. ಜತೆ ಜತೆಯಾಗಿ ಸಾಗುವ ಜೀವನ ಪಯಣದ ಪ್ರಾತಿನಿಧ್ಯವಿದು.

ಅದಿರಲಿ, ಹಲವಾರು ವರ್ಷಗಳಿಂದಲೇ ಪಾಶ್ಚಾತ್ಯ ದೇಶಗಳಲ್ಲಿ ಆಚರಣೆಯಲ್ಲಿದ್ದ ಗೆಳೆತನ ದಿನಾಚರಣೆಯು ಇತ್ತೀಚೆಗಿನ ದಿನಗಳಲ್ಲಿ ಭಾರತದಲ್ಲೂ ವೈಭವವನ್ನು ಪಡೆಯುತ್ತಿದೆ. ಆದರೆ, ವ್ಯಾಲೆಂಟೈನ್ ಡೇಗೆ ಇರುವಂತೆ ಈ ಗೆಳೆತನ ದಿನಕ್ಕೂ ಒಂದು ಇತಿಹಾಸ ಇರಬಹುದಲ್ಲವೇ? ಈ ಬಗ್ಗೆ ಕೆದಕಿದರೆ ಅಂಥದ್ದೇನೂ ಸಿಗುವುದಿಲ್ಲ. ನಾಗರಿಕ ಜಗತ್ತು ರೂಪುಗೊಂಡಂದಿನಿಂದಲೂ ಗೆಳೆತನಕ್ಕೆ ಒಂದು ಆತ್ಮೀಯ ಸಂಬಂಧ ಎಂಬ ಮೌಲ್ಯವನ್ನು ನೀಡಲಾಗಿರುವುದು ಇತಿಹಾಸ ಅಥವಾ ಪುರಾಣ ಕಥೆಗಳನ್ನು ನೋಡಿದರೆ ತಿಳಿಯುತ್ತದೆ. ಮಹಾಭಾರತದಲ್ಲಿ ಕರ್ಣ-ದುರ್ಯೋಧನರ ಮಿತ್ರತ್ವ, ಶ್ರೀಕೃಷ್ಣ-ಸುದಾಮರ ಅನ್ಯೋನ್ಯತೆ, ರಾಮಾಯಣದ ಶ್ರೀರಾಮ-ವಿಭೀಷಣರ ಸಖ್ಯ, ಶ್ರೀರಾಮ-ಸುಗ್ರೀವರ ತುಲ್ಯಾರಿ ಮಿತ್ರತ್ವ… ಇತ್ಯಾದಿಗಳು ಕಣ್ಮುಂದೆ ಸುಳಿಯುತ್ತದೆ.

ಆದರೆ ಗೆಳೆತನ ದಿನಾಚರಣೆಯ ಇತಿಹಾಸ ಎಲ್ಲಿ ಎಂದು ಹುಡುಕಿದರೆ, ಆಗಸ್ಟ್ ತಿಂಗಳ ಮೊದಲ ಭಾನುವಾರವನ್ನು ಗೆಳೆತನ ದಿನ ಎಂದು ಆಚರಿಸುವ ಪದ್ಧತಿಯು 1935ರಲ್ಲಿ ಚಾಲ್ತಿಗೆ ಬಂತು ಎಂಬ ಮಾಹಿತಿಯೊಂದು ದೊರೆಯುತ್ತದೆ. ಅಂದಿನಿಂದ ಅಮೆರಿಕದಲ್ಲಿ ಇದೊಂದು ವಾರ್ಷಿಕ ಉತ್ಸವದ ರೂಪದಲ್ಲಿ ಆಚರಿಸಲಾಗುತ್ತಿತ್ತು. ನಿಧಾನವಾಗಿ ಇದರ ಆಕರ್ಷಣೆಯು ದೇಶ-ವಿದೇಶಗಳಿಗೆ ಹರಡತೊಡಗಿತು, ಮತ್ತೀಗ ಭಾರತದಲ್ಲೂ ಅತ್ಯಂತ ಉತ್ಸಾಹದಿಂದ ಇದನ್ನು ಆಚರಿಸಲಾಗುತ್ತದೆ.

ಗೆಳೆತನ ದಿನಾಚರಣೆಯ ಜಾಗತಿಕ ದೂತನಾಗಿ “ವಿನ್ನೀ- ದಿ ಪೂ” ಎಂಬ, ಡಿಸ್ನಿ ಜಗತ್ತಿನಲ್ಲಿ ಖ್ಯಾತಿ ಗಳಿಸಿದ ಪ್ರೀತಿಯ ಕರಡಿ ಮರಿಯನ್ನು 1997ರಲ್ಲಿ ಅಮೆರಿಕವು ನೇಮಿಸಿತು. ನಮ್ಮ ಜೀವನವನ್ನು ಅರಳಿಸುವ, ಅದಕ್ಕೆ ಆತ್ಮೀಯ ಸ್ಪರ್ಶ ನೀಡುವ, ಮನೆ ಮನವನ್ನು ಉಲ್ಲಸಿತಗೊಳಿಸುವ ಮತ್ತು ನಮ್ಮ ಜೀವನ ಪಥಕ್ಕೊಂದು ಸರಿಯಾದ ದಾರಿ ಕಲ್ಪಿಸುವ ಮಿತ್ರರಿಗಾಗಿ ಈ ದಿನವನ್ನು ಅರ್ಪಿಸಲಾಗುತ್ತದೆ. ತಮ್ಮ ಮಿತ್ರರನ್ನು ಅತಿಯಾಗಿ ಮೆಚ್ಚಿಕೊಳ್ಳುವವರು, ನೆಚ್ಚಿಕೊಳ್ಳುವವರು, ತಮ್ಮ ಜೀವನಯಾನದಲ್ಲಿ ಮನವನ್ನು ಬೆಳಗುತ್ತಾ ಜತೆಯಲ್ಲೇ ಸಾಗುತ್ತಿರುವ ಆತ್ಮೀಯರೆಂಬ ದೇವತೆಗಳನ್ನು ಹೃದಯತುಂಬಿ ನೆನಪಿಸಿಕೊಳ್ಳುತ್ತಾ, ಅವರಿಗೆ ಕೃತಜ್ಞತೆಯನ್ನು ಅರ್ಪಿಸಲು ಒಂದು ದಿನವನ್ನು ಮೀಸಲಿಡಬೇಕೆಂಬ ಉತ್ಕಟಾಕಾಂಕ್ಷೆಯುಳ್ಳವರು ಈ ದಿನದ ಪರಿಪೂರ್ಣ ಪ್ರಯೋಜನ ಪಡೆದುಕೊಳ್ಳುತ್ತಾರೆ. ಮಿತ್ರರಿಗೆ ಧನ್ಯತಾಭಾವದ ಅಭಿನಂದನೆ ಸಲ್ಲಿಸಲು ಎಲ್ಲ ರೀತಿಯಲ್ಲೂ ಪ್ರಯತ್ನಿಸುತ್ತಾರೆ.

ಆದರೆ ಗೆಳೆತನವೆಂಬುದು ಎಷ್ಟೊಂದು ಪ್ರಬಲವಾದ ಒಂದು ಅನುಬಂಧ ಎಂದು ನಂಬುವವರಿಗೆ ಗೆಳೆತನವನ್ನು ಆಚರಿಸಲು ಪ್ರತ್ಯೇಕವಾದ ವಿಶೇಷ ದಿನವೇ ಬೇಕೆಂದಿಲ್ಲ ಎಂಬುದನ್ನೂ ನಾವಿಲ್ಲಿ ಗಮನಿಸಬೇಕು. ಆದರೂ ಯಾವುದೇ ಸಂಬಂಧವು ಎಷ್ಟೇ ಬಲವಾಗಿದ್ದರೂ, ಅದನ್ನು ಗುರುತಿಸಬೇಕಾಗುತ್ತದೆ, ಆ ಕಾರಣಕ್ಕಾಗಿ ಮಿತ್ರತ್ವದ ಸುಂದರ ಬಂಧವನ್ನು ಗುರುತಿಸಲು, ನಿಮ್ಮ ಕಷ್ಟ ಸುಖಗಳನ್ನು ಹಂಚಿಕೊಳ್ಳಲು ಗೆಳೆತನ ದಿನಾಚರಣೆಯು ಪ್ರಸ್ತುತವಾಗುತ್ತದೆ.

ಒಮ್ಮೊಮ್ಮೆ ನಾವು ಜೀವನದಲ್ಲಿ ಎಷ್ಟೊಂದು ‘ಪುರುಸೊತ್ತಿಲ್ಲದವರು’ ಆಗುತ್ತೇವೆಂದರೆ ಮಿತ್ರರ ಮೇಲಿನ ಸಲುಗೆಯಿಂದಲೋ ಏನೋ… ಅವರನ್ನು ಕಡೆಗಣಿಸುತ್ತೇವೆ. ಇಂತಹ ಪರಿಸ್ಥಿತಿಯಲ್ಲಿ ಗೆಳೆತನ ದಿನವೆಂಬುದು ಜೀವನದಲ್ಲಿ ಮಿತ್ರರ ಮಹತ್ವವನ್ನು, ಅನಿವಾರ್ಯತೆಯನ್ನು ನಮಗೆ ನೆನಪಿಸುತ್ತದೆ ಮತ್ತು ಮುಂದೆ ಯಾವತ್ತಿಗೂ ನಮಗೆ ಈ ಲೋಕದಲ್ಲೇ ದೇವರು ನೀಡಿದ ವಿಶೇಷ ಉಡುಗೊರೆಯಂತಿರುವ ಜೀವಗಳನ್ನು ನಿರ್ಲಕ್ಷಿಸದಂತೆ ಎಚ್ಚರಿಸುತ್ತದೆ.

ಹಾಗಾಗಿ ನಿಮ್ಮ ಬ್ಯುಸಿ ಜೀವನದಲ್ಲಿ ಒಂದಷ್ಟು ಸಮಯವನ್ನು ಕಿತ್ತು ತೆಗೆದು, ಮಿತ್ರರಿಗಾಗಿ ಕೊಡಿ. ಅವರೊಂದಿಗೆ ಈ ಗೆಳೆತನ ದಿನದಂದು ಅಮೂಲ್ಯ ಸಮಯವನ್ನು ಕಳೆಯಿರಿ. ಯಾಕೆಂದರೆ ಈ ಕಾಲವೆಂಬುದು ಎಲ್ಲಿ ಕಳೆದುಹೋಗುತ್ತದೆ ಎಂಬುದು ನಮಗೆಂದಿಗೂ ತಿಳಿಯುವುದಿಲ್ಲ. ಒಂದು ಸಣ್ಣ ‘ಥ್ಯಾಂಕ್ಸ್’ ಹೇಳಲು ಕೂಡ ಸಮಯ ದೊರೆಯದ ಪರಿಸ್ಥಿತಿ ಬರಬಹುದಾದ್ದರಿಂದ ಇಂದೇ ಗೆಳೆಯರಿಗೊಂದು ಥ್ಯಾಂಕ್ಸ್ ಸಂದೇಶ ಕಳುಹಿಸಿ…

ಗೆಳೆತನ ಚಿರಾಯುವಾಗಲಿ…

4 COMMENTS

 1. ಎಲ್ಲೊ ಹುಟ್ಟಿ ಎಲ್ಲೊ ಬೆಳೆಯುವ ಬಿಜದಂತೆ ಈ ಸ್ನೇಹ. ಎಲ್ಲೋ ಯಾವುದೋ ಮೂಲೆಯಲ್ಲಿ ಕುಳಿತವ ಸಡನ್ನಾಗಿ ಎದ್ದು ಬಂದು ಎಕನಾಮಿಕ್ಸ್‌ನ ಜಾನ್ ಮೆಯನಾರ್ಡ್ ಕೆನ್ಸ್‌ನ ಇಕ್ವಿಲಿಬಿರಿಯಂ ಥಿಯರಿಯನ್ನು ಅಡಲ್ಟ್ ಜೋಕ್‌ನೊಂದಿಗೆ ಹೇಳಿಬಿಟ್ರೆ ಎಂತಾ ಪುಣ್ಯಾತ್ಮ ಆದರೂ ಈ ಗಿರಾಕಿ ನಮ್ಮ ಕೆಟಗರಿ. ಅಂತಾ ಕೈ ಚಾಚಿ ಬನ್ರಿ ಹೊಗ್ರಿಯಿಂದ ಬಾ ಹೋಗು ಕೊನೆಗೆ ಬಾರಲೆ ಅದೇನ.. ಹಳ್ಳ ಸಿಕ್ಕಾವರಂಗ್ ಬರ್ತಿಯಲ್ಲ ಅನ್ನೊದು ಇದೆಯಲ್ಲ. ಅದೇ ಮಿತ್ರತ್ವ ಮರ ಬೆಳೆಯೊ ಸ್ಟೈಲ್ ಅಲ್ವೆನ್ರಿ..

  ಈ ಗೆಳೆತನ ಅನ್ನೊದು ಇದೇಯಲ್ಲ ಬಿಟ್ಟು ಬಿಡಲಾರದಂತಹದು ಒಂದು ಸಲ ಲೈಪ್‌ಲ್ಲಿ ಎಂಟ್ರಿಯಾದರೆ ಮುಗಿತು. ಮರೇತರೂ ಮರೆಯಲಾರ ನಿನ್ನನ್ನ.

  ಜಾತಿ -ಮತ ಬಡವ-ಬಲ್ಲಿದ ಬಿಸಾಕ ಬಿಡ್ತದೆ ಎತ್ಲಾಗ ಅಂತಾ ಇನ್ನೂ ಗೊತ್ತಲ್ಲ ಅಂತಾ ಒಂದು ಚೆಂದದ ಸಂಬಂದ ನೆನಪಿಟ್ಟುಕೊಳ್ಳುವುದಕ್ಕೆ ಒಂದು ದಿನಾ ಸಾಕಾ..

  ಜಬ್ ಜಿಂದಗಿ ಮೆಂ ಗಮ್ ಸತಾಯೇ ತೊ
  ಯಾದ್ ಕರನಾ ಮುಝೆ
  ಅಗರ್ ಹೊ ಸಕೆ ತೊ
  ಬೀತೆ ಹುಯೆ ಎಕ್ ಹಸಿ ಫಲ್
  ಕಹಿಂ ತೊ ಹೋಗಾ …

 2. ಸತೀಶ್,

  ಮಿತ್ರತ್ವದ ಮರ ಬೆಳೆಯುವ ಮಾದರಿಯನ್ನು ಚೆಂದಾಗಿ ಚಿತ್ರಿಸಿದ್ದೀರಿ. ನಿಮ್ಮ ಕಾಳಜಿಯೂ ಹೌದು. ಯಾವುದೇ ಅಡ್ಡಗೋಡೆಗಳು ಏನೂ ಮಾಡಲಾಗದ ಇಂತಹ ಆತ್ಮೀಯ ಬಂಧವನ್ನು ನೆನಪಿಸಿಕೊಳ್ಳಲು ಒಂದು ದಿನ ಮಾತ್ರ ಸಾಕಾ? ಎಂಬುದು ಚಿಂತಿಸಬೇಕಾದ ವಿಷಯ.

  ಬರ್ತಾ ಇರಿ, ಬರೀತಾ ಇರಿ. 🙂

LEAVE A REPLY

Please enter your comment!
Please enter your name here