ಮೂಡಲಪಾಯದ ನಾಡಲ್ಲಿ ಪಡುವಲಪಾಯದ ಯಕ್ಷಗಾನದ ‘ದೀವಿಗೆ’ ಬೆಳಕು

0
2563

ಮೂಡಲಪಾಯ ರಂಗಪ್ರಕಾರದ ಸಾಧಕ ಜಿಲ್ಲೆಗಳಲ್ಲಿ ಒಂದಾದ ತುಮಕೂರಿನಲ್ಲಿ ಇತ್ತೀಚೆಗೆ ಯಕ್ಷಗಾನದ ಚೆಂಡೆ-ಮದ್ದಳೆ ಅನುರಣಿಸತೊಡಗಿದೆ. ದಕ್ಷಿಣ ಕನ್ನಡ – ಉಡುಪಿ ಜಿಲ್ಲೆಯಿಂದ ಬಂದು ಇಲ್ಲಿ ನೆಲೆಸಿದವರಷ್ಟೇ ಅಲ್ಲ, ಯಕ್ಷಗಾನದ ಗಂಧ ಗಾಳಿಯೇ ಇರದ ತುಮಕೂರಿನ ಮಂದಿಯೂ ಈಗ ಯಕ್ಷಗಾನದತ್ತ ಆಕರ್ಷಿತರಾಗಿದ್ದಾರೆ. ಇಂತಹಾ ನೆಲದಲ್ಲಿ, ಮಕ್ಕಳ ಮೈಮರೆಸುವ, ಕೆರಳಿಸುವ ಮೊಬೈಲ್ ಕಾಟದ ಮಧ್ಯೆ ಪುಟಾಣಿಗಳ ಮನವರಳಿಸುವ ಹೊಸ ವಿಧಾನವೂ ಅಲ್ಲಿನ ಪೋಷಕರಿಗೆ ಗೊತ್ತಾಗಿಬಿಟ್ಟಿದೆ.

ಹೊಸ ಪೀಳಿಗೆಯನ್ನು ತನ್ನತ್ತ ಆಕರ್ಷಿಸುತ್ತಾ, ಆಧುನಿಕ ಸಾಧ್ಯತೆಗಳಲ್ಲಿ ಕಾಳನ್ನು ಹೆಕ್ಕಿಕೊಂಡು, ಜೊಳ್ಳನ್ನು ಹೊರಹಾಕುತ್ತಾ ಬೆಳೆಯುತ್ತಿರುವ ಮತ್ತು ಕೊರೊನಾ ಕಾಲದಲ್ಲಿಯೂ ತನ್ನ ಇರುವಿಕೆಯನ್ನು ಜಗದಗಲ ತೋರಿಸಿಕೊಟ್ಟ ಏಕೈಕ ರಂಗ ಕಲಾ ಪ್ರಕಾರ ಯಕ್ಷಗಾನ. ಕೇರಳ ಗಡಿಯ ಕಾಸರಗೋಡಿನಿಂದಾರಂಭಿಸಿ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಮುಂತಾದ ಮಲೆನಾಡಿನ ಜಿಲ್ಲೆಗಳ ಜೊತೆಗೆ ರಾಜಧಾನಿ ಬೆಂಗಳೂರು, ಸಾಂಸ್ಕೃತಿಕ ರಾಜಧಾನಿ ಮೈಸೂರಿನ ಬಳಿಕ, ಈಗ ಮೂಡಲಪಾಯ ನಾಡಾಗಿರುವ ಬಯಲುಸೀಮೆಯಲ್ಲಿಯೂ ಪಡುವಲಪಾಯ ಯಕ್ಷಗಾನವು ತಳವೂರುತ್ತಿದೆ.

ಯಕ್ಷಗಾನ ಕೇವಲ ಮನರಂಜನೆಯ ಮಾಧ್ಯಮವಾಗದೆ, ಆರಾಧನಾ ಕಲೆಯಾಗಿ ಜನ ಜಾಗೃತಿಯ ಸಂದೇಶದೊಂದಿಗೆ, ಪೌರಾಣಿಕ ಜ್ಞಾನವನ್ನು ಪಸರಿಸುವಲ್ಲಿ ಮಹತ್ತರ ಕೊಡುಗೆ ನೀಡುತ್ತಾ ಬಂದಿದೆ. ಈ ಕಾಲದ ಅಗತ್ಯವಾಗಿರುವ ಕನ್ನಡ ಭಾಷಾ ಜ್ಞಾನವನ್ನು ವೃದ್ಧಿಸಲು, ಬುದ್ಧಿಯ ವಿಕಸನಕ್ಕೆ, ಏಕಾಗ್ರತೆಗೆ, ಪ್ರತ್ಯುತ್ಪನ್ನಮತಿಗೆ ಚೈತನ್ಯ ನೀಡುವಲ್ಲಿಯೂ ಈ ಕಲೆಯು ಆಧಾರ ಸೆಲೆಯಾಗಬಲ್ಲುದು ಎಂಬ ವಿಚಾರವು ಬಹುತೇಕ ಪೋಷಕರ ಮನದಾಳಕ್ಕೆ ಹೊಕ್ಕಿದೆ. ನಗರ ಪ್ರದೇಶದ ಕೆಲವು ಮಕ್ಕಳು ಪೋಷಕರ ಔದಾಸೀನ್ಯದಿಂದಾಗಿಯೋ ಅಥವಾ ಶಾಲೆಯಿಲ್ಲದ ಮಕ್ಕಳನ್ನು ಸುಧಾರಿಸುವುದು ಹೇಗೆಂಬುದರ ಬಗ್ಗೆ ಅವರಿಗೆ ಅರಿವಿಲ್ಲದೆಯೋ, ಮೊಬೈಲ್ ಗೇಮ್‌ಗಳ ದಾಸರಾಗುತ್ತಿದ್ದರೆ, ಸ್ಮಾರ್ಟ್ ಸಿಟಿಯಾಗುತ್ತಿರುವ ತುಮಕೂರಿನ ಕೆಲವು ಪೋಷಕರು ಮತ್ತಷ್ಟು ಸ್ಮಾರ್ಟ್ ಆಗಿದ್ದಾರೆ.

ಈ ಸ್ಫರ್ಧಾತ್ಮಕ ಕಾಲದಲ್ಲಿ ಮಕ್ಕಳಿಗೆ ಅಗತ್ಯವಿರುವ ಮನೋವಿಕಸನ, ಏಕಾಗ್ರತೆ, ದೈಹಿಕ ವ್ಯಾಯಾಮ, ಸಮಚಿತ್ತತೆ, ಜ್ಞಾನದ ವೃದ್ಧಿ ಹಾಗೂ ಚಿಂತನೆಗೆ ಗ್ರಾಸವೊದಗಿಸುವುದರಿಂದ ಹಿಡಿದು, ಕನ್ನಡದ ಭಾಷಾ ಜ್ಞಾನವನ್ನೂ ವೃದ್ಧಿಸಬಲ್ಲ ಸಾಮರ್ಥ್ಯವಿರುವ ಯಕ್ಷಗಾನಕ್ಕೆ ಅವರು ಮಾರು ಹೋಗಿದ್ದಾರೆ. ತಾವಷ್ಟೇ ಆಕರ್ಷಿತರಾಗಿದ್ದಲ್ಲ, ಮಕ್ಕಳಿಗೂ ಈ ವ್ಯಸನವನ್ನು ಹಚ್ಚಿಬಿಟ್ಟರೆ ಅವರ ಭವಿಷ್ಯಕ್ಕೆ ಪೂರಕ ಎಂದು ಮನಗಂಡವರೇ, ತುಮಕೂರಿನ ಯಕ್ಷದೀವಿಗೆ ಎಂಬ ನೋಂದಾಯಿತ ಟ್ರಸ್ಟ್ ನಡೆಸುತ್ತಿರುವ ಯಕ್ಷಗಾನ ತರಗತಿಗೆ ಅವರನ್ನು ಸೇರಿಸಿಯೇ ಬಿಟ್ಟರು. ಅಂದರೆ, ಮಕ್ಕಳ ಮನವನ್ನು ಕೆರಳಿಸುವ ಮೊಬೈಲ್ ಗೇಮ್‍ಗಳ ಆಟಾಟೋಪ ನಡುವೆ, ಬಿಡುವಿನ ಕಾಲದಲ್ಲಿ ಪುಟಾಣಿಗಳ ಮನವರಳಿಸುವ ವಿನೂತನ ದಾರಿಯೊಂದನ್ನು ಅಲ್ಲಿನ ಪೋಷಕರು ಕಂಡುಕೊಂಡಿದ್ದಾರೆ.

ಪರಿಣಾಮ? ಈಗಾಗಲೇ ಹಲವು ಯಕ್ಷಗಾನ ಪ್ರದರ್ಶನಗಳನ್ನು ನೀಡಿರುವ ಒಂದರಿಂದ ಎಂಟನೇ ತರಗತಿಯೊಳಗಿನ ಈ ಮಕ್ಕಳು, ಸಂವಹನ ಕೌಶಲ್ಯವನ್ನು ಒರೆಗೆ ಹಚ್ಚುವ, ಯಕ್ಷಗಾನದ ಒಂದು ಅಂಗವಾಗಿರುವ ‘ತಾಳಮದ್ದಳೆ’ಯನ್ನು ಶ್ರದ್ಧೆಯಿಂದ ಅಭ್ಯಸಿಸಿ ಪ್ರದರ್ಶಿಸಿದರು. ರಾಷ್ಟ್ರಕವಿ ಕುವೆಂಪು ಅವರು ಮಹಾಭಾರತದ ಏಕಲವ್ಯನ ಪಾತ್ರಚಿತ್ರಣವನ್ನು ತೆರೆದಿಟ್ಟ ‘ಬೆರಳ್‌ಗೆ ಕೊರಳ್’ ನಾಟಕ ಆಧಾರಿತವಾಗಿ, ಯಕ್ಷಗಾನ ಪ್ರಸಂಗಕರ್ತರೂ, ಶಿಕ್ಷಣವೇತ್ತರೂ ಆಗಿರುವ ಡಾ.ಚಂದ್ರಶೇಖರ ದಾಮ್ಲೆ ಅವರು ರಚಿಸಿದ ಪ್ರಸಂಗ ‘ಏಕಲವ್ಯ’. ಅರ್ಥ ಸಹಿತವಾಗಿ ಅವರೇ ಕಲಿಕಾರ್ಥಿಗಳಿಗಾಗಿ ಇದನ್ನು ಚೆಂದದಲ್ಲಿ ರೂಪಿಸಿಕೊಟ್ಟಿದ್ದಾರೆ. ಕಲಿಕೆಗೆ ಏಕಾಗ್ರತೆಯ ಮಹತ್ವವನ್ನೂ, ನೈಪುಣ್ಯ ಸಾಧಿಸಲು ಜಾತಿ-ವರ್ಗದ ಭೇದವಿಲ್ಲ ಎಂದು ಸಂದೇಶವನ್ನೂ ಸಾರುವ ಕಥಾನಕವಿದು.

ಯಕ್ಷಗಾನ ಪ್ರದರ್ಶನವಿರಲಿ ಅಥವಾ ವೇಷಭೂಷಣಗಳಿಲ್ಲದೆ ಕುಳಿತು ಮಾತನಾಡುವ ತಾಳಮದ್ದಳೆಯೇ ಇರಲಿ; ಇಲ್ಲಿ ಆಶು ವಾಕ್ಪಟುತ್ವವೇ ಪ್ರಧಾನ. ಸಿನಿಮಾ ಅಥವಾ ನಾಟಕದಂತೆ ನಿರ್ದಿಷ್ಟ ಸಂಭಾಷಣೆಯನ್ನೇ ಉಪಯೋಗಿಸಬೇಕೆಂಬ ಸ್ಕ್ರಿಪ್ಟ್ ಯಕ್ಷಗಾನದಲ್ಲಿ ಇರುವುದಿಲ್ಲ. ಹಾಡನ್ನು ಆಲಿಸುತ್ತಲೇ, ಕಥೆಯನ್ನು ವಿಸ್ತರಿಸುವುದರೊಂದಿಗೆ, ಸಾಂದರ್ಭಿಕವಾಗಿ ಓದಿನಿಂದಲೋ, ಅನುಭವದಿಂದಲೋ ಸಂಪಾದಿಸಿದ ಜ್ಞಾನದ ಬೋಧನೆಯನ್ನು, ಬುದ್ಧಿ ಪ್ರಚೋದನೆಯನ್ನೂ ಮಾಡಿ, ಪ್ರೇಕ್ಷಕರಿಗೆ ಅನುಭೂತಿ ಒದಗಿಸುವುದು ಕಲಾವಿದರ ಉದ್ದೇಶ. ಆದರೆ, ಮಕ್ಕಳಲ್ಲವೇ? ಆರಂಭದಲ್ಲಿ, ಕಥೆಯ ಮಾರ್ಗ ತಪ್ಪಿ ಆಚೀಚೆ ಹೋಗದಂತೆ, ಪದ್ಯ ಆಧಾರಿತವಾಗಿ ಹಾಕಿಕೊಟ್ಟ ರೇಖೆಯೊಳಗೇ ಸಂಚರಿಸಬೇಕಾಗುತ್ತದೆ. ಡಾ.ದಾಮ್ಲೆಯವರು ಪ್ರಸಂಗದಲ್ಲಿ ಹಾಡುಗಳೊಂದಿಗೆ, ಅದರ ಅರ್ಥವನ್ನೂ (ಸಂಭಾಷಣೆ) ಬರೆದುಕೊಟ್ಟಿದ್ದು ಕಲಿಯುವ ಮಕ್ಕಳಿಗೆ ಅನುಕೂಲವೇ ಆಯಿತು.

ತುಮಕೂರು ಎಸ್.ಎಸ್.ಪುರಂನಲ್ಲಿರುವ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಫೆ.14ರಂದು ಸಂಜೆ ನಡೆದ ಈ ಹೊಸ ಪ್ರಯತ್ನದಲ್ಲಿ ಮಕ್ಕಳೂ ಅಷ್ಟೇ ನಿಷ್ಠೆಯಿಂದ ತೊಡಗಿಸಿಕೊಂಡರು. ಹಿಮ್ಮೇಳದಲ್ಲಿ ಬೆಂಗಳೂರಿನ ಅರ್ಜುನ್ ರಾವ್ ಕೊರ್ಡೇಲು, ವೇಣು ಮಾಂಬಾಡಿ, ಅವಿನಾಶ್ ಬಿ., ಚಕ್ರತಾಳದಲ್ಲಿ ಮುರಳಿ ಬಾಯಾಡಿ ನೆರವಾಗಿದ್ದರು. ಮುಮ್ಮೇಳದಲ್ಲಿ ದ್ರೋಣನ ಅರ್ಥಧಾರಿಯಾಗಿ ಲಹರಿ ಟಿ.ಜೆ (8ನೇ ತರಗತಿ), ಅಶ್ವತ್ಥಾಮನಾಗಿ ಸಂವೃತ ಶರ್ಮಾ ಎಸ್.ಪಿ. (4ನೇ ತರಗತಿ), ಶಬರನಾಗಿ ಮಿಹಿರ್ ಭಟ್ ಎಸ್. (5ನೇ ತರಗತಿ), ಏಕಲವ್ಯ – ಖುಷಿ ಶರ್ಮಾ ಎಸ್.ಪಿ. (7ನೇ ತರಗತಿ), ಧರ್ಮರಾಯ – ವೈಭವ್ ಸಾಳುಂಕೆ (8ನೇ ತರಗತಿ), ಭೀಮ – ಸಾತ್ವಿಕ್ ನಾರಾಯಣ ಭಟ್ ಕೆ. (4ನೇ ತರಗತಿ), ಕೌರವ – ಜನ್ಯಾ ಟಿ.ಜೆ. (5ನೇ ತರಗತಿ), ಅರ್ಜುನನಾಗಿ ಧನುಷ್ ಓಂಕಾರ್ (8ನೇ ತರಗತಿ), ಬೇಡನಾಗಿ ಅಚಿಂತ್ಯ ಪಂಡಿತ್ ಟಿ.ಪಿ. (3ನೇ ತರಗತಿ), ದ್ರುಪದನಾಗಿ ಇಂಚರಾ ಎಸ್.ಎಸ್. (4ನೇ ತರಗತಿ), ದೂತನಾಗಿ ನಿಶಾಂತ್ ಓಂಕಾರ್ (5ನೇ ತರಗತಿ), ಶಬರಿಯಾಗಿ ಮನಸ್ವೀ ಭಟ್ ಎಂ. (6ನೇ ತರಗತಿ) – ಎಲ್ಲರೂ ಚೊಕ್ಕದಾಗಿ ಅರ್ಥ ಹೇಳಿ, ಹೊಸ ರಂಗ ಕಲೆಯನ್ನು ಅಪ್ಪಿಕೊಂಡರು ಮತ್ತು ಬೆಳೆಸುವ ಸಂಕಲ್ಪ ಶಕ್ತಿಯನ್ನೂ ಪ್ರದರ್ಶಿಸಿದರು. ತಾಳಮದ್ದಳೆಯಲ್ಲಿ ಮಕ್ಕಳ ಶ್ರದ್ಧೆ ಹಾಗೂ ಅವರನ್ನು ರೂಪುಗೊಳಿಸಿದವರ ಶ್ರಮವಂತೂ ಎದ್ದು ಕಾಣುತ್ತಿತ್ತು.

ಇಲ್ಲಿ ನೋಡಿ:

ಈ ಪುಟಾಣಿಗಳು ಅರ್ಥಗಾರಿಕೆಯನ್ನು ಪ್ರಸ್ತುತಪಡಿಸಿದ ವೈಖರಿ ಜನಮೆಚ್ಚುಗೆಗೂ ಪಾತ್ರವಾಗಿದೆ. ತಡವರಿಸದೆ, ಆತ್ಮವಿಶ್ವಾಸದೊಂದಿಗೆ ಕನ್ನಡದ ಸ್ಪಷ್ಟ ಉಚ್ಚಾರದೊಂದಿಗೆ, ಕೆಲವರಂತೂ ಅಭಿನಯಪೂರ್ವಕವಾಗಿ ಅಳುಕಿಲ್ಲದೆಯೇ ತಮ್ಮ ಪಾತ್ರವನ್ನು ಚಿತ್ರಿಸಿದರು. ಬಾಯಿ ಪಾಠವಾದರೂ ಸಹಜತೆ ಇತ್ತು, ಭಾವನೆಗಳೂ ವ್ಯಕ್ತವಾದವು. ಒಟ್ಟಾರೆ ಕಾರ್ಯಕ್ರಮದಲ್ಲಿ ಮಕ್ಕಳ ಶ್ರದ್ಧೆಯ ಜೊತೆ, ಕಲಿಸಿದವರ ಪರಿಶ್ರಮವೂ ಎದ್ದು ಕಾಣಿಸುತ್ತಿತ್ತು.

ಕಳೆದ ಮೂರ್ನಾಲ್ಕು ವರ್ಷಗಳಿಂದ ತುಮಕೂರಿನಲ್ಲಿ ಯಕ್ಷಗಾನದ ಹೆಜ್ಜೆ-ಗೆಜ್ಜೆ ನಿನಾದವನ್ನು ಜೋರಾಗಿ ಕೇಳಿಸುವಂತೆ ಮಾಡಿದವರು, ಮಾಡುತ್ತಿರುವವರು ಉದ್ಯೋಗನಿಮಿತ್ತವಾಗಿ ದಕ್ಷಿಣ ಕನ್ನಡದಿಂದ ತುಮಕೂರಿಗೆ ಬಂದು, ಅಲ್ಲಿನವರೇ ಆಗಿಬಿಟ್ಟಿರುವ ಸಿಬಂತಿ ಪದ್ಮನಾಭ – ಆರತಿ ಪಟ್ರಮೆ ದಂಪತಿ. ಇವರಿಬ್ಬರೂ ಹವ್ಯಾಸಿ ಯಕ್ಷಗಾನ ಕಲಾವಿದರೂ ಹೌದು, ವೃತ್ತಿಯಲ್ಲಿ ಉಪನ್ಯಾಸಕರೂ ಹೌದು. ಲಾಕ್‌ಡೌನ್ ದಿನಗಳಲ್ಲಿ ಯಕ್ಷಗಾನ ಪೂರ್ವರಂಗದ ನಾಟ್ಯವನ್ನು ಕಲಿಸುತ್ತಲೇ ವಿಡಿಯೊ ಮೂಲಕ ಅಂತರಜಾಲದಲ್ಲಿಯೂ ಪಸರಿಸಿ, ಕಲಿಕೆಯ ಆಸಕ್ತಿಯುಳ್ಳವರಿಗೆ ನೆರವಾದವರು ಇವರು. ಮೂಡಲಪಾಯ ನಾಡಿನ ಮಕ್ಕಳನ್ನೇ ಸೇರಿಸಿ, ತಂಡ ಕಟ್ಟಿ, ಅವರಿಂದಲೇ ಪಡುವಲಪಾಯ ಯಕ್ಷಗಾನ ಪ್ರದರ್ಶನಗಳನ್ನೂ ಮಾಡಿಸಿ ಸೈ ಅನ್ನಿಸಿಕೊಂಡಿದ್ದಾರೆ.

ಯಕ್ಷಗಾನೇತರ ಮಣ್ಣಿನ ಮಕ್ಕಳಿಂದಲೇ ಯಕ್ಷಗಾನವನ್ನು, ಅಷ್ಟೇ ಅಲ್ಲದೆ ಅದರ ವಾಚಿಕ ಪ್ರಾಧಾನ್ಯವಿರುವ ಕವಲು ಆಗಿರುವ ತಾಳಮದ್ದಳೆಯನ್ನು ಮಾಡಿಸಿರುವುದು ಐತಿಹಾಸಿಕ ಹೆಜ್ಜೆಯೇ ಸರಿ. ಯಕ್ಷಗಾನಕ್ಕೆ ಹೊಸ ಪ್ರೇಕ್ಷಕರನ್ನೂ, ಹೊಸ ಕಲಾವಿದರನ್ನೂ ಪರಿಚಯಿಸುವ ಪ್ರಯತ್ನ ಮಾಡಿಸುವ ಮೂಲಕ ಈ ನಾಡಿನಲ್ಲಿ ಹೊಸ ಸಾಧ್ಯತೆಯ ದೀವಿಗೆ ಹಚ್ಚಿದ್ದಾರೆ.

ಕರಾವಳಿಯಿಂದ ಬಂದವರಿಗಂತೂ ಯಕ್ಷಗಾನದ ವಾಂಛೆ ಇರುತ್ತದೆ. ಆದರೆ, ಅದರ ಬಗ್ಗೆ ಏನೂ ತಿಳಿಯದವರಿಗೂ ಯಕ್ಷಗಾನದ ರುಚಿ ಹತ್ತಿಸಿ, ಅವರನ್ನು ಸಿದ್ಧಪಡಿಸುತ್ತಿರುವ ಈ ಯಕ್ಷ-ದಂಪತಿಯ ಸೇವೆ ಅನನ್ಯವೇ ಸರಿ. ಊರವರು ಕೂಡ ಈ ಮಕ್ಕಳ ಯಕ್ಷಗಾನ ಪ್ರದರ್ಶನಕ್ಕೆ ಮಾರುಹೋಗಿದ್ದಾರೆ, ಪ್ರೋತ್ಸಾಹವನ್ನೂ ನೀಡುತ್ತಿದ್ದಾರೆ. ಇಷ್ಟೇ ಅಲ್ಲ, ತಮ್ಮ ಮಕ್ಕಳಿಗೂ ಕಲಿಸಿಕೊಡಿ ಎಂದು ದುಂಬಾಲು ಬೀಳಲಾರಂಭಿಸಿರುವುದು ಮಕ್ಕಳಲ್ಲಿ ಬುದ್ಧಿಯನ್ನೂ, ಸಂಸ್ಕಾರವನ್ನೂ ಬೆಳೆಸುವ ಈ ಕಲೆಯ ಆಕರ್ಷಣೆಯೆಷ್ಟಿದೆ ಎಂಬುದರ ಸಂಕೇತ.

ಆರತಿ ಪಟ್ರಮೆ ಅವರು ತಮ್ಮ ವೃತ್ತಿಯ ವ್ಯಸ್ತತೆಯ ನಡುವೆಯೇ ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯೆಯೂ ಆಗಿ ಈಗಾಗಲೇ ಅಕಾಡೆಮಿಯ ಕಾರ್ಯಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಪತಿ ಸಿಬಂತಿ ಪದ್ಮನಾಭ ಅವರು ಮಡದಿಯ ನೆರವಿಗೆ ನಿಂತು ಪ್ರೋತ್ಸಾಹಿಸುತ್ತಲೇ ಬಂದಿದ್ದಾರೆ. ಇವರ ಇಬ್ಬರು ಮಕ್ಕಳು ಕೂಡ ಯಕ್ಷಗಾನ ನಾಟ್ಯ ಕಲಿತಿದ್ದಾರೆ.

ಯಾವ ರೀತಿ ಯಕ್ಷಗಾನವು ಸರ್ವಾಂಗ ಸುಂದರ ಕಲೆಯೋ, ಅದು ಮಕ್ಕಳ ಮನಸ್ಸನ್ನರಳಿಸಿ, ಪ್ರತಿಭೆಯನ್ನು ಹೊರತೆಗೆದು, ಉತ್ತಮ ಸಂಸ್ಕಾರ ಬೆಳೆಸುವ ಮತ್ತು ಸರ್ವಾಂಗೀಣ ಬೌದ್ಧಿಕ ವಿಕಸನಕ್ಕೆ ಪೂರಕವಾಗುವ ಕಲೆ ಎಂಬುದನ್ನು ಮನಗಂಡ ‘ಯಕ್ಷ ದೀವಿಗೆ’ ತಂಡವು, ಯಕ್ಷಗಾನದ ಗಾಳಿ ಗಂಧವು ಮತ್ತಷ್ಟು ಪಸರಿಸುವಂತೆ ಮಾಡುವಲ್ಲಿ ಶ್ರಮಿಸುತ್ತಿದ್ದಾರೆ. “ಪಡೆವುದೆಲ್ಲಂ ಕೊಡುವುದಕ್ಕಲ್ತೆ ಆರ್ಯ? ಮೇಣ್ ಪೂರ್ಣಮಂ ಕೊಡದೆ ಪಡೆದೆವೆಂತು ಪೂರ್ಣಮಂ?” – ಕುವೆಂಪು ನಾಟಕದ ಸಾಲುಗಳು ಇಲ್ಲಿಗೆ ಪ್ರಸ್ತುತ. ತಮ್ಮಲ್ಲಿರುವ ಕಲೆಯನ್ನು ಮಕ್ಕಳಿಗೆ ಪೂರ್ಣವಾಗಿ ಕೊಡುವುದೇ ಈ ಯಕ್ಷ ದಂಪತಿಯ ಉದ್ದೇಶ.

ಗಾಯನ, ವಾದನ, ನೃತ್ಯ, ಅಭಿನಯ, ವೇಷಭೂಷಣ, ವಾಚಿಕ ವೈಭವವುಳ್ಳ ಸರ್ವಾಂಗ ಸುಂದರ ಕಲೆಯೊಂದು ಯಕ್ಷಗಾನೇತರ ನಾಡಿನ ಜನರನ್ನು ಸೆಳೆದುಕೊಂಡ ಪರಿಯಿದು.

My article Published in Prajavani on 19 Feb 2021

LEAVE A REPLY

Please enter your comment!
Please enter your name here