ಒಂದ್ನಿಮಿಷ ಪ್ಲೀಸ್…!

0
685

ಈಗ್ಬಂದೆ ಒಂದ್ನಿಮಿಷ, ಒಂದ್ನಿಮಿಷ ಕೂತ್ಕೊಳ್ಳಿ ಮುಂತಾದ ಪದಸಮೂಹಗಳೊಂದಿಗೆ ‘ಒಂದು ಕ್ಷಣ’ ಅನ್ನೋ ಶಬ್ದವನ್ನು ಎಷ್ಟು ಸುಲಭವಾಗಿ ಹೇಳಿಬಿಡುತ್ತೇವಲ್ಲಾ?

ಜೀವನದಲ್ಲಿ ನಾವು ಯಾವುದೇ ಒಂದು ನಿರ್ಧಾರ ಕೈಗೊಳ್ಳಬೇಕಿದ್ದರೆ, ಆ ಒಂದು ಕ್ಷಣವೇ ಎಷ್ಟೊಂದು ಮುಖ್ಯವಾಗಿಬಿಡುತ್ತದೆ! ಆ ಕ್ಷಣದ ನಿರ್ಧಾರ ತಪ್ಪಿದರೆ ಒಂದೋ ಮುಂದೆ ಪಶ್ಚಾತ್ತಾಪ ಪಡಬೇಕಾಗುತ್ತದೆ, ಅಥವಾ ಆ ಕ್ಷಣದಲ್ಲಿ ತೆಗೆದುಕೊಂಡ ನಿರ್ಧಾರವನ್ನು ಜೀವನವಿಡೀ ಮನಸಾ ಸ್ಮರಿಸಿಕೊಳ್ಳುತ್ತಿರಬಹುದು.

ಇಂಥ ಈ ‘ಕಾಲ’ನ ಆ ಕ್ಷಣಕ್ಕೆ ಎಷ್ಟೊಂದು ಮಹತ್ವವಿದೆ. ಒಂದು ಕ್ಷಣ ತಡವಾದರೆ ರೈಲೋ, ವಿಮಾನವೋ, ಬಸ್ಸೋ ಕೈತಪ್ಪಿಹೋಗಬಹುದು.

ಅದೇ ರೀತಿ ಸಂಬಂಧಗಳೂ. ಅತ್ಯಂತ ಆತ್ಮೀಯರಾದಾಗ ಸಲುಗೆ ಸಹಜವಾಗಿಯೇ ಬೆಳೆಯುತ್ತದೆ. ಆ ಸಲುಗೆಯಿಂದಾಗಿಯೇ ಲೋಕಾಭಿರಾಮ ಹರಟೆ, ಕಷ್ಟ ಸುಖ ಹಂಚಿಕೆ ಸಂದರ್ಭದಲ್ಲಿ ಒಂದು ಕ್ಷಣ ಮೈಮರೆತೋ ಅಥವಾ ಅತಿ ಸಲುಗೆಯಿಂದಲೋ ಒಂದು ಮಾತು ನಮ್ಮ ಬಾಯಿಯಿಂದ ಉದುರಿದರೆ ಅನಾಹುತವೇ ಆಗಿ ಹೋದೀತು. ಆ ಮಾತನ್ನು ಆತ್ಮೀಯರು ಅಪಾರ್ಥ ಮಾಡಿಕೊಂಡರೆ, ಸಂಬಂಧ ಕೆಡುತ್ತದೆ. ಇದಕ್ಕೆ ಬೆಸುಗೆ ಹಾಕಿ ಜೋಡಿಸುವುದು ಒಂದು ನಿಮಿಷದಲ್ಲಿ ಖಂಡಿತಾ ಸಾಧ್ಯವಿಲ್ಲ. ಅಷ್ಟು ವರ್ಷಗಳ ಕಾಲ ಪೋಷಿಸಿಕೊಂಡು ಬಂದಿದ್ದ ಆತ್ಮೀಯತೆ ಕರಗಿ ನೀರಾಗಿ ಹೋಗಲು ಆ ಒಂದು ಕ್ಷಣವಷ್ಟೇ ಸಾಕಲ್ಲವೇ? ಅದೇ ರೀತಿ ಎಷ್ಟೋ ವರ್ಷಗಳ ಕಠಿಣ ಪರಿಶ್ರಮದ ಫಲವೆಲ್ಲಾ ನಾಶವಾಗಲೂ ಇಂಥದ್ದೇ ಒಂದು ಕ್ಷಣ ಸಾಕಲ್ಲವೇ?

ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು ಎಂಬುದು ಪ್ರಸ್ತುತವಾಗುವುದು ಈ ಕ್ಷಣದಲ್ಲಿಯೇ. ಮನಸ್ಸು ಮನಸ್ಸುಗಳನ್ನು ಬೆಸೆಯುವ ಕಾಯಕಕ್ಕೆ ಎಷ್ಟು ಕಾಲ ತಗುಲುತ್ತದೆಯೋ, ಆ ಬೆಸುಗೆ ಮುರಿದು ಬೀಳಲು ಒಂದು ಕ್ಷಣ ಸಾಕು.

ಅದೇ ರೀತಿ ಆ ಕ್ಷಣದಲ್ಲಿ ನಮ್ಮ ಜೀವನವನ್ನೇ ಬದಲಾಯಿಸಿಬಿಡುವ ನಿರ್ಧಾರಗಳನ್ನು ತೆಗೆದುಕೊಳ್ಳಲು ಆ ಒಂದು ಕ್ಷಣವೇ ತಳಹದಿಯಾಗುತ್ತದೆ.

ಎಲ್ಲರ ಬಾಯಲ್ಲೂ ಹರಿದಾಡುತ್ತಾ ಹರಿದಾಡುತ್ತಾ ಈಗ ಅರ್ಥ ಕಳೆದುಕೊಂಡಂತಾಗಿರುವ ಅಥವಾ ಬಾಯಿಮಾತಿಗಷ್ಟೇ ಸೀಮಿತವಾಗಿಬಿಟ್ಟಿರುವ ‘ಕುಂಬಾರನಿಗೆ ವರುಷ.. ದೊಣ್ಣೆಗೆ ನಿಮಿಷ’ ಎಂಬ ಉಕ್ತಿಯೂ ಇದನ್ನೇ ಅಲ್ಲವೇ ಹೇಳಿದ್ದು? ಸಣ್ಣ ಮಕ್ಕಳಿಗೆ ಗಾದೆ ಮಾತು ಎಂಬ ಕಾರಣಕ್ಕೆ ಇದನ್ನು ಶಾಲೆಗಳಲ್ಲಿ ಹೇಳಿಕೊಟ್ಟಿರುತ್ತಾರೆ. ಆದರೆ ಅದು ಗಾದೆ ಮಾತು ಎಂಬ ಅಂಕ (Mark) ತಂದುಕೊಡುವ ವಾಕ್ಯವಾಗುತ್ತದೆಯೇ ಹೊರತು, ಈ ಮಕ್ಕಳಿಗೆ ಅದರ ಅರ್ಥ ಗ್ರಹಿಸಿಕೊಳ್ಳಬಲ್ಲ ರೀತಿಯಲ್ಲಿ ಬೋಧಿಸಲಾಗುವುದಿಲ್ಲ. ಆದರೆ ಮುಂದೆ ಜೀವನ ರೂಪಿಸಲು, ಜೀವನದಲ್ಲಿ ಔನ್ನತ್ಯ ಸಾಧಿಸಲು, ಯಾವುದೇ ನಿರ್ಧಾರ ಕೈಗೊಳ್ಳುವ ಮೊದಲು ಎರಡೆರಡು ಬಾರಿ ಯೋಚನೆ ಮಾಡಲು ಇದೇ ವಾಕ್ಯವೇ ತಳಹದಿಯಾಗುತ್ತದೆ ಎಂಬುದು ಈ ಮಕ್ಕಳಿಗೇನು ಗೊತ್ತಿರುತ್ತದೆ?

ಅವರಿಗೆ ಬುದ್ಧಿ ತಿಳಿದಾಗಲೊಂದು ದಿನ ‘ಹೌದು, ಇಂಥ ವಾಕ್ಯ ಬರೆದು ನನಗೆ ಇಂತಿಷ್ಟು ಅಂಕ ಬಂದಿದೆ’ ಎಂದಷ್ಟೇ ಅವರು ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ಅದರ ಅರ್ಥ ಗ್ರಹಿಸಿರುವುದಿಲ್ಲ.

ಒಂದು ಅರೆಕ್ಷಣದಲ್ಲಿ ನಾವು ಕೈಗೊಳ್ಳುವ ನಿರ್ಧಾರವು ಹೇಗೆ ನಮ್ಮ ಜೀವನದ ದಿಕ್ಕನ್ನು ಬದಲಾಯಿಸುತ್ತವೋ, ಅದೇ ರೀತಿ ಒಂದರೆಕ್ಷಣ ಮೈಮರೆತು ನಾವು ಆಡಿದ ನುಡಿಗಳೋ, ಮಾಡಿದ ಕೃತ್ಯಗಳೋ ಜೀವನದ ಬಂಡಿಯ ಗಾಲಿಯನ್ನು ಎತ್ತೆತ್ತಲೋ ತಿರುಗಿಸಿಬಿಡಬಹುದಲ್ಲಾ…

ಆದಕಾರಣ, ‘ಒಂದ್ನಿಮಿಷ ಪ್ಲೀಸ್’ ಅನ್ನೋದು ಜೀವನದ ಪ್ರತಿ ಕ್ಷಣದಲ್ಲೂ ನಿಮ್ಮ ಜತೆಗಿರಲಿ.

1 COMMENT

  1. […] Avi talks about the power of time, kAla. How a minute can change things. Indeed. Why are we so obsessed with the past? Why are we so nostalgic? Asks Sree. She would rather be intimate with the present. The cool breeze that that blows gently Would you saunter near my friend a while? Not a surprise if she renders you cooler. […]

LEAVE A REPLY

Please enter your comment!
Please enter your name here