Privacy ಧಕ್ಕೆ: ಜಿಮೇಲ್ ಖಾತೆ ಸುರಕ್ಷಿತವಾಗಿಟ್ಟುಕೊಳ್ಳುವುದು ಹೇಗೆ?

0
253

Gmail Privacyಕೇಂಬ್ರಿಜ್ ಅನಲಿಟಿಕಾ ಸಂಸ್ಥೆಯು ಫೇಸ್‌ಬುಕ್ ಬಳಕೆದಾರರ ಖಾಸಗಿ ಮಾಹಿತಿಯನ್ನು ಬೇರೆಯವರಿಗೆ ಮಾರಾಟ ಮಾಡಿದ ಘಟನೆ ಹಸಿಯಾಗಿರುವಾಗಲೇ, ಆನ್‌ಲೈನ್‌ನಲ್ಲಿ ಅಂದರೆ ಇಂಟರ್ನೆಟ್ ಜಗತ್ತಿನಲ್ಲಿ ಪ್ರೈವೆಸಿ (ನಮ್ಮ ಖಾಸಗಿತನ) ಬಗ್ಗೆ ಮತ್ತೆ ಕೂಗೆದ್ದಿದೆ. ಇದಕ್ಕೆ ಕಾರಣ, ಬಹುತೇಕ ಎಲ್ಲರೂ ಉಚಿತವಾಗಿ ಹೊಂದಿರುವ ಮತ್ತು ಬಳಸುತ್ತಿರುವ ಇಮೇಲ್ ಖಾತೆ ಜಿಮೇಲ್. ಅದು ತನ್ನ ಬಳಕೆದಾರರ ಇಮೇಲ್‌ಗಳನ್ನು ಥರ್ಡ್-ಪಾರ್ಟಿ ಆ್ಯಪ್ ಡೆವಲಪರ್‌ಗಳಿಗೆ ಓದಲು ಅವಕಾಶ ಮಾಡುತ್ತಿದೆ ಎಂಬರ್ಥದ ಸುದ್ದಿಯೊಂದು ಕಳೆದ ವಾರವಿಡೀ ಜಿಮೇಲ್ ಬಳಕೆದಾರರ ನಿದ್ದೆಗೆಡಿಸಿತು. ಉಚಿತ ಇಮೇಲ್ ಸೇವೆ ಪೂರೈಕೆದಾರರೆಲ್ಲರೂ ‘ನಿಮ್ಮ ಖಾಸಗಿತನದ, ಆನ್‌ಲೈನ್ ರಕ್ಷಣೆ ಕುರಿತು ಗರಿಷ್ಠ ಎಚ್ಚರಿಕೆ ವಹಿಸುತ್ತೇವೆ’ ಎಂದು ಎಷ್ಟೇ ಬೊಗಳೆ ಬಿಟ್ಟರೂ ಅದನ್ನು ನಂಬಲಾರದಂಥ ಸ್ಥಿತಿಯಲ್ಲಿ ನಾವಿದ್ದೇವೆ. ಇದಕ್ಕೆ ಪ್ರಮುಖ ಕಾರಣವೆಂದರೆ, ನಮಗೆ ತಿಳಿದೋ ತಿಳಿಯದೆಯೋ ನಾವಾಗಿಯೇ ನಮ್ಮ ಖಾಸಗಿ ಮಾಹಿತಿಯನ್ನು ಬೇರೆ ಆ್ಯಪ್‌ಗಳಿಗೆ, ವೆಬ್‌ಸೈಟುಗಳಿಗೆ ಬಿಟ್ಟುಕೊಟ್ಟಿರುತ್ತೇವೆ.

ಈಗ ಜಿಮೇಲ್ ವಿಷಯವನ್ನೇ ತೆಗೆದುಕೊಳ್ಳಿ. ವರದಿಗಳ ಪ್ರಕಾರ, ಆ್ಯಪ್ ತಯಾರಕರಿಗೆ ಇಮೇಲ್‌ಗಳ ಆ್ಯಕ್ಸೆಸ್ ಇದೆ ಎಂಬುದು ಆರೋಪ. ನೂರಾರು ಆ್ಯಪ್ ಡೆವಲಪರ್‌ಗಳಿಗೆ ಜಿಮೇಲ್‌ನ ಇನ್‌ಬಾಕ್ಸ್ ಅನ್ನು ಸ್ಕ್ಯಾನ್ ಮಾಡಲು, ಇಮೇಲ್‌ಗಳನ್ನು ಓದಲು ಅವಕಾಶ ಮಾಡಲಾಗುತ್ತಿದೆ ಎಂಬುದು ಆರೋಪದ ಒಟ್ಟು ಅರ್ಥ. ಬಳಿಕ ಇದಕ್ಕೆ ಗೂಗಲ್ ಸ್ಪಷ್ಟೀಕರಣವನ್ನೂ ನೀಡಿದೆ. ಬಳಕೆದಾರರ ಅನುಮತಿಯಿಲ್ಲದೆ ಯಾವುದೇ ರೀತಿಯಲ್ಲಿಯೂ ಇಮೇಲ್‌ಗೆ ಆ್ಯಕ್ಸೆಸ್ (ನೋಡುವ ಅವಕಾಶ) ನೀಡುವುದಿಲ್ಲ ಎಂದಿದೆ ಗೂಗಲ್. ಸ್ಪ್ಯಾಮ್ (ಅನುಪಯುಕ್ತ ಮೇಲ್‌ಗಳು) ಮತ್ತು ಫಿಶಿಂಗ್ (ಬಳಕೆದಾರರ ಮಾಹಿತಿ ಕದಿಯುವ) ಪ್ರಯತ್ನಗಳನ್ನು ತಡೆಯುವುದಕ್ಕಾಗಿ ಇಮೇಲ್‌ಗಳನ್ನು ಸ್ವಯಂಚಾಲಿತವಾಗಿ ಪ್ರೋಸೆಸ್ ಮಾಡಲಾಗುತ್ತದೆ. ಆದರೆ ಜಾಹೀರಾತುಗಳನ್ನು ಒದಗಿಸುವುದಕ್ಕಾಗಿ ಇಮೇಲ್‌ಗಳನ್ನು ಸ್ಕ್ಯಾನ್ ಮಾಡಲಾಗುತ್ತಿಲ್ಲ ಎಂದು ಗೂಗಲ್ ಸ್ಪಷ್ಟಪಡಿಸಿದೆ. ಈ ಆಟೋಮ್ಯಾಟಿಕ್ ಸ್ಕ್ಯಾನಿಂಗ್ ವ್ಯವಸ್ಥೆಯಿಂದಾಗಿ ಕೆಲವರು ತಪ್ಪಾಗಿ ‘ಗೂಗಲ್ ನಿಮ್ಮ ಇಮೇಲ್‌ಗಳನ್ನು ಓದುತ್ತದೆ’ ಎಂದು ಹೇಳುತ್ತಿದ್ದಾರಷ್ಟೇ ಎಂಬುದು ಅದು ನೀಡುವ ಸಮಜಾಯಿಷಿ. ಅಲ್ಲದೆ, ‘ಗೂಗಲ್‌ನಲ್ಲಿರುವ ಯಾರು ಕೂಡ ನಿಮ್ಮ ಇಮೇಲ್‌ಗಳನ್ನು ಓದುವುದಿಲ್ಲ, ಭದ್ರತಾ ಕಾರಣಗಳಿಗಾಗಿ ಅಥವಾ ತನಿಖೆಯ ಕಾರಣಗಳಿಗಾಗಿ, ಅಪರಾಧ ಪ್ರಕರಣಗಳಿಗಾಗಿ ಕಾನೂನಿನ ಅಗತ್ಯವಿದ್ದರೆ ಅಥವಾ ನಿಮ್ಮ ಅನುಮತಿ ಪಡೆದ ಬಳಿಕವಷ್ಟೇ ಗೂಗಲ್ ಇಮೇಲ್‌ಗಳನ್ನು ಪರಿಶೀಲಿಸಲು ಇತರರಿಗೆ ಅವಕಾಶ ನೀಡಬಹುದು’ ಎಂದು ಕೂಡ ಅದು ಭರವಸೆ ನೀಡಿದೆ.

ಆದರೆ, ಗೂಗಲ್ ಉಚಿತವಾಗಿಯೇ ಎಲ್ಲ ಸೇವೆಗಳನ್ನು ನೀಡುವುದರಿಂದಾಗಿ ನಾವು ಅದನ್ನು ನೂರು ಶೇಕಡಾ ಅಪರಾಧಿ ಎನ್ನಲಾಗದು. ಹೀಗಾಗಿ ಇಮೇಲ್‌ನಲ್ಲಿ ರಹಸ್ಯವಿರಬೇಕಾದ ವಿಷಯಗಳನ್ನು ಪ್ರಸ್ತಾಪಿಸದೆ ಜಾಣತನ ತೋರುವುದು ನಮಗೆ ಬಿಟ್ಟ ವಿಚಾರ. ಅದಿರಲಿ, ಈಗ ಆ್ಯಪ್ ಡೆವಲಪರ್‌ಗಳು ಅಥವಾ ಬೇರೆಯೇ ವೆಬ್ ತಾಣಗಳಿಗೆ ಗೂಗಲ್ ಮೇಲ್‌ನ ಆ್ಯಕ್ಸೆಸ್ ಅನ್ನು ನಾವಾಗಿಯೇ ಕೈಯಾರೆ ನೀಡುವ ವಿಚಾರದ ಬಗ್ಗೆ ತಿಳಿದುಕೊಳ್ಳೋಣ.

ಯಾವುದೇ ಆ್ಯಪ್ ಅನ್ನು ನಾವು ಅಳವಡಿಸಿಕೊಳ್ಳುವಾಗ, ಕಾಂಟ್ಯಾಕ್ಸ್ಟ್, ಗ್ಯಾಲರಿ, ಎಸ್ಸೆಮ್ಮೆಸ್, ಕ್ಯಾಮೆರಾ…. ಹೀಗೆ ಮೊಬೈಲ್‌ನಲ್ಲಿರುವ ಇತರ ಆ್ಯಪ್‌ಗಳಿಗೆ ಆ್ಯಕ್ಸೆಸ್ ಪಡೆಯುವುದರ ಕುರಿತು ಒಂದೊಂದೇ ಸ್ಕ್ರೀನ್‌ನಲ್ಲಿ ಅನುಮತಿ ಕೇಳುವ ವಿಂಡೋಗಳನ್ನು ನೀವು ಗಮನಿಸಿರಬಹುದು. ನಾವು ಏನೆಂದು ಅವನ್ನು ಓದದೆ ಅಥವಾ ಓದುವ ವ್ಯವಧಾನ ತೋರದೆ, ಎಲ್ಲದಕ್ಕೂ ಯಸ್ ಯಸ್ ಅಂತ ಕ್ಲಿಕ್ ಮಾಡುತ್ತಾ ಹೋಗಿರುತ್ತೇವೆ. ನಿರ್ದಿಷ್ಟ ಆ್ಯಪ್‌ಗೆ, ಉದಾಹರಣೆಗೆ, ಒಂದು ಕ್ಯಾಮೆರಾ ಆ್ಯಪ್ ಅಳವಡಿಸಿಕೊಳ್ಳುವಾಗ, ಅದಕ್ಕೆ ನಿಮ್ಮ ಕಾಂಟ್ಯಾಕ್ಟ್ಸ್ ಓದಲು ಅನುಮತಿ ಬೇಕಾದ ಅಗತ್ಯವೇನು ಅಂತ ನಾವು ಯೋಚಿಸುವುದಿಲ್ಲ. ಯಸ್ ಒತ್ತಿದರೆ, ನಮ್ಮ ಕಾಂಟ್ಯಾಕ್ಟ್ಸ್ ಪಟ್ಟಿಯಲ್ಲಿರುವ ಎಲ್ಲ ಫೋನ್ ನಂಬರುಗಳನ್ನು ನಾವು ಆ ಆ್ಯಪ್‌ಗೆ ಧಾರೆಯೆರೆಯುತ್ತಿದ್ದೇವೆ ಎಂದು ಅರ್ಥ. ಕರೆ ಮಾಡುವ ಆ್ಯಪ್‌ಗೆ ಅಥವಾ ವಾಟ್ಸ್ಆ್ಯಪ್, ಟೆಲಿಗ್ರಾಂ ಮುಂತಾದ ಸಂದೇಶವಾಹಕ ಆ್ಯಪ್‌ಗಳಿಗೆ ಕಾಂಟ್ಯಾಕ್ಸ್ಟ್‌ನ ಆ್ಯಕ್ಸೆಸ್ ಬೇಕಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಯಾವುದಾದರೂ ಸ್ಕ್ಯಾನಿಂಗ್ ಆ್ಯಪ್ ಅಥವಾ ಗೇಮಿಂಗ್ ಆ್ಯಪ್‌ಗೆ ನಿಮ್ಮ ಕಾಂಟ್ಯಾಕ್ಸ್ಟ್ ಅಥವಾ ಎಸ್ಸೆಮ್ಮೆಸ್ ನೋಡಿ ಏನಾಗಬೇಕು? ಹೀಗೊಂದು ಯೋಚನೆಯನ್ನೇ ನಾವು ಮಾಡುವುದಿಲ್ಲ. ಹೀಗಾಗಿ, ನಮ್ಮ ಖಾಸಗಿ ವಿಚಾರಗಳನ್ನು ಗೊತ್ತಿದ್ದೂ ನಾವು ಅನ್ಯರಿಗೆ ನೀಡಿರುತ್ತೇವೆ. ಈ ಬಗ್ಗೆ ಎಚ್ಚರ ವಹಿಸಬೇಕು.

ಈಗೇನೂ ಕಾಲ ಮಿಂಚಿಲ್ಲ. ನಿಮ್ಮ ಜಿಮೇಲ್ ಖಾತೆಗೆ ನೀವು ಯಾರಿಗೆಲ್ಲ ಆ್ಯಕ್ಸೆಸ್ ಕೊಟ್ಟಿದ್ದೀರಿ, ಯಾವ ಸಾಧನಗಳಲ್ಲಿ ಇದು ಸಕ್ರಿಯವಾಗಿದೆ ಅಂತೆಲ್ಲ ಈಗಲೂ ತಿಳಿದುಕೊಂಡು, ಪ್ರವೇಶಾನುಮತಿಯನ್ನು (ಆ್ಯಕ್ಸೆಸ್) ನೀವು ಹಿಂತೆಗೆದುಕೊಳ್ಳಬಹುದಾಗಿದೆ. ಗೂಗಲ್ ಆಗಾಗ್ಗೆ ತನ್ನ ಬಳಕೆದಾರರಿಗೆ ಈ ಕುರಿತು ಮಾಹಿತಿ ನೀಡುತ್ತಲೇ ಇರುತ್ತದೆ. ಇನ್‌ಸ್ಟಾಲ್ ಮಾಡಿಕೊಂಡ ಯಾವುದೇ ಆ್ಯಪ್‌ಗೆ ಏನೆಲ್ಲಾ ಅನುಮತಿ ಕೊಟ್ಟಿದ್ದೀರಿ ಅಂತನೂ ತಿಳಿದುಕೊಳ್ಳಬಹುದು. ಇದಕ್ಕಾಗಿಯೇ ಗೂಗಲ್ ಎರಡು ಆನ್‌ಲೈನ್ ಟೂಲ್‌ಗಳನ್ನು ಕೊಟ್ಟಿದೆ. ಒಂದನೆಯದು ಸೆಕ್ಯುರಿಟಿ ಚೆಕ್ ಮಾಡುವ ವಿಭಾಗ.

https://myaccount.google.com/security-checkup ಎಂಬಲ್ಲಿ ಹೋಗಿ ನಿಮ್ಮ ಗೂಗಲ್ (ಜಿಮೇಲ್) ಖಾತೆಯ ಮೂಲಕ ಲಾಗಿನ್ ಆದರೆ, ಯಾವ ಸಾಧನಗಳಲ್ಲಿ ನೀವು ಈ ನಿರ್ದಿಷ್ಟ ಜಿಮೇಲ್ ಖಾತೆಯ ಮೂಲಕ ಲಾಗಿನ್ ಆಗಿದ್ದೀರಿ ಎಂಬ ಪಟ್ಟಿ ಕಾಣಿಸುತ್ತದೆ. ಇಲ್ಲಿ ನಿಮ್ಮ ಹಳೆಯ, ಈಗ ಬಳಸದೇ ಇರುವ ಅಥವಾ ಬೇರಾರಿಗೋ ಮಾರಾಟ ಮಾಡಿರುವ ಮೊಬೈಲ್ ಫೋನ್‌ಗಳ ಹೆಸರೂ ಕಾಣಿಸಬಹುದು. ನೋಡಿಕೊಳ್ಳಿ, ಅಗತ್ಯವಿಲ್ಲವೆಂದಾದರೆ ಆ್ಯಕ್ಸೆಸ್ ಹಿಂತೆಗೆದುಕೊಳ್ಳಲು ‘Revoke Access’ ಎಂಬ ಬಟನ್ ಒತ್ತಿಬಿಡಿ.

ಆ ಬಳಿಕ, ಇತ್ತೀಚೆಗೆ ಏನಾದರೂ ಭದ್ರತಾ ಲೋಪವಾಗಿದ್ದರೆ ಹಾಗೂ 2-ಸ್ಟೆಪ್ ವೆರಿಫಿಕೇಶನ್ ವ್ಯವಸ್ಥೆಯ ಕುರಿತು ನೀವು ಇಲ್ಲೇ ತಿಳಿದುಕೊಳ್ಳಬಹುದು. ಎಲ್ಲವೂ ಸರಿ ಇದ್ದರೆ, ಹಸಿರು ಟಿಕ್ ಮಾರ್ಕ್ ಕಾಣಿಸುತ್ತದೆ. ಏನಾದರೂ ಸಂದೇಹವಿದೆಯೆಂದಾದರೆ, ತಿಳಿಹಳದಿ ಬಣ್ಣದ ಗುರುತು ಕಾಣಿಸುತ್ತದೆ. ನೀವು ಒಂದು ಮೊಬೈಲ್ ಫೋನಿನಲ್ಲಿ ಜಿಮೇಲ್ ಲಾಗಿನ್ ಆಗಿ, ಆ ಫೋನನ್ನು ಒಂದು ತಿಂಗಳು ಬಳಸದೇ ಇದ್ದರೆ ಕೂಡ, ತಿಳಿಹಳದಿ ಗುರುತು ಕಂಡುಬರುತ್ತದೆ ಮತ್ತು ಇದರ ಆ್ಯಕ್ಸೆಸ್ ತೆಗೆಯಬೇಕೇ ಎಂದು ನಿಮ್ಮನ್ನು ಕೇಳಲಾಗುತ್ತದೆ. ನಂತರ ಕಡಿಮೆ ರಿಸ್ಕ್ ಇರುವ ಥರ್ಡ್-ಪಾರ್ಟಿ ಆ್ಯಪ್‌ಗಳಿಗೆ ನೀವು ಆ್ಯಕ್ಸೆಸ್ ಕೊಟ್ಟಿದ್ದೀರಿ, ಅದನ್ನು ಕೂಡ ಪರಾಮರ್ಶಿಸುವ ಅವಕಾಶ ಕಾಣಿಸುತ್ತದೆ.

ಮುಂದಿನ ಹಂತ. https://myaccount.google.com/permissions ಎಂಬಲ್ಲಿ ಹೋಗಿ, ಯಾರಿಗೆಲ್ಲ ನೀವು ನಿಮ್ಮ ಜಿಮೇಲ್‌ನಲ್ಲಿ ಲಾಗಿನ್ ಅನುಮತಿ, ಖಾತೆಯ ಆ್ಯಕ್ಸೆಸ್ ಕೊಟ್ಟಿದ್ದೀರಿ ಅಂತ ತಿಳಿದುಕೊಳ್ಳಬಹುದು. ಯಾವುದಾದರೂ (ಫೇಸ್‌ಬುಕ್, ಬ್ಲಾಗ್, ರೈಲು, ಬಸ್ಸು ಅಥವಾ ವಿಮಾನ ಟಿಕೆಟ್ ಬುಕ್ ಮಾಡುವ ತಾಣಗಳು, ಬೇರೆ ಯಾವುದಾದರೂ ಆ್ಯಪ್) ವೆಬ್ ತಾಣಕ್ಕೆ ನೀವು ಜಿಮೇಲ್ ಮೂಲಕವೇ ಲಾಗಿನ್ ಆಗಿರುತ್ತೀರೆಂದಾದರೆ, ಅವುಗಳ ಪಟ್ಟಿಯನ್ನು ಇಲ್ಲಿ ನೋಡಬಹುದು. ಯಾವುದಕ್ಕೆ ಕೊಟ್ಟ ಅನುಮತಿಯನ್ನು ಹಿಂತೆಗೆದುಕೊಳ್ಳಬೇಕೋ, ಅವುಗಳನ್ನು ಕ್ಲಿಕ್ ಮಾಡಿ ‘Revoke Access’ ಬಟನ್ ಅದುಮಿದರಾಯಿತು. ಗೂಗಲ್‌ನದ್ದೇ ಆದ ಆ್ಯಪ್‌ಗಳ ಪಟ್ಟಿ ಪ್ರತ್ಯೇಕವಾಗಿ ಕಾಣಿಸುತ್ತದೆ. ಇಲ್ಲಿ ಕಾಣಿಸಿಕೊಳ್ಳುವ ಎಲ್ಲ ಪಟ್ಟಿಗಳಲ್ಲಿ, ಗೂಗಲ್ ಖಾತೆಯಲ್ಲಿನ ಯಾವ ವೈಶಿಷ್ಟ್ಯಗಳಿಗೆ ಆ್ಯಕ್ಸೆಸ್ ನೀಡಲಾಗಿದೆ ಎಂದೂ ತಿಳಿಸಲಾಗುತ್ತದೆ.

ಈ ಎರಡು ಟೂಲ್‌ಗಳನ್ನು ಬಳಸಿ, ನಿಮ್ಮ ಜಿಮೇಲ್ ಖಾತೆಯನ್ನು ಸುರಕ್ಷಿತವಾಗಿಟ್ಟುಕೊಳ್ಳಿ.

ಮಾಹಿತಿ@ತಂತ್ರಜ್ಞಾನ ವಿಜಯ ಕರ್ನಾಟಕ ಅಂಕಣ for 09 ಜುಲೈ 2018 by ಅವಿನಾಶ್ ಬಿ.

LEAVE A REPLY

Please enter your comment!
Please enter your name here