ಗೀತಾ ವಿವಾದ: ಸುದ್ದಿಯ ಕಿಡಿ ಹೊತ್ತಿಸುವುದು ಹೇಗೆ?

12
701

|ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ|
ಈ ಸಾಲನ್ನು ಕೇಳದವರು ಬಹುಶಃ ತುಂಬಾ ವಿರಳ. ಯಾವುದೇ ಭಾಷಣಗಳಲ್ಲಿಯೋ, ಪ್ರವಚನಗಳಲ್ಲೋ, ಆಗಾಗ್ಗೆ ನಾವಿದನ್ನು ಕೇಳುತ್ತಲೇ ಇರುತ್ತೇವೆ. ಇದರ ಸಂಕ್ಷಿಪ್ತ ವಾಚ್ಯಾರ್ಥವೆಂದರೆ ‘ಪ್ರತಿಫಲಾಪೇಕ್ಷೆಯಿಲ್ಲದೆ ಕೆಲಸ ಮಾಡುತ್ತಾ ಇರು, ಒಳ್ಳೆಯದಾಗುತ್ತದೆ’ ಅಂತ. ‘ನಿರೀಕ್ಷೆ ಇಟ್ಟುಕೊಂಡು ಫಲ ದೊರೆಯದೇ ಹೋದಾಗ ಆಗುವ ಆಘಾತಕ್ಕಿಂತ ನಿರೀಕ್ಷೆ ಇಟ್ಟುಕೊಳ್ಳದೆಯೇ ಫಲ ದೊರೆತಾಗ ಆಗುವ ಆನಂದಕ್ಕೆ ಪಾರವಿಲ್ಲ. ಹೀಗಾಗಿ ನಿರೀಕ್ಷೆ ಬೇಡ’ ಎಂಬುದು ಭಾವಾರ್ಥ.

ಇದು ಭಗವದ್ಗೀತೆಯ ಅತ್ಯಂತ ಮಹತ್ವದ ಬೋಧನೆಯೂ ಹೌದು. ಕಳೆದ ನಾಲ್ಕು ವರ್ಷಗಳಿಂದ ಅವ್ಯಾಹತವಾಗಿ ಇಡೀ ಕರ್ನಾಟಕ ರಾಜ್ಯದ ಬಹುತೇಕ ಶಾಲೆಗಳಲ್ಲಿ ನಡೆಯುತ್ತಿದ್ದ ಭಗವದ್ಗೀತಾ ಅಭಿಯಾನವೊಂದು, ತೀರಾ ಇತ್ತೀಚೆಗೆ ವಿವಾದಕ್ಕೆ ಸಿಲುಕಿದೆ. ಅದು ಕೂಡ ಅನಗತ್ಯ ಕಾರಣಗಳಿಗೆ ಎಂಬುದನ್ನು ಸ್ಪಷ್ಟಪಡಿಸುವುದು ಈ ಲೇಖನದ ಉದ್ದೇಶ.

ಹಾಗಾದರೆ ನಮ್ಮ ಮಾಧ್ಯಮಗಳು ಎಡವಿದ್ದೆಲ್ಲಿ?
ನಮ್ಮ ಮಾಧ್ಯಮಗಳ ಮನಸ್ಥಿತಿ, ಎಲ್ಲವನ್ನೂ ಬ್ರೇಕಿಂಗ್ ನ್ಯೂಸ್ ಆಗಿಸುವ ಧಾವಂತವಿರುವ ‘ಅತ್ಯುತ್ಸಾಹೀ’ ಪತ್ರಕರ್ತರ ಗಡಣವೊಂದು ಸೃಷ್ಟಿಯಾಗುತ್ತಿರುವುದು ಇಲ್ಲಿ ಎದ್ದುಕಾಣುತ್ತದೆ ಮತ್ತು ಅದರಿಂದ ಏನೆಲ್ಲಾ ನಡೆಯಬಹುದು ಎಂಬುದಕ್ಕೆ ಇದೂ ಒಂದು ಉದಾಹರಣೆ ಅಂತಲೂ ನಾವು ಗಮನಿಸಬೇಕು.

ಈಗ ಎಲ್ಲಿ ನೋಡಿದರಲ್ಲಿ, ಭಗವದ್ಗೀತೆ ಬೇಕೋ, ಬೇಡವೋ ಅನ್ನೋ ಚರ್ಚೆ, ಶಿಕ್ಷಣ ಮಂತ್ರಿ ಕಾಗೇರಿ ವಿಶ್ವೇಶ್ವರ ಹೆಗಡೆಯವರು “ಭಗವದ್ಗೀತೆ ಕಲಿಯದಿದ್ದರೆ ದೇಶ ಬಿಟ್ಟು ಹೋಗಿ” ಅಂತ ಫರ್ಮಾನು ಹೊರಡಿಸಿದ್ದಾರೆ ಎಂಬ ಮಾತೇ ಕೇಳಿ ಬರುತ್ತಿದೆ. ಬಹುತೇಕ ಜವಾಬ್ದಾರಿಯುತ ಮಾಧ್ಯಮಗಳಲ್ಲಿ ಕೂಡ ಕಾಗೇರಿಯವರ ಈ ನುಡಿಯೇ ಶೀರ್ಷಿಕೆಯಲ್ಲಿ ರಾರಾಜಿಸುತ್ತಿದೆ. ಆದರೆ ಕೆಲವು ಮಾಧ್ಯಮಗಳು ಶೀರ್ಷಿಕೆ ತಪ್ಪಾಗಿ ನೀಡಿದರೂ, ಒಳಗೆ ಸರಿಯಾದ ಹೇಳಿಕೆ ಪ್ರಕಟಿಸಿವೆ ಎಂಬುದನ್ನೂ ಮರೆಯುವಂತಿಲ್ಲ. ಆದರೆ, ಈಗ ಒಳಗೇನಿದೆ ಎಂದು ಓದೋ ಪುರುಸೊತ್ತು, ತಾಳ್ಮೆ ಯಾರಿಗಿದೆ?

ಸರಿ, ಕೋಲಾರದಲ್ಲಿ ಶಾಲೆಗಳಲ್ಲಿ ಭಗವದ್ಗೀತೆ ಬೋಧಿಸುವ ಕಾರ್ಯವನ್ನು ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್ಎಫ್ಐ) ಎಂಬ ಸಂಘಟನೆಯೊಂದು ವಿರೋಧಿಸಿ ಅಡ್ಡಿಪಡಿಸುತ್ತಿದೆ ಎಂಬ ವರದಿಗಳು ಬಂದಿದ್ದವು. ಅಲ್ಲಿಗೆ ಬಂದು ಭಗವದ್ಗೀತಾ ಅಭಿಯಾನದ ಸಮಾರಂಭದಲ್ಲಿ ಮಾತನಾಡಿದ ಕಾಗೇರಿ ಅವರು, “ಭಗವದ್ಗೀತೆ ಕಲಿಯಲು ನಿರಾಕರಿಸುವವರು ದೇಶ ಬಿಟ್ಟು ತೊಲಗಲು ಹೇಳಿದರು” ಅಥವಾ “ಭಗವದ್ಗೀತೆ ವಿರೋಧಿಸುವವರು ದೇಶ ಬಿಟ್ಟು ತೊಲಗಲಿ ಅಂತ ಹೇಳಿಕೆ ಕೊಟ್ಟರು” ಎಂದು ಸುದ್ದಿ ಮಾಧ್ಯಮಗಳೆಲ್ಲವೂ ಢಾಂ ಢೂಂ ಎಂದು ಬ್ರೇಕಿಂಗ್ ನ್ಯೂಸ್ ಕೊಟ್ಟವು. ಆದರೆ, ಕಾಗೇರಿಯವರ ಭಾಷಣದ ತುಣುಕನ್ನು ಕೇಳಿದ ಯಾವನೇ ಆದರೂ ಇದನ್ನು ಒಪ್ಪುವುದು ಸಾಧ್ಯವಿಲ್ಲ. ಇದನ್ನು ಅರ್ಥೈಸಿಕೊಂಡ ಪತ್ರಕರ್ತನೊಬ್ಬನ ಅಭಿಪ್ರಾಯವು ಹೆಡ್‌ಲೈನ್‌ನಲ್ಲಿ ಕಂಡು, ಸಮೂಹ ಸನ್ನಿಯಂತೆ ಎಲ್ಲರೂ ಪ್ರಚೋದನೆಗೊಳಗಾದರೇ ಹೊರತು, ವಾಸ್ತವಾಂಶವನ್ನು ಅರಿತುಕೊಳ್ಳುವ ಗೋಜಿಗೆ ಹೋದವರು ಕೆಲವೇ ಕೆಲವರು.

ವಾಸ್ತವವೇನು?
ನಾನೂ ಇದೇ ಟಿವಿ ಮಾಧ್ಯಮಗಳಲ್ಲಿ ಕಾಗೇರಿ ಭಾಷಣ ಕೇಳಿದ್ದೇನೆ. ಹೀಗಾಗಿ ವರದಿ ತಿರುಚುವಿಕೆಯೋ, ಅಥವಾ ಅಪಾರ್ಥ ಮಾಡಿಕೊಂಡು ಪತ್ರಕರ್ತರು ಒಟ್ಟಾಗಿ ವರದಿ ಮಾಡಿದರೋ, ಕಚೇರಿಯಲ್ಲಿದ್ದವರು ತಪ್ಪಾಗಿ ಶೀರ್ಷಿಕೆ ನೋಡಿದರೋ ಎಂಬುದು ಗೊತ್ತಿಲ್ಲ. ಹಾಗಿದ್ದರೆ ಕಾಗೇರಿ ಹೇಳಿದ್ದೇನು? ಇಲ್ಲಿದೆ ನೋಡಿ, ಆ ಬ್ರೇಕಿಂಗ್ ನ್ಯೂಸ್ ವಿವಾದಕ್ಕೆ ಕಾರಣವಾದ ಅಂಶ:

“ಯಾರು ಈ ದೇಶದ ಧರ್ಮ, ಸಂಸ್ಕೃತಿಯನ್ನು, ಈ ದೇಶದ ನಂಬಿಕೆಯ ವಿಷಯಗಳನ್ನು ಯಾರು ಗೌರವಿಸುವುದಿಲ್ಲವೋ, ಯಾರು ಅದಕ್ಕೆ ಮಾನ್ಯತೆ ಮಾಡುವುದಿಲ್ಲವೋ, ಯಾರು ವಿದೇಶೀ ತತ್ವದ, ಸಿದ್ಧಾಂತದ ಪ್ರೇರಣೆಗೆ ಒಳಪಟ್ಟಂಥವರಿದ್ದಾರೋ, ಅವರು ಇದನ್ನು (ಗೀತಾ ಅಭಿಯಾನವನ್ನು) ವಿರೋಧಿಸುತ್ತಾ ಇರೋದನ್ನ ನಾವು ಕಾಣ್ತೀವಿ. ಆ ವಿದೇಶೀಯರು ತಮ್ಮ ವಿಚಾರವನ್ನು ಮಂಡಿಸೋದಾದ್ರೆ, ಅವರು ವಿದೇಶಕ್ಕೇ ಹೋಗ್ಲಿ ಹೊರತು, ನಮ್ಮ ದೇಶದಲ್ಲಿ ಅವರಿಗೆ ಅವಕಾಶ ಇಲ್ಲ, ನಮ್ಮ ನಾಡಿನಲ್ಲಿ ಅವಕಾಶ ಇಲ್ಲ ಅನ್ನೋದನ್ನ ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ.”

ಇಲ್ಲಿ ಕಾಗೇರಿಯವರು, “ಭಗವದ್ಗೀತೆ ಕಲಿಯದವರು ದೇಶ ಬಿಟ್ಟು ಹೋಗಿ” ಎಂದರೇ? ಅರ್ಥೈಸಿಕೊಳ್ಳುವುದು ಓದುಗರಿಗೆ ಬಿಟ್ಟ ವಿಷಯ.

ನಮ್ಮ ಮನಸ್ಥಿತಿ
ಇನ್ನು ಆ ಬಳಿಕ ನಡೆದ ಎರಡು ಚರ್ಚೆಗಳನ್ನು ಇಲ್ಲಿ ಉಲ್ಲೇಖಿಸುತ್ತೇನೆ. ಒಂದು ಕನ್ನಡದ ಸುವರ್ಣ ನ್ಯೂಸ್ ವಾಹಿನಿಯಲ್ಲಿ. ಇದು ಮಕ್ಕಳಲ್ಲಿ ಉತ್ತಮ ಸಂಸ್ಕಾರ ಬೆಳೆಸಲು ಪೂರಕವಾಗುತ್ತದೆ ಎಂಬ ಸಿ.ಟಿ.ರವಿ, ಚಕ್ರವರ್ತಿ ಸೂಲಿಬೆಲೆ ವಾದಕ್ಕೆ ಜೆಡಿಎಸ್ ವಕ್ತಾರ ವೈ.ಎಸ್.ವಿ.ದತ್ತಾ ಅವರ ಮಾತು ಗಮನ ಸೆಳೆಯಿತು. ಅವರು ಹೇಳಿದ್ದನ್ನು ಇಲ್ಲಿ ದಾಖಲಿಸುತ್ತೇನಷ್ಟೇ. ಅದರ ವಿಶ್ಲೇಷಣೆ ಓದುಗರಿಗೇ ಬಿಡುತ್ತೇನೆ. “ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದವು. ಭಗವದ್ಗೀತೆ ಇಲ್ಲದೆಯೇ ಮಕ್ಕಳು ಕಲಿತಿದ್ದಾರೆ. ಅವರೆಲ್ಲರೂ ಸಮಾಜ-ವಿರೋಧಿಗಳಾಗಿದ್ದಾರೆಯೇ?”

ನಮ್ಮ ನಾಗರಿಕರನ್ನೇ ಪರಕೀಯರೆಂದರೇ ಧನಂಜಯ?
ಎರಡನೇ ಘಟನೆ. ಎನ್‌ಡಿಟಿವಿ ವಾಹಿನಿಯಲ್ಲಿ ಅದೇ ಮಂಗಳವಾರದ ದಿನ ಖ್ಯಾತ ಪತ್ರಕರ್ತೆ ಬರ್ಖಾ ದತ್ ನಡೆಸಿಕೊಡುವ ‘ದಿ ಬಕ್ ಸ್ಟಾಪ್ಸ್ ಹಿಯರ್’ ಎಂಬ ಕಾರ್ಯಕ್ರಮ. ಇದರಲ್ಲಿ ಬಿಜೆಪಿ ನಾಯಕ ಧನಂಜಯ ಕುಮಾರ್ ಅವರನ್ನು ಕರೆಸಲಾಗಿತ್ತು.

ಧನಂಜಯ ಕುಮಾರ್ ಮಾತನಾಡುತ್ತಾ, ಕಾಗೇರಿಯವರು ಹಾಗೆ ಹೇಳಿಯೇ ಇಲ್ಲ. ವಿದೇಶೀಯರು ನಮ್ಮ ನಂಬಿಕೆಗಳ ಮೇಲೆ ಆಕ್ರಮಣ ಮಾಡಿ, ತಮ್ಮ ಸಿದ್ಧಾಂತ ಹೇರಲು ಪ್ರಯತ್ನಿಸುತ್ತಿದ್ದಾರೆ. ಭಗವದ್ಗೀತೆ ಎಂಬುದು ಭಾರತೀಯ ಸಂಸ್ಕೃತಿ. ಉಳಿದವು ವಿದೇಶೀ ನಂಬಿಕೆಗಳು ಎಂದಾಗ ತಕ್ಷಣವೇ ಧನಂಜಯ ಮಾತನ್ನು ಅರ್ಧದಲ್ಲೇ ತುಂಡರಿಸಿದ ಬರ್ಖಾ, “ಅಂದರೆ ಗೀತೆ ಬಿಟ್ಟು ಉಳಿದೆಲ್ಲವೂ ಬೇರೆ ನಾಗರಿಕತೆಗೆ ಸೇರಿದಂತೆ. ಬೈಬಲ್, ಖುರಾನ್, ಗುರು ಗ್ರಂಥ ಸಾಹೀಬ ಮುಂತಾದವುಗಳಿಗೂ ಭಾರತಕ್ಕೂ ಸಂಬಂಧವಿಲ್ಲ ಎನ್ನುತ್ತಿದ್ದೀರಿ. ನೀವು ಈ ದೇಶದ ನಾಗರಿಕರನ್ನೇ ಹೊರಗಿನವರು ಅಂತ ಪರಿಗಣಿಸುತ್ತಿದ್ದೀರಿ. ನಿಮಗೆ ಈಗಲೂ ಒಂದು ಅವಕಾಶ ಕೊಡುತ್ತೇನೆ. ನಿಮ್ಮ ಮಾತುಗಳನ್ನು ಹಿಂತೆಗೆದುಕೊಳ್ಳಿ” ಅಂತ ತೀರ್ಪು ಸಹಿತ ಆಗ್ರಹ ಮಾಡಿದರು.

ನಾನು ಹೇಳಿದ್ದು ಹಾಗಲ್ಲ, ಸಿಖ್ಖರ ಗುರು ಗ್ರಂಥ ಸಾಹೀಬಾ, ಬೌದ್ಧ ಧರ್ಮ, ಇವೆಲ್ಲವೂ ಭಾರತೀಯ ಮೂಲದ್ದೇ. ಆದರೆ ಖುರಾನ್, ಬೈಬಲ್‌ಗಳು ವಿದೇಶದಿಂದ ಬಂದವು ಎಂಬ ಧನಂಜಯ್ ಮಾತಿಗೆ ಅಲ್ಲಿ ಅವಕಾಶವೇ ಇರಲಿಲ್ಲ. “ನೀವು ಉಳಿದವರನ್ನು ಪರಕೀಯರೆಂದು ಹೇಳುತ್ತಿದ್ದೀರಿ, ಭಗವದ್ಗೀತೆಯ ಮೂಲಕ ಶಿಕ್ಷಣದಲ್ಲಿ ಕೇಸರೀಕರಣ ಅಳವಡಿಸುತ್ತಿದ್ದೀರಿ” ಎಂದೇ ಜವಾಬ್ದಾರಿಯುತ ಪತ್ರಕರ್ತೆಯಾದ ಬರ್ಖಾ ಪದೇ ಪದೇ ಹೇಳುತ್ತಿದ್ದರು!

ನಾಲ್ಕು ವರ್ಷಗಳಿಂದ ಇಲ್ಲದ್ದು, ಈಗೇಕೆ ವಿರೋಧ?
ಇನ್ನು, ಮಕ್ಕಳಿಗೆ ಭಗವದ್ಗೀತೆ ಬೇಕೋ ಬೇಡವೋ ಎಂಬುದು ಓದುಗರಿಗೇ ಬಿಟ್ಟ ವಿಚಾರ. ಒಂದು ವಿಷಯದ ಅತಿ ವೈಭವೀಕರಣ ಯಾಕಾಗುತ್ತದೆ ಮತ್ತು ಹೇಗಾಗುತ್ತದೆ ಎಂಬುದಷ್ಟೇ ಇಲ್ಲಿರುವ ಜಿಜ್ಞಾಸೆ. ಭಗವದ್ಗೀತೆಯ ವ್ಯಾಪ್ತಿಯನ್ನು ಒಂದು ಧರ್ಮಕ್ಕೋ, ಮತಕ್ಕೋ, ಪಂಥಕ್ಕೋ, ವರ್ಗಕ್ಕೋ ಸೀಮಿತಗೊಳಿಸುವ ಸಂಕುಚಿತ ಮನೋಭಾವ ಭಯ ಹುಟ್ಟಿಸುವಂತಹುದು. ಅದು ಕೂಡ, ಇದುವರೆಗೆ ಇಲ್ಲದ ಯಾವುದೇ ವಿವಾದ ಈಗ ಧುತ್ತನೇ ಹೊತ್ತಿ ಉರಿಯುತ್ತಿರುವುದಾದರೂ ಹೇಗೆ?

ಯಾಕೆಂದರೆ, 2007ರಿಂದೀಚೆಗೆ ರಾಜ್ಯದ 26 ಜಿಲ್ಲೆಗಳಲ್ಲಿನ ಶಾಲೆಗಳಲ್ಲಿಯೂ ಸೋಂದಾ ಸ್ವರ್ಣಮಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ನೇತೃತ್ವದಲ್ಲಿ, ಆಸಕ್ತ ಮಕ್ಕಳಿಗೆ ಗೀತಾ ಬೋಧನೆ ನಡೆಯುತ್ತಿದೆ. ಕೆಲವು ಶಾಲೆಗಳಲ್ಲಿರುವಂತೆ ಬಳೆ ಧರಿಸಬಾರದು, ಬಿಂದಿ ಧರಿಸಬಾರದು, ಇಂಗ್ಲಿಷನ್ನೇ ಮಾತನಾಡಬೇಕು, ಪ್ರೇಯರ್ (ಪ್ರಾರ್ಥನೆ) ವೇಳೆ ನಾವು ಹೇಳಿಕೊಟ್ಟ ಪ್ರಾರ್ಥನೆಯನ್ನೇ ಪಠಿಸಬೇಕು… ಎಂಬಿತ್ಯಾದಿ ಅದೆಷ್ಟೋ ಕಟ್ಟಳೆಗಳಿರುತ್ತವೆ. ಆದರೆ ಈ “ಭಗವದ್ಗೀತೆ ಕಲಿಯಬೇಕು” ಎಂಬುದು ಕಟ್ಟು ನಿಟ್ಟಿನ ಆದೇಶವಲ್ಲ. ಹಾಗೆ ಹೇಳುವುದಾದರೆ ಇದು ಆರಂಭವಾಗಿದ್ದು ‘ಜಾತ್ಯತೀತ’ ಜನತಾ ದಳ ಅಧಿಕಾರದಲ್ಲಿದ್ದ ಕಾಲದಲ್ಲೇ. ಆಗ ಇಲ್ಲದ ಬೊಬ್ಬೆ, ಈಗ ದಿಢೀರನೇ ಹೇಗೆ ಬಂತು? ಭಗವದ್ಗೀತೆ ಬೋಧಿಸಿದ ಸ್ವಾಮೀಜಿಯನ್ನೇ ಬಂಧಿಸಿ ಎಂಬಷ್ಟು ಕೂಗಾಟ ಈಗೇಕೆ?

ಗೀತೆ, ಉಪನಿಷತ್ ಅಧ್ಯಯನ ನಡೆಸಿದ ಮುಸ್ಲಿಂ ವಿದ್ವಾಂಸರು, ಕೇರಳದ ಕ್ರೈಸ್ತ ಪಾದ್ರಿಗಳ ಬಗೆಗೂ ಕೇಳಿದ್ದೇವೆ. ಇಲ್ಲವೇ ಅನ್ಯಧರ್ಮೀಯ ಗ್ರಂಥಗಳನ್ನು ಓದಿ ಕರತಲಾಮಲಕವಾಗಿಸಿಕೊಂಡ ಹಿಂದುಗಳ ಬಗೆಗೂ ಕೇಳಿದ್ದೇವೆ.

“ವಿಮೃಶ್ಯೈತದಶೇಷೇಣ, ಯಥೇಚ್ಛಸಿ ತಥಾ ಕುರು” ಅಂದಿದೆ ಭಗವದ್ಗೀತೆ. ಅಂದರೆ ಸತ್ಪಥ ಯಾವುದು, ದುಷ್ಟ ಪಥ ಯಾವುದು ಎಂದು ವಿಶ್ಲೇಷಿಸಿ, ವಿಮರ್ಶಿಸಿ ಹೆಜ್ಜೆ ಇಡು, ಕಣ್ಣು ಮುಚ್ಚಿಕೊಂಡು ಇದನ್ನು ನಂಬಿ ಬಿಡಬೇಡ ಎಂದು ಕೊನೆಯಲ್ಲಿ ಹೇಳುತ್ತದೆ ಭಗವದ್ಗೀತೆ. ವಿಶ್ಲೇಷಿಸದೇ ಇದ್ದರೆ, ಇದೇ ಸಾಲನ್ನು “ಓಹ್, ಮನಬಂದಂತೆ ಮಾಡು ಅಂದಿದೆಯಲ್ಲಾ ಭಗವದ್ಗೀತೆ” ಅಂತಲೂ ಅರ್ಥೈಸಿಕೊಳ್ಳಬಹುದಲ್ಲ? ಹೀಗಾಗಿ, ಖುರಾನ್ ಆಗಲೀ, ಬೈಬಲ್ ಆಗಲೀ, ಗೀತೆಯೇ ಆಗಲಿ, ಜೀವನವನ್ನು, ಸನ್ಮಾರ್ಗವನ್ನು ಬೋಧಿಸುವಂಥವುಗಳು. ಅದನ್ನು ಅರ್ಥ ಮಾಡಿಕೊಳ್ಳಬೇಕಷ್ಟೇ. ಅಪಾರ್ಥ ಮಾಡಿಕೊಂಡರೆ ಅನಾಹುತ. ಸಚಿವರ ಹೇಳಿಕೆಯನ್ನೇ ತಪ್ಪಾಗಿ ಬಿಂಬಿಸಿದಂತೆ!
[ವೆಬ್‌ದುನಿಯಾಕ್ಕಾಗಿ]

12 COMMENTS

  1. ಖ್ಯಾತ ಪತ್ರಕರ್ತೆ ಬರ್ಖಾ ದತ್

    allallla
    khukhyaata ಪತ್ರಕರ್ತೆ ಬರ್ಖಾ ದತ್

  2. ಈ ಕುಖ್ಯಾತರೆಲ್ಲ ಸೇರಿ ಭಾರತವನ್ನು ಏನು ಮಾಡ ಹೊರಟಿದ್ದಾರೆ?….

  3. ಅವಿ ಯವರೇ ಇದು ಬ್ರೆಕಿಂಗ್ ನ್ಯೂಸ್ ನ ಧಾವಂತ ಅಂತ ನನಗನಿಸುತ್ತಿಲ್ಲ,ನನ್ನ ಅಭಿಪ್ರಾಯದಲ್ಲಿ ಇದರ ಹಿಂದೆ ಡೋಂಗಿ ಜಾತ್ಯಾತೀತವಾದಿಗಳ hidden agenda ಕೆಲಸ ಮಾಡುತ್ತಿದೆ !

  4. ಪವನಜ ಅವರೇ,
    ಲೇಖನ ಮೆಚ್ಚಿಕೊಂಡಿದ್ದಕ್ಕೆ ಮತ್ತು ಅದನ್ನು ಪ್ರಸಾರ ಮಾಡಿದ್ದಕ್ಕೆ ತುಂಬಾ ತುಂಬಾ ಧನ್ಯವಾದ.

    ಪ್ರಶಾಂತ್ ಅವರೇ,
    ಅದುವೇ ಉತ್ತರ ಸಿಗದ ಪ್ರಶ್ನೆ.

    @”ಟ್ವಿ-ಬಾಣ”
    ಹೌದು, ಧ್ವನಿಯೆತ್ತಿದರೆ ಕೋಮುವಾದಿಗಳೆನ್ನುತ್ತಾರೆ, ಸುಮ್ಮನಿರಲು ಮನಸ್ಸೂ ಬರುವುದಿಲ್ಲ. ಜನತೆಗೆ ಸತ್ಯಾಂಶ ತಿಳಿಸದೆ ಮುಚ್ಚಿಟ್ಟರೆ ಪತ್ರಕರ್ತನಾಗಿದ್ದುಕೊಂಡು ಏನು ಪ್ರಯೋಜನ ಅಂತ ಕೇಳುತ್ತೇನೆ ನಾನು!

    @”ಗೆಸ್ಟ್1″
    ಮೆತ್ತಗೆ ಹೇಳಿ, ಕೋಮುವಾದಿ ಎಂಬ ಹಣೆ ಪಟ್ಟಿ ಬಂದೀತು! 🙂

  5. ಎಲ್ಲಾ ಪತ್ರಿಕೆಗಳಲ್ಲಿ ಓದಿದ್ದನ್ನೇ ಓದಿ, ಕೇಳಿದ್ದನ್ನೇ ಕೇಳಿ ಸುಳ್ಳೇ ಸತ್ಯ ಎಂದುಕೊಳ್ಳುವ ಕಾಲ ಬಂದಿದೆ!

  6. ಕಾಗೇರಿಯವರು ಆ ರೀತಿ ಹೇಳಿಕೆ ಕೊಟ್ಟರೇ ಎಂದು ಅಚ್ಚರಿಯಾಗಿತ್ತು. ಈಗ ನಿಜ ತಿಳಿಯಿತು. ಸುಳ್ಳನ್ನೇ ಸತ್ಯ ಮಾಡುವ ಕೆಲ ಪತ್ರಕರ್ತರ ರೋಗಗಸ್ಥ ಮನಸ್ಸು ಗುಣವಾಗಬೇಕಿದೆ. ಒಳ್ಳೆಯ ಲೇಖನ. ಧನ್ಯವಾದಗಳು.

  7. ತ್ರಿವೇಣಿ ಅವರೇ, ಹೌದು, ಸುಳ್ಳನ್ನೇ ನೂರು ಬಾರಿ ಹೇಳಿದ್ರೆ, ಸತ್ಯ ಅಂತ ಆಗುತ್ತದೆಯಲ್ಲವೇ? ಇಂಥಾ ಮಾಧ್ಯಮಗಳು ದೊರೆತಿರುವುದು ನಮ್ಮ ಕರ್ಮ.

  8. ಅಜಯ್ ಅವರೇ,
    ಇದು ಟಿವಿ ನೋಡಿದ ಅಶಿಕ್ಷಿತನಿಗೂ ಅರ್ಥವಾಗುವ ವಿಷಯ. ಆದರೆ ನೇರವಾಗಿ ಭಾಷಣ ಕೇಳಿದ ಮಾಧ್ಯಮದ ಮಂದಿಗೆ ಯಾಕೆ ಅರ್ಥವಾಗಿಲ್ಲವೆಂಬುದೇ ಮಿಲಿಯನ್ ಡಾಲರ್ ಪ್ರಶ್ನೆ.

LEAVE A REPLY

Please enter your comment!
Please enter your name here