ಗೂಗ್ಲಾಸುರನಿಗೆ ನಮಸ್ಕಾರ

0
363

ಏಯ್ ಮರೀ, ನಿನ್ನ ಹೆಸರೇನು?

‘ಅಲಕ್ಷಿತಾ’

‘ಇದೂ ಒಂದು ಹೆಸರಾ’ ಅಂತ ನಾನಂದ್ಕೋತೀನಿ, ಆದ್ರೆ ಬಾಯ್ಬಿಟ್ಟು ಹೇಳಲ್ಲ.

‘ನನ್ನ ಅಣ್ಣನ್ ಹೆಸ್ರು ಏನ್ ಗೊತ್ತಾ, ನಿಂದನ್!’

‘ಓಹ್.’

ಇದೊಂದು ಟ್ರೆಂಡ್. ಹುಡುಗ ಆದ್ರೆ ಮೂರು-ಮೂರುವರೆ ಅಕ್ಷರದ ಹೆಸ್ರು, ಹುಡ್ಗಿಯಾದ್ರೆ ನಾಲ್ಕಕ್ಷರ ಅಥ್ವಾ ಎರಡಕ್ಷರ. ಅದರಲ್ಲಿ ಹೊಸತನ ಇರ್ಬೇಕು, ಯಾರೂ ಇಟ್ಟಿರಬಾರದು, ಅನನ್ಯವಾಗಿರ್ಬೇಕು ಅನ್ನೋ ಅಭಿಲಾಷೆ, ಆಕಾಂಕ್ಷೆ ಬೇರೆ.

ಹೌದು, ಅಭಿಲಾಷ್ ಅಂತಂದ್ರೆ ಹುಡ್ಗ, ಅಭಿಲಾಷಾ ಅಂದ್ರೆ ಹುಡ್ಗಿ; ವಸಂತಾ ಹುಡುಗಿ, ವಸಂತ್ ಹುಡುಗ. ಆಕಾಂಕ್ಷಾ ಇದ್ದದ್ದು, ಆಕಾಂಕ್ಷ್ ಮಾಡಿದ್ರೆ ಅವ್ನು ಹುಡುಗ. ಇಂಥ ಕಸರತ್ತುಗಳೆಲ್ಲ ನಡೆದೂ ನಡೆದು, ಇದ್ದ ಹೆಸರುಗಳೆಲ್ಲ ಮುಗಿದು ಹೋದವೇ? ಸಹಸ್ರನಾಮ, ಶತನಾಮಗಳನ್ನೆಲ್ಲಾ ತಡಕಾಡಿದ ಬಳಿಕ ಅದರಲ್ಲಿಯೂ ಇರಬಹುದಾದ, ನಿರ್ಗುಣ್, ನಿರಾಕಾರ್ ಮುಂತಾದವುಗಳೆಲ್ಲವುಗಳೂ ಸಾಮಾನ್ಯವಾಗಿಬಿಟ್ಟಿರುವಾಗ, ಅನನ್ಯ ಹೆಸರಿಗೇನು ಮಾಡುವುದು?

ಇದ್ದಾನಲ್ಲ ಗೂಗ್ಲಾಸುರ? ಸರ್ಚ್ ಮಾಡಿ. ಎ ಅಕ್ಷರದಿಂದಲೋ, ಕಿ ಅಕ್ಷರದಿಂದಲೋ ಆರಂಭವಾಗಬೇಕು ಅಂತೆಲ್ಲ ಕೇಳಿಸಿಕೊಂಡು, ಸಾಕಷ್ಟು ಕನ್ನಡ, ಸಂಸ್ಕೃತ ಭಂಡಾರಗಳಲ್ಲಿ ವಾಚ್ಯ ಮತ್ತು ಶ್ರಾವ್ಯವಾದ ಹೆಸರುಗಳಿದ್ದರೂ, ನಮಗಿಂದು ಗೂಗಲ್ಲೇ ಮುಖ್ಯವಾಗಿಬಿಡುತ್ತಿದೆ. ಸರ್ಚ್ ಮಾಡಿದರಾಯಿತು. ಹಲವು ಅಕ್ಷರಗಳ ಕಾಂಬಿನೇಷನ್ ಮಾಡಿಕೊಂಡು, ಕೊನೆಗೆ, ‘ಥೋ ಇದು ಸಮಯ ಹಾಳು’ ಅಂದ್ಕೊಂಡು, ಕಷ್ಟಪಟ್ಟು ಗಂಡ-ಹೆಂಡತಿಯ ಹೆಸರಿನ ಒಂದೊಂದು ಅಕ್ಷರ ಬರುವಂತೆ ಅಕ್ಷರ ಪೋಣಿಸಿ, ಹೆಸರಿಡುವುದು. ಅಜ್ಜ-ಅಜ್ಜಿ, ‘ಛೇ ಇದೆಂಥಾ ಹೆಸ್ರಪ್ಪಾ, ಗೊತ್ತಾಗಲೊಲ್ಲದು’ ಅಂತ ಗೊಣಗುವುದು… ಆಧುನಿಕತೆಯ ಪ್ರವಾಹದ ಝರಿಯಿಂದ ಒಂದಿಷ್ಟು ಅಂತರ ಕಾಯ್ದುಕೊಂಡ ಹಿರಿಯರಿರುವ ಮತ್ತು ಆಧುನಿಕತೆಗೆ ಒಗ್ಗಿಕೊಂಡ ಕಿರಿಯರಿರುವ ಮನೆಗಳಲ್ಲಾಗುವ ಕಥೆಯಿದು.

ಮನೆಗೆ ಹೆಸರಿಡೋದಕ್ಕೂ ಅಷ್ಟೇ. ಇದ್ದ-ಬದ್ಧ ಹೆಸರುಗಳೆಲ್ಲ ಇಟ್ಟರಾಗುತ್ತಾ? ನಗರಗಳಲ್ಲಂತೂ ಪಕ್ಕದ ಮನೆಗಳಿಗೇ ನಮ್ಮಿಷ್ಟದ ಹೆಸರಿಟ್ಟುಬಿಟ್ಟಾಗಿದೆ. ನಿವಾಸಗಳು, ನಿಲಯಗಳು, ಅದೆಲ್ಲಾ ಆಗಿ ವಿಲ್ಲಾಗಳು…. ಇದರಲ್ಲಿಯೂ ಸುಖ ನಿವಾಸ, ಸುಖ ನಿಲಯ ಇದ್ದ ರೀತಿ ಸುಖ ವಿಲ್ಲಾ ಇಡೋ ಹಾಗಿಲ್ಲ! ನಡೆ, ಹುಡುಕು ಗೂಗಲ್! ಅರ್ಥವಾಗದ ಆದರೂ ಕೇಳಲು ಹಿತಕರವಾದ ಅಕ್ಷರ ಜೋಡಿಸಿ ಹೆಸರಿಡೋದೇ!

ಮಕ್ಕಳಲ್ಲಿ ಮತ್ತೊಂದು ಟ್ರೆಂಡ್ ಅಪಾಯಕಾರಿಯಾಗಿ ಬೆಳೆಯುತ್ತಿದೆ. ಮಕ್ಕಳನ್ನೊಮ್ಮೆ ಕೇಳಿ ನೋಡಿದೆ.
ಬಿಲೀಫ್ ಎಂಬುದರ ಸ್ಪೆಲ್ಲಿಂಗ್ ಏನ್ ಮರೀ? Belief ಅಥವಾ Beleif?

ಮಗು ತಕ್ಷಣವೇ ಮುಂದಿದ್ದ ಕಂಪ್ಯೂಟರೋ, ಮೊಬೈಲೋ ಹಿಡಿದು ಗೂಗಲ್‌ನಲ್ಲಿ ಸರ್ಚ್ ಮಾಡಿತು. Bel ಬರೆದ ತಕ್ಷಣ, ಡ್ರಾಪ್‌ಡೌನ್ ಮೆನುವಿನಲ್ಲಿ ಆ ಅಕ್ಷರಗಳಿಂದ ಆರಂಭವಾಗುವ ಒಂದಷ್ಟು ಪದಗಳು ಕಾಣಿಸತೊಡಗುತ್ತವೆ. ಹೆಚ್ಚು ಬಳಕೆಯಾಗಿರುವುದೇ ಗೂಗಲ್‌ನಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ ಮತ್ತು ಪಟ್ಟಿಯಲ್ಲಿ ಎಲ್ಲಕ್ಕಿಂತ ಮೇಲೆ ಕಾಣಿಸುತ್ತದೆ. ಇದು ಗೂಗಲ್ ಅಲ್ಗಾರಿದಂ. ಅದನ್ನೇ ಮಗು ಕಲಿಯುತ್ತದೆ, ಅದನ್ನೇ ಸರಿ ಎಂದುಕೊಳ್ಳುತ್ತದೆ ಆ ಮಗು.

ಕನ್ನಡ ಪದಗಳು ಅಥವಾ ಯಾವುದೇ ಭಾಷೆಯ ಯಾವುದೇ ಪದಗಳಿಗಾದರೂ ಪರಿಸ್ಥಿತಿ ಇದುವೇ. ಸರಿಯಾಗಿ ಕನ್ನಡ ಬಾರದವರು ವೆಬ್‌ನಲ್ಲಿ ಹೆಚ್ಚು ಸಕ್ರಿಯರಾಗಿದ್ದರೆ ಮುಂದಿನ ಪೀಳಿಗೆಯ ಮಕ್ಕಳು ಕೂಡ ತಪ್ಪು ತಪ್ಪು ಅಕ್ಷರಗಳನ್ನೇ ಸರಿ ಅಂತ ತಿಳಿದುಕೊಂಡು ಬೆಳೆಯಬಹುದು. ಇಂದಿನ ಮಕ್ಕಳೇ ಮುಂದಿನ ಜನಾಂಗ ಅಲ್ಲವೇ? ಒಂದು ಉದಾಹರಣೆ. ಹಾರ್ಧಿಕ ಶುಭಾಷಯಗಳು. ಇವೆರಡೂ ಪದಗಳ ಬಳಕೆ ತಪ್ಪೇ. ಆದರೆ ಗೂಗಲ್ ಸರ್ಚ್ ಮಾಡಿ ತೋರಿಸಿದಾಗ ಎರಡೂ ಕಾಣಿಸುತ್ತದೆ. ಮಕ್ಕಳು ತಮಗೆ ಕಂಡದ್ದನ್ನೇ ಅನುಸರಿಸುತ್ತಾರೆ. ಹೃದಯಪೂರ್ವಕ ಶುಭದ ಆ’ಶ’ಯಗಳನ್ನು ಮರೆತು ಮಹಾಪ್ರಾಣಕ್ಕೆ ಮೊರೆ ಹೋಗುತ್ತಾರೆ.

ಈಗೀಗ, ಮತ್ತೊಂದು ಟ್ರೆಂಡ್ ಶುರುವಾಗಿಬಿಟ್ಟಿದೆ. ಕೂಡು ಕುಟುಂಬವು ಕೇಂದ್ರೀಕೃತ ಕುಟುಂಬವಾಗಿ ಪರಿವರ್ತನೆಗೊಂಡ ಫಲವಿದು. ಪುಟ್ಟ ಮಗುವಿಗೆ ಕೆಮ್ಮು. ಏನು ಮಾಡಬೇಕೆಂದು ತೋರುತ್ತಿಲ್ಲ. ಮನೆಯಲ್ಲಿ ಅಜ್ಜಿಮದ್ದಿನ ಅನುಭವಿಗಳ್ಯಾರೂ ಇಲ್ಲ. ಇದ್ದಾನಲ್ಲ ಗೂಗ್ಲಾಸುರ! Home remedy for cough ಅಂತ ಟೈಪ್ ಮಾಡಿ, ಕೀಬೋರ್ಡ್‌ನ ಎಂಟರ್ ಬಟನ್ ಕುಟ್ಟಿಬಿಡುತ್ತೇವೆ. ಲಕ್ಷಗಟ್ಟಲೆ ಸರ್ಚ್ ರಿಸಲ್ಟುಗಳು. ಅದರಲ್ಲಿ ಎಲ್ಲವೂ ಸಾಚಾ ಇರಲಾರವು. ಯಾವುದು ಸರಿ ಎಂಬುದನ್ನು ನಿರ್ಧರಿಸುವಷ್ಟು, ವಿಚಾರಿಸುವಷ್ಟು ತಾಳ್ಮೆಯೂ ನಮಗಿರೋದಿಲ್ಲ. ಯಾವುದಾದರನ್ನೊಂದು ಮಾಡಿಬಿಡುತ್ತೇವೆ. ವೆಬ್‌ನಲ್ಲಿ ಇರುವುದು ಎಲ್ಲವೂ ನಂಬಲರ್ಹವೇ ಆಗಿರಲಿಕ್ಕಿಲ್ಲ ಎಂಬ ವಿವೇಚನೆ ಬೇಕಾಗುತ್ತದೆ ಎಂದು ಹೇಳಲಷ್ಟೇ ಈ ಉದಾಹರಣೆ.
ಇನ್ನು, ನಮಗೆ ತಿಳಿಯದ ವಿಷಯ ಏನಿದ್ದರೂ, how to ಅಂತ ಬರೆದು, ಮುಂದಿನ ಪದ ಹಾಕಿ ಹುಡುಕುತ್ತೇವೆ. ಉದಾಹರಣೆಗೆ, ‘How to make ganji’ ಅಂತ ಇಂಗ್ಲಿಷಿನಲ್ಲಿ ಬರೆದು ಸರ್ಚ್ ಮಾಡಿದರೆ, ಧುತ್ತನೇ 12 ಲಕ್ಷ ರಿಸಲ್ಟ್ ಪುಟಗಳು ಬಂದಿರುತ್ತವೆ. ಅದ್ರಲ್ಲಿ ಗಂಜಿಗೆ ಒಗ್ಗರಣೆ ಹಾಕುವ ರೆಸಿಪಿ ಕೂಡ ಇರಬಹುದು!

ಹೆಚ್ಚಿನ ಸುಶಿಕ್ಷಿತರು ಎಷ್ಟೋ ಮಂದಿಗೆ ಉಪಕಾರವಾಗಲಿ ಅಂತ ಸಾಕಷ್ಟು ‘ಹೇಗೆ ಮಾಡುವುದು’ ಮಾದರಿಯ ವಿಷಯಗಳನ್ನು ಸರಿಯಾಗಿಯೇ ವಿವರಿಸಿರುತ್ತಾರೆ. ಆದರೆ, ಕೆಲವರು ಅರೆಬರೆ ಜ್ಞಾನ ಪಡೆದವರು ತಮಗೆ ತಿಳಿದಿರುವುದನ್ನಷ್ಟೇ ವೆಬ್ ಅಥವಾ ಬ್ಲಾಗ್‌ಗಳಲ್ಲಿ ಸೇರಿಸಿರುತ್ತಾರೆ. ಇದನ್ನೂ ಗೂಗಲ್ ಹುಡುಕಿ ತೋರಿಸಿ ನಿಮ್ಮ ಮುಂದಿಡುತ್ತದೆ. ಯಾವುದನ್ನು, ಹೇಗೆ ನಂಬಬೇಕು? ಇದಕ್ಕೊಂದೇ ಪರಿಹಾರ. ಯಾವುದು ವಿಶ್ವಾಸಾರ್ಹ ವೆಬ್ ಸೈಟ್ ಎಂಬುದನ್ನು ಮೊದಲು ಖಚಿತ ಮಾಡಿಕೊಳ್ಳುವುದು.

ನಮ್ಮ-ನಿಮ್ಮ ಕರ್ತವ್ಯ
ಜನನಿ ತಾನೇ ಮೊದಲ ಗುರುವು ಎಂಬುದು ಹೌದಾದರೂ, ಈಗ ಜನನಿ ಜನಕರಿಬ್ಬರೂ ವಿಶ್ವ ಗುರುಗಳು. ಯಾಕೆ? ಇಬ್ಬರೂ ಇಂಟರ್ನೆಟ್ಟೆಂಬ ಅವಾಸ್ತವಿಕವೂ ಆದ ಜಗತ್ತಿನಲ್ಲಿ ಓಡಾಡುತ್ತಲೇ ಇರುತ್ತಾರೆ, ಫೇಸ್‌ಬುಕ್, ಬ್ಲಾಗ್, ಟ್ವಿಟರ್ ಸಹಿತ ಎಲ್ಲ ಸೋಷಿಯಲ್ ಮೀಡಿಯಾಗಳಲ್ಲಿ ಅಕ್ಷರ ಯಜ್ಞದಲ್ಲಿ ಹವಿಸ್ಸು ಸೇರಿಸುತ್ತಲೇ ಇರುತ್ತಾರೆ. ಅವರು ವೆಬ್‌ಗೆ ಊಡಿಸಿದ ಈ ಮಾಹಿತಿ ನಮಗಷ್ಟೇ ಅಲ್ಲ, ಇಡೀ ವಿಶ್ವಾದ್ಯಂತ ಇರುವವರಿಗೆ ತಿಳಿಯುತ್ತದೆ. ಎಷ್ಟೋ ಪೀಳಿಗೆಯವರು ಸರ್ಚ್ ಮಾಡಿದಾಗ ಸಿಗುವುದೂ ಇದೇ ಮಾಹಿತಿ. ವೆಬ್ ತಾಣಗಳಿಗೆ ನಾವೇನು ಉಣಿಸುತ್ತೇವೋ, ಸರ್ಚ್ ಬಟನ್ ಒತ್ತಿದಾಕ್ಷಣ ಅದು ಬಗೆಬಗೆದು ತೋರಿಸುವುದು ಇದನ್ನೇ. ಹೀಗಾಗಿ ತಪ್ಪು ಮಾಹಿತಿ ಉಣಿಸಿದರೆೇ? ಈಗಿನ ಮಕ್ಕಳಿಗೆ ಪೋಷಕಾಂಶಯುಕ್ತ ಆಹಾರವನ್ನು ಉಣಿಸೋ ಬದ್ಲು ಜಂಕ್ ಫುಡ್ಡನ್ನೇ ಪ್ರಧಾನ ಆಹಾರವನ್ನಾಗಿ ಕೊಟ್ಟ ಹಾಗಾಗುತ್ತದೆ. ಊರ್ಧ್ವಮುಖ ಬೆಳವಣಿಗೆಯಾಗುವುದರೊಂದಿಗೆ ಅಡ್ಡಡ್ಡವೂ ಬೆಳೆಯಲಾರಂಭಿಸುತ್ತವೆ ಮಕ್ಕಳು. ಆಮೇಲೆ ಅದೇ ಮಕ್ಕಳಿಗೆ ಬೈಯೋದು ನಾವೇ ಅಲ್ಲವೇ? ಸಿಕ್ಕಿದ್ದನ್ನು ತಿಂದು ಹೀಗಾಗಿದ್ದೀ ಅಂತಲೋ, ಇಂಟರ್ನೆಟ್ಟು ಓದಿ ಓದಿ ತಪ್ಪು ತಪ್ಪೇ ಹೇಳ್ತೀಯಲ್ಲ ಅಂತಲೋ ಮಕ್ಕಳಿಗೆ ಬೈಯೋರು ನಾವೇ ಆಗಬಲ್ಲೆವು. ಹೀಗಾಗಿ, ನಾವು ಸರಿಯಿದ್ದರೆ, ಮುಂದಿನ ಪೀಳಿಗೆಯವರೂ ಸರಿ ಇರುತ್ತಾರೆ. ಆನ್‌ಲೈನ್ ಎಂಬುದು ಜೀನ್ಸ್ (ವಂಶವಾಹಿ) ಇದ್ದಂತೆ. ಅದನ್ನು ಸರಿಯಾಗಿ, ಸ್ವಚ್ಛವಾಗಿ, ಸುಂದರವಾಗಿ ಮತ್ತು ನಿಖರವಾಗಿ ಇಟ್ಟುಕೊಳ್ಳುವುದು ಸುಶಿಕ್ಷಿತರಾದ ನಮ್ಮ ಜವಾಬ್ದಾರಿ. ಯಾಕೆಂದರೆ ನಮ್ಮ ಮಕ್ಕಳಿಗೆ ಭವಿಷ್ಯವೂ, ಅಂಗೈಯಲ್ಲಿನ ಜಗತ್ತೂ ಈ ಇಂಟರ್ನೆಟ್ಟೇ.

* ಅವಿನಾಶ್ ಬೈಪಾಡಿತ್ತಾಯ (ವಿಜಯ ಕರ್ನಾಟಕ ಸಾಪ್ತಾಹಿಕದಲ್ಲಿ ಬರೆದ ಹಾಳುಹರಟೆ 🙂 )

LEAVE A REPLY

Please enter your comment!
Please enter your name here