ನಿಮ್ಮ ಫೋಟೋಗಳನ್ನು ತಿದ್ದಲು ಸರಳ, ಉಚಿತ ತಂತ್ರಾಂಶಗಳು

0
273

ಜನ ಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ- ವಿ.ಕ.ಅಂಕಣ-16 (ಡಿಸೆಂಬರ್ 10, 2012)
ನಿಮ್ಮ ಬದುಕಿನ ಸುಂದರ ಕ್ಷಣಗಳನ್ನು ಡಿಜಿಟಲ್ ಕ್ಯಾಮರಾದಲ್ಲಿ ಸೆರೆಹಿಡಿದ್ದೀರಿ. ಒಂದೊಂದು ಫೋಟೋ ಕೂಡ 1 ಎಂಬಿ ಅಥವಾ ಹೆಚ್ಚು ಗಾತ್ರವನ್ನು ಹೊಂದಿರುತ್ತವೆ. ಇದನ್ನೇ ನಿಮ್ಮ ಬ್ಲಾಗಿಗೆ ಅಥವಾ ವೆಬ್‌ಸೈಟಿಗೆ ಏರಿಸಿಬಿಟ್ಟರೆ, ನಿಮ್ಮ ಡೇಟಾ ಶುಲ್ಕವನ್ನು (ಇಂಟರ್ನೆಟ್ ಸಂಪರ್ಕದ ಪ್ಲ್ಯಾನ್‌ಗಳನ್ನು ಅವಲಂಬಿಸಿ) ಅದು ಹೀರುವುದು ಖಂಡಿತಾ. ಇದಕ್ಕಾಗಿ ನೀವು ನಿಮ್ಮ ವೆಬ್‌ಸೈಟಿಗೆ ಅಪ್‌ಲೋಡ್ ಮಾಡುವ ಫೋಟೋಗಳ ಗಾತ್ರವನ್ನು ಕಿರಿದುಗೊಳಿಸಿದರೆ ಡೇಟಾ ವೆಚ್ಚವನ್ನೂ ತಗ್ಗಿಸಬಹುದು, ಶೀಘ್ರವೇ ಅಪ್‌ಲೋಡ್ ಮಾಡುವುದಕ್ಕೂ ಅನುಕೂಲ.

ಅದೇ ರೀತಿ, ನೀವು ತೆಗೆದ ಫೋಟೋಗಳಲ್ಲಿ ಒಂದಿಷ್ಟು ಭಾಗವನ್ನು ಮಾತ್ರವೇ ಇರಿಸಿಕೊಂಡು, ಸುತ್ತಮುತ್ತ ಕ್ರಾಪ್ ಮಾಡಬೇಕಿತ್ತು, ಅಥವಾ ಫೇಸ್‌ಬುಕ್ ಇಲ್ಲವೇ ಬೇರೆ ಯಾವುದಾದರೂ ಪ್ರೊಫೈಲ್‌ಗೆ ಚಿತ್ರವನ್ನು ಕಟ್ ಮಾಡಿ ಹಾಕೋಣ ಅಂತ ಅನ್ನಿಸಬಹುದು. ಆದರೆ ಈ ಫೋಟೋಗಳನ್ನು ತಿದ್ದುವ ಸಾಫ್ಟ್‌ವೇರ್ ಇಲ್ಲ. ಅಡೋಬಿ ಅವರ ಫೋಟೋಶಾಪ್ ಖರೀದಿ ತುಂಬಾ ಕಷ್ಟ ಮತ್ತು ಅದನ್ನು ಕಂಪ್ಯೂಟರಿನಲ್ಲಿ ಅಳವಡಿಸಿಕೊಂಡರೆ ಸಾಕಷ್ಟು ‘ಭಾರ’ ಇರುವುದರಿಂದಾಗಿ, ಇಡೀ ಸಿಸ್ಟಂ ಸ್ಲೋ ಆಗುತ್ತದೆ ಅನ್ನುವುದು ಹಲವರ ಅನುಭವ. ಫೋಟೋಶಾಪ್ ತಂತ್ರಾಂಶವು ಬಹುತೇಕ ಎಲ್ಲ ಚಿತ್ರ ಕಲಾವಿದರಲ್ಲಿ, ವಿನ್ಯಾಸಕಾರರಲ್ಲಿ ಲಭ್ಯವಿರುತ್ತದೆ. ಆದರೆ ಇದನ್ನು ಕಂಪ್ಯೂಟರಿನಲ್ಲಿ ಅಳವಡಿಸಿ ಓಪನ್ ಮಾಡಿಕೊಂಡರೆ ಬೇರೆ ಕೆಲಸ ಮಾಡಲಾರದಷ್ಟು ಸಿಸ್ಟಂ ನಿಧಾನವಾಗುತ್ತದೆ. (ಕಂಪ್ಯೂಟರಿನ ಪ್ರೊಸೆಸರ್ ಅಥವಾ RAM ಕಡಿಮೆ ಇದ್ದಾಗ ಇದು ಬಾಧಿಸುವುದು ಹೆಚ್ಚು). ಹೀಗಾಗಿ, ಸುಲಭವೂ, ಸರಳವೂ ಆಗಿರುವ ಮತ್ತು ನಮ್ಮ ಇಷ್ಟಕ್ಕೆ ತಕ್ಕಂತೆ ಉಚಿತವೂ ಆಗಿರುವ ಎರಡು ಸಾಫ್ಟ್‌ವೇರ್‌ಗಳನ್ನು ಇಲ್ಲಿ ಪರಿಚಯಿಸುತ್ತಿದ್ದೇನೆ.

ಮೊದಲನೆಯದು ಫೋಟೋಫಿಲ್ಟರ್ (PhotoFiltre). ಇದನ್ನು ನೀವು ಅಳವಡಿಸಿಕೊಂಡರೆ, ಫೋಟೋಗಳನ್ನು ಬೇಕಾದಂತೆ ತಿದ್ದುವ ಎಲ್ಲ ಟೂಲ್‌ಗಳೂ ಇದರಲ್ಲಿವೆ. ಫೋಟೋಶಾಪ್‌ನಲ್ಲಿರುವಷ್ಟು ವೈವಿಧ್ಯಮಯ ಟೂಲ್‌ಗಳು ಇಲ್ಲದಿದ್ದರೂ, ಸಾಮಾನ್ಯ ಬಳಕೆಗೆ ಇದು ಸಾಕು. ಇದರ ಅತಿದೊಡ್ಡ ಅನುಕೂಲವೆಂದರೆ, ಈ ತಂತ್ರಾಂಶದ ಗಾತ್ರ. ಕಂಪ್ಯೂಟರಿನಲ್ಲಿ ಸಾಕಷ್ಟು ಮೆಮೊರಿಯನ್ನೂ ಇದು ತಿನ್ನುವುದಿಲ್ಲ, ಹೆಚ್ಚಿನ RAM ಅಥವಾ ವೇಗದ ಪ್ರೊಸೆಸರ್‌ನ ಅಗತ್ಯವೂ ಇದಕ್ಕಿರುವುದಿಲ್ಲ. ಆದರೆ ಇದರಲ್ಲಿ ಒಂದು ಸಮಸ್ಯೆಯೆಂದರೆ, ನೀವು ಫೋಟೋಗೆ ಕ್ಯಾಪ್ಷನ್ ಅಥವಾ ಟೈಟಲ್ ಅನ್ನು ನುಡಿ ಅಥವಾ ಬರಹ ಇಲ್ಲವೇ ಶ್ರೀಲಿಪಿ ಮುಂತಾದ ಫಾಂಟ್‌ಗಳಲ್ಲಿ ಹಾಕಬೇಕಾಗುತ್ತದೆ. ಅಂದರೆ ಯುನಿಕೋಡ್‌ನ ಬೆಂಬಲ ಇಲ್ಲಿ ಇರುವುದಿಲ್ಲ. ಆದರೆ ಅಕ್ಷರಗಳನ್ನು ಸೇರಿಸುವುದನ್ನು ಬಿಟ್ಟರೆ ಇದು ಉಚಿತವಾಗಿರುವ ಮತ್ತು ಚೆನ್ನಾಗಿರುವ ತಂತ್ರಾಂಶ. ಇದನ್ನು ಇಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು: www.photofiltre.com/

ಮತ್ತೊಂದು ಲೈಟ್‌ವೇಟ್ ಆಗಿರುವ, ಸುಲಭವಾಗಿ ಫೋಟೋ ಎಡಿಟ್ ಮಾಡಬಹುದಾದ ಮತ್ತು ಉಚಿತವಾಗಿ ಲಭ್ಯವಿರುವ ಸಾಫ್ಟ್‌ವೇರ್ ಎಂದರೆ ಪೈಂಟ್ ಡಾಟ್ ನೆಟ್ (Paint.NET www.getpaint.net). ಫೋಟೋ ಶಾಪ್‌ನಲ್ಲಿ ಏನೆಲ್ಲಾ ಇದೆಯೋ, ಆ ಸೌಲಭ್ಯಗಳೆಲ್ಲವೂ ಬಹುತೇಕ ಇದರಲ್ಲಿ ಲಭ್ಯವಿದೆ. ಜತೆಗೆ ಇದರ ಅತ್ಯಂತ ದೊಡ್ಡ ಅನುಕೂಲವೆಂದರೆ, ಯುನಿಕೋಡ್‌ನಲ್ಲಿ ಅಕ್ಷರವನ್ನು ಯಾವುದೇ ಫೋಟೋಗಳ ಮೇಲೆ ಅಳವಡಿಸಬಹುದು ಅಥವಾ ಶೀರ್ಷಿಕೆಯನ್ನೋ, ಅಡಿಬರಹವನ್ನೋ ನೀಡಬಹುದು.

ಎಡಿಟಿಂಗ್ ಬಗ್ಗೆ ಅಲ್ಪಸ್ವಲ್ಪ ಗೊತ್ತಿದ್ದರೆ, ಸಮಯಾವಕಾಶವಿದ್ದಾಗ ಎಲ್ಲ ಟೂಲ್‌ಗಳನ್ನು ಬಳಸಿ, ಒಂದು ಚಿತ್ರವನ್ನು ಯಾವ ರೀತಿ ಸ್ವರೂಪಗೊಳಿಸಬಹುದು ಮತ್ತು ವಿರೂಪಗೊಳಿಸಬಹುದು ಎಂಬುದನ್ನು ನೀವೇ ಸ್ವಯಂ ಆಗಿ ಕಲಿಯಬಹುದಾಗಿದೆ. ಯಾವುದೇ ಪ್ರಮುಖ ಕಂಪನಿಗಳ ಡಿಜಿಟಲ್ ಕ್ಯಾಮರಾಗಳನ್ನು ಖರೀದಿಸುವಾಗ ಅದರ ಜತೆಗೆ ಸಾಫ್ಟ್‌ವೇರ್ ಸಿಡಿ ನೀಡುತ್ತಾರೆ. ಅದರಲ್ಲಿರುವ ಫೋಟೋ ಎಡಿಟಿಂಗ್ ತಂತ್ರಾಂಶವೂ ಚೆನ್ನಾಗಿರುತ್ತದೆ. ಅದು ಬೇಡವೆಂದಾದರೆ, ನೀವು ಈ ಮೇಲಿನವುಗಳನ್ನು ಬಳಸಿಕೊಳ್ಳಬಹುದು.

LEAVE A REPLY

Please enter your comment!
Please enter your name here