ಸ್ಮಾರ್ಟ್‌ಫೋನ್ ಇದೆಯೇ? ನೀವು ಮಾಡಬಾರದ ತಪ್ಪುಗಳು ಇಲ್ಲಿವೆ!

0
418

ಮಾಹಿತಿ@ತಂತ್ರಜ್ಞಾನ: ಅವಿನಾಶ್ ಬಿ. ವಿಜಯ ಕರ್ನಾಟಕ ಅಂಕಣ 19 ಜೂನ್ 2017
ಮನೆಯಿಂದ ಹೊರಡುವಾಗ ಪರ್ಸ್ ಇರುವ ರೀತಿಯಲ್ಲೇ ಸ್ಮಾರ್ಟ್‌ಫೋನ್‌ಗಳೀಗ ನಮ್ಮ ಬದುಕಿನ ಅನಿವಾರ್ಯ ಅಂಗವಾಗಿಬಿಟ್ಟಿವೆ. ಅವು ನಮ್ಮೆಲ್ಲರ ವೈಯಕ್ತಿಕ ಮಾಹಿತಿಯನ್ನು ಒಳಗೊಂಡಿರುವ ಸಾಧನವಾಗಿದ್ದರೂ ಎಲ್ಲರೂ ಆ ಬಗ್ಗೆ ನಿಷ್ಕಾಳಜಿ ತೋರಿಸುತ್ತಿದ್ದೇವೆ, ಎಲ್ಲೆಲ್ಲೋ ಇಟ್ಟಿರುತ್ತೇವೆ ಅಥವಾ ಮಕ್ಕಳ ಕೈಗೆ ಕೊಟ್ಟಿರುತ್ತೇವೆ. ಮಕ್ಕಳು ಆಟವಾಡುತ್ತಾಡುತ್ತಾ, ಇಂಟರ್ನೆಟ್ ಸಂಪರ್ಕಿಸಿ, ಲಾಗಿನ್ ಆಗಿರುವ ನಿಮ್ಮ ಖಾತೆಗಳಿಂದ ತಮಗರಿವಿಲ್ಲದಂತೆಯೇ ಸಂದೇಶಗಳನ್ನು ಕಳುಹಿಸುವುದು, ಯಾವುದಾದರೂ ಲಿಂಕ್ ಒತ್ತಿಬಿಡುವುದು, ‘ಪರ್ಚೇಸ್’ ಬಟನ್ ಕ್ಲಿಕ್ ಮಾಡುವುದು, ಸಂದೇಶ ಕಳುಹಿಸುವುದು, ಅನಗತ್ಯ ಫೋಟೋ ಕಳುಹಿಸುವುದು… ಮುಂತಾದ ಸಾಧ್ಯತೆಗಳಿರುತ್ತವೆ. ಇವುಗಳಿಂದ ಮುಜುಗರವಷ್ಟೇ ಅಲ್ಲ, ಕೆಲವೊಮ್ಮೆ ನಮ್ಮ ಅತ್ಯಂತ ಖಾಸಗಿ ಮಾಹಿತಿಗಳೂ ಸೋರಿಕೆಯಾಗುವ ಅಪಾಯವಿರುತ್ತದೆ. ಇಂಥ ನಿರ್ಲಕ್ಷ್ಯವೊಂದು ಭಾರಿ ದೊಡ್ಡ ಅಪಾಯಕ್ಕೆ ಕಾರಣವಾಗಬಹುದು. ಕೆಲವೊಂದಿಷ್ಟು ಅತ್ಯಂತ ಸುಲಭವಾದ ಉಪಕ್ರಮಗಳನ್ನು ಅನುಸರಿಸಿದೆವೆಂದಾದರೆ ನಮ್ಮ ವೈಯಕ್ತಿಕ ಮಾಹಿತಿಗಳು, ಅಗತ್ಯವಿರುವ ಫೈಲುಗಳು ಡಿಲೀಟ್ ಆಗದಂತೆ, ವೈರಸ್ ದಾಳಿಯಿಂದ ಸ್ಮಾರ್ಟ್‌ಫೋನ್‌ಗಳನ್ನು ರಕ್ಷಿಸುವಲ್ಲಿ ನಿಶ್ಚಿಂತೆಯಿಂದಿರಬಹುದು.

ಸ್ಕ್ರೀನ್ ಲಾಕ್
ಅತ್ಯಂತ ಮುಖ್ಯ ಇದು. ಸ್ಕ್ರೀನ್ ಲಾಕ್ ವ್ಯವಸ್ಥೆ ಪ್ರತಿಯೊಂದು ಫೋನ್‌ನಲ್ಲಿಯೂ ಇರುತ್ತದೆ. ಇದನ್ನು ಬಳಸಿಕೊಳ್ಳಿ. ಕೈತಪ್ಪಿ ಯಾವುದೋ ಆ್ಯಪ್ ಸ್ಪರ್ಶಿಸುವುದು, ನಮಗೆ ಗೊತ್ತಿಲ್ಲದಂತೆಯೇ ಯಾರಿಗೋ ಕಾಲ್ ಹೋಗುವುದು, ರೀಡಯಲ್ ಆಗುವುದು… ಇಂಥ ಮೂಲಭೂತ ಅಧ್ವಾನಗಳನ್ನೆಲ್ಲ ತಪ್ಪಿಸಬಹುದು. ಜತೆಗೆ, ಚಿಕ್ಕ ಮಕ್ಕಳಾಗಲೀ, ನಮ್ಮ ಫೋನ್ ಪಡೆದುಕೊಂಡ ಯಾರೇ ಆಗಲೀ, ನಿಮ್ಮ ಅನುಮತಿಯಿಲ್ಲದೆ ಸ್ಕ್ರೀನ್ ನೋಡದಂತೆ, ಫೋನ್ ಬಳಸದಂತೆ ಇದು ತಡೆಯುತ್ತದೆ. ಸೆಟ್ಟಿಂಗ್ಸ್‌ನಲ್ಲಿ, ಸ್ಕ್ರೀನ್ ಲಾಕ್ ಅಥವಾ ಸೆಕ್ಯುರಿಟಿ ಎಂದಿರುವಲ್ಲಿ, ‘ಸ್ಕ್ರೀನ್ ಲಾಕ್ ಟೈಪ್’ ಆಯ್ಕೆ ಮಾಡಿಕೊಳ್ಳಿ. ಅದರಲ್ಲಿ ಸಾಮಾನ್ಯವಾದ ‘ಸ್ವೈಪ್’ ಆಯ್ಕೆ ಇರುತ್ತದೆ, ಅದೇ ರೀತಿ ‘ಪ್ಯಾಟರ್ನ್’ (ವಿಭಿನ್ನ ವಿನ್ಯಾಸದಲ್ಲಿ ಚುಕ್ಕಿ ಜೋಡಿಸುವ ವಿಧಾನ), ಪಿನ್ (ನಂಬರ್), ಪಾಸ್‌ವರ್ಡ್ (ಅಕ್ಷರ, ಸಂಖ್ಯೆ) ಆಯ್ಕೆಗಳಿರುತ್ತವೆ. ಇತ್ತೀಚಿನ ಫೋನ್‌ಗಳಲ್ಲಿ ಬೆರಳಚ್ಚು (ಫಿಂಗರ್ ಪ್ರಿಂಟ್) ದಾಖಲಿಸಿಕೊಂಡು, ನಮ್ಮ ಬೆರಳು ಸ್ಕ್ಯಾನ್ ಮಾಡಿದರಷ್ಟೇ ಸ್ಕ್ರೀನ್ ಓಪನ್ ಆಗುವ ಆಯ್ಕೆಯೂ ಇದೆ. ಯಾವುದಾದರೊಂದು ಉಪಯೋಗಿಸಿ. ಅನಧಿಕೃತವಾಗಿ ಯಾರಾದರೂ ನಿಮ್ಮ ಫೋನ್ ಬಳಸುವುದನ್ನು ತಪ್ಪಿಸಬಹುದು. ಯಾವುದೇ ರೀತಿಯ ಸ್ಕ್ರೀನ್ ಲಾಕ್ ತೆಗೆಯುವುದು ತಜ್ಞ ಟೆಕ್ಕಿಗಳಿಗೆ ಸುಲಭವಾದರೂ, ಮೂಲಭೂತ ರಕ್ಷಣೆ ಇಲ್ಲಿರುತ್ತದೆ. ಇವುಗಳಲ್ಲಿ ಪಿನ್ ಅಥವಾ ಪಾಸ್‌ವರ್ಡ್ ಬಳಸುವುದು ಸೂಕ್ತ. ಒಂದು ನಿಮಿಷದ ಬಳಿಕ ಸ್ಕ್ರೀನ್ ಲಾಕ್ ಆಗುವಂತೆ ಹೊಂದಿಸಿಕೊಳ್ಳುವ ಆಯ್ಕೆ ಸೆಟ್ಟಿಂಗ್ಸ್‌ನಲ್ಲೇ ದೊರೆಯುತ್ತದೆ. ಪ್ಯಾಟರ್ನ್ ಬಳಸುತ್ತೀರಾದರೆ, ‘ಮೇಕ್ ಪ್ಯಾಟರ್ನ್ ವಿಸಿಬಲ್’ ಅಂತ ಇರೋದನ್ನು ಡಿಸೇಬಲ್ ಮಾಡಿಬಿಡಿ.

ಗೌಪ್ಯ ಮಾಹಿತಿ
ಬ್ಯಾಂಕ್ ಖಾತೆಯ ಪಿನ್/ಪಾಸ್‌ವರ್ಡ್, ಸೋಷಿಯಲ್ ಮೀಡಿಯಾದ ಪಾಸ್‌ವರ್ಡ್‌ಗಳು, ಕ್ರೆಡಿಟ್ ಕಾರ್ಡ್ ಪಿನ್ ನಂಬರ್ ಮುಂತಾದ ಅತ್ಯಂತ ಗೌಪ್ಯವಾಗಿಡಬೇಕಾದ ಮಾಹಿತಿಯನ್ನು ಕೆಲವರು ಯಾವುದಾದರೊಂದು ಫೈಲ್ (ಪಿಡಿಎಫ್, ಟೆಕ್ಸ್ಟ್, ಇಮೇಜ್ ಅಥವಾ ಕಾಂಟ್ಯಾಕ್ಟ್) ರೂಪದಲ್ಲಿ ಸೇವ್ ಮಾಡಿಟ್ಟುಕೊಂಡಿರುವುದನ್ನು ನಾನು ಗಮನಿಸಿದ್ದೇನೆ. ಇದು ಸರ್ವಥಾ ಸಲ್ಲದು. ಒಂದು ವೇಳೆ ಮೊಬೈಲ್ ಕಳೆದುಹೋದರೆ, ಅದನ್ನು ಪಡೆದುಕೊಂಡವರಿಗೆ ಸ್ವರ್ಗ ಸಿಕ್ಕಿದಂತೆ.

ಆ್ಯಪ್‌ಗಳ ಬಗ್ಗೆ ಎಚ್ಚರ
ಯಾವುದೇ ಸ್ಮಾರ್ಟ್‌ಫೋನ್ ಬಳಸುತ್ತಿದ್ದರೂ, ಅವುಗಳ ಆ್ಯಪ್ ಸ್ಟೋರ್‌ಗಳಿಂದ ಮಾತ್ರವೇ (ಗೂಗಲ್ ಪ್ಲೇ, ಆ್ಯಪಲ್ ಅಥವಾ ವಿಂಡೋಸ್ ಸ್ಟೋರ್) ಆ್ಯಪ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳಿ. ಬೇರೆ ಮೂಲಗಳಿಂದ ಇನ್‌ಸ್ಟಾಲ್ ಮಾಡಿಕೊಳ್ಳುವುದನ್ನು ತಡೆಯುವ ಆಯ್ಕೆ ಸೆಟ್ಟಿಂಗ್ಸ್‌ನ ಸೆಕ್ಯುರಿಟಿ ವಿಭಾಗದಲ್ಲಿ ಇದೆ. Install from Unknown Sources ಎಂಬ ಆಯ್ಕೆಯನ್ನು ಡಿಸೇಬಲ್ ಮಾಡಿಬಿಡಿ. ಯಾರಾದರೂ ನಿಮ್ಮ ಫೋನ್‌ನೊಳಗಿನ ಮಾಹಿತಿ ತಿಳಿಯಲು, ಹಾಳುಗೆಡವಲು ಮಾಲ್‌ವೇರ್ (ವೈರಸ್) ಕಳುಹಿಸಿರಬಹುದು. ಅಪರಿಚಿತ ಮೂಲಗಳಿಂದ (ಇಮೇಲ್, ಬ್ಲೂಟೂತ್, ಶೇರ್‌ಇಟ್, ಮೆಮೊರಿ ಕಾರ್ಡ್ ಇತ್ಯಾದಿ) ಬಂದಿರುವ ಆ್ಯಪ್ ಇನ್‌ಸ್ಟಾಲ್ ಆಗುವುದನ್ನು ಇದು ತಡೆಯುತ್ತದೆ.

ಅಪ್‌ಡೇಟ್ಸ್ ಅಳವಡಿಸಿ
ಫೋನ್ ತಯಾರಿಸಿರುವ ಕಂಪನಿ ಹಾಗೂ ನೀವು ಅಳವಡಿಸಿಕೊಂಡಿರುವ ಆ್ಯಪ್‌ಗಳ ಡೆವಲಪರ್‌ಗಳು ಆಗಾಗ್ಗೆ ಕಳುಹಿಸುತ್ತಿರುವ ಅಪ್‌ಡೇಟ್‌ಗಳನ್ನು ಅಳವಡಿಸಿಕೊಳ್ಳಲು ಉದಾಸೀನ ಮಾಡಬೇಡಿ (ಇವು ನೋಟಿಫಿಕೇಶನ್ ಮೂಲಕ ಕಾಣಿಸುತ್ತವೆ). ಫೋನ್ ಕಾರ್ಯಾಚರಣಾ ವ್ಯವಸ್ಥೆಯ ಸುಧಾರಿತ ರೂಪದ ಜತೆಗೆ, ವೈರಸ್ ದಾಳಿಗಳಿಂದ ರಕ್ಷಿಸಬಹುದಾದ ಸೆಕ್ಯುರಿಟಿ ಪ್ಯಾಚ್‌ಗಳೂ ಅವುಗಳಲ್ಲಿರಬಹುದು. ಪ್ಲೇ ಸ್ಟೋರ್‌ಗೆ ಹೋದಾಗ ಆ್ಯಪ್‌ಗಳಿಗೆ ಅಪ್‌ಡೇಟ್‌ಗಳು ಲಭ್ಯವೇ ಎಂಬುದು ತಿಳಿಯುತ್ತದೆ.

ಆ್ಯಪ್ ರಿವ್ಯೂ ಓದಿಕೊಳ್ಳಿ
ಯಾವುದೇ ಆ್ಯಪ್ ಇನ್‌ಸ್ಟಾಲ್ ಮಾಡಿಕೊಳ್ಳುವ ಮೊದಲು, ಅದಕ್ಕೆ ಇತರ ಬಳಕೆದಾರರು ಕೊಟ್ಟಿರುವ ರೇಟಿಂಗ್ಸ್, ಅವರ ರಿವ್ಯೂಗಳನ್ನು (ಕಾಮೆಂಟ್ಸ್) ಸರಿಯಾಗಿ ಓದಿ. ಸರಿ ಇಲ್ಲವೆಂದು ಯಾರಾದರೂ ಬರೆದಿದ್ದರೆ, ಆ್ಯಪ್ ಡೆವಲಪರ್‌ಗಳು ಉತ್ತರಿಸುತ್ತಾರೆ. ಇಂಥವುಗಳ ಮೇಲೆ ವಿಶ್ವಾಸವಿಡಬಹುದು. ಎಷ್ಟು ಮಂದಿ ಇನ್‌ಸ್ಟಾಲ್ ಮಾಡಿಕೊಂಡಿದ್ದಾರೆ, ಏನೇನು ಉಪಯೋಗ ಎಂಬ ಮಾಹಿತಿಯೂ ಅಲ್ಲಿರುತ್ತದೆ.

ಲಿಂಕ್ ಕ್ಲಿಕ್ ಮಾಡದಿರಿ
ಡೆಸ್ಕ್‌ಟಾಪ್ ಕಂಪ್ಯೂಟರುಗಳಿಗಿಂತಲೂ ಸ್ಮಾರ್ಟ್‌ಫೋನ್‌ಗಳು ಹೆಚ್ಚು ಸುಲಭವಾಗಿ ಮಾಲ್‌ವೇರ್ ದಾಳಿಗೆ ತುತ್ತಾಗುವ ಸಾಧ್ಯತೆಗಳು ಹೆಚ್ಚು. ಸುರಕ್ಷತೆ ಕುರಿತ ನಮ್ಮ ನಿರ್ಲಕ್ಷ್ಯ ಭಾವವೂ ಇದಕ್ಕೊಂದು ಕಾರಣ. ಅಲ್ಲದೆ, ಟಚ್ ಸ್ಕ್ರೀನ್ ಆಗಿರುವುದರಿಂದ ಯಾವುದೇ ಪುಟ ತೆರೆದಾಗ ಧುತ್ತನೇ ಪಾಪ್-ಅಪ್ ಆಗುವ ವಿಂಡೋಗಳು, ಅದರಲ್ಲಿರುವ ಲಿಂಕ್‌ಗಳು ನಮಗರಿವಿಲ್ಲದಂತೆಯೇ ಬೆರಳ ಸ್ಪರ್ಶಕ್ಕೆ ಸಿಕ್ಕಿಬಿಡುತ್ತವೆ. ಅದು ಮಾಲ್‌ವೇರ್‌ಗಳುಳ್ಳ ತಾಣಕ್ಕೆ ಕರೆದೊಯ್ಯಬಹುದು. ಹೀಗಾಗಿ, ಯಾವುದೇ ವಿಂಡೋ/ಲಿಂಕ್ ಕ್ಲಿಕ್ ಮಾಡುವ ಮುನ್ನ ಎರಡೆರಡು ಬಾರಿ ಯೋಚಿಸಿ ಮುಂದುವರಿಯಿರಿ. ಇಮೇಲ್‌ನಲ್ಲಿ ಬಂದಿರುವ ಲಿಂಕ್‌ಗಳನ್ನು ಯಾವತ್ತೂ ಕಂಪ್ಯೂಟರಿನಲ್ಲಿಯೇ ತೆರೆಯುವುದು ಜಾಣತನ.

ಬ್ಲೂಟೂತ್ ಆಫ್ ಮಾಡಿ
ಬ್ಲೂಟೂತ್ ಬಳಸಿಯೂ ಹ್ಯಾಕರ್‌ಗಳು ನಿಮ್ಮ ಡೇಟಾ ಕದಿಯಬಹುದು, ಮಾಲ್‌ವೇರ್‌ಗಳನ್ನೂ ಕಳುಹಿಸಬಹುದು. ಹೀಗಾಗಿ, ಅಗತ್ಯವಿರುವಾಗ ಮಾತ್ರ ಬ್ಲೂಟೂತ್ ಆನ್ ಮಾಡಿಟ್ಟುಕೊಳ್ಳಿ.

ಲಾಗೌಟ್ ಆಗಿ
ಹಣಕಾಸು ವಹಿವಾಟು ನಡೆಸುವ, ಆನ್‌ಲೈನ್ ಖರೀದಿ ಆ್ಯಪ್‌ಗಳಿಗೆ ಅಥವಾ ವೆಬ್ ತಾಣಗಳಿಗ ಫೋನ್ ಮೂಲಕ ಲಾಗಿನ್ ಆಗಿದ್ದರೆ ಕೆಲಸ ಮುಗಿದ ಬಳಿಕ ಲಾಗೌಟ್ ಆಗಿ. ಯೂಸರ್‌ನೇಮ್ ಹಾಗೂ ಪಾಸ್‌ವರ್ಡ್ ಸೇವ್ ಮಾಡಬೇಕೇ ಎಂದು ಕೇಳುವ ಆ್ಯಪ್‌ಗಳಿಗೆ ನಿಮ್ಮ ಉತ್ತರ ನೋ ಆಗಿರಬೇಕು. ಪ್ರತೀಬಾರಿ ಲಾಗಿನ್ ಆಗುವಾಗ ಅವುಗಳನ್ನು ಮತ್ತೆ ಎಂಟರ್ ಮಾಡುವುದು ಕಿರಿಕಿರಿಯೆನಿಸಿದರೂ, ಸುರಕ್ಷತೆಯ ದೃಷ್ಟಿಯಿಂದ ಅನಿವಾರ್ಯ. ಆ್ಯಪ್ ಮಾತ್ರವಲ್ಲದೆ, ಬ್ರೌಸರ್‌ನಲ್ಲಿ ಲಾಗಿನ್ ಆಗುವಾಗಲೂ ಈ ನಿಯಮ ಅನುಸರಿಸಿ.

ಜತೆಗೆ, ಹಿಂದೆ ಹಲವಾರು ಬಾರಿ ಹೇಳಿರುವಂತೆ, ಪಬ್ಲಿಕ್ ವೈಫೈ ಬಳಸುವುದನ್ನು ಸಾಧ್ಯವಾದಷ್ಟು ಕಡಿಮೆ ಮಾಡುವುದು ಒಳಿತು. ಒಳ್ಳೆಯ ಆ್ಯಂಟಿ-ವೈರಸ್ ಆ್ಯಪ್ ಅಳವಡಿಸಿಕೊಳ್ಳುವುದು ಸೂಕ್ತ. ಇತ್ತೀಚಿನ ಸಾಧನಗಳಲ್ಲಿ ಅಂತರ್-ನಿರ್ಮಿತವಾಗಿಯೇ ಆ್ಯಂಟಿವೈರಸ್ ಆ್ಯಪ್‌ಗಳನ್ನು ಪ್ರಮುಖ ಕಂಪನಿಗಳು ಅಳವಡಿಸಿರುತ್ತವೆ. ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಿ.

ಈ ಎಲ್ಲ ಕ್ರಮಗಳನ್ನು ಅನುಸರಿಸಲು ಯಾವುದೇ ಶ್ರಮ ಇಲ್ಲ. ಔದಾಸೀನ್ಯ ತೋರದಿದ್ದರಾಯಿತು.

LEAVE A REPLY

Please enter your comment!
Please enter your name here