ಮೊಬೈಲ್ ಇರೋದು ಮಕ್ಳ್ ಕೈಲಲ್ವೇ?

0
272

Mobile for Kids“ಪುಟ್ಟಾ, ಎಷ್ಟೂಂತ ಆ ಮೊಬೈಲ್ ಫೋನ್ ಬಳಸ್ತೀಯಾ?”
“ಇಲ್ಲಮ್ಮಾ, ಚೂರೇ ಚೂರು. ಒಂದ್ಗಂಟೆ ಮಾತ್ರ”
***
“ಬೋರಾಗ್ತಿದೆ, ಮೊಬೈಲ್ ಕೊಡಮ್ಮಾ”
“ಫ್ರೆಂಡ್ಸೆಲ್ಲ ಮೊಬೈಲ್ ಆಡ್ತಾರೆ, ನಂಗ್ಯಾಕಮ್ಮಾ ಬಿಡಲ್ಲ?”
“ಇಲ್ಲಮ್ಮ, ಇನ್ನೂ ಒಂದು ಗಂಟೆ ಆಗಿಲ್ಲ, ತಡಿ”
***
“ಅಪ್ಪ ನೋಡಿದ್ರೆ ಯಾವಾಗ್ಲೂ ಮೊಬೈಲ್ ನೋಡ್ತಾರೆ, ನಂಗೆ ಮಾತ್ರ ಯಾಕಮ್ಮಾ ಹೇಳ್ತೀ?”
“ಫ್ರೆಂಡ್ಸ್ ಪೇರೆಂಟ್ಸ್ ಅವ್ರಿಗೇನೂ ಹೇಳಲ್ಲ, ನೀವ್ಯಾಕೆ ಇಷ್ಟು ಸ್ಟ್ರಿಕ್ಟ್ ಮಾಡೋದು?”

ಮಕ್ಕಳಿರುವ ಪ್ರತಿಯೊಂದು ಮನೆಯಲ್ಲಿ ಮಾತು-ಕಥೆ ಸರ್ವೇಸಾಮಾನ್ಯವಾಗಿ ಈ ಪರಿ ಸಾಗುತ್ತದೆ. ಆಧುನಿಕತೆಯೊಂದಿಗೆ ಜೀವನಶೈಲಿ ಬದಲಾಗುತ್ತಾ ಕೂಡು ಕುಟುಂಬದ ಪರಿಕಲ್ಪನೆಯೇ ಮರೆಯಾಗುತ್ತಿರುವ, ಮನೆಯಲ್ಲಿ ಮಾತಿಗೂ ಕೊರತೆಯಾಗುತ್ತಿರುವ ಈ ಸಂಧಿ ಕಾಲದಲ್ಲಿ ಮೊಬೈಲ್ ಎಂಬ ಮಾಯೆ ಪ್ರತಿಯೊಂದು ಮನೆಯ ಚರ್ಚೆಯ ವಸ್ತು. ಮಾತೆತ್ತಿದರೆ ‘ಮಕ್ಕಳು, ಮೊಬೈಲ್’ – ಈ ಎರಡು ಪದಗಳ ಸುತ್ತಲೇ ಬಂಧು-ಬಳಗದವರ ಸಂಭಾಷಣೆ ಗಿರಕಿ ಹೊಡೆಯುತ್ತಿರುತ್ತದೆ. ಕಥೆ ಹೇಳುವ, ಮಕ್ಕಳನ್ನು ಆಟವಾಡಿಸುವ ಅಜ್ಜ-ಅಜ್ಜಿ ಇಲ್ಲದ ಮನೆಗಳಿರುವ ಈ ಹೊತ್ತಿನಲ್ಲಿ, ಮೊಬೈಲ್ ಎಂಬುದು ಮಕ್ಕಳ ಲಾಲನೆ-ಪಾಲನೆಯ ಸವಾಲುಗಳನ್ನು ಮತ್ತಷ್ಟು ಎತ್ತರಕ್ಕೇರಿಸಿದೆ ಎಂಬುದಂತೂ ದಿಟ.

ಈಗಂತೂ ಮಕ್ಕಳಿಗೆ ಮೋಜು ಮಸ್ತಿಯ ರಜಾ ಕಾಲ. ಗ್ರಾಮೀಣ ಪ್ರದೇಶಗಳಲ್ಲಾದರೆ ಹೊರಗೆ ಕುಂಟೇ ಬಿಲ್ಲೆ, ಕಬಡ್ಡಿ, ಕ್ರಿಕೆಟ್, ವಾಲಿಬಾಲ್, ಲಗೋರಿ, ಚಿನ್ನಿದಾಂಡು, ಕಣ್ಣಾ ಮುಚ್ಚೇ ಆಟಗಳ ಜತೆಗೆ ಮಾಮರಕ್ಕೆ ಕಲ್ಲು ಬಿಸಾಕಿ ಹಣ್ಣು ಕೊಯ್ಯುವುದು, ಗೇರು ಮರದಿಂದ ಹಣ್ಣು ತಿನ್ನುವುದು, ಹಾಡಿಗಳ ಮರದಲ್ಲಿ ಉಯ್ಯಾಲೆಯಾಡುವುದು… ಹೀಗೆ ಶಾಲೆಯ ಎಡೆಬಿಡದ ಪಾಠ-ಹೋಂವರ್ಕ್ ಒತ್ತಡದ ಜಂಜಡಗಳಿಂದ ದೂರವಾಗಿ, ಪ್ರಕೃತಿಯನ್ನು ಆಪ್ತವಾಗಿಸಿ, ಮೈಮನಸ್ಸುಗಳನ್ನು ಪ್ರಫುಲ್ಲಿತಗೊಳಿಸಬಲ್ಲ ಆಟಗಳಿಗೆ ಅದ್ಭುತ ಅವಕಾಶ. ಜತೆಗೆ ಮಕ್ಕಳ ಮನೋ ವಿಕಸನಕ್ಕೂ ನೆರವಾಗುತ್ತವೆ ಎಂಬುದು ನಿಸ್ಸಂದೇಹ.

ಆದರೆ ನಗರವು ‘ನಾಗರಿಕತೆ’ ಹೆಚ್ಚಿಸಿಕೊಳ್ಳುವ ಭರದಲ್ಲಿ ಮುಕ್ತವಾಗಿ ಆಟವಾಡುವ ಜಾಗಗಳಿಲ್ಲ, ಕೃತಕತೆಯೇ ತುಂಬಿರುವ ಪಾರ್ಕುಗಳು ಮೈಮನಗಳಿಗೆ ಸಹಜ ಆಹ್ಲಾದ ನೀಡಲಾರವು. ಹೊರಗೆ ಹೋಗಿ ಆಡಲು ಸುಡು ಸುಡು ಸೆಖೆ. ಅಜ್ಜಿ ಮನೆಗೆ ಹೋಗಿ ಜೀವನಾನುಭವ ಹೆಚ್ಚಿಸಿಕೊಳ್ಳುವ ಅಭ್ಯಾಸವೂ ಕಡಿಮೆಯಾಗುತ್ತಿದೆ. ದೈನಿಕ ಜಂಜಡಗಳ ನಡುವೆ ಹೆತ್ತವರಿಗೆ ಸಮಯಾಭಾವ. ಆಡು ಮುಟ್ಟದ ಸೊಪ್ಪಿಲ್ಲ, ಮೊಬೈಲ್ ಹಿಡಿಯದ ಮಗುವಿಲ್ಲ. ಇದು ವೇಗದ ಯುಗವೂ ಹೌದು. ಈ ವೇಗಕ್ಕೆ ಮಕ್ಕಳು ಆವೇಗದಿಂದಲೇ ಹೊಂದಿಕೊಂಡಾಗ ಮನೆಯಲ್ಲಿ ಸಹಜವಾಗಿ ಉದ್ವೇಗ ಹೆಚ್ಚುತ್ತಿದೆ. ಯಾವುದೇ ಶುಭ ಸಮಾರಂಭಗಳಿಗೆ ಹೋದರೆ, ಮಕ್ಕಳು ಗುಂಪು ಗುಂಪಾಗಿ ಕುಳಿತುಕೊಂಡಿರುತ್ತವೆ, ಒಬ್ಬೊಬ್ಬರ ಕೈಯಲ್ಲಿ ಒಂದೊಂದು ಮೊಬೈಲ್, ಜತೆಗೆ ಮೆಮೊರಿ ಕಾರ್ಡ್‌ಗಳನ್ನು ಬಳಸಿಯೋ, ಬ್ಲೂಟೂತ್, ಶೇರ್-ಇಟ್ ಮೂಲಕವೋ, ಗೇಮ್‌ಗಳನ್ನು ವಿನಿಮಯ ಮಾಡಿಕೊಳ್ಳುತ್ತಿರುವುದನ್ನು ನೋಡುತ್ತೇವೆ.

ಜೀವನಶೈಲಿಯಿಂದಾಗಿಯೋ ತಂತ್ರಜ್ಞಾನದ ಬಳಕೆಯಲ್ಲಿನ ವಿವೇಚನೆಯ ಕೊರತೆಯಿಂದಾಗಿಯೋ, ಒಟ್ಟಿನಲ್ಲಿ ಸಮಾಜವಿಂದು ಅತಿರೇಕ ಎಂಬಷ್ಟು ತಂತ್ರಜ್ಞಾನಮುಖಿಯಾಗಿದೆ. ಇತ್ತೀಚೆಗೆ ನಾವೆಲ್ಲ ಗಮನಿಸಿರುವಂತೆ, ಮಕ್ಕಳು ಬೇಗನೇ ದೊಡ್ಡವರಾಗುತ್ತಿದ್ದಾರೆ – ಕ್ಷಿಪ್ರವಾಗಿ ಮಾತು ಕಲಿಯುತ್ತಾರೆ, ತೆವಳಿ ಎದ್ದು ನಡೆಯುವ ಗತಿಯೂ ಹಿಂದಿನ ಜಮಾನಾಕ್ಕೆ ಹೋಲಿಸಿದರೆ ತ್ವರಿತವೇ. ‘ಈ ಮೊಬೈಲ್‌ನಲ್ಲಿ ನನಗೇ ಗೊತ್ತಿಲ್ಲದಿರುವುದು ಮಗನಿಗೆ ಗೊತ್ತಿದೆ’ ಅಂತ ಹೇಳುವವರನ್ನಂತೂ ಹೆಜ್ಜೆ ಹೆಜ್ಜೆಗೂ ಕಾಣುತ್ತೇವೆ. ಮಕ್ಕಳ ಮೊಬೈಲ್ ಗೀಳಿನ ಬಗ್ಗೆ ಹಲುಬುವವರನ್ನು ನೋಡುತ್ತಲೇ ಇರುತ್ತೇವೆ. ನಮ್ಮ ಮಕ್ಕಳನ್ನೇನೋ ಕಂಟ್ರೋಲ್ ಮಾಡಬಹುದು, ಬೇರೆಯವರ ಮಕ್ಕಳು ಆಡುವುದನ್ನು ನೋಡುವಾಗ ಮಗುವಿನ ಮನಸ್ಸು ಸುಮ್ಮನಿರುತ್ತದೆಯೇ? ಈ ಎಲ್ಲ ವಾದಗಳು, ವಿವಾದಗಳು, ವಾಗ್ವಾದಗಳಿಗೆ ಕಾರಣವಾಗುವ ಮೊಬೈಲ್ ಫೋನೆಂಬುದೇ ಮಾಯೆಯಾಗಿ ನಮ್ಮನ್ನೆಲ್ಲ ಕಾಡಲು ಈಗಾಗಲೇ ಆರಂಭಿಸಿರುವುದು ಅನಿವಾರ್ಯವೂ ಅನಿಷ್ಟವೂ ಹೌದು.

ವಿಕಸನಕ್ಕೆ ಅಡ್ಡಿ
ಮೊಬೈಲ್ ಫೋನ್ ಎಂಬ ಎಲೆಕ್ಟ್ರಾನಿಕ್ ಸಾಧನವನ್ನು ವಿವೇಚನೆಯಿಂದ ಬಳಸುವಂತೆ ಮಕ್ಕಳಿಗೆ ಅಭ್ಯಾಸ ಮಾಡಿಸುವುದು ಹೆತ್ತವರ, ಪಾಲಕರ, ಪೋಷಕರ ಆದ್ಯ ಕರ್ತವ್ಯ. ಯಾಕೆ? ಮಕ್ಕಳ ಮೇಧಾಶಕ್ತಿಗೇ ಈ ಮೊಬೈಲ್ ಅಪಾಯವೊಡ್ಡುವ ಆತಂಕವಿದೆ. ಮೊಬೈಲ್ ಗೇಮ್‌ಗಳಲ್ಲಿ ದೇಹಶ್ರಮವಿಲ್ಲ, ಮನಸ್ಸಿಗೆ ಬುದ್ಧಿಬಲವನ್ನೂ ನೀಡಬಲ್ಲ ಆಟಗಳಿಗಿಂತಲೂ, ಹೊಡಿ, ಬಡಿ ಕೊಲ್ಲುವ, ಕರ್ಕಶ ಶಬ್ದಗಳಿಂದ ಮನಸ್ಸನ್ನು ಕೆರಳಿಸುವ ಆಟಗಳೇ ಮಕ್ಕಳನ್ನು ಆಕರ್ಷಿಸುವುದು ಹೆಚ್ಚು. ಸಮಾಜದಲ್ಲಿಂದು ಪ್ರಕ್ಷುಬ್ಧತೆ ಹೆಚ್ಚಿರುವುದಕ್ಕೆ ಇಂತಹ ಜೀವನ ಶೈಲಿಯೂ ಕಾರಣವೇ ಎಂಬುದು ಯೋಚಿಸಬೇಕಾದ ವಿಷಯವೇ. ಮಕ್ಕಳು ಬಿಡಿ, ಮಕ್ಕಳಿಗೆ ಮಾದರಿಯಾಗಬೇಕಾದ ದೊಡ್ಡವರೇ ಮೊಬೈಲ್ ದಾಸರಾಗುತ್ತಿರುವಾಗ ಮಕ್ಕಳೇನ್ ಮಹಾ ಅಂತಲೂ ಯೋಚಿಸಬೇಕು.

ಕಾರಣ
ಹೌದು. ಈ ಸ್ಫರ್ಧಾ ಯುಗದಲ್ಲಿ ಹೆತ್ತವರ ಪ್ರಪಂಚವೂ ಸಾಕಷ್ಟು ಬದಲಾಗಿದೆ. ಔದ್ಯೋಗಿಕ ಒತ್ತಡ ಮತ್ತು ಅನಿವಾರ್ಯತೆಗಳಿಂದಾಗಿ, ಅವಿಭಕ್ತ ಕುಟುಂಬವು ಪುಟ್ಟ ಮನೆಗಳಾಗಿ ವಿಭಾಗವಾದಾಗ ಮನಸ್ಸುಗಳೂ ತಮಗರಿವಿಲ್ಲದಂತೆಯೇ ಒಡೆದಿವೆ. ಪತಿ-ಪತ್ನಿ ಉದ್ಯೋಗಕ್ಕೆ ಹೋದರೆ ಮಕ್ಕಳ ಪಾಲನೆ ಪೋಷಣೆಗೆ ಸಮಯ ಕಡಿಮೆಯಾಗುತ್ತಿದೆ. ಅಂದು ಬುದ್ಧಿ ಹೇಳುವ ಅಜ್ಜ-ಅಜ್ಜಿಯರಾದರೂ ಮಾರ್ಗದರ್ಶನಕ್ಕಿರುತ್ತಿದ್ದರು. ಈಗ ಬಹುತೇಕ ಕಡೆ ಆ ಪರಿಸ್ಥಿತಿ ಇಲ್ಲ. “ನನ್ ಮಗ ಅಂತೂ ಮೊಬೈಲ್‌ನಲ್ಲಿ ನಂಗಿಂತ ಎಕ್ಸ್‌ಪರ್ಟ್, ಹುಟ್ಟಿದಾಗ್ಲೇ ಕಲ್ತುಕೊಂಡು ಬಂದಿದ್ದಾನೋಪ್ಪ…” ಅಂತೆಲ್ಲ ಮೊದಮೊದಲು ಹೆಮ್ಮೆಯಿಂದ ಹೇಳಿಕೊಂಡಾಗ, ಮಕ್ಕಳಿಗೆ ಪ್ರೋತ್ಸಾಹ ಸಿಕ್ಕಿದಂತಾಯಿತೇ ಎಂಬುದು ನಿಧಾನವಾಗಿ ಅರಿವಿಗೆ ಬರುತ್ತಿದೆ. ಚಾಳಿಗೆ ತಿರುಗುವಲ್ಲಿ ಈ ಮಾತು ಕೂಡ ಪ್ರಧಾನ ಕಾರಣವೂ ಆಗಿದ್ದಿರಬಹುದು. ಪೋಷಕರು ಮೊಬೈಲ್ ಬಳಕೆಗೆ ಸ್ವ-ನಿಯಂತ್ರಣ ಹೇರಿಕೊಂಡರೆ, ಮಕ್ಕಳು ಕೂಡ ಅನುಸರಿಸುವುದು ತೀರಾ ಕಷ್ಟವಾಗಲಾರದು.

ಏನು ಮಾಡಬಹುದು?
ಮಕ್ಕಳ ಕೈಗೆ ಕೊಡುವಾಗ, ಆ ಮೊಬೈಲ್‌ನಲ್ಲಿ ಮಕ್ಕಳ ಬೌದ್ಧಿಕ ವಿಕಸನಕ್ಕೆ ಕಾರಣವಾಗುವ ಆಟಗಳನ್ನು, ಆ್ಯಪ್‌ಗಳನ್ನು ಅಳವಡಿಸಿಯೇ ಕೊಡುವುದು ಸೂಕ್ತ. ಅವರಿಗಾಗಿಯೇ ಪ್ರತ್ಯೇಕ ಲಾಗಿನ್ ಪ್ರೊಫೈಲ್ ಇರುತ್ತದೆ. ಅದನ್ನು ಬಳಸಿ. ಡ್ರಾಯಿಂಗ್, ಪೇಂಟಿಂಗ್, ಒರಿಗ್ಯಾಮಿ, ಗಣಿತ, ವೇದ ಗಣಿತ ಇತ್ಯಾದಿಗಳಲ್ಲದೆ, ತರ್ಕ ಶಕ್ತಿ ಹೆಚ್ಚಿಸಬಲ್ಲ ಚೆಸ್ ಗೇಮ್, ಪದಬಂಧ ಮುಂತಾದ ಸೌಮ್ಯವಾದ ಆ್ಯಪ್‌ಗಳೇ ಇರಲಿ. ಜತೆಗೆ, ಮೊಬೈಲ್‌ನಲ್ಲೇ ಒಳ್ಳೆಯ ಪುಸ್ತಕಗಳ ಓದಿಗೂ ಪ್ರೇರೇಪಿಸಬಹುದು. ಗೂಗತ್ ಅರ್ಥ್ ಆ್ಯಪ್ ಮೂಲಕ ಜಗತ್ತಿನಲ್ಲಿರುವ ಸ್ಥಳಗಳು, ಪ್ರೇಕ್ಷಣೀಯ ಕೇಂದ್ರಗಳನ್ನು ನೋಡಬಹುದು. ಜತೆಗೆ ಮನಸ್ಸು ಅರಳಿಸಬಲ್ಲ ಹಾಡುಗಳನ್ನೂ ಕೇಳಿಸುವಂತೆ ಪ್ರೋತ್ಸಾಹಿಸಬಹುದು.

ಸ್ಕ್ರೀನ್ ನೋಡುವ ಅವಧಿ ಕಡಿತ:
ಮಕ್ಕಳ ಮೊಬೈಲ್ ಆಟದ ಅವಧಿ ನಿಗದಿಪಡಿಸಿ. ನಿರ್ದಿಷ್ಟಪಡಿಸಿದ ಅವಧಿ ಕೊನೆಗೊಂಡಾಗ ತನ್ನಿಂತಾನೇ ಸ್ಕ್ರೀನ್ ಆಫ್ ಮಾಡುವ ‘ಪೇರೆಂಟಲ್ ಕಂಟ್ರೋಲ್’ ಆ್ಯಪ್‌ಗಳೂ ಸಾಕಷ್ಟಿವೆ. ಉದಾಹರಣೆಗೆ, ಸ್ಕ್ರೀನ್ ಟೈಮ್ ಅಥವಾ ಕಿಡ್ಸ್ ಪ್ಲೇಸ್ ಎಂಬ ಆ್ಯಪ್.

ಕಣ್ಣುಗಳ ರಕ್ಷಣೆ:
ಸುದೀರ್ಘ ಹೊತ್ತು ಮೊಬೈಲ್ ಸ್ಕ್ರೀನ್ ನೋಡುವುದರಿಂದ ಕಣ್ಣುಗಳಿಗೆ ಹಾನಿಯಾಗುವುದರಿಂದಾಗಿಯೇ ಈಗಿನ ಮೊಬೈಲ್ ಫೋನ್‌ಗಳಲ್ಲಿ ‘ಅಡಾಪ್ಟಿವ್ ಬ್ರೈಟ್‌ನೆಸ್’ ಎಂಬ ಡಿಸ್‌ಪ್ಲೇ ಮೋಡ್ ಇರುತ್ತದೆ. ಅದನ್ನು ಎನೇಬಲ್ ಮಾಡಿಕೊಳ್ಳಬಹುದು.

ನೀಲ ಕಿರಣ:
ಮೊಬೈಲ್ ಸ್ಕ್ರೀನ್‌ನಿಂದ ಹೊರಬರುವ ನೀಲ ಕಿರಣಗಳು (ಬ್ಲೂ ರೇ) ಕಣ್ಣಿಗೆ, ತನ್ಮೂಲಕ ನಿದ್ದೆಗೆ ಸಮಸ್ಯೆ ಉಂಟು ಮಾಡುತ್ತದೆ. ಈ ನೀಲ ಕಿರಣಗಳಿಂದಾಗುವ ಅಪಾಯ ತಪ್ಪಿಸಲು ಕೂಡ ಸಾಕಷ್ಟು ಆ್ಯಪ್‌ಗಳಿವೆ. ಉದಾಹರಣೆಗೆ, ಟ್ವಿಲೈಟ್ (Twilight). ಅಂಥವನ್ನು ಬಳಸಬಹುದು.

ಇಂಟರ್ನೆಟ್:
ಆದಷ್ಟು ಇಂಟರ್ನೆಟ್ ಆಧಾರಿತ ಗೇಮ್‌ಗಳು ಬೇಡ. ಕೆಲವಂತೂ ಜೂಜಾಟಕ್ಕೆ ಪ್ರೇರಣೆ ನೀಡಬಲ್ಲವು.

ಭಂಗಿ:
ಮೊಬೈಲ್ ಹಿಡಿದಿರುವಾಗ ಕುಳಿತುಕೊಳ್ಳುವ ಭಂಗಿಯೂ ದೈಹಿಕ ಬೆಳವಣಿಗೆಗೆ ಅಡ್ಡಿಯಾಗಬಹುದು. ಗಮನಹರಿಸಿ.

ಮಕ್ಕಳು ಒಳ್ಳೆಯ ಮೊಬೈಲ್ ಗೇಮ್ ಆಡುವಂತೆ, ಒಳ್ಳೆಯ ಮಕ್ಕಳ ಬೌದ್ಧಿಕ ಶಕ್ತಿ ಬೆಳೆಯಲು ಕಾರಣವಾಗಬಲ್ಲ ಯೂಟ್ಯೂಬ್ ವೀಡಿಯೋಗಳನ್ನು ನೋಡುವಂತೆ ಪ್ರೋತ್ಸಾಹಿಸುತ್ತಲೇ, ದಿನಕ್ಕೆ ಒಂದು-ಒಂದುವರೆ ಗಂಟೆ ಮಾತ್ರವೇ ಮೊಬೈಲ್ ಸ್ಕ್ರೀನ್ ಮೇಲೆ ಕಣ್ಣಿರಿಸುವಂತೆ ನೋಡಿಕೊಳ್ಳಿ. ಇಲ್ಲದಿದ್ದಲ್ಲಿ, ಮಕ್ಕಳ ನಿದ್ರಾ ಕೊರತೆ, ಕಣ್ಣುಗಳಿಗೆ ಹಾನಿ, ಚಿತ್ತ ಚಾಂಚಲ್ಯ ಹೆಚ್ಚಾಗುವ ಸಾಧ್ಯತೆಗಳು ಇರುತ್ತವೆ ಎಂಬುದು ವೈಜ್ಞಾನಿಕವಾಗಿ ದೃಢಪಟ್ಟಿರುವುದರಿಂದ ಇದು ಅಗತ್ಯ.

ಎಲ್ಲರೂ ಮೊಬೈಲ್ ಬಳಸುತ್ತಿರುವಾಗ ಬೇಡ್ವೇ ಬೇಡ ಅಂತ ನಿರ್ಬಂಧ ವಿಧಿಸುವುದು ಉಚಿತವಲ್ಲ. ಯಾಕೆಂದರೆ, ಮೊಬೈಲ್ ಅಥವಾ ಯಾವುದೇ ಗ್ಯಾಜೆಟನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡ ಪುಟಾಣಿ ಮಕ್ಕಳೇ ಮೊಬೈಲ್ ಆಟಗಳನ್ನು ರೂಪಿಸಿದ್ದಾರೆ, ಇಲ್ಲವೇ ತಮ್ಮ ಕಲ್ಪನೆಯ ಕೂಸಿಗೆ ಕುಲಾವಿ ಹೊಲಿಯುತ್ತಲೇ ನವೀನ ತಂತ್ರಜ್ಞಾನದ ಆ್ಯಪ್‌ಗಳನ್ನು ಡೆವಲಪ್ ಮಾಡಿದ್ದಾರೆ, ಜ್ಞಾನ ಹೆಚ್ಚಿಸಿಕೊಂಡಿದ್ದಾರೆ. ಮೊಬೈಲ್ ಆಟವಾಡುತ್ತಲೇ ಗೇಮಿಂಗ್‌ನಿಂದ ಕೋಡಿಂಗ್ ತಂತ್ರಜ್ಞಾನವನ್ನು ಕರಗತ ಮಾಡಿಕೊಂಡು ಔನ್ನತ್ಯಕ್ಕೇರಿದ ಸಾಕಷ್ಟು ವರದಿಗಳನ್ನೂ ಓದಿರುತ್ತೇವೆ. ಇದೆಲ್ಲವೂ ತಂತ್ರಜ್ಞಾನದ ಸಕಾರಾತ್ಮಕ ಬಳಕೆಯ ಪರಿಣಾಮ. ಕೊಂಚ ಸಮಯ ಮಾಡಿಕೊಂಡು, ಎಳವೆಯಿಂದಲೇ ಮಕ್ಕಳು ಮೊಬೈಲ್‌ನ ಸದ್ಬಳಕೆಯ ಪಥದಲ್ಲಿ ಮುನ್ನಡೆಯುವಂತೆ ನೋಡಿಕೊಂಡರೆ, ಸಮಾಜಕ್ಕೆ ಸತ್ಪ್ರಜೆಯನ್ನು ನೀಡಿದ ಹೆಮ್ಮೆ ನಮ್ಮದಾಗಬಹುದು.

ಮೆದುಳಿಗೆ ಕಸರತ್ತು ನೀಡಬಲ್ಲ, ಜ್ಞಾನ ನೀಡಬಲ್ಲ ಆ್ಯಪ್‌ಗಳು
Strata
Duet
Little alchemy
Brain wars
Alchemy Lite
Mirror Moves
Cut The Buttons
SochGinie
Puzzler Mind Gym 3D
Marble Math
Wiseland
Sky Map

ವಿಜಯ ಕರ್ನಾಟಕ ಸಾಪ್ತಾಹಿಕ ಪುರವಣಿಗಾಗಿ 22 ಜುಲೈ 2018: ಅವಿನಾಶ್ ಬೈಪಾಡಿತ್ತಾಯ

LEAVE A REPLY

Please enter your comment!
Please enter your name here