ವಿಂಡೋಸ್‌ನಲ್ಲಿ ವೇಗದ ಕೆಲಸಕ್ಕೆ ಒಂದಿಷ್ಟು ಉಪಯುಕ್ತ ತಂತ್ರಗಳು

0
314

Avinash-Columnಈಗ ಹೆಚ್ಚಿನವರು ಕಂಪ್ಯೂಟರುಗಳಲ್ಲಿ ಬಳಸುತ್ತಿರುವುದು ವಿಂಡೋಸ್ 7 ಹಾಗೂ ವಿಂಡೋಸ್ 8. ಮುಂದಿನ ಆವೃತ್ತಿ ವಿಂಡೋಸ್ 10 ಆಪರೇಟಿಂಗ್ ಸಿಸ್ಟಂ ಕೂಡ ಶೀಘ್ರವೇ ಬರಲಿದೆಯಾದರೂ, ಈಗಿರುವ ಕಂಪ್ಯೂಟರುಗಳಲ್ಲಿ ಕೆಲವೊಂದು ಕೆಲಸಗಳನ್ನು ಕ್ಷಿಪ್ರವಾಗಿ ಮಾಡಿ ಮುಗಿಸಲು ಸಾಕಷ್ಟು ಉಪಯುಕ್ತ ವಿಧಾನಗಳು ವಿಂಡೋಸ್ ಅಡಗಿವೆ. ಕೆಲವರಿಗೆ ಇದರ ಬಗ್ಗೆ ತಿಳಿದಿರಬಹುದು. ತಿಳಿಯದವರಿಗೆ ಇಲ್ಲಿವೆ ಕೆಲವು ಟಿಪ್ಸ್.

* ವಿಂಡೋಸ್ 8 ಬಳಸುತ್ತಿರುವವರಿಗೆ ದೊಡ್ಡ ಸಮಸ್ಯೆಯಾಗುವುದೆಂದರೆ ಹಿನ್ನೆಲೆಯಲ್ಲಿ ಇಂಟರ್ನೆಟ್ ಸಂಪರ್ಕಿಸುವ ಲೈವ್ ಟೈಲ್‌ಗಳು. ಅಂದರೆ, ಫೇಸ್‌ಬುಕ್, ಟ್ವಿಟರ್, ಮೇಲ್ ಮುಂತಾದ ವಿಭಿನ್ನ ಆ್ಯಪ್‌ಗಳು ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತವೆಯಲ್ಲವೇ? ಅವುಗಳು ಇಂಟರ್ನೆಟ್ ಮೂಲಕ ಅಪ್‌ಡೇಟ್ ಆಗುತ್ತಿರುತ್ತವೆ. ಇದರಿಂದಾಗಿ, ನಿಮ್ಮ ಡೇಟಾ ಪ್ಯಾಕ್ ಅನ್‌ಲಿಮಿಟೆಡ್ ಇಲ್ಲದಿದ್ದರೆ ಬಲುಬೇಗನೇ ಖಾಲಿಯಾಗಬಹುದು. ಇದಕ್ಕೇನು ಮಾಡಬೇಕೆಂದರೆ, ಬಲ ಕೆಳಭಾಗದಲ್ಲಿ ನೆಟ್‌ವರ್ಕ್ ಸಂಪರ್ಕದ ಐಕಾನ್ ಕ್ಲಿಕ್ ಮಾಡಿ, ಸಂಪರ್ಕವನ್ನು ರೈಟ್-ಕ್ಲಿಕ್ ಮಾಡಿದಾಗ ಚಾರ್ಮ್ಸ್ ಬಾರ್ ಕಾಣಿಸಿಕೊಳ್ಳುತ್ತದೆಯಲ್ಲವೇ? ಅದರಲ್ಲಿ Set as metered connection ಆಯ್ಕೆಯನ್ನು ಆಯ್ದುಕೊಳ್ಳಿ. ಇದು ಲೈವ್ ಟೈಲ್‌ಗಳು ಬಳಸುತ್ತಿರುವ ಇಂಟರ್ನೆಟ್ ಸಂಪರ್ಕಕ್ಕೆ ಕಡಿವಾಣ ಹಾಕುತ್ತದೆ.

* ವಿಂಡೋಸ್‌ನಲ್ಲಿ ಒಂದು ಪ್ರೋಗ್ರಾಂ ರನ್ ಆಗುತ್ತಿರುತ್ತದೆ. ಉದಾಹರಣೆಗೆ ಫೋಟೋ ಎಡಿಟ್ ಮಾಡಬಹುದಾದ ಒಂದು ತಂತ್ರಾಂಶ ಅಂತಿಟ್ಟುಕೊಳ್ಳಿ. ಅದರಲ್ಲೇನೋ ಕೆಲಸ ಮಾಡುತ್ತಿರುತ್ತೀರಿ. ಇದೇ ಪ್ರೋಗ್ರಾಂ ಅನ್ನು ಮತ್ತೊಂದು ಬಾರಿ ಓಪನ್ ಮಾಡಿ, ಅದರಲ್ಲಿಯೂ ಕೆಲಸ ಮಾಡಬೇಕೆಂದಾದರೆ, ಟಾಸ್ಕ್ ಬಾರ್‌ನಲ್ಲಿರುವ ಐಕಾನ್ ಮೇಲೆ ಶಿಫ್ಟ್ ಹಿಡಿದುಕೊಂಡು ಮೌಸ್‌ನಿಂದ ಕ್ಲಿಕ್ ಮಾಡಿದರಾಯಿತು. ಮತ್ತೊಂದು ಬಾರಿ ಆ ಪ್ರೋಗ್ರಾಂ ಓಪನ್ ಆಗುತ್ತದೆ.

* ನಿಮ್ಮ ಇಷ್ಟದ ಕೆಲವು ಪ್ರೋಗ್ರಾಂಗಳು ವಿಂಡೋಸ್ ಎಕ್ಸ್‌ಪಿಯಲ್ಲಿ ಚೆನ್ನಾಗಿ ಕೆಲಸ ಮಾಡುತ್ತಿದ್ದವು. ಆದರೆ, ಈಗ ನಿಮ್ಮಲ್ಲಿರುವ ವಿಂಡೋಸ್ 7 ಅಥವಾ 8ರಲ್ಲಿ ಕೆಲಸ ಮಾಡುತ್ತಿಲ್ಲವೇ? ಇದಕ್ಕಾಗಿ ಕೆಲವು ಪ್ರೋಗ್ರಾಂಗಳಲ್ಲಿ ಒಂದು ಅನುಕೂಲಕರ ವ್ಯವಸ್ಥೆಯಿದೆ. ಪ್ರೋಗ್ರಾಂ ಮೇಲೆ ರೈಟ್-ಕ್ಲಿಕ್ ಮಾಡಿ, ಪ್ರಾಪರ್ಟೀಸ್‌ನಲ್ಲಿ, ಕಂಪ್ಯಾಟಬಿಲಿಟಿ ಟ್ಯಾಬ್ ತೆರೆದು, ಅಲ್ಲಿಂದ ಯಾವ ಮೋಡ್‌ನಲ್ಲಿ ರನ್ ಆಗಬೇಕೆಂದು ಆಯ್ಕೆ ಮಾಡಿಕೊಳ್ಳಿ. ಸಮಸ್ಯೆ ನಿವಾರಣೆಯಾಗಬಹುದು.

* ವಿಂಡೋಸ್ ಯಾವುದೇ ಆವೃತ್ತಿಯ ಬಳಕೆದಾರರು ಹಲವಾರು ಪ್ರೋಗ್ರಾಂಗಳನ್ನು ತೆರೆದಿಟ್ಟುಕೊಂಡು ಕೆಲಸದಲ್ಲಿ ನಿರತರಾಗಿರುವಾಗ, ಡೆಸ್ಕ್‌ಟಾಪ್‌ಗೆ ನೇರವಾಗಿ ಹೋಗಲು ಎಲ್ಲವನ್ನೂ ಒಂದೊಂದಾಗಿ ಮಿನಿಮೈಸ್ ಮಾಡುತ್ತಾ ಹೋಗುತ್ತಾರೆ. ಇದು ವೃಥಾ ಸಮಯ ವ್ಯಯಕ್ಕೆ ಕಾರಣವಾಗುತ್ತದೆ. ಇದಕ್ಕೆ ಸುಲಭವಾದ ಶಾರ್ಟ್‌ಕಟ್ ವಿಧಾನವೆಂದರೆ, ಕೀಬೋರ್ಡ್‌ನಲ್ಲಿರುವ ವಿಂಡೋಸ್ ಬಟನ್ ಹಾಗೂ D ಕೀಲಿಯನ್ನು ಏಕಕಾಲದಲ್ಲಿ ಒತ್ತುವುದು. ನೇರವಾಗಿ ಡೆಸ್ಕ್‌ಟಾಪ್ ಕಾಣಿಸುತ್ತದೆ.

* ತೆರೆದಿರುವ ವಿಂಡೋಗಳನ್ನು ಒಂದೊಂದಾಗಿ ನೋಡಲು Alt ಕೀಲಿಯನ್ನು ಒತ್ತಿಹಿಡಿದುಕೊಂಡು Tab ಕೀಲಿ ಒತ್ತಿರಿ. ಯಾವ ವಿಂಡೋ ಬೇಕೋ, ಅಲ್ಲಿಗೆ ಹೋಗಲು Tab ಕೀಲಿಯನ್ನು ಪುನರಪಿ ಒತ್ತುತ್ತಾ ಹೋಗಿ. ನಿಮಗೆ ಬೇಕಾದ ವಿಂಡೋ ಹೈಲೈಟ್ ಆದಾಗ, Tab ಕೀಲಿ ಬಿಟ್ಟುಬಿಡಿ. ಆ ವಿಂಡೋ ನಿಮ್ಮ ಮುಂದೆ ಬರುತ್ತದೆ.

* ವಿಂಡೋಸ್ 8ರಲ್ಲಿ, ಕಂಟ್ರೋಲ್ ಪ್ಯಾನೆಲ್, ಡಿಸ್ಕ್ ಮ್ಯಾನೇಜರ್ ಮುಂತಾದ ವಿಭಾಗಗಳಿಗೆ ಹೋಗಲು ಹೆಚ್ಚು ಹುಡುಕಾಟ ಮಾಡಬೇಕಿಲ್ಲ. ಯಾವುದೇ ಸ್ಕ್ರೀನ್‌ನಲ್ಲಿದ್ದರೂ ಕೆಳ ಎಡಭಾಗದ ಮೂಲೆಯಲ್ಲಿ ಮೌಸ್ ಪಾಯಿಂಟರನ್ನು ತಂದು, ರೈಟ್-ಕ್ಲಿಕ್ ಮಾಡಿದರೆ, ನಿಮಗೆ ಆಯ್ಕೆಗಳು ಗೋಚರಿಸುತ್ತವೆ.

* ವಿಂಡೋಸ್ 7 ಹಾಗೂ 8ರಲ್ಲಿ ಡೆಸ್ಕ್‌ಟಾಪ್ ಅಥವಾ ಯಾವುದೇ ಫೋಲ್ಡರಿನಲ್ಲಿರುವ ಫೈಲನ್ನು ನೇರವಾಗಿ ಮತ್ತೊಂದೆಡೆಗೆ ಕಳುಹಿಸಲು ಸುಲಭ ಆಯ್ಕೆಯಿದೆ. ಅದೆಂದರೆ ಆ ಫೈಲಿನ ಮೇಲೆ ಕ್ಲಿಕ್ ಮಾಡಿ Send to ಆಯ್ಕೆ ಮಾಡುವುದು. ಆದರೆ, ನೀವು ಕ್ಲಿಕ್ ಮಾಡುವ ಮೊದಲೇ Shift ಕೀ ಒತ್ತಿ ಹಿಡಿದುಕೊಂಡಿದ್ದರೆ, ನಿರ್ದಿಷ್ಟ ಪ್ರೋಗ್ರಾಂಗಳಲ್ಲದೆ, ಕಂಪ್ಯೂಟರಿನಲ್ಲಿರುವ ಮೈ ಡಾಕ್ಯುಮೆಂಟ್ಸ್, ಮೈ ಪಿಕ್ಚರ್ಸ್, ಮೈ ವೀಡಿಯೋಸ್ ಮುಂತಾದ ವಿಭಿನ್ನ ಫೋಲ್ಡರ್‌ಗಳು ಕೂಡ ಗೋಚರಿಸುತ್ತವೆ. ಫೈಲುಗಳನ್ನು ಸರಿಸಲು ಅತ್ಯುಪಯುಕ್ತ ಇದು.

ಮಾಹಿತಿ@ತಂತ್ರಜ್ಞಾನ-131 ವಿಜಯ ಕರ್ನಾಟಕ ಅಂಕಣ 22 ಜೂನ್ 2015: ಅವಿನಾಶ್ ಬಿ.

LEAVE A REPLY

Please enter your comment!
Please enter your name here