ವಾಟ್ಸಪ್‌ಗೆ ಸವಾಲೊಡ್ಡಲು ಬಂದ ಗೂಗಲ್ Allo ಗೆ ಹಲೋ ಹೇಳಿದ್ರಾ?

0
405

ಮೆಸೆಂಜರ್, ವಾಟ್ಸಾಪ್, ವಿ-ಚಾಟ್, ಸ್ಕೈಪ್, ಟೆಲಿಗ್ರಾಂ, ಹ್ಯಾಂಗೌಟ್ಸ್ ಮುಂತಾದವುಗಳ ಸಾಲಿನಲ್ಲೇ ಮತ್ತೊಂದು ಚಾಟಿಂಗ್ ಅಪ್ಲಿಕೇಶನ್ ಹೊರಬಂದಿದೆ. ಹೆಸರು ಅಲೋ (Allo). ಕಳೆದ ವಾರ ಇದು ಗೂಗಲ್ ಇದನ್ನು ಬಿಡುಗಡೆ ಮಾಡುತ್ತಲೇ ಸುದ್ದಿ, ಸದ್ದು ಮಾಡತೊಡಗಿದೆ.

ಗೂಗಲ್ ಆ ಕಾಲದಲ್ಲೇ ಜಿಟಾಕನ್ನಡ ಯಾವಾಗಕ್ ಮೂಲಕ ಜನಪ್ರಿಯವಾಗಿತ್ತಾದರೂ, ಅದು ಹ್ಯಾಂಗೌಟ್ಸ್ ಆಗಿ ಬದಲಾದಾಗ ಜನರು ಅದನ್ನು ಹೆಚ್ಚಾಗಿ ಇಷ್ಟಪಡಲಿಲ್ಲ. ಅಷ್ಟು ಒಳ್ಳೆಯ ಮೂಲಸೌಕರ್ಯಗಳಿದ್ದ ಹೊರತಾಗಿಯೂ ಹ್ಯಾಂಗೌಟ್ಸ್ ಅನ್ನು ಹಿಂದಿಕ್ಕಿದ ವಾಟ್ಸಾಪ್ ಹಾಗೂ ಫೇಸ್‌ಬುಕ್ ಮೆಸೆಂಜರ್‌ಗಳು ಈಗ ಪಾರಮ್ಯ ಸ್ಥಾಪಿಸಿವೆ. ಆದರೆ ಗೂಗಲ್ ಪುನಃ ಅಲೋ ಮೂಲಕ ತನ್ನ ಗತ ವೈಭವವನ್ನು ಮರುಸ್ಥಾಪಿಸಲು ನಿರ್ಧರಿಸಿದಂತಿದೆ. ಆಂಡ್ರಾಯ್ಡ್ ಹಾಗೂ ಐಫೋನ್‌ಗಳ ಆ್ಯ
ಪ್ ಸ್ಟೋರ್‌ಗಳಲ್ಲಿ ಇದು ಉಚಿತವಾಗಿ ಲಭ್ಯ.

ಇನ್‌ಸ್ಟಾಲ್ ಮಾಡಿಕೊಂಡು ನೋಡಿದಾಗ, ಅದರ ಕ್ಲೀನ್ ಇಂಟರ್ಫೇಸ್ ಇಷ್ಟವಾಯಿತು. ಅಲೋಗೆ ಸೈನ್ ಇನ್ ಆಗಲು ಜಿಮೇಲ್ ಖಾತೆಯೇನೂ ಅಗತ್ಯವಿರುವುದಿಲ್ಲ, ಬರೇ ಫೋನ್ ನಂಬರ್ ಇದ್ದರೆ ಸಾಕಾಗುತ್ತದೆ. ಬಳಸಿದಾಗ ವಾಟ್ಸಾಪ್ ಅಥವಾ ಬೇರೆ ಸಂದೇಶ ವಿನಿಮಯ ಆ್ಯಪ್‌ಗಳಿಗಿಂತ ಮುಖ್ಯವಾಗಿ ಮೂರು ವಿಷಯಗಳಲ್ಲಿ ಮೇಲ್ಮೆ ಸಾಧಿಸಿದೆ.

ಒಂದನೆಯದು, ಗೂಗಲ್ ಅಸಿಸ್ಟೆಂಟ್ ಎಂಬ ಕೃತಕ ಜಾಣ್ಮೆಯ (ಆರ್ಟಿಫಿಶಿಯಲ್ ಇಂಟಲಿಜೆನ್ಸ್) ನೆರವು. ಲಾಗಿನ್ ಆದಾಗಲೇ, ಗೂಗಲ್ ಅಸಿಸ್ಟೆಂಟ್ ಎಂಬ ಸಹಾಯಕ ತಂತ್ರಾಂಶದ ಹೆಸರು, ಕಾಂಟ್ಯಾಕ್ಟ್ಸ್ ಪಟ್ಟಿಯಲ್ಲಿ ಗೋಚರಿಸುತ್ತದೆ. ಅದನ್ನು ಒತ್ತಿ, ಅದರಲ್ಲಿ ಏನೇ ಹೇಳಿದರೂ ಉತ್ತರ ಬರುತ್ತದೆ. “ಕನ್ನಡ ಬರುತ್ತಾ?” ಅಥವಾ ‘ಕನ್ನಡ ಯಾವಾಗ’ ಅಂತ ಟೈಪ್ ಮಾಡಿ, ಸೆಂಡ್ ಬಟನ್ ಒತ್ತಿದರೆ, ‘ಕ್ಷಮಿಸಿ, ನಾನಿನ್ನೂ ಕನ್ನಡವನ್ನು ಕಲಿಯುತ್ತಿದ್ದೇನೆ, ಆದರೂ ನಿಮಗಾಗಿ ನಾನು ಗೂಗಲ್ ಮೂಲಕ ಹುಡುಕಲು ಸಹಾಯ ಮಾಡುತ್ತೇನೆ’ ಅಂತ ಕನ್ನಡದಲ್ಲೇ ಉತ್ತರ ಬರುತ್ತದೆ. ಜತೆಗೆ ಅದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಗೂಗಲ್‌ನಿಂದ ಹುಡುಕಿ ತಂದು ನಿಮ್ಮ ಮುಂದಿಡುತ್ತದೆ.

ಈಗಾಗಲೇ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿರುವ ಗೂಗಲ್ ನೌ (Google Now) ಎಂಬ ವರ್ಚುವಲ್ ಸಹಾಯಕ ತಂತ್ರಾಂಶದ ಸುಧಾರಿತ ರೂಪವಿದು. ಮೈಕ್ರೋಸಾಫ್ಟ್ ಫೋನ್‌ಗಳಲ್ಲಿರುವ ಕೋರ್ಟನಾ, ಆ್ಯಪಲ್ ಫೋನ್‌ನ ‘ಸಿರಿ’ ತಂತ್ರಾಂಶಗಳಂತೆಯೇ ಇದು. ಇವುಗಳನ್ನು ಆ್ಯಕ್ಟಿವೇಟ್ ಮಾಡಿಕೊಂಡರೆ, ನಿಮಗೇನು ಬೇಕು ಅಂತ ಫೋನ್‌ಗೆ ಹೇಳಿದರಾಯಿತು, ಅದನ್ನು ನೆರವೇರಿಸಲು Avinash-Logo_thumb.pngನೆರವಾಗುತ್ತದೆ. ಅಂದರೆ, ಗೂಗಲ್ ಅಸಿಸ್ಟೆಂಟ್‌ನ ಮೈಕ್ ಬಟನ್ ಒತ್ತಿ ಹಿಡಿಯುತ್ತಾ (ಅಥವಾ ಟೈಪ್ ಮಾಡಲೂ ಸಾಧ್ಯ), ‘Call Avinash’ ಅಂತ ಹೇಳಿದರೆ, ಅದು ಆ ಹೆಸರಿಗೆ ಕರೆ ಮಾಡಲು ಡಯಲರ್ ಓಪನ್ ಮಾಡುತ್ತದೆ, ಮತ್ತು ‘ಅವಿನಾಶ್’ ಅಂತ ಹಲವಾರು ಹೆಸರುಗಳಿದ್ದರೆ, ಯಾವ ‘ಅವಿನಾಶ್’ ಬೇಕು ಅಂತ ಕೇಳುತ್ತದೆ, ಆಯ್ಕೆ ಮಾಡಿದ ತಕ್ಷಣ ಕರೆ ಶುರುವಾಗುತ್ತದೆ. ಅದೇ ರೀತಿ, What is the time now in London ಅಂತಲೋ, Set me an alarm, search me a good hotel, tell me a joke ಅಂತೆಲ್ಲ ಹೇಳಿದರೂ, ಅದು ನಿಮ್ಮ ಸಹಾಯಕನಂತೆ ನಿಮ್ಮ ಆದೇಶವನ್ನು ಶಿರಸಾ ಪಾಲಿಸುತ್ತದೆ. ಈ ವೈಶಿಷ್ಟ್ಯವನ್ನು ನೀವು ಹೆಚ್ಚು ಹೆಚ್ಚು ಬಳಸಿದಷ್ಟೂ ಈ ಅಸಿಸ್ಟೆಂಟ್ ಹೆಚ್ಚು ಸ್ಮಾರ್ಟ್ ಆಗುತ್ತಾ ಹೋಗುತ್ತದೆಂಬುದು ನೆನಪಿರಲಿ.

ಎರಡನೆಯ ಪ್ರಧಾನ ವಿಶೇಷತೆಯೆಂದರೆ, ಇನ್‌ಕಾಗ್ನಿಟೋ ಚಾಟ್ ಎಂಬ ಆಯ್ಕೆ. ನೀವು ಅಲೋ ಓಪನ್ ಮಾಡಿದ ಬಳಿಕ, ಕೆಳ-ಬಲಭಾಗದಲ್ಲಿರುವ ಮೆಸೇಜ್ ಗುಳ್ಳೆಯನ್ನು ಒತ್ತಿರಿ. ಆಗ ಗ್ರೂಪ್ ಚಾಟ್‌ಗೆ, ಗೂಗಲ್ ಅಸಿಸ್ಟೆಂಟ್ ಜತೆ ಚಾಟ್ ಮಾಡಲು ಹಾಗೂ ಇನ್‌ಕಾಗ್ನಿಟೋ ಚಾಟ್ ಮಾಡುವುದಕ್ಕೆ ಆಯ್ಕೆಗಳು ಗೋಚರಿಸುತ್ತವೆ. ಇನ್‌ಕಾಗ್ನಿಟೋ ಚಾಟ್‌ನ ವಿಶೇಷತೆಯೆಂದರೆ, ನೀವು ಯಾರೊಂದಿಗಾದರೂ ಚಾಟ್ ಮಾಡುತ್ತಿದ್ದರೆ, ಮಾತುಕತೆ ನಡೆಸಿದ ಬಳಿಕ ಆ ಸಂದೇಶಗಳು ಅಳಿಸಿಹೋಗುತ್ತವೆ. ಉದಾಹರಣೆಗೆ, 30 ಸೆಕೆಂಡ್ ಸಮಯ ಹೊಂದಿಸಿಟ್ಟರೆ, ನೀವು ಸಂದೇಶ ಕಳುಹಿಸಿದ 30 ಸೆಕೆಂಡ್ ಬಳಿಕ ನಿಮ್ಮ ಮೊಬೈಲ್‌ನಿಂದ ಈ ಸಂದೇಶ ಡಿಲೀಟ್ ಆಗುತ್ತದೆ. ಅದೇ ರೀತಿ, ನಿಮ್ಮ ಸ್ನೇಹಿತರು ಅದನ್ನು ಓದಿದ 30 ಸೆಕೆಂಡ್ ನಂತರ ಅಲ್ಲಿಂದಲೂ ಅದು ಡಿಲೀಟ್ ಆಗುತ್ತದೆ. ಚಾಟ್ ವಿಂಡೋದ ಮೇಲ್ಭಾಗದಲ್ಲಿ ನಿಮ್ಮ ಸ್ನೇಹಿತರ ಪ್ರೊಫೈಲ್ ಫೋಟೋ ಇರುವಲ್ಲಿ, ಗಡಿಯಾರದ ಚಿಹ್ನೆ ಮುಟ್ಟಿದರೆ, ಸಮಯ ನಿಗದಿಪಡಿಸುವ ಆಯ್ಕೆ ಗೋಚರಿಸುತ್ತದೆ. ಮೆಸೇಜ್ ಡಿಲೀಟ್ ಮಾಡಬೇಕಾದ ಅವಧಿಯನ್ನು 5 ಸೆಕೆಂಡುಗಳಿಂದ 1 ವಾರದವರೆಗೂ ಹೊಂದಿಸಬಹುದು.

ಮೂರನೆಯ ಅಂಶವೆಂದರೆ, ಅದರಲ್ಲಿ ಸಂದೇಶದ ಅಕ್ಷರ ಗಾತ್ರವನ್ನು ಬೇಕಾದಂತೆ ಹೆಚ್ಚಿಸಬಹುದು. ಇದು ಹೇಗೆಂದರೆ, ಸಂದೇಶ ಟೈಪ್ ಮಾಡಿ, ಸೆಂಡ್ ಬಟನ್ ಒತ್ತಿ ಹಿಡಿದುಕೊಳ್ಳಿ, ಬೆರಳು ಮೇಲಕ್ಕೆ ಜಾರಿಸಿದರೆ ಅಕ್ಷರ ದೊಡ್ಡದಾಗಿಯೂ, ಕೆಳಕ್ಕೆ ಜಾರಿಸಿದರೆ ಫಾಂಟ್ ಗಾತ್ರ ಚಿಕ್ಕದಾಗಿಯೂ ಪೋಸ್ಟ್ ಆಗುತ್ತದೆ.

ಉಳಿದಂತೆ, ಇದರಲ್ಲಿ ಕರೆ, ವೀಡಿಯೋ ಕರೆ ವ್ಯವಸ್ಥೆ ಇಲ್ಲ ಮತ್ತು ಪಿಡಿಎಫ್ ಫೈಲುಗಳನ್ನು ಕಳುಹಿಸುವ ಆಯ್ಕೆಯೂ ಸದ್ಯಕ್ಕಿಲ್ಲ. ಇನ್ನು, ಪ್ರೈವೆಸಿ ವಿಚಾರ. ಗೂಗಲ್‌ಗೆ ಎಲ್ಲವೂ ಗೊತ್ತಿರುವುದರಿಂದ ಅದರ ಬಗ್ಗೆ ಜಾಸ್ತಿ ತಲೆಕೆಡಿಸಿಕೊಳ್ಳಬೇಕಾಗಿಲ್ಲ, ಅಲ್ಲವೇ? ಆದರೆ, ಹಲವು ಸಾಧನಗಳಲ್ಲಿ ಬಳಕೆಗೆ ಅವಕಾಶ ನೀಡಿದ್ದಿದ್ದರೆ ಇದು ವಾಟ್ಸಪ್‌ಗಿಂತ ಎಲ್ಲರಿಗೂ ಹೆಚ್ಚು ಇಷ್ಟವಾಗುತ್ತಿತ್ತೇನೋ…

ಅಲೋ ಇಲ್ಲದ ಫ್ರೆಂಡ್ಸ್‌ಗೆ ನಿಮ್ಮ ಸಂದೇಶವು ಉಚಿತ ಎಸ್ಸೆಮ್ಮೆಸ್ ರೂಪದಲ್ಲಿ ಹೋಗುತ್ತದೆ. ಅವರಿಗೂ ಎಸ್ಸೆಮ್ಮೆಸ್ ರೂಪದಲ್ಲಿ ರಿಸೀವ್ ಆಗುತ್ತದೆ. ಆದರೆ, ಇಂಟರ್ನೆಟ್ (ಡೇಟಾ) ಆನ್ ಇರುವಾಗ ಮಾತ್ರ ಎಲ್ಲ ಸಾಧ್ಯ ಎಂಬುದು ಗಮನದಲ್ಲಿರಲಿ.

ವಿಜಯ ಕರ್ನಾಟಕದಲ್ಲಿ ಅಂಕಣ ಮಾಹಿತಿ@ತಂತ್ರಜ್ಞಾನ: ಅವಿನಾಶ್ ಬೈಪಾಡಿತ್ತಾಯ (26 ಸೆಪ್ಟೆಂಬರ್ 2016)

LEAVE A REPLY

Please enter your comment!
Please enter your name here