ನಿಮ್ಮ ಫೋನ್ ಸುರಕ್ಷಿತವಾಗಿಟ್ಟುಕೊಳ್ಳಲು ಅಗತ್ಯ ಕ್ರಮಗಳು

2
888

Avinash-Columnಯಾವುದೋ ಒಂದು ಆ್ಯಪ್ ಮೂಲಕ ಕ್ರೆಡಿಟ್ ಕಾರ್ಡ್ ಮಾಹಿತಿಯನ್ನು ಕದಿಯಲಾಯಿತು, ಅಥವಾ ನೂರಾರು ರಹಸ್ಯ ಫೋಟೋಗಳು ಲೀಕ್ ಆದವು ಎಂಬಿತ್ಯಾದಿ ಸುದ್ದಿಗಳನ್ನು ಕೇಳಿರುತ್ತೀರಿ. ಸ್ಮಾರ್ಟ್ ಫೋನ್‌ಗಳು ಹೊಸ ಹೊಸ ವಿನ್ಯಾಸ, ಹೊಸ ತಂತ್ರಜ್ಞಾನಗಳೊಂದಿಗೆ ದೊಡ್ಡವರನ್ನು ಮಾತ್ರವಷ್ಟೇ ಅಲ್ಲದೆ, ಮಕ್ಕಳನ್ನೂ ಆಕರ್ಷಿಸುತ್ತಿವೆ. ಹೀಗಾಗಿ, ನಿಮ್ಮ ಪ್ರಮುಖ ವಿಚಾರಗಳನ್ನು, ಫೈಲುಗಳನ್ನು ಹೊಂದಿರಬಹುದಾದ ಸ್ಮಾರ್ಟ್ ಫೋನ್‌ನ ಸಂರಕ್ಷಣೆಗೆ ಹಿಂದೆಂದಿಗಿಂತ ಹೆಚ್ಚು ಆದ್ಯತೆ ನೀಡಬೇಕಾದ ಅನಿವಾರ್ಯತೆಯಿದೆ. ಈ ಕಾರಣಕ್ಕಾಗಿಯೇ ಜೀವನದ ಅನಿವಾರ್ಯ ಭಾಗವಾಗಿರುವ ಸ್ಮಾರ್ಟ್ ಫೋನನ್ನು ಸುರಕ್ಷಿತವಾಗಿಟ್ಟುಕೊಳ್ಳುವುದು ಹೇಗೆಂಬ ಬಗ್ಗೆ ಒಂದಿಷ್ಟು ಮಾಹಿತಿ ಈ ಬಾರಿ ನಿಮಗಾಗಿ.

ಮೊದಲನೆಯದಾಗಿ ಮಾಡಬಾರದ ಕೆಲಸವೆಂದರೆ ನಮ್ಮ ಫೋನನ್ನು ಎಲ್ಲೋ ಬಿಡುವುದು ಅಥವಾ ವಿಶ್ವಾಸಾರ್ಹರಲ್ಲದ ವ್ಯಕ್ತಿಗಳ ಕೈಗೆ ಕೊಡುವುದು. ಪಿನ್ ನಂಬರ್, ಪಾಸ್‌ವರ್ಡ್ ಅಥವಾ ಪ್ಯಾಟರ್ನ್ ಮೂಲಕ ಸ್ಕ್ರೀನ್ ಲಾಕ್ (ಮುಖ್ಯವಾಗಿ ಗೇಮ್ಸ್ ಆಡಲು ಬರುವ ಮಕ್ಕಳ ಕೈಯಿಂದ ರಕ್ಷಿಸಲು!) ಮಾಡಿಕೊಳ್ಳಬೇಕಾದುದು ಅತ್ಯಗತ್ಯ (Settings > Security > Screen security > Screen lock). ನಂತರ ನಿಮ್ಮ ಸಂಪರ್ಕ ಸಂಖ್ಯೆಗಳು, ಫೋಟೋ, ಹಾಡು ಮತ್ತಿತರ ಫೈಲುಗಳನ್ನು ಆಗಾಗ್ಗೆ ಬ್ಯಾಕಪ್ ಮಾಡಿಕೊಳ್ಳಬೇಕು. ಆ ಬಳಿಕ, ನಿಮ್ಮ ಗೂಗಲ್ ಖಾತೆಗೆ 2 ಹಂತದ ದೃಢೀಕರಣದ ಮೂಲಕ (ಪಾಸ್‌ವರ್ಡ್ ಹಾಗೂ ಫೋನ್ ಮೂಲಕ ಪಿನ್) ಲಾಗಿನ್ ಆಗುವ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವುದು. ಇವು ನೀವು ಕೈಗೊಳ್ಳಬೇಕಾದ ಮೂಲಭೂತ ಕ್ರಮಗಳು.

ಗಮನವಿಡಬೇಕಾದ ಇನ್ನೂ ಹೆಚ್ಚಿನ ಅಂಶಗಳೆಂದರೆ, ಯಾವತ್ತೂ ಕೂಡ ಪಾಪ್-ಅಪ್ ಜಾಹೀರಾತುಗಳು ಅಥವಾ ಬ್ಯಾನರ್‌ಗಳನ್ನು ಕ್ಲಿಕ್ ಮಾಡುವ ಮೊದಲು ಸರಿಯಾಗಿ ಪರಿಶೀಲಿಸಿ. ಹೆಚ್ಚಿನ ಜಾಹೀರಾತುಗಳು ಸುರಕ್ಷಿತವೇ ಆಗಿದ್ದರೂ, ‘ನಿಮ್ಮ ಫೋನ್‌ಗೆ ವೈರಸ್ ತಗುಲಿದೆ, ಇಲ್ಲಿ ಕ್ಲಿಕ್ ಮಾಡಿ’ ಎಂದೋ, ‘ನಿಮ್ಮ ಫೋನ್ ಸುರಕ್ಷಿತವಾಗಿಡಲು ಪಾಸ್‌ವರ್ಡ್ ಅಥವಾ ವೈಯಕ್ತಿಕ ಮಾಹಿತಿ ನಮೂದಿಸಿ’ ಅಂತಲೋ ಕೇಳುವ ಯಾವುದೇ ಲಿಂಕನ್ನು ಕ್ಲಿಕ್ ಮಾಡಬೇಡಿ. ಕ್ಲಿಕ್ ಮಾಡಿದರೆ, ನಿಮಗರಿವಿಲ್ಲದಂತೆಯೇ, ಹಾನಿಕಾರಕ ತಂತ್ರಾಂಶಗಳು ಡೌನ್‌ಲೋಡ್ ಆಗುವ ಸಾಧ್ಯತೆಗಳಿವೆ ಅಥವಾ ನಿಮ್ಮ ಖಾತೆಯ ಮಾಹಿತಿಯನ್ನು ಅನ್ಯರಿಗೆ ಕೊಟ್ಟುಬಿಡುವ ಸಾಧ್ಯತೆಗಳಿವೆ.

ಯಾವತ್ತಿಗೂ ನಂಬಿಕಸ್ಥ ಮೂಲಗಳಿಂದಲ್ಲದೆ (ಆಂಡ್ರಾಯ್ಡ್‌ನ ಗೂಗಲ್ ಪ್ಲೇ ಸ್ಟೋರ್, ವಿಂಡೋಸ್‌ನಲ್ಲಿ ವಿಂಡೋಸ್ ಫೋನ್ ಸ್ಟೋರ್, ಆ್ಯಪಲ್‌ನ ಐಟ್ಯೂನ್ಸ್ ಇತ್ಯಾದಿ) ಬೇರೆಲ್ಲಿಂದಲೂ ಆ್ಯಪ್‌ಗಳನ್ನು ಅಳವಡಿಸಿಕೊಳ್ಳಬೇಡಿ.

ಫೋನ್ ಕಳೆದುಹೋಗಬಹುದಾದ ಪರಿಸ್ಥಿತಿಗೆ ಸಿದ್ಧವಾಗಿರಿ. ಅಂದರೆ, ಡಿವೈಸ್ ಮ್ಯಾನೇಜರ್ ಎಂಬ ಆಂಡ್ರಾಯ್ಡ್‌ನ ವಿಶೇಷ ವ್ಯವಸ್ಥೆಯನ್ನು ಎನೇಬಲ್ ಮಾಡಿಟ್ಟುಕೊಳ್ಳಿ. ಫೋನ್ ಕಳೆದುಹೋದರೆ, ಅದು ಎಲ್ಲಿದೆ ಎಂಬುದನ್ನು ತಿಳಿದುಕೊಳ್ಳಲು, ರಿಮೋಟ್ ಆಗಿಯೇ ಅದರಲ್ಲಿರುವ ಎಲ್ಲ ಮಾಹಿತಿಯನ್ನು ಅಳಿಸಲು ಇದು ನೆರವಾಗುತ್ತದೆ. ಯಾವುದೇ ಫೋನ್ ಬಳಸುತ್ತಿರುವವರು ಅದರೊಂದಿಗೆ ಮಿಳಿತವಾಗಿರುವ ಇಮೇಲ್ ಐಡಿಯನ್ನು, ಅದರ ಪಾಸ್‌ವರ್ಡನ್ನು ಸುರಕ್ಷಿತವಾಗಿಟ್ಟುಕೊಳ್ಳುವುದನ್ನು ಮರೆಯಬೇಡಿ. ಇಮೇಲ್ ಹ್ಯಾಕ್ ಆಗಿದೆ ಎಂದು ತಿಳಿದಾಕ್ಷಣ ಅದರ ಪಾಸ್‌ವರ್ಡನ್ನಷ್ಟೇ ಅಲ್ಲ, ಫೋನ್‌ನಲ್ಲಿಯೂ ಹೊಸ ಪಾಸ್‌ವರ್ಡ್ ಅಪ್‌ಡೇಟ್ ಮಾಡಿಕೊಳ್ಳಿ.

ಇದಲ್ಲದೆ ನಿಮ್ಮ ಫೋನ್ ಬೇರೆಯವರ ಕೈಗೆ ಸಿಕ್ಕಿದರೂ, ಅದನ್ನು ಬಳಸಲಾಗದಂತೆ ಮಾಡಲು ಎನ್‌ಕ್ರಿಪ್ಷನ್ ಎಂಬ ಆಯ್ಕೆಯೊಂದು ಆಂಡ್ರಾಯ್ಡ್‌ನ ಜೆಲ್ಲಿಬೀನ್ ನಂತರದ ಆವೃತ್ತಿಗಳಲ್ಲಿ ಲಭ್ಯವಿದೆ. ಇದನ್ನು ಆಯ್ದುಕೊಂಡಾಗ, ಸಾಧನವು ಚಾರ್ಜಿಂಗ್ ಆಗುತ್ತಿರಬೇಕು ಮತ್ತು ಪ್ರಕ್ರಿಯೆಯು ಪೂರ್ಣಗೊಳ್ಳುವವರೆಗೂ ಕಾಯಲೇಬೇಕು. ಇಲ್ಲವಾದಲ್ಲಿ ನಿಮ್ಮ ಎಲ್ಲ ಫೈಲು, ಮಾಹಿತಿ ಅಳಿಸಿಹೋಗುವ ಅಪಾಯವಿದೆ.

ಎನ್‌ಕ್ರಿಪ್ಟ್ (ಗೂಢಲಿಪೀಕರಣ) ಯಾಕೆ ಮಾಡಬೇಕೆಂದರೆ, ಮಾಮೂಲಿ ಸ್ಕ್ರೀನ್ ಲಾಕ್ ಬಳಸಿದರೆ, ಕಂಪ್ಯೂಟರಿಗೆ ಸಂಪರ್ಕಿಸಿದಾಗ ಫೋನ್‌ನಲ್ಲಿರುವ ಎಲ್ಲ ಫೈಲುಗಳನ್ನು ನೋಡಬಹುದು, ನಕಲು ಮಾಡಬಹುದು. ಆದರೆ, ಎನ್‌ಕ್ರಿಪ್ಟ್ ಮಾಡಿದರೆ ಅದು ಸಾಧ್ಯವಾಗದು. ನಿಮ್ಮ ಪಾಸ್‌ವರ್ಡ್ ಇಲ್ಲದೆ ಏನೂ ಮಾಡಲಾಗುವುದಿಲ್ಲ. ಅಂತೆಯೇ, ಸಾಮಾನ್ಯ ಫೋನ್‌ಗಳಲ್ಲಿ ನೀವು ಫ್ಯಾಕ್ಟರಿ ಡೇಟಾ ರೀಸೆಟ್ (ಫೋನ್‌ನಲ್ಲಿರುವ ನಿಮ್ಮ ಎಲ್ಲ ಮಾಹಿತಿಗಳು, ಅಳವಡಿಸಿದ ಆ್ಯಪ್‌ಗಳು ಅಳಿಸಿಹೋಗಿ, ಹೊಚ್ಚ ಹೊಸದರಂತೆ ಆಗುತ್ತದೆ) ಮಾಡಿದರೂ, ಅದರಲ್ಲಿ ಇದ್ದ ಎಲ್ಲ ಫೈಲುಗಳನ್ನು ರೀಕವರ್ ಮಾಡಲು ಸಾಧ್ಯವಿದೆ. ಆದರೆ ಎನ್‌ಕ್ರಿಪ್ಟ್ ಮಾಡಿದರೆ ಇದರ ಸಾಧ್ಯತೆ ಕಡಿಮೆ.

ವಿಜಯ ಕರ್ನಾಟಕದಲ್ಲಿ ಮಾಹಿತಿ@ತಂತ್ರಜ್ಞಾನ- 127: ಅವಿನಾಶ್ ಬಿ. (25 ಮೇ 2015)

2 COMMENTS

LEAVE A REPLY

Please enter your comment!
Please enter your name here