ನಮ್ಮಲ್ಲಿರುವವರೇ ಮೋಸ್ಟ್ ವಾಂಟೆಡ್! ಎಂಥಾ ಶೇಮ್!

0
302

ನಮ್ಮ ದೇಶವು ಇಂದು ಯಾವ ಸ್ಥಿತಿಯಲ್ಲಿದೆಯೋ ಅದಕ್ಕೆಲ್ಲಕ್ಕೂ ಕಾರಣ ಕಾಂಗ್ರೆಸ್ ಎಂಬುದರಲ್ಲಿ ಎರಡು ಮಾತಿಲ್ಲ. ಏಳಿಗೆಯಾಗಲೀ, ಅಥವಾ ಹಿನ್ನಡೆಯೇ ಇರಲಿ, ಎಲ್ಲದಕ್ಕೂ ಹೊಣೆ ಕಾಂಗ್ರೆಸ್. ಎಲ್ಲೋ ನಡುವೆ ಒಂದೆರಡು ಬೇರೆ ಪಕ್ಷಗಳ ಸರಕಾರಗಳು ಬಂದು ಹೋಗಿರಬಹುದು. ಅಂಥದ್ದರಲ್ಲಿ ಎದ್ದು ಕಾಣುವುದು ಮತ್ತು ಬದಲಾವಣೆಯ ಹರಿಕಾರ ಎಂದು ಗುರುತಿಸಬಹುದಾದದ್ದೆಂದರೆ ಅಟಲ್ ಬಿಹಾರಿ ವಾಜಪೇಯಿ ಅವರ ಸರಕಾರ ಮಾತ್ರ. ಅದು ಬಿಟ್ಟರೆ, ಗುಜ್ರಾಲ್ ಸರಕಾರ, ದೇವೇಗೌಡ ಸರಕಾರ, ವಿ.ಪಿ.ಸಿಂಗ್ ಸರಕಾರ ಎತ್ಯಾದಿ ಎಲ್ಲವೂ ಋಣಾತ್ಮಕ ಕಾರ್ಯಕ್ರಮಗಳಿಗಾಗಿ ಗುರುತಿಸಿಕೊಂಡಿದ್ದೇ ಹೆಚ್ಚು.

ಇದು ಯಾಕೆ ಇಲ್ಲಿ ಪ್ರಸ್ತಾಪಿಸಲಾಯಿತು ಎಂದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂದು ಭಾರತದ ಬಗೆಗೆ ಯಾವ ಅಭಿಪ್ರಾಯ ಇದೆಯೋ ಅದೆಲ್ಲವನ್ನೂ ಮೂಡಿಸಿದ್ದು ಕಾಂಗ್ರೆಸ್. ದೇಶವನ್ನು ಇಷ್ಟು ವರ್ಷಗಳ ಕಾಲ ಆಳಿದ ಕಾಂಗ್ರೆಸ್‌ಗೆ ಆಡಳಿತದಲ್ಲಿ, ಅಂತಾರಾಷ್ಟ್ರೀಯ ಸಂಬಂಧ ಸುಧಾರಣೆಯಲ್ಲಿ ಅದೆಷ್ಟು ಭರ್ಜರಿ ಅನುಭವ ಇದೆ! ಆದರೆ, ಈಗಿನ ಅದೇ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವನ್ನೊಮ್ಮೆ ನೋಡಿಬಿಡಿ! ತೀರಾ ಬಾಲಿಶವಾಗಿ ವರ್ತಿಸುತ್ತಿದೆ. ಈ ಅನುಭವವೆಲ್ಲವೂ ಎಲ್ಲಿ ಹೋಯಿತು? ಇದೇಕೆ ಅನನುಭವಿಗಳಂತೆ ವರ್ತಿಸುತ್ತಿದೆ? ಆಳುವ ಕುರಿತ ಉಡಾಫೆಯೇ? ಔದಾಸೀನ್ಯವೇ?

ಒಂದಿಷ್ಟು ಹಿನ್ನೋಟ ಹರಿಸಿ ನೋಡಿ. ನಮ್ಮ ವಿದೇಶಾಂಗ ಸಚಿವರು ವಿಶ್ವಸಂಸ್ಥೆಯಲ್ಲಿ ಬೇರೆ ಯಾವುದೋ ದೇಶದ ವಿದೇಶ ಸಚಿವರ ಭಾಷಣ ಓದುತ್ತಾರೆ, ಶರ್ಮ್ ಎ ಶೇಖ್ ಸಮಾವೇಶದಲ್ಲಿ ಭಯೋತ್ಪಾದನೆಯ ವಿರುದ್ಧದ ನಮ್ಮ ಹೋರಾಟದ ಕಿಚ್ಚಿಗೆ ತಣ್ಣೀರು ಹಾಕುವಂತಹಾ ಬೇಜವಾಬ್ದಾರಿ ಹೇಳಿಕೆ ನೀಡಿ ಬರುತ್ತಾರೆ, ಪಾಕಿಸ್ತಾನದ ನೆಲದಲ್ಲೇ ಹೋಗಿ, ನಮ್ಮ ಅಧಿಕಾರಿಗಳನ್ನು ಜೈಶ್ ಎ ಮಹಮದ್ ಸಂಘಟನೆಯ ಮುಖ್ಯಸ್ಥರಿಗೆ ಹೋಲಿಸಿದಾಗ ಸುಮ್ಮನಿದ್ದು ಬಾಲ ಮುದುರಿಕೊಂಡು ಬರುತ್ತೇವೆ. ಈ ಎಲ್ಲ ಮುಜುರಗಳಗಳಿಗೆ ಕಲಶಪ್ರಾಯವಾಗಿ ಈಗ ಮತ್ತೊಂದು ಮುಖಭಂಗ.

ಇಡೀ ಪಟ್ಟಿಯೇ ದೋಷಪೂರಿತ…
ಪಾಕಿಸ್ತಾನಕ್ಕೆ ಸಲ್ಲಿಸಿದ 50 ಮಂದಿ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿರುವವರು ಭಾರತದೊಳಗೇ ಇದ್ದಾರೆ ಎಂಬುದು ಒಂದೊಂದಾಗಿ ಹೊರಬರುತ್ತಿದೆ. ಮುಂಬೈಯಲ್ಲಿ ರೈಲು ಬಾಂಬ್ ಸ್ಫೋಟಗಳಿಗೆ ಸಂಬಂಧಿಸಿದಂತೆ ವಾಜುಲ್ ಕುಮಾರ್ ಖಾನ್ ಎಂಬಾತ ಥಾಣೆಯ ಮನೆಯಲ್ಲೇ ಇರುವುದು ಪತ್ತೆಯಾಗಿತ್ತು. (ಆತನ ವಿರುದ್ಧ ಚಾರ್ಜ್‌ಶೀಟ್ ಕೂಡ ಸಲ್ಲಿಸಲು ತನಿಖಾ ಏಜೆನ್ಸಿಗಳು ವಿಫಲವಾಗಿದ್ದರಿಂದಾಗಿ, ಆತ ಜಾಮೀನು ಪಡೆದು, ತಮ್ಮ ಕುಟುಂಬದೊಂದಿಗೆ ಹಾಯಾಗಿದ್ದ)

ಇದೀಗ 1993ರ ಸರಣಿ ಬಾಂಬ್ ಸ್ಫೋಟ ಆರೋಪಿ ಫಿರೋಜ್ ಅಬ್ದುಲ್ ಖಾನ್ (ಪಾಕ್‌ಗೆ ಸಲ್ಲಿಸಿದ ಪಟ್ಟಿಯಲ್ಲಿ 24ನೇ ಹೆಸರು) ಕೂಡ ನಮ್ಮಲ್ಲೇ ಇದ್ದಾನೆ. ಈತ ಮುಂಬೈಯ ಆರ್ಥರ್ ರೋಡ್ ಜೈಲಿನಲ್ಲಿದ್ದಾನೆ. ಮೊದಲನೇ ಪ್ರಕರಣಕ್ಕೆ ಗೃಹ ಸಚಿವರ ಪಿ.ಚಿದಂಬರಂ ಕ್ಷಮೆ ಯಾಚಿಸಿ, ತಪ್ಪನ್ನು ಮುಂಬೈ ಪೊಲೀಸರ ಮೇಲೆ ಹಾಕಿ ಕೈತೊಳೆದುಕೊಳ್ಳುವಷ್ಟರಲ್ಲೇ, ಫಿರೋಜ್ ಹೆಸರು ಬೆಳಕಿಗೆ ಬಂತು. ಅದು ಹೊರಬಿದ್ದ ತಕ್ಷಣವೇ ಇನ್ನಷ್ಟು ಹೆಸರುಗಳು ಕೇಳಿಬರತೊಡಗಿದವು. ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಪಾಕಿಸ್ತಾನದಲ್ಲಿ ಅಡಗಿಕೊಂಡಿದ್ದಾನೆ ಎಂದು ಪಟ್ಟಿಯಲ್ಲಿ ತಿಳಿಸಲಾಗಿರುವ ಒಬ್ಬಾತ ದಕ್ಷಿಣ ಭಾರತದ ಹುಜಿ ಉಗ್ರಗಾಮಿ ಸಂಘಟನೆಯ ಕಮಾಂಡರ್ ಮೊಹಮದ್ ಅಬ್ದುಲ್ ಶಹೀದ್ ಅಲಿಯಾಸ್ ಶಹೀದ್ ಬಿಲಾಲ್ ಈಗಾಗಲೇ ಸಾವನ್ನಪ್ಪಿದ್ದಾನೆ, ಮತ್ತು ಈತನ ಸಹಾಯಕ ಶೇಖ್ ಅಬ್ದುಲ್ ಖಾಜಾ ಅಲಿಯಾಸ್ ಮೊಹಮದ್ ಅಮ್ಜದ್ ಹೈದರಾಬಾದಿನ ಚೇರಳಪಳ್ಳಿ ಕಾರಾಗೃಹದಲ್ಲಿದ್ದಾನೆ. ಅಂತೆಯೇ, ಕಳೆದ ವರ್ಷ ಕಿಡ್ನಿ ಸಮಸ್ಯೆಯಿಂದ ಕರಾಚಿಯಲ್ಲಿ ಸಾವನ್ನಪ್ಪಿದ ದಾವೂದ್ ಇಬ್ರಾಹಿಂನ ಸೋದರ ನೂರಾನ ಹೆಸರು ಕೂಡ ಈ ಪಟ್ಟಿಯಲ್ಲಿದೆ. ಸರಣಿ ಬಾಂಬ್ ಸ್ಫೋಟ ಆರೋಪಿ, ಛೋಟಾ ರಾಜನ್ ಬಂಟ ಇಜಾಜ್ ಪಠಾಣ್ ಕಳೆದ ವರ್ಷ ಆರ್ಥರ್ ರೋಡ್ ಜೈಲಿನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದ. ಇಂಥವರೆಲ್ಲರೂ “ಅತ್ಯಂತ ಅಪಾಯಕಾರಿ ಅಪರಾಧಿಗಳು, ತಕ್ಷಣವೇ ನಮಗೊಪ್ಪಿಸಿ” ಅಂತ ನಾವು ಪಾಕಿಸ್ತಾನವನ್ನು ಕೇಳಿದ್ದೇವೆ!

ಇಲ್ಲಿ, ಎಷ್ಟು ಹೆಸರುಗಳು ಹೊರಬಂದವು ಎಂಬುದು ಮುಖ್ಯವಲ್ಲ. ಆದರೆ ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ನಾವು ಎಷ್ಟರ ಮಟ್ಟಿಗೆ ಸೀರಿಯಸ್ ಆಗಿದ್ದೇವೆ ಎಂಬುದನ್ನು ಸೂಚಿಸುತ್ತದೆ ಇದು. ಮುಂಬೈ ದಾಳಿ ನಡೆದು ವರ್ಷಗಳೇ ಉರುಳಿದರೂ, ತಪ್ಪಿತಸ್ಥರನ್ನು ಪಾಕಿಸ್ತಾನದ ಕೈಯಿಂದ ಕರೆದುಕೊಂಡು ಬರಲಾಗಲಿಲ್ಲ ನಮ್ಮ ವಿದೇಶಾಂಗ ನೀತಿಗೆ! ಇನ್ನೂ ನಾವು ಪಾಕಿಸ್ತಾನ ಹಾಗೆ, ಪಾಕಿಸ್ತಾನ ಹೀಗೆ ಅಂತ ಹೇಳುತ್ತಾ, ಹೇಳಿ ಹೇಳಿ ಸುಸ್ತಾದ ಬಳಿಕ ಸುಮ್ಮನಾಗುತ್ತೇವೆಯೇ ಹೊರತು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕ್ ವಿರುದ್ಧದ ವೇದಿಕೆಯೊಂದನ್ನು ಸೃಷ್ಟಿಸಿ ಕಠಿಣ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಮುಂದಾಗುವುದು ಗೋಚರಿಸುತ್ತಿಲ್ಲ.

ಭಾರತದ ವಾದ ದುರ್ಬಲವಾಯಿತು…
ಈಗ, “ಭಾರತವು ಸುಮ್ಮನೇ ಇಲ್ಲ ಸಲ್ಲದವರನ್ನೆಲ್ಲಾ ಹೇಳಿಕೊಂಡು, ಎಲ್ಲದಕ್ಕೂ ಪಾಕಿಸ್ತಾನವೇ ಕಾರಣ ಎಂದು ದೂಷಿಸುವುದಕ್ಕಾಗಿಯೇ ಇಷ್ಟೊಂದು ಹುಯಿಲೆಬ್ಬಿಸುತ್ತಿದೆ” ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಹಳಿಯಲು ಭಯೋತ್ಪಾದಕರ ಬೀಡೇ ಆಗಿಬಿಟ್ಟಿರುವ ಪಾಕಿಸ್ತಾನಕ್ಕೆ ಒಂದು ಒಳ್ಳೆಯ ಅವಕಾಶವನ್ನೇ ಒದಗಿಸಿಕೊಟ್ಟಿವೆ ನಮ್ಮ ತನಿಖಾ ಏಜೆನ್ಸಿಗಳು. ಕೋಲು ಕೊಟ್ಟು ಹೊಡೆಸಿಕೊಳ್ಳುವ ಸ್ಥಿತಿ ನಮ್ಮದು! ಆಯಿತಲ್ಲಾ ನಮ್ಮ ಭಯೋತ್ಪಾದನೆಯ ವಿರುದ್ಧದ ಹೋರಾಟಕ್ಕೆ ಮಂಗಳಾರತಿ!

ಕುಖ್ಯಾತ ಭೂಗತ ಪಾತಕಿ, ಕ್ರಿಕೆಟ್ ಬೆಟ್ಟಿಂಗ್‌ಗಳಲ್ಲಿ, ಮಾದಕ ದ್ರವ್ಯ ಕಳ್ಳ ಸಾಗಾಟ ದಂಧೆಯಲ್ಲಿ, ಮದ್ಯ, ರಿಯಲ್ ಎಸ್ಟೇಟ್ ಮುಂತಾದ ವಹಿವಾಟುಗಳಲ್ಲಿ ಎಲ್ಲದರಲ್ಲೂ ಹಿಡಿತವಿರುವ ದಾವೂದ್ ಇಬ್ರಾಹಿಂಗೆ ಮಹಾರಾಷ್ಟ್ರದ ರಾಜಕಾರಣಿಗಳೊಂದಿಗೆ ಇರುವ ನಂಟಿನ ಬಗ್ಗೆ ಹಿಂದಿನಿಂದಲೂ ಊಹಾಪೋಹಗಳು ಕೇಳಿಬರುತ್ತಲೇ ಇದ್ದುದು ಸುಳ್ಳಲ್ಲ. ಈಗ ಮಹಾರಾಷ್ಟ್ರದ ಆ ರಾಜಕಾರಣಿಗಳು ದೇಶದ ಅತ್ಯಂತ ಪ್ರಮುಖ ಸ್ಥಾನಗಳಲ್ಲಿದ್ದಾರೆ. ದಾವೂದ್‌ನನ್ನು ಕರೆದು ತರಲು ಹಲವರ ವಿರೋಧಗಳಿರುವುದರಿಂದಲೇ ಪಾಕಿಸ್ತಾನದಿಂದ ಭಾರತಕ್ಕೆ ಗಡೀಪಾರು ಮಾಡಿಸುವಲ್ಲಿ ಕೇಂದ್ರ ಸರಕಾರ ಅಷ್ಟೊಂದು ತರಾತುರಿ ತೋರಿಸುತ್ತಿಲ್ಲ ಎಂಬ ಆರೋಪಗಳೂ ಅಲ್ಲಲ್ಲಿ ಕೇಳಿ ಬರುತ್ತಿರುವುದು ಸುಳ್ಳಲ್ಲ.

ದೇಶದ, ತನಿಖಾ ಸಂಸ್ಥೆಗಳ ವಿಶ್ವಾಸಾರ್ಹತೆಯ ಪ್ರಶ್ನೆ
ಇದೇನು, ಕ್ಷಮಿಸಿ ತಪ್ಪಾಗಿದೆ, ಮುಂದೆ ಸರಿಪಡಿಸಿಕೊಳ್ಳುತ್ತೇವೆ ಎನ್ನುತ್ತಾ ಕೈತೊಳೆದುಕೊಳ್ಳುವ ಸಂಗತಿಯೇನಲ್ಲ. ಭಾರತದ ತನಿಖಾ ಏಜೆನ್ಸಿಗಳ ಹಾಗೂ ಭಾರತದ ಆಡಳಿತ ವ್ಯವಸ್ಥೆಯ ವಿಶ್ವಾಸಾರ್ಹತೆಯ ಮೇಲೆಯೇ ಪ್ರಶ್ನಾರ್ಥಕ ಚಿಹ್ನೆ ಇರಿಸಿದ ಘಟನೆ. ಬೋಫೋರ್ಸ್ ಹಗರಣದ ಆರೋಪಿ, ಇಟಾಲಿಯನ್ ಉದ್ಯಮಿ ಒಟ್ಟಾವಿಯೋ ಕ್ವಟ್ರೋಚಿ ವಿರುದ್ಧ ಸಾಕ್ಷ್ಯಾಧಾರಗಳಿಲ್ಲ ಎನ್ನುತ್ತಾ ಅದರ ವಿರುದ್ಧದ ಕೇಸುಗಳನ್ನು ಹಿಂತೆಗೆದುಕೊಳ್ಳುತ್ತೇವೆ, ಪುರುಲಿಯಾ ಶಸ್ತ್ರಾಸ್ತ್ರ ಎಸೆತ ಪ್ರಕರಣಕ್ಕೆ ಸಂಬಂಧಿಸಿ ಪ್ರಧಾನ ಆರೋಪಿ ಕಿಮ್ ಡೇವಿಯನ್ನು ಬಂಧಿಸಲು ಅವಧಿ ತೀರಿದ ವಾರಂಟ್ ಹಿಡಿದುಕೊಂಡು ಕೋಪನ್‌ಹೇಗನ್ ನ್ಯಾಯಾಲಯಕ್ಕೆ ಹಾಜರಾಗುತ್ತೇವೆ ಎಂದೆಲ್ಲಾ ಹೇಳುವ ಮೂಲಕ ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಲೆ ತಗ್ಗಿಸುವಂತಹಾ ಅದೆಷ್ಟೋ ಕ್ರಮಗಳನ್ನು ಮಾಡಿಕೊಂಡಾಗಿದೆ.

ಸಿವಿಸಿ ನೇಮಕದಲ್ಲಿಯೂ ಸುಪ್ರೀಂ ಕೋರ್ಟಿನಿಂದ ಛೀಮಾರಿ ಹಾಕಿಸಿಕೊಂಡ ಬಳಿಕ ‘ತಪ್ಪಾಗಿದೆ’ ಅಂತ ಒಪ್ಪಿಕೊಂಡು ಸುಮ್ಮನಾಗುತ್ತದೆ ಸರಕಾರ. ಸ್ವಿಸ್ ಬ್ಯಾಂಕಿನಲ್ಲಿ ಇಟ್ಟಿರುವ ಕಪ್ಪುಹಣದ ಪಟ್ಟಿ ದೊರಕಿಸಿಕೊಳ್ಳುವುದು ಅಸಾಧ್ಯ ಎಂದು ಸುಪ್ರೀಂ ಕೋರ್ಟಿನೆದುರು ತಲೆ ತಗ್ಗಿಸಿ ಕೈತೊಳೆದುಕೊಳ್ಳುತ್ತೇವೆ, ಹಸನ್ ಅಲಿಯಂತಹಾ ಕೋಟಿ ಕೋಟಿ ತೆರಿಗೆ ವಂಚಕನ ಮೇಲೆ ಕ್ರಮ ಕೈಗೊಳ್ಳಲು ಕೂಡ ಸುಪ್ರೀಂ ಕೋರ್ಟೇ ತಪರಾಕಿ ನೀಡಬೇಕಾಗುತ್ತದೆ. 2ಜಿ ಹಗರಣ ತನಿಖೆಗೂ ಸುಪ್ರೀಂ ಕೋರ್ಟೇ ಮೇಲ್ವಿಚಾರಣೆ ವಹಿಸಿಕೊಳ್ಳಬೇಕಾಗುತ್ತದೆ. ಹಾಗಿದ್ದರೆ, ದೇಶವನ್ನು ಇಷ್ಟು ವರ್ಷ ಕಾಲ ಆಳಿದ ಅನುಭವ ಏನಾಯಿತು? ಇವೆಲ್ಲಕ್ಕೂ ಅನುಭವದ ಕೊರತೆಯೇ ಅಲ್ಲವೇ ಕಾರಣ? ಆಂತರಿಕವಾಗಿ ಪ್ರಜೆಗಳು ಬೆಲೆ ಏರಿಕೆಯಿಂದಾಗಿ ತತ್ತರಿಸುತ್ತಾ, ಕಣ್ಣೀರಿಡುತ್ತಲೇ, ಆಡಳಿತ ವ್ಯವಸ್ಥೆಗೆ ಹಿಡಿ ಶಾಪ ಹಾಕುತ್ತಲೇ ದಿನ ದೂಡುತ್ತಿದ್ದಾರೆ. ಬಾಹ್ಯವಾಗಿ, ಈಗ ಬೇರೆ ದೇಶಗಳು ಕೂಡ ಭಾರತದ ಕಡೆಗೆ ಅನುಮಾನದಿಂದ ನೋಡುವಂತಾಯಿತೇ?

ನಿಜಕ್ಕೂ ಸೀರಿಯಸ್ಸಾಗಿದ್ದೇವೆಯೇ?
ಮುಂಬೈಯಲ್ಲಿ ಮಾರಣ ಹೋಮ ಮಾಡಿ ಸಿಕ್ಕಿಬಿದ್ದ ಮಹಮದ್ ಅಮೀರ್ ಅಜ್ಮಲ್, ಸಂಸತ್ತಿನ ಮೇಲೆಯೇ ದಾಳಿ ಮಾಡಿ ಸಿಕ್ಕಿಬಿದ್ದಿರುವ ಅಫ್ಜಲ್ ಗುರು, ಸಾಕಷ್ಟು ಬಾಂಬ್ ಸ್ಫೋಟಗಳನ್ನು ನಡೆಸಿ ಮುಗ್ಧರ ಸಾವಿಗೆ ಕಾರಣರಾಗಿರುವ, ಈಗಾಗಲೇ ಭಾರತೀಯ ಜೈಲುಗಳಲ್ಲಿರುವ ಸಾಕಷ್ಟು ಆರೋಪಿಗಳ ಬಗೆಗೆ ಏನೂ ಮಾಡಲಾರದ ಸ್ಥಿತಿಯಲ್ಲಿರುವ ನಾವು, ನಮ್ಮಲ್ಲಿರುವವರ ಮೇಲೆಯೇ ಏನೂ ಕ್ರಮ ಕೈಗೊಳ್ಳುತ್ತಿಲ್ಲ ಎಂದಾದರೆ, ಭಯೋತ್ಪಾದನೆ ವಿರುದ್ಧದ ಜಾಗತಿಕ ಹೋರಾಟದಲ್ಲಿ ಎಷ್ಟರ ಮಟ್ಟಿಗೆ ಗಂಭೀರವಾಗಿದ್ದೇವೆ, ನಿಜಕ್ಕೂ ಇದು ತೋರಿಕೆಯ ಹೋರಾಟವಾಗಿಬಿಟ್ಟಿತೇ? ಇಂತಹಾ ಉಡಾಫೆ ಕ್ರಮ ಬೇಕಾಗಿತ್ತೇ? ಬೇರೆ ದೇಶಕ್ಕೆ, ಅದು ಕೂಡ ನೆರೆಯ ಪಾಕಿಸ್ತಾನಕ್ಕೆ ಕೊಡುವ “ಮೋಸ್ಟ್ ವಾಂಟೆಡ್” ಅಪರಾಧಿಗಳ ಪಟ್ಟಿಯಲ್ಲೇ ಈ ರೀತಿ ತಪ್ಪುಗಳು ನಡೆಯುತ್ತಿವೆ ಎಂದಾದರೆ, ನಮ್ಮ ತನಿಖಾ ಏಜೆನ್ಸಿಗಳ ವಿಶ್ವಾಸಾರ್ಹತೆ ಎಲ್ಲಿಗೆ ತಲುಪಿತು? “ಈ ಪಟ್ಟಿಯಲ್ಲಿರುವವರೆಲ್ಲರೂ ನಿಮ್ಮಲ್ಲೇ ಇರಬಹುದು, ಮೊದ್ಲು ನೋಡ್ಕೊಳ್ಳಿ, ನಂತ್ರ ನಮಗೆ ಹೇಳಿ” ಅಂತ ಪಾಕ್ ಹೇಳುವ ಸಾಧ್ಯತೆಗಳೂ ಇವೆಯಲ್ಲಾ?
[ವೆಬ್‌ದುನಿಯಾಕ್ಕಾಗಿ]

LEAVE A REPLY

Please enter your comment!
Please enter your name here