ಆಧಾರ್ ಇದೆಯೇ? ಹತ್ತೇ ನಿಮಿಷದಲ್ಲಿ ಉಚಿತವಾಗಿ PAN ಕಾರ್ಡ್ ಪಡೆಯಿರಿ

Aadhar PAN linkಆಧಾರ್ ಕಾರ್ಡ್ ಹಾಗೂ PAN (ವೈಯಕ್ತಿಕ ಗುರುತು ಸಂಖ್ಯೆ) ಕಾರ್ಡ್‌ಗಳನ್ನು ಲಿಂಕ್ ಮಾಡಲು ಮಾ.31ರ ಗಡುವು ಇದೆ ಮತ್ತು ಈಗಿನ ಕೊರೊನಾ ವೈರಸ್ ಗದ್ದಲದಲ್ಲಿ ಅದರ ದಿನಾಂಕ ವಿಸ್ತರಣೆಯಾಗಲೂಬಹುದು. ಇದುವರೆಗೆ ಪ್ಯಾನ್ ಕಾರ್ಡ್ ಮಾಡಿಸದೇ ಇದ್ದವರಿಗೆ, ಮನೆಯಲ್ಲಿರುವ ಪ್ರಾಪ್ತ ವಯಸ್ಕ (18 ವರ್ಷ ಮೇಲ್ಪಟ್ಟ) ಮಕ್ಕಳಿಗೂ, ಯಾವುದೇ ಖರ್ಚಿಲ್ಲದೆ ಪ್ಯಾನ್ ಕಾರ್ಡ್ ಮಾಡಿಸುವ ವಿಧಾನವೊಂದನ್ನು ಭಾರತ ಸರ್ಕಾರ ಒದಗಿಸಿದೆ. ಇದಕ್ಕೆ ಬೇಕಾಗಿರುವುದು ಪ್ಯಾನ್ ಕಾರ್ಡ್ ಬೇಕಾಗಿರುವವರ ಹೆಸರಿನ ಆಧಾರ್ ಕಾರ್ಡ್, ಇಂಟರ್ನೆಟ್ ಸಂಪರ್ಕ ಹಾಗೂ ಆಧಾರ್ ಕಾರ್ಡ್ ಜತೆ ಲಿಂಕ್ ಆಗಿರುವ ಮೊಬೈಲ್ ಫೋನ್ ಮಾತ್ರ.

ಇದುವರೆಗೆ ಪ್ಯಾನ್ ಕಾರ್ಡ್ ಮಾಡಿಸಬೇಕೆಂದಿದ್ದರೆ ಆದಾಯ ತೆರಿಗೆ ಇಲಾಖೆಯ ಜಾಲತಾಣಕ್ಕೆ ಹೋಗಿ, ಸುದೀರ್ಘವಾದ ಮತ್ತು ಒಂದಿಷ್ಟು ತ್ರಾಸದಾಯಕವಾದ ಫಾರ್ಮ್‌ಗಳನ್ನು ತುಂಬುವ ಮತ್ತು ವಾರಗಟ್ಟಲೆ ಕಾಯಬೇಕಾಗಿತ್ತು. ಈಗ ಕೇವಲ ಹತ್ತು ನಿಮಿಷಗಳೊಳಗೆ, ಆಧಾರ್ ಆಧಾರಿತವಾದ ಇ-ಕೆವೈಸಿ ವ್ಯವಸ್ಥೆಯ ಮೂಲಕ ಕ್ಷಿಪ್ರವಾಗಿ ಪ್ಯಾನ್ ಕಾರ್ಡ್ ಲಭ್ಯವಾಗುತ್ತದೆ. ಇದಕ್ಕಾಗಿ ಏನು ಮಾಡಬೇಕು? ಇಲ್ಲಿದೆ ಸರಳವಾದ ಪ್ರಕ್ರಿಯೆಯ ಮಾಹಿತಿ.

ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ತಾಣವಾಗಿರುವ incometaxindiaefiling.gov.in ಗೆ ಹೋಗಿ. ಎಡಭಾಗದಲ್ಲಿ ‘ಇನ್‌ಸ್ಟೆಂಟ್ PAN ಥ್ರೂ ಆಧಾರ್’ ಎಂಬ ಲಿಂಕ್ ಗೋಚರಿಸುತ್ತದೆ. ಅಲ್ಲಿ ಹೊಸ ಪ್ಯಾನ್ ಕಾರ್ಡ್ ಪಡೆಯಲು ಇರುವ ಲಿಂಕ್ ಕ್ಲಿಕ್ ಮಾಡಿ. ಮುಂದೆ ತೆರೆದುಕೊಳ್ಳುವ ಫಾರ್ಮ್‌ನಲ್ಲಿ ಯಾರ ಹೆಸರಿಗೆ ಪ್ಯಾನ್ ಕಾರ್ಡ್ ಬೇಕೋ, ಅವರ ಆಧಾರ್ ಸಂಖ್ಯೆ ನಮೂದಿಸಿ; ಕ್ಯಾಪ್ಚಾ ಎಂಬ, ಅಕ್ಷರಗಳ ಗುಚ್ಛವನ್ನು ಸಂಬಂಧಿಸಿದ ಬಾಕ್ಸ್‌ನಲ್ಲಿ ಭರ್ತಿ ಮಾಡಿ. ನಂತರ ಅಲ್ಲಿನ ಮಾಹಿತಿಯನ್ನು ಓದಿಕೊಂಡು, ‘ಜನರೇಟ್ ಆಧಾರ್ ಒಟಿಪಿ’ ಎಂಬುದನ್ನು ಕ್ಲಿಕ್ ಮಾಡಿ. ಸಂಪರ್ಕಗೊಂಡಿರುವ ಮೊಬೈಲ್ ಫೋನ್‌ಗೆ ಬಂದಿರುವ ಒಟಿಪಿ ನಮೂದಿಸಿ. ಆಧಾರ್ ವಿವರಗಳನ್ನು ದೃಢೀಕರಿಸಿ.

Aadhar PAN

ಆಧಾರ್ ಕಾರ್ಡ್‌ನ ಇ-ಕೆವೈಸಿ ವಿವರಗಳನ್ನು ಈ ಸಿಸ್ಟಂ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ ಜತೆ ವಿನಿಮಯ ಮಾಡಿಕೊಂಡು, ದೃಢೀಕರಿಸಿಕೊಳ್ಳುತ್ತದೆ. ನಂತರ ಹತ್ತು ನಿಮಿಷದೊಳಗೆ ನಿಮ್ಮ ಇ-ಪ್ಯಾನ್ ಸಿದ್ಧವಾಗಿರುತ್ತದೆ. ಸ್ವಲ್ಪ ಹೊತ್ತಿನ ಬಳಿಕ ‘ಚೆಕ್ ಸ್ಟೇಟಸ್/ಡೌನ್‌ಲೋಡ್ ಪ್ಯಾನ್’ ಎಂಬ ಬಟನ್ ಕ್ಲಿಕ್ ಮಾಡಿ, ಆಧಾರ್ ಸಂಖ್ಯೆ ದಾಖಲಿಸಿದರೆ, ಇ-ಪ್ಯಾನ್ ಕಾರ್ಡ್ ದೊರೆಯುತ್ತದೆ. ಇದು ಪಿಡಿಎಫ್ ರೂಪದಲ್ಲಿರುತ್ತದೆ. ಅದನ್ನು ಡೌನ್‌ಲೋಡ್ ಮಾಡಿಟ್ಟುಕೊಂಡು, ಡಿಜಿಲಾಕರ್ ಖಾತೆಗೆ (ಆ್ಯಪ್ ಮೂಲಕ) ಉಳಿಸಿಕೊಳ್ಳಿ. ಇಮೇಲ್ ಐಡಿ ನಮೂದಿಸಿದ್ದರೆ, ಇಮೇಲ್ ಮೂಲಕವೂ ಪ್ಯಾನ್ ಕಾರ್ಡ್‌ನ ಪಿಡಿಎಫ್ ಪ್ರತಿಯನ್ನು ಪಡೆಯಬಹುದಾಗಿದೆ.

ನೆನಪಿಡಬೇಕಾದ ವಿಚಾರವೆಂದರೆ, ಮೊದಲೇ ಪ್ಯಾನ್ ಕಾರ್ಡ್ ಇದ್ದವರಿಗೆ, ಅಪ್ರಾಪ್ತ ವಯಸ್ಕರಿಗೆ ಈ ಅವಕಾಶ ಇಲ್ಲ. ಇದು ಪ್ಯಾನ್ ಕಾರ್ಡ್‌ನ ಎಲೆಕ್ಟ್ರಾನಿಕ್ (ಪಿಡಿಎಫ್) ರೂಪ. ಯಾವುದೇ ವ್ಯವಹಾರಕ್ಕೆ ಇದು ಸಾಕಾಗುತ್ತದೆ. ಅದನ್ನೇ ಪ್ರಿಂಟ್ ತೆಗೆಸಿ, ಲ್ಯಾಮಿನೇಟ್ ಮಾಡಿಟ್ಟುಕೊಳ್ಳಬಹುದು. ಇದಕ್ಕೆ 50 ರೂಪಾಯಿಗೂ ಕಡಿಮೆ ಹಣ ಸಾಕಾಗುತ್ತದೆ.

ಒಟ್ಟಾರೆಯಾಗಿ ಪ್ಯಾನ್ ಕಾರ್ಡ್ ಪಡೆಯುವುದೀಗ ಕ್ಷಿಪ್ರ, ಉಚಿತ, ಸರಳ, ಕಾಗದರಹಿತ ಪ್ರಕ್ರಿಯೆ.

ಅವಿನಾಶ್ ಬಿ. | ಪ್ರಜಾವಾಣಿಯಲ್ಲಿ ಪ್ರಕಟ on 27 ಮಾರ್ಚ್ 2020

Leave a Reply

Your email address will not be published. Required fields are marked *