ನಗೆಪಾಟಲಿಗೀಡಾಗುತ್ತಿದೆ ಬಿಜೆಪಿ, ಸಿಎಂ ಪ್ರತಿಷ್ಠೆ

0
255

ದಕ್ಷಿಣ ಭಾರತದ ಮೊತ್ತ ಮೊದಲ ಬಿಜೆಪಿ ಸರಕಾರ ಎಂಬ ಪ್ರತಿಷ್ಠೆಯ ಹಣೆಪಟ್ಟಿಯೊಡನೆ ಹುಟ್ಟಿಕೊಂಡ ಬಿಜೆಪಿ ಸರಕಾರ, ಒಂದು ವರ್ಷ ಕಳೆಯತೊಡಗಿರುವಂತೆಯೇ ಆಂತರಿಕ ವೈರುಧ್ಯಗಳಿಂದಾಗಿ, ತಾಳ-ಮೇಳ ತಪ್ಪಿದ ಸಂಗೀತ ಕಛೇರಿಯಂತಾಗಿಬಿಟ್ಟಿದೆ. ಇಲ್ಲಿ ಎಲ್ಲರೂ ನಾಯಕರೇ. ಎಲ್ಲರ ಧ್ವನಿಗೂ ಬೆಲೆ ಇದೆ ಎಂಬಂತಹ ಪರಿಸ್ಥಿತಿ ಇರುವ ಮೂಲಕ, ಬಿಜೆಪಿಯ ಮತ್ತು ಸ್ವತಃ ಶಿಸ್ತಿನ, ನೇರ-ನಡೆನುಡಿಯ ನಾಯಕ ಎಂಬ ಹೆಗ್ಗಳಿಕೆಯಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪ್ರತಿಷ್ಠೆ ಮಣ್ಣುಗೂಡುತ್ತಿದ್ದರೂ ಸುಮ್ಮನಿರುವುದು ವಿಪರ್ಯಾಸ.

ಹೊಸ ಉದಾಹರಣೆ ರೇಣುಕಾ ಮಹಾತ್ಮೆ. ಕರ್ನಾಟಕದಲ್ಲಿ ಬಿಜೆಪಿ ಸರಕಾರ ಹುಟ್ಟಿದಾರಭ್ಯದಿಂದ ಒಂದಲ್ಲೊಂದು ತಗಾದೆಗಳಿಗೆ ಹೆಸರಾಗಿದ್ದ ಹೊನ್ನಾಳಿಯ ಶಾಸಕ ಎಂ.ಪಿ. ರೇಣುಕಾಚಾರ್ಯ ಸಚಿವಗಿರಿ ಪಡೆಯಲೇಬೇಕೆಂಬ ಒಂದು ವರ್ಷದ ಕರಾಮತ್ತುಗಳು, ರೆಸಾರ್ಟ್ ರಾಜಕೀಯಗಳೆಲ್ಲವೂ ಈಗ ಫಲ ಕೊಟ್ಟಿದ್ದು, ಕೊನೆಗೂ ರೇಣುಕಾಚಾರ್ಯ ಕರ್ನಾಟಕ ಘನ ಸರಕಾರದ ಮಂತ್ರಿಯಾಗಿಬಿಟ್ಟಿದ್ದಾರೆ. ಅದರ ಹಿಂದೆಯೇ, ಅದನ್ನು ವಿರೋಧಿಸುವ ಪಕ್ಷದ ನಿಷ್ಠಾವಂತ ಶಾಸಕರ ಕೊರಳ ಧ್ವನಿ ಮುಗಿಲು ಮುಟ್ಟುತ್ತಿವೆ. ವರ್ಷಗಳಿಂದ ಕಾಲೆಳೆಯುತ್ತಿದ್ದ ರೇಣುಕಾಚಾರ್ಯಗೆ ಮಂತ್ರಿಪಟ್ಟ ಕೊಟ್ಟುಬಿಟ್ಟರೆ ತಮ್ಮ ಸಂಕಷ್ಟಗಳೆಲ್ಲ ದೂರವಾಗಬಹುದು, ರಾಜ್ಯಭಾರದತ್ತ ಗಮನ ಹರಿಸಬಹುದೆಂಬ ಸಿಎಂ ನಂಬಿಕೆ ಹುಸಿಯಾಗಿದೆ.

ಸಚಿವ ಪಟ್ಟ ಸಿಗಬೇಕೇ? ರೆಸಾರ್ಟ್ ರಾಜಕೀಯ ಮಾಡಿ, ಒಂದಷ್ಟು ಪುಡಿ ಶಾಸಕರನ್ನು ಸೇರಿಸಿಕೊಂಡು ಬಂಡಾಯದ ಬಾವುಟ ಹಾರಿಸಿ. ಸರಕಾರದಿಂದ ಯಾರನ್ನಾದರೂ ಮಂತ್ರಿಗಿರಿಯಿಂದ ಉರುಳಿಸಬೇಕೇ? ಅದನ್ನೇ ಮಾಡಿ! ಬಿಜೆಪಿಯಲ್ಲಿ ಏನೂ ಆಗಬಹುದು, ಕೇಳುವವರೇ ಇಲ್ಲ ಎಂಬಂತಾಗಿದೆಯೇಕೆ ಬಿಜೆಪಿ ಪರಿಸ್ಥಿತಿ?

ಹೌದಲ್ಲ?… ಬಿಜೆಪಿಯ ಅಧಿಕಾರದಾಹಿ ಮುಖಂಡರು ಯಾರ ಮಾತನ್ನು ಕೇಳುತ್ತಾರೆ? ಮುಖ್ಯಮಂತ್ರಿ ಯಡಿಯೂರಪ್ಪ ಅವರಂತೂ, ಅಕ್ಟೋಬರ್ ಅಂತ್ಯದಿಂದಾರಭ್ಯ ಎರಡು ವಾರಗಳ ಕಾಲ ಕಾಡಿದ ಗಣಿ ರೆಡ್ಡಿಗಳ ಬಂಡಾಯದಿಂದಾಗಿ ತಮ್ಮ ಉಡುಗಿಹೋದ ಅಡಗಿಹೋದ ಅಧಿಕಾರಯುತ ಧ್ವನಿಯನ್ನು ಮತ್ತು ಪರಮಾಧಿಕಾರವನ್ನು ಇನ್ನೂ ಹುಡುಕುತ್ತಲೇ ಇದ್ದಾರೆ. ರಾಜ್ಯ ಬಿಜೆಪಿ ಅಧ್ಯಕ್ಷ ಸದಾನಂದ ಗೌಡರ ಮಾತಿಗೂ ಬಿಜೆಪಿ ಮುಖಂಡರು ಬೆಲೆ ಕೊಡುತ್ತಿಲ್ಲ. ಶಿಸ್ತು ಕ್ರಮ ಕೈಗೊಳ್ಳಲೂ ಹಿಂದೆ-ಮುಂದೆ ನೋಡಬೇಕಾದ ಪರಿಸ್ಥಿತಿ. ಅತ್ತ, ತಮ್ಮ ಸಂಪುಟದಲ್ಲಿ ಯಾರು ಇರಬೇಕು, ಯಾವ ಖಾತೆ ಹೊಂದಿರಬೇಕು ಎಂಬುದನ್ನು ನಿರ್ಣಯಿಸುವ ಅಧಿಕಾರವೂ ಮುಖ್ಯಮಂತ್ರಿಯ ಕೈಯಲ್ಲಿ ಇಲ್ಲದೇ ಹೋಗಿರುವುದು ಹೈಟ್ ಆಫ್ ಪಾಲಿಟಿಕ್ಸ್!

ಕೇವಲ ಹೋಲಿಕೆಗಾಗಿ ಒಂದು ಮಾತು. ಕಳೆದೊಂದು ವರ್ಷದಿಂದಲೂ ಆಗಾಗ್ಗೆ ಭಿನ್ನಮತದ ಧ್ವನಿ ಹೊರಡಿಸುತ್ತಾ, ಒಂದೆರಡು ಕ್ರಿಮಿನಲ್ ಕೇಸು ಎದುರಿಸುತ್ತಿರುವ, ಪಕ್ಷದಿಂದಲೇ ಶೋಕಾಸ್ ನೋಟೀಸ್ ಪಡೆದ, ವಿಧಾನಸಭೆ ಮೊಗಸಾಲೆಯಲ್ಲೇ ಸಹೋದ್ಯೋಗಿ ಶಾಸಕ ಎಸ್.ಆರ್.ವಿಶ್ವನಾಥ್ ವಿರುದ್ಧ ತೋಳೇರಿಸಿದ, ಮುಖ್ಯಮಂತ್ರಿಯನ್ನೂ ನಿಂದಿಸಿದ, ಸಚಿವರ ವಿರುದ್ಧವೇ ಹೇಳಿಕೆ ನೀಡಿ ಸರಕಾರದ ಮುಜುಗರಕ್ಕೆ ಕಾರಣವಾಗುವ, ಶಿಸ್ತು ಉಲ್ಲಂಘಿಸಿ ಬಹಿರಂಗವಾಗಿಯೇ ಹೇಳಿಕೆ ನೀಡುತ್ತಿರುವ, ನರ್ಸ್ ಜಯಲಕ್ಷ್ಮಿ ವಿರುದ್ಧ ದೌರ್ಜನ್ಯ ಕೇಸು ಎದುರಿಸುತ್ತಿರುವ ಹೊನ್ನಾಳಿ ಶಾಸಕರಿಗೆ ಮಂತ್ರಿಗಿರಿ ಕೊಡುತ್ತಾರೆ; ಯಾವುದೇ ಭ್ರಷ್ಟಾಚಾರವಾಗಲೀ, ಕ್ರಿಮಿನಲ್ ಕೇಸುಗಳಾಗಲೀ ಇಲ್ಲದಿರುವ ಮತ್ತು ಉತ್ತಮವಾಗಿಯೇ ಕಾರ್ಯ ನಿರ್ವಹಿಸುತ್ತಿದ್ದರೆಂಬ ಶ್ಲಾಘನೆ ಪಡೆದಿದ್ದ ಶೋಭಾ ಕರಂದ್ಲಾಜೆಯವರಂಥವರನ್ನು ಸಂಪುಟದಿಂದ ಕಿತ್ತು ಹಾಕುತ್ತಾರೆ ಎಂದಾದರೆ, ಎಲ್ಲಿಗೆ ಬಂತು ಬಿಜೆಪಿ ಪರಿಸ್ಥಿತಿ? ಶೋಭಾ ಅವರನ್ನು ಸಂಪುಟದಿಂದ ಕಿತ್ತು ಹಾಕಿದ್ದೇಕೆ ಎಂಬ ಪ್ರಶ್ನೆಗೆ ಇದುವರೆಗೂ ಉತ್ತರವೂ ದೊರೆತಿಲ್ಲದಿರುವುದು 2009ರ ಬಿಡಿಸಲಾಗದ ರಹಸ್ಯಗಳಲ್ಲೊಂದು!

ಹೊನ್ನಾಳಿ ಶಾಸಕರ ಬಗೆಗೆ ಹೇಳಲೇಬೇಕಾದ ಕೆಲವು ಸಾಲುಗಳು:
ದಾವಣಗೆರೆ ಜಿಲ್ಲೆಯ ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ.ರೇಣುಕಾಚಾರ್ಯ, ಮೊದಲ ಬಾರಿ ವಿಧಾನಸಭೆಗೆ ಆಯ್ಕೆಯಾದವರು. ಅವರ ಮೇಲೆ ಸುಲಿಗೆ, ಶಾಂತಿ ಭಂಗ, ಮಹಿಳೆಯನ್ನು ಅವಮಾನಿಸಿದ ಮತ್ತು ಲೈಂಗಿಕ ದೌರ್ಜನ್ಯ ಎಸಗಿದ ಕೇಸುಗಳಿವೆ. ಶಾಸಕರಿಂದಾಗಿ ತನಗೆ ಪ್ರಾಣ ಬೆದರಿಕೆ ಇದೆ ಎಂದೂ ಈ ಸಂಬಂಧ 2007ರಲ್ಲಿ ನರ್ಸ್ ಮತ್ತು ಶಿಕ್ಷಣ ಸಂಸ್ಥೆಯ ನಿರ್ದೇಶಕಿಯೂ ಆಗಿರುವ ಜಯಲಕ್ಷ್ಮಿ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣದಲ್ಲಿ, ಹಲವಾರು ಬಾರಿ ನೋಟಿಸ್ ನೀಡಿದರೂ ವಿಚಾರಣೆಗೆ ಹಾಜರಾಗದ ರೇಣುಕಾಚಾರ್ಯರಿಗೆ ಜಾಮೀನುರಹಿತ ಬಂಧನದ ವಾರಂಟ್ ಜಾರಿಯಾಗಿತ್ತು. ಕೊನೆಗೆ ಕೋರ್ಟಿಗೆ ಶರಣಾಗಿ ಬಂಧನ ತಪ್ಪಿಸಿಕೊಂಡಿದ್ದರು. ನರ್ಸ್ ಜಯಲಕ್ಷ್ಮಿ ಅವರು ವಿವಿಧ ಭಂಗಿಗಳಲ್ಲಿ ಶಾಸಕರು ತನ್ನೊಂದಿಗಿದ್ದಂತಿದ್ದ ಚಿತ್ರಗಳನ್ನು ಬಿಡುಗಡೆ ಮಾಡಿ ಕೋಲಾಹಲ ಎಬ್ಬಿಸಿದ್ದರು. ಎಲ್ಲ ಆರೋಪಗಳನ್ನು ನಿರಾಕರಿಸಿದ್ದ ರೇಣುಕಾಚಾರ್ಯ, ಇದೆಲ್ಲವೂ ಕಾಂಗ್ರೆಸ್ ಕುತಂತ್ರ ಎಂದಿದ್ದರು. ಕೇಸು ಇನ್ನೂ ವಿಚಾರಣೆ ನಡೆಯುತ್ತಿದೆ.

ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ನಡೆದ ‘ಗ್ರೇಟ್ ರೆಡ್ಡಿ ಬಂಡಾಯ’ದಲ್ಲೇ ಸಚಿವ ಸ್ಥಾನ ದೊರೆಯುವ ಸಾಧ್ಯತೆಯೂ ಕೈತಪ್ಪಿದ ಬಳಿಕ, ರೇಣುಕಾಚಾರ್ಯರು ಮತ್ತೆ ಏಳೆಂಟು ಶಾಸಕರನ್ನು ಕರೆದುಕೊಂಡು ರೆಸಾರ್ಟ್ ಸಭೆ ಏರ್ಪಡಿಸಿ, ಬಂಡಾಯದ ಬೆದರಿಕೆಯ ಸೂಚನೆಗಳನ್ನು ಹೊರಗೆಡಹಿದಾಗ, ಕೊನೆಗೂ ಅವರಿಗೆ ಈಗ ಸಚಿವ ಪಟ್ಟ ಪ್ರಾಪ್ತಿಯಾಗಿದೆ.

ಉರಿವ ಬೆಂಕಿಗೆ ಜಾತಿ ಲೆಕ್ಕಾಚಾರದ ತುಪ್ಪ: ಲಿಂಗಾಯತ ವರ್ಸಸ್ ಒಕ್ಕಲಿಗ ಸಮುದಾಯದ ಪ್ರಾತಿನಿಧ್ಯ ತಿಕ್ಕಾಟ ಇಲ್ಲೂ ಎದ್ದು ಕಾಣುತ್ತಿದೆ. ಇತ್ತೀಚೆಗೆ ಚುನಾವಣೆಯಲ್ಲಿ ಸೋತು ಸಚಿವ ಪಟ್ಟ ಕಳೆದುಕೊಂಡ ವಿ.ಸೋಮಣ್ಣ ಅವರು ಲಿಂಗಾಯತ ಸಮುದಾಯದವರು, ರೆಡ್ಡಿ-ಶೆಟ್ಟರ್-ರೇಣುಕಾಚಾರ್ಯ ಬಂಡಾಯಕ್ಕೆ ಮಂತ್ರಿ ಪಟ್ಟ ಕಳೆದುಕೊಂಡ ಶೋಭಾ ಕರಂದ್ಲಾಜೆ ಒಕ್ಕಲಿಗ ಸಮುದಾಯದವರು. ಈಗ ಲಿಂಗಾಯತ ಸಚಿವರ ಕೋಟಾವು ಕಳೆದ ತಿಂಗಳ ಬಂಡಾಯದ ಫಲವಾಗಿ, ಜಗದೀಶ್ ಶೆಟ್ಟರ್ ಪಾಲಾಗಿದ್ದರೆ, ಒಕ್ಕಲಿಗ ಸಚಿವರ ಸ್ಥಾನ ತುಂಬಲು ಭಾರಿ ಪೈಪೋಟಿ ಇತ್ತು. ಆದರೆ ಈಗ ರೇಣುಕಾಚಾರ್ಯ ಅವರು ಲಿಂಗಾಯತರಾದುದರಿಂದ ಒಕ್ಕಲಿಗರ ಬಣವು ಅವರ ವಿರುದ್ಧ ಸಹಿಸಂಗ್ರಹ ಮೂಲಕ ಪ್ರತಿಭಟನೆ ಕೂಗೆಬ್ಬಿಸಿದೆ. ಮತ್ತು ಸಿಎಂ ಒಕ್ಕಲಿಗರ ಬಣವನ್ನು ನಿರ್ಲಕ್ಷಿಸುತ್ತಿದೆ ಎಂಬ ಆರೋಪಕ್ಕೂ ಕಾರಣವಾಗಿದೆ.

ಈ ರೀತಿಯಾಗಿ, ಬಂಡಾಯದ ಧ್ವನಿ ಎತ್ತುವುದು ತಮ್ಮ ಜನ್ಮಸಿದ್ಧ ಹಕ್ಕು ಎಂಬಂತೆ ಬಿಜೆಪಿ ಮಂದಿ ವರ್ತಿಸುತ್ತಿರುವುದು ತೀರಾ ನಾಚಿಕೆಗೇಡು. ಏಳೆಂಟು ಶಾಸಕರನ್ನು ಹಿಡಿದುಕೊಂಡು ಒಬ್ಬ ಶಾಸಕ, ಮುಖ್ಯಮಂತ್ರಿಯನ್ನೇ ಸಂಕಷ್ಟದಲ್ಲಿ ಸಿಲುಕಿಸಿ, ಪಕ್ಷಕ್ಕೂ ಅವಮರ್ಯಾದೆ ತರುವ ಚಟುವಟಿಕೆಗಳಲ್ಲಿ ತೊಡಗುತ್ತಾ, ಮಂತ್ರಿಗಿರಿಗಾಗಿ ಲಾಬಿ ನಡೆಸಬಹುದಾದರೆ, ಬಿಜೆಪಿಯಲ್ಲಿ ಹೈಕಮಾಂಡ್ ಇದೆಯೇ ಅಥವಾ ಕನಿಷ್ಠ ಪಕ್ಷ ‘ಕಮಾಂಡ್’ ಆದರೂ ಇದೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಅದೇ ಕಾಂಗ್ರೆಸ್ಸನ್ನು ನೋಡಿ, ಅಧಿನಾಯಕಿ ಸೋನಿಯಾ ಗಾಂಧಿ ಇಡೀ ದೇಶವನ್ನು, ಯುಪಿಎ ಸರಕಾರವನ್ನು ನಿಯಂತ್ರಿಸುತ್ತಿದ್ದಾರೆ ಎಂಬ ಟೀಕೆಗಳೇನೇ ಇದ್ದರೂ, ಪಕ್ಷದಲ್ಲಿ ಅವರ ಮಾತೇ ಅಂತಿಮ. ಆಂಧ್ರದಲ್ಲಿ ರಾಜಶೇಖರ ರೆಡ್ಡಿ ಪುತ್ರ ಜಗನ್‌ಮೋಹನ ರೆಡ್ಡಿ ಗುಟುರು ಹಾಕಿದರೆ, ಸೋನಿಯಾ ಒಮ್ಮೆ ದೃಷ್ಟಿ ಹರಿಸಿದರೆ ಸಾಕು, ಆ ಭಿನ್ನಮತದ ಧ್ವನಿ ಉಡುಗಿ ಹೋಗುತ್ತದೆ.

ಅಂಥಹಾ ಛಾತಿಯ ನಾಯಕತ್ವದ ಕೊರತೆ ಬಿಜೆಪಿಯಲ್ಲಿ ಎದ್ದುಕಾಣುತ್ತಿರುವುದು ಸುಳ್ಳೇನಲ್ಲ. ಅದಕ್ಕೇ ಇರಬೇಕು, ಬಿಜೆಪಿಯನ್ನು, ವಿಶೇಷವಾಗಿ ಯಡಿಯೂರಪ್ಪ ಅವರನ್ನು ನಂಬಿ ಕಳೆದ ಚುನಾವಣೆಗಳಲ್ಲಿ ಓಟು ಹಾಕಿದ್ದ ಬಿಜೆಪಿ ಮತದಾರರು ಕೂಡ ಇನ್ನು ಮುಂದೆ ಇಂತಹಾ ಅಶಿಸ್ತುಳ್ಳ ಪಕ್ಷದ ಸರಕಾರವೇ ಬೇಡ ಎಂಬ ಕಾಮೆಂಟುಗಳನ್ನು ಹಲವಾರು ಸುದ್ದಿಗಳಲ್ಲಿ ಬರೆದು ತಮ್ಮ ಆಕ್ರೋಶವನ್ನು ಹೊರಗೆಡಹುತ್ತಿರುವುದು. ವಿಧಾನ ಪರಿಷತ್ ಚುನಾವಣೆಗಳು ಜನಾದೇಶ ಅಲ್ಲವಾಗಿರುವುದರಿಂದ ಬಿಜೆಪಿ ಪಾರಾಗಿದೆ ಎಂಬುದು ಸುಸ್ಪಷ್ಟ.

ಒಟ್ಟಿನಲ್ಲಿ, ಆರೆಸ್ಸೆಸ್ ಶಿಸ್ತಿನ, ಸಿದ್ಧಾಂತದ ಹಿನ್ನೆಲೆಯಲ್ಲಿ ಅಧಿಕಾರವೇರಿದ ಪಕ್ಷದ ವರ್ಚಸ್ಸಿಗೆ, ವಿಶೇಷವಾಗಿ ಮುಖ್ಯಮಂತ್ರಿ ವರ್ಚಸ್ಸಿಗೆ ಈ ಬೆಳವಣಿಗೆಗಳು ಹಾನಿ ಮಾಡಿದ್ದಂತೂ ಸತ್ಯ. ರೆಡ್ಡಿ ಬಂಡಾಯ ಪ್ರಕರಣದಲ್ಲಿ ಪಕ್ಷದ ಕೇಂದ್ರೀಯ ನಾಯಕರೂ ಸಿಎಂಗೆ ಪೂರ್ಣ ಬೆಂಬಲ ನೀಡದೇ ಇದ್ದುದುದರಿಂದ ಹೀಗಾಯಿತೇ?

ಭಿನ್ನಮತ, ಬಂಡಾಯದ ಬಾವುಟ ಹಾರಿಸಿದವರನ್ನು ಏನೂ ಮಾಡುವ ಸ್ಥಿತಿಯಲ್ಲಿಲ್ಲ ಬಿಜೆಪಿ. ಹಲವಾರು ವರ್ಷಗಳಿಂದ ನಿಷ್ಠಾವಂತರಾಗಿ ಪಕ್ಷದಲ್ಲೇ ಇದ್ದ, ಪಕ್ಷಕ್ಕಾಗಿ ಸೊಲ್ಲೆತ್ತದೆ ದುಡಿದವರ ಬದಲು, ಇತ್ತೀಚೆಗಷ್ಟೇ ಶಾಸಕತ್ವಕ್ಕೇರಿದ ಗಟ್ಟಿ ಧ್ವನಿಯವರಿಗೆ, ‘ಹೊರಗಿನಿಂದ’ ಬಂದವರಿಗೆ ಮಂತ್ರಿಗಿರಿ ದೊರೆಯುತ್ತದೆ. ‘ಆಪರೇಶನ್ ಕಮಲ’ದಲ್ಲಿಯೂ ಸರಕಾರದ ಉಳಿವಿಗಾಗಿ ತಮ್ಮೆಲ್ಲಾ ಆಕಾಂಕ್ಷೆಗಳನ್ನು, ಅರ್ಹತೆಯನ್ನು ಬದಿಗೊತ್ತಿ, ಸರಕಾರದ ಸುಭದ್ರತೆಗಾಗಿ ಎಲ್ಲವನ್ನೂ ಗಂಟುಮೂಟೆ ಕಟ್ಟಿಟ್ಟ ಹಿರಿಯ, ನಿಷ್ಠಾವಂತ ಮತ್ತು ಸಚ್ಚಾರಿತ್ರ್ಯವಂತ ಶಾಸಕರು ಮತ್ತು ಅವರ ಬೆಂಬಲಿಗರು ‘ಪಕ್ಷಕ್ಕೆ ಇದೇನು ಗತಿ ಬಂತು’ ಎಂದು ಮಮ್ಮಲ ಮರುಗತೊಡಗಿದ್ದಾರೆ. ಸ್ಥಿರ ನಾಯಕತ್ವ, ಸುಭದ್ರ ಸರಕಾರ ದೊರೆಯುತ್ತದೆ ಎಂಬ ಮತದಾರರ ವಿಶ್ವಾಸ ಕುಸಿಯತೊಡಗಿದೆ. ಸರಕಾರ ಮತ್ತು ಪಕ್ಷದೊಳಗಿನ ಗೊಂದಲಗಳು, ತಳಮಳಗಳು, ವಿಪ್ಲವಗಳು ಮುಗಿಯುವ ಲಕ್ಷಣವೇ ಕಾಣಿಸುತ್ತಿಲ್ಲ. ಬಿಜೆಪಿಯ ‘ಶಿಸ್ತಿನ ಪಕ್ಷ’ ಎಂಬ ಹೆಸರಿಗೆ ಕಪ್ಪುಮಸಿಯ ಅಡ್ಡಗೆರೆ ಬೀಳುತ್ತಿದೆ. ಸುಷ್ಮಾ ಸ್ವರಾಜ್ ನೇತೃತ್ವದಲ್ಲಿ ಕೇಂದ್ರೀಯ ನಾಯಕರಿಂದ ಹಲ್ಲು ಕಿತ್ತ ಹಾವಿನಂತಾಗಿರುವ ಯಡಿಯೂರಪ್ಪ ಕೇಳಿಸಿಕೊಳ್ಳುತ್ತಿದ್ದಾರೆಯೇ?
[ವೆಬ್‌ದುನಿಯಾಕ್ಕಾಗಿ ಡಿ.23ರಂದು ಬರೆದ ಲೇಖನ]

LEAVE A REPLY

Please enter your comment!
Please enter your name here