ಕನ್ನಡ ಅಸ್ಮಿತೆ: ಅಚ್ಚಗನ್ನಡ ಸಾಹಿತ್ಯದ ಮೌನ ಸೇವಕರು: ಯಕ್ಷಗಾನ ಪ್ರಸಂಗ ಡಿಜಿಟಲೀಕರಣ

ಬೆಂಗಳೂರು: ಕನ್ನಡ ಪದಗಳನ್ನೇ ಬಳಸುತ್ತಾ, ಉಳಿಸುತ್ತಾ, ಬೆಳೆಸುತ್ತಿರುವ ರಾಜ್ಯದ ರಮ್ಯಾದ್ಭುತ ಮನರಂಜನಾ ಕಲೆ ಯಕ್ಷಗಾನ. ಇಲ್ಲಿ ಪೌರಾಣಿಕ, ಸಾಮಾಜಿಕ, ಕಾಲ್ಪನಿಕ ಕಥಾನಕಗಳು ಹಾಡುಗಳ ರೂಪದಲ್ಲಿ,ಸಾಹಿತ್ಯ ಲೋಕ ಪ್ರವೇಶಿಸಿ, ಸದ್ದಿಲ್ಲದೇ ಕನ್ನಡ ಅಸ್ಮಿತೆಯನ್ನು ಕಾಪಿಡುತ್ತಾ ಬಂದಿವೆ. ನಿರ್ದಿಷ್ಟ ಕಥಾನಕವೊಂದು ‘ಪ್ರಸಂಗ’ ಪುಸ್ತಕವಾಗಿ ಮುದ್ರಿತವಾಗಿ ಬೆಳಕಿಗೆ ಬಂದವು ಸಾಕಷ್ಟಿವೆ. ಆದರೆ, ಸರ್ವಾಂಗ ಸುಂದರ ಕಲೆಯಾದ ಯಕ್ಷಗಾನವಿಂದು ಉತ್ತುಂಗಕ್ಕೇರುತ್ತಿದ್ದರೆ, ಶತಮಾನಗಳಷ್ಟು ಇತಿಹಾಸವಿರುವ ಯಕ್ಷಗಾನದಲ್ಲಿ ಬಾಯಿಂದ ಬಾಯಿಗೆ ವರ್ಗಾವಣೆಯಾದ, ಹಸ್ತ ಪ್ರತಿಗಳಲ್ಲಷ್ಟೇ ಕಾಣಸಿಕ್ಕ ಅದೆಷ್ಟೋ ಪ್ರಸಂಗಗಳನ್ನು ಮುಂದಿನ ಪೀಳಿಗೆಗೆ ಕಾಯ್ದಿಡಬೇಕಾದ ಜವಾಬ್ದಾರಿಯೂ ಇದೆ.

ಕನ್ನಡದ ಸಾಹಿತ್ಯ ಲೋಕದ ಮುಖ್ಯವಾಹಿನಿಯಿಂದ ಅವಜ್ಞೆಗೊಳಪಟ್ಟರೂ, ತನ್ನ ಪಾಡಿಗೆ ಕನ್ನಡ ಸಾಹಿತ್ಯ ಕಣಜವನ್ನು ಶ್ರೀಮಂತವಾಗಿಸುತ್ತಿರುವ ಈ ಯಕ್ಷಗಾನ ಸಾಹಿತ್ಯವನ್ನು ಕಾಯುವ ಕೆಲಸ ಆಗುತ್ತಿದೆ. ಇಂಥ ಅಪರೂಪದ, ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ, ಹೊಸಗನ್ನಡ ಜತೆಗೆ ಹಳೆಗನ್ನಡ ಶಬ್ದ ಭಂಡಾರವನ್ನು ತನ್ನ ಗರ್ಭದೊಳಗಿರಿಸಿಕೊಂಡಿರುವ ಈ ವಿಶಿಷ್ಟ ಸಾಹಿತ್ಯ ಲೋಕವನ್ನು ಕಾಪಾಡಿಕೊಳ್ಳುವ ಹೊಣೆ ಹೊತ್ತವರು ಕರಾವಳಿಯ ಮಣ್ಣಿನಿಂದ ಬಂದು ರಾಜ್ಯ ರಾಜಧಾನಿಯಲ್ಲಿ ಬದುಕು ಕಂಡುಕೊಂಡವರು. ಇವರಲ್ಲಿ ಟೆಕ್ಕಿಗಳಿದ್ದಾರೆ, ನಿವೃತ್ತ ಯೋಧರಿದ್ದಾರೆ, ವಿದ್ವಾಂಸರಿದ್ದಾರೆ, ಹಿರಿಯರಿದ್ದಾರೆ, ಕಿರಿಯರಿದ್ದಾರೆ, ಪ್ರಸಂಗ ಕರ್ತರಿದ್ದಾರೆ, ಕಲಾವಿದರಿದ್ದಾರೆ ಎಲ್ಲಕ್ಕಿಂತಲೂ ಮಿಗಿಲಾಗಿ, ಇಲ್ಲೊಂದು ಯಕ್ಷಗಾನೀಯ ಮನಸ್ಸು ಇದೆ.

ರಾತ್ರಿಯಿಡೀ ಯಕ್ಷಗಾನ ನಡೆಯುವ ಪ್ರಸಂಗವೊಂದಕ್ಕೆ ಹಾಡುಗಳು ಅಥವಾ ಪದಗಳು ಅನಿವಾರ್ಯ. ಇವು ಒಂದಕ್ಕೊಂದು ಕೊಂಡಿಯಾಗಿದ್ದುಕೊಂಡು, ಕಥೆಯೊಂದನ್ನು, ಸಂಭಾಷಣೆಯ ಮೂಲಕ ಹೇಳಲು ಅನುವು ಮಾಡುತ್ತವೆ. ಪ್ರಸಂಗ ಬರೆಯುವುದೆಂದರೆ ಸುಲಭದ ಮಾತಲ್ಲ. ಹಾಡುಗಳನ್ನು ರಚಿಸುವವರಿಗೆ ತಾಳ, ರಾಗ (ಅಥವಾ ನಿರ್ದಿಷ್ಟ ಮಟ್ಟು), ಲಯಗಳ ಜ್ಞಾನವಿರಬೇಕು, ಛಂದಸ್ಸು ತಿಳಿದಿರಬೇಕು ಮತ್ತು ಕಥಾ ಜ್ಞಾನವೂ, ಸಮಯ ಜ್ಞಾನವೂ ಇರಬೇಕಾಗುತ್ತದೆ. ಈ ಪರಿಯ ಶುದ್ಧ ಸಾಹಿತ್ಯವೊಂದನ್ನು ಮುಂದಿನ ಪೀಳಿಗೆಯವರಿಗಾಗಿ ಉಳಿಸಲು, ಯಕ್ಷಗಾನ ಕಲಾವಿದರಿಗೆ, ಯಕ್ಷಗಾನ ಮಾಡಿಸುವವರಿಗೆ, ಕಲಿಯುವವರಿಗೆ, ಆಸಕ್ತರಿಗೆಲ್ಲ ಉಚಿತವಾಗಿ ಸಿಗುವಂತಾಗಲು ಡಿಜಿಟಲೀಕರಣದ ಪ್ರಕ್ರಿಯೆಗೆ ವಾಟ್ಸ್ಆ್ಯಪ್ ಮೂಲಕ ಗುಂಪು ಕಟ್ಟಿಕೊಂಡ ತಂಡವೊಂದು ಸದ್ದಿಲ್ಲದೆ ಕಾಯಕನಿರತವಾಗಿದೆ. ಅಷ್ಟೇ ಅಲ್ಲ, ಜು.27ರಂದು 17 ಪ್ರಸಂಗಗಳ ಲೋಕಾರ್ಪಣೆಯೊಂದಿಗೆ, ಇದುವರೆಗೆ 101 ಅಪರೂಪದ ಪ್ರಸಂಗಗಳನ್ನು ಡಿಜಿಟಲೀಕರಣ (ಪಿಡಿಎಫ್ ರೂಪದಲ್ಲಿ) ಮಾಡಿದಂತಾಗಿದೆ.

ಇತ್ತೀಚೆಗೆ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಎಂ.ಎ.ಹೆಗಡೆ ಅವರೂ ಈ ತಂಡದ ಕಾರ್ಯವನ್ನು ಶ್ಲಾಘಿಸುತ್ತಾ, ಅಕಾಡೆಮಿಯಿಂದ ಅದಕ್ಕೆ ನೆರವು ನೀಡುವ ಬಗ್ಗೆಯೂ ಕ್ರಮ ಕೈಗೊಂಡಿರುವುದು ಈ ಮೌನ ಸಾಧಕರ ಹಿರಿಮೆಗೊಂದು ಕಿರೀಟಪ್ರಾಯವಾದ ಬೆಳವಣಿಗೆ.

ಇವರೇನು ಮಾಡುತ್ತಾರೆ?
ಈ ಯಕ್ಷಗಾನ ಪ್ರೇಮಿಗಳು ವಾಟ್ಸ್ಆ್ಯಪ್ ಗುಂಪೊಂದನ್ನು ಕಟ್ಟಿಕೊಂಡಿದ್ದಾರೆ. ಸದಸ್ಯರೆಲ್ಲರೂ ತಮಗೆ ತಿಳಿದ ಹಳೆಯ, ಅಮೂಲ್ಯ ಯಕ್ಷಗಾನ ಪ್ರಸಂಗಗಳನ್ನು, ಅಥವಾ ಗೊತ್ತಿರುವಲ್ಲೆಲ್ಲ ಹುಡುಕಿ ತಂದು, ಟೈಪ್ ಮಾಡುತ್ತಾರೆ. ತಾಳೆ ಗರಿಗಳ ದಾಖಲೆಯಲ್ಲಿ ಬರೆದ ಪ್ರಸಂಗಗಳೂ ಇವೆ. ಅಥವಾ ಹಿರಿಯ ತಲೆಮಾರಿನ ಭಾಗವತರನೇಕರಿಗೆ ಇಡೀ ಪ್ರಸಂಗವೇ ಬಾಯಿಪಾಠವಿರುತ್ತದೆ. ಅವರಿಂದ ಕೇಳಿ ತಿಳಿದುಕೊಂಡು, ದಾಖಲಿಸಿಕೊಳ್ಳಲಾಗುತ್ತದೆ. ಒಂದೇ ಪ್ರಸಂಗವನ್ನು ಎರಡು-ಮೂರು ಯಕ್ಷ ಕವಿಗಳು ಬರೆದಿರಬಹುದು. ಅವನ್ನೂ ಆಯಾ ಹೆಸರಿನಲ್ಲೇ ಪ್ರಕಟಿಸಲಾಗುತ್ತದೆ. ಹೀಗೆ ಟೈಪ್ ಆದ ಪ್ರಸಂಗಗಳನ್ನು ಹಿರಿಯರು ಪರಿಶೀಲಿಸಿ, ಅಕ್ಷರ ದೋಷ, ಛಂದಸ್ಸು, ರಾಗ, ತಾಳ ಇತ್ಯಾದಿ ಸಮಸ್ಯೆಯಿದ್ದರೆ ಸರಿಪಡಿಸುತ್ತಾರೆ. ಒಂದು ಪದದ ಬಗ್ಗೆ ಜಿಜ್ಞಾಸೆ ಏರ್ಪಟ್ಟರೆ ವಾಟ್ಸ್ಆ್ಯಪ್ ಗ್ರೂಪಿನಲ್ಲಿಯೇ ಕೇಳಿ, ಚರ್ಚೆ ಸಾಗುತ್ತದೆ. ಭಾಮಿನಿ, ವಾರ್ಧಕ್ಯ ಇತ್ಯಾದಿ ಪದಗಳಲ್ಲಿ ಮಾತ್ರಾಗಣದಲ್ಲಿ ವ್ಯತ್ಯಾಸವಿದ್ದರೆ ತಿದ್ದುಪಡಿ ಸೂಚಿಸಲಾಗುತ್ತದೆ. ಸಂದೇಹಕ್ಕೆ ಇಲ್ಲೇ ಪರಿಹಾರ ದೊರೆಯುತ್ತದೆ. ಪ್ರಸಂಗ ದಾಖಲೀಕರಣ ಮುಂದುವರಿಯುತ್ತದೆ. ಹೀಗೆ ಯಕ್ಷಗಾನ ಪ್ರಸಂಗವೊಂದು ಗುಣಮಟ್ಟದಲ್ಲಿ ರೂಪುಗೊಳ್ಳುತ್ತದೆ.

ಇದೇ ವೇಳೆ, ಕವಿಯ ಹೆಸರನ್ನು ಹೇಗಾದರೂ ಪತ್ತೆ ಹಚ್ಚಿ, ಅವರಿವರಿಂದ, ಯಕ್ಷಗಾನದ ಹಿರಿಯ ತಲೆಗಳಿಂದ ಕೇಳಿ ತಿಳಿದುಕೊಂಡು ಅದನ್ನೂ ದಾಖಲಿಸಲಾಗುತ್ತಿದೆ. ಅದೆಷ್ಟೋ ಕೃತಿಕಾರರು ಅದ್ಭುತ ಕೃತಿಗಳನ್ನು ಯಕ್ಷಗಾನದ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಕೊಟ್ಟಿದ್ದರೂ, ಅವರ ಹೆಸರು ದಾಖಲಾಗದೆ ‘ಅಜ್ಞಾತ’ರಾಗಿ ಹೋಗಿದ್ದಾರೆ. ಇನ್ನಾದರೂ ಈ ರೀತಿಯಾಗದೆ, ಕೃತಿಕಾರನಿಗೆ ಮನ್ನಣೆ ದೊರೆಯಬೇಕು, ಅವರ ಹೆಸರು ಶಾಶ್ವತವಾಗಿರಬೇಕು ಎಂಬ ಉದ್ದೇಶವನ್ನೂ ಈ ವಾಟ್ಸ್ಆ್ಯಪ್ ಗ್ರೂಪ್ ಸದಸ್ಯರು ಮರೆಯುವುದಿಲ್ಲ.

ಯಕ್ಷಗಾನ ಪ್ರೇಮಿಗಳೇನು ಮಾಡಬಹುದು?
ಸುಮಾರು 5000 ಪ್ರಸಂಗಗಳನ್ನು ಡಿಜಿಟಲೀಕರಣ ಮಾಡಿ ಮುಂದಿನ ಪೀಳಿಗೆಗೆ ಉಳಿಸುವ ಗುರಿ ಹೊತ್ತಿದೆ ಈ ತಂಡ. ಇದನ್ನು ಸಾಧಿಸಲು, ಟೈಪ್ ಮಾಡಲು, ಅಕ್ಷರ ದೋಷ ತಿದ್ದಲು ಹಾಗೂ ತಾಂತ್ರಿಕ ಕೆಲಸಕ್ಕಾಗಿ ಸ್ವಯಂ ಸೇವಕರ ಜರೂರತ್ತಿದೆ. ಯಕ್ಷಗಾನಕ್ಕಾಗಿ, ಈ ಮೂಲಕ ಕನ್ನಡ ಸಾಹಿತ್ಯ ಲೋಕದ ಶ್ರೀಮಂತಿಕೆಗಾಗಿ ನಿಸ್ವಾರ್ಥ ಸೇವೆ ಸಲ್ಲಿಸುವ ಇಚ್ಛೆಯುಳ್ಳವರು 96328 24391 ಅಥವಾ 99863 84205 ಅಥವಾ yakshaprasangakosha@gmail.com ಮೂಲಕ ಸಂಪರ್ಕಿಸಬಹುದು.

ಏನು ಉಪಯೋಗ
ರಾಮಾಯಣ, ಮಹಾಭಾರತ, ಭಾಗವತ ಮುಂತಾದ ಪುರಾಣ ಪುಣ್ಯಕಥೆಗಳ ಯಕ್ಷಗಾನದ ಆಖ್ಯಾನಗಳನ್ನು (ಆಯ್ದ ಭಾಗಗಳನ್ನು) ಆಡಿಸುವವರಿಗೆ, ಭಾಗವತರಿಗೆ, ಯಕ್ಷಗಾನದಲ್ಲಿ ಮುಂದುವರಿಯುವ ಇಚ್ಛೆಯುಳ್ಳವರೆಲ್ಲರಿಗೂ ಪದ್ಯಗಳನ್ನು ಕಂಠಸ್ಥ ಮಾಡಿಕೊಳ್ಳಲು, ಮೊಬೈಲ್‌ನಲ್ಲೇ ಅವುಗಳನ್ನು ಮನನ ಮಾಡಲು ಅನುಕೂಲವಾಗುವಂತೆ, ಪಿಡಿಎಫ್ ರೂಪದಲ್ಲಿ ಯಕ್ಷಗಾನದ ಸಾಹಿತ್ಯವು ಸದಾ ಕಾಲ ಉಚಿತವಾಗಿ ಸಿಗುತ್ತದೆ. ಅವುಗಳೆಲ್ಲವೂ ಸದ್ಯಕ್ಕೆ ಇಲ್ಲಿ https://goo.gl/a3RgQR ಲಭ್ಯ. ಮುದ್ದಣ, ಪಾರ್ತಿಸುಬ್ಬ, ಗೇರುಸೊಪ್ಪೆ ಶಾಂತಯ್ಯ, ಜಾನಕೈ ತಿಮ್ಮಪ್ಪ ಹೆಗಡೆ, ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ, ದೇವಿದಾಸ ಮುಂತಾದ ಹಳೆ ತಲೆಮಾರಿನವರಿಂದ ತೊಡಗಿ, ಉಪ್ಪೂರ, ಬಲಿಪ, ಸಾಮಗ, ಕಾರಂತ, ಶೇಣಿ, ಚಿಟ್ಟಾಣಿ, ಕೆರೆಮನೆ ಮುಂತಾದ ಪರಮ ಪುರುಷರು ರಚಿಸಿದ ಕಾಳಗಗಳು, ಕಲ್ಯಾಣಗಳು (ಯಕ್ಷಗಾನ ಪ್ರಸಂಗಗಳು ಶೀರ್ಷಿಕೆ ಪಡೆಯುವುದೇ ಹಾಗೆ) ಇಲ್ಲಿ ಆಧುನಿಕತೆಗೆ ತಕ್ಕಂತೆ ಡಿಜಿಟೈಸ್ ಆಗುತ್ತಿವೆ.

ಉಡುಪಿಯ ಪಾವಂಜೆ ಗುರುರಾಜ ಆ್ಯಂಡ್ ಸನ್ಸ್, ಶ್ರೀಮನ್ಮಧ್ವ ಸಿದ್ಧಾಂತ ಗ್ರಂಥಾಲಯ, ಮಂಗಳೂರಿನ ನಿತ್ಯಾನಂದ ಗ್ರಂಥಾಲಯ ಮುಂತಾದವೆಲ್ಲ ಪುಸ್ತಕಗಳ ಮೂಲಕ ಹಲವಾರು ಪ್ರಸಂಗಗಳ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿವೆ. ಅವುಗಳಿಂದ ಪ್ರಕಾಶನಗೊಂಡ ಕೃತಿಗಳೂ ಡಿಜಿಟಲೀಕರಣಗೊಳ್ಳುತ್ತಿವೆ.

ಯಕ್ಷಗಾನಕ್ಕೆ ಸಂಬಂಧಿಸಿದ ಅದೆಷ್ಟೋ ವಾಟ್ಸಾಪ್ ಗ್ರೂಪುಗಳು ಈಗಾಗಲೇ ಹುಟ್ಟಿಕೊಂಡಿವೆ. ಎಲ್ಲ ಗ್ರೂಪುಗಳಲ್ಲಿರುವ ಸಮಾನ ಮನಸ್ಕರನ್ನು ಒಟ್ಟುಗೂಡಿಸಿದ್ದು ನಟರಾಜ ಉಪಾಧ್ಯರೆಂಬ ನಿವೃತ್ತ ಯೋಧರು. ಬೆಂಬಲವಾಗಿ ನಿಂತವರು ಮೂಲತಃ ಯಕ್ಷಗಾನ ಕಲಾವಿದರೂ ಆಗಿರುವ ಡಾ.ಪ್ರದೀಪ್ ಸಾಮಗ ಹಾಗೂ ರವಿ ಮಡೋಡಿ. ಆನಂದರಾಮ ಉಪಾಧ್ಯರ ಯಕ್ಷವಾಹಿನಿ ಸಂಸ್ಥೆಯ ಯೋಜನೆಯೇ ‘ಯಕ್ಷಗಾನ ಪ್ರಸಂಗ ಕೋಶ’. ಈ ಹೆಸರಿನ ವಾಟ್ಸಾಪ್ ಗ್ರೂಪಿನಲ್ಲಿ 29 ಮಂದಿ ಸಕ್ರಿಯರಾಗಿದ್ದಾರೆ. ಸಾಧ್ಯವಾದಾಗಲೆಲ್ಲ ಉಪಾಧ್ಯರು ವಾರಾಂತ್ಯದಲ್ಲಿ ತಮ್ಮದೇ ಮನೆಯ ಪಕ್ಕದ ಹೋಟೆಲೊಂದರಲ್ಲಿ ಮೀಟಿಂಗ್ ಕರೆದು, ಮುಂದೇನಾಗಬೇಕು, ಹೇಗೆ ಮುಂದುವರಿಯಬೇಕೆಂದು ಚರ್ಚಿಸುತ್ತಾರೆ. ಹಿರಿಯ ಪ್ರಸಂಗಕರ್ತ ಮೃತ್ಯುಂಜಯ ಗಿಂಡಿಮನೆ, ಡಾ.ಶ್ರೀಧರ ಡಿಎಸ್., ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಎಂ.ಎ.ಹೆಗಡೆ, ಕಲಾವಿದರಾದ ಎಂ.ಎಲ್.ಸಾಮಗ, ಸಾಹಿತಿ ಪಾದೇಕಲ್ಲು ವಿಷ್ಣು ಭಟ್ಟ, ಕಬ್ಬಿನಾಲೆ ವಸಂತ ಭಾರದ್ವಾಜ್ ಮುಂತಾದ ಹಿರಿಯರು ಈ ಕೈಂಕರ್ಯಕ್ಕೆ ಬೆನ್ನೆಲುಬಾಗಿದ್ದಾರೆ. ಈ ತಂಡದಲ್ಲಿರುವವರೆಲ್ಲರೂ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗದಲ್ಲಿರುವವರೇ. ಆದರೆ ಅವರ ಯಕ್ಷಗಾನ ಪ್ರೇಮ ಮತ್ತು ಮುಂದಿನ ಪೀಳಿಗೆಗೆ ನಮ್ಮ ಕಲೆಯನ್ನು, ಸಾಹಿತ್ಯವನ್ನು ಕಾಯ್ದಿಡಬೇಕೆಂಬ ಹಂಬಲವೇ ಅವರೆಲ್ಲರನ್ನೂ ಒಂದೇ ದಾರದಲ್ಲಿ ಪೋಣಿಸುತ್ತಿದೆ.

ಸಾಮಾಜಿಕ ಜಾಲತಾಣ ಬಳಸಿ ನಡೆಸುತ್ತಿರುವ ಈ ಕೈಂಕರ್ಯದ ವ್ಯಾಪ್ತಿಯೇ ಇದಲ್ಲವೇ? ಈ ಕಾರ್ಯದಲ್ಲಿ ಪರವೂರಿನವರೂ ಕೈಜೋಡಿಸುತ್ತಿದ್ದಾರೆ. ದೂರದ ಚೆನ್ನೈಯಿಂದಲೂ ಮಹನೀಯರೊಬ್ಬರು ಸಂಪರ್ಕಿಸಿ, ತಮ್ಮ ಕುಟುಂಬದ ಹಿರಿಯರ ಯಕ್ಷಗಾನ ಪ್ರಸಂಗಗಳ ಪ್ರತಿಗಳನ್ನು ಒದಗಿಸಲು ಮುಂದೆ ಬಂದಿದ್ದಾರೆ. ಹೀಗೆ, ಈಗಾಗಲೇ ಚಾಲ್ತಿಯಲ್ಲಿರುವ ವಿವಿಧ ಕವಿಗಳು ರಚಿಸಿದ ಯಕ್ಷಗಾನ ಪ್ರಸಂಗಗಳನ್ನು ಕಲೆ ಹಾಕುವ ಜತೆಗೆ, ಅಜ್ಞಾತವಾಗಿರುವ ಕೃತಿಗಳೂ ಬೆಳಕು ಕಾಣುತ್ತಿರುವುದು ವಿಶೇಷ. ಯಕ್ಷಗಾನವೆಂಬ ಮಹಾನ್ ಸಾಗರದಲ್ಲಿ ಪುಟ್ಟ ದೋಣಿಯೊಂದರಲ್ಲಿ ಹೊರಟಿರುವ ಈ ಸಮಾನಾಸಕ್ತರು, ದೋಣಿಯೇ ಹಡಗು ಆಗುವ ಮತ್ತು ಯಕ್ಷಗಾನಕ್ಕೆ ಸಂಬಂಧಿಸಿದ ಎಲ್ಲವೂ ಯಕ್ಷಗಾನದ ವಿಶ್ವಕೋಶವೊಂದನ್ನು ರೂಪಿಸಲು ಹೊರಟಿದ್ದಾರೆ. ಇದರ ಮೊದಲ ಹೆಜ್ಜೆಯೇ ಯಕ್ಷಗಾನ ಪ್ರಸಂಗ ಕೋಶ.

ವಿಜಯ ಕರ್ನಾಟಕದಲ್ಲಿ ಪ್ರಕಟಿತ 12 ಆಗಸ್ಟ್ 2018

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

Recent Posts

ಒಂದೇ ಫೋನ್‌ನಲ್ಲಿ ಎರಡು WhatsApp ಖಾತೆ ಬಳಸುವುದು ಹೇಗೆ?

ಕಳೆದ ಅಕ್ಟೋಬರ್ 19ರಂದು ಮೆಟಾ ಒಡೆತನದ WhatsApp ಸಂಸ್ಥೆಯೇ ತನ್ನ ಆ್ಯಪ್‌ಗೆ ಹೊಸ ಅಪ್‌ಡೇಟ್ ನೀಡಿದ್ದು, ಎರಡು ವಾಟ್ಸ್ಆ್ಯಪ್ ಖಾತೆಗಳನ್ನು…

5 months ago

AI Images: Text ಬಳಸಿ ಚಿತ್ರ ತಯಾರಿಸುವುದು ಹೇಗೆ?

AI Images: ನಮ್ಮ ಕಲ್ಪನೆಯನ್ನು ಎಐ ಎಂಜಿನ್‌ಗೆ ಟೆಕ್ಸ್ಟ್ (ಪಠ್ಯ) ಮೂಲಕ ಊಡಿಸಿದರೆ ಸಾಕು, ಕ್ಷಣ ಮಾತ್ರದಲ್ಲಿ ನೀವಂದುಕೊಂಡ ಚಿತ್ರವೊಂದು…

5 months ago

ಬ್ರಾಡ್‌ಬ್ಯಾಂಡ್ ವೇಗ: ಎಂಬಿಪಿಎಸ್ ಎಂದರೆ ಏನು? ನೀವು ಯಾಮಾರುವುದು ಎಲ್ಲಿ?

ಹಾರ್ಡ್ ಡ್ರೈವ್ ಅಥವಾ ಸ್ಟೋರೇಜ್ ಡ್ರೈವ್‌ಗಳಲ್ಲಿರುವ ಫೈಲ್‌ಗಳ ವಿನಿಮಯದ ಸಂದರ್ಭದಲ್ಲಿ ಬಳಸುವುದು ಮೆಗಾಬೈಟ್ಸ್ ಎಂಬ ಪ್ರಮಾಣವನ್ನು. ಇಂಟರ್ನೆಟ್ ವೇಗವನ್ನು ಅಳೆಯುವುದು…

6 months ago

Apple iPhone 15 Plus Review: ಪ್ರೊ ಮಾದರಿಗಳ ವೈಶಿಷ್ಟ್ಯವಿರುವ ಐಫೋನ್ 15 ಪ್ಲಸ್

Apple iPhone 15 Plus Review: ಲೈಟ್ನಿಂಗ್ ಪೋರ್ಟ್ ಬದಲು ಟೈಪ್ ಸಿ ಚಾರ್ಜಿಂಗ್ ಪೋರ್ಟ್, ಡೈನಮಿಕ್ ಐಲೆಂಡ್, ಹೊಸ…

6 months ago

Type in Kannada: ಐಫೋನ್, ಆಂಡ್ರಾಯ್ಡ್ ಫೋನ್‌ಗಳಲ್ಲಿ ಕನ್ನಡ ಟೈಪಿಂಗ್ ಈಗ ಮತ್ತಷ್ಟು ಸುಲಭ

Type in Kannada: ಗೂಗಲ್‌ನ ಆಂಡ್ರಾಯ್ಡ್ ಹಾಗೂ ಆ್ಯಪಲ್‌ನ ಐಫೋನ್ ಸ್ಮಾರ್ಟ್‌ಫೋನ್‌ಗಳಲ್ಲಿ ಕನ್ನಡ ಟೈಪಿಂಗ್ ಸುಲಭವಾಗಿಸುವ ಸಾಕಷ್ಟು ಖಾಸಗಿ ಕೀಬೋರ್ಡ್…

7 months ago

iPhone 15 Pro Max Review: ಗೇಮರ್‌ಗಳಿಗೆ ಹಬ್ಬ – ಆ್ಯಪಲ್‌ನ ಶಕ್ತಿಶಾಲಿ, ಐಷಾರಾಮಿ ಸಾಧನ

iPhone 15 Pro Max Review: ವಿನೂತನವಾದ ಟೈಟಾನಿಯಂ ಚೌಕಟ್ಟು ಐಷಾರಾಮದ ಅನುಭವ. ಲೈಟ್ನಿಂಗ್ ಪೋರ್ಟ್ ಬದಲು ಯುಎಸ್‌ಬಿ ಸಿ…

7 months ago