iPhone 15 Pro Max Review: ಗೇಮರ್‌ಗಳಿಗೆ ಹಬ್ಬ – ಆ್ಯಪಲ್‌ನ ಶಕ್ತಿಶಾಲಿ, ಐಷಾರಾಮಿ ಸಾಧನ

iPhone 15 Pro Max Review: ಆ್ಯಪಲ್ ತನ್ನ 15ನೇ ಸರಣಿಯ ಫೋನ್‌ಗಳನ್ನು ಕಳೆದ ತಿಂಗಳು ಬಿಡುಗಡೆ ಮಾಡಿದೆ. ಪ್ರಜಾವಾಣಿಗೆ ರಿವ್ಯೂಗೆ ದೊರೆತಿರುವ ಐಫೋನ್ 15 ಪ್ರೊ ಮ್ಯಾಕ್ಸ್ ಎಂಬ ಅತ್ಯಂತ ಐಷಾರಾಮಿ ಹಾಗೂ ಶಕ್ತಿಶಾಲಿ ಫೋನ್ ಅನ್ನು ಎರಡು ವಾರ ಬಳಸಿ ನೋಡಿದಾಗ ಕಂಡುಬಂದ ಅಂಶಗಳು ಇಲ್ಲಿವೆ.

ವಿಶಿಷ್ಟವಾದ ಟೈಟಾನಿಯಂ ಚೌಕಟ್ಟು ಹೊಂದಿರುವ ಐಫೋನ್ 15 ಪ್ರೊ ಮ್ಯಾಕ್ಸ್. ಇದು 6.7 ಇಂಚಿನ ದೊಡ್ಡ ಪರದೆಯೊಂದಿಗೆ ಗಮನ ಸೆಳೆಯುತ್ತಿದ್ದು, 14ನೇ ಸರಣಿಯ ಪ್ರೊ ಮ್ಯಾಕ್ಸ್‌ಗೆ ಹೋಲಿಸಿದರೆ ಒಂದಿಪ್ಪತ್ತು ಗ್ರಾಂ.ನಷ್ಟು ಹಗುರವೂ ಇದೆ. ಅತ್ಯಂತ ಖುಷಿಯ ವಿಚಾರವೆಂದರೆ, ಇದೀಗ ಸಾರ್ವತ್ರಿಕವಾಗುತ್ತಿರುವ ಯುಎಸ್‌ಬಿ ಟೈಪ್ ಸಿ ಚಾರ್ಜಿಂಗ್ ಪೋರ್ಟ್ ಆ್ಯಪಲ್ ಫೋನ್‌ಗಳಿಗೂ ಅಳವಡಿಸಿರುವುದು. ವಿನ್ಯಾಸದಲ್ಲಿ ಹೆಚ್ಚೇನೂ ಬದಲಾವಣೆಯಿಲ್ಲ. ಆ್ಯಕ್ಷನ್ ಬಟನ್ ಅನ್ನು ಸ್ಲೈಡ್ ಮಾಡುವ ಬದಲು, ಒತ್ತಿ ಹಿಡಿಯುವಂತೆ ಮಾಡಲಾಗಿದೆ ಮತ್ತು ಅದಕ್ಕೆ ವಿಭಿನ್ನ ಕೆಲಸಗಳನ್ನು ಶಾರ್ಟ್ ಕಟ್ ರೂಪದಲ್ಲಿ ಅನ್ವಯಿಸಬಹುದಾಗಿದೆ. ಸರಣಿಯ ಅತ್ಯಂತ ದುಬಾರಿ ಫೋನ್ ಬೆಲೆಗೆ ತಕ್ಕ ಮೌಲ್ಯ ಹೊಂದಿದೆಯೇ? ನೋಡೋಣ.

ಫೋನ್ ಕಂಪನಿಗಳೆಲ್ಲವೂ ಇಂಗಾಲದ ಅಂಶಗಳನ್ನು (ವಾತಾವರಣಕ್ಕೆ ಸಂಬಂಧಿಸಿ ಕಾರ್ಬನ್ ಫೂಟ್‌ಪ್ರಿಂಟ್) ಕಡಿಮೆ ಮಾಡುವ ವ್ಯವಸ್ಥೆಗೆ ಹೆಚ್ಚು ಒತ್ತು ಕೊಟ್ಟಿದ್ದು, ಆ್ಯಪಲ್ ಕೂಡ ಚಿಕ್ಕದಾದ, ಚೊಕ್ಕದಾದ ಬಾಕ್ಸ್ ನೀಡಿದೆ ಹಾಗೂ ತನ್ನ ಸಾಧನಗಳ ಒಳಗಿನ ಬಿಡಿಭಾಗಗಳಲ್ಲಿಯೂ ರೀಸೈಕಲ್ ಮಾಡಿದ ಲೋಹಗಳನ್ನು ಉಪಯೋಗಿಸಿದೆ. ಬಾಕ್ಸ್‌ನಲ್ಲಿ ಐಫೋನ್, ಸಿಮ್ ಇಜೆಕ್ಟರ್, ಟೈಪ್ ಸಿ-ಟು-ಸಿ ಕೇಬಲ್ ಇದೆಯಾದರೂ, ಅಡಾಪ್ಟರ್ ಇಲ್ಲ. ಅಂದಾಜು ₹2 ಸಾವಿರ ಮೌಲ್ಯದ, 20W ಚಾರ್ಜಿಂಗ್ ಬೆಂಬಲವಿರುವ ಅಡಾಪ್ಟರ್ ಖರೀದಿಸಬೇಕಾಗಬಹುದು. ಬೇರೆ ಚಾರ್ಜರ್‌ಗಳು ಕೂಡ ಕೆಲಸ ಮಾಡುವುದಿಲ್ಲವೆಂದೇನಿಲ್ಲ.

ವಿನ್ಯಾಸ
ಮೊದಲ ನೋಟದಲ್ಲಿ ಹಿಂದಿನ (ಐಫೋನ್ 14 ಪ್ರೊ ಮ್ಯಾಕ್ಸ್) ಮಾದರಿಗಿಂತ ದೊಡ್ಡ ಮಟ್ಟದ ವ್ಯತ್ಯಾಸ ಕಾಣಿಸುವುದಿಲ್ಲ. ಆದರೆ, ವಿನೂತನವಾದ ಟೈಟಾನಿಯಂ ಚೌಕಟ್ಟು ಐಷಾರಾಮದ ಅನುಭವವನ್ನು ಉನ್ನತೀಕರಿಸಿದೆ. ಕೊನೆಗೂ ಲೈಟ್ನಿಂಗ್ ಪೋರ್ಟ್ ಬದಲು ಯುಎಸ್‌ಬಿ ಸಿ ಪೋರ್ಟ್‌ಗೆ ಆ್ಯಪಲ್ ಬದಲಾಗಿರುವುದು ಸ್ವಾಗತಾರ್ಹ ಕ್ರಮ.

ಎಡ ಮೇಲ್ಭಾಗದಲ್ಲಿ ಸೈಲೆಂಟ್ ಮೋಡ್‌ಗೆ ಬದಲಾಗಲು ಸ್ಲೈಡರ್ ಆಗಿ ಕೆಲಸ ಮಾಡುತ್ತಿದ್ದ ಆ್ಯಕ್ಷನ್ ಬಟನ್, ಈಗ ಸ್ಲೈಡ್ ಮಾಡುವ ಬದಲು, ಒತ್ತಿ ಹಿಡಿದರೆ ಕೆಲಸ ಮಾಡುತ್ತದೆ. ಇದಕ್ಕೆ ಸೈಲೆಂಟ್ ಮೋಡ್ ಮಾತ್ರವಲ್ಲದೆ, ಫೋಕಸ್, ಕ್ಯಾಮೆರಾ, ವಾಯ್ಸ್ ರೆಕಾರ್ಡಿಂಗ್, ಫ್ಲ್ಯಾಶ್ ಲೈಟ್ ಮುಂತಾದ ಆ್ಯಪ್‌ಗಳಲ್ಲಿ ಯಾವುದಾದರೊಂದನ್ನು ನಮಗೆ ಬೇಕಾದಂತೆ ಅನ್ವಯಿಸಬಹುದು.

  • iPhone 15 Pro Max ಫೋನ್ ಪ್ರಮುಖ ವೈಶಿಷ್ಟ್ಯಗಳು
  • ಡಿಸ್‌ಪ್ಲೇ: 6.7 ಇಂಚು, ಸೂಪರ್ ರೆಟಿನಾ XDR OLED ಸ್ಕ್ರೀನ್, 120Hz
  • ಚಿಪ್‌ಸೆಟ್: A17 Pro ಚಿಪ್
  • RAM: 8GB
  • ಸ್ಟೋರೇಜ್: 256GB/512GB/1TB
  • ಪ್ರಧಾನ ಕ್ಯಾಮೆರಾ: 48MP+12MP+12MP ತ್ರಿವಳಿ ಹಿಂಭಾಗದ ಕ್ಯಾಮೆರಾ
  • ಸೆಲ್ಫೀ ಕ್ಯಾಮೆರಾ: 12MP
  • ಕಾರ್ಯಾಚರಣಾ ವ್ಯವಸ್ಥೆ: iOS 17
  • IP68 ಮಾದರಿಯ ಧೂಳು/ಜಲನಿರೋಧಕತೆ
  • ಬ್ಯಾಟರಿ: 4422 mAh
  • ಸುತ್ತಳತೆ: 6.29 x 3.02 x 0.32 ಇಂಚು
  • ತೂಕ: 221 g
  • ಬೆಲೆ: ₹1,59,000ರಿಂದ ಪ್ರಾರಂಭ.

ಅದೇ ರೀತಿ, ಸ್ಟೀಲ್ ಬದಲು ಟೈಟಾನಿಯಂ ಚೌಕಟ್ಟು ಬಳಸಿದ ಪರಿಣಾಮ ಸಾಧನದ ತೂಕವೂ ಕೊಂಚ ಕಡಿಮೆಯಾಗಿದೆ ಮತ್ತು ಶಕ್ತಿಶಾಲಿಯೂ ಆಗಿದೆ. ಹಿಂಭಾಗದ ಕವಚ ಪ್ಲಾಸ್ಟಿಕ್‌ನದ್ದಾಗಿದ್ದು, ಐಫೋನ್ ಐಪಿ68 ಪ್ರಮಾಣೀಕೃತವಾಗಿದೆ. ಎಂದರೆ, ಸಾಮಾನ್ಯ ಧೂಳು ಹಾಗೂ ಜಲನಿರೋಧಕತೆ ಇದಕ್ಕಿದೆ.

ಗಾತ್ರದಲ್ಲಿ ದೊಡ್ಡದೂ, ಹೆಚ್ಚು ತೂಕದ್ದೂ ಆಗಿರುವ ಐಫೋನ್ 15 ಪ್ರೊ ಮ್ಯಾಕ್ಸ್, ಗೇಮ್-ಪ್ರಿಯರಿಗಂತೂ ಅಚ್ಚುಮೆಚ್ಚಿನ ಸಾಧನವಾಗಬಹುದು. ಇದರಲ್ಲಿ ಡ್ಯುಯಲ್ ಸ್ಪೀಕರ್‌ಗಳು ಉತ್ತಮ ಗುಣಮಟ್ಟದ ಧ್ವನಿ ಹೊರಡಿಸುತ್ತವೆ. ಕಪ್ಪು ಟೈಟಾನಿಯಂ, ಬಿಳಿ ಟೈಟಾನಿಯಂ, ನೀಲಿ ಟೈಟಾನಿಯಂ ಹಾಗೂ ನ್ಯಾಚುರಲ್ ಟೈಟಾನಿಯಂ ಬಣ್ಣಗಳಲ್ಲಿ ಐಫೋನ್ 15 ಪ್ರೊ ಮ್ಯಾಕ್ಸ್ ಲಭ್ಯ.

ಹೇಗಿದೆ?
6.7 ಇಂಚಿನ ಸೂಪರ್ ರೆಟಿನಾ ಎಕ್ಸ್‌ಡಿಆರ್ ಡಿಸ್‌ಪ್ಲೇ (ಪರದೆ)ಯಲ್ಲಿ ಚಿತ್ರಗಳೆಲ್ಲವೂ ಅತ್ಯಂತ ನಿಖರವಾಗಿ ಗೋಚರಿಸುತ್ತವೆ. ಫೋಟೊಗ್ರಫಿ ಭಾಷೆಯಲ್ಲಿ ಹೇಳುವುದಾದರೆ ವಸ್ತುವಿನ ‘ಡೀಟೇಲ್ಸ್’ ತುಂಬ ಚೆನ್ನಾಗಿ ಸೆರೆಯಾಗುತ್ತವೆ. ವೈವಿಧ್ಯಮಯ ವರ್ಣಚಿತ್ರಗಳು ಸ್ಪಷ್ಟವಾಗಿ ಕಾಣಿಸುತ್ತವೆ. ಬಿಸಿಲಿನಲ್ಲಿಯೂ ಸ್ಕ್ರೀನ್ ನೋಡುವುದು ಅತ್ಯಂತ ಅನುಕೂಲಕರ. ಸ್ಕ್ರೀನ್ ಸುತ್ತಲಿನ ಕಪ್ಪು ಜಾಗ (ಬೆಝೆಲ್) ತೀರಾ ಕಡಿಮೆ ಇರುವುದರಿಂದ ಚಿತ್ರಗಳ ಪೂರ್ಣ ಗೋಚರತೆ ಸಾಧ್ಯವಾಗಿದೆ. ಡಿಸ್‌ಪ್ಲೇಗೆ ಸಿರಾಮಿಕ್ ಶೀಲ್ಡ್ ರಕ್ಷಣೆಯಿದೆ.

120Hz ಪ್ರೊ-ಮೋಶನ್ ಡಿಸ್‌ಪ್ಲೇ ಅತ್ಯಂತ ಶಕ್ತಿಶಾಲಿ ಗೇಮ್ ಆಡುವುದನ್ನು, ಹೆಚ್ಚು ರೆಸೊಲ್ಯುಶನ್‌ನ ವಿಡಿಯೊ ವೀಕ್ಷಣೆಯನ್ನು ಸುಲಭವಾಗಿಸಿದೆ. ಬ್ರೌಸಿಂಗ್, ಆನಿಮೇಶನ್ ವೀಕ್ಷಣೆ ತೀರಾ ಸುಲಲಿತವಾಗಿದೆ. ಇದಕ್ಕೆ ಪೂರಕವಾಗಿ ಅತ್ಯಾಧುನಿಕ ಐಒಎಸ್ 17 ಕಾರ್ಯಾಚರಣಾ ವ್ಯವಸ್ಥೆಯು ಈ ಸಾಧನವನ್ನು ಮತ್ತಷ್ಟು ಆಪ್ತವಾಗಿಸಿದೆ.

ಎ17 ಪ್ರೊ-ಬಯೋನಿಕ್ ಚಿಪ್‌ಸೆಟ್ ಐಫೋನ್ 15 ಪ್ರೊ ಮ್ಯಾಕ್ಸ್‌ನ ಅತಿದೊಡ್ಡ ವಿಶೇಷತೆ. 6 ಕೋರ್ ಸಿಪಿಯು ಜೊತೆಗೂಡಿ ಇದು ಸಾಧನದ ವೇಗವನ್ನು ಹೆಚ್ಚಿಸಿದೆ. ಗ್ರಾಫಿಕ್ಸ್ ಜಾಸ್ತಿ ಇರುವ ಮೊಬೈಲ್ ಗೇಮ್‌ಗಳಂತೂ ಆಡುವುದಕ್ಕೆ ಅತ್ಯಂತ ಖುಶಿಯಾಗುತ್ತದೆ. ಗೇಮಿಂಗ್ ಕನ್ಸೋಲ್‌ನ ಅನುಭವ ಇದರಲ್ಲಿ ದೊರೆಯುತ್ತದೆ.

ಪ್ರೊ ಸರಣಿಯಲ್ಲಿ ಈ ಬಾರಿ 128ಜಿಬಿ ಆವೃತ್ತಿಯನ್ನು ಕೈಬಿಟ್ಟಿರುವ ಆ್ಯಪಲ್, ಮೂರು ಸ್ಟೋರೇಜ್ ಸಾಮರ್ಥ್ಯದವುಗಳನ್ನಷ್ಟೇ ಮಾರುಕಟ್ಟೆಗೆ ಬಿಟ್ಟಿದೆ. 256GB/512GB/1TB ಸಾಮರ್ಥ್ಯದ ಸ್ಟೋರೇಜ್ ಜೊತೆಗೆ, 8GB ಯಷ್ಟು RAM ಇದೆ ಎಂಬುದನ್ನು ಕೆಲವೊಂದು ಬೆಂಚ್‌ಮಾರ್ಕ್ ಪರೀಕ್ಷೆಗಳು ಹೇಳುತ್ತವೆ. ಆದರೆ ಆ್ಯಪಲ್ ಈ ಬಗ್ಗೆ ಖಚಿತಪಡಿಸುವುದಿಲ್ಲವಾದರೂ, ವೇಗಕ್ಕೆ ಯಾವುದೇ ರೀತಿಯಲ್ಲೂ ತೊಡಕಾಗಿಲ್ಲ.

ದೈನಂದಿನ ಕೆಲಸ ಕಾರ್ಯಗಳನ್ನು ನಿರ್ವಹಿಸಿದರೆ ಕನಿಷ್ಠ ಎರಡು ದಿನ, ಹೆಚ್ಚು ಹೆಚ್ಚು ವಿಡಿಯೊ ವೀಕ್ಷಣೆ, ಗೇಮ್ ಆಡುವುದನ್ನು ಮಾಡಿದರೆ ಒಂದು ದಿನದ ಬ್ಯಾಟರಿ ಚಾರ್ಜ್‌ಗೇನೂ ಅಡ್ಡಿಯಾಗಿಲ್ಲ. 27W ವರೆಗಿನ ವೇಗದ ಚಾರ್ಜಿಂಗನ್ನು ಐಫೋನ್ ಬೆಂಬಲಿಸುತ್ತದೆ. 20 ವ್ಯಾಟ್ಸ್ ಚಾರ್ಜರ್ ಮೂಲಕ ಅರ್ಧ ಗಂಟೆಯಲ್ಲಿ 50% ಚಾರ್ಜ್ ಮಾಡಬಹುದು. ರಿವರ್ಸ್ ಚಾರ್ಜಿಂಗ್ ವೈಶಿಷ್ಟ್ಯವೂ ಇರುವುದರಿಂದ ತೀರಾ ಅಗತ್ಯ ಬಿದ್ದರೆ ಬೇರೆ ಸಾಧನಗಳನ್ನು ಐಫೋನ್ ಬ್ಯಾಟರಿಯಿಂದಲೇ ಚಾರ್ಜ್ ಮಾಡಬಹುದು.

ನೇರ ಬಿಸಿಲಿನಲ್ಲಿ 4ಕೆ ಸಾಮರ್ಥ್ಯದ ವಿಡಿಯೊ ರೆಕಾರ್ಡ್ ಮಾಡಿದಾಗ ಕೊಂಚ ಬಿಸಿಯ ಅನುಭವವಾಯಿತಾದರೂ, ಸಾಮಾನ್ಯ ಬೆಳಕಿನಲ್ಲಿ ಮತ್ತು ಒಳಾಂಗಣದಲ್ಲಿ ಈ ಸಮಸ್ಯೆ ಎದುರಾಗಲಿಲ್ಲ. ಒಂದು ಬಾರಿ ಐಫೋನ್ ತಣ್ಣಗಾಗಬೇಕಿದೆ ಎಂಬ ಎಚ್ಚರಿಕೆ ಸಂದೇಶವೂ ಬಂದಿತ್ತು. ಈ ಬಗ್ಗೆ ಹಲವು ಬಳಕೆದಾರರು ದೂರು ನೀಡಿದ ಬಳಿಕ, ಐಒಎಸ್ 17.0.3 ತಂತ್ರಾಂಶ ಅಪ್‌ಡೇಟ್ ಮೂಲಕ ಆ್ಯಪಲ್ ಕಂಪನಿಯು ಈ ಬಿಸಿಯಾಗುವ ಸಮಸ್ಯೆಗೆ ಪರಿಹಾರ ಕಂಡುಕೊಂಡಿದೆ.

ಕ್ಯಾಮೆರಾ
ಆ್ಯಪಲ್ ಈ ಬಾರಿ 5X ಟೆಲಿಫೋಟೊ ಲೆನ್ಸ್ ಸೇರ್ಪಡೆ ಮಾಡಿದೆ. 48 ಮೆಗಾಪಿಕ್ಸೆಲ್ ಸಾಮರ್ಥ್ಯದ ಪ್ರಧಾನ ಲೆನ್ಸ್, 12 ಮೆಗಾಪಿಕ್ಸೆಲ್‌ನ ಅಲ್ಟ್ರಾವೈಡ್ ಮತ್ತು 12MP ಮ್ಯಾಕ್ರೊ ಲೆನ್ಸ್‌ಗಳ ಮೂಲಕ ಇದರ ಆಟೋ ಫೋಕಸ್ ಸಾಮರ್ಥ್ಯವು ಅತ್ಯುತ್ತಮ ಗುಣಮಟ್ಟದ ಚಿತ್ರಗಳನ್ನು ಸೆರೆಹಿಡಿಯುತ್ತವೆ. ವಿಶೇಷವೆಂದರೆ, ಫೋಟೊ ತೆಗೆದ ಬಳಿಕವೂ ತಿದ್ದುಪಡಿ ಮಾಡಿ ಪೋರ್ಟ್ರೇಟ್ ಮಾದರಿಗೆ (ಹಿನ್ನೆಲೆ ಮಸುಕಾಗಿಸುವ) ಬದಲಾಯಿಸಲು ಐಫೋನ್ ಅನುವು ಮಾಡಿಕೊಡುತ್ತದೆ. ಅಂದರೆ, ಕ್ಲಿಕ್ ಮಾಡುವಾಗ ಸ್ವಯಂಚಾಲಿತವಾಗಿ ಎಲ್ಲ ಕೋನದಲ್ಲಿಯೂ ಪೂರ್ಣ ಸ್ಪಷ್ಟತೆಯೊಂದಿಗೆ (ಡೀಟೇಲ್ಸ್) ಚಿತ್ರಗಳು ಸೆರೆಯಾಗುತ್ತವೆ. ನಂತರ ಇದನ್ನು ನಾವು ಐಫೋನ್‌ನ ಫೋಟೊಸ್ ಆ್ಯಪ್ ಮೂಲಕ ಎಡಿಟ್ ಮಾಡಿಕೊಳ್ಳಬಹುದು. ಇದಕ್ಕೆ ನೆರವಾಗುವುದು ಫೋಟೊನಿಕ್ ಎಂಜಿನ್.

ಮುಂಭಾಗದಲ್ಲಿ 12 ಮೆಗಾಪಿಕ್ಸೆಲ್ ಸಾಮರ್ಥ್ಯದ ಸೆಲ್ಫೀ ಲೆನ್ಸ್ ಇದ್ದು, ಇದು ಕೂಡ ಸ್ಪಷ್ಟ ಚಿತ್ರಗಳನ್ನು ಸೆರೆಹಿಡಿಯುತ್ತದೆ. ಎರಡೂ ಕ್ಯಾಮೆರಾಗಳಲ್ಲಿ ನೈಟ್ ಮೋಡ್ ಮೂಲಕ, ಮಂದ ಬೆಳಕಿನಲ್ಲಿ ಗುಣಮಟ್ಟದ ಚಿತ್ರಗಳು ಸೆರೆಯಾಗಿವೆ.

ಐಫೋನ್ 15 ಪ್ರೊ ಮ್ಯಾಕ್ಸ್ ಸಾಧನದ ಈಗಿನ ಗರಿಷ್ಠ ಮಾರಾಟ ಬೆಲೆ 256GB ಮಾದರಿಗೆ ₹1,59,900, 512GB ಮಾದರಿಗೆ ₹1,79,900 ಹಾಗೂ 1TB ಸಾಮರ್ಥ್ಯದ ಐಫೋನ್ 15 ಪ್ರೊ ಮ್ಯಾಕ್ಸ್ ಬೆಲೆ ₹1,99,900.

ಒಟ್ಟಾರೆಯಾಗಿ ಹೇಳುವುದಿದ್ದರೆ, ಎ 17 ಪ್ರೊ ಬಯೋನಿಕ್ ಚಿಪ್‌ಸೆಟ್, ಐಒಎಸ್ 17ರ ಅತ್ಯಾಧುನಿಕ ಕಾರ್ಯಾಚರಣಾ ವ್ಯವಸ್ಥೆ, ಮೇಲ್ದರ್ಜೆಗೇರಿಸಿದ ಕ್ಯಾಮೆರಾ ವೈಶಿಷ್ಟ್ಯಗಳು, ಯುಎಸ್‌ಬಿ ಸಿ ಪೋರ್ಟ್ ಮತ್ತು ಹೊಸ ಆ್ಯಕ್ಷನ್ ಬಟನ್ – ಈ ಸುಧಾರಣೆಗಳೊಂದಿಗೆ ಐಫೋನ್ 15 ಪ್ರೊ ಮ್ಯಾಕ್ಸ್ ಗಮನ ಸೆಳೆಯುತ್ತದೆ. ಗರಿಷ್ಠ ತೂಕದ ಮತ್ತು ಗ್ರಾಫಿಕ್ಸ್ ಇರುವ ಗೇಮ್ ಆಡುವವರಿಗಂತೂ ಇದು ಇಷ್ಟವಾಗಬಹುದು.

iPhone 15 Pro Max Review [Gadget Review] by Avinash B Published in Prajavani on 20 Oct 2023

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

Recent Posts

ಒಂದೇ ಫೋನ್‌ನಲ್ಲಿ ಎರಡು WhatsApp ಖಾತೆ ಬಳಸುವುದು ಹೇಗೆ?

ಕಳೆದ ಅಕ್ಟೋಬರ್ 19ರಂದು ಮೆಟಾ ಒಡೆತನದ WhatsApp ಸಂಸ್ಥೆಯೇ ತನ್ನ ಆ್ಯಪ್‌ಗೆ ಹೊಸ ಅಪ್‌ಡೇಟ್ ನೀಡಿದ್ದು, ಎರಡು ವಾಟ್ಸ್ಆ್ಯಪ್ ಖಾತೆಗಳನ್ನು…

5 months ago

AI Images: Text ಬಳಸಿ ಚಿತ್ರ ತಯಾರಿಸುವುದು ಹೇಗೆ?

AI Images: ನಮ್ಮ ಕಲ್ಪನೆಯನ್ನು ಎಐ ಎಂಜಿನ್‌ಗೆ ಟೆಕ್ಸ್ಟ್ (ಪಠ್ಯ) ಮೂಲಕ ಊಡಿಸಿದರೆ ಸಾಕು, ಕ್ಷಣ ಮಾತ್ರದಲ್ಲಿ ನೀವಂದುಕೊಂಡ ಚಿತ್ರವೊಂದು…

5 months ago

ಬ್ರಾಡ್‌ಬ್ಯಾಂಡ್ ವೇಗ: ಎಂಬಿಪಿಎಸ್ ಎಂದರೆ ಏನು? ನೀವು ಯಾಮಾರುವುದು ಎಲ್ಲಿ?

ಹಾರ್ಡ್ ಡ್ರೈವ್ ಅಥವಾ ಸ್ಟೋರೇಜ್ ಡ್ರೈವ್‌ಗಳಲ್ಲಿರುವ ಫೈಲ್‌ಗಳ ವಿನಿಮಯದ ಸಂದರ್ಭದಲ್ಲಿ ಬಳಸುವುದು ಮೆಗಾಬೈಟ್ಸ್ ಎಂಬ ಪ್ರಮಾಣವನ್ನು. ಇಂಟರ್ನೆಟ್ ವೇಗವನ್ನು ಅಳೆಯುವುದು…

5 months ago

Apple iPhone 15 Plus Review: ಪ್ರೊ ಮಾದರಿಗಳ ವೈಶಿಷ್ಟ್ಯವಿರುವ ಐಫೋನ್ 15 ಪ್ಲಸ್

Apple iPhone 15 Plus Review: ಲೈಟ್ನಿಂಗ್ ಪೋರ್ಟ್ ಬದಲು ಟೈಪ್ ಸಿ ಚಾರ್ಜಿಂಗ್ ಪೋರ್ಟ್, ಡೈನಮಿಕ್ ಐಲೆಂಡ್, ಹೊಸ…

6 months ago

Type in Kannada: ಐಫೋನ್, ಆಂಡ್ರಾಯ್ಡ್ ಫೋನ್‌ಗಳಲ್ಲಿ ಕನ್ನಡ ಟೈಪಿಂಗ್ ಈಗ ಮತ್ತಷ್ಟು ಸುಲಭ

Type in Kannada: ಗೂಗಲ್‌ನ ಆಂಡ್ರಾಯ್ಡ್ ಹಾಗೂ ಆ್ಯಪಲ್‌ನ ಐಫೋನ್ ಸ್ಮಾರ್ಟ್‌ಫೋನ್‌ಗಳಲ್ಲಿ ಕನ್ನಡ ಟೈಪಿಂಗ್ ಸುಲಭವಾಗಿಸುವ ಸಾಕಷ್ಟು ಖಾಸಗಿ ಕೀಬೋರ್ಡ್…

6 months ago

ಒಟಿಪಿ ಇಲ್ಲದೆಯೂ ಬ್ಯಾಂಕ್ ಖಾತೆಗೆ ಕನ್ನ: ತಡೆಯಲು Aadhaar Biometric Lock ಮಾಡಿಕೊಳ್ಳಿ

Aadhaar Biometric Lock ಬಗ್ಗೆ ತಿಳಿಯೋಣ ಬನ್ನಿ. ಒಟಿಪಿ ಇಲ್ಲದೆಯೇ ಹಣ ಹೋಗುವುದನ್ನು ತಡೆಯಲು ನಮ್ಮ ಆಧಾರ್ ಬಯೋಮೆಟ್ರಿಕ್ ವ್ಯವಸ್ಥೆಗೇ…

7 months ago