Apple iPhone 15 Plus Review: ಪ್ರೊ ಮಾದರಿಗಳ ವೈಶಿಷ್ಟ್ಯವಿರುವ ಐಫೋನ್ 15 ಪ್ಲಸ್

Apple iPhone 15 Plus Review: ಆ್ಯಪಲ್ ಐಫೋನ್ ಪ್ರೊ ಮಾಡೆಲ್‌ಗಳ ಹಲವು ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿರುವ ಐಫೋನ್ 15 ಪ್ಲಸ್, ಹೆಚ್ಚು ಗಮನ ಸೆಳೆಯುತ್ತದೆ. ಇದಕ್ಕೆ ಪ್ರಧಾನ ಕಾರಣ ಅದರ ಬೆಲೆ. ಅತ್ತ ಪ್ರಾಥಮಿಕ ಹಂತದ್ದೂ ಅಲ್ಲದ, ಬಹುತೇಕ ಪ್ರೊ ವೈಶಿಷ್ಟ್ಯಗಳನ್ನು ಹೊಂದಿರುವ ಐಫೋನ್ ಇದು. ದುಬಾರಿ ಶ್ರೇಣಿಯ ಫೋನ್‌ಗಳಿಗೆ ಹೋಲಿಸಿದರೆ ಕಡಿಮೆ ಬೆಲೆಯಲ್ಲಿ ಅತ್ಯಾಧುನಿಕ ಫೋನ್ ಎಂದುಕೊಳ್ಳಬಹುದು. ಇತ್ತೀಚೆಗೆ ಬಿಡುಗಡೆಯಾದ ಐಫೋನ್ 15 ಸರಣಿಯಲ್ಲಿ ಪ್ರಜಾವಾಣಿಗೆ ರಿವ್ಯೂಗೆ ದೊರೆತಿರುವ ಐಫೋನ್ 15 ಪ್ಲಸ್ ಫೋನನ್ನು ಮೂರು ವಾರಗಳ ಕಾಲ ಬಳಸಿ ನೋಡಿದ ಬಳಿಕ ಹೇಗಿದೆ ಇದು? ವಿಮರ್ಶೆ ಇಲ್ಲಿದೆ.

ಐಫೋನ್ 15 ಪ್ಲಸ್ ಆರಂಭಿಕ ಬೆಲೆ ₹90,000 ಆಗಿದ್ದು, ಅಕ್ಷರಶಃ ಹೇಳುವುದಾದರೆ ಅಗ್ಗದ ದರವೇನಲ್ಲ. ಆದರೆ, ಪ್ರೊ ಮಾದರಿಯ ಐಫೋನ್‌ಗಳಿಗೆ ಹೋಲಿಸಿದರೆ ಬೆಲೆ ಕಡಿಮೆ ಎಂದುಕೊಳ್ಳಬಹುದು.

ಐಫೋನ್ 15 ಪ್ರೊ ಹಾಗೂ ಐಫೋನ್ 15 ಪ್ರೊ ಮ್ಯಾಕ್ಸ್‌ಗಳಂತೆಯೇ ಇದರಲ್ಲಿ ಲೈಟ್ನಿಂಗ್ ಪೋರ್ಟ್ ಬದಲು ಟೈಪ್ ಸಿ ಚಾರ್ಜಿಂಗ್ ಪೋರ್ಟ್, ಡೈನಮಿಕ್ ಐಲೆಂಡ್, ಹೊಸ ಚಿಪ್ ಮತ್ತು ವಿನೂತನ ಕ್ಯಾಮೆರಾ ವ್ಯವಸ್ಥೆ ಗಮನ ಸೆಳೆಯುತ್ತದೆ.

ವಿನ್ಯಾಸ
ಹಿಂದಿನ ಐಫೋನ್ 14 ಪ್ಲಸ್‌ಗೆ ಹೋಲಿಸಿದರೆ ವಿನ್ಯಾಸದಲ್ಲಿ ಎದ್ದುಕಾಣುವ ಬದಲಾವಣೆಗಳೆಂದರೆ ಡೈನಮಿಕ್ ಐಲೆಂಡ್ ಮತ್ತು ಟೈಪ್ ಸಿ ಪೋರ್ಟ್. ಹಿಂಭಾಗದ ಕವಚದಲ್ಲಿ ಹೊಳೆಯುವ ಗ್ಲಾಸೀ ವಿನ್ಯಾಸದ ಬದಲು ಮ್ಯಾಟ್ ಫಿನಿಶ್ ಇದೆ. 201 ಗ್ರಾಂ ತೂಕವಿದ್ದರೂ ತೀರಾ ಭಾರ ಎನ್ನಿಸುವುದಿಲ್ಲ. ಪ್ರಾರಂಭಿಕ ಶ್ರೇಣಿಯ ಐಫೋನ್ 15ಕ್ಕಿಂತ ಇದು ಸ್ವಲ್ಪಮಟ್ಟಿಗೆ ದೊಡ್ಡದು. 6.7 ಇಂಚಿನ XDR OLED ಪ್ಯಾನೆಲ್ ಇದೆ. ಆದರೆ 60Hz ರಿಫ್ರೆಶ್ ರೇಟ್ ಇದೆ. ಈಗಿನ ಬಹುತೇಕ ಫೋನ್‌ಗಳಲ್ಲಿ 120Hz ರಿಫ್ರೆಶ್ ರೇಟ್ ಇರುವುದರಿಂದ ಅತ್ಯಾಧುನಿಕ ಆನಿಮೇಶನ್‌ಗಳುಳ್ಳ ಗೇಮ್ ಆಡುವುದಕ್ಕೆ ಮತ್ತು 8ಕೆ ವಿಡಿಯೊ ವೀಕ್ಷಣೆಗೆ, ಕ್ಷಿಪ್ರಗತಿಯ ಬ್ರೌಸಿಂಗ್‌ಗೆ ಅನುಕೂಲವಾಗುತ್ತಿತ್ತು.

ಡಿಸ್‌ಪ್ಲೇ ಚೆನ್ನಾಗಿದೆ, ಬಿಸಿಲಿನಲ್ಲಿ ಫೋನ್ ನೋಡುವುದೂ ಕಣ್ಣಿಗೆ ಅನುಕೂಲಕರವಾಗಿದೆ. ಚಿತ್ರ ಮತ್ತು ವಿಡಿಯೊಗಳ ಅದ್ಭುತವಾದ ವರ್ಣವೈಭವವನ್ನು ಇದರಲ್ಲಿ ಆನಂದಿಸಬಹುದು.

ಕಾರ್ಯನಿರ್ವಹಣೆ ಹೇಗಿದೆ
ಐಫೋನ್ 15ರಂತೆಯೇ ಐಫೋನ್ 15 ಪ್ಲಸ್‌ನಲ್ಲಿಯೂ ಎ16 ಬಯೋನಿಕ್ ಚಿಪ್ ಇದ್ದು, 14 ಸರಣಿಯ ಪ್ರೊ ಫೋನ್‌ಗಳಂತೆಯೇ ಉತ್ತಮ ವೇಗದ ಕಾರ್ಯಾಚರಣೆ ಸಾಧ್ಯವಾಗಿದೆ. ಆಸ್ಫಾಲ್ಟ್ 9, ಕಾಲ್ ಆಫ್ ಡ್ಯೂಟಿ ಮುಂತಾದ ಭರ್ಜರಿ ಗ್ರಾಫಿಕ್ಸ್ ಇರುವ ಗೇಮ್‌ಗಳನ್ನು ಆಡುವುದಕ್ಕೆ ಯಾವುದೇ ತೊಡಕಾಗಿಲ್ಲ. 14 ಪ್ರೊ ಮಾದರಿಯಲ್ಲಿ ಇದೇ ಚಿಪ್ ಬಳಕೆಯಾಗಿತ್ತು. ಬ್ರೌಸಿಂಗ್ ವೇಗವಾಗಿದೆ, ವಿಡಿಯೊ ವೀಕ್ಷಣೆ, ಫೋಟೊಗಳ ವೀಕ್ಷಣೆ ಅತ್ಯಂತ ಸುಲಲಿತವೂ, ಕಣ್ಣಿಗೆ ಹಿತಕರವೂ ಆಗಿದೆ.

ಕ್ಯಾಮೆರಾ
48 ಮೆಗಾಪಿಕ್ಸೆಲ್ ಪ್ರಧಾನ ಕ್ಯಾಮೆರಾದೊಂದಿಗೆ 12MP ಅಲ್ಟ್ರಾ ವೈಡ್ ಆ್ಯಂಗಲ್ ಸೆನ್ಸರ್ ಇದೆ. ಜೊತೆಗೆ 12MP ಸೆಲ್ಫೀ ಕ್ಯಾಮೆರಾ ಇದೆ. ಸಿನಿಮ್ಯಾಟಿಕ್ ವಿಡಿಯೊ ವೈಶಿಷ್ಟ್ಯವಂತೂ ಚೆನ್ನಾಗಿದೆ. ವಿಡಿಯೊ ರೆಕಾರ್ಡಿಂಗ್‌ನಲ್ಲಿ ಆಂಡ್ರಾಯ್ಡ್ ಫೋನ್‌ಗಳಿಗಿಂತ ಐಫೋನ್ ಚೆನ್ನಾಗಿದೆ ಎಂಬುದು ಬಹುತೇಕರು ಒಪ್ಪುವ ವಿಚಾರ. ಅದು ಇಲ್ಲಿಯೂ ಸಾಬೀತಾಗಿದೆ. ವಿಡಿಯೊ ಕ್ರಿಯೇಟರ್‌ಗಳಿಗೆ ವ್ಲಾಗರ್ (ವಿಡಿಯೊ ಬ್ಲಾಗರ್) ಮತ್ತು ಫೋನ್‌ಗಳ ಮೂಲಕವೇ ಚಿತ್ರೀಕರಣ ನಡೆಸುವವರಿಗೆ ಈ ಫೋನ್ ಖಂಡಿತಾ ಇಷ್ಟವಾಗಬಹುದು.

ವಿಡಿಯೊ ಗುಣಮಟ್ಟವಂತೂ ಚೆನ್ನಾಗಿದೆ. ವ್ಯತ್ಯಸ್ತ ಬೆಳಕಿನ ಪರಿಸ್ಥಿತಿಗಳಲ್ಲಿ ಸ್ಥಿರಚಿತ್ರಗಳೂ ಚೆನ್ನಾಗಿಯೇ ಮೂಡಿಬರುತ್ತವೆ. ಫೋಟೊಗಳಲ್ಲಿ ನಿಖರತೆ ಮತ್ತು ಡೀಟೇಲ್ಸ್ (ವಿವರಗಳು) ಎದ್ದುಕಾಣುತ್ತದೆ. 2x ಆಪ್ಟಿಕಲ್ ಝೂಮ್ ಇದ್ದು, ಸ್ವಲ್ಪ ಝೂಮ್ ಮಾಡಿದರೆ ಚಿತ್ರದ ಗುಣಮಟ್ಟಕ್ಕೆ ಧಕ್ಕೆಯಾಗುವುದಿಲ್ಲ. ಮತ್ತು ಪೋರ್ಟ್ರೇಟ್ ಫೋಟೋಗ್ರಫಿ ಗಮನಿಸಬೇಕಾದ ವಿಚಾರ. ಹಿನ್ನೆಲೆಯನ್ನು ಮಬ್ಬಾಗಿಸುವ ವ್ಯವಸ್ಥೆಯಲ್ಲಿ ಉತ್ತಮ ಪೋರ್ಟ್ರೇಟ್ ಫೋಟೊಗಳು ಮೂಡುತ್ತವೆ.

ಬ್ಯಾಟರಿ
ಐಫೋನ್ 15 ಪ್ಲಸ್‌ನಲ್ಲಿ ಹೆಚ್ಚು ಇಷ್ಟವಾಗಿದ್ದು ಬ್ಯಾಟರಿ. ಜಾಸ್ತಿ ಬಳಸಿದರೂ ಪಕ್ಕನೇ ಬ್ಯಾಟರಿ ಚಾರ್ಜ್ ಖಾಲಿಯಾಗುವುದಿಲ್ಲ. ಉದಾಹರಣೆಗೆ, ನಿರಂತರ ಒಂದು ಗಂಟೆ ಯೂಟ್ಯೂಬ್ ವಿಡಿಯೊ ವೀಕ್ಷಿಸಿದರೂ ಶೇ.5ರಷ್ಟು ಮಾತ್ರ ಬ್ಯಾಟರಿ ಚಾರ್ಜ್ ಖರ್ಚಾಗಿತ್ತು. ಸಾಮಾನ್ಯ ಬಳಕೆಯವರಿಗಂತೂ ಎರಡು ದಿನಗಳಿಗೆ ಬ್ಯಾಟರಿ ಬಗ್ಗೆ ಚಿಂತೆ ಬೇಕಿಲ್ಲ. ಟೈಪ್ ಸಿ ಪೋರ್ಟ್ ಮೂಲಕ ಚಾರ್ಜಿಂಗ್ ಅನುಕೂಲಕರವಾಗಿದೆ. ಈ ಫೋನ್ ಸದ್ಯ 15W ವೇಗದ ಚಾರ್ಜಿಂಗನ್ನು ಬೆಂಬಲಿಸುತ್ತಿದೆ.

ಮೂರು ವಾರಗಳ ಬಳಕೆಯಲ್ಲಿ ಗಮನಿಸಿದಂತೆ, ಐಫೋನ್ 15 ಪ್ಲಸ್ ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಉತ್ತಮ ಸ್ಮಾರ್ಟ್‌ಫೋನ್. ಐಫೋನ್ ಪ್ರೊ ಮಾದರಿಯ ಫೋನ್‌ಗಳಲ್ಲಿರುವ ವೈಶಿಷ್ಟ್ಯಗಳನ್ನೂ ಒಳಗೊಂಡು, ಬೇರೆ ಐಫೋನ್‌ಗಳ ಹೋಲಿಕೆಯಲ್ಲಿ ಕಡಿಮೆ ಬೆಲೆಗೆ ಉತ್ತಮ ಕ್ಯಾಮೆರಾ, ಉತ್ತಮ ಬ್ಯಾಟರಿ, ದೊಡ್ಡ ಸ್ಕ್ರೀನ್ ಇರುವ ಫೋನ್ ಇದು. ಗೇಮರ್‌ಗಳಿಗೂ ಇಷ್ಟವಾಗುವಂತಿದೆ.

Gadget iPhone 15 Plus Review by Avinash B Published in Prajavani on 09 Nov 2023

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

Recent Posts

ಒಂದೇ ಫೋನ್‌ನಲ್ಲಿ ಎರಡು WhatsApp ಖಾತೆ ಬಳಸುವುದು ಹೇಗೆ?

ಕಳೆದ ಅಕ್ಟೋಬರ್ 19ರಂದು ಮೆಟಾ ಒಡೆತನದ WhatsApp ಸಂಸ್ಥೆಯೇ ತನ್ನ ಆ್ಯಪ್‌ಗೆ ಹೊಸ ಅಪ್‌ಡೇಟ್ ನೀಡಿದ್ದು, ಎರಡು ವಾಟ್ಸ್ಆ್ಯಪ್ ಖಾತೆಗಳನ್ನು…

5 months ago

AI Images: Text ಬಳಸಿ ಚಿತ್ರ ತಯಾರಿಸುವುದು ಹೇಗೆ?

AI Images: ನಮ್ಮ ಕಲ್ಪನೆಯನ್ನು ಎಐ ಎಂಜಿನ್‌ಗೆ ಟೆಕ್ಸ್ಟ್ (ಪಠ್ಯ) ಮೂಲಕ ಊಡಿಸಿದರೆ ಸಾಕು, ಕ್ಷಣ ಮಾತ್ರದಲ್ಲಿ ನೀವಂದುಕೊಂಡ ಚಿತ್ರವೊಂದು…

5 months ago

ಬ್ರಾಡ್‌ಬ್ಯಾಂಡ್ ವೇಗ: ಎಂಬಿಪಿಎಸ್ ಎಂದರೆ ಏನು? ನೀವು ಯಾಮಾರುವುದು ಎಲ್ಲಿ?

ಹಾರ್ಡ್ ಡ್ರೈವ್ ಅಥವಾ ಸ್ಟೋರೇಜ್ ಡ್ರೈವ್‌ಗಳಲ್ಲಿರುವ ಫೈಲ್‌ಗಳ ವಿನಿಮಯದ ಸಂದರ್ಭದಲ್ಲಿ ಬಳಸುವುದು ಮೆಗಾಬೈಟ್ಸ್ ಎಂಬ ಪ್ರಮಾಣವನ್ನು. ಇಂಟರ್ನೆಟ್ ವೇಗವನ್ನು ಅಳೆಯುವುದು…

6 months ago

Type in Kannada: ಐಫೋನ್, ಆಂಡ್ರಾಯ್ಡ್ ಫೋನ್‌ಗಳಲ್ಲಿ ಕನ್ನಡ ಟೈಪಿಂಗ್ ಈಗ ಮತ್ತಷ್ಟು ಸುಲಭ

Type in Kannada: ಗೂಗಲ್‌ನ ಆಂಡ್ರಾಯ್ಡ್ ಹಾಗೂ ಆ್ಯಪಲ್‌ನ ಐಫೋನ್ ಸ್ಮಾರ್ಟ್‌ಫೋನ್‌ಗಳಲ್ಲಿ ಕನ್ನಡ ಟೈಪಿಂಗ್ ಸುಲಭವಾಗಿಸುವ ಸಾಕಷ್ಟು ಖಾಸಗಿ ಕೀಬೋರ್ಡ್…

6 months ago

iPhone 15 Pro Max Review: ಗೇಮರ್‌ಗಳಿಗೆ ಹಬ್ಬ – ಆ್ಯಪಲ್‌ನ ಶಕ್ತಿಶಾಲಿ, ಐಷಾರಾಮಿ ಸಾಧನ

iPhone 15 Pro Max Review: ವಿನೂತನವಾದ ಟೈಟಾನಿಯಂ ಚೌಕಟ್ಟು ಐಷಾರಾಮದ ಅನುಭವ. ಲೈಟ್ನಿಂಗ್ ಪೋರ್ಟ್ ಬದಲು ಯುಎಸ್‌ಬಿ ಸಿ…

7 months ago

ಒಟಿಪಿ ಇಲ್ಲದೆಯೂ ಬ್ಯಾಂಕ್ ಖಾತೆಗೆ ಕನ್ನ: ತಡೆಯಲು Aadhaar Biometric Lock ಮಾಡಿಕೊಳ್ಳಿ

Aadhaar Biometric Lock ಬಗ್ಗೆ ತಿಳಿಯೋಣ ಬನ್ನಿ. ಒಟಿಪಿ ಇಲ್ಲದೆಯೇ ಹಣ ಹೋಗುವುದನ್ನು ತಡೆಯಲು ನಮ್ಮ ಆಧಾರ್ ಬಯೋಮೆಟ್ರಿಕ್ ವ್ಯವಸ್ಥೆಗೇ…

7 months ago