ಏನಿದು ‘ಕೂ’ ಆ್ಯಪ್? ಇದೋ ಇಲ್ಲಿದೆ ಮಾಹಿತಿ

0
267

ಗಾಲ್ವನ್ ಕಣಿವೆಯಲ್ಲಿ ಚೀನಾ ದುಸ್ಸಾಹಸಕ್ಕಿಳಿದು ಭಾರತೀಯ ಸೈನಿಕರ ಮೇಲೆ ದಾಳಿ ಮಾಡಲಾರಂಭಿಸಿದಾಗ ಭಾರತೀಯರಲ್ಲಿ ಚೀನಾದ ವಿರುದ್ಧ ಆಕ್ರೋಶ ಮುಗಿಲುಮುಟ್ಟಿತ್ತು. ಚೀನಾದ ಈ ಪರಿಯಾದ ಆಷಾಢಭೂತಿತನವಷ್ಟೇ ಅಲ್ಲದೆ, ಭಾರತೀಯ ಅರ್ಥ ವ್ಯವಸ್ಥೆಯ ಮೇಲೂ ತನ್ನ ಕಬಂಧ ಬಾಹುಗಳನ್ನು ಚಾಚಿದ್ದನ್ನು ಮನಗಂಡ ಭಾರತ ಸರ್ಕಾರವು, ಅತ್ಯಂತ ಜನಪ್ರಿಯವಾಗಿದ್ದ ಚೀನೀ ಆ್ಯಪ್‌ಗಳನ್ನು ನಿಷೇಧಿಸಿತು. ಅಂತೆಯೇ ಆತ್ಮ ನಿರ್ಭರ ಭಾರತದ ಕನಸಿಗೆ ಹೆಚ್ಚಿನ ಒತ್ತು ನೀಡಿದ ಸಂದರ್ಭದಲ್ಲಿ ಕೇಳಿ ಬಂದಿದ್ದೇ ಟ್ವಿಟರ್‌ಗೆ ಪರ್ಯಾಯವಾಗಿರುವ ದೇಸೀ ಆ್ಯಪ್ ಎಂದು ಹೆಸರು ಪಡೆದ ‘ಕೂ’. ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೂಡ ತಮ್ಮ ಮಾಸಿಕ ‘ಮನದ ಮಾತು’ ಕಾರ್ಯಕ್ರಮದಲ್ಲಿ ಕನ್ನಡಿಗರೇ ರೂಪಿಸಿದ ಸಾಮಾಜಿಕ ಮಾಧ್ಯಮ ‘ಕೂ’ ಬಗ್ಗೆ ಉಲ್ಲೇಖಿಸಿದ ಹಂತದಲ್ಲಿ ಸಾಕಷ್ಟು ಮಂದಿ ಭಾರತೀಯರು ಅದನ್ನು ಅಪ್ಪಿಕೊಂಡುಬಿಟ್ಟಿದ್ದರು.

ತತ್ಪರಿಣಾಮವಾಗಿ ಮಾರ್ಚ್ 2020ರಿಂದ ಆರಂಭವಾಗಿದ್ದ ಕೂ ಆ್ಯಪ್, ಹನ್ನೊಂದೇ ತಿಂಗಳಲ್ಲಿ ಬಹುಭಾಷಾ ವೇದಿಕೆಗಳ ಮೂಲಕ 30 ಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ತನ್ನತ್ತ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಇದು ಕನ್ನಡಿಗರೇ ರೂಪಿಸಿರುವ, ತಮ್ಮ ಮನದ ಅನಿಸಿಕೆ ಹಂಚಿಕೊಳ್ಳುವ ವೇದಿಕೆ. ಚೀನಾ ಸೇರಿದಂತೆ ವಿದೇಶೀ ಮೂಲದ ಆ್ಯಪ್‌ಗಳು ಡೇಟಾ ಕಳ್ಳತನ ಮಾಡುವುದು, ಬಳಕೆದಾರರ ಮಾಹಿತಿ ಮಾರಿ ದುಡ್ಡು ಮಾಡುವುದು, ವ್ಯಕ್ತಿಯ ಖಾಸಗಿತನಕ್ಕೆ ಧಕ್ಕೆ ತರುವುದೇ ಮುಂತಾದ ಆರೋಪಗಳ ಮಧ್ಯೆ, ಸ್ವದೇಶೀ ಆ್ಯಪ್ ‘ಕೂ’ ವೇದಿಕೆಗೆ ಕಳೆದೆರಡು ದಿನಗಳಿಂದ ಭರ್ಜರಿ ವಲಸೆ ಶುರುವಾಗಿದೆ.

ಟ್ವಿಟರ್ ಭಾರತದ ವಿರುದ್ಧದ ಪೋಸ್ಟ್‌ಗಳಿಗೆ ಹೆಚ್ಚು ಒತ್ತು ನೀಡುತ್ತಿದೆ ಎಂಬ ಆರೋಪಗಳ ನಡುವೆ ಭಾರತೀಯ ‘ಕೂ’ ಆ್ಯಪ್‌ಗೆ ವಲಸೆ ಬರುತ್ತಿರುವುದರಿಂದಾಗಿ ಕಳೆದೆರಡು ದಿನಗಳಲ್ಲಿ ಸರ್ವರ್‌ಗೆ ಭಾರಿ ಒತ್ತಡ ಬಿದ್ದಿದೆ. ತಮ್ಮದು ಸಣ್ಣ ಸ್ಟಾರ್ಟಪ್ ಕಂಪನಿಯಾಗಿದ್ದು, ಈಗಷ್ಟೇ ಪ್ರಸಿದ್ಧಿಗೆ ಬರುತ್ತಿದೆ. ಈಗ್ಗೆ ಎರಡು ದಿನಗಳಿಂದ ದಿಢೀರ್ ಆಗಿ ಬಳಕೆದಾರರ ಸಂಖ್ಯೆ ಹೆಚ್ಚುತ್ತಿರುವುದರಿಂದ ಸರ್ವರ್ ಮೇಲೆ ಒತ್ತಡ ಬಿದ್ದಿದ್ದು ಹೌದು. ಇದಕ್ಕೆ ಬೇಕಾದ ಹಾರ್ಡ್‌ವೇರ್ ಸಹಿತ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದಿದ್ದಾರೆ ಇದರ ಸಹ ಸಂಸ್ಥಾಪಕ ಹಾಗೂ ಸಿಇಒ ಅಪ್ರಮೇಯ ರಾಧಾಕೃಷ್ಣ.

‘ಕೂ’ಗೆ ಬನ್ನಿ ಎಂದು ಕೇಂದ್ರ ಸಚಿವ ಪೀಯೂಷ್ ಗೋಯಲ್ ಮಂಗಳವಾರವಷ್ಟೇ ಟ್ವೀಟ್ ಮಾಡಿ ಸೇರಿಕೊಂಡಿದ್ದಾರೆ. ನಟ ಅನುಪಮ್ ಖೇರ್, ರಾಜಕಾರಣಿ ಅಮಿತ್ ಮಾಳವೀಯ ಮುಂತಾದವರೂ ಇದರಲ್ಲಿದ್ದು, ನಟಿ ಕಂಗನಾ ರಾನೌತ್ ಕೂಡ ಇದನ್ನು ಬಳಸುವುದಾಗಿ ಬುಧವಾರ ಟ್ವೀಟ್ ಮಾಡಿದ್ದಾರೆ. ಪಿಐಬಿ, ಬಿಎಸ್ಎನ್ಎಲ್ ಮುಂತಾದ ಸರಕಾರಿ ಸಂಸ್ಥೆಗಳು, ಪತ್ರಕರ್ತರು, ಪೊಲೀಸರು ಕೂಡ ಕೂ ಆ್ಯಪ್ ಬಳಸುತ್ತಿರುವುದು ಸಂತಸದ ಸಂಗತಿ ಎಂದಿದ್ದಾರೆ ಅಪ್ರಮೇಯ.

ಕರ್ನಾಟಕದಿಂದ ಮುಖ್ಯಮಂತ್ರಿ, ಸಚಿವರು, ಪೊಲೀಸರು ಕೂಡ ಈ ವೇದಿಕೆಯಲ್ಲಿದ್ದಾರೆ. ಇದರ ಜೊತೆಗೆ ತಮಿಳು, ತೆಲುಗು, ಹಿಂದಿ, ಇಂಗ್ಲಿಷ್ ಭಾಷೆಗಳಲ್ಲಿಯೂ ‘ಕೂ’ ಕಾರ್ಯಾಚರಿಸುತ್ತಿದ್ದು, ಮುಂದೆ ಮರಾಠಿ, ಬಾಂಗ್ಲಾ, ಮಲಯಾಳಂ, ಗುಜರಾತಿ, ಒಡಿಯಾ, ಪಂಜಾಬಿ, ಅಸ್ಸಾಮಿ ಭಾಷೆಗಳಲ್ಲಿಯೂ ಬರಲಿದೆ. ಕೆಲವು ಭಾಷೆಗಳ ಕೂ ವೇದಿಕೆಗಳು ಈಗಾಗಲೇ ಪ್ರಾಯೋಗಿಕ ಹಂತದಲ್ಲಿವೆ.

ಈ ಆ್ಯಪ್‌ನಲ್ಲಿ ಕೂಡ ಇತರ ಸಾಮಾಜಿಕ ಮಾಧ್ಯಮಗಳಂತೆಯೇ ಧ್ವನಿ, ಪಠ್ಯ, ವಿಡಿಯೊ ಮೂಲಕ ಜನರು ಅಭಿಪ್ರಾಯ ವ್ಯಕ್ತಪಡಿಸಬಹುದು. ಸದ್ಯಕ್ಕೆ ಫೋನ್ ನಂಬರ್ ಮುಖಾಂತರ ಕೂ ಆ್ಯಪ್‌ನಲ್ಲಿ ನೋಂದಾಯಿಸಿಕೊಂಡು ಬಳಕೆ ಮಾಡಿಕೊಳ್ಳಬಹುದಾಗಿದೆ.

My article published in Prajavani (Aala Agala) on 11 Feb 2021

LEAVE A REPLY

Please enter your comment!
Please enter your name here