ಯಕ್ಷಗಾನದ ಮರೆಯಲಾಗದ ಮಹಾನುಭಾವರು: ಯಕ್ಷಾನುಗ್ರಹ ವಾಟ್ಸ್ಆ್ಯಪ್ ಗ್ರೂಪಿನ ಸದುಪಯೋಗ

0
373

ಸದಾ ಸಕ್ರಿಯವಾಗಿದ್ದ ಯಕ್ಷಗಾನ ಕಲಾವಿದರು, ಪ್ರೇಕ್ಷಕರು, ಆಸಕ್ತರೆಲ್ಲರ ಮನಸ್ಸುಗಳಲ್ಲಿ ಕೊರೊನಾ ವೈರಸ್ ಕಾರಣದ ಲಾಕ್‌ಡೌನ್ ಎಂಬುದು ಜಡ ಮೂಡಿಸಿರುವುದು ಸಹಜ. ಗೆಜ್ಜೆ ಕಟ್ಟಿ ಕುಣಿಯುವಂತಿಲ್ಲ, ಅರ್ಥವೈಭವ, ಗಾನ-ವಾದನ ವೈಭವಗಳಿಲ್ಲ. ಕ್ರಿಯಾಶೀಲ ಕಲಾವಿದ ಮನಸ್ಸುಗಳಿಗೆ ಆವರಿಸಿರುವ ಈ ಮೌಢ್ಯವನ್ನು ಕಳೆಯಲು ಅನ್ಯ ಸಾಮಾಜಿಕ ಜಾಲತಾಣಗಳು ಸಕ್ರಿಯವಾಗಿದ್ದರೂ, ಅಲ್ಲೆಲ್ಲ ಕಾಡುಹರಟೆಗಳಿರಬಹುದು, ಫೇಕ್ ಸುದ್ದಿಗಳಿರಬಹುದು ಅಥವಾ ಫೇಕ್ ಫಾರ್ವರ್ಡ್ ಸಂದೇಶಗಳ ಕುರಿತು ಚರ್ಚೆ, ಜಗಳ, ವಾದ-ವಾಗ್ವಾದಗಳಿರಬಹುದು.

ಆದರೆ, ಯಕ್ಷಗಾನೀಯ ಮನಸ್ಸುಗಳನ್ನೆಲ್ಲಾ ಒಟ್ಟುಗೂಡಿಸಿ, ಸಂದುಹೋದ ಆ ಕಾಲದ ಮರೆತುಹೋದ ಮಹಾನುಭಾವರನ್ನು ನೆನಪಿಸುವ ಕಾರ್ಯ ನಡೆಸುತ್ತಿರುವ ‘ಯಕ್ಷಾನುಗ್ರಹ’ ಎಂಬ ವಾಟ್ಸ್ಆ್ಯಪ್ ಬಳಗವೊಂದು ತನ್ನ ಸಕ್ರಿಯ ಚಟುವಟಿಕೆಗಳ ಮೂಲಕ ಗಮನ ಸೆಳೆದಿದೆ, ಅಷ್ಟೇ ಅಲ್ಲ, ಉಳಿದ ಸಾಮಾಜಿಕ ಜಾಲತಾಣಗಳ ಗ್ರೂಪ್‌ಗಳಿಗೆ ಮಾದರಿಯಾಗಿದೆ.

ಸಾಮಾಜಿಕ ಜಾಲತಾಣಗಳನ್ನು ಉಪಯುಕ್ತ ಚಟುವಟಿಕೆಗಳಿಗೆ ಬಳಸಿಕೊಳ್ಳಬಹುದು ಎಂಬುದನ್ನು ಮಾಡಿ ತೋರಿಸಿದ್ದಾರೆ ಧರ್ಮಸ್ಥಳ ಯಕ್ಷಗಾನ ಮೇಳದ ಭಾಗವತರಾದ ಸಿರಿಬಾಗಿಲು ರಾಮಕೃಷ್ಣ ಮಯ್ಯ. ಯಕ್ಷಗಾನವನ್ನು ಇಂದಿನ ವೈಭವೋಪೇತ ಸ್ಥಿತಿಗೆ ತಂದು ನಿಲ್ಲಿಸಿದ ಮಹನೀಯರನ್ನು ಸ್ಮರಿಸಿಕೊಳ್ಳುವ ಕಾರ್ಯವು ಅವರ ಮುಂದಾಳುತ್ವದಲ್ಲಿ ಈ ವೇದಿಕೆಯಲ್ಲಿ ಪ್ರತಿದಿನವೂ ನಡೆಯುತ್ತಿದೆ. ಇಲ್ಲಿ ಎಲ್ಲ ಸದಸ್ಯರೂ ಸಕ್ರಿಯರಾಗಿರುತ್ತಾರೆ, ತಮ್ಮ ಯಕ್ಷಗಾನದ ಹಳೆಯ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.

2021ರ ಮೇ 26ರಂದು ‘ಮರೆಯಲಾಗದ ಮಹಾನುಭಾವರು’ ಸರಣಿಗೆ ಗ್ರೂಪಿನ ಸದಸ್ಯರೇ ಆಗಿರುವ ಸುಮನ್‌ರಾಜ್ ನೀಲಂಗಳ ಅವರು ದಿ.ಅಗರಿ ಶ್ರೀನಿವಾಸ ಭಾಗವತರ ಕುರಿತು ಬರೆಯುವ ಮೂಲಕ ಚಾಲನೆ ದೊರೆಯಿತು. ಮುಂದೆ ಪ್ರತಿದಿನವೆಂಬಂತೆ, ದಾಸರಬೈಲು ಚನಿಯ ನಾಯ್ಕ, ಅರಾಟೆ ಮಂಜುನಾಥ, ಪಕಳಕುಂಜ ಕೃಷ್ಣ ನಾಯ್ಕ, ಬೇಲ್ತೂರು ರಾಮ ಬಳೆಗಾರ, ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್, ಹೊಸ್ತೋಟ ಮಂಜುನಾಥ ಭಾಗವತ, ಕಡತೋಕ ಮಂಜುನಾಥ ಭಾಗವತ, ಬಲಿಪ ನಾರಾಯಣ ಭಾಗವತ (ಹಿರಿಯ), ವೀರಭದ್ರ ನಾಯಕ, ಕುರಿಯ ವಿಠಲ ಶಾಸ್ತ್ರೀ, ಮೊಳಹಳ್ಳಿ ಹೆರಿಯ ನಾಯ್ಕ, ಮಿಜಾರು ಅಣ್ಣಪ್ಪ, ಕೆರೆಮನೆ ಶಿವರಾಮ ಹೆಗಡೆ, ಜತ್ತಿ ಈಶ್ವರ ಭಾಗವತರು, ಮಲ್ಪೆ ಶಂಕರನಾರಾಯಣ ಸಾಮಗರು, ನೆಬ್ಬೂರು ನಾರಾಯಣ ಭಾಗವತರು, ಗೇರುಕಟ್ಟೆ ಗಂಗಯ್ಯ ಶೆಟ್ಟಿ, ಕೊಳಗಿ ಅನಂತ ಹೆಗಡೆ, ಅಜ್ಜನಗದ್ದೆ ಗಣಪಯ್ಯ ಭಾಗವತರು, ಸಕ್ಕಟ್ಟು ಲಕ್ಷ್ಮೀನಾರಾಯಣ, ಪುತ್ತಿಗೆ ರಾಮಕೃಷ್ಣ ಜೋಯಿಸರು, ನೀಲಾವರ ಮಹಾಬಲ ಶೆಟ್ಟಿ, ಮಾಂಬಾಡಿ ನಾರಾಯಣ ಭಾಗವತರು, ಕೆರೆಮನೆ ಮಹಾಬಲ ಹೆಗಡೆ, ವಿಟ್ಲ ಗೋಪಾಲಕೃಷ್ಣ ಜೋಷಿ, ಕೆರೆಮನೆ ಶಂಭು ಹೆಗಡೆ, ದಾಮೋದರ ಮಂಡೆಚ್ಚ, ಉಪ್ಪೂರು ನಾರಣಪ್ಪ, ಶೇಣಿ ಗೋಪಾಲಕೃಷ್ಣ ಭಟ್, ಪುತ್ತೂರು ನಾರಾಯಣ ಹೆಗ್ಡೆ, 33ನೆಯವರಾಗಿ ಭಾನುವಾರದಂದು ಕೀರ್ತಿಶೇಷ ಮರವಂತೆ ನರಸಿಂಹ ದಾಸರು – ಹೀಗೆ ಯಕ್ಷಗಾನ ರಂಗಕ್ಕೆ ಕೊಡುಗೆ ಸಲ್ಲಿಸಿದ ಮಹಾಮಹಿಮರನ್ನು ಸ್ಮರಿಸಿಕೊಳ್ಳಲಾಗಿದೆ. ಈ ಸರಣಿ ಮುಂದುವರಿಯುತ್ತಲೇ ಇದೆ.

ಈ ಲೇಖನಗಳನ್ನು ಬರೆಯುವವರು ಬೇರಾರೂ ಅಲ್ಲ, ಬಳಗದಲ್ಲೇ ಇರುವ ಯಕ್ಷಗಾನ ರಂಗದಲ್ಲಿ ಸಿದ್ಧಿ, ಪ್ರಸಿದ್ಧಿ ಪಡೆದ ಕಲಾವಿದರು, ತಜ್ಞರು ಅಥವಾ ಯಕ್ಷಗಾನದ ಪ್ರೇಕ್ಷಕರೇ.

ಯಕ್ಷಗಾನೀಯ ಶೈಲಿಯಲ್ಲೇ ಕಾರ್ಯಕ್ರಮ
ಆಯಾ ದಿನಕ್ಕೆ ಒಬ್ಬ ಕಲಾವಿದರ ಪರಿಚಯ ಲೇಖನದ ಮೂಲಕ ಸ್ಮರಣೆ ಆರಂಭವಾಗುತ್ತದೆ. ಅದು ಆರಂಭವಾಗುವ ಶೈಲಿಯೂ ಯಕ್ಷಗಾನೀಯ ರೂಪದಲ್ಲೇ ಇರುತ್ತದೆ. ಅಂದರೆ, ಗಣಪತಿ ಸ್ತುತಿಯ ಯಕ್ಷಗಾನದ ಹಾಡನ್ನು ಮೊದಲು ಪೋಸ್ಟ್ ಮಾಡಲಾಗುತ್ತದೆ. ಅದನ್ನು ಆಲಿಸಿದ ಬಳಿಕ, ಬರಹಗಾರರ ಬಗ್ಗೆ ಒಂದು ಸಾಲು, ನಂತರ ಪ್ರಧಾನ ಲೇಖನ ಪೋಸ್ಟ್ ಆಗುತ್ತದೆ. ನಂತರ ಅದಕ್ಕೆ ಪೂರಕವಾಗಿ ಆ ಕಲಾವಿದರ ನೆನಪಿನ ಬುತ್ತಿಯನ್ನು ಬಳಗದಲ್ಲಿರುವವರೆಲ್ಲರೂ ಕಿರು ಬರಹಗಳ ರೂಪದಲ್ಲಿ, ಪ್ರತಿಕ್ರಿಯೆಯ ರೂಪದಲ್ಲಿ ಬಿಚ್ಚಿಡುತ್ತಾ ಹೋಗುತ್ತಾರೆ. ನಡುವೆ ಸದಸ್ಯರಿಗೆ ಒಂದು ಪ್ರಶ್ನೆ ಕೇಳಲಾಗುತ್ತದೆ. 8.30ಕ್ಕೆ ಬಹುಮಾನ ವಿಜೇತರನ್ನು ಘೋಷಿಸಲಾಗುತ್ತದೆ. 9.45ಕ್ಕೆ ಧನ್ಯವಾದ ಸಮರ್ಪಣೆ ಆದ ಬಳಿಕ, ಒಂದು ಮಂಗಳ ಪದ್ಯ ಪೋಸ್ಟ್ ಮಾಡಲಾಗುತ್ತದೆ. ಮರುದಿನದವರೆಗೂ ಗತಿಸಿದ ಕಲಾವಿದರ ಗತ ಕಾಲದ ವೈಭವವನ್ನು ನೆನಪಿಸಿಕೊಳ್ಳಲಾಗುತ್ತದೆ.

ಈ ಪ್ರಕ್ರಿಯೆಯಲ್ಲಿ ಅಂದಿನ ಕಾಲದ ಯಕ್ಷಗಾನ ವಿಡಿಯೊ ತುಣುಕುಗಳು, ಅಪರೂಪದ ಭಾವಚಿತ್ರಗಳು, ಕರಪತ್ರಗಳು – ಇವೆಲ್ಲವೂ ಸದಸ್ಯರ ಬತ್ತಳಿಕೆಯಿಂದ ಒಂದೊಂದೇ ಹೊರಬರುತ್ತವೆ. ಇವೆಲ್ಲವನ್ನೂ ಕಾಪಿಟ್ಟು, ಪ್ರಧಾನ ಹಾಗೂ ಕಿರು ಬರಹಗಳನ್ನೆಲ್ಲಾ ಕ್ರೋಡೀಕರಿಸಿ, ನೆನಪು ಶಾಶ್ವತವಾಗಿ ಉಳಿಯುವಂತೆ ಕೃತಿ ರೂಪಕ್ಕಿಳಿಸುವ ಯೋಚನೆಯೂ ಸಿರಿಬಾಗಿಲು ಪ್ರತಿಷ್ಠಾನಕ್ಕಿದೆ ಎನ್ನುತ್ತಾರೆ ಬಳಗದ ಆಡ್ಮಿನ್‌ಗಳಲ್ಲೊಬ್ಬರಾದ ರಾಘವೇಂದ್ರ ಉಡುಪ ನೇರಳಕಟ್ಟೆ.

ಯಕ್ಷಗಾನದ ತವರು ನಾಡು ಎಂದೇ ಕರೆಯಲಾಗುವ ಕಾಸರಗೋಡಿನಲ್ಲಿ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನ ನಿರ್ಮಾಣದಲ್ಲಿ ತೊಡಗಿಕೊಂಡಿರುವ ಸಿರಿಬಾಗಿಲು ರಾಮಕೃಷ್ಣ ಮಯ್ಯರು ಈ ಬಳಗದ ನಿರ್ದೇಶಕರಂತೆ ಕೆಲಸ ಮಾಡುತ್ತಾರೆ. ಇಲ್ಲಿ, ವೃಥಾ ಹರಟೆಗೆ ಅವಕಾಶವಿಲ್ಲ. ಸಂಜೆ 5ರಿಂದ 10ರವರೆಗೆ, ಬಹುತೇಕ ಎಲ್ಲರಿಗೂ ಬಿಡುವು ಇರುವ ಸಮಯದಲ್ಲಿ ಈ ಲೇಖನ ಮಾಲೆ ಇರುತ್ತದೆ. ಈ ಸಂದರ್ಭದಲ್ಲಿ ಬೇರಾವುದೇ ವಿಷಯಗಳ ಬಗ್ಗೆ ಪೋಸ್ಟ್ ಮಾಡುವಂತಿಲ್ಲ. ಈ ಶಿಸ್ತನ್ನು ಬಳಗದ ಎಲ್ಲ ಸದಸ್ಯರೂ ಪಾಲಿಸುತ್ತಿದ್ದಾರೆ. ಇಲ್ಲಿ ಗುಡ್ ಮಾರ್ನಿಂಗ್, ಗುಡ್ ನೈಟ್‌ಗಳ ಭರಾಟೆಯೂ ಇರುವುದಿಲ್ಲ.

ಯಕ್ಷರಂಗದ ಭೀಷ್ಮ ನಾಮಾಂಕಿತ ಶೇಣಿ ಗೋಪಾಲಕೃಷ್ಣ ಭಟ್ಟರ ಬಹುಮುಖೀ ಚರಿತ್ರೆಗೆ ಎರಡು ದಿನಗಳನ್ನು ಮೀಸಲಿಡಬೇಕಾಗಿ ಬಂದದ್ದು ಬಳಗದ ಸದಸ್ಯರ ಉತ್ಸಾಹದಿಂದಲೇ. ಇದೀಗ ಇನ್ನೂ ಇಪ್ಪತ್ತು ಕಲಾವಿದರ ಪಟ್ಟಿ ಸಿದ್ಧವಾಗಿದ್ದು, ಕನಿಷ್ಠ 100 ಕಲಾವಿದರನ್ನು ಸ್ಮರಿಸಿಕೊಳ್ಳುವ ಗುರಿ ಹೊಂದಿದ್ದಾರೆ ಸಿರಿಬಾಗಿಲು ರಾಮಕೃಷ್ಣ ಮಯ್ಯರು.

ಹೀಗೆ ಈಗಾಗಲೇ ಒಂದು ತಿಂಗಳಿನಿಂದ ಯಕ್ಷಗಾನ ಕಲಾವಿದರು ಇಲ್ಲಿ ಕಾರ್ಯತತ್ಪರರಾಗಿ ತಮಗೆ ಸಿಕ್ಕ ಬಿಡುವಿನ ಕೆಲಸದಲ್ಲಿ ತಮ್ಮ ಜ್ಞಾನವನ್ನೂ ಒರೆಗೆ ಹಚ್ಚುವ ಕಾಯಕದಲ್ಲಿ ತೊಡಗಿದ್ದಾರೆ. ಇದಲ್ಲವೇ ಸಾಮಾಜಿಕ ಜಾಲತಾಣಗಳ ಸದ್ಬಳಕೆ ಎಂದರೆ?

My article published in Prajavani on 27 Jun 2021


LEAVE A REPLY

Please enter your comment!
Please enter your name here