Samsung Galaxy A34 Review: ಗೇಮಿಂಗ್, ಫೋಟೊಗ್ರಫಿ ದೈತ್ಯ

0
198


Samsung Galaxy A34 Review: ಪ್ರೀಮಿಯಂ ವೈಶಿಷ್ಟ್ಯಗಳಿರುವ ಮಧ್ಯಮ ಶ್ರೇಣಿಯ ಫೋನ್ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ34 5ಜಿ. ಇದು ಇತ್ತೀಚೆಗೆ ಗ್ಯಾಲಕ್ಸಿ ಎ54 5ಜಿ ಸ್ಮಾರ್ಟ್ ಫೋನ್ ಜೊತೆಗೆ ಬಿಡುಗಡೆಯಾಗಿತ್ತು. ಎರಡು ವಾರ ಅದನ್ನು ಬಳಸಿ ನೋಡಿದಾಗಿನ ಅನುಭವಕ್ಕೆ ಬಂದ ಅಂಶಗಳು ಇಲ್ಲಿವೆ.

ವಿನ್ಯಾಸ
ತ್ರಿವಳಿ ಕ್ಯಾಮೆರಾ ಸೆಟಪ್, 120Hz ರಿಫ್ರೆಶ್ ರೇಟ್ ಇರುವ AMOLED ಸ್ಕ್ರೀನ್ ಹಾಗೂ ಹಿಂಭಾಗದಲ್ಲಿ ಗಾಜಿನಂತೆ ಹೊಳೆಯುವ ಕವಚ, ಗಾತ್ರದಲ್ಲಿ ಎ54ಗಿಂತ ಸ್ವಲ್ಪ ದೊಡ್ಡದು – ಇವುಗಳು ಈ ಮಧ್ಯಮ ಶ್ರೇಣಿಯ ಫೋನ್‌ನಲ್ಲಿ ಎದ್ದುಕಾಣುವ, ಪ್ರೀಮಿಯಂ (ಮೇಲ್ದರ್ಜೆಯ) ಫೋನ್‌ಗಳಲ್ಲೂ ಕಂಡುಬರುವ ವೈಶಿಷ್ಟ್ಯಗಳು.

ರಿವ್ಯೂಗೆ ದೊರೆತಿರುವುದು 128 ಜಿಬಿ ಸಾಮರ್ಥ್ಯದ, 6.6 ಇಂಚು ಪೂರ್ಣ ಹೆಚ್‌ಡಿ ಪ್ಲಸ್ ಅಮೊಲೆಡ್, 120Hz ರಿಫ್ರೆಶ್ ರೇಟ್‌ನ ಸ್ಕ್ರೀನ್ ಇರುವ ಸಿಲ್ವರ್ ಬಣ್ಣದ ಫೋನ್. ಕೊಳೆಯಿರುವ ಬೆರಳಚ್ಚನ್ನು ಅಡಗಿಸುವ ಸಾಮರ್ಥ್ಯದ ಗೊರಿಲ್ಲಾ ಗ್ಲಾಸ್ ಇದೆ. ಹಿಂಭಾಗದ ಪ್ಯಾನೆಲ್ ಹಾಗೂ ಚೌಕಟ್ಟು ಪ್ಲಾಸ್ಟಿಕ್‌ನದು. ಬಹುಶಃ ಲೋಹದ ಬದಲು ಪ್ಲಾಸ್ಟಿಕ್ ಇರುವುದರಿಂದಾಗಿ ತೂಕ 199 ಗ್ರಾಂ ಮಾತ್ರ ಇದೆ. ಐಪಿ67 ರೇಟಿಂಗ್ ಇರುವ, ಜಲನಿರೋಧಕ ಫೋನ್ ಇದು. ಎಂದರೆ ಅರ್ಧಗಂಟೆ ಕಾಲ ಒಂದು ಮೀಟರ್ ಆಳದ ನೀರಿನಲ್ಲಿದ್ದರೂ ಏನೂ ಆಗಲಾರದು. ಮಳೆಗಾಲದಲ್ಲಿ ಅತ್ಯುಪಯುಕ್ತ. ಹಿಂಭಾಗದಲ್ಲಿ ಮೂರು ಲೆನ್ಸ್‌ಗಳಿರುವ ಕ್ಯಾಮೆರಾ ಸೆಟಪ್ ಆಕರ್ಷಕವಾಗಿದ್ದು, ಪ್ರೀಮಿಯಂ ಫೋನ್‌ನ ನೋಟವಿದೆ. ಮುಂಭಾಗದಲ್ಲಿ ವಾಟರ್-ಡ್ರಾಪ್ ನಾಚ್ ಇದ್ದು ಸೆಲ್ಫೀ ಕ್ಯಾಮೆರಾ ಅದರಲ್ಲಿದೆ. ಬೆರಳಚ್ಚು ಸ್ಕ್ಯಾನರ್ ಮೂಲಕ ಕ್ಷಿಪ್ರವಾಗಿ ಸ್ಕ್ರೀನ್ ಅನ್‌ಲಾಕ್ ಮಾಡಬಹುದು.

ಕಾರ್ಯಾಚರಣೆ
ಮೀಡಿಯಾಟೆಕ್ ಡೈಮೆನ್ಸಿಟಿ 1080 ಪ್ರೊಸೆಸರ್ ಹಾಗೂ 8ಜಿಬಿ RAM ಜೊತೆಗೂಡಿವೆ. ಇಷ್ಟಲ್ಲದೆ RAM ಪ್ಲಸ್ ವೈಶಿಷ್ಟ್ಯದ ಮೂಲಕ ಅಗತ್ಯಬಿದ್ದಾಗ RAM ಅನ್ನು ಇನ್ನೂ 8 ಜಿಬಿಯಷ್ಟು ಹೆಚ್ಚಿಸಿಕೊಳ್ಳಬಹುದಾಗಿದೆ. ಇದು ಗೇಮಿಂಗ್ ಪ್ರಿಯರಿಗೆ ಹೆಚ್ಚು ಅನುಕೂಲ. ವೇಗದ ಮತ್ತು ಭರ್ಜರಿ ಗ್ರಾಫಿಕ್ಸ್‌ಗಳಿರುವ ತೂಕದ ಗೇಮ್‌ಗಳನ್ನು ಆಡುವಾಗ ಯಾವುದೇ ವಿಳಂಬದ ಅನುಭವವಾಗಿಲ್ಲ. 5000mAh ಬ್ಯಾಟರಿ ಇದ್ದು, ಇದು 25W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಆದರೆ, ಬಾಕ್ಸ್‌ನಲ್ಲಿ ಚಾರ್ಜಿಂಗ್ ಅಡಾಪ್ಟರ್ ನೀಡಲಾಗಿಲ್ಲ. ಟೈಪ್-ಸಿ ಕೇಬಲ್ ಒದಗಿಸಲಾಗಿದೆ. ಪೂರ್ತಿ ಚಾರ್ಜ್ ಮಾಡಿದರೆ, ಸಾಮಾನ್ಯ ಬಳಕೆಯಲ್ಲಿ ಸುಮಾರು ಒಂದುವರೆ ದಿನಕ್ಕೆ ಯಾವುದೇ ಸಮಸ್ಯೆಯಾಗಿಲ್ಲ.

ಆಂಡ್ರಾಯ್ಡ್ 13 ಆಧಾರಿತ ಒನ್ ಯುಐ 5.1 ಆವೃತ್ತಿಯ ಕಾರ್ಯಾಚರಣೆ ವ್ಯವಸ್ಥೆಯಿದ್ದು ತಂತ್ರಾಂಶ ಮತ್ತು ಯಂತ್ರಾಂಶಗಳು ಪರಸ್ಪರ ಪೂರಕವಾಗಿ ಕೆಲಸ ಮಾಡುತ್ತವೆ. ಒಂದು ಆ್ಯಪ್‌ನಿಂದ ತಕ್ಷಣಕ್ಕೆ ಬೇರೊಂದು ಆ್ಯಪ್‌ಗೆ ಬದಲಿಸುವುದು ಸುಲಲಿತವಾಗಿದ್ದುದು ಅನುಭವಕ್ಕೆ ಬಂದಿದೆ. ತಂತ್ರಾಂಶಕ್ಕೆ ನಾಲ್ಕು ಬಾರಿ ಪ್ರಮುಖ ಅಪ್‌ಡೇಟ್‌ಗಳನ್ನು ಒದಗಿಸುವ ಮತ್ತು ಐದು ವರ್ಷಗಳ ಕಾಲ ತಂತ್ರಾಂಶ ಸುರಕ್ಷತಾ ಬೆಂಬಲ ನೀಡುವ ಭರವಸೆಯನ್ನು ಸ್ಯಾಮ್‌ಸಂಗ್ ನೀಡಿದೆ. ಇದು ಗಮನಿಸಬೇಕಾದ ವಿಚಾರ.

ಕ್ಯಾಮೆರಾ
ತ್ರಿವಳಿ ಲೆನ್ಸ್‌ಗಳ ಪ್ರಧಾನ ಕ್ಯಾಮೆರಾ ಸೆಟಪ್ ಇದ್ದು, 48 ಮೆಗಾಪಿಕ್ಸೆಲ್, 8MP ಅಲ್ಟ್ರಾ ವೈಡ್ ಹಾಗೂ 5MP ಮ್ಯಾಕ್ರೊ ಕ್ಯಾಮೆರಾ ಸೆನ್ಸರ್ ಇದೆ. ಈ ಲೆನ್ಸ್‌ಗಳನ್ನು ಲಂಬವಾದ ಜೋಡಿಸಿರುವುದು ಗಮನ ಸೆಳೆಯುತ್ತದೆ. ಅದೇ ರೀತಿ ಸೆಲ್ಫೀಗೆ 13MP ಸಾಮರ್ಥ್ಯದ ಲೆನ್ಸ್ ಇದೆ. ಸೆರೆಹಿಡಿಯಲಾದ ಚಿತ್ರಗಳು ಹಾಗೂ ವಿಡಿಯೊಗಳು ಸ್ಫುಟವಾಗಿವೆ. ಕಡಿಮೆ ಬೆಳಕಿನಲ್ಲಿಯೂ ವಸ್ತುವಿಷಯದ ಮೇಲೆ ಫೋಕಸ್ ಮಾಡಿದ ಚಿತ್ರಗಳು ಚೆನ್ನಾಗಿ ಮೂಡಿಬರುತ್ತವೆ. ಪೋರ್ಟ್ರೇಟ್ ಮೋಡ್‌ನಲ್ಲಿ ಹಿನ್ನೆಲೆ ಮಸುಕಾಗುವ ಮೂಲಕ ಚಿತ್ರ ಅಥವಾ ಸೆಲ್ಫೀಗಳು ಚೆನ್ನಾಗಿ ಮೂಡಿಬಂದಿವೆ. ಸೂಕ್ತ ಬೆಳಕಿರುವಲ್ಲಂತೂ ಚಿತ್ರಗಳ ಗುಣಮಟ್ಟ ಉತ್ತಮವಾಗಿತ್ತು.

ಮಧ್ಯಮ ಶ್ರೇಣಿಯ ಬೆಲೆಯಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ34 5ಜಿ ಆಂಡ್ರಾಯ್ಡ್ ಫೋನ್, ನೋಡುವುದಕ್ಕೆ ಪ್ರೀಮಿಯಂ ಫೋನ್‌ನಂತಿದ್ದು ಪ್ರೀಮಿಯಂ ವೈಶಿಷ್ಟ್ಯಗಳನ್ನೂ ಹೊಂದಿದೆ. ದೈನಂದಿನ ಬಳಕೆ, ವೀಡಿಯೊ ವೀಕ್ಷಣೆ ಅಲ್ಲದೆ, ಗೇಮಿಂಗ್ ಪ್ರಿಯರಿಗೂ ಇಷ್ಟವಾಗಬಹುದು. 8+128GB ಸಾಮರ್ಥ್ಯದ ಫೋನ್ ಬೆಲೆ ₹30,999 ಹಾಗೂ 8+256GB ಸಾಮರ್ಥ್ಯದ ಫೋನ್ ಬೆಲೆ ₹32,999.

Gadget Review in Kannada by Avinash B Published in Prajavani on 19 May 2023

LEAVE A REPLY

Please enter your comment!
Please enter your name here